ಕಾಲುಚಕ್ರ: ಕುಡಿಯುತ್ತ ಸತ್ತವನೂ, ಬರೆಯುತ್ತ ಉಳಿದವನೂ

2010-11-17_2827‘ಸಾರ್ ನನ್ನ ಗಂಡ ರಾತ್ರಿ ನನ್ನ ಎದೆ ಮೇಲೆ ಕೈಹಾಕಿ ಮಲಗಿದ್ದ. ಬೆಳಗ್ಗೆ ಎದ್ದಾಗ ಕೈ ಬಿದ್ದು ಹೋಗಿತ್ತು. ಸತ್ತು ಹೋಗಿದ್ದ ಸಾರ್’ ಬಹುಶಃ ನನ್ನದೇ ವಯಸ್ಸಿನ ಆ ಬೆಟ್ಟ ಕುರುಬರ ಹೆಂಗಸು ಯಾವುದೇ ಸಂಕಟವನ್ನೂ ಬಿಟ್ಟುಕೊಡದೆ ಕಣ್ಣಪಾಪೆಯನ್ನೂ ಅಲುಗಿಸದೆ ಹೇಳಿದಳು.

ಸತ್ತು ಹೋಗಿದ್ದ ಆತನ ಹೆಸರು ಎಂಟಾಣೆ ಕುಳ್ಳ ಅಂತ. ಆ ಬೆಟ್ಟ ಕುರುಬರ ಹಾಡಿಯಲ್ಲಿ ಬಹಳ ಜನರಿಗೆ ಕುಳ್ಳ ಎಂಬ ಹೆಸರಿತ್ತು. ಸುಲಭವಾಗಿ ಗುರುತಿಸಲು ಇವನ ಹೆಸರಿಗೆ ಎಂಟಾಣೆಯನ್ನು ಸೇರಿಸಿದ್ದರು.

ಎಂಟಾಣೆಯೂ ಇಲ್ಲ, ನಾಕಾಣೆಯೂ ಅಲ್ಲ. ನಾನು ನಿಮ್ಮ ಎಲ್ಲರ ಹಾಗೆಯೇ ಇರುವವನು ಎಂದು ತೋರಿಸಿಕೊಳ್ಳಲು ಆತ ಎದೆ ಬಿರಿಯುವ ಹಾಗೆ ಕಡಿಮೆ ಬೆಲೆಯ ವಿಸ್ಕಿಯನ್ನು ನೀರೂ ಸೇರಿಸದೆ ಕುಡಿದು ಸತ್ತೇ ಹೋಗಿದ್ದ. ಅವನ ಹಾಗೆಯೇ ಕುಡಿದಿದ್ದ ಗಂಡಸರು ಹೆಂಗಸರು ಬಿಳಿಬಟ್ಟೆ ಹೊದೆಸಿ ಮಲಗಿಸಿದ್ದ ಆತನ ಸುತ್ತ ಕುಕ್ಕುರುಗಾಲಲ್ಲಿ ಸುಮ್ಮನೇ ಕುಳಿತಿದ್ದರು. ಏನಾದರೂ ಮಾಡಬೇಕೆಂಬ ಉತ್ಸಾಹವಿದ್ದವರು ಸುಡುಗಾಡಿನ ಸುಡುಗುಣಿಯಲ್ಲಿ ಸೌದೆ ಒಟ್ಟುಮಾಡುತ್ತಿದ್ದರು.

ದೂರದಲ್ಲಿ ಕಾಣಿಸುವ ಕಲ್ಲೂರು ಬೆಟ್ಟ. ಆನೆಯ ಹಾಗೆ ಕಾಣಿಸುವ ಈ ಬೆಟ್ಟದ ಸೊಂಡಿಲಿನ ಹಾಗಿರುವ ತಗ್ಗಿನ ಜಾಗದಲ್ಲಿ ಹೆಜ್ಜೇನು ಗೂಡುಗಳು ಕಾಣಿಸುತ್ತಿದ್ದವು. ಬೆಟ್ಟದ ಮೇಲೆ ಹಾರಾಡುತ್ತಿರುವ ಟಿಬೆಟ್ಟನ್ನರ ಪೂಜೆಯ ಬಾವುಟಗಳು ಕಾಣಿಸುತ್ತಿದ್ದವು. ಇಲ್ಲೇ ಹತ್ತಿರದಲ್ಲಿರುವ ಟಿಬೆಟನ್ ನಿರಾಶ್ರಿತರು ಮಳೆ ಬೇಕಾದಾಗ, ಮಳೆ ನಿಲ್ಲಬೇಕಾದಾಗ ಈ ಬೆಟ್ಟದ ಮೇಲಕ್ಕೆ ಬಂದು ಬಾವುಟಗಳನ್ನು ಕಟ್ಟಿ ನಮಗೆ ಗೊತ್ತೇ ಆಗದ ಮಣಮಣ ಮಂತ್ರಗಳನ್ನು ಹೇಳಿ ಹೋಗುತ್ತಾರೆ. ಪಾಪ, ಟಿಬೆಟ್ಟಿನಲ್ಲಿ ಅವರು ಯಾವ ಹಿಮಬೆಟ್ಟಗಳ ಮೇಲೆ ಈ ಬಾವುಟಗಳನ್ನು ಕಟ್ಟುತ್ತಿದ್ದರೋ. ಈಗ ಕಳೆದ ಐವತ್ತು ವರ್ಷಗಳಿಂದ ಈ ಬೆಟ್ಟದ ಮೇಲೆ ಕಟ್ಟುತ್ತಿದ್ದಾರೆ.

Harangi2-2010-11-17_2750ಒಂದು ವರ್ಷದ ಹಿಂದೆ ನೇಪಾಲದಿಂದ ಬೌದ್ಧ ಬಿಕ್ಷುಗಳನ್ನಾಗಿ ಮಾಡಲು ಬಲವಂತದಿಂದ ಹಿಡಿದು ತಂದಿದ್ದ ಮೂವರು ಬಾಲಕರು ಶಿಬಿರದ ಹಿಂಸೆ ತಾಳಲಾರದೆ ಈ ಕಾಡಿನಲ್ಲಿ ತಪ್ಪಿಸಿಕೊಂಡಿದ್ದರು. ಆಮೇಲೆ ದಾರಿ ಗೊತ್ತಿಲ್ಲದೆ ಕಾಡಾನೆಗಳಿರುವ ಈ ಕಾಡಲ್ಲಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡು ಅಳುತ್ತಾ ನಡುರಾತ್ರಿಯಲ್ಲಿ ಕಾಡಿನ ಸೆರಗಲ್ಲಿರುವ ಮನೆಯೊಂದರ ಬಾಗಿಲು ತಟ್ಟಿದ್ದರು. ಆ ಮನೆಯ ಹೆಂಗಸು ಪಾಪ ಆ ಬಾಲಲಾಮಾಗಳಿಗೆ ತನ್ನ ಮಕ್ಕಳ ಬಟ್ಟೆಯನ್ನು ಉಡಿಸಿ ಸ್ವಲ್ಪ ಹೊತ್ತು ಕಾಪಾಡಿದ್ದಳು. ಆಮೇಲೆ ಪೋಲೀಸರು ಆ ಬಾಲಕರನ್ನು ಪುನಃ ಟಿಬೆಟನ್ ದರ್ಮಶಿಬಿರಕ್ಕೆ ಕೊಂಡು ಹೋಗಿದ್ದರು. ಈಕೆಗೆ, ಪಾಪ ಆ ಬಾಲಕರು ತನ್ನ ಮಕ್ಕಳ ಹಾಗೆಯೇ ಅನಿಸಿ ಅವರನ್ನು ನೋಡಲು ಶಿಬಿರಕ್ಕೆ ಹೋಗಿದ್ದಳು. ಆಗ ಅವರು ಅವಳಿಗೆ ಥ್ಯಾಂಕ್ಸ್ ಹೇಳಲು ಐಸ್ ಕ್ರೀಂ ತಿನ್ನುತ್ತಾ ಹೊರಗೆ ಬಂದಿದ್ದರು. ಆದರೆ ಅವರ ಮೈಯೆಲ್ಲಾ ಬಾಸುಂಡೆಗಳಿದ್ದವು. ಬಹುಶಃ ತಪ್ಪಿಸಿಕೊಂಡು ಹೋಗಿದ್ದಕ್ಕೆ ಬೌದ್ಧ ಗುರುಗಳು ಕೊಟ್ಟ ಶಿಕ್ಷೆ ಇದು ಇರಬೇಕು ಎಂದು ಅವಳು ವಾಪಾಸು ಬಂದಿದ್ದಳು. ಆಮೇಲೆ ಮಾತನಾಡುತ್ತಾ ಈ ಕಥೆಯನ್ನು ನನಗೆ ಹೇಳಿದ್ದಳು

‘ಪಾಪ ಮಕ್ಕಳು…’ ಎಂದು ಪುನಃಪುನಃ ಹೇಳುತ್ತಿದ್ದಳು. ಈ ಮಕ್ಕಳನ್ನೂ ತಾನೇ ಸಾಕಬೇಕು ಎಂದು ಆಕೆಗೆ ಅನಿಸಿತ್ತಂತೆ.

2010-11-17_2822ಈಗಲೂ ಒಂದು ಒಗಟಿನ ಹಾಗಿರುವ ಈ ಕಲ್ಲೂರು ಬೆಟ್ಟ. ಅದರ ಕುರಿತಿರುವ ಕಥೆಗಳು. ಅದೆಲ್ಲಾ ಮಣ್ಣಾಂಗಟ್ಟಿ ಅನ್ನುವ ಹಾಗೆ ಆ ಬೆಟ್ಟದ ಕೆಳಗಿನ ಹಾಡಿಯಲ್ಲಿ ಎಂಟಾಣಿ ಕುಳ್ಳ ಸತ್ತು ಮಲಗಿದ್ದ. ತನಗೂ ಇವರು ಯಾರಿಗೂ ಸಂಬಂಧವೇ ಇಲ್ಲ. ತಾನು ಇವರೆಲ್ಲರಿಗಿಂತ ಮೇಲೆ ಎನ್ನುವ ಹಾಗೆ ಹಿಮಕ್ಕಿಂತಲೂ ಬೆಳ್ಳಗಿನ ಬಟ್ಟೆ ಹೊದ್ದು ಮಲಗಿದ್ದ.

‘ಅಯ್ಯೋ ನಿಮ್ಮ ಮನೆ ಹಾಳಾಗ ಯಾಕೆ ಹೀಗೆ ಕುಡಿದು ಸಾಯುತ್ತೀರಾ’ ಎಂದು ನಾನು ಕೂಗಾಡುತ್ತಿದ್ದೆ. ಕಳೆದ ಒಂದು ತಿಂಗಳಲ್ಲಿ ಇಲ್ಲಿ ಹೀಗೆ ಕುಡಿದು ಏಳು ಜನ ಸತ್ತು ಹೋಗಿದ್ದಾರೆ. ಇವನು ಎಂಟನೆಯವನು ಎಂದು ಅಲ್ಲಿದ್ದವರು ಹೇಳುತ್ತಿದ್ದರು. ಅವರಲ್ಲಿ ಗಂಡಸರೂ, ಹೆಂಗಸರೂ, ಗರ್ಬಿಣಿಯರೂ ,ಮುದುಕಿಯರೂ ಇದ್ದರು. ಎಲ್ಲರೂ ಕುಡಿದೇ ಸತ್ತವರು. ಆದರೆ ಹೇಳುವಾಗ ಹಾರ್ಟ್ ಫೈಲ್ ಆಗಿತ್ತು ಅನ್ನುತ್ತಿದ್ದರು.

‘ಸಾರ್, ಇವರ ಸುದ್ದಿಗೆ ಯಾಕೆ ಹೋಗುತ್ತೀರಿ. ಹತ್ತು ರೂಪಾಯಿಗೆ ಒಂದು ಕೊಲೆ ಮಾಡುತ್ತಾರೆ. ಐವತ್ತು ರೂಪಾಯಿಗೆ ತಲೆ ಹೊಡೆಯುತ್ತಾರೆ’ ಎಂದು ಅಲ್ಲಿನ ಯಜಮಾನರುಗಳು ಎಚ್ಚರಿಸುತ್ತಿದ್ದರು. ಈಗಲೇ ತೀರಿಹೋದವರ ಹಾಗಿರುವ ಈ ಪಾಪದ ಜೀವಗಳು ನನ್ನನ್ನೂ ಕೊಂದುಬಿಡಲಿ ಎಂದು ತುಂಬ ಹೊತ್ತು ಚೀರಾಡುತ್ತಲೇ ಇದ್ದೆ.

ಇವರೆಲ್ಲಾ ಕಾಡಿನ ಒಳಗಿದ್ದವರು. ಹಾರಂಗಿ ಅಣೆಕಟ್ಟು ಕಟ್ಟಿ ಇವರ ಹಾಡಿಯೆಲ್ಲಾ ಮುಳುಗಿ ಸರಕಾರ ಇವರಿಗೆ ಸಿಮೆಂಟಿನ ಬಿಡಾರಗಳನ್ನು ಕಟ್ಟಿಕೊಟ್ಟಿದೆ. ಕರೆಂಟಿನ ತಂತಿಗಳನ್ನೂ ಕೊಟ್ಟಿದೆ. ಮನೆಗೊಂದು ಉಚಿತ ದೀಪವನ್ನು ಕೊಡುವ ಸರಕಾರದ ಯೋಜನೆ ಇದು. ಹನ್ನೆರಡು ವರ್ಷಗಳ ಹಿಂದೆ ಯಾರೋ ವಿದ್ಯುತ್ ಉಳಿಸುವ ಉಮೇದಿನಲ್ಲಿದ್ದ ಅದಿಕಾರಿಗಳು ಇವರ ಮನೆಯ ಕರೆಂಟಿನ ತಂತಿಗಳನ್ನು ಕಡಿದು ಹಾಕಿದ್ದಾರೆ. ಕಳೆದ ಹನ್ನೆರೆಡು ವರ್ಷಗಳಿಂದ ಈ ಕತ್ತಲೆಯ ಬಿಡಾರಗಳಲ್ಲಿ ಇವರು ಕುಡಿಯುತ್ತಾ ತೀರಿ ಹೋಗುತ್ತಿದ್ದಾರೆ.

2010-11-17_2835‘ಸರ್ ಬೆಳಗೆದ್ದು ಚಾ ಕುಡಿಯುವ ಬದಲು ಇವರು ನೀರೂ ಸೇರಿಸದೆ ಚೀಪ್ ವಿಸ್ಕಿ ಕುಡಿಯುತ್ತಾರೆ. ಸಂಜೆ ಕೂಲಿಯ ಹಣದಲ್ಲೂ ಕುಡಿದು ರಸ್ತೆಯಲ್ಲಿ ಬಿದ್ದಿರುತ್ತಾರೆ. ಬೆಳಗ್ಗೆ ಹಾಗೇ ಎದ್ದು ಕುಡಿದು ಕೂಲಿಗೆ ಹೋಗುತ್ತಾರೆ. ನಾವು ಏನು ಮಾಡುವುದು ಸಾರ್. ಹೇಳಿಹೇಳಿ ಸಾಕಾಯ್ತು’ ಎಂದು ಗೊತ್ತಿರುವ ಹುಡುಗನೊಬ್ಬ ಮುಖಸಣ್ಣದು ಮಾಡಿ ಹೇಳುತ್ತಿದ್ದ.
ತಾನೂ ಕುಡಿಯದೇ ಉಳಿದವರಿಗೂ ಕುಡಿಯಬೇಡಿ ಎಂದು ಹೇಳುತ್ತಿದ್ದ ಈ ಹಾಡಿಯ ಜೇನುಕುರುಬರ ಯುವಕನೊಬ್ಬ ನಾಲ್ಕು ತಿಂಗಳ ಹಿಂದೆ ಇಲ್ಲಿನ ಯಜಮಾನರೊಬ್ಬರ ತೋಟದಲ್ಲಿ ಕೊಲೆಯಾಗಿದ್ದಾನೆ. ಆತ ಕೊಲೆಯಾಗಿ ನಾಲಕ್ಕು ದಿನಗಳ ಬಳಿಕ ವಾಸನೆ ಬಂದು ಆತ ಕೊಲೆಯಾಗಿರುವುದು ಗೊತ್ತಾಗಿದೆ. ಕೂಲಿ ಜಾಸ್ತಿ ಕೊಡಿ ಇಲ್ಲವಾದರೆ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಆತ ಕೊಲೆಯಾದನಂತೆ. ಕೊಂದವರು ಯಾರೆಂದು ಇನ್ನೂ ಗೊತ್ತಾಗಿಯೇ ಇಲ್ಲ. ಏಕೆಂದರೆ ಇದು ಕೊಲೆಯೋ ಅಲ್ಲವೋ ಎಂದು ತಿಳಿದುಕೊಳ್ಳುವ ಸಲುವಾಗಿ ಆತನ ಒಡಲಿನ ಸೂಕ್ಷ್ಮ ವಸ್ತುಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಅದು ಬರಲಿ ಎಂದು ಇಲ್ಲಿನ ಯಾವ ಜೇನುಕುರುಬನೂ ಕಾಯುತ್ತಿಲ್ಲ.

2010-11-17_2756ಯಾವುದೋ ಸಂಗೀತ ಕೇಳಿಸಿಕೊಂಡು ಇದನ್ನು ನಾನು ಬರೆಯುತ್ತಿದ್ದೇನೆ.ಬರೆದು ಮುಗಿಸಿ ಇನ್ನೊಂದು ಹಾಡಿಗೆ ಹೋಗುತ್ತಿದ್ದೇನೆ.ಕುಡಿದು ಕುಡಿದು ಸತ್ತು ಹೋಗುವ ಬೆಟ್ಟ ಕುರುಬನ ಹಣೆಯ ಬರಹ ಮತ್ತು ಬರೆದು ಬರೆದು ಖ್ಯಾತನಾಗ ಬಯಸುವ ಬರಹಗಾರನ ಹಣೆಯ ಬರಹ ಒಂದಕ್ಕಿಂತ ಇನ್ನೊಂದು ದೊಡ್ಡದೂ ಅಲ್ಲ ಸಣ್ಣದೂ ಅಲ್ಲ ಎಂದು ಸಣ್ಣಗೆ ಗೊಣಗಿಕೊಳ್ಳುತ್ತೇನೆ.

(೯, ಅಕ್ಟೋಬರ್ ೨೦೧೧)

(ಫೋಟೋಗಳೂ ಲೇಖಕರವು)

Advertisements