ಗಂಡಸಾಗುವ ಬದಲು ಗರ್ಭವತಿ ಆಗಿದ್ದಿದ್ದರೆ….

2012-04-17_3198ಇಲ್ಲಿ ಮಡಿಕೇರಿಯಲ್ಲಿ ಶುಕ್ರವಾರದ ಸಂತೆ ಸಖತ್ತಾಗಿರುತ್ತದೆ.

ಈ ಸಂತೆಯ ಹೊರಗೆ ಕಿರಿದಾದ ಒಂದು ಮೂಲೆಯಲ್ಲಿ ಮಳೆಗಾಲದ ಒಂದು ಹಗಲಿನಲ್ಲಿ ಕತ್ತಲು ಕತ್ತಲಿನಂತಹ ಬೆಳಗಿನ ಹೊತ್ತಿನಲ್ಲಿ ಇವನನ್ನು ನಾನು ನೋಡಿದ್ದೆ.

ಸಣ್ಣ ವಯಸಿನಲ್ಲಿಯೇ ತನ್ನ ಮುಖಕ್ಕೆ ಅಸಹಜ ಎನ್ನಿಸುವಷ್ಟು ದೊಡ್ಡದಾದ ಮೀಸೆ ಬಿಟ್ಟುಕೊಂಡಿದ್ದ ಈತ ನಾಡ ತರಕಾರಿಗಳನ್ನೂ,ನಾಟಿಕೋಳಿಯ ಮೊಟ್ಟೆಗಳನ್ನೂ,ಮರದ ಮೇಲೆ ಬೆಳೆಯುವ ಹಳದಿ ಕಲ್ಲಿನಂತೆ ಕಾಣಿಸುವ ಹಾವಸೆಯೋ ಅಣಬೆಯೋ ಗೊತ್ತಾಗದ ‘ಮರ ಕುಮ್ಮು’ವನ್ನೂ, ಕಲ್ಲಿನ ಹಾಗೆ ಇರುವ ಸಾರು ಬಾಳೆಯ ಗೊನೆಯೊಂದನ್ನು ಇಟ್ಟುಕೊಂಡು ಕೂತಿದ್ದ.

ಅಷ್ಟು ಹೊತ್ತಿಗೆ ಸರಿಯಾಗಿ ಅವನ ಹಾಗೇ ಇರುವ ಅವನ ತಂದೆಯೂ ಅಲ್ಲಿಗೆ ಬಂದರು. ಅವರೂ ಇವನ ಹಾಗೆಯೇ ದೊಡ್ಡದಾದ ಮೀಸೆ ಬಿಟ್ಟಿದ್ದರು. ಆದರೆ ಆ ತಂದೆಯ ಮುಖದಲ್ಲಿ ಮಗನ ಮುಖದಲ್ಲಿದ್ದಷ್ಟು ಮೀಸೆಯ ಕುರಿತಾದ ಜಂಬವಾಗಲೀ ಠೇಂಕಾರವಾಗಲೀ ಕಾಣಿಸದೆ ಒಂದು ಸಣ್ಣ ನಾಚಿಕೆಯ ನಗು ಅಲ್ಲಿ ಶಾಶ್ವತವಾಗಿ ಓಡಾಡುತ್ತಿತ್ತು.

‘ಇದೇನು ತಂದೆ ಮಕ್ಕಳು ಇಬ್ಬರೂ ಭಾರೀ ಮೀಸೆ?’ಎಂದು ಕೇಳಿದ್ದೆ. ಅದಕ್ಕೆ ಇಬ್ಬರೂ ನಾಚಿಕೊಂಡಿದ್ದರು.

DSC_9082ಪಕ್ಕದಲ್ಲಿ ಇವರ ಹಾಗೆಯೇ ಬಸಳೆಯನ್ನೂ, ಕಾಗೆಸೊಪ್ಪನ್ನೂ, ಕಣಿಲೆಯನ್ನೂ ಮಾರಲು ಇಟ್ಟಿದ್ದ ನಾಡು ಮುದುಕಿಯೊಬ್ಬಳು ‘ಸಾರ್, ಇವರ ಪ್ಯಾಮಿಲಿಯಲ್ಲಿ ಎಲ್ಲರೂ ಮೀಸೆಯೇ. ಇವನ ಅಜ್ಜನೂ ಹೀಗೆಯೇ ಮೀಸೆ ಬಿಟ್ಟಿದ್ದಾನೆ’ ಎಂದಳು.

ಅವರಲ್ಲಿ ಸಾಕಷ್ಟು ಗೆಳೆತನವನ್ನೂ ಸಲುಗೆಯನ್ನೂ ಬೆಳೆಸಿಕೊಂಡು, ‘ನಿಮ್ಮಲ್ಲಿ ಏನಾದರೂ ಹಬ್ಬ ಜಾತ್ರೆ ಊಟ ಇದ್ದರೆ ಕರೆಯಿರಿ. ಒಂದು ಸಲ ನಿಮ್ಮಲ್ಲಿಗೆ ಬಂದು ಒಂದೇ ರೀತಿಯ ಮೀಸೆ ಬಿಟ್ಟಿರುವ ಒಂದೇ ಮನೆಯ ಮೂರು ತಲೆಮಾರಿನ ಗಂಡಸರನ್ನು ನೋಡಬೇಕು’ ಎಂಬ ಆಸೆಯನ್ನೂ ತೋಡಿಕೊಂಡಿದ್ದೆ.

ಆ ಮಾತಿಗೆ ಅವರೂ ಖುಷಿಪಟ್ಟಿದ್ದರು.ಆದರೆ ಆ ನಂತರ ಅವರಿಬ್ಬರ ಸುಳಿವೇ ಸಂತೆಯಲ್ಲಿ ನನಗೆ ಕಾಣಿಸಿರಲಿಲ್ಲ.

ಈ ನಡುವೆ ಹಲವು ಬಾರಿ ಬೆಂಗಳೂರಿನ ಯಾವುದೋ ಅಪರಿಚಿತ ಸಂಖ್ಯೆಗಳಿಂದ ನಡುರಾತ್ರಿಯ ಹೊತ್ತಿನಲ್ಲಿ ಈ ಮೀಸೆಯ ಹುಡುಗ ನನ್ನೊಡನೆ ಮಾತನಾಡಿದ್ದ.

2011-06-29_9005ಕುಡಿದಂತೆ ಕೇಳಿಸುತ್ತಿದ್ದ ಅವನ ಧ್ವನಿ, ಏನೂ ಗೊತ್ತಾಗದಂತಿದ್ದ ಅವನ ಮಾತುಗಳು, ಇದ್ದಕ್ಕಿದ್ದಂತೆ ಮಾತನ್ನು ಕಠೋರ ಮಾಡಿಕೊಂಡು ತಾನು ಬೆಂಗಳೂರಿನಲ್ಲಿ ಯಾವುದೋ ದೊಡ್ಡ ಕಟ್ಟಡವೊಂದರ ಮುಂದೆ ಕೋವಿ ಹಿಡಿದುಕೊಂಡು ನಿಲ್ಲುವ ಗನ್ ಮ್ಯಾನಾಗಿರುವುದಾಗಿಯೂ ಹೆಚ್ಚು ಮಾತನಾಡಿದರೆ ನನ್ನನ್ನೇ ಮುಗಿಸಿಬಿಡುವುದಾಗಿಯೂ ರಾತ್ರಿ ಹೊತ್ತಲ್ಲಿ ಹೆದರಿಸುತ್ತಿದ್ದ.

ಮತ್ತೆ ಯಾವಾಗಲಾದರೂ ಹಗಲು ಹೊತ್ತಲ್ಲಿ ಮಾತನಾಡಿ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದ. ಅಪ್ಪನೊಡನೆ ಜಗಳವಾಡಿ ಬೆಂಗಳೂರು ಸೇರಿರುವುದಾಗಿ ಹೇಳಿದ್ದ.

ಮೊನ್ನೆ ಯಾಕೋ ಇದ್ದಕ್ಕಿದ್ದಂತೆ ಅವನ ಗ್ರಾಮಕ್ಕೆ ಹೋಗಿಯೇ ಬಿಡುವಾ ಅನಿಸಿ ಯಾರಲ್ಲೂ ಹೇಳದೇ ಕೇಳದೇ ಮೋಟಾರು ಸೈಕಲ್ಲು ಓಡಿಸುತ್ತಿದ್ದೆ.

ಟಾರುರೋಡು ಕಳೆದು, ಮಣ್ಣಿನ ರಸ್ತೆಯೂ ಕಳೆದು, ಹಳೆಯ ಕಾಲದ ಕೋಟೆಕೊತ್ತಲಗಳೂ ಕಳೆದು ಹಸಿರಿನ ನಡುವೆ ಅಲ್ಲಲ್ಲಿ ಶಿವದೇವಾಲಯಗಳು, ಭಗವತಿಯ ಅಂಬಲಗಳು, ಕೊಲೆಕಲ್ಲುಗಳು ಕಾಣಿಸಿಕೊಳ್ಳುತ್ತಿದ್ದವು.(ಕೊಲೆ ಕಲ್ಲುಗಳು ಅಂದರೆ ಗ್ರಾಮಗಳ ನಡುವಿನ ಯುದ್ಧಗಳಲ್ಲಿ ಸಾವನ್ನಪ್ಪಿದದವರ ನೆನಪಿಗೆ ನೆಟ್ಟ ಕಲ್ಲುಗಳು).

2011-11-29_6163ಈ ಶಿವದೇವಾಲಯಗಳಿಗೂ, ಭಗವತಿಗೂ, ಕೊಲೆಕಲ್ಲುಗಳಿಗೂ ಮನಸಿನಲ್ಲೇ ನಮಸ್ಕರಿಸುತ್ತಾ ಪುಪ್ಪುಸದೊಳಕ್ಕೆ ಜೀವ ತುಂಬುವ ಆ ಹಸಿರಿನಲ್ಲಿ ಉಲ್ಲಸಿತನಾಗುತ್ತಾ,ನಡುನಡುವೆ ಏನೋ ಕಳವಳಗೊಂಡು ಅನ್ಯಮನಸ್ಕನಾಗುತ್ತಾ ನಾನು ಹೋಗುತ್ತಿದ್ದೆ.

ಲಕ್ಷಾನುಲಕ್ಷ ವರ್ಷಗಳಿಂದ ಹಾಗೇ ಪಾಚಿಗಟ್ಟಿಕೊಂಡಂತೆ ಇರುವ ಈ ಹಸಿರು,ಅದಕ್ಕೂ ಮೊದಲಿನಿಂದಲೇ ಬೀಸುತ್ತಿರುವ ಈ ಗಾಳಿ,ಆನಂತರ ಬಂದಿರುವ ಹಲವು ದೇವದೇವತೆಯರು,

ಇತ್ತೀಚೆಗಷ್ಟೇ ನೆಟ್ಟಂತಿರುವ ಕೊಲೆಯ ಕಲ್ಲುಗಳು ಮತ್ತು ಈಗ ತಾನೇ ಉಂಟಾಗಿರುವಂತಹ ಕೆಟ್ಟ ಪ್ರೇಮದಂತಹ ಹಸಿವು.

ಈ ಕಾಡ ನಡುವಲ್ಲಿ ಯಾರೋ ಇದ್ದಕ್ಕಿದ್ದಂತೆಯೆ ಹೆದ್ದಾರಿಯೊಂದರ ಕೆಲಸ ಶುರುಮಾಡಿದ್ದರು. ಈ ದಾರಿ ಎಲ್ಲಿಗೂ ಹೋಗುವುದೇ ಇಲ್ಲ, ಇದೇ ಜಗತ್ತಿನ ಕೊನೆ ಎಂಬಂತಿರುವ ಈ ಜಾಗದಲ್ಲಿ ಶುರುವಾಗಿರುವ ಈ ಹೆದ್ದಾರಿ!. ತಮಾಷೆಯೆಂದರೆ ಅಲ್ಲಿ ಕೆಲಸ ಮಾಡುವವರಿಗೂ ಈ ದಾರಿ ಎಲ್ಲಿ ಹೋಗುತ್ತದೆ ಎಂದು ಗೊತ್ತಿರಲಿಲ್ಲ. ಕಾಡಿನ ನಡುವೆ ಗುಡಾರ ಹೂಡಿಕೊಂಡು ಸುಮ್ಮನೇ ಕೆಲಸ ಮಾಡುತ್ತಿದ್ದರು.

2011-11-29_6170ಇನ್ನು ಎಷ್ಟೋ ವರ್ಷಗಳ ನಂತರ ಈ ರಸ್ತೆಯ ಕೆಲಸ ಮುಗಿಯುತ್ತದೆ, ಆನಂತರ ಯಾವುದೋ ದೂರದ ಒಂದು ಊರಿಗೆ ದೂರದ ಯಾವುದೋ ಇನ್ನೊಂದು ಊರು ಬಹಳ ಹತ್ತಿರವಾಗುತ್ತದೆ ಎಂದು ಹೇಳಿ ಅವರ ಕೆಲಸ ಮುಂದುವರಿಸಿದರು.

ಇನ್ನು ಕೊಂಚ ಮುಂದೆ ಹೋಗಿ ಇನ್ನು ಮುಂದೆ ಹೋಗಲಾಗುವುದಿಲ್ಲ ಎಂದು ಸುಮ್ಮನೆ ನಿಂತುಕೊಂಡಿದ್ದೆ.

ಯಾಕೆ ಒಬ್ಬನೇ ಎಲ್ಲವನ್ನೂ ಬಿಟ್ಟು ಇಲ್ಲಿ ಬಂದಿರುವೆ ಎಂದೂ ಅನಿಸುತ್ತಿತ್ತು.

ಶನಿವಾರದ ದಿನ ಬೆಳ್ಳಗಿನ ಸಮವಸ್ತ್ರ ತೊಟ್ಟುಕೊಂಡ ಶಾಲೆಗೆ ಹೋಗುವ ಹುಡುಗನೊಬ್ಬ ಕ್ಲಾಸು ಮುಗಿಸಿ ಒಬ್ಬನೇ ನಡೆದು ಹೋಗುತ್ತಿದ್ದ.

ಅವನ ಊರಿನ ಹೆಸರೂ ನಾನು ಹುಡುಕುತ್ತಿದ್ದ ಮೀಸೆ ಮನೆತನದವರ ಊರಿನ ಹೆಸರೂ ಒಂದೇ ಆಗಿತ್ತು.

ಆದರೆ ಅವನಿಗೆ ಅವರು ಯಾರು ಎಂದು ತಿಳಿದಿರಲಿಲ್ಲ. ಏಕೆಂದರೆ ಅಲ್ಲಿ ಬಹುತೇಕ ಎಲ್ಲ ಗಂಡಸರೂ ಹಾಗೇ ಮೀಸೆ ಬಿಡುತ್ತಾರೆ ಎಂದು ಹೇಳಿದ.

ಹಾಲುಗಲ್ಲದ ಆ ಬಾಲಕನೂ ಇನ್ನು ಕೆಲವೇ ಕಾಲದಲ್ಲಿ ತಾನೂ ಮೀಸೆ ಬಿಟ್ಟುಕೊಂಡು ಆ ಹಸಿರು ವನರಾಸಿಯ ನಡುವೆ ಅಲೆಯುವ ನೋಟವನ್ನು ಊಹಿಸಿಕೊಂಡು ಅವನು ಮರೆಯಾಗುವುದನ್ನು ನೋಡುತ್ತಾ ಇಳಿಜಾರೊಂದರ ಮುಂದೆ ನಿಂತಿದ್ದೆ.

trek-today2ಹಸಿವೂ ಆಗುತ್ತಿತ್ತು.

ಅಷ್ಟು ಹೊತ್ತಿಗೆ ಆ ಅಪರಿಮಿತ ಹಸಿರಿನ ನಡುವೆ ತಾಯೊಬ್ಬಳು ಹಾಲುಗಲ್ಲದ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಮುಂದೆ ನಡೆಸುತ್ತಾ ಬೆಟ್ಟದಂತಹ ದಾರಿ ಏರಿ ಬೆವರುತ್ತಾ ನಡೆದು ಬರುತ್ತಿರುವುದು ಕಾಣಿಸಿತು.

ಅವಳ ಎದೆಯ ಮೇಲೆ ಹೊದೆದುಕೊಂಡ ಹಳೆಯ ವಸ್ತ್ರದ ಒಳಗೆ ಇನ್ನೊಂದು ಕೈಗೂಸು ಹಾಲುಕುಡಿದು ಮುಗಿಸಿ ಅರೆಗಣ್ಣು ತೆರೆದುಕೊಂಡು ನಿದ್ದೆ ಹೋಗಿತ್ತು.

ಬೆವರಿಕೊಂಡಿದ್ದ ಆ ತಾಯಿಯ ಮುಖದಲ್ಲಿ ಅಪರಿಚಿತನಾದ ನನ್ನನ್ನು ಕಂಡು ನಾಚುಕೆಯೂ ಕಳವಳವೂ ಏಕಕಾಲದಲ್ಲಿ ಹಾದು ಹೋಯಿತು.

2011-11-29_6158ಆಕೆಗೆ ಮೂವರೂ ಹೆಣ್ಣುಮಕ್ಕಳಂತೆ. ಆಕೆಯ ಪತಿಯೂ ಬೆಂಗಳೂರಿನಲ್ಲಿ ಗನ್ ಮ್ಯಾನಾಗಿ ಕೆಲಸ ಮಾಡುವುದಂತೆ. ಆತ ಇಲ್ಲಿನ ಶಿವದೇಗುಲದ ಪಾರುಪತ್ಯಗಾರನೂ ಆಗಿರುವುದರಿಂದ ತಿಂಗಳಿಗೊಂದು ಬಾರಿ ಬಂದು ಹೋಗುವನಂತೆ. ತುಂಬಾ ಒಳ್ಳೆಯ ಗಂಡನಂತೆ. ಒಂದು ಹಠವಿಲ್ಲ, ಒಂದು ಕೆಟ್ಟ ಚಟವಿಲ್ಲ. ಒಂದು ಬಾರಿಯೂ ದನಿ ಎತ್ತಿ ಗದರಿಸಿಲ್ಲ ಎಂದು ಪತಿದೇವನ ನೆನೆದು ಆಕೆ ನಾಚುತ್ತಿದ್ದಳು.

‘ಆದರೆ ಒಂದೇ ಒಂದು ಬೇಸರ ಗಂಡು ಮಗುವಿಲ್ಲದಿರುವುದು’ ಎಂದು ಆಕೆ ಕಳವಳ ಮಾಡುತ್ತಿದ್ದಳು. ಗಂಡು ಮಗುವಿಲ್ಲದಿದ್ದರೆ ಶಿವನ ದೇಗುಲದ ಪಾರುಪತ್ಯೆಯೂ, ಜಮ್ಮ ಉಂಬಳಿಯ ಆಸ್ತಿಯೂ ಪರರ ಪಾಲಾಗುವುದು ಎಂದು ಆಕೆಗೆ ತುಂಬಾ ಬೇಸರ.

ಅವಳ ಗಂಡ ಇನ್ನು ಮಗುವಾಗುವುದು ಬೇಡವೇ ಬೇಡ ಎಂದು ಹಠ ಮಾಡುತ್ತಿರುವನಂತೆ.

ಇವಳು ಆಗದೆ ಬಿಡುವುದಿಲ್ಲ ಎಂದು ಹಠ ಹಿಡಿದಿರುವಳಂತೆ.

ಆಕೆ ಲೀಲಾಜಾಲವಾಗಿ ಅಪರಿಚಿತನಾದ ನನ್ನಲ್ಲಿ ಕಷ್ಟಸುಖ ಹೇಳಿಕೊಳ್ಳುತ್ತಿದ್ದಳು.

2011-11-29_6228‘ನಿಮ್ಮ ಯಜಮಾನರೂ ರಾಜಾ ಮೀಸೆ ಬಿಟ್ಟಿದ್ದಾರೆಯೇ?’ ಎಂದು ಆಕೆಗೆ ಕೇಳಿದೆ.

‘ಹೌದು’ ಎಂದಳು.

‘ಬೆಂಗಳೂರಲ್ಲಿ ಗನ್ ಮ್ಯಾನ್ ಕೆಲಸಕ್ಕೆ ರಾಜಾಮೀಸೆ ಬೇಕೇಬೇಕು’ ಎಂದಳು. ಅವಳ ಮನೆಯ ಮುಂದೆ ಅಪರಿಮಿತ ಸಂಖ್ಯೆಯಲ್ಲಿ ನಾಟಿಕೋಳಿಗಳೂ, ನಾಡು ಹಂದಿಗಳೂ. ಅವಳ ಹಿತ್ತಲಿನಲ್ಲಿ ಅಸಂಖ್ಯ ಬಗೆಯ ನಾಟಿ ತರಕಾರಿಗಳೂ ಬೆಳೆದಿದ್ದವು.

ಅವಳ ಓರಗೆಗಿತ್ತಿ ಒಂಬತ್ತು ತಿಂಗಳ ಗರ್ಬಿಣಿಯಂತೆ. ಆ ಗ್ರಾಮದ ಪದ್ದತಿಯ ಪ್ರಕಾರ ಒಂಬತ್ತು ತಿಂಗಳ ಗರ್ಭಿಣಿಗೆ ಒಂಬತ್ತು ಬಗೆಯ ತರಕಾರಿ ಮತ್ತು ಮಾಂಸ ಮತ್ಸ್ಯಗಳ ಅಡುಗೆ ಮಾಡಿ ಬುತ್ತಿ ಕಟ್ಟಿಕೊಂಡು ದಿನಕ್ಕೊಬ್ಬರು ನೆಂಟರು ಕೊಂಡುಹೋಗಬೇಕಂತೆ. 2011-11-29_6152ಈವತ್ತು ಈಕೆಯ ಸರದಿಯಂತೆ. ಆಕೆ ತುಂಬಾ ಸಡಗರದಲ್ಲಿ ಹೇಳುತ್ತಿದ್ದಳು. ಮೀಸೆ ಹೊತ್ತ ಗಂಡಸಾಗಿ ಹಸಿವೆಯಲ್ಲಿ ಸಾಯುವ ಬದಲು ಈಕೆಯ ಈ
ಸುಂದರ ಗ್ರಾಮದಲ್ಲಿ ಗರ್ಭವತಿಯಾಗಿಯಾದರೂ ಹುಟ್ಟಬಾರದಿತ್ತೇ ಎಂದು ವಾಪಾಸು ಬರುವಾಗ ಯೋಚಿಸುತ್ತಿದ್ದೆ. ಬೆಂಗಳೂರಲ್ಲಿ ಗನ್ನು ಹಿಡಿದು ನಿಂತಿರುವ ಆಕೆಯ ಗಂಡನಿಗೆ ಇನ್ನೊಂದು ಗಂಡುಮಗುವಿಗಾಗುವಷ್ಟು ಶಕ್ತಿ ಕೊಡು ಎಂದು ಎದುರಲ್ಲಿ ಕಂಡ ದೈವವೊಂದರಲ್ಲಿ ಬೇಡಿಕೊಂಡೆ.

(೨೭ ನವಂಬರ್ ೨೦೧೧)

(ಫೋಟೋಗಳೂ ಲೇಖಕರವು)

Advertisements