ಶಾಸ್ತ್ರೀಯ ಕನ್ನಡ ಮತ್ತು ಹಳೆಯ ಡಾರ್ಲಿಂಗ್

2011-01-19_4576‘ಕನ್ನಡ ಶಾಸ್ತ್ರೀಯ ಭಾಷೆ ಅಂತೆಲ್ಲಾ ಮಾತನಾಡಲಿಕ್ಕೆ ಕಷ್ಟ ಆಗುತ್ತದೆ. ದಯವಿಟ್ಟು ಇಂತಹದಕ್ಕೆಲ್ಲ ನನ್ನನ್ನು ಕರೆಯಬೇಡಿ’ ಎಂದು ಅವರಲ್ಲಿ ನಾನು ಗೋಗರೆಯುತ್ತಿದ್ದೆ. ಅವರಿಗೆ ನಾನು ಹೇಳುತ್ತಿದ್ದುದನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಏಕೆಂದರೆ ದೂರದ ಸಂಬಂಧದಲ್ಲಿ ಅವರು ನನಗೆ ಮಾವನಾಗಬೇಕಾಗಿತ್ತು.

ಆದರೆ ನನ್ನ ಮನಸಿನಲ್ಲಿದ್ದ ಸಂಕೋಚವು ಬೇರೆಯೇ ಆಗಿತ್ತು.
ಆ ಊರು ನಾನು ಪೋಲಿ ಪೋಲಿಯಾಗಿ ಅಲೆದ ಊರು. ಹಗಲೆಲ್ಲ ಮೀನು ಹಿಡಿದುಕೊಂಡು, ಇರುಳಿನ ಹೊತ್ತಲ್ಲಿ ಅವರಿವರ ಮನೆಯ ಬಾಗಿಲು ಬಡಿದು, ಸುಂದರಿಯರ ಕೈಹಿಡಿದು ಬೈಯ್ಯಿಸಿಕೊಂಡು ಅವರು ದೂರ ಮಾಡಿದಾಗ ಅತ್ತು ಕರೆದು ಮುಖ ಊದಿಸಿಕೊಂಡು ಓಡಾಡಿದ ಊರಾಗಿತ್ತು.

ಆ ದಾರಿಯಲ್ಲಿ ಸಿಗುವ ಗಿಡಮರಗಳೂ, ತೊರೆಗಳೂ, ಜಲಪಾತಗಳೂ, ಮಂಜೂ, ತಂಗಾಳಿಯೂ ಈಗಲೂ ಹಾಗೇ ಇರುವಾಗ ಯಾವ ಬಾಯಿಯಿಂದ ನಾನು ಶಾಸ್ತ್ರೀಯ ಕನ್ನಡ ಎಂದು ಮಾತನಾಡಲಿ ಎಂಬುದು ನನ್ನ ಹೆದರಿಕೆಯಾಗಿತ್ತು.

‘ಅದು ಬಿಟ್ಟು ಬೇರೆ ಯಾವುದಾದರೂ ವಿಷಯ ಇಲ್ಲವೇ ಮಾಮಾ? ಎಂದು ಅವರನ್ನು ಕೇಳಿದ್ದೆ. ‘ಉಳಿದದ್ದಕ್ಕೆಲ್ಲ ಜನ ಆಗಿದೆ, ಇದೊಂದೇ ಉಳಿದಿರುವ ವಿಷಯ ನೀನು ಮಾತನಾಡಬೇಕು’ ಎಂದು ಅವರು ವಿಷಯ ಮುಗಿಸಿ, ಬರಲೇಬೇಕೆಂದು ಹೇಳಿಬಿಟ್ಟಿದ್ದರು.

ಅವರ ಮಾತನ್ನು ನಾನು ಮೀರುವಂತಿರಲಿಲ್ಲ.

2011-05-18_8027ಏಕೆಂದರೆ ಅವರೇ ಸಣ್ಣದಿರುವಾಗ ನನಗೆ ಕಥೆ ಪುಸ್ತಕಗಳನ್ನು ಓದಲು ಕಲಿಸಿದ್ದರು. ಅವರು ಎಲ್ಲೋ ಕೇರಳದ ಕಾಮ್ರೇಡುಗಳ ಸಂಗ ಬೆಳೆಸಿಕೊಂಡು ಕೆಂಪು ಅಕ್ಷರದಲ್ಲೇ ನನಗೆ ಪತ್ರಗಳನ್ನು ಬರೆಯುತ್ತಿದ್ದರು. ನನ್ನ ಪೋಲಿ ಕಥೆಗಳು ಗೊತ್ತಾದಾಗ ಗಂಟೆಗಟ್ಟಲೆ ಎದುರು ನಿಲ್ಲಿಸಿಕೊಂಡು ಶಿಕ್ಷೆಯನ್ನೂ ಕೊಡುತ್ತಿದ್ದರು.

ಅವರು ಕೊಡುತ್ತಿದ್ದ ಶಿಕ್ಷೆಗಳಲ್ಲಿ ನನಗೆ ನೆನಪಿರುವುದು ಅವರು ನನ್ನ ಕಂಕುಳ ಒಳಗೆ ಕೈಹಾಕಿ ಜಿಗುಟುತ್ತಿದ್ದುದು. ಕಣ್ಣಿಂದ ನೀರು ಬರುವಷ್ಟು ಹೊತ್ತು ಜಿಗುಟಿ ಆಮೇಲೆ ಬಿಡುತ್ತಿದ್ದರು. ಆಗ ನನಗೆ ಅದೆಲ್ಲಾ ಗೊತ್ತಾಗುತ್ತಿರಲಿಲ್ಲ. ಈಗ ಅನ್ನಿಸುತ್ತಿದೆ. ಅವರೆಲ್ಲಾದರು ಕಾಮ್ರೇಡನಾಗಿಯೇ ಮುಂದುವರಿದಿದ್ದರೆ ವರ್ಗಸಮರದ ಒಂದು ಪ್ರಮುಖ ಅಸ್ತ್ರವನ್ನಾಗಿ ಈ ಜಿಗುಟುವುದನ್ನು ಬಳಸುತ್ತಿದ್ದರು ಎಂದು.

ಹಾಗೆ ಒಂದು ಕಣ್ಣಲ್ಲಿ ಸಂಕಟವನ್ನೂ ಇನ್ನೊಂದು ಕಣ್ಣಲ್ಲಿ ಕಿರುನಗುವನ್ನೂ ಹಿಡಿದಿಟ್ಟುಕೊಂಡು ಒಂಟಿಯಾಗಿ ಆ ಊರನ್ನು ಹಾದುಹೋಗುತ್ತಿದ್ದೆ. ಬೇಕೆಂತಲೇ ಎಲ್ಲವನ್ನೂ ಒಳಕ್ಕೆ ತುಂಬಿಕೊಳ್ಳುತ್ತಾ ನಿಧಾನಕ್ಕೆ ಚಲಿಸುತ್ತಿದ್ದೆ. ಏನು ಮಾತನಾಡುವುದು ಎಂಬ ಯೋಚನೆಯನ್ನೂ ಮಾಡುತ್ತಿದ್ದೆ.

ಅಷ್ಟು ಹೊತ್ತಿಗೆ ಆ ನದಿಯೂ, ಆ ಸೇತುವೆಯೂ ಬಂದಿತು.
ಆ ನದಿ ಒಂದು ಕಾಲದಲ್ಲಿ ಪರಮಸುಂದರಿಯರಾಗಿದ್ದ ನನ್ನ ಕಾವ್ಯಕನ್ನಿಕೆಯರು ಈಜಾಡುತ್ತಿದ್ದ ಜಾಗ. ಆ ಸೇತುವೆ ನಾವು ಹುಡುಗರಾಗಿದ್ದಾಗ ಹೊಡೆದಾಟ ನಡೆಸಿ ಸೋತುಹೋದವರನ್ನು ನೀರಿಗೆ ತಳ್ಳುತ್ತೇವೆಂದು ಹೆದರಿಸುತ್ತಿದ್ದ ಜಾಗ.

ಆ ಕಾಲದಲ್ಲಿ ನನ್ನ ಪರಮ ವೈರಿಯಾಗಿದ್ದ ಗೆಳೆಯನೊಬ್ಬನನ್ನು ಆ ಸೇತುವೆಯ ನಡುವೆ ನಿಲ್ಲಿಸಿ ಹೊಡೆದಿದ್ದೆ.

ನನಗೆ ಕುರಾನು ಓದಲು ಬರುತ್ತಿಲ್ಲ ಎಂದು ಹೀಯಾಳಿಸಿದ್ದಕ್ಕಾಗಿ ಅದು ಅವನಿಗೆ ನಾನು ನೀಡಿದ ಶಿಕ್ಷೆಯಾಗಿತ್ತು.

ನನಗೆ ನಮಾಜು ಮಾಡುವಾಗ ಅರಬಿ ಭಾಷೆಯಲ್ಲಿದ್ದ ಕುರಾನನ್ನು ಓದಲು ಬರುತ್ತಿರಲಿಲ್ಲ. ಅದಕ್ಕಾಗಿ ಸುಮ್ಮನೆ ಮಣಮಣ ಪಿಸಪಿಸ ಎಂದು ನಾನು ಪಿಸುಗುಟ್ಟುತ್ತಿದ್ದೆ.

ನನಗೆ ಕುರಾನು ಬರುವುದಿಲ್ಲ ಎಂದು ಅವನಿಗೆ ಗೊತ್ತಾಗಿ ಹೀಯಾಳಿಸಿದ್ದ.
DSC_0037ಉಪವಾಸದ ತಿಂಗಳಲ್ಲಿ ನಾವು ರಾತ್ರಿಯೆಲ್ಲಾ ನಮಾಜು ಮಾಡಬೇಕಾಗಿತ್ತು. ಡುಮ್ಮನಾಗಿದ್ದ ನನ್ನ ಪರಮವೈರಿ ಗೆಳೆಯ ನಿದ್ದೆ ತಾಳಲಾಗದೆ ಮಸೀದಿಯ ಹಾಸಿನ ಮೇಲೆ ನಿದ್ದೆ ಹೋಗುತ್ತಿದ್ದ.

ಆಗ ನಾವು ಉಳಿದವರು ನೂಲಿನ ತುದಿಗೆ ಉಪ್ಪಿನ ಹರಳನ್ನು ಕಟ್ಟಿ ಅವನ ತೆರೆದ ಬಾಯಿಗೆ ಇಳಿಸುತ್ತಿದ್ದೆವು.

ಅವನು ನಿದ್ದೆಯಲ್ಲೇ ಉಪ್ಪಿನ ರುಚಿಯನ್ನು ಚಪ್ಪರಿಸುತ್ತಾ, ನಾವು ಆ ನೂಲನ್ನು ಮೇಲಕ್ಕೆ ಎತ್ತುತ್ತಿದ್ದಂತೆ ನಿದ್ದೆಯಲ್ಲೇ ಎದ್ದು ಕೂತು, ನಾವು ಇನ್ನು ಮೇಲಕ್ಕೆ ಎಳೆದಂತೆ ಎದ್ದು ನಿಂತು, ನಾವು ಪೂರ್ತಿ ಹೊರಕ್ಕೆ ಎಳೆದರೆ ನಿದ್ದೆಯಲ್ಲೇ ದೊಪ್ಪೆಂದು ಬಿದ್ದು ಹೋಗುತ್ತಿದ್ದ.

ಕುರಾನಿನ ವಾಕ್ಯಗಳನ್ನು ಬಾಯಿಪಾಠ ಮಾಡಿಕೊಂಡಿದ್ದರೂ ಆತನಿಗೆ ನಿದ್ದೆಯನ್ನು ಮಾತ್ರ ನಿಗ್ರಹಿಸಲು ಬರುವುದಿಲ್ಲ ಎಂದು ನಾವು ನಗುತ್ತಿದ್ದೆವು.

DSC_0174ಹಾಗೇ ಮುಂದಕ್ಕೆ ಹೋದರೆ ಚಡಾವಿನ ತಿರುವಿನಲ್ಲಿ ನಮ್ಮ ಬಾಲ್ಯಕಾಲದ ಡಾರ್ಲಿಂಗ್ ವಾಲಾಡಿಕೊಂಡು ಬರುತ್ತಿದ್ದಳು.

ಒಂದು ಕಾಲದಲ್ಲಿ ದೂಪದ ಮರದಂತೆ ಕಟ್ಟು ಮಸ್ತಾಗಿದ್ದ ಈಕೆ ಈಗ ಸುಕ್ಕುಗಟ್ಟಿ, ಬಿರುಕುಬಿಟ್ಟು ಆದರೂ ಅದೇ ಮಾದಕ ಭಂಗಿಯಲ್ಲಿ ನಡೆದು ಬರುತ್ತಿದ್ದಳು.

ಅವಳ ನಡೆತದಿಂದಲೇ ಅವಳು ಇನ್ನೂ ಕುಡಿತವನ್ನು ಬಿಟ್ಟಿಲ್ಲ ಎಂದು ಗೊತ್ತಾಗುತ್ತಿತ್ತು.
ನಾವು ಆಗಿನ ಕಾಲದಲ್ಲೇ ಬೆಲೆಬಾಳುತ್ತಿದ್ದ ಕರಿಮೆಣಸನ್ನೂ, ಗೇರುಬೀಜವನ್ನೂ ನಮ್ಮ ನಮ್ಮ ತೋಟದಿಂದ ಕದ್ದು ಮಾರಿ ಇವಳ ಕುಡಿತಕ್ಕೆ ಕೈಗಡ ನೀಡುತ್ತಿದ್ದೆವು. ಅವಳಿಗೆ ಸಾಲ ಮನ್ನಾವನ್ನೂ ಮಾಡುತ್ತಿದ್ದೆವು. ಅವಳು ಅದಕ್ಕೆ ಸಣ್ಣ ಕೃತಜ್ಞತೆಯನ್ನೂ ತೋರಿಸದೆ ಇರುಳಲ್ಲಿ ಬೆಳೆದ ಗಂಡಸರ ಸಂಗ ಮಾಡುತ್ತಿದ್ದಳು.

ಸಿಟ್ಟು ಬಂದು `ಸಾಲಮನ್ನಾ ರದ್ದು ಮಾಡಿ ಬೇರೆ ಯಾವ ಬಗೆಯಲ್ಲಾದರೂ ಆ ಸಾಲವನ್ನು ತೀರಿಸು’ ಎಂದು ಕೇಳಿದರೆ, ‘ಇಲ್ಲ ಮಕ್ಕಳೇ ನನಗೆ ಜ್ವರ, ವಾಂತಿ, ಬೇಧಿ’ ಅಂತೆಲ್ಲಾ ಕಾರಣಗಳನ್ನು ನೀಡಿ ಅವಳಿಂದ ನಮ್ಮನ್ನು ಕಾಪಾಡುತ್ತಿದ್ದಳು.

DSC_0112ಒಮ್ಮೆ ನಾವು ಹರಿದುಹೋದ ಇಪ್ಪತ್ತು ರೂಪಾಯಿಯ ನೋಟೊಂದನ್ನು ಗೊತ್ತಾಗದ ಹಾಗೆ ಅಂಟಿಸಿ ಇವಳಿಗೆ ಸಾಲ ಕೊಟ್ಟಿದ್ದೆವು. ಆ ಮೇಲೆ ಆ ಸಾಲ ವಾಪಸ್ಸು ಮಾಡಲು ಇವಳನ್ನು ಕಾಡಿದ್ದೆವು.

ಆಗಲೂ ಅವಳು ಹುಡುಗರಾದ ನಮ್ಮಿಂದ ತಪ್ಪಿಸಿ ಗಂಡಸರ ಮೊರೆ ಹೋಗಿದ್ದಳು.

ಕೇಳಿದರೆ ನಾನಾ ಸ್ತ್ರೀ ಸಹಜ ಕಾರಣಗಳನ್ನು ಹೇಳಿದ್ದಳು.

ಈಗ ನೋಡಿದರೆ ಟ್ರಾಯ್ ದೇಶದ ಪರಮ ಸುಂದರಿಯಾದ ಮುದುಕಿ ಹೆಲೆನ್‌ಳಂತೆ ನಮ್ಮ ಹಳೆಯ ಡಾರ್ಲಿಂಗ್ ನಡೆದು ಬರುತ್ತಿದ್ದಳು. ನಾನು ವಾಹನ ನಿಲ್ಲಿಸಿ ಅವಳ ಮುಂದೆ ನಿಂತು ’ನಾನು ಯಾರು ಗೊತ್ತಾಯಿತಾ’ ಎಂದು ಕೇಳಿದೆ.
‘ಓಹೋ ನೀವಾ’ ಎಂದು ಗಹಗಹಿಸಿ ನಕ್ಕಳು.

ನಿಜಕ್ಕೂ ಅವಳಿಗೆ ನಾನು ಯಾರು ಎಂದು ಗೊತ್ತಾಗದೆ ಬೇರೆ ಯಾರೋ ಎಂದು ತಿಳಿದುಕೊಂಡು ‘ಓ ನೀವಾ’ ಎಂದು ನಕ್ಕಿದ್ದಳು.

‘ನನ್ನ ಮಗಳೂ ತೀರಿ ಹೋದಳು ಹೇಗೆ ಎಂದು ಗೊತ್ತಿಲ್ಲ’ ಎಂದು ಕಣ್ಣು ಒರೆಸಿಕೊಂಡಳು.
‘ನನಗೆ ಚಾ ಕುಡಿಯಲು ಕಾಸು ಕೊಡು’ ಎಂದಳು.

ನಾನು ಹರಿಯದಿರುವ ಇಪ್ಪತ್ತರ ನೋಟನ್ನು ಅವಳಿಗೆ ಕೊಟ್ಟು ‘ಈಗ ಗೊತ್ತಾಯಿತ್ತಾ’ ಎಂದು ಕೇಳಿದೆ.

‘ಓ ನೀವಾ? ನಾನು ಅವರು ಅಂತ ತಿಳಕೊಂಡಿದ್ದೆ’ ಎಂದು ಪುನಃ ನಕ್ಕಳು.

ಆಗಲೂ ಅವಳಿಗೆ ನಾನು ಯಾರು ಎಂದು ಗೊತ್ತಾಗಲಿಲ್ಲ.

‘ಇಲ್ಲೇ ಕನ್ನಡ ಶಾಸ್ತ್ರೀಯ ಭಾಷೆ ಎಂದು ಮಾತನಾಡಲು ಹೋಗುತ್ತಿರುವೆ’ ಎಂದು ಕಣ್ಣು ಮಿಟುಕಿಸದೆ.

‘ಓ ಹಾಗಾ’ ಎಂದು ತುಳುವಿನಲ್ಲಿ ಇನ್ನೊಮ್ಮೆ ನಕ್ಕಳು. ‘ಸರಿ ಡಾರ್ಲಿಂಗ್’ ಎಂದು ಅಲ್ಲಿಂದಲೂ ಹೊರಟೆ.

ಮುಂದೆ ತಗ್ಗಿನಲ್ಲಿ ಆ ಸಣ್ಣಗಿನ ತೊರೆ ಹಾಗೇ ಹರಿಯುತ್ತಿತ್ತು. ಅದರ ಪಕ್ಕದಲ್ಲೇ ಮುಳಿಹುಲ್ಲು ಬೆಳೆಯುವ ಹುಲ್ಲುಗಾವಲು.

ಬೆಳಗೆ ಶಾಲೆಗೆ ಹೋಗುವಾಗ ಅದು ಬಿಸಿಲಲ್ಲಿ ಹೊಳೆದು ಸ್ವರ್ಗದ ಹಾಗೆ ಕಾಣಿಸುತ್ತಿತ್ತು. ಅದನ್ನು ಕಂಡು ಕನ್ನಡದಲ್ಲಿ ಕವಿತೆ ಬರೆದಿದ್ದೆ.

ಆಗ ನನಗೆ ಹದಿನಾಲ್ಕು ವರ್ಷ ವಯಸ್ಸು.

DSC_0038ಹುಡುಗಿಯರ ಮುಂದೆ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗಲು ನಾಚುಗೆಯಾಗುತ್ತಿದ್ದ ಕಾಲ.

ಅದು ನನ್ನ ಮೊದಲ ಕವಿತೆಯಾಗಿತ್ತು. ಅದನ್ನು ಎಲ್ಲರ ಮುಂದೆ ಓದಿದಾಗ ಪಕ್ಕದ ಬೆಂಚಲ್ಲಿ ಕೂತಿದ್ದ ಹುಡುಗಿಯೊಬ್ಬಳು ಸಿಟ್ಟಲ್ಲಿ ಕೆನ್ನೆ ಊದಿಸಿಕೊಂಡಿದ್ದಳು. ಆಗಲೂ ಸಿಕ್ಕಾಪಟ್ಟೆ ಗಾಬರಿಯಾಗಿತ್ತು.

‘ದೇವರೇ ನಮ್ಮ ಕಾಲದಲ್ಲಿ ಕನ್ನಡ ಇನ್ನೂ ಶಾಸ್ತ್ರೀಯ ಭಾಷೆಯಾಗಿರಲಿಲ್ಲ. ಹಾಗೇನಾದರೂ ಆಗಿದಿದ್ದರೆ, ಈ ಪೋಲಿತಿರುಗುವುದನ್ನೂ, ಕವಿತೆ ಬರೆಯುವುದನ್ನೂ, ಸಾಲ ಕೊಡುವುದನ್ನೂ, ನಮಾಜನ್ನೂ, ಹೊಡೆದಾಟಗಳನ್ನೂ ಏಕಕಾಲದಲ್ಲಿ ಮಾಡಲು ಹುಡುಗರಾದ ನಮಗೆ ಆಗುತ್ತಿತ್ತೇ? ಎಂದು ಮುಂದಕ್ಕೆ ಹೋದೆ.

(೧೮ ಸೆಪ್ಟೆಂಬರ್, ೨೦೧೧)

(ಫೋಟೋಗಳೂ ಲೇಖಕರವು)

Advertisements