ಇತಿಹಾಸದ ಕಪಿ ಚೇಷ್ಟೆಗಳು

2011-08-24_9867ಕಳೆದ ವಾರ ಇಲ್ಲೊಂದು ಹಳ್ಳಿಗೆ ಹೋಗಿದ್ದೆ.ಸಭ್ಯರೂ,ಸುಸಂಸ್ಕೃತರೂ,ದಿನ ನಿತ್ಯದ ಚಟುವಟಿಕೆಗಳಲ್ಲಿ ಒಂದು ರೀತಿಯ ಅವ್ಯಕ್ತ ಶಿಸ್ತನ್ನು ಅಳವಡಿಸಿಕೊಂಡಿರುವವರಂತೆಯೂ ಕಾಣುತ್ತಿದ್ದ ಆ ಹಳ್ಳಿಯವರು ನೋಡಲು ಕೊಂಚ ಗಡುಸಾಗಿಯೂ ಇದ್ದರು.ಸ್ತ್ರೀಯರನ್ನು ಹೊರತು ಪಡಿಸಿದರೆ ಉಳಿದವರಲ್ಲಿ ಬಹುತೇಕರು ದೊಡ್ಡದಾಗಿ ಮೀಸೆಯನ್ನೂ ಬಿಟ್ಟುಕೊಂಡಿದ್ದರು.

ನನಗೆ ಯಾಕೋ ದೊಡ್ಡದಾಗಿ ಮೀಸೆ ಬಿಟ್ಟುಕೊಂಡವರನ್ನು ನೋಡಿದರೆ ಒಂಥರಾ ನಗು ಬರುತ್ತದೆ.ತಮ್ಮದಲ್ಲದ ಯಾವುದೋ ಒಂದು ಪಾಪದ ಹುಳವನ್ನು ದೈರ್ಯಕ್ಕೆಂದು ಮುಖದ ಮೇಲೆ ಅವರು ಹರಿಯಬಿಟ್ಟಂತೆ ಕಾಣಿಸುತ್ತದೆ.ಹಾಗಾಗಿ ಅಂತವರು ಕಂಡ ಕೂಡಲೇ ಅವರ ಎದುರಿಗೆ ಹೋಗಿ ನಮಸ್ಕರಿಸಿ ಕೆಲವು ತೀರಾ ಚಿಲ್ಲರೆ ಪ್ರಶ್ನೆಗಳನ್ನು ಕೇಳುತ್ತೇನೆ.ಈ ದಾರಿ ಎಲ್ಲಿಯವರೆಗೆ ಹೋಗಿ ನಿಲ್ಲುತ್ತದೆ ಎಂತಲೋ ಅಥವಾ ಇಲ್ಲಿ ಒಳ್ಳೆಯ ಟೀ ಅಂಗಡಿ ಯಾವುದು ಎಂತಲೋ ಅಥವಾ ಇಲ್ಲೆಲ್ಲಾದರೂ ನೆಡಲು ಸಾರು ಬಾಳೆಯ ಬುಡ ಸಿಗಬಹುದೋ ಎಂತಲೋ ಕೇಳುತ್ತೇನೆ.

ಮೀಸೆಯಿಂದಾಗಿ ಗಹನವಾಗಿ ಕಾಣಿಸುವ ಅವರ ಮುಖ ಈ ಚಿಲ್ಲರೆ ಪ್ರಶ್ನೆಗಳಿಗೆ ಉತ್ತರಿಸುವಾಗ ಗಲಿಬಿಲಿಗೊಳಗಾಗುವುದನ್ನು ನೋಡಲು ಒಂಥರಾ ಖುಷಿಯಾಗುತ್ತದೆ.ಆಮೇಲೆ ಅವರು ಮಗುವಿನಂತೆ ಆ ಪ್ರಶ್ನೆಗಳಿಗೆ ಉತ್ತರಿಸುವಾಗ ಇನ್ನೂ ಚಂದ ಕಾಣಿಸುತ್ತಾರೆ.ಶಾಲಾ ವಾರ್ಷಿಕೋತ್ಸವದ ನಾಟಕಕ್ಕೆ ಮುಖದಲ್ಲಿ ಮೀಸೆ ಬರೆಸಿಕೊಂಡು ಹೋಗುತ್ತಿರುವ ಬಾಲಕನ ಮುಖವನ್ನು ಊಹಿಸಿಕೊಳ್ಳಿ.ಆಗ ಈ ಖುಷಿ ನಿಮಗೂ ಅರ್ಥವಾಗುತ್ತದೆ.

2011-08-24_9861ಕಳೆದ ವಾರ ಹೋಗಿದ್ದ ಆ ಹಳ್ಳಿಯ ಹೆಸರನ್ನು ‘ವೆಸ್ಟ್ ಹುಲಿಕೆರೆ’ ಎಂದು ಇಟ್ಟುಕೊಳ್ಳಿ.ಒಂದು ಕಾಲದಲ್ಲಿ ಅಲ್ಲಿದ್ದ ದೊಡ್ಡದೊಂದು ಕೆರೆ ಮತ್ತು ಆ ಕೆರೆಯಲ್ಲಿ ಒಂದು ಕಾಲದಲ್ಲಿ ನಿಮೀಲಿತ ನೇತ್ರರಾಗಿ ನೀರು ಕುಡಿಯುತ್ತಿರುವ ಹುಲಿಗಳ ಹಿಂಡೊಂದನ್ನು ಕಣ್ಮುಂದೆ ತಂದುಕೊಳ್ಳಿ. ಮತ್ತು ಈಗ ಆ ಕೆರೆಯೂ ಇಲ್ಲ ಮತ್ತು ಹುಲಿಗಳೂ ಇಲ್ಲ ಮತ್ತು ಅದರ ಬದಲು ಆ ಕೆರೆಯ ನಡುವೆ ಕೆಟ್ಟದಾಗಿ ಹರಿಯುತ್ತಿರುವ ಟಾರು ರಸ್ತೆಯೊಂದನ್ನು ಊಹಿಸಿಕೊಳ್ಳಿ. ಆ ರಸ್ತೆಯ ಒಂದು ಕಡೆ ಅಸಹ್ಯವಾಗಿ ಬೆಳೆದಿರುವ ಜೊಂಡು ಹುಲ್ಲು ಮತ್ತು ಶುಂಠಿ ಬೆಳೆದಿರುವ ಗದ್ದೆಗಳು.ಇನ್ನೊಂದು ಕಡೆ ಊಹಿಸಿಕೊಳ್ಳಬಹುದಾದ ಎಲ್ಲ ಬಣ್ಣಗಳನ್ನೂ ಬಳಿದಿರುವ ಅಸ್ತವ್ಯಸ್ತವಾಗಿ ಕಟ್ಟಿರುವ ಮನೆಗಳನ್ನು ಕಲ್ಪಿಸಿಕೊಳ್ಳಿ.

ಶುಂಠಿ ಬೆಳೆದ ಗದ್ದೆಗಳ ನಡುವಿಂದ ಪಶ್ಚಿಮಕ್ಕೆ ಕಾಫಿ ತೋಟಗಳ ನಡುವಿನ ದಾರಿಯಿಂದ ನೀವು ಹೋದರೆ ಅದೇ ‘ವೆಸ್ಟ್ ಹುಲಿಕೆರೆ’. ಅಲ್ಲಿ ಒಂದು ಭಗವತಿ ದೇಗುಲ. ದೇಗುಲದ ಎದುರಲ್ಲೇ ಕಾವಲುಗಾರ ದೈವದ ಸ್ಥಾನವೂ ಇದೆ.ಪಕ್ಕದಲ್ಲೇ ಬೇಟೆಗಾರ ಅಯ್ಯಪ್ಪನ ಗುಡಿಯೂ ಇದೆ.ದೇಗುಲದ ಎದುರು ದೊಡ್ಡದೊಂದು ಗೋಳಿ ಮರ.ಮೇಲೆ ನೀಲಿ ಆಕಾಶ.ದೂರದಲ್ಲಿ ಸಿಂಹದಂತೆ ನಿಂತಿರುವ ದೊಡ್ಡದೊಂದು ಪರ್ವತ.ಸಣ್ಣ ಪುಟ್ಟ ಹಕ್ಕಿಗಳ ಸದ್ದು ಬಿಟ್ಟರೆ,ಗೋಳಿ ಹಣ್ಣುಗಳು ನೆಲಕ್ಕೆ ಬೀಳುವ ಸದ್ದು ಬಿಟ್ಟರೆ ಉಳಿದ ಸದ್ದೆಂದರೆ ನಮ್ಮ ಕಾಲ ಹೆಜ್ಜೆಗಳದು ಮಾತ್ರ.

2011-08-24_9903‘ವೆಸ್ಟ್ ಹುಲಿಕೆರೆ’ಯ ಆ ಭಗವತಿ ದೇಗುಲದಲ್ಲಿ ಕುಳಿತು ಹಳೆಯ ಕಾಲದ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ.ಅವರು ಆ ಕಥೆಗಳನ್ನು ನೆನಪಿಸಿಕೊಳ್ಳಲು ಹಾಡುಗಳ ಮೊರೆ ಹೋಗುತ್ತಿದ್ದರು.ಆ ಹಾಡಿನಲ್ಲಿ ಆ ಹುಲಿಕೆರೆಯ ಹಳೆಯ ಗಡಿಗಳೂ, ಕಾರಣ ಪುರುಷರೂ, ಅವರ ಕಾದಾಟಗಳೂ ಎಲ್ಲವೂ ಮೆಲ್ಲನೆ ಒಂದೊಂದಾಗಿ ಹೊರಬಂದು ಅವುಗಳಿಂದ ಅವರೆಲ್ಲರಿಗೂ ಹಳೆಯ ಕಥೆಗಳು ನೆನಪಾಗಿ ಆ ಕಥೆಗಳು ಈಗ ತಾನೇ ನಡೆಯಿತೇನೋ ಎಂಬಂತೆ ಅವರು ವಿವರಿಸುತ್ತಿದ್ದರು.

ಅವರು ಅದನ್ನು ವಿವರಿಸುವಾಗ ನಾನು ಅವರ ಮೀಸೆಗಳನ್ನು ಗಮನಿಸುತ್ತಿದ್ದೆ.ಚಿಲ್ಲರೆ ಮಾತುಗಳನ್ನಾಡುವಾಗ ನಿರರ್ಥಕವಾಗಿ ಕಾಣಿಸುವ ಆ ಮೀಸೆಗಳು ಹಳೆಯ ಕಥೆಗಳನ್ನು ಕೇಳುವಾಗ ಅರ್ಥಪೂರ್ಣವಾಗಿ ಅಲ್ಲಾಡುತ್ತಿದ್ದವು.ಅವರ ಪೂರ್ವಜರಲ್ಲಿ ಬಹುತೇಕರು ಕೊಡಗಿನ ಲಿಂಗಾಯಿತ ಅರಸರಲ್ಲಿ ಪಡೆಯಾಳಾಗಿದ್ದವರು.ಲಡಾಯಿಗಳಲ್ಲಿ ಹುತಾತ್ಮರಾಗಿದ್ದವರು.ಹಾಗೆ ನೋಡಿದರೆ ಈ ಲಡಾಯಿಗಳೂ, ಹುತಾತ್ಮ ಹುದ್ದೆಗಳೂ ಅವರಾಗಿಯೇ ಕೇಳಿಕೊಂಡದ್ದಲ್ಲ.ಒಂದು ಕಡೆ ಟೀಪು ಸುಲ್ತಾನ, ಇನ್ನೊಂದು ಕಡೆ ಕೊಡಗಿನ ಲಿಂಗಾಯಿತ ರಾಜರು. ಇಬ್ಬರೂ ಹೊರಗಿನವರೇ. ಆದರೂ ಇವರೆಲ್ಲ ತಮ್ಮ ಹಳ್ಳಿಯ ಮಾನ ಉಳಿಸಲು ಪಡೆಯಾಳುಗಳಾಗಿದ್ದರು.

ಹಾಗೆ ನೋಡಿದರೆ ಇವರು ಜೀವದಂತೆ ಪೂಜಿಸುವ ಈ ಭಗವತಿಯೂ ಮಲಯಾಳ ದೇಶದ ದೇವತೆ. ಈ ಭಗವತಿ ಇವರಿಗೆ ಒಲಿದು ಹೊರಗಿನಿಂದ ಬಂದವಳು.ಆ ಕಥೆಯನ್ನೂ ಇವರು ಹಾಡಿನಲ್ಲಿ ಹೇಳಿದರು.

ಸುಮಾರು ನೂರಾರು ವರ್ಷಗಳ ಹಿಂದೆ ಈ ಊರವರು ಎಂದಿನಂತೆ ಎತ್ತುಗಳ ಮೇಲೆ ಭತ್ತವನ್ನು ಏರಿಕೊಂಡು ಹುಲಿಗಳು ನೀರು ಕುಡಿಯುವ ಕೆರೆಯನ್ನು ದಾಟಿ ಕೇರಳದ ದೊಡ್ಡ ಪಟ್ಟಣವನ್ನು ತಲುಪಿ ಭತ್ತವನ್ನು ಮಾರಿ, ಬೆಲ್ಲವನ್ನೂ, ಉಪ್ಪನ್ನೂ ತೆಂಗಿನ ನಾರಿನ ಹಗ್ಗವನ್ನೂ ಹೇರಿಕೊಂಡು ವಾಪಾಸು ಬರುತ್ತಿದ್ದರಂತೆ.ದಾರಿಯಲ್ಲಿ ದೊಡ್ಡದೊಂದು ಹುಲ್ಲುಗಾವಲು.ಇವರು ಎತ್ತುಗಳನ್ನು ಹಗ್ಗ ಬಿಚ್ಚಿ ಮೇಯಲು ಬಿಟ್ಟು ತಾವೂ ವಿಶ್ರಮಿಸಿಕೊಂಡು ಹೊರಡಲು ನೋಡಿದರೆ ಒಂದು ಎತ್ತು ಮಾತ್ರ ಕಾಣಿಸಲೇ ಇಲ್ಲವಂತೆ.ಹುಡುಕಿ ನೋಡಿದರೆ ಕಾಡಿನ ನಡುವೆ ಭಗವತಿ ದೇಗುಲದ ಎದುರು ಅದು ಅಸಹಜವಾಗಿ ಕೆನೆಯುತ್ತಿತ್ತಂತೆ.ಕೆನೆಯುತ್ತಲೇ ಅವರನ್ನು ಹಿಂಬಾಲಿಸಿತಂತೆ.ಆಮೇಲೆ ಕಣಿ ಕೇಳಿದರೆ ಆ ಭಗವತಿಯೇ ಆ ಎತ್ತಿನ ಮೈಯನ್ನು ಹೊಕ್ಕು ನಿಮ್ಮೊಡನೆ ಬಂದು ನೆಲೆಗೊಳ್ಳುವೆ ಎಂದು ಹಿಂಬಾಲಿಸಿರುವುದಂತೆ.

2011-08-24_9893ನೂರಾರು ವರ್ಷಗಳ ಹಿಂದೆ ಹಿಂಬಾಲಿಸಿಕೊಂಡು ಬಂದ ಭಗವತಿಯ ಸಮ್ಮುಖದಲ್ಲಿ ಅವರು ಆ ಕಥೆಯನ್ನು ಹಾಡಾಗಿ ಹೇಳುತ್ತಿದ್ದರು.

ಅವರು ಹೇಳುತ್ತಿದ್ದಂತೆ ನಾನು ‘ಈಸ್ಟ್ ಹುಲಿಕೇರಿ’ಯ ಕುರಿತು ಯೋಚಿಸುತ್ತಿದ್ದೆ.ಹುಲಿಕೆರೆಯ ಪೂರ್ವಕ್ಕೆ ಒತ್ತೊತ್ತಾಗಿ ಮನೆಗಳನ್ನು ಕಟ್ಟಿಕೊಂಡು ಎಲ್ಲ ವರ್ಣಗಳ ಬಣ್ಣಗಳನ್ನು ಬಳಿದುಕೊಂಡಿರುವ ‘ಈಸ್ಟ್ ಹುಲಿಕೇರಿ’ಯಲ್ಲಿ ಬಹುತೇಕರು ಮುಸಲ್ಮಾನರು.ಒಂದು ಸಲ ಹೀಗೇ ತಿರುಗಾಡುತ್ತಾ ಅಲ್ಲಿಗೂ ನಾನು ಹೋಗಿದ್ದೆ.ಒಂದು ಕಾಲದಲ್ಲಿ ಹುಲಿಕೇರಿ ಒಂದೇ ಆಗಿತ್ತು ಎಂದು ಅವರಲ್ಲಿ ಒಬ್ಬ ಮುದುಕ ಹೇಳಿದ್ದ.

ಸುಮಾರು ನಾನೂರು ವರ್ಷಗಳ ಹಿಂದೆ ಟೀಪೂ ಸುಲ್ತಾನನು ಈ ಹುಲಿಕೇರಿಯ ಒಂದಿಷ್ಟು ಗಂಡಸರನ್ನು ಎಳೆದುಕೊಂಡು ಹೋಗಿದ್ದನಂತೆ.ಆತ ತೀರಿಹೋದ ಮೇಲೆ ಅವರು ಮುಸಲ್ಮಾನರಾಗಿ ತಿರುಗಿ ಬಂದರಂತೆ.ತಿರುಗಿ ಬಂದವರಿಗೆ ಹುಲಿಕೆರೆಯ ಪೂರ್ವದ ಕಡೆ ಪಾಲು ಕೊಟ್ಟು ನೀವು ಅಲ್ಲೇ ಇರಿ.ನಾವು ಇಲ್ಲಿ ಅಂದರಂತೆ.

ಅಂದಿನಿಂದ ಅವರು ಅಲ್ಲಿ ನಾವು ಇಲ್ಲಿ ಎಂದು ಆ ಮುದುಕ ಅಂದಿದ್ದ.

ಆ ಈಸ್ಟ್ ಹುಲಿಕೇರಿಯಲ್ಲಿ ಹಳೆಯ ಕಾಲದ ಒಂದು ಮಸೀದಿ ಇತ್ತು. ರಾತ್ರಿ ಹೊತ್ತು ಆ ಮಸೀದಿಯ ಅಂಗಳದಲ್ಲಿ ನಾನು ಮಲಗಬಹುದೇ ಎಂದು ಕೇಳಿದ್ದೆ.

‘ಬೇಡ ಮಗಾ.. ಅಲ್ಲಿ ಜಿನ್ನುಗಳ ಕಾಟ’ ಎಂದು ಆ ಮುದುಕ ಅಂದಿದ್ದ.

2010-11-03_2197ಆ ಜಿನ್ನುಗಳು ರಾತ್ರಿ ಹೊತ್ತು ಅಲ್ಲಿ ಯಾರನ್ನೂ ಇರಲು ಬಿಡುವುದಿಲ್ಲವಂತೆ.ನೀವೇನಾದರೂ ಗೊತ್ತಿಲ್ಲದೆ ಅಲ್ಲಿ ನಿದ್ರಿಸಿದರೆ ಬೆಳಗ್ಗೆ ಕಣ್ಣು ಬಿಟ್ಟಾಗ ಟಾರು ರಸ್ತೆಯಲ್ಲಿರುತ್ತೀರಂತೆ.ಜಿನ್ನುಗಳು ನಿಮ್ಮನ್ನು ಎತ್ತಿಕೊಂಡು ಬಂದು ರಸ್ತೆಯಲ್ಲಿ ಮಲಗಿಸಿ ಹೋಗುತ್ತದಂತೆ.ಎಚ್ಚರಿಸಿದ್ದ ಮುದುಕ ಇನ್ನೊಂದು ಸಲ ಹೋದಾಗ ತೀರಿಕೊಂಡಿದ್ದ.

ಆ ಮುದುಕನದೂ ಬೇರೆಯೇ ದೊಡ್ಡ ಕಥೆ. ಆತ ತನ್ನ ಪೂರ್ವಜರು ಮೋಸೆಸ್ಸನ ಕಾಲದಲ್ಲೇ ಇಸ್ರಾಯಿಲಿನಿಂದ ಬಂದವರು ಅನ್ನುತ್ತಿದ್ದ.

ಎಲ್ಲ ಕಡೆಯಿಂದ ತಪ್ಪಿಸಿಕೊಂಡು ಬಂದವರು ಇಲ್ಲಿ ಟೀಪುವಿನ ಕೈಯಲ್ಲಿ ಸಿಕ್ಕಿಕೊಂಡು ಬಿಟ್ಟೆವು ಅಂದಿದ್ದ.

ಹಾಗೆ ಅಂದ ಆ ಮುದುಕ ತಾನೂ ಸಾವಿನ ಕೈಯಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ಸಿಕ್ಕಿಕೊಂಡಿದ್ದ.

ಈ ಎಲ್ಲ ಕಥೆಗಳನ್ನು ಕೇಳಿ ವಾಪಾಸು ಬರುವಾಗ ದಾರಿಯಲ್ಲಿ ಕುಂಬಾರ ಕುಲದ ಮುದುಕನೊಬ್ಬ ಸಿಕ್ಕಿದ್ದ.ಈ ಮುದುಕನದೋ ಬೇರೆಯೇ ಕಥೆ.

‘ವೆಸ್ಟ್ ಹುಲಿಕೆರೆ’ಯ ಪಡೆಯಾಳೊಬ್ಬ ಪಿರಿಯಾಪಟ್ಟಣದ ಬಳಿ ಟೀಪೂವಿನ ಕೈಯಿಂದ ತಪ್ಪಿಸಿಕೊಂಡು ಅಲ್ಲಿದ್ದ ಕುಂಬಾರನ ಮನೆಯೊಂದನ್ನು ಹೊಕ್ಕನಂತೆ.ಅಲ್ಲೇ ಹಲವು ವರ್ಷ ಕಳೆದನಂತೆ.ನಂತರ ಆ ಕುಂಬಾರನನ್ನೂ ಕರೆದುಕೊಂಡು ಹುಲಿಕೆರೆಗೆ ಬಂದನಂತೆ.ಬಂದವನು ಆ ಕುಂಬಾರನಿಗೆ ಅಲ್ಲೇ ಮಡಿಕೆ ಮಾಡಿಕೊಂಡು ಬದುಕಿರು ಅಂದನಂತೆ.

ಆ ಮೂಲ ಕುಂಬಾರನ ಮಗನ ಮೊಮ್ಮಗನ ಮೊಮ್ಮಗನ ಮಗ ಈ ಮುದುಕ. ‘ಸ್ವಾಮೀ ನಾವು ಅಲ್ಲೇ ಮಡಿಕೆ ಮಾಡಿಕೊಂಡು ಸುಖವಾಗಿ ಇರಬಹುದಿತ್ತು.ಇಲ್ಲಿ ಬಂದು ಮಡಿಕೆಯೂ ಇಲ್ಲ ಮಣ್ಣೂ ಇಲ್ಲ’ಎಂದು ನಿಟ್ಟುಸಿರು ಬಿಟ್ಟ.

‘ಅಯ್ಯೋ 2011-08-24_9916 ಒಂದಲ್ಲಾ ಎರಡಲ್ಲಾ’ ಎಂದು ನಾನೂ ನನ್ನ ಪೂರ್ವಜರ ಕಥೆಗಳನ್ನು ಹೇಳಿ ಒಂದು ಕಾಲದಲ್ಲಿ ನಾನೂ ಕುಂಬಾರನಾಗಿದ್ದೆ ಎಂದು ನಂಬಿಸಿ ಬಂದೆ.

(ಅಕ್ಟೋಬರ್ ೨, ೨೦೧೧)

(ಫೋಟೋಗಳೂ ಲೇಖಕರವು)

Advertisements