ಚಂದಗಿರುವ ಮಡಿಕೇರಿಯ ಸಂಜೆಗತ್ತಲ ರಾಗ

2011-06-29_9005ಮಡಿಕೇರಿಯ ಸಂಜೆಗತ್ತಲ ಹೊತ್ತು. ನಿದ್ದೆಯಲ್ಲಿರುವಾಗಲೇ ಸುರಿದು ಹೋಗಿರುವ ಮಳೆ. ನಿದ್ದೆ ಹೋಗಲೆಂದು ಹಚ್ಚಿಟ್ಟಿದ್ದ ರಾಗವೊಂದು ಮುಗಿದು, ಅದರ ಮುಂದಿನ ರಾಗವೂ ಮುಗಿದು, ಸಂಜೆ ಆಕಾಶದ ಗುಲಾಬಿ ರಂಗು ಕಂಡು ಕಣ್ಣು ಬಿಡುತ್ತಿರುವಾಗ ಕೇಳುತ್ತಿರುವ ಇನ್ನೊಂದು ರಾಗ!

‘ಇನ್ನು ನಿನ್ನ ದಿನ ಶುರುವಾಯಿತು ನಾವು ಆಟ ಮುಗಿಸಿ ಕಾಲು ತೊಳೆದುಕೊಳ್ಳಲು ಹೋಗುತ್ತಿದ್ದೇವೆ’ ಎಂದು ಕತ್ತಲೆಯ ಅಂಗಳದಿಂದ ಉರಿಯುತ್ತಿರುವ ದೀಪಗಳ ಮನೆಗಳಿಗೆ ಮರಳುತ್ತಿರುವ ಮಕ್ಕಳ ಆ ದಿನದ ಕೊನೆಯ ಕೇಕೆಗಳ ಸದ್ದು. ಈ ಇರುಳು ಸುರಿಯಲಿರುವ ಇನ್ನೊಂದು ಮಳೆಗೆ ಕಾಯುತ್ತಲೇ ಪ್ರಣಯಕ್ಕೆ ಕರೆಯುತ್ತ ಜೋರಾಗಿ ಜಿರ್ ಜಿರ್ ಗುಟ್ಟುತ್ತಿರುವ ಸಾವಿರಾರು ಜೀರುಂಡೆಗಳು.

ನಗು ಬರುತ್ತಿತ್ತು.

2011-07-20_9544ಕಿರುಬೆರಳಿನ ಉಗುರಿನಷ್ಟಿರುವ ಜೀರುಂಡೆಯೊಂದರ ಸದ್ದು ಬೇಟದ ಹೊತ್ತಲ್ಲಿ ದೇಗುಲದ ಗಂಟೆ ಹೊಡೆದಂತೆ ಕೇಳಿಸುತ್ತಿರುತ್ತದೆ. ತನ್ನ ಸಮಸ್ತ ದೇಹವೆಲ್ಲವನ್ನೂ ಒಂದು ಸದ್ದನ್ನಾಗಿ ಮಾಡಿಕೊಂಡು ಒಂದು ಹೊತ್ತಿನ ಪ್ರೇಮಕ್ಕಾಗಿ ಅಸಹಾಯಕತೆಯಿಂದ ಮೊರೆಯಿಡುತ್ತಿರುವ ಈ ಜೀರುಂಡೆ. ಈ ಎಲ್ಲದರ ನಡುವೆ ಒಂದು ಬಾಗಿಲಿಂದ ಹೊಕ್ಕು ಇನ್ನೊಂದು ಬಾಗಿಲಿಂದ ಹೋಗುತ್ತಿರುವ ಮಿಂಚುಹುಳಗಳು. ಒಂದೊಂದು ಹುಳವೂ ಒಂದೊಂದು ದೀಪವಾಗಿ ಆ ಎಲ್ಲ ಹುಳಗಳೂ ದೀಪಸಾಗರಗಳಾಗಿ ಹೆಸರು ಗೊತ್ತಿಲ್ಲದ ಎದುರಿನ ಮೋಟುಮರವೊಂದರ ಗೆಲ್ಲುಗಳಲ್ಲಿ ಕುಳಿತು ಜಗತ್ತನ್ನೇ ಬೆಳಗುವಂತೆ ಜೀಕುತ್ತಿದ್ದವು.

‘ಎಷ್ಟು ಬೆಳಗುತ್ತೀರೋ ಬೆಳಗಿ. ಬೇಕೆಂದಲೇ ಕತ್ತಲು ಮಾಡಿಕೊಂಡಿರುವ ನನ್ನ ಈ ಕಿಟಕಿಯಿಂದ ನಿಮ್ಮ ಒಯ್ಯಾರವನ್ನು ನೋಡುತ್ತಿರುವೆ’ ಎಂದು ಅವುಗಳತ್ತ ನಗುತ್ತಿದ್ದೆ.

ಬೇಡಬೇಡವೆಂದರೂ ಇಷ್ಟು ಚಂದದ ಹೊತ್ತಲ್ಲಿ ಎದೆಯನ್ನೆಲ್ಲ ತುಂಬಿಕೊಳ್ಳುವ ಮಂದಹಾಸ.ಮೇಲೆ ತೊಳೆದಂತಿರುವ ಆಕಾಶದಲ್ಲಿ ಒಂದೊಂದಾಗಿ ಬಂದು ಕೂತುಕೊಳ್ಳುತ್ತಿರುವ ನನ್ನ ಪ್ರೀತಿಯ ನಕ್ಷತ್ರಗಳು. ‘ಈ ಇಲ್ಲಿ ಬೆಳಗುತ್ತಿರುವ ಮಿಂಚು ಹುಳುಗಳಿಗೂ ಮೇಲೆ ಮಿಂಚುತ್ತಿರುವ ನಿಮಗೂ ಒಂದೇ ಸಮನಾದ ಪ್ರೀತಿಯಲ್ಲಿ ಕೈಮುಗಿಯುತ್ತಿರುವೆ’ ಎಂದು ಆ ಎಲ್ಲ ತಾರೆಯರಿಗೆ ಕಣ್ತುಂಬಿಕೊಂಡು ನಮಿಸುತ್ತಿದ್ದೆ.

ದೇವರಿರುವುದಾದರೆ ಇಂತಹ ಹೊತ್ತಲ್ಲಿ ಮಾತ್ರ ಅನಿಸುತ್ತಿತ್ತು.

2011-06-30_9112ಸಂಜೆ ನಿದ್ದೆ ಹೋಗುವ ಮೊದಲು ಏನೋ ಸಂಕಟವೆನಿಸುತ್ತಿತ್ತು. ಅದನ್ನು ಮರೆಯಲು ನಿದ್ದೆ.ನಿದ್ದೆ ಬರಲು ಸಂಗೀತ. ಸಂಗೀತ ಕೇಳಲು ಬೇಕಾದ ಸಂಸ್ಕಾರ. ಸಂಸ್ಕಾರಕ್ಕೆ ಬೇಕಾದ ಮನೋಸಿದ್ಧತೆ, ಎಲ್ಲಕ್ಕೂ ಮಿಗಿಲಾದ ಪೂರ್ವ ಜನ್ಮದ ವಾಸನೆ!

‘ಅಯ್ಯೋ ದೇವರೇ ಅದು ಏನೂ ಇಲ್ಲದ ಈ ಪುಟಗೋಸಿಯು ನಿದ್ದೆ ಮಾಡುವುದಾದರೂ ಹೇಗೆ’ ಎಂದು ಸಿಟ್ಟುಮಾಡಿಕೊಂಡಿದ್ದೆ.

ಆ ಸಿಟ್ಟು ಬರಲೂ ಕಾರಣವಿತ್ತು. ಸಂಗೀತವೂ ಬರುವ, ಸಂಸ್ಕಾರವೂ ಇರುವ, ಸೌಂದರ್ಯದ ಖನಿಯಂತೆಯೂ ಕಾಣಿಸುವ ಅವಳು ಮಟಮಟ ಮಧ್ಯಾಹ್ನದ ಹೊತ್ತು ಅವಳ ಊರಿನ ಉರಿಬಿಸಿಲಿನ ನಡುವೆ ನಿಂತು ಒಂದೊಂದಾಗಿ ಅವಳ ಪಾಪಕೃತ್ಯಗಳನ್ನು ಮಕ್ಕಳಾಟದಂತೆ ನಿವೇದಿಸಿಕೊಳ್ಳುತ್ತಿದ್ದಳು.

ಗಂಡನಿಲ್ಲದ ಹೊತ್ತು ಗೆಳೆಯನ ಜೊತೆ ತಲೆ ತಗ್ಗಿಸಿ ಕುಳಿತುಕೊಂಡಿದ್ದು, ಅವನೊಡನೆ ನಾಚಿಕೊಂಡು ಮಲಗಿದ್ದು, ಅವನು ಅರ್ದದಲ್ಲೆ ಮುಗಿಸಿ ಹೊರಡುವಾಗ ವಿಷಣ್ಣನಾಗಿ ನಕ್ಕದ್ದು. ನಾನು ನಿನಗೆ ಸರಿಯಾದವನಲ್ಲ ಎಂದು ತಲೆ ಕೆರೆದುಕೊಂಡದ್ದು, ಇವಳಿಗೆ ನಗು ಬಂದದ್ದು, ಅವನ ಜುಟ್ಟು ಹಿಡಿದು ಕೆನ್ನೆಗೆ ಬಾರಿಸಿ ಹಣೆಗೆ ಮುತ್ತುಕೊಟ್ಟಿದ್ದು ಎಲ್ಲವನ್ನೂ ಒಂಚೂರೂ ಅಳುಕಿಲ್ಲದೆ ವಿವರಿಸುತ್ತಿದ್ದಳು.

‘ಅಲ್ಲ ಹೆಂಗಸೇ, ಇವೆಲ್ಲವನ್ನೂ ನನ್ನ ಬಳಿ ಏಕೆ ಒಪ್ಪಿಸುತ್ತಿರುವೆ. ನಿನಗೆ ಅಲ್ಲಿ ಬಿರು ಬಿಸಿಲಾದರೆ ಇಲ್ಲಿ ನನಗೆ ಮೋಡಗಟ್ಟಿರುವ ವರ್ಷಋತು. ನಾನು ಕಲ್ಲು ಬಂಡೆಯಂತೆ ಇವೆಲ್ಲವ ಕೇಳುತ್ತ ಕುಳಿತಿರಬೇಕೆಂದು ಯಾಕೆ ಬಯಸುತ್ತಿರುವೆ? ಹೋಗಿ ನಿನ್ನ ಕೆಲಸ ಮಾಡು. ನಿನ್ನ ಮೆಚ್ಚಿನ ಕುರಿಯ ಕಾಲಿನ ಸೂಪು ಮಾಡಿ ನಿನ್ನ ಗಂಡನಿಗೆ ಬಡಿಸು. ಆತನ ಆತ್ಮಕ್ಕೆ ಶಾಂತಿ ನೀಡು. ನನಗೋ ನಿದ್ದೆಬೇಕೆನಿಸುವುದು’ ಎಂದು ಬೈದಿದ್ದೆ.

‘ನೀವು ನಿಮ್ಮ ಸುತ್ತಮುತ್ತಲಿನ ಸಣ್ಣಮಟ್ಟಿಗಿನ ಕಥೆಗಾರರು. ಬರೇ ಕಥೆ ಬರೆದರೆ ಸಾಕೋ,ಕಥೆ ಕೇಳುವುದು ಬೇಡವೋ’ ಎಂದು ಕಿಲಕಿಲ ಗಾಜಿಗೆ ಗಾಜು ತಾಗಿದಂತೆ ನಕ್ಕು ಮಾತು ಮುಗಿಸಿದ್ದಳು.

2011-07-20_9565ಆ ಹೊತ್ತಲ್ಲಿ ಕಥೆ ಬರೆಯುವುದಕ್ಕಿಂತ ನಿದ್ದೆ ಹೋಗುವುದೇ ಲೇಸು ಅಂತ ಅನಿಸಿತ್ತು.

ಸದಾ ನೀಟಾಗಿ ತಲೆ ಬಾಚಿಕೊಂಡು ಬೈತಲೆ ತೆಗೆದು ನಡೆಯುವ ಅವಳ ಪ್ರಿಯಕರ, ಸದಾ ಗರಿಗರಿಯಾಗಿರುವ ಅವನ ಉಡುಪು. ‘ಹಾಹಾ ಮಗನೇ’ ಎಂದು ಮನದಲ್ಲೇ ಅಂದುಕೊಂಡು ಒಂದು ರೀತಿಯ ಸಂಕಟದಲ್ಲಿ ನನ್ನ ಸಂಸ್ಕಾರವನ್ನೂ, ಮೇಲಿನ ಭಗವಂತನನ್ನೂ ಬೈದುಕೊಂಡು ನಿದ್ದೆ ಹೋಗಲು ನೋಡಿದ್ದೆ. ನಿದ್ದೆ ಬರಲು ವರ್ಷಋತುವಿನ ಒಂದು ಹಾಡನ್ನೂ ಹಚ್ಚಿಟ್ಟಿದ್ದೆ.

ಈಗ ನೋಡಿದರೆ ಮಿಂಚುಹುಳಗಳ ನಕ್ಷತ್ರಪುಂಜಗಳೊಳಗಿಂದ ಕೇಳಿ ಬರುತ್ತಿರುವ ಜೀರುಂಡೆಗಳ ಆರ್ತಗಾನದ ನಡುವೆ ಜಗವೆಲ್ಲವೂ ಮೆಲ್ಲಗೆ ಮಸುಕಾಗುತ್ತಿದೆ. ಇಲ್ಲದೇ ಇರುವ ಏನೆಲ್ಲವೂ ಎಲ್ಲಿಂದಲೋ ಬಂದು ಕಣ್ಣಮುಂದೆ ಕೂರುತ್ತಿದೆ. ಸುತ್ತಿ ಸುಳಿದು ಬರುತ್ತಿರುವ ಒಂದು ತಂಗಾಳಿ. ಅದರ ಹಿಂದೆಯೇ ಲಟಕ್ಕೆಂದು ಮುರಿದ ಒಂದು ಕೋಲ್ಮಿಂಚು. ಅದರ ಹಿಂದೆಯೇ ಉರುಳುರುಳಿ ಬರುತ್ತಿರುವ ಗಂಡಸಿನ ದನಿಯಂತಹ ಗುಡುಗಿನ ಸದ್ದು. ಎಲ್ಲವನ್ನೂ ಆವರಿಸುತ್ತಿರುವ ಮಂಜು. ಹೀಗಾದರೆ ನಾ ಬರುವುದಿಲ್ಲ ಒಲ್ಲೆ ಎಂದು ತಿರುಗಿ ಹೋಗುತ್ತಿರುವ ಮಳೆ.

ಒಂದು ಹೊತ್ತು ಕಣ್ಣು ಮುಚ್ಚಿಕೊಂಡೆ. ‘ಮರಣವೆಂಬುದು ಬರುವುದಾದರೆ ಬರಲಿ ನಿನ್ನ ಪಾದದ ಕೆಳಗೆ’ ಎಂಬ ನನ್ನ ಎಂದಿನ ಸಾಲನ್ನು ಗೊಣಗಿಕೊಂಡೆ.

ಮಸುಕು ಮಸುಕು ಕತ್ತಲಲ್ಲಿ ಕಿಟಕಿಯ ಬಾಗಿಲನ್ನು ತೆರೆದರೆ ಒಂದು ಕಾಡು ನಿಂಬೆಯ ಗಿಡದಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟಿರುವ ಕರಟು ಕಾಯಿಗಳು. ಒಗರು ಒಗರಾಗಿದೆ ಎಂದು ಇಲ್ಲಿ ಯಾರೂ ಈ ಗಿಡವನ್ನು ಮುಟ್ಟುವುದಿಲ್ಲ.ಹಾಗಾಗಿ ಈ ಗಿಡದ ಗೆಲ್ಲುಗಳು ದಯವಿಟ್ಟು ನನ್ನನ್ನು ಮುಟ್ಟು ಎಂದು ನನ್ನ ಕಿಟಕಿಯಿಂದ ತೂರಿ ಬರಲು ನೋಡುತ್ತಿವೆ.

ನಾನು ಕಿಟಕಿ ಬಾಗಿಲು ತೆರೆದು ಅವುಗಳ ಎಲೆಗಳನ್ನು ನೇವರಿಸಿ ಒಂದು ಒಗಚು ನಿಂಬೆಯನ್ನು ಕಿತ್ತು ಲಿಂಬೂ ಟೀ ಮಾಡಿ ಕುಡಿದು ಬರೆಯುತ್ತಲೋ ಸಂಗೀತ ಕೇಳುತ್ತಲೋ ಕೀಟಲೆ ಮಾಡುತ್ತಲೋ ಕಾಲ ಕಳೆಯುತ್ತಿರುತ್ತೇನೆ.

2011-07-15_9316ಹಗಲು ಹೊತ್ತಲ್ಲಿ ಈ ನಿಂಬೆಯ ರೆಂಬೆಗಳು ಕೆಳಗೆ ಹಾದು ಹೋಗುವ ನನ್ನ ತಲೆ ಸವರುತ್ತಿರುತ್ತವೆ.

ಈಗ ಇಲ್ಲಿ ‘ಆದಿರಾತ್ ಪರ್ವತ ಭಯಾ…’ ಎಂದು ಯಾರೋ ಹಾಡುತ್ತಿದ್ದಾರೆ.

ಹೊರಗೆ ಮತ್ತೆ ಮಳೆ ಸುರಿಯುತ್ತಿರುವ ಸದ್ದು.

(೨೫ ಸೆಪ್ಟೆಂಬರ್, ೨೦೧೧)

(ಫೋಟೋಗಳೂ ಲೇಖಕರವು)

Advertisements