ಬಿಳಿ ಕಂಬಳಿಯಂತ ಮಂಜು ಮಡಿಕೇರಿ

2012 06 13_5506ಸಂಜೆಯ ಹೊತ್ತು ಎಲ್ಲ ಕೆಲಸ ಮುಗಿಸಿಕೊಂಡು ಇಲ್ಲೊಂದು ಕಡೆ ಹೋಗಿ ಆಕಾಶ ನೋಡುತ್ತ ನಿಲ್ಲುವುದು ನನ್ನ ಇತ್ತೀಚಿನ ಹೊಸ ಹವ್ಯಾಸ `ಬೇರೆ ಯಾರಿಗೂ ಇಲ್ಲದ ನಿನ್ನ ಹಾಳು ಹವ್ಯಾಸ.ಒಮ್ಮೆ ಎಲ್ಲಾ ನೋಡಿ ಮುಗಿಸಿ ಹಾಳಾಗಿ ತೊಲಗಿ ಹೋಗು’ ಎಂದು ಮುಖ ಸಿಂಡರಿಸಿಕೊಂಡ ಆ ಆಕಾಶ ತನ್ನ ಎಲ್ಲ ಬಿನ್ನಾಣಗಳನ್ನು ತೋರಿಸಲಾರಂಬಿಸುತ್ತದೆ.ಒಮ್ಮೆ ವೈಯ್ಯಾರ, ಒಮ್ಮೆ ಶೃಂಗಾರ, ಒಮ್ಮೆ ಸುಳ್ಳು ಮುನಿಸು, ಒಮ್ಮೊಮ್ಮೆ ರತಿ ವಿಲಾಸದಂತಹ ರಕ್ತವರ್ಣ, ಒಮ್ಮೊಮ್ಮೆ ಇನ್ನಾರಿಗೋ ಕಾಯುತ್ತಿರುವಂತಹ ಹುಚ್ಚುಕಾತುರ, ಒಮ್ಮೊಮ್ಮೆ ಎಲ್ಲ ಬಣ್ಣಗಳನ್ನೂ ತೋರಿಸಿ ಕೊನೆಗೂ ತಾನೊಬ್ಬ ಏಕಾಂಗಿ ಎಂದು ತೋರಿಸುವ ಮಳೆಯ ಅಳು.ಬೆಳ್ಳನೆಯ ಮೋಡಗಳು ಮೇಲೆದ್ದು ಬಂದು, ಎಲ್ಲ ಕಡೆ ಕಾವಳ ಹರಡಿ, ಮೋಡಗಳ ಒಳಗಿಂದ ಮಿಂಚು ಟಿಸಿಲೊಡೆದು, ಅಲ್ಲಿ ನಸುಗೆಂಪು ಬಣ್ಣ ಕೊಂಚ ಚೆಲ್ಲುತ್ತದೆ.

2011-10-26_3619‘ಬೇಗ ಬೇಗ ಎಲ್ಲವನ್ನೂ ತೋರಿಸಿ ಮುಗಿಸು ಮಾರಾಯ, ಹೋಗೇ ಬಿಡುತ್ತೇನೆ ’ಎಂದು ನಾನೂ ಕಾಯುತ್ತಿರುತ್ತೇನೆ.

ಅಲ್ಲಿ ಅಷ್ಟು ಎತ್ತರದಲ್ಲಿ ನಿಂತರೆ ಕೆಳಗೆ ಕಣ್ಣು ಹಾಯುವವರೆಗೆ ಭೂಮಿಕಾಣಿಗಳೂ, ಹೊಲಗದ್ದೆಗಳೂ, ಬೇಲಿ ಸಾಲುಗಳೂ, ಎಲ್ಲೆಲ್ಲಿಗೋ ತೆರಳುವ ಟಾರುರೋಡುಗಳೂ, ಕತ್ತಲಲ್ಲಿ ಮೇದು ಮರಳುತ್ತಿರುವ ದನ ಕರುಗಳೂ, ಆಡುತ್ತಿರುವ ಮಕ್ಕಳೂ ಚಿತ್ರಗಳಂತೆ ಕಾಣಿಸುತ್ತದೆ.ಯಾರದೋ ಮನೆಯಲ್ಲಿ ಬಚ್ಚಲಿಗೆ ಹಾಕಿರುವ ಬೆಂಕಿಯ ಹೊಗೆ, ಕಾಡು ಕಡಿದು ಎಲೆಗಳನ್ನು ಸುಡುತ್ತಿರುವ ಹೊಗೆ, ಯಾವುದೋ ತೊರೆಯಿಂದ ಎದ್ದು ಬರುತ್ತಿರುವ ಹಭೆ, ಜೊತೆಗೆ ತೇಲುತ್ತಿರುವ ತುಂಡುತುಂಡು ಮೋಡಗಳು….

2011-07-20_9578ಅಷ್ಟು ಹೊತ್ತಿಗೆ ಅಲ್ಲಿ ಇನ್ನೂ ಕೆಲವರು ಬಂದು ನಿಂತಿರುತ್ತಾರೆ.ಸುಮ್ಮನೆ ನೋಡುತ್ತಿರುತ್ತಾರೆ.ಒಮ್ಮೊಮ್ಮೆ ದೊಡ್ಡದೊಂದು ನಕ್ಷೆಯಲ್ಲಿ ತಮ್ಮ ತುಂಡು ಭೂಮಿಯನ್ನು ಹುಡುಕುತ್ತಿರುವವರಂತೆ ಕೆಳಕ್ಕೆ ಕೈತೋರಿಸಿ ‘ಅದಾ ಅಲ್ಲಿ ನೋಡಿ ನಮ್ಮ ಬಾವನ ಮನೆಯ ಕೊಟ್ಟಿಗೆ.ಅಲ್ಲಿ ನೋಡಿ ಅದು ಕಾಣುತ್ತಿರುವುದು ನಮ್ಮ ಪೆಮ್ಮಯ್ಯ ಮಾಮನ ಹಂಚಿನ ಮನೆ’ ಎಂದು ಕಣ್ಣಲ್ಲೇ ಗಡಿಗುರುತುಗಳನ್ನು ಹಾಕುತ್ತಿರುತ್ತಾರೆ.

ಎಲ್ಲೋ ಬೆಂಗಳೂರಿಂದ ಬಂದ ಕೃಶಕಾಯದ ನಡುವಯಸ್ಸಿನ ಹೆಣ್ಣುಮಗಳೊಬ್ಬಳು ‘ಅದಾ ಅಲ್ಲಿ ನೋಡು ನಮ್ಮ ಮಾವನವರ ಜಮ್ಮಾಬಾಣೆ.ಅಲ್ಲಿ ಈಗ ಅವರ ಎರಡನೆಯ ಹೆಂಡತಿಯ ಮಗಳ ಗಂಡ ಶುಂಠಿ ನೆಟ್ಟಿದ್ದಾರೆ’ ಎಂದು ಕಣ್ಣು ಒದ್ದೆ ಮಾಡಿಕೊಳ್ಳುತ್ತಾಳೆ.

2011-07-20_9565ನಾನು ಮನಸ್ಸಲ್ಲೇ ಆಕಾಶಕ್ಕೆ ಬಾಯ್ ಹೇಳುತ್ತೇನೆ.ಹಿಂತಿರುಗುವಾಗ ಸುರಿಯುತ್ತಿರುವುದು ಮಂಜೋ ಮಳೆಯೋ ಗೊತ್ತಾಗುವುದಿಲ್ಲ.ಉಸಿರಿನೊಳಕ್ಕೆ ಸೇರುತ್ತಿರುವ ಒದ್ದೆ ಒದ್ದೆ ಕುಳಿರು.ಇಷ್ಟು ಹೊತ್ತು ಎಲ್ಲ ಬಣ್ಣಗಳಿದ್ದರೂ ಈಗ ಏನೂ ಇಲ್ಲದಂತೆ ಮಂಕಾಗಿರುವ ಆಕಾಶ.

ಹಿಂತಿರುಗುವ ದಾರಿಯಲ್ಲಿ ಹೊತ್ತಿಕೊಂಡಿರುವ ನಗರದ ದೀಪಗಳು.ಕಾಫಿ ತೋಟದ ಕೆಲಸ ಮುಗಿಸಿ ತಲೆಯಮೇಲೆ ಪುರುಳೆಯ ಬೃಹತ್ ಹೊರೆ ಹೊತ್ತು ನಡೆಯುತ್ತಿರುವ ಕೂಲಿ ಹೆಂಗಸರು.ಇಳಿವ ಸೂರ್ಯನ ಬೆಳಕಲ್ಲಿ ಹೊಳೆಯುತ್ತಿರುವ ಅವರ ಮುಖದ ಆಯಾಸ ಮತ್ತು ಅವರ ಮೂಗಿನ ನತ್ತು.

ಆಕಾಶ ನೋಡುವ ಪುರುಸೊತ್ತು ಇದ್ದಿದ್ದರೆ ಇವರೆಲ್ಲರೂ ಕವಿಗಳೂ, ಭಾವುಕರೂ ಎಲ್ಲವೂ ಆಗಿರುತ್ತಿದ್ದರು ಅನಿಸುತ್ತದೆ.

RAS_5097ಕೆಲಸವೂ ಇಲ್ಲದ ಪುರುಸೊತ್ತೂ ಇಲ್ಲದ ನಮ್ಮಂತಹ ಹುಲುಮಾನವರದು ಕ್ಷಣಕ್ಷಣವೂ ಭಾವುಕರಾಗುವ ಭಾಗ್ಯ ಎಂದು ಮನೆ ತಲುಪುತ್ತೇನೆ.

ಮನೆ ತಲುಪುವ ಹೊತ್ತಿಗೆ ಸರಿಯಾಗಿ ತಮ್ಮ ಆಟವನ್ನೂ ಮುಗಿಸಿ ಮಾತನಾಡುತ್ತ ನಿಂತಿರುವ ಮಕ್ಕಳು ಇಂದು ಮಳೆ ಸುರಿದಿದೆ ಎಂದು ಮೊದಲೇ ಹೋಗಿಬಿಟ್ಟಿದ್ದಾರೆ.

ಅವರು ಆಡುತ್ತಿದ್ದ ನೆಲದ ಒದ್ದೆ ಒದ್ದೆ ಬೀದಿದೀಪದ ಬೆಳಕಿನಲ್ಲಿ ಹೊಳೆಯುತ್ತಿದೆ.

ನಡು ಇರುಳಿನಲ್ಲಿ ಯಾರೋ ಬಂದು, ‘ಜಿಮ್ ತಾತನಿಗೆ ಹುಷಾರಿಲ್ಲ.ಆಸ್ಪತ್ರೆಗೆ ಸೇರಿಸಲು ಬನ್ನಿ’ ಎಂದು ಕರೆಯುತ್ತಾರೆ.

DSC_9582ಇಲ್ಲಿ ಒಂಟಿಯಾಗಿ ಬದುಕುತ್ತಿರುವ ಜಿಮ್ ತಾತ.ಕೃಶಕಾಯದ ಆರು ಅಡಿ ಎತ್ತರದ ಜಿಮ್ ತಾತನಿಗೆ ಇಂಗ್ಲಿಷ್, ಕೊಡವ ಮತ್ತು ಸ್ವಾಹಿಲಿ ಭಾಷೆ ಬಿಟ್ಟರೆ ಬೇರೆ ಏನೂ ಬರುವುದಿಲ್ಲ.ಆದರ ಯಾವಾಗಲೂ ಮಗುವಿನಂತೆ ನಗುತ್ತಿರುತ್ತಾರೆ.ಇವರು ಹುಟ್ಟಿದ್ದು ಬೆಳೆದದ್ದು ಎಲ್ಲಾ ಆಫ್ರಿಕಾದ ದೇಶವೊಂದರಲ್ಲಿ.ಇವರ ತಂದೆ ಅಲ್ಲಿ ನಾಗರಿಕ ಸೇವೆಯಲ್ಲಿ ಅಧಿಕಾರಿಯಾಗಿದ್ದರಂತೆ.ಅದೊಂದನ್ನು ಬಿಟ್ಟು ಜಿಮ್ ಬೇರೆ ಏನನ್ನೂ ಹೇಳುವುದಿಲ್ಲ.

ಕೇಳಿದರೆ, ‘ಐ ಆಮ್ ಇನ್ ಹರ್ರಿ’ ಎಂದು ಅವಸರದಲ್ಲಿ ನಡೆದುಬಿಡುತ್ತಾರೆ.

DSC_7678ಏಕಾಂಗಿ ಮುದುಕ ತಾನು ಏಕಾಂಗಿ ಅಲ್ಲ ಎಂದು ತೋರಿಸಲು ಮಳೆಯಲ್ಲಿ ಬಿಸಿಲಲ್ಲಿ ಪ್ಯಾಂಟಿನ ಜೇಬಿನೊಳಗಡೆ ಕೈ ಇಳಿಬಿಟ್ಟು ನಡೆಯುತ್ತಿರುತ್ತಾರೆ.

ಒಮ್ಮೊಮ್ಮೆ ಎಲ್ಲೋ ದಾರಿಯಲ್ಲಿ ಸಿಮೆಂಟು ಕಟ್ಟೆಯಲ್ಲಿ ಒಬ್ಬರೇ ಕುಳಿತುಕೊಂಡು ನಗುತ್ತಿರುತ್ತಾರೆ.

ಹೆಚ್ಚು ಕಡಿಮೆ ಬಹುತೇಕ ನನ್ನಂತೆಯೇ ಎಂದು ಕಂಡಾಗಲೆಲ್ಲ ಕೆಲವು ಪ್ರಶ್ನೆಗಳನ್ನು ಕೇಳಿ ಜಿಮ್ ಗೆಳೆತನಕ್ಕಾಗಿ ನಾನೂ ಹಂಬಲಿಸುತ್ತೇನೆ.ಆದರೆ ನನಗೇನೂ ಬೇಡಾ ಎಂಬಂತೆ ಆತ ನಡೆದು ಬಿಡುತ್ತಾರೆ.

ನಡು ಇರುಳಿನಲ್ಲಿ ಮಂಜಿನಲ್ಲಿ ಮಲಗಿರುವ ಯಾರೂ ಇಲ್ಲದ ಆಸ್ಪತ್ರೆ.‘ಅಯ್ಯೋ ನನಗೇನೂ ಆಗಿಲ್ಲ’ಎಂದು ಇಂಗ್ಲಿಷಿನಲ್ಲಿ ತೊದಲುವ ಜಿಮ್ ತಾತನನ್ನು ಆಸ್ಪತ್ರೆಯ ಕೋಣೆಗೆ ಸೇರಿಸಿ ಹೊರಟರೆ ಆಸ್ಪತ್ರೆಯ ಇನ್ನೊಂದು ಕೋಣೆಯಲ್ಲಿ ಇನ್ನೊಬ್ಬರ ಚಿರಪರಿಚಿತ ಮುಖ.

‘ಅಯ್ಯೋ ನಿಮಗೇನಾಯಿತು ಆಸ್ಪತ್ರೆಗೆ ಸೇರಲು?’ ಎಂದು ಕೇಳಿದರೆ ’ಬೇರೇನೂ ಆಗಿಲ್ಲ ವಯಸ್ಸಾಯ್ತು ಅಷ್ಟೇ’ ಎಂದು ಆ ಹಿರಿಯರು ಕೊಂಚ ದುಗುಡದಲ್ಲಿ ನಗುತ್ತಾರೆ.

DSC_0104_2ಅವರು ಕನ್ನಡದ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಮಗ ವಸಂತ. ಅವರಿಗೀಗ ಎಂಬತ್ತು ವರ್ಷ. ಬಹುಶಃ ಅವರಿಗೆ ಐದು ವರ್ಷವಾಗಿದ್ದಾಗ ಅವರ ತಾಯಿ ಗೌರಮ್ಮ ಹೊಳೆಯಲ್ಲಿ ಈಜಲು ಹೋದವರು ಮುಳುಗಿ ಹೋಗಿದ್ದಾರೆ.ಎಂಬತ್ತು ವರ್ಷದ ವಸಂತನವರು ಈಗಲೂ ತಾಯಿಯ ನೆನಪಾದಾಗ ಮಗುವಿನಂತಾಗುತ್ತಾರೆ.

ತಾಯಿ ತೀರಿ ಹೋಗುವ ಕೆಲ ಸಮಯದ ಮೊದಲು ವಸಂತನವರು ಮಹಾತ್ಮಾ ಗಾಂಧಿಯನ್ನು ನೋಡಿದ್ದರು.ಗಾಂಧಿಯನ್ನು ನೋಡಿದಾಗ ನಿಮ್ಮ ಮನಸ್ಸಿಗೆ ಏನನಿಸಿತ್ತು ಎಂದು ಒಮ್ಮೆ ಇವರನ್ನು ಕೇಳಿದ್ದೆ.‘ಅಯ್ಯೋ ಬಹಳ ಹೆದರಿಕೆಯಾಗಿತ್ತು.ಈಗಲೂ ಆ ಹೆದರಿಕೆ ಹಾಗೇ ಇದೆ’ ಎಂದು ಅವರು ಹೇಳಿದ್ದರು.

ಮಹಾತ್ಮಾ ಗಾಂಧಿ ಒಮ್ಮೆ ಕೊಡಗಿನ ದೊಡ್ಡ ಕಾಫಿ ಬೆಳೆಗಾರರೊಬ್ಬರ ಮನೆಯಲ್ಲಿ ತಂಗಿದ್ದರು.ಆ ಮನೆಯ ಕೂಗಳತೆಯಲ್ಲೇ ಕೊಡಗಿನ ಗೌರಮ್ಮನನವರ ಮನೆ.

ಅಲ್ಲಿಗೆ ಬಂದಿರುವ ಗಾಂಧಿ ತನ್ನ ಮನೆಗೂ ಬರಬೇಕು ಎಂದು ಗೌರಮ್ಮ ಅಳುತ್ತಾ ಹಠ ಹಿಡಿದು ಕೂತಿದ್ದರಂತೆ.

ಆಕೆಯ ಹಠದ ಕಥೆ ಕೇಳಿ ಗಾಂಧಿ ಅವಸರವಸರದಲ್ಲಿ ಕೋಲು ಊರುತ್ತಾ ಆಕೆಯ ಬಿಡಾರಕ್ಕೆ ಬೀಸುಗಾಲಿಡುತ್ತಾ ಬಂದರಂತೆ.

ಹಾಗೆ ದಾವಂತದಲ್ಲಿ ನಡೆಯುತ್ತಾ ಬಂದ ಗಾಂಧಿಯನ್ನು ಕಂಡು ಹೆದರಿದ ಮಗು ವಸಂತ ಅಮ್ಮ ಗೌರಮ್ಮನ ಸೆರಗಿನೊಳಕ್ಕೆ ಸೇರಿ ಅಳಲು ತೊಡಗಿದನಂತೆ.

ಆ ಅಳು ಇನ್ನೂ ಹಾಗೆಯೇ ಇದೆ ಎಂದು ವಸಂತ ಎಪ್ಪತ್ತೈದು ವರ್ಷಗಳ ನಂತರ ನಕ್ಕಿದ್ದರು.

DSC_0109_2ಒಂದು ವರ್ಷದ ಹಿಂದೆ ನಾನೂ ಅವರ ಜೊತೆ ಇಲ್ಲಿ ಒಂದು ವಾಕ್ ಹೋಗಿದ್ದೆ.ಸಣ್ಣ ಮಳೆ.ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡಿದ್ದ ವಸಂತ ಹಳೆಯ ಬಹಳ ಕಥೆಗಳನ್ನು ಹೇಳಿ ತಮಗಿನ್ನೂ ಬಹಳ ನಡೆಯಲಿಕ್ಕಿದೆ ಎಂದು ನನ್ನನ್ನು ಅರ್ದದಿಂದ ಬೀಳು ಕೊಟ್ಟಿದ್ದರು.

ಮೊನ್ನೆ ಜಿಮ್ ತಾತನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಬರುವಾಗ ಕಂಡ ವಸಂತನವರು ಬಹಳ ಬಳಲಿದ್ದರು.ಆದರೂ ಆಸ್ಪತ್ರೆಯ ಹಾಸುಗೆಯಲ್ಲಿ ಆ ನಡು ರಾತ್ರಿಯಲ್ಲೂ ಬಹಳ ತಮಾಷೆಗಳನ್ನು ಹೇಳಿ ನನ್ನನ್ನು ಛೇಡಿಸಿ ಕಳಿಸಿದ್ದರು.

ಏಕಾಂಗಿ ಜಿಮ್ ತಾತನೂ, ಕಥೆಗಾರ್ತಿ ಗೌರಮ್ಮನವರ ಮಗ ವಸಂತನೂ ವಯಸ್ಸುಗಾಲದಲ್ಲಿ ಮಲಗಿರುವ ಆ ಆಸ್ಪತ್ರೆ ಮಡಿಕೇರಿಯ ಆ ನಡು ಇರುಳ ಮಂಜಿನಲ್ಲಿ ತಾನೂ ಏಕಾಂಗಿಯಾಗಿ ಮಲಗಿತ್ತು.

ಆಸ್ಪತ್ರೆಯ ಮೆಟ್ಟಿಲಿನ ಬಳಿಯ ಬೆಂಚಿನಲ್ಲಿ ತಾನೂ ವಯಸ್ಸಾಗಿ ತೂಕಡಿಸುತ್ತಿದ್ದ ಆಸ್ಪತ್ರೆಯ ಕಾವಲುಗಾರ ನಿದ್ದೆಯಲ್ಲಿ ಏನೇನೋ ಕನಸು ಕಂಡು ನಗುತ್ತಿದ್ದ.

ಹೊರಗೆ ಬಿಳಿ ಕಂಬಳಿಯಂತೆ ಎಲ್ಲವನ್ನೂ ಹೊದ್ದುಕೊಂಡಿರುವ ಮಂಜು.ಯಾರೂ ಇಲ್ಲದ ರಸ್ತೆ.

ಮನೆಗೆ ಬಂದು ಬೆಳಗಿನ ತನಕ ಏನೇನೋ ಕನಸು ಕಾಣುತ್ತಾ ಮಲಗಿದ್ದೆ.DSC_8326

(ಅಕ್ಟೋಬರ್ ೩೦, ೨೦೧೧)

(ಫೋಟೋಗಳೂ ಲೇಖಕರವು)

Advertisements