ಮಲಯರ ಭಗವತಿಯ ಪಾತ್ರಿ ಹೇಳಿದ ಕಥೆ

P1030653ಸರಿ ಸುಮಾರು ಎಂಟುನೂರ ಮೂವತ್ತು ವರ್ಷಗಳ ಹಿಂದೆ ಕೇರಳದ ಈಗಿನ ಕಣ್ಣಾನೂರು ಜಿಲ್ಲೆಯಲ್ಲಿರುವ ಮಾಡಾಯಿಯಲ್ಲಿ ನೆಲಸಿದ್ದ ಶೂಲಿ ಭಗವತಿ ದೇವತೆಗೆ ಅಲ್ಲೇ ಪಕ್ಕದ ಬೈತೂರಿನಲ್ಲಿದ್ದ ಈಶ್ವರನನ್ನು ನೋಡಬೇಕೆಂಬ ಬಯಕೆಯಾಯಿತು.

ಹಾಗೆ ಬಯಕೆಯಾದವಳು ಹೋಗಿ ಈಶ್ವರನನ್ನು ನೋಡಿದಳಂತೆ.

ಆಕೆ ನೋಡಿಯಾದ ಮೇಲೆ ಈಶ್ವರನು ಬಾಣವೊಂದನ್ನು ಬಿಟ್ಟು ಈ ಬಾಣ ಬೀಳುವಲ್ಲಿ ನೀನು ನೆಲೆಸು ಎಂದು ಆಕೆಯನ್ನು ಬೀಳುಕೊಟ್ಟ.

ಆ ಬಾಣ ನೆಟ್ಟಗೆ ಹೋಗಿ ಸುಮಾರು ಎಂಟುನೂರ ಮೂವತ್ತು ವರ್ಷಗಳ ಹಿಂದೆ ಕೊಡಗಿನಲ್ಲಿರುವ ಈ ಊರಿನಲ್ಲಿ ಬಿತ್ತಂತೆ.

ಆ ಬಾಣದ ದಾರಿಯನ್ನು ಹಿಂಬಾಲಿಸುತ್ತಾ ಭಗವತಿ ಈ ಊರಲ್ಲಿ ನೆಲಸಿದಳು.

2012-04-16_3084 ತಮ್ಮ ಊರಿನ ಭಗವತಿ ಕಾಣದಿರುವುದನ್ನು ಕಂಡು ಕಂಗಾಲಾದ ಕೇರಳದ ಮಲಯ, ಕಣಿಯ, ಪಾಲೆ ಮತ್ತು ಬಣ್ಣರ ಜನಾಂಗಕ್ಕೆ ಸೇರಿದ ನಾಲಕ್ಕು ಮನೆಯ ಮಂದಿ ತಮ್ಮ ದೇವತೆ ತಲುಪಿದ ಒಂದು ಗಂಟೆಯೊಳಗೆ ತಾವೂ ಈ ಊರು ತಲುಪಿದರಂತೆ.

ಒಂದು ಮನೆಯವರ ಮೈಮೇಲೆ ಈಗಲೂ ಆ ದೇವತೆ ಬರುತ್ತದೆ.ಇನ್ನೊಂದು ಮನೆಯವರು ಈಗಲೂ ಕಕ್ಕಡ ಮಾಸದಲ್ಲಿ ಈ ದೇವರುಗಳ ವೇಷ ಹಾಕಿ ಕುಣಿಯುತ್ತಾರೆ,ಇನ್ನೊಂದು ಮನೆಯವರು ವರ್ಷಕ್ಕೊಮ್ಮೆ ಈಗಲೂ ಮಳೆಬೆಳೆಯ ಕುರಿತಾದ ಕಥೆ ಹೇಳುತ್ತಾರೆ.ಇನ್ನೂ ಒಂದು ಮನೆಯವರಿಗೆ ತಾವು ನಿಜವಾಗಿಯೂ ಈಗ ಮಾಡಬೇಕಾದುದು ಏನು ಎಂಬುದು ಮರೆತು ಹೋಗಿದೆ.

ಇವರಿಗೆ ಒಂದು ಕಾಲದಲ್ಲಿ ತಾವು ಆಡುತ್ತಿದ್ದ ಮಲಯಾಳ ಭಾಷೆಯೂ ಮರೆತಿದೆ.ಎಲ್ಲರೂ ಇಲ್ಲಿನವರೇ ಆಗಿಹೋಗಿದ್ದಾರೆ.ಮಲಯರ ಒಂದು ಮನೆತನದ ಮಂದಿಗೆ ಒಬ್ಬ ಪಾತ್ರಿಗೆ ಮಾತ್ರ ಭಗವತಿ ದೇವತೆ ಮೈಮೇಲೆ ಬಂದಾಗ ಪುಂಖಾನುಪುಂಖವಾಗಿ ಮಲಯಾಳದ ಮಾತುಗಳು ಬಂದು ಬಿಡುತ್ತದೆ.

ಮೊನ್ನೆ ಗುರುವಾರ ಎಲ್ಲ ಕೆಲಸಗಳನ್ನು ಮುಗಿಸಿ ಭಗವತಿ ದೇವತೆ ಮೈಮೇಲೆ ಬರುವ ಮಲಯರ ಈ ಪಾತ್ರಿಯನ್ನು ಹುಡುಕುತ್ತಾ ಹೊರಟಿದ್ದೆ.

2011-04-12_7056ಇನ್ನೂ ಸಂಜೆಯಾಗದ ಆಕಾಶದಲ್ಲಿ ಆಗಲೇ ಕಾಡ್ಗಿಚ್ಚಿನಂತೆ ಮಿಂಚು ಹರಡಿತ್ತು.

ಎಲ್ಲೂ ಬಾರದ ಮಳೆ.ಆದರೆ ಇಲ್ಲೇ ಎಲ್ಲೋ ವರ್ಷಧಾರೆಯಾಗುತ್ತಿದೆ ಎನ್ನುವ ಭ್ರಮೆ ಹುಟ್ಟಿಸುತ್ತಿರುವ ಆಕಾಶ.ಸುತ್ತಲೂ ಗುಡ್ಡಗಳ ನಡುವೆ ಜವುಗು ನೆಲದಲ್ಲಿ ಸೊಟ್ಟಗೆ ಹೋಗುತ್ತಿರುವ ಮಣ್ಣಿನದೋ ಟಾರಿನದೋ ಎಂದು ಗೊತ್ತಾಗದ ರಸ್ತೆ.ಲವಣ ಲವಣವಾಗಿರುವ ಭೂಮಿಯಲ್ಲಿ ನರ ಮನುಷ್ಯರು ಮಾಡಿಕೊಂಡಿರುವ ಮನೆಗಳು, ತೋಟಗಳು ಮತ್ತು ದೇಗುಲಗಳು.ಇವೆಲ್ಲವೂ ಶಾಶ್ವತವೇ ಆದರೂ ಇನ್ನೊಂದು ಗಳಿಗೆಯಲ್ಲಿ ಈಗ ಸುರಿಯಬಹುದಾದ ಮಳೆಯಲ್ಲಿ ಕೊಚ್ಚಿಹೋಗಬಹುದು ಎಂಬ ಭಯದಲ್ಲಿ ಹೊರಟಿರುವ ನಾನು.

ನಗುವೂ, ಹೆದರಿಕೆಯೂ, ಏನೋ ಒಂದು ತರಹದ ವ್ಯಗ್ರತೆಯೂ ಏಕಕಾಲದಲ್ಲಿ ಮಿಂಚಿ ಮರೆಯಾಗುತ್ತಿತ್ತು.ಸ್ವಲ್ಪ ತಪ್ಪಿದರೂ ಎಲ್ಲೋ ಕರಕೊಂಡು ಹೋಗಬಹುದಾದ ಕವಲು ಕವಲು ಮಣ್ಣಿನ ದಾರಿಗಳು.ನರ ಮನುಷ್ಯರೇ ಕಾಣಿಸದ ಮಾರುದ್ದ ರಸ್ತೆಯಲ್ಲಿ ಯಾರನ್ನು ಏನೆಂದು ಕೇಳುವುದು ಎಂದು ಗೊತ್ತಾಗದೇ ಸುಮ್ಮನೇ ಹೊರಟಿದ್ದೆ.

P1030662ಕೊನೆಗೂ ಆತ ಸಿಕ್ಕಿದ.ಅಲ್ಲಿ ಇನ್ನೊಂದು ಹೆಣ್ಣು ದೇವತೆಯ ಉತ್ಸವ ನಡೆಯುತ್ತಿತ್ತು.ಆದರೆ ಈ ದೇವತೆಯ ಉತ್ಸವದಲ್ಲಿ ಈತನಿಗೂ ಏನೂ ಪಾತ್ರವಿರಲಿಲ್ಲ.ಆದರೂ ನನಗೆ ಅದನ್ನೆಲ್ಲ ತೋರಿಸಿ ಅದರ ಕತೆ ಹೇಳಿದ.ಆತ ಆ ದೇವತೆಯ ಕತೆ ಹೇಳುವಾಗ ಆ ದೇವತೆಯ ಕಡೆಯವರು ಈತ ನಮ್ಮ ದೇವತೆಯ ಕತೆ ಹೇಳಲು ಯಾರು ಎಂಬಂತೆ ಈತನನ್ನೇ ಕೆಕ್ಕರಿಸಿ ನೋಡುತ್ತಿದ್ದರು.

`ಸರಿ ಹಾಗಾದರೆ ನೀವೇ ಹೇಳಿ’ ಎಂದು ಕೇಳಿದೆ.

ಆದರೆ ಅವರು ಯಾರಿಗೂ ತಮ್ಮ ದೇವತೆಯ ಕಥೆ ಸರಿಯಾಗಿ ಗೊತ್ತಿರಲಿಲ್ಲ.ಒಬ್ಬರು ಅರ್ದ ಹೇಳಿದ ಕತೆಯನ್ನು ಇನ್ನೊಬ್ಬ ಪೂರ್ತಿ ಹೇಳಲು ಹೋಗಿ ಪೂರಾ ಹಾಳು ಮಾಡಿ ಹಾಕುತ್ತಿದ್ದ. ಆಗ ಇನ್ನೊಬ್ಬ ಮೊದಲಿಂದ ಶುರುಮಾಡಲು ಹೋಗಿ ಯದ್ವಾತದ್ವಾ ಮಾಡಿ ಬಿಡುತ್ತಿದ್ದ.ಕೊನೆ ಕೊನೆಗೆ ಅವರೆಲ್ಲರಿಗೂ ಕಥೆ ಹೇಳಲು ಹೋಗಿ ಅಳುವೇ ಬರುತ್ತಿತ್ತು.

ಏಕೆಂದರೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರ ಮಾತಿನ ಮೇರೆಗೆ ದೇವರಾಜ ಅರಸರು ಇವರೆಲ್ಲರನ್ನೂ ಪರಿಶಿಷ್ಟ ಜಾತಿಯ ಲಿಸ್ಟಿಗೆ ಸೇರಿಸಿದ್ದರು.ಹಾಗಾಗಿ ಆಮೇಲೆ ಸುತ್ತಲಿನ ಎಲ್ಲರೂ ಅವರನ್ನು ಹೊಸ ಹೆಸರಿನಿಂದ ಕರೆಯಲು ತೊಡಗಿ ಇವರೆಲ್ಲರೂ ಅವಮಾನದಲ್ಲಿ ಕುಗ್ಗಿಹೋಗಿ ಬಿಟ್ಟಿದ್ದರು.

ಈ ಅವಮಾನವನ್ನು ಮೀರಲು ಇವರು ಹೆಚ್ಚು ಹೆಚ್ಚಾಗಿ ಈ ದೇವತೆಯ ಉತ್ಸವವನ್ನು ಜೋರಾಗಿ ನಡೆಸಿದರೂ ಇವರ ದೇವತೆಯ ಪೂರ್ತಿ ಕತೆ ಗೊತ್ತಿದ್ದವರೆಲ್ಲ ಆಗಲೇ ತೀರಿ ಹೋಗಿದ್ದವರು.

ಹುಡುಗ ಹುಡುಗಿಯರಿಗೆಲ್ಲ ಇಂದಿರಾ ಗಾಂಧಿಯ ಮೀಸಲಾತಿಯಿಂದಾಗಿ ಮೈಸೂರು ಬೆಂಗಳೂರುಗಳಲ್ಲಿ ಕೆಲಸ ದೊರೆತು ಅವರು ಯಾರೂ ಊರವರು ಅವಮಾನ ಮಾಡುತ್ತಾರೆಂಬ ಕಾರಣದಿಂದಾಗಿ ಹೆಚ್ಚಾಗಿ ಇತ್ತ ಕಡೆ ತಲೆ ಹಾಕುತ್ತಿರಲಿಲ್ಲ.

2012-04-16_3113ನನಗೂ ಅವರ ಸಂಕಟ ಕಂಡು ಸಂಕಟವಾಗಿ `ಪರವಾಗಿಲ್ಲ ಕಥೆ ಬೇರೆ ಯಾರಲ್ಲಾದರೂ ಕೇಳುತ್ತೇನೆ.ನಮ್ಮ ಕಡೆಯ ಭಟ್ಟರೊಬ್ಬರು ನಿಮ್ಮ ದೇವರ ಕಥೆಯನ್ನು ಬರೆದಿದ್ದಾರೆ.ಅದನ್ನೇ ಓದಿ ತಿಳಿದುಕೊಳ್ಳುತ್ತೇನೆ.ಈಗ ಬರುತ್ತೇನೆ’ ಎಂದು ಹೊರಟಿದ್ದೆ.

ಅವರಿಗೂ ನನ್ನ ಅವಸ್ಥೆ ನೋಡಿ ಸಂಕಟವಾಗಿರಬೇಕು. ಒಂದು ಪುಟ್ಟ ಏಲಕ್ಕಿ ಬಾಳೆಯ ಗೊನೆಯನ್ನೂ. ಒಡೆದ ತೆಂಗಿನಕಾಯಿಯ ತಿರುಳುಗಳನ್ನೂ ಕೊಟ್ಟು ‘ನಮ್ಮ ದೇವರ ಪ್ರಸಾದ, ಬೇಡ ಅನ್ನಬೇಡಿ’ ಎಂದು ಕಳಿಸಿದ್ದರು.

ನಾನು ಅಲ್ಲಿಂದ ಮಲಯರ ಪಾತ್ರದವನ ಜೊತೆಗೆ ಅವನ ಮನೆಗೆ ಹೊರಟಿದ್ದೆ.

ದಾರಿಯಲ್ಲಿ ಅವನು ಈ ದಲಿತರ ದೇವತೆಯ ಕಥೆಯನ್ನು ನನಗೆ ಹೇಳಿದ.

ಅದು ಇನ್ನೂ ಸಾವಿರ ಸಾವಿರ ವರ್ಷಗಳ ಹಿಂದಿನ ಕಥೆ.

ಅದು ಮೂವರು ಅಣ್ಣಂದಿರು ಮತ್ತು ಒಬ್ಬಳು ತಂಗಿಯ ಕತೆ.

DSC_0003ಈ ತಂಗಿ ಮೂರೂ ಅಣ್ಣಂದಿರಿಗಿಂತ ಶಕ್ತಿಯಲ್ಲೂ, ಬುದ್ದಿಯಲ್ಲೂ ಶಸ್ತ್ರಾಶ್ತ ಬಳಸುವುದರಲ್ಲೂ ಬಹಳ ಜಾಣೆ.ಅವಳನ್ನು ಕಂಡರೆ ಅಣ್ಣಂದಿರಿಗೆ ತುಂಬಾ ಹೊಟ್ಟೆಕಿಚ್ಚು.ಹೇಗಾದರೂ ಇವಳನ್ನು ಸೋಲಿಸಬೇಕು ಎಂದು ನಾನಾ ತಂತ್ರಗಳನ್ನು ಮಾದುತ್ತಿದ್ದರಂತೆ.ಆದರೆ ಯಾವುದರಲ್ಲೂ ಆಕೆ ಸೋಲುತ್ತಿರಲಿಲ್ಲವಂತೆ.

ಹೇಗಾದರೂ ಇವಳನ್ನು ಸೋಲಿಸಬೇಕು ಎಂದು ಈಕೆಗೆ ಎಲೆಅಡಿಕೆಯ ವೀಳ್ಯ ತಿನ್ನುವುದನ್ನು ಕಲಿಸಿ ಕೊಟ್ಟರಂತೆ.ಎಲೆ ತೆಗೆದು ಉಜ್ಜಿ ಅದಕ್ಕೆ ಸುಣ್ಣ ಸವರಿ ಮೊದಲು ಅಡಿಕೆಯನ್ನು ಬಾಯಿಗೆಸೆದು ನಂತರ ಎಲೆಯನ್ನೂ ಬಾಯಿಗಿಟ್ಟು ಜಗಿಯಬೇಕೆಂದು ಜಗಿದು ತೋರಿಸಿದರಂತೆ.

ಆಕೆಯೂ ಜಗಿದಳಂತೆ.

ಜಗಿದು ಜಗಿದು ನಾಲಗೆಯನ್ನೆಲ್ಲಾ ಕೆಂಪು ಮಾಡಿ ತೋರಿಸಿದರಂತೆ.

ಆಕೆಯೂ ತೋರಿಸಿದಳಂತೆ.

ಆಮೇಲೆ ಜಗಿದ ಆ ವೀಳ್ಯರಸವನ್ನು ನುಂಗಿದ ಹಾಗೆ ನಟಿಸಿ ತೋರಿಸಿದರಂತೆ.

ಅಣ್ಣಂದಿರು ನಿಜವಾಗಿಯೂ ಅದನ್ನು ನುಂಗಿದ್ದಾರೆ ಅಂತ ತಿಳಿದ ತಂಗಿ ತಾನೂ ನಿಜವಾಗಿಯೂ ನುಂಗಿ ಬಿಟ್ಟಳಂತೆ.

ಆಗ ಅಣ್ಣಂದಿರು ‘ ಅಯ್ಯೋ ಪಾಪಿ.ನೀನು ನುಂಗಿದೆಯಾ? ನಾವು ನುಂಗಿದ ಹಾಗೆ ನಟಿಸಿದ್ದು ಮಾತ್ರ.ನೀನು ಎಂಜಲು ನುಂಗಿದವಳು. ಛಿ,ಥೂ’ ಎಂದು  ಆಕೆಯನ್ನು ಕೀಳು ಜಾತಿ ಎಂದು ಶಫಿಸಿ ಅಲ್ಲೇ ಕಲ್ಲಾಗಿ ಮಾಡಿಟ್ಟು ಹೋದರಂತೆ.

ಆಕೆ ಅಲ್ಲೇ ಕಲ್ಲಾಗಿ ಎಷ್ಟೋ ವರ್ಷ ಬಿದ್ದಿದ್ದಳಂತೆ.

ಆಮೇಲೆ ಯಾರೋ ಕತ್ತಿ ಹರಿತ ಮಾಡುವ ಕಲ್ಲು ಎಂದು ತಪ್ಪಾಗಿ ತಿಳಿದು ಆ ಕಲ್ಲಿಗೆ ಕತ್ತಿ ಉಜ್ಜಿದಾಗ ಅದರಿಂದ ನೆತ್ತರು ಒಸರಿತಂತೆ.

DSC_0066ಆಗ ಅವರು ಹೆದರಿ ಓಡಿದರಂತೆ.

ಆಗ ಆ ಕಲ್ಲೂ ಬಿಳಿಯ ಕೊಕ್ಕರೆಯೊಂದರ ರೂಪ ಪಡೆದು ಹಾರಿತಂತೆ.

ನಾನು ಆ ಕತ್ತಲೆಯಲ್ಲಿ ಆಕಾಶದಲ್ಲಿ ಮಿಂಚು, ದಾರಿಯ ತುಂಬ ಮಿಂಚುಹುಳಗಳ ಗೊಂಚಲಿನ ನಡುವೆ ಇಕ್ಕಟ್ಟಾದ ದಾರಿಯಲ್ಲಿ ಗಾಡಿ ಓಡಿಸುತ್ತಾ ನಡುನಡುವಲ್ಲಿ ಬೇರೆ ಏನೋ ಯೋಚಿಸುತ್ತಾ ಆದರೂ ಕತೆಯನ್ನು ಬಿಡದೆ ಕೇಳುತ್ತಾ ತಲೆಯಾಡಿಸುತ್ತಿದ್ದೆ.

ಹಾಗೆ ಕೊಕ್ಕರೆಯಾಗಿ ಹಾರಿದ ಆ ದೇವತೆಯನ್ನು ಯಾರೋ ಹಿಡಿದು ಸಾರು ಮಾಡಲು ಹೊರಟಿದ್ದರಂತೆ.ಆಮೇಲೆ ಅವರಿಗೆ ಅದು ಕೊಕ್ಕರೆಯಲ್ಲ ದೇವತೆ ಎಂದು ಗೊತ್ತಾಗಿ ಪೂಜಿಸಲು ಹೊರಟರಂತೆ.

‘ಪೂಜಿಸುವುದಾದರೆ ಪೂಜಿಸಿ ಆದರೆ ನೀವು ಪೂಜಿಸಬೇಡಿ.ನನ್ನ ಹಾಗೆಯೇ ಕೀಳುಜಾತಿಗೆ ಸೇರಿದವರು ಪೂಜಿಸಲಿ’ ಎಂದು ಆಕೆ ಹೇಳಿದಳಂತೆ.

ಅದರಂತೆ ಆಕೆಯನ್ನು ಈಗಲೂ ಇವರೇ ಪೂಜಿಸುತ್ತಾರೆ ಎಂದು ಮಲಯರ ಪಾತ್ರದವನು ತನಗೆ ಗೊತ್ತಿದ್ದ ಹಾಗೆ ದಲಿತರ ಆ ದೇವತೆಯ ಕಥೆಯನ್ನು ಹೇಳಿದ.
‘ಆದರೆ ಒಂದು ಮಾತು ಸಾರ್’ ಎಂದು ಆತ ನಿಲ್ಲಿಸಿದ.

‘ಏನು?’ ಎಂದು ಕೇಳಿದೆ.

DSC_0004‘ಸಾರ್ ನಮ್ಮ ಭಗವತಿ ದೇವರಾಗಲೀ, ಈಶ್ವರ ದೇವರಾಗಲೀ,ವಿಷ್ಣುಮೂರ್ತಿಯಾಗಲೀ,ಕುಟ್ಟಿಚಾತ ದೈವವಾಗಲೀ ಆ …ರ ದೇವತೆಯ ಮುಂದೆ ಏನೂ ಅಲ್ಲ.ಆಕೆ ಬೆಂಕಿಯಂತಹ ಗಾಳಿ.ಕೋಪ ಬಂದರೆ ಎಲ್ಲವನ್ನೂ ಸುಟ್ಟೇ ಬಿಡುತ್ತಾಳೆ’ ಎಂದು ಆ ದೇವತೆಯ ಕೋಪಕ್ಕೆ ತುತ್ತಾದವರು ಪೂರಾ ಲಾಸಾಗಿ ಹೋದ ಕಥೆಗಳನ್ನು ಎದೆ ನಡುಗುವಂತೆ ಹೇಳುತ್ತಿದ್ದ.

ಅಷ್ಟು ಹೊತ್ತಿಗೆ ಆತನ ಮನೆಯ ಮುಂದೆ ಬಂದಿದ್ದೆವು.ಆತ ಆ ಕಥೆ ನಿಲ್ಲಿಸಿ ಮ್ನೆಯ ಮುಂದಿನ ಕಾಡಿನೊಳಗಡೆ ಇದ್ದ ಪಾಲೆ ಮರವೊಂದರ ಕೆಳಗಿದ್ದ ‘ಅಂಜುಕುಟ್ಟಿ ಮೂರ್ತಿ’ಎಂಬ ತನ್ನ ಮನೆದೇವರ ಶಿಲೆಯನ್ನು ತೋರಿಸಿದ.ಆ ಶಿಲೆಯ ಸುತ್ತ ನೂರಾರು ಈಟಿಗಳೂ, ತ್ರಿಶೂಲಗಳೂ ನೆಲದಲ್ಲಿ ಆಳಕ್ಕೆ ಚುಚ್ಚಿಕೊಂಡು ನಿಂತಿದ್ದವು.

ಒಂದೊಂದು ಈಟಿಗೂ ಒಂದೊಂದು ತಲೆಮಾರಿನ ಕಥೆಗಳಿದ್ದಂತೆ ಕಾಣುತ್ತಿದ್ದವು.

ಆವತ್ತು ಆ ಇರುಳು ಸ್ವಲ್ಪ ಹೊತ್ತು ಆ ಮಲಯರ ಪಾತ್ರಿ ಮಲಯಾಳದ ಹಲವು ದೇವತೆಗಳ ಕಥೆಯನ್ನು ನೆನಪು ಮಾಡಿಕೊಂಡು ರಾಗವಾಗಿ ಹಾಡಿ ಕೇಳಿಸಿದ.ತೀರಾ ಪುಟ್ಟದಾಗಿ ಕಾಣಿಸುತ್ತಿದ್ದ ಆತನ ತಲೆಯೊಳಗೆ ನೂರಾರು ದೈವಗಳ ದಿನಗಟ್ಟಲೆ ಇರುವ ಕಾವ್ಯ.

ಒಂದು ಕಥೆ ಹೇಳುತ್ತಾ ಆತನ ಮೈಮೇಲೆ ಆ ಕಥೆಯ ದೇವರು ಬರುತ್ತಿತ್ತು.ಆಗ ನಾನು `ನಿಲ್ಲಿಸು ನಿಲ್ಲಿಸು’ ಎಂದು ಕೂಗಿ ಕೊಳ್ಳುತ್ತಿದ್ದೆ.ಆತ ನಿಲ್ಲಿಸಿ ಇನ್ನೊಂದು ದೈವದ ಕಥೆ ಹೇಳುತ್ತ ಆತನ ಮೈಮೇಲೆ ಇನ್ನೊಂದು ದೈವ!

2011-04-20_7318ಅದು ಸಖತ್ತಾಗಿತ್ತು.ನನ್ನ ತಲೆಮಾರಿನ ಕವಿಗಳೂ, ಕಥೆಗಾರರೂ ಕಾದಂಬರಿಕೋರರೂ ಸುಮ್ಮಸುಮ್ಮನೇ ಏನೇನೋ ಆಧುನಿಕೋತ್ತರ ಪೋಸು ಕೊಡುವುದನ್ನು ಬಿಟ್ಟು ಹೀಗೆ ಕಥೆ ಹೇಳುತ್ತಾ ನಡುನಡುವೆ ದೇವರುಗಳೂ ದೇವತೆಯರೂ ಮನುಷ್ಯರೂ ಮೈಮೇಲೆ ಬಂದಂತೆ ಆಡಿದರೆ ಎಷ್ಟು ಚೆನ್ನಾಗಿತ್ತು ಎಂದು ವಾಪಾಸು ಬರುವಾಗ ಯೋಚಿಸುತ್ತಿದ್ದೆ.

(ಏಪ್ರಿಲ್, ೨೨, ೨೦೧೨)

(ಫೋಟೋಗಳೂ ಲೇಖಕರವು)

Advertisements

One thought on “ಮಲಯರ ಭಗವತಿಯ ಪಾತ್ರಿ ಹೇಳಿದ ಕಥೆ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s