ವಿಮಾನ ರೆಕ್ಕೆಯ ಮೇಲೆ ಮರದ ಆನೆ

2011 11 04_4321ದೆಹಲಿ ವಿಮಾನ ನಿಲ್ದಾಣದ ಕೋಸ್ಟಾ ಕಾಫಿಯಂಗಡಿಯ ಟೇಬಲ್ಲೊಂದರ ಮೇಲೆ ಅಂಗೈಯಗಲದ ತರಕಾರೀ ಸ್ಯಾಂಡ್ ವಿಚ್ ಮತ್ತು ಕಾಗದದ ಲೋಟವೊಂದರಲ್ಲಿ ಹಾಲಿಲ್ಲದ ಖಾಲೀ ಟೀ ಇಟ್ಟುಕೊಂಡು ಆತ ಎಲ್ಲವನ್ನೂ ದಿಟ್ಟಿಸಿ ನೋಡುತ್ತಿದ್ದ.ಕೀಟಲೆಯ ಹುಡುಗನಂತಹ ಆತನ ಕಣ್ಣುಗಳು,ಆಗ ತಾನೇ ಎಣ್ಣೆಹಚ್ಚಿ ಮಿರಿಮಿರಿ ಮಿಂಚುತ್ತಿದ್ದ ಆತನ ಗಡ್ಡಮೀಸೆ ಮತ್ತು ಜಗತ್ತೆಲ್ಲವನ್ನೂ ಘ್ರಾಣಿಸಬಲ್ಲೆ ಎಂಬಂತಿದ್ದ ಆತನ ನೀಳ ನಾಸಿಕ.ನಾನೂ ಆತನ ಹಾಗೆಯೇ ಇನ್ನೂರೈವತ್ತು ರೂಪಾಯಿಗೆ ಒಂದು ಒಣ ಸ್ಯಾಂಡ್ ವಿಚ್ಚು ಮತ್ತು ಚಾ ಲೋಟ ಇಟ್ಟುಕೊಂಡು ಎಲ್ಲರನ್ನೂ ನೋಡುತ್ತಿದ್ದೆ.

ಶ್ರೀನಗರಕ್ಕೆ ತೆರಳುವ ಏರೋಪ್ಲೇನು ಹೊರಡಲು ಇನ್ನೂ ಬಹಳ ಸಮಯವಿತ್ತು.ಏರೋಪ್ಲೇನು ಹತ್ತಲು ಬರುವ ಕೆಲವು ಮನುಷ್ಯರ ಮುಖಗಳು ಒಂದು ತರಹಾ ಒಣ ಗಾಂಭೀರ್ಯದಿಂದ ತುಂಬಿ ತಮಾಷೆಯಾಗಿರುತ್ತದೆ.ಬಹುಶಃ ಆತನಿಗೂ ನನ್ನ ಹಾಗೆಯೇ ಅನಿಸುತ್ತಿದ್ದಿರಬೇಕು.ಎಲ್ಲರನ್ನೂ ಒಂದು ಸುತ್ತು ಗಮನಿಸಿ ಕೊನೆಯದಾಗಿ ನನ್ನ ಮುಖ ನೋಡಿ ಮುಗುಳ್ನಗುತ್ತಿದ್ದ.ನಾನೂ ಹಾಗೆಯೇ ಮಾಡುತ್ತಿದ್ದೆ.

ಸ್ಯಾಂಡ್ ವಿಚ್ಚಿನ ಒಂದು ತುಂಡನ್ನು ನುಂಗಿ ಅದು ಗಂಟಲಿಗೆ ಸಿಕ್ಕಿಕೊಳ್ಳದ ಹಾಗೆ ಒಂದು ಗುಟುಕು ಟೀಯನ್ನೂ ಇಳಿಸಿ ‘ಬಹುತ್ ಮೆಹಂಗಾಯಿ ಹೋಗಯೀ ಯಾರ್’ ಎಂದು ನಕ್ಕ.
ಹೌದೆಂದು ತಲೆಯಾಡಿಸಿದೆ.
ಇನ್ನೂರ ಐವತ್ತು ರೂಪಾಯಿ ಅವನಿಗೆ ಒಂದು ತಿಂಗಳ ಚಹಾ ಖರ್ಚಿನ ಹಣವಂತೆ.ಒಂದೇ ಗುಟುಕಿಗೆ ಮುಗಿಯಿತಲ್ಲಾ ಎಂದು ಮತ್ತೂ ನಕ್ಕ.
ಇಲ್ಲಿ ಒಂದು ತುಂಡು ಬ್ರೆಡ್ಡಿಗಾಗಿ ಇನ್ನೂರೈವತ್ತು ಕೊಟ್ಟಿದ್ದು ಗೊತ್ತಾದರೆ ಹೆಂಡತಿ ಮಕ್ಕಳು ದೊಣ್ಣೆಯಿಂದ ಬಡಿದು ಸಾಯಿಸುತ್ತಾರೆ ಅಂದ.
ನನ್ನ ಕಥೆಯೂ ಹಾಗೇ ಎಂದು ಹೇಳಿದೆ.
ಎಲ್ಲಿಗೆ ಹೊರಟಿದ್ದೀಯಾ ಎಂದು ಕೇಳಿದ.
‘ಶ್ರೀನಗರಕ್ಕೆ’ ಎಂದು ಹೇಳಿದೆ.
‘ಏನು ವ್ಯಾಪಾರವಾ’ ಎಂದು ಕೇಳಿದ.
‘ಇಲ್ಲ ಶ್ರೀನಗರದ ಗೆಳೆಯನೊಬ್ಬನಿಗೆ ಮೈಸೂರಿನಿಂದ ಒಂದು ಆನೆ ಕೊಡಬೇಕಾಗಿತ್ತು’ ಎಂದು ಬ್ಯಾಗಿನ ಜಿಪ್ಪು ತೆಗೆದು ಅದರೊಳಗೆ ಹೆಂಡತಿಯ ಒಗೆದ ಹಳೆಯ ಸೀರೆಯ ತುಂಡಲ್ಲಿ ನೋವಾಗದಂತೆ ಸುತ್ತಿಟ್ಟಿದ್ದ ಮರದ ಆನೆಯೊಂದನ್ನು ತೋರಿಸಿದೆ.
ಐದು ಕೇಜಿಗಿಂತಲೂ ದೊಡ್ಡದಾಗಿದ್ದ ಬೀಟೆ ಮರದಲ್ಲಿ ಕೆತ್ತಿದ್ದ ಆ ಆನೆ ಆತನ ಗಡ್ಡಮೀಸೆಗಿಂತಲೂ ಕಪ್ಪಾಗಿ ಮಿರಮಿರನೆ ಮಿಂಚುತ್ತ ನಿಜದ ಕಾಡಾನೆಗಿಂತಲೂ ನೈಜವಾಗಿ ವಿಮಾನ ನಿಲ್ದಾಣದ ಆ ರೆಸ್ಟೋರೆಂಟಿನ ಟೇಬಲ್ಲಿನ ಮೇಲೆ ತಲೆ ತಗ್ಗಿಸಿ ನಿಂತುಕೊಂಡಿತ್ತು.

ಅಷ್ಟು ಹೊತ್ತಿಗೆ ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಜೂಟಾಟವಾಡಿಕೊಂಡಿದ್ದ ಒಂದಿಷ್ಟು ಮಕ್ಕಳು ‘ಆನೆ ಆನೆ’ ಎಂದು ಕೈ ಚಪ್ಪಾಳೆ ತಟ್ಟುತ್ತಾ ಅದರ ಮುಂದೆ ನಿಂತುಕೊಂಡರು.
‘ಇದು ಬರೀ ಆನೆಯಲ್ಲ.ಒಂದು ಗಂಡಾನೆ’ ಎಂದು ಪ್ಯಾಂಟಿನ ಜೇಬಿನೊಳಗಿಂದ ಪೊಟ್ಟಣವೊಂದರಲ್ಲಿ ಇಟ್ಟುಕೊಂಡಿದ್ದ ಪ್ಲಾಸ್ಟಿಕ್ಕಿನ ದಂತಗಳನ್ನು ಹೊರತೆಗೆದು ಅದರ ಸೊಂಡಿಲಿನ ಬದಿಯ ತೂತಕ್ಕೆ ಸಿಗಿಸಿದೆ.
ಈಗ ಆ ಆನೆ ನಿಜಕ್ಕೂ ಒಂದು ಒಂಟಿ ಸಲಗದಂತೆ ಒಂದಿಷ್ಟು ಗಂಡಸ್ತನವನ್ನು ಮುಖದಲ್ಲಿ ಆವಾಹಿಸಿಕೊಂಡು ಮಕ್ಕಳು ‘ಗಂಡಾನೆ, ಗಂಡಾನೆ’ ಎಂದು ಇನ್ನಷ್ಟು ಖುಷಿ ಪಟ್ಟರು.

2011 11 04_4323ಅವನ ಹೆಸರು ಜಸ್ವಂತ್ ಸಿಂಗ್.ಪಂಜಾಬಿನ ಫಿರೋಜ್ ಪುರ ಜಿಲ್ಲೆಯ ಜೀರಾ ಎಂಬ ಹಳ್ಳಿಯವನು.
ಫಿರೋಜ್ ಪುರ ಅಮೃತಸರದ ಬಳಿಯಲ್ಲಿದೆ.
ಭತ್ತ ಮತ್ತು ಗೋದಿ ಬೆಳೆಯುವ ಸಿಖ್ ಕುಟುಂಬಕ್ಕೆ ಸೇರಿದವನು ಅವನು.
ಅವನ ಕುಟುಂಬದಲ್ಲಿ ಬಹುತೇಕ ಜನರು ಅಮೇರಿಕಾ, ಕೆನಡಾದಲ್ಲಿ ಇದ್ದಾರಂತೆ.
ಆದರೆ ಅವನಿಗೆ ಗೋದಿ ಬೆಳೆಯುವುದಕ್ಕೂ ಇಷ್ಟವಿಲ್ಲ,ಅಮೇರಿಕಾಕ್ಕೆ ಹೋಗುವುದಕ್ಕೂ ಮನಸ್ಸಿಲ್ಲ,ಶಾಲೆಗೆ ಹೋಗಲೂ ಖುಷಿಯಿರಲಿಲ್ಲವಂತೆ.ಆದರೆ ಹಾಡುವುದು ಅವನಿಗೆ ಇಷ್ಟ.
ಅದರಲ್ಲೂ ಸಿಖ್ಖರ ಪವಿತ್ರ ಗುರುಬಾನಿಯನ್ನೂ ಹಾಡುತ್ತಾ ಅದರ ಅರ್ಥ ವಿವರಿಸುತ್ತಾ ದೇಶದ ನಾನಾ ಗುರುಧ್ವಾರಗಳಿಗೆ ಅಲೆಯುವುದು ಅವನಿಗೆ ಖುಷಿಯಂತೆ.ಹಾಗಾಗಿ ಅವನು ಲಾರಿ ಡ್ರೈವರನ ಕೆಲಸ ಮಾಡುತ್ತಿದ್ದ.
ಲಾರಿ ಓಡಿಸುವುದರಿಂದ ಹೊಟ್ಟೆಪಾಡೂ ಆಗುತ್ತದೆ.ಊರೂರು ಅಲೆದ ಹಾಗೆಯೂ ಆಗುತ್ತದೆ.ಲಾರಿ ಲೋಡಿಗಾಗಿ ದಿನಗಟ್ಟಲೆ ಕಾಯುವಾಗ ಅಲ್ಲೆಲ್ಲೋ ಹತ್ತಿರ ಇರುವ ಗುರುಧ್ವಾರಕ್ಕೆ ತೆರಳಿ ಹಾಡುತ್ತಾ ಕೂರುತ್ತಾನೆ.
ಅವನ ಜೊತೆಗಿರುವ ಕ್ಲೀನರ್ ಹುಡುಗ ತಬಲಾ ಬಾರಿಸುವುದನ್ನೂ ಕಲಿತಿದ್ದಾನಂತೆ.
‘ನಿಮ್ಮ ಮೈಸೂರಿನಲ್ಲೂ ಹಾಡಿದ್ದೇನೆ.ಬೀದರಿನಲ್ಲೂ ಹಾಡಿದ್ದೇನೆ.ಬೆಂಗಳೂರಿನಲ್ಲೂ ಹಾಡಿದ್ದೇನೆ.ಮುಂದಿನ ಸಲ ಮೈಸೂರಿಗೆ ಬಂದಾಗ ನೀನೂ ಕೇಳು’ ಅಂದ.
‘ಹಾಡುವ ಸಲುವಾಗಿಯೂ ಲಾರಿ ಬಿಡುತ್ತಾರೆ ಎಂದು ಗೊತ್ತೇ ಇರಲಿಲ್ಲ.ಖುಷಿಯಾಯಿತು.ಆದರೆ ಲಾರಿ ಓಡಿಸುವ ನೀನು ವಿಮಾನ ನಿಲ್ದಾಣಕ್ಕೆ ಯಾಕೆ ಬಂದಿರುವೆ’ಎಂದು ಕೇಳಿದೆ.

‘ಅಯ್ಯೋ ಅದು ದೊಡ್ಡ ಕಥೆ’ ಅಂದ.
ಇವನ ಜೊತೆ ಲಾರಿ ಓಡಿಸುತ್ತಿದ್ದ ಕ್ಲೀನರ್ ಹುಡುಗ ಈ ಸಲ ನಾನೇ ಓಡಿಸಿಕೊಂಡು ಹೋಗುತ್ತೇನೆ ಎಂದು ಅಸ್ಸಾಮಿನ ಗೌಹಾಟಿಗೆ ಹೋಗಿದ್ದಾನಂತೆ.ಅಲ್ಲಿ ಎಲ್ಲೋ ಹೆದ್ದಾರಿಯಲ್ಲಿ ಯಾವುದೋ ಹಳ್ಳಿಯವನಿಗೆ ಗುದ್ದಿ ಹಳ್ಳಿಯವರು ಸಾಯುವ ಹಾಗೆ ಹೊಡೆದಿದ್ದಾರಂತೆ.ಅದಕ್ಕಾಗಿ ಅವನು ನಿನ್ನೆಯೇ ಅಮೃತಸರದಲ್ಲಿ ರೈಲು ಹತ್ತಿ ಬೆಳಗ್ಗೆ ದಿಲ್ಲಿಯಲ್ಲಿಳಿದು ಈಗ ವಿಮಾನ ನಿಲ್ದಾಣಕ್ಕೆ ಬಂದು ಗೌಹಾಟಿಗೆ ತೆರಳುವ ವಿಮಾನಕ್ಕಾಗಿ ಕಾಯುತ್ತಿದ್ದಾನಂತೆ.
ಕ್ಲೀನರನ್ನು ಬಿಡಿಸಿಕೊಂಡು ಬರಲು ಇವನು ಹೊರಟಿರುವುದು ಹೆಂಡತಿಗೂ ಗೊತ್ತಿಲ್ಲವಂತೆ.
‘ಇಷ್ಟೆಲ್ಲ ಖರ್ಚು ಮಾಡುತ್ತಿರುವುದು ಗೊತ್ತಾದರೆ ಹೆಂಡತಿ ಬಡಿದು ಹಾಕುತ್ತಾಳೆ’ ಅಂದ.
‘ನೀನೇ ಗಡ್ಡ ಮೀಸೆ ಬಿಟ್ಟು ಇಷ್ಟು ಜೋರಾಗಿ ಕಾಣಿಸುತ್ತಿದ್ದೀಯಾ.ಇನ್ನು ಮಾತುಮಾತಿಗೆ ನಿನ್ನನ್ನು ಬಡಿದು ಹಾಕುವ ಹೆಂಡತಿ ಎಷ್ಟು ಜೋರಾಗಿದ್ದಿರಬಹುದು’ ಎಂದು ನಕ್ಕೆ.
‘ಅಯ್ಯೋ ಅವಳು ಬಹಳ ಪಾಪ.ನಿಜವಾಗಿಯೂ ಬಡಿಯವುದಿಲ್ಲ.ಸುಮ್ಮನೆ ಹೆದರಿಸುತ್ತಾಳೆ ಅಷ್ಟೇ’ ಅಂದ.
‘ಅದು ನಿಜ .ಎಲ್ಲರ ಹೆಂಡತಿಯರೂ ಹಾಗೆಯೇ.ಸುಮ್ಮನೇ ಹೆದರಿಸುತ್ತಾರೆ.ಅವರು ನಿಜಕ್ಕೂ ಬಡಿದು ಹಾಕಿದರೆ ಇಂಡಿಯಾದಲ್ಲಿ ಪುರುಷ ಸಂತತಿಯೇ ಇರುತ್ತಿರಲಿಲ್ಲ’ ಎಂದು ನಕ್ಕೆ.
ಅದಕ್ಕೆ ಅವನಿಗೆ ಭಯಂಕರ ಖುಷಿಯಾಗಿ ಮೀಸೆ ತಿರುವಿ ನಕ್ಕ.
‘ಹೌದು ಯಾರ್, ಎಲ್ಲರ ಮನೆಯ ಬೇಳೆಯಲ್ಲೂ ಕಲ್ಲು ಇದ್ದೇ ಇರುತ್ತದೆ.ಆದರೆ ಈ ವಿಮಾನ, ಈ ಸ್ಯಾಂಡ್ ವಿಚ್ಚು ಇವೆಲ್ಲಾ ದುಬಾರಿ ದುಬಾರಿ ಅಂತ ನಾವು ದೂರ ಇದ್ದರೆ ಬರೀ ದುಡ್ಡು ಇರುವವರೇ ಮಜಾ ಮಾಡುತ್ತಿರುತ್ತಾರೆ.ಯಾವಾಗಲೋ ಒಂದು ಸಲ ನಾವೂ ಮಜಾ ಮಾಡಬೇಕಲ್ಲವಾ’ ಅಂದ.

‘ನನ್ನ ಶ್ರೀನಗರದ ವಿಮಾನ ಹೊರಡುವ ಹೊತ್ತಾಗುತ್ತಾ ಬಂತು.ಇನ್ನೊಮ್ಮೆ ಸಿಗುವಾ’ಎಂದು ಅವನ ಫೋನ್ ನಂಬರನ್ನು ಕೇಳಿಕೊಂಡೆ.
ಸುಮಾರು ಹತ್ತು ನಂಬರುಗಳನ್ನು ಕೊಟ್ಟ.ಒಂದು ಪಂಜಾಬಿನ ಹಳ್ಳಿಯಲ್ಲಿರುವಾಗ ಐಡಿಯಾ ನಂಬರ್.
ಇನ್ನೊಂದು ದೆಹಲಿಯಲಿರುವಾಗ ಟಾಟಾ ಡೋಕೋಮೋ.
ಹೀಗೆ ಹತ್ತಾರು ಸಂಖ್ಯೆಗಳು.
`ಎಲ್ಲವನ್ನೂ ಟ್ರೈಮಾಡು ಯಾವುದರಲ್ಲಾದರೂ ಒಂದರಲ್ಲಿ ಸಿಗುವೆ.‘ಆದರೆ ಈ ಅಪರಿಚಿತ ಗೆಳೆಯನನ್ನು ಮರೆಯಬೇಡಾ’ ಅಂದ.
‘ಇಲ್ಲಾ’ ಎಂದೆ.
ಇನ್ನು ಯಾವತ್ತಾದರೂ ಅಮೃತಸರದ ನಿನ್ನ ಹಳ್ಳಿಗೆ ಬಂದಾಗ ನಿನಗೂ ಇಂತಹದೇ ಒಂದು ಆನೆಯನ್ನು ತಂದುಕೊಡುತ್ತೇನೆ ಎಂದು ಮಾತು ಕೊಟ್ಟು ಆ ಆನೆಯನ್ನು ಹೆಂಡತಿಯ ಹಳೆಯ ಸೀರೆಯಲ್ಲಿ ಜೋಪಾನವಾಗಿ ಸುತ್ತಿ ಬ್ಯಾಗಿನೊಳಗಡೆ ಮಗುವಿನಂತೆ ಮಲಗಿಸಿದೆ.

2011 11 04_4324‘ಅಯ್ಯೋ ಯಾರ್ ಮರೆತೇ ಬಿಟ್ಟೆ.ನಿನ್ನ ಹೆಸರು ಹೇಳಲೇ ಇಲ್ಲ.ನಿನ್ನ ಕೆಲಸವೇನು ಅಂತಲೂ ಕೇಳಲಿಲ್ಲ’ ಎಂದು ಎದ್ದು ನಿಂತ.
ಹೆಸರು ಹೇಳಿದೆ.
ಹೊಟ್ಟೆಪಾಡಿಗಾಗಿ ನಾನು ಮಾಡುವ ಕೆಲಸಗಳನ್ನೂ ಹೇಳಿದೆ.
‘ಇರು ನಿನ್ನದೊಂದು ಫೋಟೋ ತೆಗೆಯುತ್ತೇನೆ.ಮನೆಯಲ್ಲಿರುವ ನಿನ್ನ ಪಾಪದ ಹೆಂಡತಿಯನ್ನು ಮನಸ್ಸಿಗೆ ತಂದುಕೊಂಡು ನಗು.ಆಗ ಚಂದ ಕಾಣಿಸುತ್ತೀಯಾ’ ಅಂದೆ.
ಚಂದವಾಗಿ ನಾಚಿಕೊಂಡ.

ಆಮೇಲೆ ಏನೋ ನೆನಪಿಸಿಕೊಂಡು ‘ನೀನು ನನ್ನ ಊರಿಗೆ ಆನೆ ತೆಗೆದುಕೊಂಡು ಬರುವಾಗ ನಾನೂ ನಿನಗೊಂದು ವಸ್ತು ಕೊಡುವೆ’ ಅಂದ.

ಕೆನಡಾದಲ್ಲಿರುವ ಅವನ ಅಂಕಲ್ ಬಹಳ ಒಳ್ಳೆಯ ಬೈನಾಕುಲರ್ ಒಂದನ್ನು ತಂದುಕೊಟ್ಟಿದ್ದಾನಂತೆ.ಏನು ಬೇಕಾದರೂ ಕಾಣುತ್ತದಂತೆ.

ಆತ ವಿಮಾನ ನಿಲ್ದಾಣದ ಹೊರಗೆ ಎಲ್ಲಿಗೋ ಹಾರಿ ಹೋಗಲು ಕಾದು ನಿಂತಿದ್ದ ವಿಮಾನವೊಂದರ ಅಸ್ಪಷ್ಟ ರೆಕ್ಕೆಯೊಂದನ್ನು ತೋರು ಬೆರಳಿಂದ ತೋರಿಸಿ ‘ಆ ವಿಮಾನದ ರೆಕ್ಕೆ ಕಾಣಿಸುತ್ತಿದೆಯಾ’ ಅಂತ ಕೇಳಿದ.
`ಸ್ವಲ್ಪಸ್ವಲ್ಪ ಕಾಣಿಸುತ್ತಿದೆ’ ಅಂದೆ.
‘ಒಂದು ವೇಳೆ ನಿನ್ನ ಬ್ಯಾಗಿನಲ್ಲಿರುವ ಆನೆ ಆ ವಿಮಾನದ ರೆಕ್ಕೆಯ ಮೇಲೆ ನಿಂತಿದೆ ಅಂತ ಅಂತಿಟ್ಟುಕೋ, ನನ್ನ ಅಂಕಲ್ ಕೊಟ್ಟಿರುವ ಬೈನಾಕುಲರ್ ನಿಂದ ನೋಡಿದರೆ ಆ ಆನೆಯ ದಂತದ ಮೇಲೆ ಕೂತಿರುವ ಇರುವೆಯ ಕಾಲೂ ಇಷ್ಟು ದಪ್ಪವಾಗಿ ಕಾಣಿಸುತ್ತದೆ’ ಎಂದು ತನ್ನ ತೋರು ಬೆರಳನ್ನು ಹೆಬ್ಬೆರೆಳಿಗೆ ಅಮುಕಿ ಹಿಡಿದು ತೋರಿಸಿದ.2011 11 04_4323

ವಿಮಾನದ ರೆಕ್ಕೆಯ ಮೇಲೆ ಕುಳಿತಿರುವ ಆನೆ.ಅದರ ದಂತದ ಮೇಲೆ ಕೂತಿರುವ ಇರುವೆಯ ಕಾಲು.ಜೊತೆಗೆ ನಾನು ಮತ್ತು ಇವನು!
ಅವನ ಬಲಿಷ್ಠ ಕೈಗಳನ್ನು ಒತ್ತಿ ಹಿಡಿದು ಕುಲುಕಿ, ‘ಎಲ್ಲಾದರೂ ಹೇಗಾದರೂ ಯಾವತ್ತಾದರೂ ಸಿಗುವಾ.ಈ ಆನೆ ದೋಸ್ತನ್ನು ಮಾತ್ರ ಮರೆಯಬೇಡಾ’ ಎಂದು ಆನೆಯ ಚೀಲ ಎತ್ತಿಕೊಂಡು ಸರತಿಯ ಸಾಲಿನತ್ತ ನಡೆದೆ.

(ನವಂಬರ್ ೧೮ ೨೦೧೧)

(ಫೋಟೋಗಳೂ ಲೇಖಕರವು )

Advertisements