ಮುನಿಯಮ್ಮ ಮತ್ತೆ ಸಿಕ್ಕಿದ್ದಳು

2011-10-15_3126ಐದು ವರ್ಷಗಳ ನಂತರ ಸಿಕ್ಕಿದ ಕಿಳ್ಳೆಕ್ಯಾತರ ಮುನಿಯಮ್ಮ ‘ಓ ಎಲ್ಲಿ ಹೋಗಿದ್ದೆ ದೇವರೂ, ತಿರುಗಿ ಸಿಕ್ಕಿದೆಯಲ್ಲಾ ಮಗೂ’ ಎಂದು ನನ್ನನ್ನು ತಬ್ಬಿಕೊಂಡು ಹಣೆಗೆ ಚುಂಬಿಸಿದಳು.

ಹಾಗೇ ಬಗ್ಗಿದ ನನ್ನ ತಲೆಗೆ ತನ್ನ ತಲೆಯಿಂದ ಹೋತದಂತೆ ಡಿಕ್ಕಿ ಹೊಡೆದು ‘ಮುದುಕನಾಗಿ ಹೋಗಿರುವೆಯಲ್ಲ ಗುರುವೇ’ ಎಂದು ಬೆರಳಿಂದ ನಟಿಕೆ ಮುರಿದಳು.

ಐದು ವರ್ಷಗಳ ನಂತರ ಮರಳಿ ದೊರಕಿದ ಮಗಳನ್ನು ನೋಡುವಂತೆ ನಾನು ಆಕೆಯನ್ನು ನೋಡುತ್ತಿದ್ದೆ.ಅವಳೂ ಕಣ್ಣು ತುಂಬಿಕೊಂಡು ಒಂದಿಷ್ಟು ನಾಚಿಕೆಯನ್ನೂ ಮಾಡಿಕೊಂಡು ಇವನಿಗೆ ಕೂರಲು ಚಾಪೆಯನ್ನು ಎಲ್ಲಿ ಹಾಸಲಿ ಎಂದು ತನ್ನ ಗುಡಿಸಲನ್ನು ತಾನೇ ಮೊದಲ ಬಾರಿಗೆ ನೋಡುತ್ತಿರುವಂತೆ ಜಾಗ ಹುಡುಕುತ್ತಿದ್ದಳು.

2011-10-15_3091ಕಿಳ್ಳೆ ಕ್ಯಾತರ ಈ ಮುದುಕಿ ಮುನಿಯಮ್ಮ ಬಾಯಿ ತೆರೆದರೆ ಸಾಕ್ಷಾತ್ ಸರಸ್ವತಿ.ಕೈಗೊಂದು ಹಾರ್ಮೋನಿಯಂ ಪೆಟಾರಿ ಸಿಕ್ಕಿದರಂತೂ ಸಾಕ್ಷಾತ್ ನಾದ ದೇವತೆಯಂತೆ ಹಳೆಯ ನಾಟಕದ ಮಟ್ಟುಗಳನ್ನು ಗಂಟೆಗಟ್ಟಲೆ ಹಾಡುವವಳು.ಐದು ವರ್ಷಗಳ ಹಿಂದೆ ಒಂದು ಭರತ ಹುಣ್ಣಿಮೆಯ ಇರುಳು ಈಕೆ ಗುಡಿಸಲಿನಲ್ಲಿ ಕೂರಿಸಿಕೊಂಡು ಹಾಡಿದ್ದಳು.

ಈಕೆಯ ಪಕ್ಕದ ಗುಡಿಸಲುಗಳಲ್ಲಿದ್ದ ದೊಂಬಿದಾಸರೂ, ಹಕ್ಕಿ ಪಿಕ್ಕಿಗಳೂ, ಗೊಂಬೆರಾಮರೂ ಅಲ್ಲಿ ಸೇರಿ ಅವರವರಿಗೆ ಗೊತ್ತಿದ್ದ ಹಾಡುಗಳನ್ನೂ,ಡಯಲಾಗುಗಳನ್ನೂ ಹೇಳಿ ಆ ಭರತ ಹುಣ್ಣಿಮೆಯ ಇರುಳನ್ನು ಒಂದು ನೈಜನಾಟಕವನ್ನಾಗಿ ಮಾರ್ಪಡಿಸಿ ನಡು ಇರುಳ ಹೊತ್ತಲ್ಲಿ ಬೀಳುಕೊಟ್ಟಿದ್ದರು.

ಮೈಸೂರಿನ ಕೊನೆಯ ಪ್ರಪಾತವೊಂದರ ಮಳೆ ನೀರು ಹರಿದು ಹೋಗುವ ಬಿರುಕಿನಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದ ಇವರೆಲ್ಲರ ಗುಡಿಸಲುಗಳೊಳಗೆ ನಾಟಕದ ರಾಜಮಹಾರಾಜರ ಬೇಗಡೆಯ ಸಿಂಹಾಸನಗಳೂ, ಮರದ ಖಡ್ಗಗಳೂ, ಕಾಗದದ ಮಧುಪಾತ್ರೆಗಳೂ , ಕಿರೀಟಗಳೂ ಇದ್ದವು.

16th-oct-2011-imageಮಳೆ ಸುರಿದು ರಾಡಿ ನೀರು ನುಗ್ಗಿದಾಗ ಗುಡಿಸಲುಗಳೊಳಗೆ ಹಾವುಗಳೂ, ಚೇಳುಗಳೂ ನುಗ್ಗಿ ಬರುತ್ತಿದ್ದವು.ಕೊಳೆ ನೀರು ಕುಡಿದು ಹೆಸರಿಲ್ಲದ ಕಾಯಿಲೆಗಳು ಬಂದು ಬಹಳಷ್ಟು ಕಲಾವಿದರು ತೀರಿಯೂ ಹೋಗಿದ್ದರು.

ಆದರೆ ಐದು ವರ್ಷಗಳ ಹಿಂದೆ ಆ ಭರತ ಹುಣ್ಣಿಮೆಯ ಇರುಳು ಅವರೆಲ್ಲ ಹಾಡಿ ಕುಣಿಯುವಾಗ ಯಾವ ರೋಗರುಜಿನಗಳೂ, ಯಾವ ಹಾವುಚೇಳುಗಳೂ ಅಲ್ಲಿ ಕಾಣಿಸಿಕೊಳ್ಳದ ಹಾಗೆ ಅವರು ಗೆಲುವಾಗಿದ್ದರು. ತಾವು ಹಾಡುತ್ತಿರುವ ಹಾಡಿನ ವಾರಸುದಾರರು ತಾವೇ, ತಾವು ನಟಿಸುತ್ತಿರುವ ಪಾತ್ರಗಳು ಸ್ವಂತ ತಾವೇ ಎಂದು ನಂಬಿಕೊಂಡು ಅವರು ಆ ಇರುಳನ್ನು ಕಳೆದಿದ್ದರು.

ನಾನೂ ಅಷ್ಟೇ, ಆ ಭರತ ಹುಣ್ಣಿಮೆಯ ಇರುಳು ಎಲ್ಲ ಸ್ವಂತ ಕಷ್ಟ, ಕಾರ್ಪಣ್ಯ, ಸಾಹಿತ್ಯ, ಸಂಗೀತ, ಓದಿದ್ದು, ಬರೆದದ್ದು, ಕಲಿತದ್ದು ಎಲ್ಲವನ್ನೂ ಮರೆತು ಆ ಬೆಳದಿಂಗಳಲ್ಲಿ ಕಳೆದೇ ಹೋಗಿದ್ದೆ.ಅವರೆಲ್ಲರ ಅದಿನಾಯಕಿಯಂತಿದ್ದ ಈ ಮುನಿಯಮ್ಮ ಎಂಬ ಮುದುಕಿ ಎಲ್ಲವನ್ನು ಅರಿತ ತಾಯಿಯಂತೆ ಎಲ್ಲ ನಟರುಗಳ ಸಣ್ಣಪುಟ್ಟ ಉಗ್ಗುಗಳನ್ನು ಸರಿಪಡಿಸಿ, ಅವರ ಡಯಲಾಗುಗಳ ನ್ಯೂನತೆಗಳನ್ನೂ ಕ್ಷಮಿಸಿ ನಾದದೇವತೆಯಂತೆ ಹಾಡಿದ್ದಳು.

2011-10-15_3128ಇಂದು ಬೆಳಬೆಳಗೇ ಯಾಕೋ ಮುನಿಯಮ್ಮನನ್ನು ನೋಡಬೇಕೆನಿಸಿತ್ತು.ಯಾಕೋ ಅವಳು ಇರಲಿಕ್ಕಿಲ್ಲ ಎಂದು ಹೆದರಿಕೆಯೂ ಆಗುತ್ತಿತ್ತು.ಆ ಹೆದರಿಕೆ ಸರಿ ಎನ್ನಿಸುವ ಹಾಗೆ ಮುನಿಯಮ್ಮನ ಗುಡಿಸಲುಗಳಿದ್ದ ಆ ಜಾಗದಲ್ಲಿ ಕೊಳಚೆ ನಿರ್ಮೂಲನೆ ಮಂಡಲಿಯ ಬಹು ಅಂತಸ್ತಿನ ಗೃಹ ಸಮೂಹ ಮೇಲೇಳುತ್ತಿತ್ತು.‘ಇನ್ನು ಅವರೆಲ್ಲ ಇಲ್ಲೇ ಬರುತ್ತಾರೆ ಸಾರ್, ಅದುವರೆಗೆ ಅವರೆಲ್ಲ ದೂರದಲ್ಲಿ ಗುಡಿಲು ಹಾಕಿಕೊಂಡಿದ್ದಾರೆ ಸಾರ್’ ಎಂದು ಕಾವಲುಗಾರ ಹೇಳಿದ.

ಅವನು ತೋರಿದ ಗುಡಿಲುಗಳ ಬಳಿ ಹೋದರೆ ಅಲ್ಲಿ ಎಲ್ಲರೂ ಅಪರಿಚಿತರಂತೆ ಕಾಣುತ್ತಿದ್ದರು.ನನಗೆ ಗೊತ್ತಿದ್ದ ಬುಟ್ಟಿಕೊರಚರ ಕಟ್ಟನರಸಯ್ಯ, ಅವನ ಮಗ ಕಟ್ಟ ಪೋಲಯ್ಯ, ಚಿಕ್ಕಮ್ಮ ಡೊಗ್ಗರ ನಾಗಮ್ಮ, ಚಿಕ್ಕಪ್ಪ ದಾಸರಿ ಚಿನ್ನಯ್ಯ, ಮಾವ ಬಂಡಿನರಸಯ್ಯ ಇವರೆಲ್ಲರೂ ಬುಟ್ಟಿ ಹೆಣೆಯುವ ಈಚಲು ಕಡ್ಡಿಯನ್ನು ಹುಡುಕಿಕೊಂಡು ತಮಿಳು ನಾಡಿಗೆ ವಲಸೆ ಹೋಗಿದ್ದರು.ಬುಟ್ಟಿ ಕೊರಚರ ಚಿನ್ನಮ್ಮ ಐದು ವರ್ಷಗಳ ಹಿಂದೆಯೇ ಮೊಬೈಲು ಫೋನು ಇಟ್ಟುಕೊಂಡಿದ್ದವಳು ರಾತ್ರಿ ಗುಡಿಸಲೊಳಗೆ ಬಂದ ಹಾವು ಕಚ್ಚಿ ಕೆಲವು ತಿಂಗಳುಗಳ ಹಿಂದೆ ತೀರಿಹೋಗಿದ್ದಳು.

ಐದು ವರ್ಷಗಳ ಹಿಂದೆ ಬುಟ್ಟಿಕೊರಚರ ವೆಂಕಟೇಶ ಮತ್ತು ಅನ್ನಪೂರ್ಣಳ ಮದುವೆಯಾಗಿದ್ದರು.ಹೊಸದಾಗಿ ಕ್ಯಾಮರಾ ಪಡೆದುಕೊಂಡಿದ್ದ ನಾನು ಫೋಟೋಗ್ರಾಫರನಾಗಿ ಹೋಗಿದ್ದೆ. ಅವರಿಬ್ಬರು ಈಗ ಎಲ್ಲಿ ಎಂದು ಕೇಳಿದರೆ ಈಚಲು ಕಡ್ಡಿ ಮಾರುತ್ತಾ ಗುಂಡ್ಲುಪೇಟೆಯ ಕಡೆ ಹೋಗಿದ್ದಾರೆ ಅಂದರು.

ಇವರಿಬ್ಬರ ಮದುವೆಗೆ ಪುರೋಹಿತನ ವೇಷ ದರಿಸಿ ಬಂದಿದ್ದ ಕಿಳ್ಳೆಕ್ಯಾತರ ಆಂಜನಪ್ಪ ಎಂಬ ಹಗಲು ವೇಷದ ಪಾತ್ರಧಾರಿಯೂ ಕಾಣಿಸಲಿಲ್ಲ.ಕೇಳಿದರೆ ಅವನೂ ತೀರಿಹೋಗಿದ್ದಾನೆ ಎಂದು ಕೇಳಬೇಕಾಗಿ ಬರಬಹುದು ಎಂಬ ಹೆದರಿಕೆಯಿಂದ ಕೇಳಲಿಲ್ಲ.

ಅಷ್ಟರಲ್ಲಿ, ‘ಇಲ್ಲಾ ಸಾರ್ ಯಾರೋ ಕೊಡಬೇಕಾಗಿರುವ ಸಾಲ ವಸೂಲುಮಾಡಲು ಆತ ಮೈಸೂರಿಗೆ ಹೋಗಿರುವನು’ ಎಂದು ಯಾರೋ ಹೇಳಿದರು.ಅಣ್ಣ ತಂಗಿ ನಾಟಕದಲ್ಲಿ ತಂಗಿಯಾಗಿ ಡ್ಯಾನ್ಸ್ ಮಾಡುತ್ತಿದ್ದ ರತ್ನ ಎಂಬ ಯುವತಿ ಸಿಮೆಂಟು ಇಟ್ಟಿಗೆ ಹೊರಲು ಹೋಗಿ ಸುಸ್ತಾಗಿ ಮಲಗಿದ್ದಳು.

DSC_0552ಇನ್ನು ಯಾವ ದೈರ್ಯದಲ್ಲಿ ಮುನಿಯಮ್ಮ ಎಂಬ ಮುದುಕಿಯನ್ನು ಕೇಳಲಿ ಎಂದು ಹಿಂತಿರುಗುತ್ತಿದ್ದಾಗ ಗುಡಿಸಲೊಂದರೊಳಗಿಂದ ನಾಟಕದ ಕೀರಲು ಹಾಡು ಕೇಳಿಸುತ್ತಿತ್ತು.

ಹೋಗಿ ಒಳ ಇಣುಕಿ ನೋಡಿದರೆ ಮುನಿಯಮ್ಮ ಅಂದು ಕಾಣಿಸುತ್ತಿದ್ದ ಹಾಗೆಯೇ ಸುಂದರಿಯಾಗಿ ಕುಳಿತುಕೊಂಡು ಹಾರ್ಮೋನಿಯಂ ಪೆಟಾರಿ ಬಾರಿಸುತ್ತಿದ್ದಳು.

2011-10-15_3124ಇರುಳಿಡೀ ನಾಟಕದ ರಾಣಿಯ ಪಾತ್ರ ಮಾಡಿ ಸೊರಗಿ ಹೋದಂತೆ ಕಾಣಿಸುತ್ತಿದ್ದ ಹೆಂಗಸೊಬ್ಬಳು ಮೇಕಪ್ಪನ್ನೂ ತೆಗೆಯದೆ ನಿದ್ದೆಗಣ್ಣಲ್ಲಿ ಹಾಡುತ್ತಿದ್ದಳು.

ಅತ್ತು ಅತ್ತು ಸುಸ್ತಾಗಿ ಹೋಗಿದ್ದ ಮಗುವೊಂದು ತಿನ್ನಿಸು ಎಂದು ರಾಗಿಮುದ್ದೆಯ ಬಟ್ಟಲಿನ ಎದುರು ಕೂತು ಅಳುತ್ತಿತ್ತು.

ಮುನಿಯಮ್ಮ ಸ್ವಲ್ಪ ಹೊತ್ತು ಹಾಡಿಗೆ, ಸ್ವಲ್ಪ ಹೊತ್ತು ಮಗುವಿನ ಅಳುವಿಗೆ ಹಾರ್ಮೋನಿಯಂ ನುಡಿಸುತ್ತಾ ಕನ್ ಫ್ಯೂಸ್ ಮಾಡಿಕೊಂಡು ಕುಳಿತಿದ್ದಳು.

ಆ ಗುಡಿಸಲಿನಲ್ಲಿದ್ದವರೆಲ್ಲರೂ ಒಬ್ಬರಿಗೊಬ್ಬರು ಅಪರಿಚಿತರಂತೆ ಕಾಣಿಸುತ್ತಿದ್ದರು.ಹೇಳದೇ ಕೇಳದೇ ಆ ಗುಡಿಸಲಿನೊಳಗೆ ಹೊಕ್ಕ ನಾನೂ ಅಪರಿಚಿತನಂತೆ ಆ ನಟೀಮಣಿಯ ಹಾಡನ್ನೂ, ಮಗುವಿನ ಅಳುವನ್ನೂ, ಮುನಿಯಮ್ಮನ ಪೆಟಾರಿ ಸಂಗೀತವನ್ನೂ ಕೇಳಿಸಿಕೊಳ್ಳುತ್ತಿದ್ದೆ.

ತನ್ನ ಹಾಡಿಗೆ ಮಗುವಿನ ಅಳುವು ತೊಡಕಾಗುತ್ತಿರುವುದನ್ನು ಅಷ್ಟೂ ಹೊತ್ತಿಂದ ಸಹಿಸಿಕೊಂಡಿದ್ದ ನಟೀಮಣಿ ಸಾಕು ಇನ್ನು ನಾನು ಹಾಡಲಾರೆ ಎಂದು ಮುನಿಸಿನಿಂದ ನಿಲ್ಲಿಸಿದಳು.

ಅದುವರೆಗೆ ತನ್ನ ಕಣ್ಣ ಕೊನೆಯಿಂದ ನನ್ನನ್ನು ಗಮನಿಸುತ್ತಿದ್ದ ಮುನಿಯಮ್ಮ ಎದ್ದು ಬಂದು ‘ಓ ದೇವರೂ, ಎಲ್ಲಿ ಹೋಗಿದ್ದೆ ಇಷ್ಟು ವರ್ಷ, ಮುದುಕನಾಗಿಬಿಟ್ಟಿದ್ದೀಯಲ್ಲಾ ಮಗೂ’ ಎಂದು ತಬ್ಬಿಕೊಂಡು ನನ್ನ ಚುಂಬಿಸಿದ್ದಳು.

2011-10-15_3127‘ನಾನು ಮುದುಕನಾದರೂ ಪರವಾಗಿಲ್ಲ,ನೀನಾದರೋ ಹಾಗೇ ಇರುವೆಯಲ್ಲಾ ಮುದುಕೀ’ ಎಂದು ಅವಳನ್ನು ತಬ್ಬಿಕೊಂಡಿದ್ದೆ.

ಆಮೇಲೆ ನಾನೂ ಮುನಿಯಮ್ಮನೂ ಇಂದು ಬೆಳಗೆ ಬಹಳ ಹೊತ್ತು ಕಷ್ಟಸುಖ ಮಾತನಾಡುತ್ತಾ ಕುಳಿತಿದ್ದೆವು.

ಅದೆಲ್ಲ ದೊಡ್ಡ ಕಥೆ.

ಇಲ್ಲಿ ಹೇಳಬೇಕಾದ ಸಂಗತಿ ಎಂದರೆ ಮುನಿಯಮ್ಮ ಬಹಳ ಕಾಲದಿಂದ ಕಾಯುತ್ತಿರುವ ಮಾಸಾಶನ ಆಕೆಗೆ ಇನ್ನೂ ದೊರಕಿಲ್ಲ.ಆಕೆಯ ಬಳಿ ಇರುವುದು ಜಾನಪದ ಅಕಾಡಮಿಯ ಫಲಕ ಮತ್ತು ಪ್ರಶಸ್ತಿ ಪತ್ರ ಮಾತ್ರ.ಮಾಸಾಶನಕ್ಕೆ ಬೇಕಾದ ಲಂಚಕ್ಕೆ ಹಣ ಹೊಂದಿಸಿಕೊಳ್ಳಲು ಆಕೆ ತನ್ನ ಸ್ವಂತ ಹಾರ್ಮೋನಿಯಂ ಪೆಟಾರಿಯನ್ನು ಎರಡು ಸಾವಿರಕ್ಕೆ ಮಾರಿದ್ದಾಳೆ.ಆದರೆ ಆ ಹಣ ಅವಳ ವೃದ್ಧಾಪ್ಯದ ಕಾಯಿಲೆ ಕಸಾಲೆಗಳಿಗೆ ಇಲಾಜು ಮಾಡಿಕೊಳ್ಳಲು ಖರ್ಚಾಗಿ ಹೋಗಿದೆ.ಈಗ ಆಕೆ ಅಲ್ಲಿ ಇಲ್ಲಿ ಬೇಡಿಕೊಂಡು ಬದುಕಿದ್ದಾಳೆ.

2011-10-15_3136ಈ ಅಂಕಣವನ್ನು ಬರೆದ ನಾನು ಮತ್ತು ಓದುತ್ತಿರುವ ನೀವು ಮುನಿಯಮ್ಮನಿಗೆ ಲಂಚವಿಲ್ಲದೆ ಮಾಸಾಶನ ಸಿಗಲು ಸಹಾಯ ಮಾಡಬೇಕಾಗಿದೆ.ಜೊತೆಗೆ ಒಂದು ಸ್ವಂತ ಹಾರ್ಮೋನಿಯಂ ಕೂಡಾ.

ಮೈಸೂರು ಕೆ ಆರ್ ಎಸ್ ರಸ್ತೆಯಲ್ಲಿ ರೈಲ್ವೇ ಗೇಟು ಕಳೆದು ಕೊಂಚ ಮುಂದೆ ಹೋದರೆ ಬಲಕ್ಕೆ ಚಾಮುಂಡೇಶ್ವರಿ ರೈಲ್ವೇ ಬಡಾವಣೆ ಸಿಗುತ್ತದೆ.ಆ ಬಡಾವಣೆಯೊಳಕ್ಕೆ ನುಸುಳಿ ಮುಂದಕ್ಕೆ ಹೋದರೆ ಮುನಿಯಮ್ಮ ಇರುವ ತಾತ್ಕಾಲಿಕ ಏಕಲವ್ಯ ನಗರ

(ಅಕ್ಟೋಬರ್ ೧೬, ೨೦೧೧)

(ಫೋಟೋಗಳೂ ಲೇಖಕರವು)

Advertisements