ರೇಡಿಯೋ ನೇರ ಪ್ರಸಾರದಲ್ಲಿ ಮಂದಣ್ಣ ಅರೆಸ್ಟಾದ ನೈಜ ಕಥೆ

2011-01-05_4037ಮಲೆ ಕುಡಿಯರ ಮನೆಯೊಂದರಲ್ಲಿ ರಾತ್ರಿಯೆಲ್ಲಾ ಕಥೆ ಕೇಳುತ್ತಾ ಕುಳಿತಿದ್ದೆ. ಬೆಟ್ಟದ ತುದಿಯಲ್ಲಿ ಗಾಳಿ ಹುಯ್ಯಲಿಡುತ್ತಿತ್ತು. ನಕ್ಷತ್ರಗಳು ದೀವಟಿಕೆಗಳಂತೆ ಗೋಚರಿಸುತ್ತಿದ್ದವು.ಹೊಟ್ಟೆಯಲ್ಲಿ ಮೊಟ್ಟೆ ಇರುವ ನಾಟಿ ಹೇಂಟೆ ಕೋಳಿಯೊಂದನ್ನು ಹಿಡಿದು ತರಲು ಹೋಗಿದ್ದ ಮಂದಣ್ಣ ಯಾಕೆ ಇನ್ನೂ ಬಂದಿಲ್ಲ ಎಂದು ಆತಂಕದಿಂದ ನಾವೆಲ್ಲ ಕಾಯುತ್ತಿದ್ದೆವು.

ಮಂದಣ್ಣ ಸಂಜೆ ನಾಲ್ಕರಿಂದಲೇ ನಮ್ಮ ಜೊತೆಗಿದ್ದ.ಅವನ ಮುಖದ ಮೇಲಿನ ಗೀರುಗಾಯಗಳು, ಉಡುಪಲ್ಲಿ ಸಿಕ್ಕಿಕೊಂಡಿದ್ದ ನುಗ್ಗು ಮುಳ್ಳುಗಳಿಂದಲೇ ಅವನ ಅದುವರೆಗಿನ ಜೀವನ ಪ್ರಮಾದಗಳು ಗೋಚರಿಸುತ್ತಿದ್ದವು. ಅವನ ಕೈಯಲ್ಲಿ ಹೊಗೆಹಿಡಿದು ಕರಟಿಹೋದಂತಿರುವ ರೆವಿನ್ಯೂ ಇಲಾಖೆಯ ಹಲವು ಕಾಗದ ಪತ್ರಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಯಾರೂ ಕೇಳಿರದಿದ್ದರೂ ಅವನು ಅವುಗಳನ್ನು ಹಿಡಿದುಕೊಂಡು ಬಂದಿರುವ ರೀತಿ ನಗು ತರಿಸುವಂತಿತ್ತು. ಅವುಗಳೆಲ್ಲಾ ಆ ಪ್ರದೇಶದ ಜಮಾಬಂದಿಗಳೂ, ಅರಣ್ಯ, ಪೈಸಾರಿ ಜಾಗಗಳ ಗಡಿರೇಖೆಗಳೂ ಆಗಿದ್ದವು. ಅವನು ಆ ಪ್ರದೇಶದ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷನಾಗಿರುವುದನ್ನು ಒತ್ತಿಹೇಳಲು ಆ ಕಾಗದ ಪತ್ರಗಳು ಗಾಳಿಯಲ್ಲಿ ಪಟಪಟನೆ ಹಾರುತ್ತಿದ್ದವು.

2011-01-04_4104ಅಂತಹ ಮಂದಣ್ಣ ತನ್ನ ಕೈಯಲ್ಲಿ ಆ ಕಾಗದ ಪತ್ರಗಳನ್ನು ಅವುಚಿ ಹಿಡಿದುಕೊಂಡು ನಮ್ಮನ್ನು ಬೆಟ್ಟ ಹತ್ತಿಸಿಕೊಂಡು ರಾತ್ರಿ ಕತ್ತಲಾಗುವವರೆಗೆ ಆ ಸೀಮೆಯ ಒಂದೊಂದೇ ಒಂಟಿಮನೆಗಳ ದಣಪೆ ಬಾಗಿಲುಗಳನ್ನು ತೆರೆದು, ಕೆಲವೆಡೆಗಳಲ್ಲಿ ಬೇಲಿ ಹಾರಿಸಿ, ಸಿಂಹಗಳಂತೆ ಓಡಿ ಬರುವ ಬೇಟೆನಾಯಿಗಳನ್ನು ಬೈದು ಸುಮ್ಮನಾಗಿಸಿ ಎಲ್ಲರ ಪರಿಚಯ ಮಾಡಿಕೊಟ್ಟಿದ್ದ.

ನಾವು ಮನೆಗಳನ್ನು ತಿರುಗುತ್ತಾ ಹೋದಹಾಗೆ ನನಗೆ ಈ ಮಂದಣ್ಣನ ಕೆಲವು ಜೀವನ ವಿವರಗಳೂ ಗೊತ್ತಾಗುತ್ತಾ ಹೋದವು. ಮೊದಲನೆಯದಾಗಿ ಮಂದಣ್ಣನ ಮ್ಯಾರೇಜು ಜೀವನವು ಯಾಕೋ ಸರಿಯಾಗಿಲ್ಲ ಎಂಬುದು. ಏಕೆಂದರೆ ಎಲ್ಲ ಮನೆಗಳಿಗೂ ನಮ್ಮನ್ನು ಸುತ್ತಾಡಿಸಿದ ಮಂದಣ್ಣ ತನ್ನ ಮನೆ ಮಾತ್ರ ಯಾರೂ ಹತ್ತಲಾರದ ಗುಡ್ಡವೊಂದರ ಮೇಲಿರುವುದೆಂದೂ, ಅಲ್ಲಿ ಹೋಗಬೇಕಾದರೆ ಕೆಸರು ಗದ್ದೆ ದಾಟಬೇಕೆಂದೂ, ಕಳೆದ ವಾರವಷ್ಟೇ ಎತ್ತೊಂದು ಆ ಕೆಸರಲ್ಲಿ ಸಿಕ್ಕಿ ಸತ್ತು ಹೋಯಿತೆಂದೂ ತನ್ನ ಸಂಸಾರದ ಕಷ್ಟಗಳನ್ನು ಪ್ರತಿಮೆಗಳ ಮೂಲಕ ವಿವರಿಸುತ್ತಿದ್ದ.

ಅವನ ಪ್ರತಿಮೆಗಳ ಜಾಡುಹಿಡಿದು ಪ್ರಶ್ನೆಗಳನ್ನು ಕೇಳುತ್ತಾ ಕತ್ತಲಲ್ಲಿ ಕಲ್ಲುಗಳನ್ನೂ, ಕಾಡುಬಳ್ಳಿಗಳನ್ನೂ ಎಡವುತ್ತಾ ಸಾಗುತ್ತಿದ್ದ ನನ್ನ ಕಷ್ಟವನ್ನು ಅರಿತ ಅವನು ‘ಸಾರ್, ಈ ಕಾಲದಲ್ಲಿ ಗಂಡಸರ ಮಾತನ್ನು ಹೆಂಗಸರು ಎಲ್ಲಿ ಕೇಳುತ್ತಾರೆ. ಎಲ್ಲ ಕಡೆಯೂ ಸ್ತ್ರೀಶಕ್ತಿ ಬಂದು ಗಂಡಸರ ಪಾಡು ಯಾರಿಗೂ ಬೇಡ’ ಅಂದುಬಿಟ್ಟಿದ್ದ.

2011-01-04_4112ಮಂದಣ್ಣನ ಸಾಮಾಜಿಕ ಜೀವನವೂ ಯಾಕೋ ಆತನ ಸಾಂಸಾರಿಕದಂತೆಯೇ ಯಡವಟ್ಟಾಗಿದೆ ಎಂದು ನನಗೆ ಅರಿವಾಗಿದ್ದು ಆತನು ಊರು ಪರಿಚಯ ಮಾಡಿಕೊಡುತ್ತಾ ಕೆಲವು ಒಂಟಿಮನೆಗಳು ಬಂದಾಕ್ಷಣ ಕ್ಯಾಕರಿಸಿ ಕೆಮ್ಮಿ ‘ಸಾರ್. ಅಲ್ಲಿ ಸರಿಯಿಲ್ಲ. ಅವರಿಗೆ ತಲೆ ಸರಿಯಿಲ್ಲ, ಹುಚ್ಚುನಾಯಿಗಳ ಹಾಗೆ ಕಚ್ಚಲು ಬರುತ್ತಾರೆ’ ಎಂದು ನಮ್ಮನ್ನು ಹೆದರಿಸುತ್ತಿದ್ದ ರೀತಿಯಿಂದ.

‘ಹೆದರಬೇಡ ಮಂದಣ್ಣಾಎಂದು ನಾನೇ ಅವನ ಬೆನ್ನು ತಟ್ಟಿ ಆ ಮನೆಗಳೊಳಕ್ಕೆ ಹೋಗುತ್ತಿದ್ದೆ.

ನೋಡಿದರೆ ಆ ಮನೆಗಳವರೂ ಎಲ್ಲರ ಹಾಗೆ ಸ್ವಲ್ಪ ಒಳ್ಳೆಯವರೂ, ಸ್ವಲ್ಪ ಕೆಟ್ಟವರೂ, ಬಹಳ ತಮಾಷೆಗಾರರೂ ಆಗಿದ್ದರು. ಅವರಲ್ಲಿ ಕೆಲವರು ಮಂದಣ್ಣನನ್ನು ಮೊದಲು ಕುಹಕದಲ್ಲಿ ನೋಡಿದರೂ ಆನಂತರ ನನ್ನೊಡನೆ ತಮಾಷೆಯಲ್ಲಿ ಸೇರಿಕೊಂಡು ಅವನನ್ನೂ ಗೇಲಿಮಾಡುತ್ತಾ ಸರಿ ಆಗಿದ್ದರು.

ಈ ತಮಾಷೆ ಮಾತುಕತೆಗಳಲ್ಲಿ ಗೊತ್ತಾದ ಹಲವು ರಹಸ್ಯಗಳಲ್ಲಿ ಒಂದನ್ನು ಇಲ್ಲಿ ಹೇಳುತ್ತೇನೆ.

ಅದೇನೆಂದರೆ ಈ ಮಂದಣ್ಣನು ತನ್ನ ನೆಂಟನೇ ಆದವಳೊಬ್ಬಳ ಹಸುವಿಗೆ ವಿಷಹಾಕಿ ಸಾಯಿಸಿದ್ದು ಮತ್ತು ಆ ವಿಷಯ ಪಂಚಾಯ್ತಿಗೆ ಹೋಗಿ ಮಂದಣ್ಣನು ಪರಿಹಾರ ಕಟ್ಟಲಾಗದೇ ಕಾಡಲ್ಲಿ ಅಡಗಿಕೊಂಡು ಆತನ ಹೆಂಡತಿಯೇ ಈಗಲೂ ಕಂತಲ್ಲಿ ಆ ಪರಿಹಾರ ಕಟ್ಟಲು ಹೆಣಗುತ್ತಿರುವುದು.

2011-01-04_4107ಇಂತಹ ಮಂದಣ್ಣನ ಇಂತಹ ಹಲವಾರು ಕಥೆಗಳನ್ನು ಕೇಳುತ್ತಾ, ಆತನು ಹಿಡಿದುಕೊಂಡು ಬರಬಹುದಾದ ಹೊಟ್ಟೆಯಲ್ಲಿ ಮೊಟ್ಟೆ ಇರುವ ನಾಟಿ ಹೇಂಟೆಕೋಳಿಗಾಗಿ ಕಾಯುತ್ತಾ ನಾವೆಲ್ಲ ಅನ್ನಬೇಯುತ್ತಿದ್ದ ಒಲೆಯ ಮುಂದೆ ಕುಳಿತಿದ್ದೆವು. ಅಷ್ಟರಲ್ಲಿ ಆ ಮನೆಯಲ್ಲಿ ಇನ್ನಷ್ಟು ನೆಂಟರೂ ನೆರೆಯವರೂ ಸೇರಿಕೊಂಡು ಅವರ ಸಮಯ ಕಳೆಯಲು ನಾನೂ ಅವರಿಗೆ ಕೆಲವು ತಮಾಷೆಗಳನ್ನೂ ಹೇಳುತ್ತಾ, ನಡುನಡುವೆ
ಹೊರಬಂದು ಆಕಾಶದಲ್ಲಿ ದೇವತೆಗಳಂತೆ ಮಿನುಗುತ್ತಿದ್ದ ನಕ್ಷತ್ರಗಳನ್ನು ನೋಡಿ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೆ.

ಸ್ವಲ್ಪ ಹೊತ್ತಲ್ಲಿ ಮಂದಣ್ಣ ತನ್ನ ಶರ್ಟಿನೊಳಗಡೆ ಹೇಂಟೆಯೊಂದನ್ನು ತುರುಕಿಸಿಕೊಂಡು ತಂದ. ಆ ರಾತ್ರಿಯಲ್ಲಿ, ಆ ಕುಳಿರಿನಲ್ಲಿ, ಆ ಒಲೆಯ ಬೆಂಕಿಯ ಬೆಳಕಿನಾಟದಲ್ಲಿ ಮಂದಣ್ಣ ಆ ಕೋಳಿಯನ್ನು ತಂದ ರೀತಿ ಅನನ್ಯವಾಗಿತ್ತು. ಬೇರೆ ಬೇರೆ ಕಾಲದಲ್ಲಿ ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ರೀತಿಯಲ್ಲಿ ಕೋಳಿಗಳನ್ನು ಹಿಡಿಯುವುದನ್ನೂ ಕೊಲ್ಲುವುದನ್ನೂ ಕಂಡಿರುವ ನಾನು ಆ ಇರುಳು ಮಂದಣ್ಣ ಕೋಳಿ ತಂದ ರೀತಿಯನ್ನು ಜೀವ ಇರುವವರೆಗೆ ಮರೆಯುವ ಹಾಗಿಲ್ಲ.

ಮಂದಣ್ಣ ಆ ಹೇಂಟೆ ಕೋಳಿಯನ್ನು ತನ್ನ ಅಂಗಿಯೊಳಗೆ ಹೊಟ್ಟೆಯೊಳಗೆ ಎಂಬಂತೆ ಅಡಗಿಸಿಕೊಂಡು ತಂದಿದ್ದ. ಮೌನವಾಗಿ ಅದನ್ನು ಕೊಂಚಕೊಂಚವೇ ಹೊರಗೆಳೆದು ತೆಗೆದ. ಆ ಹೇಂಟೆಯೂ ಮಂದಣ್ಣನ ಅಂಗಿಯೊಳಗಿಂದ ಬರುವಾಗ ಮೌನವಾಗಿತ್ತು. ಕತ್ತು ಮುರಿದು ಸಾಯುವಾಗ ಮಾತ್ರ ಆ ಹೇಂಟೆ ಕೊಂಚ ಸದ್ದು ಮಾಡಿತ್ತು ಅಷ್ಟೇ. ಆದರೆ ಮಂದಣ್ಣ ಮಾತ್ರ ಆನಂತರ ಬಹಳ ರಾತ್ರಿಯವರೆಗೆ ಬಹಳ ಕಥೆಗಳನ್ನು ಹೇಳಿದ್ದ.

2011-01-05_4041ಅದೆಲ್ಲಾ ಇರಲಿ ಬಿಡಿ. ಈಗ ಸಮಯವಿಲ್ಲ. ಈಗ ಹೇಳಬೇಕಾಗಿರುವುದು ಕಥೆಯ ಅಂತ್ಯ.

ಮಾರನೆಯ ದಿನ ಬೆಳಗೆ ಆ ಊರಿನಿಂದ ರೇಡಿಯೋದಲ್ಲಿ ನೇರಪ್ರಸಾರವಿತ್ತು. ಆ ಊರಿನ ಎಲ್ಲರೂ ಹೊಳೆಯುತ್ತಿರುವ ಚುಮುಚುಮು ಬಿಸಿಲಿನಲ್ಲಿ ರೇಡಿಯೋದಲ್ಲಿ ಮಾತನಾಡಿದ್ದರು. ಚಂದವಿರುವ, ಎತ್ತರವಿರುವ ಹಸಿರು ಬೆಟ್ಟವೊಂದರ ಮೇಲಿನಿಂದ ನೇರಪ್ರಸಾರ.

ಆ ಊರಿನ ಮುದುಕರೂ ಹೆಂಗಸರೂ ಮಕ್ಕಳೂ ತಮ್ಮ ಅತ್ಯುತ್ತಮ ಉಡುಪುಗಳನ್ನು ಹಾಕಿಕೊಂಡು ಹಬ್ಬದಂತೆ ಖುಷಿಯಲ್ಲಿ ರೇಡಿಯೋದಲ್ಲಿ ಹಾಡಿ ಮಾತಾಡಿ ಕುಣಿದು ಕುಪ್ಪಳಿಸುತ್ತಿದ್ದರು. ಮಂದಣ್ಣನೂ ತನ್ನ ಶಕ್ತ್ಯಾನುಸಾರ ಮಾತನಾಡಿದನು. ಅರಣ್ಯವಾಸಿಗಳ ಅರಣ್ಯಹಕ್ಕುಗಳ ಕುರಿತು ತುಂಬಾ ಚೆನ್ನಾಗಿ ಮಾತನಾಡಿ ನಾನು ಆತನ ಮಾತುಗಳ ನಂತರ ಎಲ್ಲರಿಗೂ ನಮಸ್ಕಾರ ಹೇಳಿ, ಮುಂದಿನ ವಾರ ಇನ್ನೊಂದು ಊರಿನಿಂದ ಮಾತನಾಡುವುದಾಗಿ ಕೇಳುಗರಿಗೆ ಬಾಯ್ ಬಾಯ್ ಹೇಳಿ ಒಣಗಿದ್ದ ಗಂಟಲನ್ನು ಸರಿಪಡಿಸುತ್ತಿದ್ದೆ.

2011-01-05_4044ಅಷ್ಟು ಹೊತ್ತಿಗೆ ಸರಿಯಾಗಿ ನಾನು ಅದುವರೆಗೆ ನೋಡಿರದಿದ್ದ ಮಂದಣ್ಣನ ಹೆಂಡತಿ ಪೋಲೀಸನೊಬ್ಬನನ್ನು ಕರೆದುಕೊಂಡು ಬಂದಳು. ಬೆಟ್ಟ ಹತ್ತಿ ಸುಸ್ತಾಗಿದ್ದ ಚಿಗುರು ಮೀಸೆಯ ಪೋಲೀಸನೊಬ್ಬನು, ‘ಸಾರ್, ನೇರಪ್ರಸಾರ ಮುಗಿಯಿತಾ. ಇನ್ನು ನಾನು ಇವನನ್ನು ಕಸ್ಟಡಿಗೆ ತೆಗೆದುಕೊಳ್ಳಬಹುದಾ’ ಎಂದು ಮಂದಣ್ಣನನ್ನು ಎರೆಸ್ಟು ಮಾಡಿಕೊಂಡು ಹೋದನು.

ಜಾಣೆಯಂತೆ ಇದ್ದ ಮಂದಣ್ಣನ ಹೆಂಡತಿ ಚೂಟಿಯಾಗಿಯೂ ಕಾಣಿಸುತ್ತಿದ್ದಳು. ಮಂದಣ್ಣನಿಂದ ಪ್ರತಿನಿತ್ಯ ಹೊಡೆತಗಳನ್ನೂ ಅಪವಾದಗಳನ್ನೂ ಸಹಿಸಿ ಸಾಕಾಗಿ ಹೋಗಿದ್ದ ಆಕೆ ಬಹಳ ದಿನಗಳ ಹಿಂದೆಯೇ ಆತನ ಮೇಲೆ ಕೌಟುಂಬಿಕ ದೌರ್ಜನ್ಯ ಕಾಯಿದೆಯ ಅಡಿಯಲ್ಲಿ ಮೊಕದ್ದಮೆಯನ್ನೂ ಹೂಡಿದ್ದಳು. ಕಾಡುಮೇಡುಗಳಲ್ಲಿ ಅಡಗಿ ಸಿಗದೆ ಓಡಾಡುತ್ತಿದ್ದ ಅವನ ಧ್ವನಿಯನ್ನು ರೇಡಿಯೋದಲ್ಲಿ ಕೇಳಿಸಿಕೊಂಡ ಆಕೆ ಪೋಲೀಸರಿಗೆ ಮಾಹಿತಿ ರವಾನಿಸಿ ಇದೀಗ ಅರೆಸ್ಟೂ ಮಾಡಿಸಿಬಿಟ್ಟಳು.

ನನಗೆ ಯಾಕೋ ಈಗ ಅಪರಾಧ ಪ್ರಜ್ಞೆ ಜಾಸ್ತಿಯಾಗಿ ಇದನ್ನೆಲ್ಲಾ ಬರೆದಿರುವೆ.

2011-01-05_4065ಮಂದಣ್ಣನ ಜಾಗದಲ್ಲಿ ನನ್ನನ್ನು ಊಹಿಸಿಕೊಂಡು ಬೆವರುತ್ತಿರುವೆ.ಮಂದಣ್ಣನೆಂಬ ಈ ಕಥಾನಾಯಕ ಪೋಲೀಸರಿಗೆ ಸಿಕ್ಕಿ ಹಾಕಿಕೊಂಡಿರುವುದು ಆತನ ಸ್ವಯಂಕೃತ ಪ್ರಮಾದವೋ, ನನ್ನಿಂದಾದ ಎಡವಟ್ಟೋ ಗೊತ್ತಾಗುತ್ತಿಲ್ಲ.

ತಿಳಿದವರಾದ ನೀವೇ ಹೇಳಬೇಕು.

(೪, ಸೆಪ್ಟೆಂಬರ್, ೨೦೧೧)

(ಫೋಟೋಗಳೂ ಲೇಖಕರವು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s