ಕಾಶ್ಮೀರದ ಮೌಲ್ವಿಯವರ ಮುದ್ದಿನ ಮಡದಿ

2011-11-06_5212ಬೆಳಬೆಳಗೆಯೇ ತೊಟ್ಟು ಕಳಚಿಕೊಂಡು ಉದುರುತ್ತಿರುವ ಹಳದಿ ಹಳದಿ ಚಿನಾರ್ ಎಲೆಗಳು, ಎಲ್ಲೋ ಮೇಲಿಂದ ಪಡೆದವನ ಕರುಣೆ ಇನ್ನೂ ಉಳಿದಿದೆ ಎಂಬ ಆಸೆ ಹುಟ್ಟಿಸಲೋ ಎಂಬಂತೆ ದಾರಿಯ ಮೇಲೆ ಬೀಳುತ್ತಿರುವ ಮಂಕು ಮಂಕು ಬೆಳಕು, ಮುಸುಕು ಹೊತ್ತ ಅದೃಶ್ಯ ಮುಖಗಳು, ಇನ್ನು ಇಪ್ಪತ್ತು ದಿನದೊಳಗೆ ಈ ಹಾದಿಯಲ್ಲಿ ಮೂರಡಿ ಹಿಮ ಬೆಳ್ಳಗೆ ಸುರಿದುಕೊಂಡಿರುವುದಲ್ಲಾ.. ಆಗ ಅದರೊಡನೆ ಇರಲು ನಾನು ಇಲ್ಲಿ ಇರುವುದಿಲ್ಲವಲ್ಲಾ ಎಂದು ಮನಸು ಒದ್ದೆ ಒದ್ದೆ ಮಾಡಿಕೊಂಡು ಶ್ರೀನಗರದಿಂದ ಹಿಂತಿರುಗುತ್ತಿದ್ದೆ.

ಕೋಟಿ ವರ್ಷಗಳಿಂದ ಹೀಗೇ ಎಲೆಯ ಬಣ್ಣ ಬದಲಿಸಿಕೊಂಡು, ಎಲೆಯ ತೊಟ್ಟು ಕಳಚಿಸಿಕೊಂಡು, ಎಲೆಗಳನ್ನೆಲ್ಲಾ ಕಳೆದುಕೊಂಡು ಹಿಮರಾಣಿಯ ಶೀತಲ ಅಪ್ಪುಗೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಈ ಮರಗಳು, ಸಾವಿರಾರು ವರ್ಷಗಳಿಂದ ಹೀಗೇ 2011-11-06_4972ಚಳಿಗೆ ಮುದುಡಿಕೊಂಡು, ಬಿಸಿಲು ಕಾಯಿಸಿಕೊಂಡು, ಮಳೆಗೆ ಒಡ್ಡಿಕೊಂಡು ಪ್ರತಿಮೆಗಳಂತೆ ನಡೆಯುತ್ತಿರುವ ಈ ಮನುಷ್ಯರು.ಅವರ ಸುಂದರ ಶೀತಲ ಮುಖಗಳು, ನಮ್ಮ ಹಾಗೇ ಇರುವ ಅವರ ಸಣ್ಣಪುಟ್ಟ ಕಷ್ಟಸುಖಗಳು, ಮೋಸ, ತಟವಟ , ಅತಿಆಸೆ, ವಾತ್ಸಲ್ಯಗಳು.

ಎಲ್ಲವನ್ನೂ ಇದ್ದ ಒಂದೆರೆಡು ದಿನಗಳಲ್ಲಿ ಆಗುವಷ್ಟು ಅನುಭವಿಸಿ ಹಿಂತಿರುಗಿ ಹೊರಟಾಗ ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು.ಆ ಉರಿಗೆ ಇನ್ನೂ ಸ್ವಲ್ಪ ಉಪ್ಪು ಸವರಲೋ ಎಂಬಂತೆ ಬೀಳುಕೊಡಲು ಬಂದಿದ್ದ ಕಾಶ್ಮೀರಿ ಟ್ಯಾಕ್ಸಿ ಚಾಲಕ ಸೂಫಿ ಹಾಡೊಂದನ್ನು ಜೋರಾಗಿ ಹಾಕಿದ್ದ.‘ಈ ಸಂಸಾರ ಯಾಕಾಗಿ, ಈ ವ್ಯವಹಾರ ಯಾಕಾಗಿ ಮೇಲೆ ಭಗವಂತನಿರುವಾಗ ಸುಡದು ಯಾವುದೂ ಬೆಂಕಿ’ಎಂಬ ಅರ್ಥದ ಹಾಡು.

ಮಾಮೂಲಿ ಹೊತ್ತಲ್ಲಾಗಿದ್ದರೆ ಭಾವುಕನಾಗಿ ಕೇಳಬಹುದಾಗಿದ್ದ ಹಾಡು.ಈಗ ಮೊದಲೇ ಅಳುಬುರುಕನಾಗಿರುವಾಗ ಇನ್ನಷ್ಟು ನೋಯಿಸುವ ಹಾಡು.

‘ಬಂದು ಮಾಡು ಮಾರಾಯ’ ಎಂದು ಚಲಿಸುವ ವಾಹನದಿಂದಲೇ ಫೋಟೋ ಕ್ಲಿಕ್ಕಿಸತೊಡಗಿದೆ.

2011-11-06_5266ಹೇಗೆ ಬಂದರೂ ಪರವಾಗಿಲ್ಲ ವಿದಾಯದ ಈ ಚಿತ್ರಗಳು ಎಂದು ಕ್ಲಿಕ್ಕಿಸುತ್ತಲೇ ಇದ್ದೆ.

ರಸ್ತೆಗೆ ಬ್ಯಾರಿಕೇಡ್ ಎಳೆದು ಯಾವುದೋ ರಾಜಕಾರಣಿಗೆ ಹೋಗಲು ಅನುವು ಮಾಡಿಕೊಡುತ್ತಿದ್ದ ಪೋಲೀಸನೊಬ್ಬ ನಮ್ಮ ವಾಹನಕ್ಕೆ ಕೈತೋರಿಸಿ ನಿಲ್ಲಲು ಹೇಳಿದ.

ವಾಹನ ನಿಂತಿತು.

ಇನ್ನೊಬ್ಬ ಪೋಲೀಸು ತನ್ನ ಬಂದೂಕನ್ನು ನನ್ನೆಡೆಗೆ ಗುರಿಯಿಟ್ಟು ಕ್ಯಾಮರಾ ಒಳಗಿಡಲು ಹೇಳಿದ.

ಹೋಗುವುದಾದರೆ ಈ ಪ್ರಾಣ ಹೋಗಲಿ ಇಲ್ಲೇ ಎಂದು ನಾನು ಅವನನ್ನು ನೋಡಿ ಮುಗುಳ್ನಕ್ಕೆ.

ಆತನಿಗೇನೂ ನಗು ಬರಲಿಲ್ಲ.

2011-11-04_4411ಇನ್ನೊಮ್ಮೆ ಬಂದೂಕು ತೋರಿಸಿದ.

ಕ್ಯಾಮರಾ ಒಳಗಿಟ್ಟೆ.

‘ಯಾಕೋ ಆ ಪೋಲೀಸನಿಗೆ ಬಕ್ರೀದಿಗೆ ಸರಿಯಾಗಿ ಮಟನ್ ಸಿಕ್ಕಿರಲಿಕ್ಕಿಲ್ಲ.ಅದಕ್ಕೇ ಉದ್ರೇಕಗೊಂಡಿದ್ದಾನೆ’ ಎಂದು ವಾತಾವರಣವನ್ನು ತಿಳಿಗೊಳಿಸಲು ನೋಡಿದೆ.

ಟ್ಯಾಕ್ಸಿ ಚಾಲಕ ನನ್ನ ಸಮಾಧಾನಕ್ಕೋ ಎಂಬಂತೆ ಗಹಗಹಿಸಿ ನಕ್ಕ.

ಅಮೇಲೆ ‘ಇಲ್ಲ ಸಾರ್ ಇಲ್ಲಿ ಕೇವಲ ಬಂದೂಕಿನ ಭಾಷೆ ಪರಿಣಾಮಕಾರಿಯಾಗಿರುತ್ತದೆ.ಮತ್ತು ಜನರೂ ಹೆದರುತ್ತಾರೆ’ ಎಂದ.

ಈತನಿಗೆ ಈಗ ಬಹುಶ: ಮೂವತ್ತು ವರ್ಷವಾಗಿರಬಹುದು.ಕಳೆದ ಇಪ್ಪತ್ತು ವರ್ಷಗಳಿಂದ ಬಂದೂಕುಗಳನ್ನು ನೋಡುತ್ತಲೇ ಬಂದಿದ್ದಾನೆ.ಸಣ್ಣವನಿರುವಾಗಲೇ ಮನೆ ಬಿಟ್ಟು ಚಾಲಕನಾಗಿ ದುಡಿಯುತ್ತಿದ್ದಾನೆ.ಹತ್ತನೇ ವಯಸ್ಸಲ್ಲೇ ಟ್ರಕ್ ಡ್ರೈವರನೊಬ್ಬನ ಜೊತೆ ಕಲಾಸಿಯಾಗಿ ಕೆಲಸ ಮಾಡುತ್ತಿದ್ದನಂತೆ.ಒಂದು ದಿನ ಆ ಟ್ರಕ್ಕು ನಡು ರಸ್ತೆಯಲ್ಲಿ ಗುಂಡಿನ ಕಾಳಗದ ನಡುವೆ ಸಿಕ್ಕಿ ಹಾಕಿಕೊಂಡಿತ್ತಂತೆ.ಟ್ರಕ್ ಡ್ರೈವರ್ ಬಾಗಿಲು ತೆಗೆದು ಓಡು ಎಂದು ಇವನನ್ನು ನೂಕಿ ಬಿಟ್ಟನಂತೆ.ಇವನು ಓಡುವಾಗ ಹಾದಿಯಲ್ಲಿ ಮೃತ ದೇಹಗಳು ಬಿದ್ದಿದ್ದವಂತೆ.ಇವನು ಬಹಳಷ್ಟು ಮೃತ ದೇಹಗಳನ್ನು ಎಡವಿಕೊಂಡು ಬಿದ್ದು, ಓಡಿ ಬದುಕಿಕೊಂಡನಂತೆ.ಆಮೇಲೂ ಈತ ಬಹಳಷ್ಟು ಮೃತ ದೇಹಗಳನ್ನು ನೋಡಿದ್ದಾನೆ.

2011-11-06_5237ಅದಕ್ಕೋ ಏನೋ ಅಥವಾ ಇಲ್ಲಿನ ಭಯಂಕರ ಚಳಿಯ ಪರಿಣಾಮವೋ ಈತ ಇನ್ನೂ ಮದುವೆಯಾಗಿಲ್ಲ ಮತ್ತು ಬಹಳಷ್ಟು ಪ್ರೇಮಗಳನ್ನು ತಿರಸ್ಕರಿಸಿದ್ದಾನೆ.

ಪ್ರೇಮ ಯಾಚಿಸಿ ಬಂದ ಸುಂದರಿಯರಿಗೆ ಈತ ಸಹೋದರಿಯಾಗುವುದಾದರೆ ಮಾತ್ರ ಪ್ರೀತಿಸುತ್ತೇನೆ ಎಂಬ ಶರತ್ತನ್ನು ಹಾಕುತ್ತಾನಂತೆ.

ಹಾಗಾಗಿ ಮದುವೆಯೇ ಆಗದ ಇವನನ್ನು ಈತನ ಸ್ವಂತ ಸಹೋದರಿಯೂ ದ್ವೇಷಿಸುತ್ತಾಳೆ.ಮತ್ತು ತಾಯಿಯೂ ಕೂಡಾ.

ವಾರಗಟ್ಟಲೇ ಟ್ಯಾಕ್ಸಿಯಲ್ಲಿ ಊರೂರು ತಿರುಗಿ ಯಾವಾಗಲೋ ನಡು ರಾತ್ರಿಯಲ್ಲಿ ಬರುವ ಈತನ ಉಪಚಾರವನ್ನು ಅವರೇ ಮಾಡಬೇಕಾಗುತ್ತದೆ ಎಂದು ಅವರಿಗೆ ಸಿಟ್ಟು.

2011-11-06_5166_01’ಅಯ್ಯೋ ಮಾರಾಯ ನಿನ್ನ ಜಾಗದಲ್ಲಿ ನನ್ನಂತಹವರು ಇದ್ದಿದ್ದರೆ ಒಬ್ಬಳೇ ಒಬ್ಬಳು ಸುಂದರಿಯ ಪ್ರೇಮಯಾಚನೆಯನ್ನೂ ತಿರಸ್ಕರಿಸುತ್ತಿರಲಿಲ್ಲ.ಒಂದೇ ದಿನದಲ್ಲಿ ಹಲವು ಜನ್ಮಗಳನ್ನು ತಳೆದು ಪಾವನರಾಗುತ್ತಿದ್ದೆವು’ ಎಂದು ಆತನಿಗೆ ಹೇಳಿದೆ.

ಆತ ಏನೂ ಗೊತ್ತಾಗದವನಂತೆ ನಕ್ಕಿದ್ದ.

ನಿಜವೋ ಅಥವಾ ನಟನೆಯೋ ಎಂದು ಗೊತ್ತಾಗದ ಈತನ ಈ ತರಹದ ನಿಷ್ಕಲ್ಮಶ ನಗು, ಕ್ಷಣಕ್ಕೊಮ್ಮೆ ಬಣ್ಣ ಬದಲಿಸುವ ಇಲ್ಲಿನ ಶರದೃತುವಿನ ಆಕಾಶ, ಬೀಳುತ್ತಲೇ ಇರುವ ಚಿನಾರಿನ ಎಲೆಗಳು, ಇರುವ ಒಂದೆರೆಡು ದಿನಗಳಲ್ಲೇ ಇಲ್ಲಿನ ಎಲ್ಲವನ್ನೂ ಪುಪ್ಪುಸದೊಳಗೆ ತುಂಬಿ ಬಿಡಬೇಕೆನ್ನುವ ನನ್ನ ಹಠಮಾರಿ ಆತ್ಮ.

`ಹೋಗಲಿ ಬಿಡು, ನೀನು ಇಲ್ಲಿಯವರೆಗೆ ಯಾರನ್ನೂ ಕೊಂಡೊಯ್ಯದ ಎಡೆಗಳಿಗೆ ನನ್ನ ಕೊಂಡೊಯ್ಯು ಮಾರಾಯಾ’ಎಂದು ಆಗಾಗ ಆತನಿಗೆ ದುಂಬಾಲು ಬೀಳುತ್ತಿದ್ದೆ.

‘ಚಲೋ ಸಾಬ್’ ಎಂದು ಆತ ಹೊರಟು ಬಿಡುತ್ತಿದ್ದ.

2011 11 05_4724ಹೀಗೆ ಹೊರಟ ದಾರಿಯಲ್ಲಿ ಸಿಕ್ಕಿದವಳು ಈಕೆ. ಮೂರು ದಾರಿಗಳು ಸೇರುವ ಯಾರೂ ಇಲ್ಲದ ಜಾಗದಲ್ಲಿ ಎಲೆ ಕಳಚಿಕೊಂಡ ಮರವೊಂದರ ಕೆಳಗೆ ಇಬ್ಬರು ಮಕ್ಕಳ ಜೊತೆ ನಿಂತಿದ್ದ ಈಕೆ ಕೈತೋರಿ ನಮ್ಮನ್ನು ನಿಲ್ಲಿಸಿದಳು.

ನಾವು ಬೆಟ್ಟದ ಮೇಲಿರುವ ಬಾಬಾ ಫಕೀರನ ಪುರಾತನ ದರ್ಗಾಕ್ಕೆ ಹೊರಟಿದ್ದೆವು.

‘ನಾನೂ ಅಲ್ಲಿಗೆ ಹೊರಟವಳು’ ಎಂದು ಟ್ಯಾಕ್ಸಿ ಹತ್ತಿ ಕುಳಿತಳು.ಒಳಕ್ಕೆ ಹತ್ತಿದೊಡನೆ ಮಕ್ಕಳು ಹೊಸ ಮನೆ ಹೊಕ್ಕಂತೆ ಗಲಗಲ ಗಲಾಟೆ ಮಾಡಲು ತೊಡಗಿದರು. ಆಕೆಯೂ ಒಂದು ತರಹದ ನಿರ್ವಿಣ್ಣ ಧ್ವನಿಯಲ್ಲಿ ಆಲಾಪದಂತಹ ದಾಟಿಯಲ್ಲಿ ಚಾಲಕನೊಡನೆ ಹರಟಲು ತೊಡಗಿದಳು.

ಅವಳು ಹೇಳುತ್ತಿದ್ದ ರೀತಿ ನೋಡಿದರೆ ಕಥೆ ಜೋರಾಗಿಯೇ ಇದ್ದಂತಿತ್ತು.‘ನನಗೂ ಸ್ವಲ್ಪ ಭಾಷಾಂತರಿಸು ಮಾರಾಯ’ ಎಂದು ನಾನು ಗೋಗರೆಯುತ್ತಿದ್ದೆ.‘ ಎಲ್ಲ ಕೇಳಿ ಮುಗಿಸಿ ಹೇಳುತ್ತೇನೆ ಸಾಬ್.ಈಗ ಸುಮ್ಮನೆ ಕೇಳಲು ಬಿಡಿ’ ಎಂದು ಆತ ಗದರಿದ.

2011-11-05_4750ಆಮೇಲೆ ಬಾಷಾಂತರಿಸಿದ.

ಆಕೆ ಅಲ್ಲಿನ ಸರೋವರ ತಟವೊಂದರ ಮೀನುಗಾರ ಹೆಂಗಸು.ದೋಣಿಯಲ್ಲಿ ಹೊರಟು ಮೀನು ಹಿಡಿಯುವವಳು.ಅವಳಿಗೆ ಸಣ್ಣ ವಯಸ್ಸಿನಿಂದಲೇ ಬೆಟ್ಟದ ಮೇಲಿರುವ ಈ ಬಾಬಾ ಫಕೀರನ ಗುಂಗು.ಮನೆ ಬಿಟ್ಟು ಏಕಾಂಗಿಯಾಗಿ ಎಲ್ಲೆಲ್ಲೋ ಹೋಗುತ್ತಿದ್ದಳಂತೆ.ಹೀಗೆ ಅಲೆಯುತ್ತಿರುವ ಇವಳಿಗೆ ಮದುವೆಯಾದರೆ ಸರಿಯಾಗಬಹುದು ಎಂದು ಮನೆಯವರು ಅದಕ್ಕಾಗಿ ಹರಸಾಹಸ ಪಟ್ಟರಂತೆ.

ಮದುವೆಯಾಗುವುದೇ ಇಲ್ಲ ಎಂದು ಇವಳೂ ಹಠ ತೊಟ್ಟಳಂತೆ.

ಕೊನೆಗೆ ಮನೆಯವರ ಕಾಟ ತಡೆಯಲಾಗದೇ ‘ಮದುವೆಯಾಗುವುದಾದರೆ ಹೆಂಡತಿ ತೀರಿಕೊಂಡ ಗಂಡಸಿನ ಜೊತೆ ಮಾತ್ರ.ಜೊತೆಗೆ ಅವನಿಗೆ ಮಕ್ಕಳೂ ಇರಬೇಕು’ಎಂದು ಶರತ್ತು ಹಾಕಿದಳಂತೆ.

2011 11 05_4730ಹಾಗೇ ಹೆಂಡತಿ ತೀರಿಕೊಂಡ ಹಳ್ಳಿಯ ಮೌಲ್ವಿಯೊಬ್ಬನನ್ನು ಮದುವೆಯಾಗಿ, ಆತನ ಮಕ್ಕಳಿಬ್ಬರ ಜೊತೆ ಈಕೆ ಬೆಟ್ಟ ಹತ್ತುತ್ತಾ ಬಂದಿದ್ದಳು.

ನೋಡಲು ಅಲೌಕಿಕ ಸುಂದರಿಯಂತಿದ್ದ ಈಕೆ ಚಳಿಗಾಳಿಯ ಆ ಮಟಮಟ ಮದ್ಯಾಹ್ನ ಅಪರಿಚಿತರಾದ ನಮ್ಮ ವಾಹನದಲ್ಲಿ ಕುಳಿತುಕೊಂಡು ಕಥೆ ಹೇಳುತ್ತಿದ್ದಳು.

ಆಕೆಯ ಕಥೆಗೆ ಕ್ಯಾರೇ ಅನ್ನದ ಆ ಮಕ್ಕಳು ವಾಹನದ ಇಂಚಿಂಚನ್ನೂ ಆಹ್ಲಾದಿಸುತ್ತಿದ್ದರು.

ಬೆಟ್ಟ ಇಳಿದು ವಾಪಾಸು ಹೋಗುವಾಗ ಆಕೆ ತಾನೂ ಬರುವೆ ಅಂದಳು.

‘ನಾವು ಹೋಗುವಲ್ಲೆಲ್ಲಾ ಬರುವೆಯಾ’ ಎಂದು ಕೇಳಿದೆ.

‘ಹೌದು, ನೀವು ಹೋಗುವಾಗ ನಿಮ್ಮ ಜೊತೆ ನಿಮ್ಮ ಮನೆಗೂ ಬರುವೆ’ ಅಂದಳು.

‘ಅಯ್ಯೋ ಹಾಗಾದರೆ ನಿನ್ನ ಕಟ್ಟಿಕೊಂಡ ಮೌಲವಿಯ ಕಥೆಯೇನು’ ಅಂತ ಕೇಳಿದೆ.

‘ಹೋ, ಹೇಗೂ ಅವರಿಗೆ ನನ್ನಿಂದ ಏನೂ ಸುಖವಿಲ್ಲ.ಕೇಳಿದರೆ ತಾನಾಗಿಯೇ ಬಿಟ್ಟುಕೊಡುತ್ತಾನೆ’’ ಅಂತ ಹೇಳಿದಳು.

‘ವ್ಹಾವ್, ಹಾಗಾದರೆ ಆ ಮಹಾ ಪುರುಷನನ್ನು ನೋಡಬೇಕಲ್ಲಾ.ನಿನ್ನ ಮನೆಗೆ ಕರೆದುಕೊಂಡು ಹೋಗು’ ಎಂದು ಕೇಳಿದೆ.‘ಹೋ ಅದಕ್ಕೇನು’ಎಂದು ಆಕೆ ಕತ್ತಲು ಕತ್ತಲು ಹೊತ್ತಲ್ಲಿ ಕಾಲುವೆಯೊಂದರ ಬದಿಯಲ್ಲಿದ್ದ ತನ್ನ ಪುಟ್ಟ ಮನೆಯೊಳಕ್ಕೆ ಕರೆದೊಯ್ದಳು.

2011 11 05_4802ಆಕೆಯ ಯಜಮಾನ ಆಕೆಗಿಂತಲೂ ಸುಂದರನಾಗಿ ಕಾಣಿಸುತ್ತಿದ್ದ.ಆಕೆಗಿಂತಲೂ ಚುರುಕಾಗಿದ್ದ.ಆಕೆಯ ಹುಡುಗಾಟಗಳನ್ನು ಅರ್ಥ ಮಾಡಿಕೊಂಡಿರುವ ತಾಯಿಯಂತೆ ಆತ ಸಲಾಂ ಹೇಳಿ ನಮ್ಮನ್ನು ಸ್ವಾಗತಿಸಿದ.ಪುಟ್ಟ ಹುಡುಗಿಯಂತೆ ಆಕೆ ಬೆಟ್ಟದಲ್ಲಿ ನಾವು ಸಿಕ್ಕ ಕಥೆಯನ್ನು ಸಂಭ್ರಮದಲ್ಲಿ ಗಂಡನಿಗೆ ವಿವರಿಸುತ್ತಿದ್ದರೆ ಆತ ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದ.

‘ಮೌಲ್ವಿಗಳೇ, ಇನ್ನೊಂದು ವಿಷಯ. ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ನನ್ನೊಡನೆ ಬೆಂಗಳೂರಿಗೆ ಬರಲು ತಯಾರಾಗಿದ್ದಾಳೆ.ನೀವು ಏನು ಹೇಳುತ್ತೀರಿ ಎಂದು ಕೇಳಿದೆ.

ಆತ ಮಗುವಿನಂತೆ ನಕ್ಕ.

2011-11-06_4886‘ಈಕೆ ನರಕಕ್ಕೆ ಬೇಕಾದರೂ ಸಲೀಸಾಗಿ ಹೊರಟು ಬಿಡುತ್ತಾಳೆ.ಆದರೆ ಆಕೆಗೆ ಕಷ್ಟವಾಗಬಹುದು ಎಂದು ನಾನು ಬಿಡುತ್ತಿಲ್ಲ.ಹಾಗೆ ನಿಮಗೆ ಬೇಕೇಬೇಕು ಅಂತ ಇದ್ದರೆ ಯಾರೂ ಏನೂ ಮಾಡಲಾಗುವುದಿಲ್ಲ’

ನಮ್ಮ ಮಾತುಕತೆಗಳನ್ನು ಭಾಷಾಂತರ ಮಾಡುತ್ತಿದ್ದ ಚಾಲಕ ‘ಸಾಬ್ , ನಿಮ್ಮ ಹೆಂಡತಿಯ ಫೋನ್ ನಂಬರ್ ಕೊಡಿ. ಅವರನ್ನೂ ಒಂದು ಮಾತು ಕೇಳೋಣ ’ಎಂದು ನಡುವಲ್ಲಿ ಬಾಯಿ ಹಾಕಿದ.

‘ಸುಮ್ಮಗಿರು ಮಾರಾಯ’ಎಂದು ನಾನು ಗಂಭೀರನಾದೆ.

ಆಮೇಲೆ ಆ ಪುಟ್ಟ ಮನೆಯಲ್ಲಿ ನಾವೆಲ್ಲರೂ ಬಹಳ ಹೊತ್ತು ಕಷ್ಟಸುಖ ಮಾತಾಡಿಕೊಂಡೆವು.

ಆ ನಡುವೆ ಮೌಲ್ವಿಯ ಮಡದಿ ನಾಲ್ಕಾರು ಬಗೆಯ ಮೀನುಗಳನ್ನು ಕಾಯಿಸಿ ಬಿಸ್ಕತ್ತುಗಳಂತೆ ಚಾದ ಜೊತೆ ತಂದಿಟ್ಟಳು.

ಕಾಲಿಗೆ ಕಂಬಳಿ ಹೊದೆಸಿ ನಡುವೆ ಅಗ್ಗಿಷ್ಟಿಕೆ ಇಟ್ಟು ಆ ಕೋಣೆಯನ್ನು ಬೆಚ್ಚಗೆ ಮಾಡಿದಳು.

ಅವರನ್ನು ಕತ್ತಲಲ್ಲಿ ಬೀಳ್ಕೊಡುವ ಮೊದಲು ಮೌಲ್ವಿಯವರು ‘ನಿಮಗೆ ಇನ್ನೊಂದು ವಿಷಯ ಗೊತ್ತಾ, ನನ್ನ ಹೆಂಡತಿ ಕೈರೇಖೆಗಳನ್ನು ಓದಿ ಅದೃಷ್ಟ ಹೇಳುತ್ತಾಳೆ’ ಎಂದು ಹೇಳಿದರು.

2011-11-07_5480‘ಹೌದಾ’ ಎಂದು ನಾನು ಬಲ ಹಸ್ತವನ್ನು ಆಕೆಯ ಮುಂದೆ ಚಾಚಿದೆ.‘ಬಲ ಹಸ್ತವನ್ನಲ್ಲ, ನಿಮ್ಮ ಎಡ ಹಸ್ತವನ್ನು ಮುಷ್ಟಿ ಮಾಡಿ ತೋರಿಸಿ’ ಎಂದು ಹೇಳಿದಳು.ತೋರಿಸಿದೆ.ಅವಳು ದೂರದಿಂದಲೇ ನನ್ನ ಮುಷ್ಟಿಯನ್ನು ಬಹಳ ಹೊತ್ತು ಪರಿಶೀಲಿಸಿದಳು.ಆಮೇಲೆ ನಕ್ಕಳು.‘ನಗುವುದು ಯಾಕೆ’ ಎಂದು ಕೇಳಿದೆ.‘ಏನಿಲ್ಲ.ನಿಮ್ಮ ಅದೃಷ್ಟ ನೀವು ಅಂದುಕೊಂಡಷ್ಟು ಚೆನ್ನಾಗಿಲ್ಲ’ ಎಂದು ಇನ್ನೊಮ್ಮೆ ನಕ್ಕಳು.

ವಾಪಾಸು ಬರುವ ದಾರಿಯಲ್ಲಿ ಟ್ಯಾಕ್ಸಿ ಚಾಲಕ ಸ್ವಲ್ಪ ಮ್ನಾನವದನನಂತೆ ಮೌನವಾಗಿದ್ದ.‘ಯಾಕೆ ದೋಸ್ತ್ ಗಂಭೀರವಾಗಿರುವೆ’ ಎಂದು ಕೇಳಿದೆ.2011-11-05_4655

‘ಏನಿಲ್ಲ.ಆಕೆಯೂ ನನ್ನ ಹಾಗೆಯೇ ಅಲೆಮಾರಿ.ಎಲ್ಲಿಯೂ ನಿಲ್ಲುವವಳಲ್ಲ.ಏನನ್ನೂ ಕಟ್ಟಿಕೊಳ್ಳುವವಳಲ್ಲ.ನನಗೆ ದಾರಿಯಲ್ಲಿ ಸಿಗುವವರೆಲ್ಲ ಹೀಗೆಯೇ.ಬಹುಶಃ ನೀವೂ ಹೀಗೆಯೇ’ ಎಂದು ಅವನ ಆ ದಿನದ ಇಪ್ಪತ್ತನೆಯ ಸಿಗರೇಟು ಹಚ್ಚಿದ.

(೨೦೧೧ ,ನವಂಬರ್ ೧೩, )

(ಫೋಟೋಗಳೂ ಲೇಖಕರವು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s