ಹಳೆಯ ದಿನಗಳ ಕೆಲವು ಪುಟಗಳು

2010-10-20_1570ಇಲ್ಲಿ ಇರುಳು ಹೊತ್ತಲ್ಲಿ ಅರೆ ಧೃಷ್ಟಾರರಂತೆ, ಅರೆ ಮರುಳಿನವರಂತೆ, ಕೆಲವೊಮ್ಮೆ ಪ್ರೇತಗಳಂತೆ ಮಳೆಯಲ್ಲಿ ಓಡಾಡುವವರು ಬೆಳಗಿನ ಹೊತ್ತಲ್ಲಿ ಸಹಜ ಮನುಜರಂತೆ ಮುಗುಳ್ನಗುತ್ತಾ ನಿಂತಿರುತ್ತಾರೆ.

ಕೆಲವು ವಾರಗಳ ಹಿಂದೆ ನಾನು ದೆವ್ವ ಎಂದು ರಾತ್ರಿ ಹೆದರಿಕೊಂಡಿದ್ದ ಮುದುಕ ಇಂದು ದಾರಿ ಬದಿಯಲ್ಲಿ ನಗುತ್ತಾ ನಿಂತಿದ್ದ. ನಾನು ಅವನನ್ನೇ ದಿಟ್ಟಿಸಿ ನೋಡಿ ನಕ್ಕೆ. ಅವನೂ ಪರಿಚಿತ ನಗೆ ನಕ್ಕ. ಆ ಇರುಳಲ್ಲಿ ಬಹುಶಃ ಅವನಿಗೆ ನಾನೂ ಪ್ರೇತಾತ್ಮದಂತೆ ಕಾಣಿಸಿಕೊಂಡಿರಬಹುದು ಎನಿಸಿ ಸಮಾಧಾನವಾಯಿತು.

`ಇರಲಿ ಇನ್ನೊಂದು ಇರುಳಿನಲ್ಲಿ ನೀನು ಬೀಭತ್ಸನಾಗಿ ಓಡಾಡುತ್ತಿರುವಾಗ ಮಾತನಾಡಿಸುತ್ತೇನೆ’ ಎಂದು ಮನಸ್ಸಲ್ಲೇ ಅಂದುಕೊಂಡು ಬಂದೆ.

ಇಲ್ಲಿ ಇನ್ನೊಬ್ಬಳು ಹೆಂಗಸೂ ಹೀಗೆ ರಾತ್ರಿಯಲ್ಲಿ ಮಳೆ ಸುರಿಯುವಾಗ ತನ್ನ ನೆರೆತ ಕೂದಲಿಗೆಲ್ಲಾ ಡಾಳಾಗಿ ಕುಂಕುಮ ಬಳಿದುಕೊಂಡು ಓಡಾಡುತ್ತಿರುತ್ತಾಳೆ. ಮಳೆ ನೆನೆಯದ ಹಾಗೆ ತನ್ನ ಮೈಗೆಲ್ಲಾ ಪ್ಲಾಸ್ಟಿಕ್ ಸುತ್ತಿಕೊಂಡು ಹರಿದ ಕೊಡೆಯೊಂದನ್ನು ಹಿಡಿದುಕೊಂಡು ಬರಿಗಾಲಲ್ಲಿ ನಡೆಯುತ್ತಿರುತ್ತಾಳೆ.

ಎಷ್ಟೋ ಕತ್ತಲುಗಳಲ್ಲಿ ಅವಳನ್ನು ಊಹಿಸಿಕೊಂಡು ನಾನು ಹೆದರಿದ್ದೇನೆ.

2010-11-11_2438ನಿನ್ನೆ ಬೆಳಗ್ಗೆ ಇವಳನ್ನು ಇಲ್ಲಿ ಒಂದು ಗೂಡಂಗಡಿಯ ಮುಂದೆ ಕಂಡೆ. ಒಂದು ಹಳೆಯ ಚೂಡಿದಾರ್ ಹಾಕಿಕೊಂಡು ಕಂಕುಳಲ್ಲಿ ಹಳೆಯ ಚೀಲವೊಂದನ್ನು ಸಿಕ್ಕಿಸಿಕೊಂಡು ಗಹನವಾಗಿ ನಡೆದು ಬಂದು ಬಟ್ಟೆ ಒಗೆಯುವ ಸಾಬೂನು ಇದೆಯಾ ಎಂದು ವಿಚಾರಿಸುತ್ತಿದ್ದಳು.

ಅಂಗಡಿಯವನು ತನ್ನಲ್ಲಿರುವ ಸೋಪುಗಳ ಹೆಸರು ಹೇಳಿದಂತೆಲ್ಲ ಆಕೆ ಅದಲ್ಲ ಅದಲ್ಲ ಎಂದು ಹಳೆಯ ಕಾಲದ ಬಾರ್ ಸೋಪೊಂದರ ಹೆಸರು ಹೇಳುತ್ತಿದ್ದಳು. ಕೊನೆಗೆ `ಅದೆಲ್ಲಾ ಬೇಡ ಬಿಡಿ’ ಎಂದು ಹೊರಟಳು. ನನಗೆ ಆಕೆಯನ್ನು ಮಾತನಾಡಿಸಲು ನಾಚುಗೆಯಾಗುತ್ತಿತ್ತು. ನಿನ್ನ ಇರುಳಿನ ದೇವತಾ ಸ್ವರೂಪವನ್ನು ಬಿಡಿಸಿ ಹೇಳು ಎಂದು ಆಕೆಯೊಡನೆ ಹೇಗೆ ಕೇಳುವುದು. ಕೊನೆಯ ಪಕ್ಷ ಆಕೆಗೆ ಬೇಕಾಗಿರುವ ಸಾಬೂನನ್ನಾದರೂ ಹುಡುಕಿಕೊಡಲು ನನ್ನಿಂದಾಗುವಂತಿದ್ದರೆ ಮಾತನಾಡಿಸಬಹುದಿತ್ತು ಎಂದು ಬಂದೆ.

********

ನಿನ್ನೆ ಸಂಜೆ ತುಂಬಾ ಬೇಜಾರಾಗುತ್ತಿತ್ತು. ನನ್ನ ಹಳೆಯ ಶಾಲಾ ಗೆಳೆಯರೆಲ್ಲರೂ ಇಲ್ಲೇ ಇದ್ದಾರೆ. ಮಾತನಾಡಿಸಿದರೆ ದೂರವಾಗುತ್ತಾರೆ. ಕೆಲವರು ತೀರಾ ಕುಡುಕರಾಗಿದ್ದಾರೆ. ಇನ್ನು ಕೆಲವರು ಗಂಭೀರವಾಗಿ ಸಂಸಾರಸ್ಥರು. ಇನ್ನು ಕೆಲವರು ಬೆಳೆಗಾರರು. ಒಬ್ಬ ಇಲ್ಲಿ ದಾರಿ ಬದಿಯಲ್ಲಿ ಅಂಗಡಿಯಿಟ್ಟು ಕೊಂಡಿದ್ದಾನೆ. ಸಾಹೇಬರೊಬ್ಬರ ಮಗನಾದ ಆತ ಶಾಲೆಯಲ್ಲಿರುವಾಗ ಹಳೆಗನ್ನಡ ಕಾವ್ಯವನ್ನು ನಿರರ್ಗಳವಾಗಿ ಹೇಳಬಲ್ಲವನಾಗಿದ್ದ. ಈಗ ನೋಡಿದರೆ ನೋವಿನಿಂದ ತುಂಬಿರುವನಂತೆ ಕಾಣುತ್ತಾನೆ.

DSC_0147

ಇನ್ನೊಬ್ಬಳು ಶಾಲಾ ಗೆಳತಿಯ ಮಗ ಇಲ್ಲೇ ದೊಡ್ಡವನಾಗಿ ಬೆಳೆಗಾರನಾಗಿದ್ದಾನೆ. ಆತ ನನ್ನನ್ನು ನೋಡಲು ಬಂದಿದ್ದ.ಆತನ ಮುಖ ನೋಡಿದರೆ ತೀರಾ ಪರಿಚಿತ ಮುಖದಂತೆ ಕಾಣಿಸುತ್ತಿತ್ತು. ಇವನ ತಾಯಿ ನಮ್ಮ ಶಾಲೆಯಲ್ಲೇ ತುಂಬಾ ಸುಂದರಿಯಾಗಿದ್ದಳು. ನೋಡಿದರೆ ಒಂದು ತರಹ ಗೌರವ ಮೂಡಿಸುವ ಸೌಂದರ್ಯ ಆಕೆಯದು. ತನ್ನ ಮುಖದಲ್ಲಿ ದೇವತೆಯ ಕಳೆ ಇದೆ ಅನ್ನುವುದು ಆಕೆಗೂ ಆಗಲೇ ಅರಿವಾಗಿತ್ತು ಕಾಣುತ್ತದೆ. ಹಾಗಾಗಿ ಆ ಗೌರವವನ್ನು ಉಳಿಸಿಕೊಂಡೇ ನಡೆದಾಡುತ್ತಿದ್ದಳು.

ಒಂದು ಸಲ ನಾನು ಗೆಳೆಯರ ಬಳಿ ಪಂಥ ಕಟ್ಟಿ ಆಕೆಗೆ ಕಣ್ಣು ಹೊಡೆದಿದ್ದೆ. ಆಕೆ ಗಾಬರಿಯಲ್ಲಿ ದುರುಗುಟ್ಟಿದ್ದಳು. ಆಮೇಲೆ ನಮಗಿಬ್ಬರಿಗೂ ಸಣ್ಣಗೆ ಏನೋ ಅನಿಸಲು ಶುರುವಾದ ಹಾಗೆ ಅನಿಸುತ್ತಿತ್ತು.

ಅಷ್ಟು ಹೊತ್ತಿಗೆ ನನ್ನ ಅಪ್ಪ ಇವನು ಇಲ್ಲೇ ಇದ್ದರೆ ಕೆಟ್ಟು ಹಾಳಾಗಿ ಹೋಗುತ್ತಾನೆ ಎಂದು ಆ ಊರು ಬಿಡಿಸಿ ದೂರದ ಶಾಲೆಗೆ ಹಾಕಿದ್ದರು. ಆಮೇಲೆ ನಾವಿಬ್ಬರು ಒಬ್ಬರಿಗೊಬ್ಬರು ಕವಿತೆಗಳನ್ನು ಪತ್ರದಲ್ಲಿ ಬರೆದು ಕಳಿಸುತ್ತಿದ್ದೆವು. ಅವಳು ಬರೆದ ಪತ್ರಗಳನ್ನೆಲ್ಲಾ ನಮ್ಮ ಶಾಲಾ ಪ್ರಿನ್ಸಿಪಾಲರು ತಮ್ಮ ಬಳಿಯೇ ಇಟ್ಟುಕೊಂಡು ನನ್ನನ್ನು ಕರೆದು ಹಿತವಚನ ಹೇಳುತ್ತಿದ್ದರು.

ಅವರು ಹೇಳುತ್ತಿದ್ದ ಹಿತವಚನದ ಒಂದು ಮುಖ್ಯ ಸಾಲು ‘ಎಲೆಗೆ ಮುಳ್ಳು ಬಿದ್ದರೂ ಮುಳ್ಳಿಗೆ ಎಲೆ ಬಿದ್ದರೂ ಹರಿದುಹೋಗುವುದು ಎಲೆಯೇ’ ಎಂದಾಗಿತ್ತು.

ಆ ಪ್ರಾಯದಲ್ಲಿ ಮುಳ್ಳೆಂದರೇನು ಎಲೆಯೆಂದರೇನು ಎಂಬುದೇನೆಂದೂ ನನಗೆ ಅರಿವಾಗಿರಲಿಲ್ಲ, ನಿನ್ನೆ ಆಕೆಯ ಮಗನನ್ನು ಕಂಡು ಸಂಕಟವಾದಾಗ ಅದೆಲ್ಲಾ ನೆನಪಾಗಿ ಅರಿವಾಯಿತು. ಈಗ ಆತ ತನ್ನ ತೋಟದ ಕೊಳದಲ್ಲಿ ಮೀನುಗಳನ್ನು ಸಾಕಿದ್ದಾನೆ. `ಇಲ್ಲಿ ಮಳೆ ಬಂದು ಕೆರೆಯೆಲ್ಲಾ ತುಂಬಿ ಹರಿಯುತ್ತಿರುವುದರಿಂದ ಕೆರೆಯ ನೀರನ್ನು ಖಾಲಿ ಮಾಡಬೇಕೆಂದಿರುವೆ. ಆಸಕ್ತರು ಮೀನು ಹಿಡಿದುಕೊಳ್ಳಬಹುದು’ ಎಂದು ಜಾಹೀರಾತು ನೀಡಲು ಬಂದಿದ್ದ.

ಯಾವುಯಾವುದೆಲ್ಲಾ ಮೀನುಗಳಿವೆ ಎಂದೆಲ್ಲಾ ವಿಚಾರಿಸಿ ಆತನನ್ನು ಕಳುಹಿಸಿದೆ.

ಕಳುಹಿಸುವ ಮೊದಲು `ನಿಮ್ಮ ಅಮ್ಮ ಮತ್ತು ನಾನು ಸಹಪಾಠಿಗಳಾಗಿದ್ದೆವು’ ಅಂದೆ.

‘ಹೌದಾ ಅಂಕಲ್ ನೀವೂ ಮೀನು ಹಿಡಿಯಲು ಬರಬಹುದು’ ಎಂದು ನಗುಬೀರಿ ಹೋಗಿದ್ದ.

ಸಂಕಟ ಇನ್ನೊಮ್ಮೆ ಉಮ್ಮಳಿಸಿ ಬಂದು `ಎಲಾ ಕಾಲವೇ ಮೀನು ಇರುವಾಗ ನೀರಿರುವುದಿಲ್ಲ ನೀರಿರುವಾಗ ಮೀನಿರುವುದಿಲ್ಲವಲ್ಲಾ’ ಎಂದು ಎದ್ದುಬಂದು ತಿರುಗಾಡಲು ತೊಡಗಿದ್ದೆ.

2012 06 11_5260

ಸಂಜೆ ಕತ್ತಲಲ್ಲಿ ಒಬ್ಬರು ಕಾಮ್ರೇಡರು ಸಿಕ್ಕಿದ್ದರು. ಅವರ ಮನೆ ಮಂಜಿನಲ್ಲಿ ಮುಳುಗಿಹೋಗಿತ್ತು. ಅವರ ವಯಸ್ಸಾದ ನಾಯಿಯೊಂದು ಚಳಿಯಿಂದ ಎದ್ದು ಬೊಗಳಾರದೆ ಸೋಮಾರಿಯಾಗಿ ಮಲಗಿಕೊಂಡಿತ್ತು ಒಳಗಿಂದ ಕಾಮ್ರೇಡರು ‘ಅಸ್ಸಲಾಮು ಅಲೈಕುಂ’ ಎಂದು ಸಲಾಂ ಹೇಳುತ್ತಾ ಬಂದರು.

ಅದಕ್ಕೆ ಪ್ರತಿಯಾಗಿ ನಾನು ‘ಲಾಲ್ ಸಲಾಂ’ ಎಂದು ಮುಷ್ಠಿ ಎತ್ತಿ ವಂದಿಸಿದೆ.

ಅದಕ್ಕೆ ಅವರು ‘ಇದೇನು ನೀವು ನಿಮ್ಮ ರಿವಾಜು ಬಿಟ್ಟು ಕೆಂಪು ವಂದನೆ ಹೇಳುತ್ತಿರುವಿರಲ್ಲಾ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

‘ನೀವೂ ಕಾಮ್ರೇಡ್ ಆಗಿ ನನಗೆ ಸಲಾಂ ಹೇಳುತ್ತಿರುವರಲ್ಲಾ’ ಅಂದೆ.

`ನಾವು ಜಾಗತಿಕವಾಗಿ ಲಾಲ್ ಸಲಾಂ ಹೇಳುತ್ತೇವೆ. ಸ್ಥಳೀಯವಾಗಿ ಅವರವರ ಸಲಾಂ ಹೇಳುತ್ತೇವೆ’ ಎಂದು ಬೊಚ್ಚುಬಾಯಲ್ಲಿ ನಕ್ಕರು.

******

ಕಳೆದ ವಾರ ಇಲ್ಲೊಂದು ಬೆಟ್ಟದ ಬುಡದಲ್ಲಿರುವ ಒಂಟಿ ಮನೆಯ ಭೂತದ ಪೂಜೆಗೆ ಕರೆದಿದ್ದರು. ಪ್ರೇತಾತ್ಮಗಳಿಗೆ ಎಡೆ ಸಲ್ಲಿಸುವ ಪೂಜೆ. ಮಳೆಯೂ ಹಾಗೇ ಹೆದರಿಕೆ ಹುಟ್ಟಿಸುವಂತೆ ಸುರಿಯುತ್ತಿತ್ತು. ರಾತ್ರಿ ಹೊತ್ತು ಎಸ್ಟೇಟುಗಳಿಂದ ಸರಪಳಿ ಬಿಚ್ಚಿಬಿಟ್ಟ ನಾಯಿಗಳು ರಸ್ತೆಯಲ್ಲಿ ಓಡಾಡುತ್ತಿದ್ದವು.

ಕೂಡುದಾರಿಯಲ್ಲಿ ನನ್ನನ್ನು ಕಾದುನಿಂತಿರುವೆ ಅಂದಿದ್ದ ಮನುಷ್ಯನೊಬ್ಬ ಕಾಣಿಸುತ್ತಿರಲಿಲ್ಲ. ಆತ ಕೋಳಿಮಾಂಸದ ಅಂಗಡಿಯೊಂದರಲ್ಲಿ ಅಂತರ್ಧಾನನಾಗಿ ಅಲ್ಲಿಂದಲೇ ನನಗೆ ದಾರಿ ವಿವರಿಸುತ್ತಿದ್ದ.

ರೇಜಿಗೆಯಾಗುತ್ತಿತ್ತು. ನಂತರ ಆತ ಹೌದಲ್ಲವಾ, ಅಂಗಡಿಯಲ್ಲಿರುವ ನಾನು ನಿಮಗೆ ಕಾಣಿಸುತ್ತಿಲ್ಲವಾ ಅಂತ ಹೊರಗೆ ಬಂದ.

ಮಾತನಾಡಿಸಿದರೆ ಆತ ಮಗುವಿನ ಮನಸ್ಸನ್ನು ಹೊಂದಿದ್ದ.

ಆತನಿಗೆ ದೊಡ್ಡವರ ಹಾಗೆ ವರ್ತಿಸುವುದು ಗೊತ್ತಿರಲಿಲ್ಲ.

ಆತ ವಾಹನಗಳು ಹೋಗದ ಕೆಸರು ದಾರಿಯಲ್ಲಿ ನನ್ನನ್ನು ಕಾರು ಓಡಿಸಲು ಹೇಳಿ ದೊಡ್ಡದಾದ ಕೆಸರು ಹೊಂಡವೊಂದರಲ್ಲಿ ಕಾರಿನ ಚಕ್ರಗಳು ಸಿಲುಕುವಂತೆ ಮಾಡಿ ಸಂಕೋಚದಲ್ಲಿ ನಗುತ್ತಿದ್ದ.

ಆನಂತರ ತಾನೊಬ್ಬನೇ ಕಾರನ್ನು ಕೆಸರಿನಿಂದ ಎತ್ತಿ ದೂಡಿ ರಸ್ತೆಗೆ ತಂದು ಬಿಟ್ಟ.

‘ಹಾಗಾದರೆ ನಾನು ವಾಪಾಸು ಹೋಗುತ್ತೇನೆ’ ಎಂದು ಭೂತದ ಪೂಜೆಗೂ ಹೋಗದೆ ವಾಪಾಸು ಆ ಕತ್ತಲಲ್ಲಿ ಮಡಿಕೇರಿಗೆ ಬಂದು ಬಿಟ್ಟೆ. ಆನಂತರ ಆತನ ಮಡದಿ ಫೋನಲ್ಲಿ ಮಾತನಾಡಿಸಿ ತನ್ನ ಗಂಡನನ್ನು ಬೈದರು.

‘ಅವರಿಗೆ ಏನೂ ಗೊತ್ತಾಗುವುದಿಲ್ಲ, ಮಗುವಿನ ತರಹಾ’ ಎಂದು ನನಗಾದ ತೊಂದರೆಗೆ ವಿಷಾದಿಸಿದರು.

2010-10-20_1570‘ಪರವಾಗಿಲ್ಲ, ಇನ್ನೊಮ್ಮೆ ಬರುವೆ’ ಎಂದಿದ್ದೆ.

ಇಂದು ಪುನಹಾ ಅವರು ಇನ್ನೊಂದು ಪೂಜೆಗೆ ಕರೆದಿದ್ದಾರೆ. ನಾನು ಹೋಗುವುದೋ ಬೇಡವೋ ಎಂದು ಇನ್ನೂ ಇಲ್ಲೇ ಕುಳಿತಿರುವೆ.

(ಡಿಸೆಂಬರ್ ೨೫, ೨೦೧೧)

(ಫೋಟೋಗಳೂ ಲೇಖಕರವು )

Advertisements