ಈತನ ಹೆಸರು ಬಂಗಾರಪ್ಪ.

2011-11-17_5958ಈತನ ಹೆಸರು ಬಂಗಾರಪ್ಪ.

ಈತ ಹುಟ್ಟಿದ್ದೂ ಸೊರಬದಲ್ಲಿ.

ಸಾರೇಕೊಪ್ಪದ ಮಾನ್ಯ ಬಂಗಾರಪ್ಪನವರು ಮುಖ್ಯಮಂತ್ರಿಯಾದ ದಿನವೇ ಈತ ಸೊರಬದಲ್ಲಿ   ಶ್ರೀ ಮಂಜುನಾಥೇಶ್ವರ ಡ್ರಾಮಾ ಕಂಪೆನಿಯಲ್ಲಿ ಹುಟ್ಟಿದ್ದರಿಂದ ಈತನಿಗೂ  ಬಂಗಾರಪ್ಪ ಎಂಬ ಹೆಸರಿಟ್ಟಿದ್ದಾರೆ.

ನೋಡಲು ತಾನು ಜೋಗಿ ಚಿತ್ರದ ಶಿವಣ್ಣನ ತರ ಇರುವುದಾಗಿಯೂ,ತನ್ನ ಎಳೆಯ ಹೆಂಡತಿ ದೀಪಾಗೆ ಒಂಚೂರು ಬೆಕ್ಕಿನ ಕಣ್ಣು ಇರುವುದರಿಂದ ಎಲ್ಲರೂ ಆಕೆಯನ್ನು ಐಶ್ವರ್ಯಾ ರೈ ಎಂದು ಕರೆಯುವುದಾಗಿಯೂ ಈತ ಹೇಳುತ್ತಾನೆ.

ಈತನಿಗೆ ಇಬ್ಬರು ಹೆಣ್ಣು ಮಕ್ಕಳು.ದೊಡ್ಡವಳು ಸೇವಂತಿ.ಅಜ್ಜಿಯ ಗುಡಿಸಲಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಾಳೆ.ಸಣ್ಣವಳು ಸ್ಪೂರ್ತಿ. ಈತನ ವಾಹನವಾದ ಹೀರೋ ಸ್ಟ್ರೀಟ್ ಬೈಕಿನ ಎದುರು ಒಂದು ಕುಸುಮದಂತೆ ಕೂತಿರುತ್ತಾಳೆ.

ಐಶ್ವರ್ಯಾ  ರೈಗಿಂತಲೂ ಚೆನ್ನಾಗಿರುವ ಹೆಂಡತಿ ದೀಪಾ ಬೈಕಿನ ಹಿಂದೆ ಈತನ ಬೆನ್ನಿಗಂಟಿಕೊಂಡಿರುತ್ತಾಳೆ.

ನಾಟಕ ಕಂಪೆನಿಯಿಂದ ಈತನ ಪಾಲಿಗೆ ಬಂದ ಕಾಲು ಪಾಲು ಸಾಮಾನುಗಳು, ಸೀರಿಯಲ್ ಸೆಟ್ಟು, ನೀರಿನ ಕೊಡಪಾನ, ಸೀಮೆಣ್ಣೆ ಸ್ಟೌ,ಬೆಳ್ಳಿ ತೆರೆಯ ಹರಿದ ಪರದೆಗಳು, ರಾಗಿಯ ಹಿಟ್ಟಿನ ಗೋಣಿ, ನಾಟಕದ ಲಾಂಗು ಮಚ್ಚು ತಲವಾರು ಇತ್ಯಾದಿಗಳನ್ನು ಹೇರಿಕೊಂಡ ಒಂದು ಹಳೆಯ ಪೆಟಾರಿ ಈತನ ಈ ಬೈಕಿನ ಅಂಗಾಂಗಗಳಂತೆ ಅಚ್ಚುಕಟ್ಟಾಗಿ ತೂಗುತ್ತಿರುತ್ತವೆ.

ಬೈಕಿನ ಹಿಂದೆ ಒಂದು ಹಳೆಯ ಮೆಘಾಫೋನ್..ಅದರ ಬಾಯೊಳಗೆ  ‘ಬಂಗಾರಪ್ಪ ನಾಟಕ ಕಂಪೆನಿ.ಒಂದೇ ಶೋ. ರಾತ್ರಿ ಎಂಟು ಗಂಟೆಗೆ’ ಎಂದು ಎದ್ದು ಕಾಣುವ ಹಾಗೆ ತಾನೇ ಕೆಂಪು ಬಣ್ಣದಲ್ಲಿ ಬರೆದಿದ್ದಾನೆ.

ಮೂರು ತಿಂಗಳ ಹಿಂದೆ ಆರು ಸಾವಿರಕ್ಕೆ ಈತ ಕೊಂಡಿರುವ ಈ ಹಳೆಯ ಬೈಕ್ ಈಗಲೂ ಮಿಂಚುತ್ತಿದೆ.ಇದಕ್ಕೂ ಮೊದಲು ಈತ ಎಂ ೮೦ ಗಾಡಿಯಲ್ಲಿ ಹೀಗೇ ಹೋಗುತ್ತಿದ್ದನಂತೆ.ಅದಕ್ಕೂ ಮೊದಲು ಸೈಕಲಲ್ಲಿ.ಒಂದಲ್ಲ ಒಂದು ದಿನ ಕನ್ನಡ ಬೆಳ್ಳಿ ತೆರೆಯ ಹೊಸ ಹೀರೋ ತಾನಾಗುತ್ತೇನೆ ಎಂದು ಈತ ಕಣ್ಣನ್ನೆಲ್ಲಾ ಮಿಂಚು ಮಾಡಿಕೊಂಡು ಹೇಳುತ್ತಾನೆ.

ಹಾಗೆ ಹೀರೋ ಆದಾಗ ದಯವಿಟ್ಟು ಈ ಬಡಪಾಯಿಯನ್ನು ಮರೆಯಬೇಡ ಎಂದು ನಾನು ನಾಟಕದ ಶೈಲಿಯಲ್ಲಿ ಗೋಗರೆಯುತ್ತೇನೆ ‘ಅಯ್ಯೋ ಇಲ್ಲಾ ಸಾರ್, ಹೀರೋ ಆದರೂ ಈ ಬಂಗಾರಪ್ಪ ಒಬ್ಬೊಬ್ಬ ಅಭಿಮಾನಿಯ ಮನೆಗೂ ಹೋಗಿ ಅವರು ಕೊಟ್ಟ ಅಂಬಲಿಯನ್ನೋ ಮುದ್ದೆಯನ್ನೋ ತಿಂದು ಅವರ ಅಭಿಮಾನಕ್ಕೆ  ವಂದನೆ ಹೇಳುತ್ತೇನೆ ಸಾರ್,ಖಂಡಿತ’ ಎಂದು ಆತ ಹೇಳುತ್ತಾನೆ.

‘ಹೀರೋ ಆದ ಮೇಲೆ ಬೇರೆ ನಾಯಕರ ತರಹ ಸ್ವಂತ ಹೆಂಡತಿಯನ್ನು ಹೊಡೆಯುವುದು, ಬಡಿಯುವುದು,ಸಿಗರೇಟಿನಿಂದ ಸುಡುವುದು ಇತ್ಯಾದಿಗಳನ್ನು ಮಾಡಬೇಡ ಮಾರಾಯ, ನಿನಗೆ ಖಂಡಿತ ಒಳ್ಳೆಯದಾಗುವುದಿಲ್ಲ’ ಎಂದು ನಾನು ಹೇಳುತ್ತೇನೆ.

ಅದನ್ನು ಕೇಳಿದ ಆತನ ಹೆಂಡತಿ ಕಣ್ಣು ತುಂಬಿಕೊಳ್ಳುತ್ತಾಳೆ.2011-11-17_5954

ಅದನ್ನು ನೋಡಿದ ಬಂಗಾರಪ್ಪನಿಗೂ ಕಣ್ಣು ತುಂಬಿ ಬರುತ್ತದೆ.

‘ಅಯ್ಯೋ ಸಾರ್ ಈಕೆ ನನ್ನ ಬಾಳಿನ ಐಶ್ವರ್ಯ.ಹಾಗೆಲ್ಲಾದರೂ ಮಾಡುತ್ತೀನಾ.ಪಿಚ್ಚರ್ ಅಂದ್ರೆ ಬೇರೆ ಹೀರೋಯಿನ್ನೂ ಇರುತ್ತಾರೆ.ಆದರೆ ಹೆಂಡತಿಯನ್ನು ಯಾರಾದರೂ ಹೊಡೆಯುತ್ತಾರಾ’ ಎಂದು ಆಕೆಯ ತಲೆಯನ್ನು ನನ್ನೆದುರೇ ನೇವರಿಸುತ್ತಾನೆ.

ಎಲ್ಲೋ ರಸ್ತೆ ಬದಿಯಲ್ಲಿ ಹಾಳು ಕಟ್ಟಡದೊಳಗೆ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಕಳೆದ ರಾತ್ರಿ ಕಳೆದಿರುವ ಅವರಿಬ್ಬರ ಮುಖದಲ್ಲಿ ಹಸಿವು ಕಂಗೊಳಿಸುತ್ತಿದೆ.ಅರ್ದ ತಿಂದು ಉಳಿದ ಬನ್ನೊಂದನ್ನು ಬಾಯಿಗಿಟ್ಟುಕೊಂಡು ಮಗಳು ಸ್ಪೂರ್ತಿ ಏನನ್ನೋ ತೊದಲುತ್ತಿದೆ.ಸೊರಗಿ ಸುಸ್ತಾಗಿರುವ ಐಶ್ವರ್ಯಾ ರೈಯಂತಹ ಹೆಂಡತಿ ದೀಪಾ ಕಳೆದ ಒಂದು ವಾರದಿಂದ ಜ್ವರದಲ್ಲಿ ಬಳಲುತ್ತಿದ್ದಾಳೆ.

ಎಷ್ಟು ಅಂತ ಆಕೆ ಖುಷಿಯನ್ನು ನಟಿಸಿಕೊಂಡಿರುವುದು?ದುಃಖ ಉಮ್ಮಳಿಸಿದಂತೆ ವಾಂತಿ ಒತ್ತರಿಸಿಕೊಂಡು ಬಂದು ಆಕೆ ಅಲ್ಲೇ ಮುಖ ತಿರುಗಿಸಿಕೊಂಡು ಕೂತು ವಾಂತಿ ಮಾಡತೊಡಗುತ್ತಾಳೆ.

ಮೈಸೂರು-ಮಡಿಕೇರಿ ರಸ್ತೆಯಲ್ಲಿ ಕಂಡವರು ನೊಂದುಕೊಳ್ಳುವಷ್ಟು ನಿಧಾನವಾಗಿ ಬೈಕು ಓಡಿಸಿಕೊಂಡು ಹೋಗುವ ನಾನು ಕೆಲವು ಸಮಯದಿಂದ ಬಂಗಾರಪ್ಪನ ಈ ಬೈಕಿನ ಮೇಲೆ ಸಾಗುವ ನಾಟಕ ಕಂಪೆನಿಯನ್ನು ಗಮನಿಸುತ್ತಿದ್ದೆ.

ಯಾರೋ ಬಿಟ್ಟಿರುವ ಬಾಣದಂತೆ ಒಂದಿನಿತೂ ಬಳುಕದೆ,ಒಂದಿಷ್ಟೂ ಅಳುಕದೆ ಯಾವುದೋ ಘನ ಕಾರ್ಯಕ್ಕೆ ಧಾವಿಸುತ್ತಿರುವ ಆತನ ಮಿಂಚಿನ ಬಳ್ಳಿಯಂತಹ ಆ ಬೈಕು ಒಮ್ಮೊಮ್ಮೆ ಹಿಂದಿನಿಂದ ಮುಂದಿಕ್ಕಿ ಹೋಗುತ್ತಿತ್ತು.ಒಮ್ಮೊಮ್ಮೆ ಎದುರಿನಿಂದಲೂ ಮಿಂಚಿ ಮಾಯವಾಗುತ್ತಿತ್ತು.

ಯಾರನ್ನೂ ಹಿಂದಿಕ್ಕುವ ಉಮೇದಿಲ್ಲದೆ, ಜೀವನಕ್ಕೊಂದು ಗುರಿಯೂ ಇಲ್ಲದೆ ಕಂಡದ್ದನ್ನೆಲ್ಲಾ ಬೇಕಾದಕ್ಕಿಂತ ಹೆಚ್ಚು ಅವಲೋಕಿಸುತ್ತಾ, ಉದ್ದೇಶವಿಲ್ಲದೆ ಗೊಣಗುತ್ತಾ, ಕೆಲವೊಮ್ಮೆ ಹಿಂದಿಕ್ಕಿದವರನ್ನೂ, ಮುನ್ನುಗ್ಗುವವರನ್ನೂ ಸಣ್ಣಗೆ ಪೋಲಿಪೋಲಿಯಾಗಿ ಬೈಯುತ್ತಾ ಜೀವನ ಎತ್ತಿನ ಗಾಡಿ ಎಂಬ ಭ್ರಮೆಯಲ್ಲಿ  ಸಾಗುವ ನನಗೆ  ಬೈಕಿನಲ್ಲಿ ಹೀಗೆ ದೌಡಾಯಿಸುವ ಮನುಷ್ಯನ ಹೆಸರು ಬಂಗಾರಪ್ಪ ಎಂಬ ಕಲ್ಪನೆಯೂ ಇರಲಿಲ್ಲ.

ಬೈಕಿನ ಮುಂದೆ ಮಗುವನ್ನು ಸಿಕ್ಕಿಸಿಕೊಂಡು ಬೈಕಿನ ಹಿಂದೆ ಸುಂದರಿಯಾದ ಹೆಂಡತಿಯನ್ನೂ, ಊಹಾತೀತವಾದ ಸರಂಜಾಮುಗಳನ್ನೂ ನೇತಾಡಿಸಿಕೊಂಡು ಮುನ್ನುಗ್ಗುತ್ತಿರುವ ಈತ ಒಂದಲ್ಲ ಒಂದು ದಿನ ತಾನು ಕನ್ನಡನಾಡಿನ ನಾಯಕಮಣಿಯಾಗಬೇಕು ಎಂಬ ಕನಸಿನಲ್ಲೇ ಈ ದಾರಿಯಲ್ಲಿ ಸಾಗುತ್ತಿರುವನು ಎಂದಂತೂ ಊಹಿಸಲೂ ಸಾಧ್ಯವಿರಲಿಲ್ಲ.

ಹಾಗೆ ನೋಡಿದರೆ ಬೈಕಿನ ಹಿಂದೆ ನಾಲ್ಕೈದು ಮೀಟರ್ ಎತ್ತರಕ್ಕೆ ಪ್ಲಾಸ್ಟಿಕ್ ಚೇರುಗಳನ್ನು ಪೇರಿಸಿಕೊಂಡು ಹೋಗುವ ತಮಿಳುನಾಡಿನ ಕಡೆಯ ಅಣ್ಣಾಚಿಗಳೂ, ಬೈಕಿನಲ್ಲಿ ಕುರಿಗಳನ್ನು ಮಗುವಿನಂತೆ ನಡುವಲ್ಲಿ ಕೂರಿಸಿಕೊಂಡು ಸಾಗುವ ರೈತಾಪಿ ಜನರೂ, ಶಾಲೆಗೆ ಹೋಗಲು ಒಲ್ಲದೆ ಅಳುತ್ತಿರುವ ಮಕ್ಕಳಂತೆ ಕಿರುಚಿಕೊಳ್ಳುವ ನಾಟಿಕೋಳಿಗಳನ್ನು ಬೈಕಿನ ತುಂಬಾ ನೇತಾಡಿಸಿಕೊಂಡು ಸಾಗುವ ಸಂತೆ ವ್ಯಾಪಾರಿಗಳನ್ನೂ ಈ ಹಾದಿಯಲ್ಲಿ ನೋಡುತ್ತಲೇ ಇರುವ ನಾನು ಈ ಬಂಗಾರಪ್ಪನೂ ಅಂತಹದೇ ಒಂದು ನೈಜ ಜೀವನ ನಾಟಕದಲ್ಲಿ ಪಾಲುಗೊಳ್ಳಲು ತೆರಳುತ್ತಿರುವ ಮನುಷ್ಯನಾಗಿ ಕಂಡಿದ್ದನು.

2011-11-17_5966ಮೊನ್ನೆ ಸುಮ್ಮನೆ  ಯಾರನ್ನೋ ಹೀಗೇ ವಿನಾಕಾರಣ ಸ್ಮರಿಸಿಕೊಂಡು ಸಾಗುತ್ತಿರುವಾಗ ಈ ಬಂಗಾರಪ್ಪನು ಮತ್ತೆ ಅದೇ ಸ್ಪೀಡಿನಲ್ಲಿ ಹಿಂದಿಕ್ಕಿ ಮುಂದೆ ಸಾಗಿದ್ದು ಕಂಡು ಇವನು ಹೀಗೆ ಯಾವಾಗಲೂ ನನ್ನನ್ನು ಸೈಡ್ ಹೊಡೆಯುತ್ತಿರುವುದು ಸರಿಯಲ್ಲ ಇವನನ್ನು ವಿಚಾರಿಸಿಕೊಳ್ಳಬೇಕು ಅನಿಸಿ ಒಂದೇ ಕ್ಷಣದಲ್ಲಿ ಅವನನ್ನು ಹಿಂದಿಕ್ಕಿ ಮುಂದೆ ದೂರ ಸಾಗಿ  ಒಂದು ಮರದ ಕೆಳಗೆ ನಿಂತುಕೊಂಡು ಅವನಿಗಾಗಿ ಕಾದೆ.

ಅವನು ಅವನದೇ ವೇಗದಲ್ಲಿ ನಗುತ್ತಾ ಬರುತ್ತಿದ್ದ.ಮಾರಾಯ ಯಾವಾಗಲೂ ನಗುತ್ತಿರುತ್ತಾನಲ್ಲಾ ಅನಿಸಿತು.ಪೆಟ್ರೋಲು ಮುಗಿಯಿತೆಂಬಂತೆ ಅಭಿನಯಿಸುತ್ತಾ ಒಂದು ಖಾಲಿ ಬಾಟಲನ್ನು ತೋರಿಸಿ ನಿಲ್ಲಿಸುವಂತೆ ಆತನನ್ನು ಕೋರಿದೆ.

ಅಷ್ಟು ಸಂಸಾರ ಭಾರವಿದ್ದರೂ ಒಂದಿನಿತೂ ವಾಲದೆ ಆತ ಆ ಬೈಕನ್ನು ನಿಲ್ಲಿಸಿದ.

‘ಅಲ್ಲಾ ಮಾರಾಯ ಯಾವಾಗಲೂ ಸೈಡ್ ಹೊಡೆಯುತ್ತಲೇ ಇರುತ್ತೀಯಾ.ಹಾಗಾದರೆ ನಮ್ಮಂತವರು ಜೀವನದಲ್ಲಿ ಮುಂದುವರಿಯಲೇ ಬಾರದೇ?’ಎಂದು ಡೈಲಾಗು ಹೊಡೆದೆ.

ಆತ ನಾಚಿಕೊಂಡ.

‘ಇಲ್ಲಾ ಸಾರ್.ಹೊಟ್ಟೆಪಾಡು. ಹಳ್ಳಿಹಳ್ಳಿಗೆ ಹೋಗಿ ನಾಟಕ ಮಾಡಿ ಹಳ್ಳಿಯವರು ಕೊಟ್ಟಿದ್ದು ಎಂಟಾಣೇನೋ ಎರಡು ರೂಪಾಯಿಯೋ ಹೊಟ್ಟೆಗೆ ಹಾಕಿಕೊಂಡು ಬದುಕ್ತೀವಿ. ಸಾರ್,ಹೆಂಡ್ತೀಗೆ ಹುಷಾರಿರಲಿಲ್ಲ.ಡಾಕ್ಟರು ನೂರು ರೂಪಾಯಿ ಇಸಕೊಂಡ್ರು.ಅವ್ಳು ಹೀರೋಯಿನ್ನು.ನಾನು ಹೀರೋ.ಒಬ್ರಿಗೆ ಹುಷಾರಿಲ್ಲಾಂದ್ರೆ ನಾಟಕ ಆಗೋದೇ ಇಲ್ಲ.ಸಾರ್, ಸೀರಿಯಲ್ ಬಲ್ಬ್ ಹಾಕಿ, ಪರದೆ ಕಟ್ಟಿ ಮ್ಯೂಸಿಕ್ ಹಾಕಿ ನಾವು ಡೇನ್ಸ್ ಮಾಡ್ತೀವಿ ಸಾರ್’ಅಂದ.

‘ ಮಾರಾಯ ನೋಡಕ್ಕೆ ಕಿಚ್ಚ ಸುದೀಪ್ ತರಾ ಇದೀಯಾ.ಎಂತೆಂತವ್ರೆಲ್ಲಾ ಹೀರೋ ಆದ್ರು.ನೀನ್ಯಾವಾಗ ಹೀರೋ ಆಗೋದು.ಬಾ ಮಾತಾಡೋಣ.ನಿಮ್ಮ ಒಂದಿನದ ನಾಟಕದ ಫೀಸು ನಾನೇ ಕೊಡ್ತೀನಿ.ಎಲ್ಲಾ ಕಥೆ ಹೇಳು’ ಅಂತ ತುಂಬಾ ಹೊತ್ತು ಮರವೊಂದರ ಕೆಳಗೆ ಕೆರೆಯೊಂದರ ಪಕ್ಕ ನಿಂತುಕೊಂಡು ಮಾತನಾಡಿದೆವು.

‘ಸಾರ್ ಸುದೀಪ್ ಅಲ್ಲ ಸಾರ್. ನಾನು ನೋಡಕ್ಕೆ ಜೋಗಿ ಶಿವಣ್ಣನ ಥರಾನೇ ಸಾರ್.ಎಲ್ಲಾ ಹೇಳ್ತಾರೆ.ನೋಡಿ ಬೇಕಾದ್ರೆ’ ಅಂತ ತನ್ನ ಪೆಟಾರಿಯಿಂದ ಒಂದು ಬೇಗಡೆಯ ಡೂಪ್ಲಿಕೇಟ್ ಲಾಂಗು ಹೊರ ತೆಗೆದು ಝಳಪಿಸಿ  ‘ಊರಿಂದ ಓಡಿ ಬಂದ ಜೋಗಿ ನಾ ಅಲ್ಲಾರೀ’ ಅಂತ ಹಾಡು ಹೇಳಿದ.

‘ಸಾರ್ ಸ್ವಲ್ಪ ತಲೆಗೆ ಎಣ್ಣೆ ಹಾಕಿ ಕೆದರಿದ್ರೆ ನಾ ಥೇಟ್ ಶಿವಣ್ಣಾನೇ’ ಅಂತ ಹೇಳಿದ.

‘ಸಾರ್, ಎಣ್ಣೆ ಸಿಗದಿದ್ರೆ ಸ್ವಲ್ಪ ನೀರು ತಗೊಂಡು ತಲೆಗೆ ಹಾಕಿ ಕೆದರಿದ್ರೂ ನಾ ಥೇಟ್ ಶಿವಣ್ಣೋರ ತರಾನೇ’ ಅಂತ ಹೇಳಿದ.

‘ಸರ್ ನೋಡಿ ಇವ್ಳು ಸ್ವಲ್ಪ ಬೆಕ್ಕಿನ್ ಕಣ್ಣು.ನೋಡಕ್ಕೆ ಐಶ್ವರ್ಯಾ ರೈ ತರಾನೇ ಅಲ್ವಾ ಸಾರ್’ಅಂತ ನನ್ನನ್ನೇ ಕೇಳಿದ.

‘ನಿಜ ಒಂಥರಾ ಹಾಗೇನೇ. ಇನ್ನೊಂದ್ಸಲಾ ಐಶ್ವರ್ಯಾ ಕಣ್ಣು ನೋಡಿ ಆಮೇಲೆ ಹೇಳ್ತೀನಿ’ ಅಂದೆ.

ಯಾಕೋ ಆಕೆಗೆ ಸಂಕಟವಾಗುತ್ತಿದೆ ಅನ್ನಿಸುತ್ತಿತ್ತು.ಆಕೆ ಆಗಾಗ ನೋವು ಉಮ್ಮಳಿಸುತ್ತಿರುವಂತೆ ಮುಖ ಮಾಡುತ್ತಿದ್ದಳು.

ಅಮೇಲೆ ತಡೆಯಲಾರದೆ ಅಲ್ಲೇ ನೆರಳಲ್ಲಿ ಮುಖ ತಿರುಗಿಸಿಕೊಂಡು ಕೂತು ವಾಂತಿ ಮಾಡತೊಡಗಿದಳು.

ಅವಳು ವಾಂತಿ ಮಾಡುತ್ತಿರುವುದನ್ನು ನೋವಿನಿಂದಲೇ ನೋಡುತ್ತಾ ಬಂಗಾರಪ್ಪ ಇನ್ನೂ ಕೆಲವು ಅಭಿನಯಗಳನ್ನೂ, ಡಯಲಾಗುಗಳನ್ನೂ ಮಾಡಿ ತೋರಿಸಿದನು.

2011-11-17_5962‘ಕನ್ನಡ ಕುಲಬಾಂಧವರೇ’ಎಂದು ಡಾಕ್ಟರ್ ರಾಜ್ ಕುಮಾರ್ ಶೈಲಿಯಲ್ಲಿ, ‘ಈ ಜೀವನ ಬರೀ ಓಳು.ಬರೋದು ಹೋಗೋದು ಅಷ್ಟೇ’ ಎಂದು ಉಪ್ಪಿ ಸ್ಟೈಲಲ್ಲಿ ತೋರಿಸಿದನು.

ನಾನು ಮನದಲ್ಲೇ ಆತನಿಗಾಗಿ ಬೇಡಿಕೊಂಡೆ.

2011-11-17_5958ಯಾರು ಏನು ಬೇಕಾದರೂ ಆಗಬಲ್ಲ ಈ ಅನಂತ ಅವಕಾಶದಲ್ಲಿ ನಮ್ಮ ಈ ಬೈಕ್ ಬಂಗಾರಪ್ಪನೂ ನಾಯಕಮಣಿಯಾಗಲಿ ಎಂದು ಬೇಡಿಕೊಂಡೆ.ನೀವೂ ಬೇಡಿಕೊಳ್ಳಿ.ನನಗೂ ಜೀವನಕ್ಕೊಂದು  ಉದ್ದೇಶ ಇಟ್ಟುಕೊಳ್ಳುವ ಬುದ್ದಿ ಬರಲಿ ಎಂದೂ ಆ ಮರದ ಅಡಿಯಲ್ಲಿ ಬೇಡಿಕೊಂಡೆ.ನನಗಾಗಿಯೂ ನೀವು ಬೇಡಿಕೊಳ್ಳಿ.

(೨೦೧೧, ನವಂಬರ್ ೨೦ )

(ಫೋಟೋಗಳೂ ಲೇಖಕರವು)

Advertisements