ಒಂದು ಇರುಳು ನೆಂಟನಂತೆ

thora6ಕಳೆದ ಗುರುವಾರ ನಾನು ಇಲ್ಲಿನ ಕುಟುಂಬವೊಂದರ ಜೊತೆ ಒಂದು ಇರುಳು ಕಳೆದೆ. ಸುಮ್ಮನೆ.ಏನೂ ಉದ್ದೇಶವಿಲ್ಲದೆ, ದೂರದ ನೆಂಟನಂತೆ ಅಥವಾ ದಾರಿ ತಪ್ಪಿ ಇರುಳನ್ನು ಕಳೆಯಲು ಬಂದವನಂತೆ ಇವರ ಜೊತೆಗಿದ್ದೆ.

ಕಾಫಿ ತೋಟ ಕಳೆದು, ಕಾಡು ಕಳೆದು, ಕೆಸರಿನ ಕಾಲು ದಾರಿ ಮುಗಿದು, ಬರೆ ಇಳಿದು, ಜಾರು ದಾರಿಯಲ್ಲಿ ಜಾರಿ, ಬೀಳದಂತೆ ನನ್ನನ್ನು ಆಗಾಗ ಆತು ಹಿಡಿದು ಆತ ನನ್ನನ್ನು ಕರೆದೊಯ್ಯುತ್ತಿದ್ದ.

ತುಂಬ ಒಳ್ಳೆಯ ಮನುಷ್ಯ.

ನಾನು ಅವನಿಗೆ ಏನಾಗಬೇಕೆಂದು ದಾರಿಯಲ್ಲಿ ಎದುರು ಬಂದವರಿಗೆ ವಿವರಿಸಲು ಹೋಗಿ ಸೋತು ಪೆಚ್ಚಾಗಿ ಕರೆದೊಯ್ಯುತ್ತಿದ್ದ.

ಆಮೇಲೆ ನಾನೇ ಯಾರಾದರೂ ಕೇಳಿದರೆ ಏನು ಹೇಳಬೇಕೆಂದು ಅವನಿಗೆ ಹೇಳಿಕೊಟ್ಟೆ.

ಆದರೆ ಆಮೇಲೆ ಹೇಳಲು ಯಾರಾದರೂ ಸಿಗುವ ಮೊದಲೇ ತಗ್ಗಿನಲ್ಲಿ ಅವನ ಮನೆ, ಗದ್ದೆ, ಅಡಿಕೆ ತೋಟ, ಹರಿಯುವ ತೊರೆ ಎಲ್ಲವೂ ಕಾಣಿಸತೊಡಗಿತು. ತೊರೆಗೆ ಹಾಕಿದ್ದ ಅಡಿಕೆಯ ಪಾಲದ ಮೇಲೆ ಕಂಪಿಸುತ್ತಾ ದಾಟಿದೆ. ಬಹಳ ವರ್ಷಗಳ ಮೇಲೆ ಹೀಗೆ ಅಡಿಕೆಯ ಪಾಲವನ್ನು ದಾಟುತ್ತಿದ್ದೆ.

ಬಹಳ ಹಿಂದೆ ನನ್ನ ತಾಯಿ ನನ್ನ ಕೊನೆಯ ತಂಗಿಯನ್ನು ಹೆತ್ತಾಗ ಮನೆಯಲ್ಲಿ ಯಾರೂ ಇರಲಿಲ್ಲ. ಒಬ್ಬರು ಡಾಕ್ಟರ ಮನೆ ಹೀಗೇ ಒಂದು ತೋಟದೊಳಗಿತ್ತು. ಅವರಲ್ಲಿಗೆ ಹೋಗಲೂ ಹೀಗೇ ಅಡಿಕೆ ಪಾಲವನ್ನು ದಾಟಬೇಕಿತ್ತು.

ಆಗ ಸಣ್ಣವನಾಗಿದ್ದ ನಾನು ಆ ಉದ್ದದ ಪಾಲವನ್ನು ಮಲಗಿ ತೆವಳುತ್ತಾ ಅಳುತ್ತಾ ದಾಟಿದ್ದೆ.

ಈಗಲೂ ಹಾಗೆಯೇ ಭಾವಿಸಿಕೊಂಡು ದಾಟಿದೆ.

2011-01-19_4735ಆ ಮನೆಯಲ್ಲಿ ಆತನ ಇಬ್ಬರು ಮಕ್ಕಳು, ಹೆಂಡತಿ, ಹೆಂಡತಿಯ ಇಬ್ಬರು ಅವಳಿ ತಂಗಿಯರು, ಹೆಂಡತಿಯ ತಾಯಿ ಎಲ್ಲರೂ ಇದ್ದರು.ಗದ್ದೆಯ ನಾಟಿ ಕೆಲಸಕ್ಕೆ ಸಹಾಯ ಮಾಡಲು ಅವರೆಲ್ಲರೂ ಬಂದಿದ್ದರು. ನಾನು ಹೋಗಿದ್ದಕ್ಕೆ ಅವರೆಲ್ಲರೂ ಸಂತೋಷವಾಗಿದ್ದರು. ದಾರಿ ಕೆಟ್ಟದಾಗಿದ್ದಕ್ಕೆ ತುಂಬ ಮುಜುಗರ ಪಡುತ್ತಿದ್ದರು, ಮನೆ ಸಣ್ಣಗಿದೆ ಎಂದು ಸಂಕೋಚಗೊಳ್ಳುತ್ತಿದ್ದರು. ಮಕ್ಕಳು ತುಂಬಾ ಚೂಟಿಯಾಗಿ, ತುಂಟರಾಗಿ ಮನೆಯ ಕುರ್ಚಿ ಬೆಂಚುಗಳನ್ನೆಲ್ಲಾ ದರದರ ಎಳೆದು ಸದ್ದು ಮಾಡುತ್ತಿದ್ದರು. ಆಮೇಲೆ ಅಜ್ಜಿಯಿಂದ ಪೆಟ್ಟು ತಿಂದು ಸುಮ್ಮನಾಗುತ್ತಿದ್ದರು.

ಜೋರಾಗಿ ಅಳುತ್ತಿದ್ದ ಆ ಮಕ್ಕಳಿಂದ ನನಗೆ ಷೇಕ್ ಹ್ಯಾಂಡ್ ಕೊಡಿಸಿದರು.

ಕಣ್ಣೀರು ಒರೆಸಿ ಒದ್ದೆಯಾದ ಆ ಪುಟ್ಟಪುಟ್ಟ ಕೈಗಳು.

ಆವತ್ತು ಅವರ ಜೊತೆ ಸುಮ್ಮನೇ ಇದ್ದೆ.

2011-01-19_4592ಕಾಡಿನ ನಡುವೆ ಕತ್ತಲಲ್ಲಿ ಚಿಮಿಣಿ ದೀಪದ ಬೆಳಕಿನಲ್ಲಿ ಅವರೆಲ್ಲರ ಸಹಜ ಓಡಾಟ, ಬಾವನಿಗೆ ಗೋಳು ಹೊಯ್ದುಕೊಳ್ಳುತ್ತಿದ್ದ ಎಳೆಯರಾದ ನಾದಿನಿಯರು, ಎಲೆಯಡಿಕೆಯ ಸಂಚಿಯನ್ನು ತೆರೆದು ಬಾಯಿ ತುಂಬಾ ಹೊಗೆಸೊಪ್ಪು ತುಂಬಿ ಎಲೆಯಡಿಕೆ ಬಾಯಿಗೆ ಹಾಕುವುದನ್ನೂ ಮರೆತು ಕಥೆ ಹೇಳುತ್ತಿದ್ದ ಅತ್ತೆ. ಸುತ್ತಿಟ್ಟ ಹಾಸುಗೆಗಳನ್ನು ಕೊಡವಿ ಬಿಡಿಸುತ್ತಿದ್ದ ಮಡದಿ.

ಆಮೇಲೆ ಬೆಂಕಿಯ ಸುತ್ತ ಕುಳಿತುಕೊಂಡು ಕೊಂದ ಕೋಳಿಯೊಂದನ್ನು ಶುಚಿಗೊಳಿಸಿದೆವು. ಆಮೇಲೆ ಒಲೆಯ ಸುತ್ತ ಮಣೆ ಹಾಕಿಕೊಂಡು ಅಕ್ಕಿ ರೊಟ್ಟಿ ತಿಂದೆವು. ಆಮೇಲೆ ಅವರೆಲ್ಲ ನನ್ನನ್ನು ಹಾಡಲು ಒತ್ತಾಯಿಸಿದರು.

‘ ದೇವರೇ ಮುಂದೆ ಬಂದು ನಿಂತು ಹೇಳಿದರೂ ನನಗೆ ಹಾಡಲು ಬರುವುದಿಲ್ಲ, ತಾಯಾಣೆ ’ ಎಂದು ಹೇಳಿದೆ.

ಆನಂತರ ಆ ಅವಳಿ ಸುಂದರಿಯರು ಹಾಡಿದರು.

ರಾತ್ರಿ ಬಹು ಹೊತ್ತಿನ ತನಕ ವಯಸ್ಸಾದ ಅತ್ತೆ ತಮ್ಮ ಕಥೆಗಳನ್ನು ಹೇಳುತ್ತಿದ್ದರು.

ಆಕೆಯ ಗಂಡ ಬಹಳ ವರ್ಷಗಳ ಹಿಂದೆ ನನಗೆ ಗೊತ್ತಿರುವವರರೊಬ್ಬರನ್ನು ಕಡಿದು ಕೊಲೆಮಾಡಿದ್ದರು.

‘ಓಹ್, ಅವರೇನಾ ನಿಮ್ಮ ಗಂಡ’ ಎಂದು ಹೇಳಿದೆ.

‘ಯಾಕೆ ಹೆದರಿಕೆಯಾಗುತ್ತಿದೆಯಾ’ ಎಂದು ನಕ್ಕರು.

ಆಮೇಲೆ ಇನ್ನಷ್ಟು ತಂಬಾಕನ್ನು ಬಾಯಿಗೆ ಹಾಕಿಕೊಂಡರು. ತಿನ್ನಲು ಹಸಿ ಅಡಿಕೆ ಕೇಳಿದ ಎಳೆ ಮಗಳನ್ನು ಬೈದರು.

‘ಸಣ್ಣ ಹುಡುಗಿಯರು ಹಸಿ ಅಡಿಕೆ ತಿನ್ನಬಾರದು’ ಅಂದರು.

DSC_0117ಅವರ ಗಂಡ ಕೊಲೆಗಾರ ಈಗ ಜೈಲಿನಿಂದ ಬಂದು ಇನ್ನೊಂದು ಮದುವೆಯಾಗಿ ಅಲ್ಲೂ ಮಕ್ಕಳಾಗಿ ಒಮ್ಮೊಮ್ಮೆ ಮಕ್ಕಳಿಗೆ ಬಸ್ಸಲ್ಲಿ ಹೋಗುವಾಗ ಮಾತನಾಡಿಸಲು ಸಿಗುತ್ತಾರಂತೆ.

‘ಅವನ ಜೊತೆ ಎಲ್ಲಾದರೂ ಮಾತನಾಡಿದರೆ ನಿಮ್ಮನ್ನು ಕತ್ತಿಯಿಂದ ಕಡಿದು ಹಾಕುತ್ತೇನೆ’ ಎಂದು ನಡುವಲ್ಲಿ ಇನ್ನೊಮ್ಮೆ ಎಚ್ಚರಿಸಿದರು.

‘ಒಂದು ದಿನ ಅವನನ್ನೂ ಕಡಿದು ಹಾಕುವುದು ಖಂಡಿತ’ ಎಂದರು.

ಹೀಗೆಯೇ ಒಂದು ರಾತ್ರಿ ಈಕೆ ಅವಳಿಮಕ್ಕಳನ್ನು ಎರಡೂ ಕಡೆ ಮಲಗಿಸಿಕೊಂಡು ಮಳೆಯಲ್ಲಿ ಎದೆಯಲ್ಲಿ ಹಾಲಿಲ್ಲದೆ ದೇವರಿಗೆ ಶಾಪ ಹಾಕುತ್ತಾ ಮಲಗಿದ್ದಾಗ ಆ ಗಂಡಸು ಎಂಟು ತೊಟ್ಟೆ ಸಾರಾಯಿ ಕುಡಿದು ನನಗೆ ಗೊತ್ತಿರುವ ವ್ಯಾಪಾರಿಯನ್ನು ಕಡಿದು

ಹಾಕಿದನಂತೆ.‘ದೇವರಂತಾ ಅಂಗಡಿ ಸಾಹೇಬರಾಗಿದ್ದರು ಅವರು’ ಎಂದು ನೆನಪು ಮಾಡಿಕೊಂಡರು.

2011-07-05_9190ಈಗಲೂ ಆ ಸಾಹೇಬರ ಮಕ್ಕಳು ಇವರನ್ನು ಕಂಡರೆ ಕರೆದು ಮಾತನಾಡಿಸುತ್ತಾರಂತೆ. ಆ ಸಾಹೇಬರ ಹೆಂಡತಿಯೂ ಈಗ ತೀರಿ ಹೋಗಿದ್ದಾರೆ.

‘ಕೊಲೆಯಾದ ಸಾಹೇಬರು ನನಗೆ ದೂರದ ನೆಂಟರಾಗಬೇಕು’ ಅಂದೆ.

‘ಓ ನೀವು ಅವರ ಮಗನಾ ’ ಎಂದು ತೀರಿಹೋದ ನನ್ನ ತಂದೆಯ ಹೆಸರನ್ನು ಹೇಳಿದರು.

ಆಮೇಲೆ ಬಹಳ ಹೊತ್ತು ನಾವಿಬ್ಬರು ಗೊತ್ತಿರುವ ಹಲವು ಮುದುಕಿಯರ ಬಗ್ಗೆ ಮಾತನಾಡಿದೆವು.

ಅವರಲ್ಲಿ ಒಬ್ಬಳು ಮುದುಕಿ ಈಗಲೂ ಬದುಕಿದ್ದಾಳೆ ಎಂದು ತಿಳಿಯಿತು.

ಎರಡು ವರ್ಷವಾದರೂ ನಡೆಯಲು ಬಾರದಿದ್ದ ನನ್ನ ತಂಗಿಯೊಬ್ಬಳನ್ನು ಕತ್ತಿಯ ಅಲುಗಿನ ಮೇಲೆ ನಡೆಸಿ ನಡೆಯಲು ಕಲಿಸಿದವಳು ಆ ಮುದುಕಿ.

ಅವಳನ್ನು ಆದರೆ ಒಮ್ಮೆ ನೋಡಬೇಕು ಎಂದು ನಿದ್ದೆ ಹತ್ತಿ ಮುಸುಕೆಳೆದುಕೊಂಡು ನಾನು ಹೇಳಿದೆ.

thora5ಬೆಳಗ್ಗೆ ಅಲ್ಲಿಂದ ಎದ್ದು ಬಂದೆ.

(ಡಿಸೆಂಬರ್ ೧೧, ೨೦೧೧)

(ಫೋಟೋಗಳೂ ಲೇಖಕರವು )

Advertisements