ಗಾರೋ ದೀದಿಯೂ, ಮಿಝೋ ದೀದಿಯೂ

shillong 6

ಆಗ ಮೇಘಾಲಯದ ರಾಜಧಾನಿ ಷಿಲ್ಲಾಂಗಿನಲ್ಲಿದ್ದ ದಿನಗಳು.

ಇರುವ ಒಂದಿಷ್ಟು ಕೆಲಸಗಳನ್ನು ಮುಗಿಸಿದರೆ ಉಳಿದಿರುವ ದಿನವೆಲ್ಲ ನನ್ನದೇ. `ಅಲೆ, ಸುಖಿಸು, ಸಂಕಟ ಪಡು ಆದರೆ ಯಾರಲ್ಲಾದರೂ ಈ ಕುರಿತು ಗೋಳಾಡಿಕೊಂಡರೆ ನಿನ್ನ ಈ ಸ್ವರ್ಗವಾಸವು ಮುಗಿದು ಮತ್ತೆ ನರಕಕ್ಕೆ ಮರಳಬೇಕಾಗಬಹುದು. ಎಂದು ಎಚ್ಚರಿಸುತ್ತಿದ್ದ ದೇವತಾ ಪೃಥಿವಿ!

‘ಅಪ್ಪಣೆ ತಾಯೇ’ ಎಂದು ಸುಮ್ಮನೇ ಅನುಭವಿಸುತ್ತಿದ್ದೆ.ಮಾತಿಗೆ ಸಿಕ್ಕಿದವರನ್ನೆಲ್ಲ ಮಾತನಾಡಿಸುವುದು, ಕರೆದವರ ಕರೆಗೆಲ್ಲ ಇಲ್ಲವೆನ್ನದೆ ಹೋಗುವುದು ಮತ್ತು ಇರುಳು ಮಲಗುವ ಮೊದಲು ಆ ದಿನದ ಈ ತರಹದ ಆಗುಹೋಗುಗಳನ್ನೆಲ್ಲ ನೆನೆದು ನಾನೂ ಸಿಕ್ಕಾಪಟ್ಟೆ ಮನಸ್ಸಲ್ಲೇ ನಗುವುದು ಒಂತರಾ ಸಖತ್ತಾಗಿರುತ್ತಿತ್ತು.

ಆ ದಿನಗಳಲ್ಲಿ ಇಬ್ಬರು ದೀದಿಯರು ಆತ್ಮೀಯರಾಗಿದ್ದರು.ಒಬ್ಬಾಕೆ ತುರಾ ಪ್ರಾಂತ್ಯದ ಗಾರೋ ದೀದಿ.ಇನ್ನೊಬ್ಬಾಕೆ ಮಿಝೋ ಸುಂದರಿ.

ಇಬ್ಬರೂ ನಾಗಾಶಾಲು, ಮಿಝೋಶಾಲು, ಬಾಂಗ್ಲಾ ದೇಶದ ಹೊದಿಕೆ, ಬೆಲ್ಜಿಯಂನ ಪಿಂಗಾಣಿ ಕುಡಿಕೆ ಇತ್ಯಾದಿಗಳನ್ನು ಮಾರಿಕೊಂಡು ಬದುಕುತ್ತಿದ್ದರು.ಅವರಿಬ್ಬರಿಗೆ ವ್ಯಾಪಾರವೇ ಮುಖ್ಯವಾಗಿತ್ತೋ ಅಥವಾ ಒಬ್ಬರಿಗೆ ಇನ್ನೊಬ್ಬರ ಖಾಸಗೀ ವಿಷಯಗಳನ್ನು, ಲಾಭನಷ್ಟಗಳನ್ನು ಹೇಳಿಕೊಂಡು ತಿರುಗುವ ಖಯಾಲಿಯಿತ್ತೋ…

ಅಂತೂ ಇಬ್ಬರೂ ಒಂದು ರೀತಿಯ ಮೆಲುದನಿಯಲ್ಲಿ ಇದನ್ನು ಈ ಮೊದಲು ಯಾರಿಗೂ ಹೇಳಿಯೇ ಇಲ್ಲವೇನೋ ಎಂಬಂತೆ ನನ್ನೆದುರು ಒಪ್ಪಿಸಿಬಿಡುತ್ತಿದ್ದರು.

shillongಆ ಗಾರೋ ಹೆಂಗಸು ತುರಾ ಬಳಿಯ ರೈತನೊಬ್ಬನ ಹೆಂಡತಿ.ಬೆಳೆದು ದೊಡ್ಡವರಾಗಿ ಮದುವೆಯ ವಯಸ್ಸಿಗೆ ಬಂದ ಹೆಣ್ಣುಮಕ್ಕಳೂ ಆಕೆಗೆ ಇರುವರಂತೆ.ಆದರೆ ಮಂತ್ರಿಯೊಬ್ಬರ ಅಂಗರಕ್ಷಕನೊಬ್ಬ ಆಕೆಗೆ ಮಂಕುಬೂದಿ ಎರಚಿ  ‘ನೀನು ನೋಡಲೂ ಚೆನ್ನಾಗಿದ್ದೀಯಾ, ಮಾತೂ ಚೆನ್ನಾಗಿ ಆಡುತ್ತೀಯಾ.ನನ್ನ ಜೊತೆ ಬಾ, ನಾನು ಮಂತ್ರಿಗೆ ಹೇಳಿ ನಿನ್ನನ್ನು ತುರಾ ಪ್ರದೇಶದ ಗಿರಿಜನ ಅಭಿವೃದ್ಧಿ ಮಂಡಳಿಯ ಮೆಂಬರ್ ಮಾಡುತ್ತೇನೆ’ ಎಂದು ಹಾರಿಸಿಕೊಂಡು ಬಂದಿರುವುದಂತೆ.

‘ಆಕೆ ಮೆಂಬರೂ ಆಗಲಾರಳು, ಏನೂ ಆಗಲಾರಳು.ನೀವೇ ನೋಡಿ ಒಂದು ದಿನ ಆ ಅಂಗರಕ್ಷಕನ ಹೆಂಡತಿ ತನ್ನ ಹಳ್ಳಿಯಿಂದ ದೊಡ್ಡ ತಲವಾರಿನ ಜೊತೆ ಬಂದು ಈ ಗಾರೋ ಹೆಂಗಸಿನ ತಲೆ ಹಿಡಿದುಕೊಂಡು ವಾಪಾಸಾಗುತ್ತಾಳೆ’ ಎಂದು ಮೀಝೋ ಸುಂದರಿ ರಹಸ್ಯವಾಗಿ ಹೇಳುತ್ತಿದ್ದಳು.

ಈ ಮೀಜೋ ಸುಂದರಿಗೆ ವಿಪರೀತ ವೀಳ್ಯದೆಲೆ ಅಗಿಯುವ ಚಟ.ತುಪಾಕಿಯ ಬುಲ್ಲೆಟ್ಟುಗಳು ಮುಗಿದಂತೆ ಇನ್ನೊಂದು ಬುಲ್ಲೆಟ್ಟನ್ನು ತೂರಿಸುವ ಸಿಪಾಯಿಯಂತೆ ಆಕೆ ಸುಣ್ಣ ಹಚ್ಚಿದ ವೀಳ್ಯದೊಳಕ್ಕೆ ಹಸಿ ಅಡಿಕೆ ಚೂರನ್ನು ಸಿಗಿಸಿ ಬಾಯೊಳಕ್ಕೆ ಎಸೆದು ಕೈಯಲ್ಲಿ ಅಂಟಿರುವ ಸುಣ್ಣವನ್ನು ತನ್ನ ವಸ್ತ್ರದ ಹಿಂಬಾಗಕ್ಕೆ ಉಜ್ಜಿ ನಗುತ್ತಿದ್ದಳು.

ಈಕೆಯ ನಗು ನೋಡಿದರೆ ಆ ಗಾರೋ ಹೆಂಗಸು ಈಕೆಯಷ್ಟು ಜೋರು ಇರಲಿಕ್ಕಿಲ್ಲ ಅಂತಲೂ ಒಳಮನಸ್ಸು ಹೇಳುತ್ತಿತ್ತು.

shillong (1)ಆ ಗಾರೋ ಹೆಂಗಸಿನ ಬರುವಿಕೆಯೇ ಚಂದವಿರುತ್ತಿತ್ತು.

ಯಾರೊಡನೆಯೋ ಅದುವರೆಗೆ ಗಲಗಲ ಮಾತಾಡಿಕೊಂಡು ಬರುತ್ತಿದ್ದವಳು ನನ್ನ ಮುಖ ಕಂಡೊಡನೆ ತನ್ನ ಮುಖವನ್ನು ಆದಷ್ಟು ನೋವಿನಿಂದ ತುಂಬಿಕೊಂಡು ‘ಸಾಬ್ ಈವತ್ತು ಬರೀ ಲುಕ್ಸಾನು’ ಅನ್ನುತ್ತಿದ್ದಳು.

ಯಾರೋ ಒಬ್ಬರು ಮದ್ರಾಸಿನವರು ಆಕೆಗೆ ಅಪ್ಪಟವಾದ ಬೇರೆಲ್ಲೂ ಸಿಗದ ಒರಿಜಿನಲ್ ನಾಗಾ ಶಾಲು ಬೇಕೆಂದು ಹೇಳಿದ್ದರಂತೆ. ಅದಕ್ಕೆ ಆಕೆ ದಿಮಾಪುರದವರೆಗೆ ಬಸ್ಸು ಹತ್ತಿ ಹೋಗಿ ಅಷ್ಟೆಲ್ಲ ಕಷ್ಟಪಟ್ಟು ತಂದರೆ ಇಲ್ಲಿ ಆ ಮದ್ರಾಸಿ ಮನುಷ್ಯ ಹೇಳದೇ ಕೇಳದೇ ವರ್ಗಾವಣೆಗೊಂಡು ಹೊರಟು ಹೋಗಿದ್ದಾನಂತೆ.

‘ಸಾಬ್, ನೀವೂ ಮದ್ರಾಸಿಯಲ್ಲವೇ,ನೀವೇ ಕೊಂಡುಕೊಳ್ಳಿ’ ಎಂದು ತನ್ನ ಆದಿವಾಸೀ ನ್ಯಾಯವನ್ನು ನನ್ನ ಮೇಲೆ ಹೇರಲು ನೋಡುತ್ತಿದ್ದಳು.

‘ನಾನು ಮದ್ರಾಸಿಯೂ ಅಲ್ಲ ಬಂಗಾಳಿಯೂ ಅಲ್ಲ ನನ್ನ ಬಳಿ ಈಗ ಟೀ ಕುಡಿಯಲೂ ಕಾಸಿಲ್ಲ.ನೀನು ಆದಿವಾಸಿ ಪರಿಷತ್ತಿನ ಮೆಂಬರ್ ಆಗುವವಳು,ನೀನೇ ಟೀ ಕುಡಿಸು’ ಎಂದು ಉತ್ತರಿಸಿದ್ದೆ.

ಅದುವರೆಗೆ ಪಾಪದವಳಂತೆ ಕಾಣಿಸುತ್ತಿದ್ದ ಆಕೆ ಈ ಮಾತು ಕೇಳಿದೊಡನೆ ನಿಗಿನಿಗಿ ಕೆಂಡದಂತಾಗಿ ‘ನಿಮಗೂ ಹೇಳಿದಳಾ ಆ ಕೆಟ್ಟ ಹೆಂಗಸು.ಅವಳ ಕಥೆ ಯಾರಿಗೂ ಗೊತ್ತಿಲ್ಲ ಎಂದು ಕಾಣುತ್ತದೆ’ ಎಂದು ನನ್ನ ಕುತೂಹಲಕ್ಕೆ ಕಾಯುತ್ತಾ ನಿಂತಳು.

‘ಏನು ಕಥೆ ಹೇಳು ದೀದೀ’ ಅಂದೆ.

‘ಅವಳಾ? ಅವಳು ಒಂದೊಂದು ಕಡೆ ಒಂದೊಂದು ಕಥೆ ಹೇಳಿ ತನಗೆ ಯಾರೂ ಇಲ್ಲ ಎಂದು ನಂಬಿಸಿ ಈಗಾಗಲೇ ಮೂರು ಮದುವೆಯಾಗಿರುವಳು.ಆದರೆ ತುಂಬಾ ಜಾಣೆ.ಎಲ್ಲೂ ಮಕ್ಕಳು ಮಾಡಿಕೊಂಡಿಲ್ಲ’ ಎಂದು ನಕ್ಕಳು.

ಆ ಮೀಝೋ ಸುಂದರಿ ಸಣ್ಣದಾಗಿರುವಾಗಲೇ ತುಂಬಾ ಜೋರಂತೆ.

ಆಕೆಯ ಪಕ್ಕದ ಮನೆಯಲ್ಲಿ ಒಬ್ಬ ಬಂಗಾಲೀ ಮುಸಲ್ಮಾನನ ಕಾರು ಗ್ಯಾರೇಜಿತ್ತಂತೆ.

ಆ ಗ್ಯಾರೇಜು ಮಾಲೀಕನ ಮಗ ತುಂಬ ಚಂದ ಇದ್ದನಂತೆ.

ಒಂದು ದಿನ ಮದ್ಯಾಹ್ನ ಯಾರೂ ಇಲ್ಲದ ಹೊತ್ತಲ್ಲಿ ಅವನೊಬ್ಬನೇ ಕಾರು ರಿಪೇರಿ ಮಾಡುತ್ತಿದ್ದನಂತೆ.

ನನಗೂ ಕಾರು ಕಲಿಸು ಎಂದು ಆಕೆ ದುಂಬಾಲು ಬಿದ್ದಳಂತೆ.

ಸರಿ ಎಂದು ಆತ ಚಿರಾಪುಂಜಿಯ ರಸ್ತೆಯಲ್ಲಿ ಕರೆದುಕೊಂಡು ಹೋದನಂತೆ.

ದಾರಿಯಲ್ಲಿ ಕಾರು ಕೆಟ್ಟುಹೋಯಿತಂತೆ.ಮಳೆಯೂ ಬರುತ್ತಿತ್ತಂತೆ.

ಆ ರಾತ್ರಿಯನ್ನು ಅವರು ಕಾರಲ್ಲೇ ಕಳೆಯಬೇಕಾಯಿತಂತೆ.

ಬೆಳಗ್ಗೆ ವಾಪಾಸು ಬಂದಾಗ ಇಬ್ಬರ ಮನೆಯವರೂ ಕಾಯುತ್ತಿದ್ದರಂತೆ.

ಒಂದು ಇರುಳು ಒಂದು ಹೆಣ್ಣು ಒಂದು ಗಂಡು ಏಕಾಂತದಲ್ಲಿದ್ದರೆ ಮದುವೆಯಾದರು ಎಂಬುದು ಆ ಪ್ರಾಂತದ ನಂಬಿಕೆಯಂತೆ.

ಅದನ್ನೇ ಹೇಳಿ ಹೆದರಿಸಿ ಆಕೆ ಆ ಕಾರು ಗ್ಯಾರೇಜಿನವನ ಮಗನನ್ನು ಮದುವೆಯಾಗಿಬಿಟ್ಟಳಂತೆ.

ಆಮೇಲೆ ಅವರಿಬ್ಬರಿಗೂ ಜಗಳವಾಯಿತಂತೆ.

ಎಷ್ಟೋ ವರ್ಷ ಬಿಟ್ಟಿದ್ದರಂತೆ.

ಆಮೇಲೆ ಈಗ ರಾಜಿಯಾಗಿರುವರಂತೆ.

ಈ ನಡುವೆ ತನಗೆ ಮದುವೆಯೇ ಆಗಿಲ್ಲ ಎಂದು ನಂಬಿಸಿ ಆಕೆ ಇನ್ನೊಂದೆರಡು ಮದುವೆಯೂ ಆಗಿದ್ದಳಂತೆ.

Pic: Copyright Timothy Allen  http://www.humanplanet.com

Pic: Copyright Timothy Allen http://www.humanplanet.com

‘ಆಕೆ ಈಗ ವಾಪಾಸು ಬಂದಿರುವುದು ಗಂಡನ ಮೇಲಿನ ಪ್ರೀತಿಯಿಂದಲ್ಲ.ಗ್ಯಾರೇಜಿನ ಮೇಲಿನ ಆಸೆಯಿಂದ.ನೋಡಿ ಒಂದು ದಿನ ಆಕೆ ಆ ಇಡೀ ಬಂಗಾಲಿ ಕುಟುಂಬವನ್ನು ಹೊರಗೆ ಹಾಕಿ ತಾನೇ ಮಾಲೀಕಳಂತೆ ಕೂರುತ್ತಾಳೆ’ ಅಂದಳು.

‘ಸರಿ,ಅವಳ ಕಥೆ ನೀನು ಹೇಳಿದೆ.ನಿನ್ನ ಕಥೆ ಅವಳೂ ಹೇಳಿರುವಳು.ಇನ್ನು ಈ ವಿಷಯಕ್ಕೆ ನೀವಿಬ್ಬರೂ ಜುಟ್ಟು ಹಿಡಿದುಕೊಂಡು ಹೊಡೆದಾಡಬೇಡಿ’ ಎಂದಿದ್ದೆ.

‘ಇಲ್ಲಾ ಸಾಬ್ ನಾವಿಬ್ಬರೂ ಗೆಳತಿಯರೇ.ನಮ್ಮ ನಮ್ಮ ಕಷ್ಟ ನಮಗೆ.ಇಲ್ಲಿ ಗಂಡಸರು ಸರಿ ಇದ್ದರೆ ನಾವು ಹೀಗೆ ಕಷ್ಟ ಬಂದು ಬದುಕಬೇಕಿತ್ತೇ.ಅವಳು ಹೇಳಿದ ನನ್ನ ಕಥೆಯೂ ನಿಜ.ನಾನು ಹೇಳಿದ ಅವಳ ಕಥೆಯೂ ನಿಜ.ನೀವು ಮದ್ರಾಸಿಗಳು ದುಡಿದು ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ.ಇಲ್ಲಿ ನಾವೇ ಎಲ್ಲಾ ಮಾಡಬೇಕು.ಗಂಡಸರು ಬರೀ ಸೋಮಾರಿಗಳು.ದಿನವಿಡೀ ಬಿಸಿಲು ಕಾಯಿಸಿಕೊಂಡು ಬೀಡಿ ಸೇದಿಕೊಂಡು ಕಾಲ ಹಾಳು ಮಾಡುತ್ತಾರೆ’ ಎಂದು ಆಕೆ ಇಡೀ ಪುರುಷ ಸಮಾಜಕ್ಕೆ ಕ್ಯಾಕರಿಸಿ ಉಗಿದಳು.

ನನ್ನ ಕಥೆಯನ್ನು ನೆನೆದು ನಾನೂ ಉಗುಳು ನುಂಗಿಕೊಂಡಿದ್ದೆ.

ಇದು ಇವರಿಬ್ಬರ ಹಳೆಯ ಕಥೆ.ಆದರೆ ನಾನು ಬರೆಯಹೊರಟಿದ್ದು ನನ್ನದೇ ಕಥೆ.

ಇವರು ಬಾಂಗ್ಲಾದೇಶದ ಕಂಬಳಿಗಳನ್ನೂ, ಬೆಲ್ಜಿಯಂನ ಪಿಂಗಾಣಿ ಸಾಮಾನುಗಳನ್ನೂ ತರುವುದು ನೇಪಾಳದ ದೂಲಾಬಾರಿ ಎಂಬ shillong 3ಕಳ್ಳಸಾಗಣೆಯ ಕೇಂದ್ರದಿಂದ.ಈ ದೂಲಾಬಾರಿ ಇರುವುದು ಭಾರತದ ನಕ್ಸಲ್ ಬಾರಿಯಿಂದ ಕೊಂಚ ಮುಂದೆ.ನನಗೂ ನಕ್ಸಲ್ ಬಾರಿ ನೋಡಿದ ಹಾಗಾಯಿತು. ಇವರಿಗೂ ದೂಲಾಬಾರಿಗೆ ಹೋದ ಹಾಗಾಯಿತು ಎಂದುಕೊಂಡು ಅವರಿಗೆ ಒಂದಿಷ್ಟು ಮೂಲ ಬಂಡವಾಳ ಒದಗಿಸಿದೆ.ಯಾರಾದರೂ ಕೇಳಿದರೆ ನಿಮ್ಮ ಜೊತೆ ಸಾಮಾನುಗಳನ್ನು ಹೊರಲು ಬಂದಿರುವ ಮದ್ರಾಸೀ ಹೊರೆಯಾಳು ಎಂದು ಹೇಳಿ ಎಂದು ಅವರಿಬ್ಬರೊಂದಿಗೆ ಅಲ್ಲಿಯವರೆಗೆ ಹೋದೆ.ಅವರಿಬ್ಬರೂ ಹೇಳಿದ ಮಾತಿನಂತೆ ನನ್ನನ್ನು ನಡೆಸಿಕೊಂಡರು.

ದೂಲಾಬಾರಿಯಲ್ಲಿ ಅವರು ಹೊರೆ ಸಾಮಾನುಗಳನ್ನು ನನ್ನಿಂದ ಹೊರೆಸಿದರು.

ನಿಮಿಷಕ್ಕೊಂದು ಸಲ ನನ್ನನ್ನು ಕೈತಟ್ಟಿ ಕರೆದು ಚಹಾವನ್ನೂ, ಊಟವನ್ನೂ ನನ್ನಿಂದ ತರಿಸಿ ಹೊಟ್ಟೆತುಂಬಾ ಉಂಡರು.

ಕತ್ತಲಾಗುತ್ತಿದ್ದಂತೆ ದೂಲಾಬಾರಿಯ ಕೆಟ್ಟ ಹೋಟೆಲ್ಲೊಂದರಲ್ಲಿ ಇವರ ತರಹವೇ ಇರುವ ಕಳ್ಳಮಾಲಿನ ಸಾಗಣೆದಾರರು ನೂರಾರು ಜನರು ಸೇರಿದ್ದರು.

ಅವರೆಲ್ಲರೂ ಸೇರಿಕೊಂಡು ಇಸ್ಪೀಟು ಆಡಲು ತೊಡಗಿದರು.

ಅವರಿಗೆ ಕುಡಿಯಲು ಮಧ್ಯವನ್ನೂ ಅದಕ್ಕೆ ಬೆರೆಸಲು ಸೋಡಾವನ್ನೂ ನಾನು ಸರಬರಾಜು ಮಾಡಬೇಕಾಯಿತು.

ಅವರೆಲ್ಲರೂ ನಡುನಡುವಲ್ಲಿ ಗಹಗಹಿಸಿ ಹೊರೆಯಾಳಾದ ನನ್ನನ್ನು ಕೆಟ್ಟ ಮಾತುಗಳಲ್ಲಿ ತಮಾಷೆ ಮಾಡುತ್ತಿದ್ದರು.

ವಾರೆಗಣ್ಣಲ್ಲಿ ನೋಡುತ್ತಿದ್ದ ಈ ಇಬ್ಬರು ದೀದಿಗಳು ನನ್ನ ಅವಸ್ಥೆಯನ್ನು ಆನಂದಿಸುತ್ತಿದ್ದರು.

ನಡುರಾತ್ರಿಯಲ್ಲಿ ಆ ಹೋಟೇಲಿನಲ್ಲಿ ಕರೆಂಟು ಹೋಯಿತು.

‘ ಓ ಇವನೇ ಹೋಗಿ ಕ್ಯಾಂಡಲ್ ತೆಗೆದುಕೊಂಡು ಬಾ’ ಎಂದು ಮಿಝೋ ದೀದಿ ಕೈತಟ್ಟಿ ಆಜ್ಞಾಪಿಸಿದಳು.

shillong4ನಾನು ಕ್ಯಾಂಡಲು ತರಲು ಆ ಕತ್ತಲಲ್ಲಿ ಆ ಹಳೆಯ ಹೋಟಲಿನ ಮರದ ಮೆಟ್ಟಿಲುಗಳನ್ನು ತಡವರಿಸುತ್ತಾ ಇಳಿದವನು ಹಾಗೇ ಕತ್ತಲಲ್ಲಿ ನಡೆದು ನಡು ಇರುಳಲ್ಲಿ ಬಸ್ಸೊಂದನ್ನು ಹತ್ತಿ ಅಲ್ಲಿಂದ ಮಾಯವಾಗಿದ್ದೆ.

ಇದುವರೆಗೆ ಆ ಒಂದು ಇರುಳಿನ ಸೇವಕನ ಪಾತ್ರ ನೆನೆದಾಗಲೆಲ್ಲ ಸಂಕಟವಾಗುತ್ತಿತ್ತು.ಈಗ ಅದನ್ನು ಬರೆದು ಮುಗಿಸಿದ ಮೇಲೆ ಯಾಕೋ ಇನ್ನೊಮ್ಮೆ ಹೊರೆಯಾಳಾಗಬೇಕೆಂಬ ಹಂಬಲವಾಗುತ್ತಿದೆ.

(ಫೋಟೋಗಳು ನೆಟ್ಟಿನಿಂದ)
(ಡಿಸೆಂಬರ್ ೪, ೨೦೧೧)

Advertisements