ಜನ ಓದಬಹುದಾದ ಕಾದಂಬರಿ

DSC_9082ವಾರಕ್ಕೆ ಬೇಕಾದ ಉಡುಪುಗಳ ಚೀಲವನ್ನು ಮೈಸೂರಿನಲ್ಲೇ ಮರೆತು ಇರುವ ಒಂದು ಜೊತೆಯಲ್ಲೇ ಇಲ್ಲಿ ಐದು ದಿನ ಕಳೆಯಬೇಕಲ್ಲಾ ಎಂದು ನಾನು ಕೊಳಕನಂತೆ ಓಡಾಡುತ್ತಿದ್ದರೆ ಹೊಸ ಬಟ್ಟೆ ಹಾಕಿರುವವರೆಲ್ಲರೂ ಮಹಾ ದೊಡ್ಡ ಉಳ್ಳವರಂತೆ ಕಾಣಿಸುತ್ತಿದ್ದರು. ಯಾರಿಗೂ ಮುಖ ತೋರಿಸದೆ ಯಾರೂ ಇಲ್ಲದ ಇಲ್ಲಿನ ಒಂದು ಜಾಗದಲ್ಲಿ ‘ಎನ್ನ ಕಾಲೇ ಕಂಬವಯ್ಯ’ ಎಂದು ಸುಮ್ಮನೇ ಓಡಾಡುತ್ತಿದ್ದೆ.

ಎದುರಿಗೆ ಒಂದು ಋಷಿಯ ಗುಡಿಸಲಿನಂತಹ ಮನೆ. ಒಂದೆರೆಡು ಕಜ್ಜಿನಾಯಿಗಳು ಆ ಗುಡಿಸಲಿನ ಬಾಗಿಲಲ್ಲಿ ಬಿದ್ದು ಕೊಂಡಿದ್ದವು. ಮನೆಯ ಯಜಮಾನ ನೋಡಲು ಋಷಿಯಂತೆಯೇ ಇದ್ದವನು ಹೊರಬಂದ. ಅವನ ಜೊತೆಯಲ್ಲೇ ನಾಯಿಗಳೂ ಹೊರಬಂದವು. ಒಂದು ಹೆಂಗಸೂ ಹಿಂದಿನಿಂದ ಬಂದಳು. ಆಕೆಯೇನೂ ನೋಡಲು ಋಷಿಪತ್ನಿಯಂತಿರಲಿಲ್ಲ. ಕೂಲಿ ಮಾಡಿ ಮನೆಗೆ ಹಿಂತಿರುಗಿದ ಹಾಗಿದ್ದಳು. ಅಷ್ಟು ಹೊತ್ತಿಗೆ ಕೂಲಿ ಮುಗಿಸಿ ಬಂದ ಇನ್ನಿಬ್ಬರು ಹೆಂಗಸರು ಗುಡಿಸಲಿನ ಮುಂದೆ ಬಂದು ಸೇರಿಕೊಂಡರು. ಆ ನಾಯಿಗಳು ಅವರನ್ನು ಕಂಡು ಬಾಲ ಅಲ್ಲಾಡಿಸುತ್ತಾ ನಿಂತು ಆ ಮಂಜಿನಲ್ಲಿ ಅವರೆಲ್ಲರೂ ಏನೋ ಗಹನ ಮಾತುಕತೆಯಲ್ಲಿ ಮುಳುಗಿದರು.

ಅವರ ಮಾತುಕತೆಯಲ್ಲಿ ಹೇಗೆ ಸೇರಿಕೊಳ್ಳುವುದು ಎಂಬುದು ನನ್ನ ಯೋಚನೆಯಾಗಿತ್ತು. ಆ ಚುಮುಚುಮು ಕತ್ತಲಲ್ಲಿ ಸುಳಿಯುವ ಆ ಮಂಜಿನ ನಡುವಲ್ಲಿ ಅವರೆಲ್ಲರೂ ಆ ಋಷಿಯಂತಹ ಮುದುಕನ ಸುತ್ತ ಮುತ್ತಿಕೊಂಡು ಏನು ಮಾತನಾಡುತ್ತಿರಬಹುದು, ಆತ ಅವರಿಗೆ ಏನು ವೇಧಾಂತ ಹೇಳುತ್ತಿರಬಹುದು, ಏನೂ ಅಲ್ಲದ ಈ ನಾನು ಇದರಲ್ಲಿ ಹೇಗೆ ಪಾಲು ಹೊಂದುವುದು ಎಂದು ಸುಮ್ಮನೇ ಕೂತಿದ್ದೆ. ಆ ಮೇಲೆ ಸುಮ್ಮನೇ ಅವರನ್ನು ನೋಡಿ ನನ್ನನ್ನೂ ಸೇರಿಸಿಕೊಳ್ಳಿ ಎನ್ನುವಂತೆ ನಕ್ಕು ಅಲ್ಲಿಂದ ಬಂದಿದ್ದೆ.

DSC_1402ಹಾಗೆ ನಕ್ಕಿದ್ದು ನಿನ್ನೆ ಫಲ ನೀಡಿತು. ಆ ಮುದುಕ ನಿನ್ನೆ ನಡು ಮದ್ಯಾಹ್ನ ಕೈ ಬೀಸಿಕೊಂಡು ನನ್ನ ಎದುರೇ ನಡೆದು ಬರುತ್ತಿದ್ದ. ಮತ್ತೊಮ್ಮೆ ನಕ್ಕೆ. ಆತನೂ ನಕ್ಕ.‘ನಿಮ್ಮದು ಎಲ್ಲಿಯಾಯಿತು?’ ಎಂದು ಕೇಳಿದೆ. ಆ ಮುದುಕ ತನ್ನ ಕಥೆಯನ್ನೆಲ್ಲ ಹೇಳಿ ನನ್ನ ಬಗ್ಗೆಯೂ ವಿಚಾರಿಸಿದ. ನಾನೂ ಉತ್ತರಿಸಿ ಮನೆಯೊಳಗೆ ಕರೆತಂದು ನನ್ನದೊಂದು ಕಾದಂಬರಿಯನ್ನು ಆತನ ಕೈಗಿತ್ತು ‘ಉಳಿದ ಸಮಯದಲ್ಲಿ ಕಥೆ ಗಿತೆ ಬರೆಯುವುದು ನನ್ನ ಕೆಲಸ’ ಎಂದು ಹೇಳಿ ಸುಮ್ಮನಾದೆ.

ಆ ಮುದುಕನ ಹೆಸರು ಥಾಮಸ್ ಎಂದಿಟ್ಟುಕೊಳ್ಳಿ. ವಯಸ್ಸು ೭೬. ಒಂದು ಕಾಲದಲ್ಲಿ ಕಾರ್ಪೆಂಟರ್ ಆಗಿದ್ದವರು. ಮಡಿಕೇರಿಯ ತರುಣರಿಗೆ ಕಾರ್ಲ್ ಮಾರ್ಕ್ಸನನ್ನೂ, ಮಾವೋತ್ಸೆ ತುಂಗನನ್ನೂ, ಚೌ ಎನ್ ಲಾಯ್‌ರನ್ನೂ ಹೇಳಿಕೊಡುತ್ತಿದ್ದರಂತೆ. ಇವರ ಜೊತೆಯಲ್ಲೇ ಆಚಾರಿ ಕೆಲಸದ ಕೈಯಾಳುಗಳಾಗಿ ಕೆಲಸ ಮಾಡಿದ ಅನೇಕ ಹುಡುಗರು ಈಗ ಕಾಂಗ್ರೆಸ್ಸು ಸೇರಿ ದೊಡ್ಡದೊಡ್ಡ ಜಾಗದಲ್ಲಿದ್ದಾರೆ ಎಂದು ಹೇಳಿದರು.

‘ನೀನು ಸಣ್ಣ ಕಥೆಯನ್ನು ಬರೆಯುವವನು. ಆದರೆ ನನ್ನದು ದೊಡ್ಡ ಕಥೆ. ಅದು ಈಗ ಆಗಲಿಕ್ಕಿಲ್ಲ’ ಎಂದು ಹೇಳಿ ಹೊರಟರು. ಹೋಗುವಾಗ ಖುರಾನನ್ನೂ, ಬೈಬಲನ್ನೂ, ಭಗವದ್ಗೀತೆಯನ್ನೂ ತಪ್ಪುತಪ್ಪಾಗಿ ಉದ್ಧರಿಸುತ್ತಾ,

‘ನಿಮ್ಮ ಕಾದಂಬರಿಗೆ ಎಷ್ಟು ಕಾಸು’ ಎಂದು ಕೇಳಿದರು.

‘ ಅಯ್ಯೋ ನನ್ನ ಕಾದಂಬರಿಯನ್ನು ಮನುಷ್ಯರು ಬಿಡಿ ಕೋಳಿಗಳೂ ಓದುವುದಿಲ್ಲ ಹಾಗಾಗಿ ಉಚಿತವಾಗಿ ಹಂಚುತ್ತಿರುವೆ, ಕಾಸು ಬೇಡ, ನಿಮ್ಮ ಗುಡಿಸಲಿಗೆ ಬಂದಾಗ ಟೀ ಕಾಸಿ ಕೊಡಿ, ಸಾಕು.’ಎಂದು ಹೇಳಿದೆ.

ಆ ಮುದುಕನಿಗೆ ನನ್ನ ತಮಾಷೆ ಅರ್ಥವಾದಂತೆ ಆತ ಹೋಗಲು ಹೊರಟವರು ಅಲ್ಲೇ ನಿಂತುಕೊಂಡರು.

DSC_1334‘ಅಲ್ಲಾ ಕಾಮ್ರೇಡರೇ, ನಿಮ್ಮ ಸಂಸಾರದ ಕಥೆಯೇನು’ ಎಂದು ಕೇಳಿದೆ. ‘ಮೂವರು ಮಕ್ಕಳು, ಮೂವರನ್ನೂ ಓದಿಸಿಲ್ಲ, ಅವರು ಮೂವರೂ ಈಗ ದುಡಿಯುವ ವರ್ಗಕ್ಕೆ ಸೇರಿಹೋಗಿದ್ದಾರೆ’ ಅಂದರು. ‘ಯಾಕೆ ಓದಿಸಿಲ್ಲ’ ಅಂತ ಕೇಳಿದೆ. ‘ಆಧುನಿಕ ವಿಧ್ಯಾಭ್ಯಾಸ ಎಂಬುದು ಉಳ್ಳವರು ತಮ್ಮ ಅನುಕೂಲಕ್ಕಾಗಿ ಉಂಟು ಮಾಡಿರುವುದು. ಶ್ರಮ ಎಂಬುದು ಮಾತ್ರ ನಮ್ಮ ಶಕ್ತಿ, ಅದಕ್ಕೇ ಶಾಲೆಗೆ ಕಳುಹಿಸಲಿಲ್ಲ’ ಎಂದು ಹೇಳಿದರು.

ನನಗೆ ಬೇಸರವೂ ಸಿಟ್ಟೂ ಏಕಕಾಲಕ್ಕೆ ಉಂಟಾಗುತ್ತಿತ್ತು. ಮಡಿಕೇರಿಯಂತಹ ಈ ಊರಿನಲ್ಲಿ, ಈ ಗಾಳಿ ಮಳೆ ಮಂಜಿನಲ್ಲಿ ದುಡಿಯುವ ವರ್ಗವಾಗಿ ಹೋಗಿರುವ ಆತನ ಮಕ್ಕಳು.

‘ಸರಿ ಸದ್ಯಕ್ಕೆ ಲಾಲ್ ಸಲಾಂ. ಆಮೇಲೆ ನಿಮ್ಮ ಗುಡಿಸಲಿಗೆ ಬರುತ್ತೇನೆ’ ಅಂತ ಥಾಮಸರನ್ನು ಕಳುಹಿಸಿದೆ.

DSC_1638ನಿನ್ನೆ ಸಂಜೆ ಕತ್ತಲಲ್ಲಿ ಮತ್ತೆ ಅಲ್ಲಿಗೆ ಹೋದೆ. ಆ ಗುಡಿಸಲು ಹಾಗೇ ನಿಂತುಕೊಂಡಿತ್ತು. ನಾಯಿಗಳೂ ಹಾಗೇ ಬಿದ್ದುಕೊಂಡಿದ್ದವು. ತುಂಬ ಹೊತ್ತು ಕರೆದ ಮೇಲೆ ಅದರೊಳಗಿಂದ ಥಾಮಸ್ ಅವರ ಹೆಂಡತಿ ಹೊರಬಂದರು.

‘ಥಾಮಸ್ ಎಲ್ಲಿ?’ ಎಂದು ಕೇಳಿದೆ.

‘ ಅದು ಎಲ್ಲೋ ಸಿಟ್ಟುಮಾಡಿಕೊಂಡು ಹೋಗಿದೆ’ ಎಂದು ಅರ್ಧ ಸಿಟ್ಟಿನಲ್ಲೂ , ಅರ್ಧ ಪ್ರೀತಿಯಲ್ಲೂ ಹೇಳಿದರು.

‘ ಏನು ಜಗಳವಾ?’ಎಂದು ಕೇಳಿದೆ.

‘ಅದು ಯಾವಾಗಲೂ ಇದ್ದದ್ದೇ. ಹಣ ಕೇಳುವುದು.. ಸಿಟ್ಟುಮಾಡಿ ಹೋಗುವುದು. ಕತ್ತಲಲ್ಲಿ ಮತ್ತೆ ಬರುವುದು..ಈಗ ಬರಬಹುದು’ ಎಂದು ಕತ್ತಲನ್ನೇ ದಿಟ್ಟಿಸಿದರು.

ಅವರ ಮುಖದಲ್ಲಿ ನೋವೇನೂ ಅಷ್ಟು ಇರಲಿಲ್ಲ. ನಗು ಮಾತ್ರ ಹೆಚ್ಚೇ ಇತ್ತು.

‘ಯಾಕೆ ಇಷ್ಟು ನಗುತ್ತೀರಿ?’ ಎಂದು ಕೇಳಿದೆ.

‘ಇದರ ಜೊತೆಗೆ ಜೀವಿಸಬೇಕಲ್ಲ’ ಎಂದು ಮತ್ತೆ ನಕ್ಕರು.

ಆವತ್ತು ತುಂಬ ಹೊತ್ತಾದರೂ ಥಾಮಸ್ ಬರಲೇ ಇಲ್ಲ. ಅವರ ಹೆಂಡತಿ ಬಹಳ ಹೊತ್ತು ಗಂಡನ ಸಾಹಸಗಳನ್ನು ಹೇಳುತ್ತಾ ಹೋದರು.

ಹಾಗೆ ನೋಡಿದರೆ ಅವರ ನಿಜವಾದ ಹೆಸರು ರೀಟಾ ಅಲ್ಲ. ಅವರು ಥಾಮಸರ ಮೊದಲ ಹೆಂಡತಿಯೂ ಅಲ್ಲ. ಥಾಮಸರ ಮೊದಲ ಹೆಂಡತಿ ಗಂಡನ ಕ್ರಾಂತಿಕಾರೀ ಆಲೋಚನೆಗಳನ್ನು ತಾಳಲಾರದೆ ಹಿಂದೆಯೇ ತೀರಿಹೋಗಿದ್ದಾರೆ.

ಅದರಲ್ಲಿ ಉಂಟಾದ ಎರಡು ಗಂಡುಮಕ್ಕಳು ಅಪ್ಪನಿಗೆ ಶಾಪ ಹಾಕಿಕೊಂಡು ಶ್ರಮಜೀವಿಗಳಾಗಿ ಎಲ್ಲಿಯೋ ಬದುಕುತ್ತಿದ್ದಾರೆ.

DSC_1245ರೀಟಾ ದೊಡ್ಡ ಕುಟುಂಬದ ಹೆಂಗಸು. ಅಣ್ಣಂದಿರು ಆಸ್ತಿ ಕರಗುತ್ತದೆ ಎಂಬ ಕಾರಣದಿಂದ ಇವರನ್ನು ಮದುವೆ ಮಾಡಿಸದೆ ಇವರಿಗೆ ಸಿಟ್ಟುಬಂದು ಅನಾಥಾಶ್ರಮ ಸೇರಿದ್ದಾರೆ. ಅಲ್ಲಿಂದ ಥಾಮಸರ ಜೊತೆ ಮರಗೆಲಸದ ಕೈಯ್ಯಾಳಾಗಿ ಸೇರಿಕೊಂಡಿದ್ದಾರೆ. ಆಮೇಲೆ ಥಾಮಸರು ಈಕೆಯ ಜೊತೆ ಬದುಕುತ್ತಿದ್ದಾರೆ. ಈಕೆಯಿಂದಲೂ ಥಾಮಸರಿಗೆ ಒಬ್ಬ ಮಗನಿದ್ದಾನೆ ಮತ್ತು ಆತನೂ ಶ್ರಮಜೀವಿಯಾಗಿ ಮಡಿಕೇರಿಯಲ್ಲಿ ಬದುಕುತ್ತಿದ್ದಾನೆ.

ಈಗ ಥಾಮಸರು ಆ ಗುಡಿಸಲಿನ ಒಳಗಡೆಯೇ ಇನ್ನೂ ಎರಡು ಗುಡಿಸಲುಗಳನ್ನು ಕಟ್ಟಬೇಕು. ಎಲ್ಲ ಮಕ್ಕಳಿಗೂ ಸಮಪಾಲು ಬೇಕು. ಅದಕ್ಕೆ ಇಟ್ಟಿಗೆ ಬೇಕು ಎಂದು ದುಡಿಯುವ ಹೆಂಡತಿಯಲ್ಲಿ ಹಣಕ್ಕಾಗಿ ಪೀಡಿಸುತ್ತಿರುವರಂತೆ. ‘ಅದಕ್ಕೇ ಜಗಳ. ಬೇರೆ ಏನೂ ಇಲ್ಲ’ ಎಂದು ರೀಟಾ ಮತ್ತೆ ನಕ್ಕರು.

ಇವತ್ತು ಬೆಳಗೆ ಥಾಮಸರು ಮತ್ತೆ ಸಿಕ್ಕಿ ‘ಸಾರೇ, ವರ್ಗಸಮರದ ಕುರಿತು ಸ್ವಲ್ಪ ಮಾತಾಡಬಹುದೇ ಎಂದು ಹೇಳಿದರು.

‘ಅದು ಬಿಡಿ ನಿಮ್ಮ ಹೆಂಡತಿ ಎಲ್ಲಿ’ ಎಂದು ಕೇಳಿದೆ.

‘ಕೂಲಿಗೆ ಹೋಗಿದ್ದಾಳೆ. ಆಕೆಯೇ ನನ್ನ ದೇವರು’ ಎಂದು ಬೊಚ್ಚು ಬಾಯಲ್ಲಿ ನಗುತ್ತಾ ಹೇಳಿದರು.

RAS_4514ತುಂಬ ಹೊತ್ತು ತಮ್ಮ ಯೌವನ ಕಾಲದ ಇನ್ನಷ್ಟು ಕಥೆಗಳನ್ನು ಹೇಳಿ, ‘ನೀವು ಇದನ್ನೆಲ್ಲಾ ಬರೆಯಬೇಕು’ ಅಂದರು.

‘ಆಯಿತು ಇನ್ನೊಮ್ಮೆ ತುಂಬ ಹೊತ್ತು ಸಿಗುವಾ.ಆಮೇಲೆ ನೀವು ಹೇಳಿದಂತೆಯೇ ಒಂದು ಕಾದಂಬರಿ ಬರೆಯುತ್ತೇನೆ.ಆಗಲಾದರೂ ಜನ ಓದಬಹುದು’ ಎಂದು ಹೇಳಿ ಬಂದಿರುವೆ.

(ನವಂಬರ್ ೬, ೨೦೧೧)

(ಫೋಟೋಗಳೂ ಲೇಖಕರವು)

Advertisements