ಸೂಫಿಬ್ಯಾರಿಗಳ ಕುಂಬಳಕಾಯಿ ಹಲ್ವಾ

Scan_20150716ಸೂಫಿ ಬ್ಯಾರಿ ಎಂಬ ಕೃಷಿ ಮಾಂತ್ರಿಕರೊಬ್ಬರಿದ್ದರು.

ಅವರು ತೀರಿ ಹೋಗಿ ಹತ್ತಿರ ಹತ್ತಿರ ಹದಿನೈದುವರ್ಷ ಕಳೆಯುತ್ತಾ ಬಂತು.

ಅವರ ಜೀವನದ ಕೊನೆಯ ಕೆಲವು ವರ್ಷಗಳಲ್ಲಿ ಅವರ ಜೊತೆ ಕಳೆಯುವ ಭಾಗ್ಯ ನಮ್ಮದಾಗಿತ್ತು.

ತುಂಬ ಆದರ್ಶಗಳನ್ನೂ ಅದಕ್ಕಿಂತಲೂ ಹೆಚ್ಚು ಹಠಮಾರಿತನವನ್ನೂ ಹೊಂದಿದ್ದ ಸೂಫಿ ಬ್ಯಾರಿಗಳು ಕಣ್ಣೆದುರೇ ಕೆಲವು ಕೃಷಿ ಪವಾಡಗಳನ್ನು ಮಾಡಿ ತೋರಿಸುತ್ತಿದ್ದರು.

ಅದರಲ್ಲಿ ಒಂದು ಹೂವೇ ಬಿಡದ ಗೊಡ್ಡು ತೆಂಗಿನ ಮರಗಳಲ್ಲಿ ನಾಲ್ಕೇ ಗಂಟೆಗಳಲ್ಲಿ ಹೂವು ಅರಳಿಸುವುದು. ಅವರ ಪ್ರಕಾರ ಆ ತೆಂಗಿನ ಮರಗಳ ಬುಡ ಸರಿ ಇರುತ್ತಿರಲಿಲ್ಲ. ಹಾಗಾಗಿ ಅವರು ಆ ಮರಗಳ ಬುಡಗಳನ್ನು ಸ್ವಚ್ಚಗೊಳಿಸಿ ಅವುಗಳ ಬೇರನ್ನು ಸಡಿಲಗೊಳಿಸಿ ಒಂದೆರೆಡು ಗಂಟೆಗಳ ಕಾಲ ನೀರುಣಿಸಿ ಒಂದು ಬೀಡಿ ಹಚ್ಚಿ ಹೊಗೆಬಿಟ್ಟು ಊಟಕ್ಕೆ ಹೋಗುತ್ತಿದ್ದರು.

ಊಟ ಮುಗಿಸಿ ವಾಪಾಸು ಬಂದಾಗ ಆ ಮರದಲ್ಲಿ ಹೂವುಗಳರಳಿ ಒಂದೆರೆಡು ಹೂವುಗಳು ನೆಲದಲ್ಲೂ ಬಿದ್ದಿರುತ್ತಿದ್ದವು.

‘ನೋಡಿದಿರಾ? ಬುಡ ಸರಿ ಇಲ್ಲದಿದ್ದರೆ ಆಗುವುದೇ ಹೀಗೆ’ ಎಂದು ಅವರು ಈ ಉದಾಹರಣೆಯ ಮೂಲಕ ನಮ್ಮ ದೇಶದ, ನಮ್ಮ ವ್ಯವಸ್ಥೆಯ, ನಮ್ಮ ಆರ್ಥಿಕ ಪರಿಸ್ಥಿತಿಯ,ನಮ್ಮ ಆಹಾರ ಪದ್ದತಿಯ ವಿಶ್ಲೇಷಣೆ ಮಾಡುತ್ತಿದ್ದರು.
ಎಲ್ಲವನ್ನೂ ಬುಡದಿಂದಲೇ ಸರಿ ಮಾಡಬೇಕು ಎನ್ನುವುದು ಅವರ ನಂಬಿಕೆಯಾಗಿತ್ತು.

ಅವರು ಊಟವಾದ ಮೇಲೆ ನೀರು ಕುಡಿಯುತ್ತಿರಲಿಲ್ಲ.ಊಟಕ್ಕೆ ಮೊದಲೂ ನೀರು ಕುಡಿಯುತ್ತಿರಲ್ಲಿಲ್ಲ. ನೀರಿನ ಜೊತೆ ಊಟ ಮಾಡುವುದೆಂದರೆ ಕೆಸರುಗದ್ದೆಯಲ್ಲಿ ಕಂಬ ನೆಟ್ಟಂತೆ, ಆಹಾರ ಜೀರ್ಣವಾಗದೆ ವ್ಯರ್ಥವಾಗುತ್ತದೆ ಎಂಬುದು ಅವರ ವಾದವಾಗಿತ್ತು.

ಹಾಗಾಗಿ ನಾನು ಆದಷ್ಟೂ ಅವರ ಜೊತೆಯಲ್ಲಿ ಊಟಮಾಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದೆ.
ಏಕೆಂದರೆ ಅವರ ಜೊತೆಗಿನ ಊಟ ಜೀರ್ಣಕ್ರಿಯೆಯ ಕುರಿತ ಪಾಠವಾಗಿ ತಿನ್ನುವ ಮಜಾವೇ ಹೊರಟು ಹೋಗುತ್ತಿತ್ತು.

ಸೂಫಿಬ್ಯಾರಿಗಳು ಕುಂಬಳಕಾಯಿ ಹಲ್ವಾವನ್ನು ತುಂಬ ಚೆನ್ನಾಗಿ ಮಾಡುತ್ತಿದ್ದರು.

ದೊಡ್ಡಕುಂಬಳಕಾಯೊಂದನ್ನು ಎರಡು ಹೋಳುಗಳನ್ನಾಗಿ ಮಾಡಿ, ತೆಂಗಿನಕಾಯಿಯಂತೆ ತುರಿದು, ಆಮೇಲೆ ಶುದ್ಧ ಹಸುವಿನ ತುಪ್ಪದಲ್ಲಿ ಹುರಿದು, ಸಕ್ಕರೆ ಸುರಿದು ಪಾಕಮಾಡಿ, ಗಂಟೆಗಟ್ಟಲೆ ಒಲೆಯ ಮುಂದೆ ಕುಳಿತು ತಳ ಹಿಡಿಯದಂತೆ ತಿರುವಿದರೆ ಸೂಫಿ ಬ್ಯಾರಿಗಳ ಕುಂಬಳಕಾಯಿ ಹಲ್ವಾ ರೆಡಿಯಾಗುತ್ತಿತ್ತು.

ಆದರೆ ಮೂಲಭೂತವಾದ ಸಮಸ್ಯೆ ಇದ್ದುದು ಅದಕ್ಕೆ ಬೇಕಾದ ಉತ್ಕೃಷ್ಟ ಕುಂಬಳಕಾಯಿ ಮತ್ತು ಶುದ್ಧ ಹಸುವಿನ ತುಪ್ಪವನ್ನು ಹುಡುಕುವುದರಲ್ಲಿ.

ಸೂಫಿ ಬ್ಯಾರಿಗಳು ಯಾವುದನ್ನೂ ಅಷ್ಟು ಸುಲಭವಾಗಿ ಉತ್ಕೃಷ್ಟ ಎಂದು ಒಪ್ಪಲು ತಯಾರಿರಲಿಲ್ಲ.
ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ಸೂಫಿ ಬ್ಯಾರಿಯವರ ಜೊತೆ ನಾನೂ ಗಂಟೆಗಟ್ಟಲೆ ಈ ಉತ್ಕೃಷ್ಟ ಕುಂಬಳ ಕಾಯಿಗಾಗಿ ಹುಡುಕಬೇಕಾಗಿತ್ತು.

ಸಾಧಾರಣವಾಗಿ ತಿಥಿಗಳಿಗೋ, ಮಾಟಮಂತ್ರ ಮಾಡಿಸಲೋ ಕುಂಬಳಕಾಯಿಯನ್ನು ಒಯ್ಯುವ ಜನ ಅದರ ಉತ್ಕೃಷ್ಟತೆಯ ಕುರಿತು ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ.

ಆದರೆ ಹಲ್ವಾ ಮಾಡಲು ಹೊರಟ ಸೂಫಿ ಬ್ಯಾರಿಯವರು ಸೆಂಟ್ರಲ್ ಮಾರುಕಟ್ಟೆಯ ಒಂದೊಂದು ಕುಂಬಳಕಾಯಿಯನ್ನೂ ಹಿಡಿದು ಅಲ್ಲಾಡಿಸಿ, ಬೆರಳಿಂದ ಕುಟ್ಟಿ ನೋಡಿ, ಕಿವಿಯ ಬಳಿ ತಂದು ಅದರ ಉದರದೊಳಗಿನ ಸದ್ದನ್ನು ಆಲಿಸಿ,ಅದರ ಮೈಮೇಲೆ ಬೂದು ಹುಲುಸಾಗಿ ಬೆಳೆದಿದೆಯೋ ಎಂದೂ ಪರೀಕ್ಷಿಸಿ ಕೊನೆಗೆ ಸರಿಯಿಲ್ಲ ಎಂದು ತಿರಸ್ಕರಿಸಿಬಿಡುತ್ತಿದ್ದರು.

ಇವರ ಪರೀಕ್ಷೆಯಿಂದ ಬೇಸತ್ತ ಸೆಂಟ್ರಲ್ ಮಾರ್ಕೆಟ್ಟಿನ ಬೂದುಗುಂಬಳಕಾಯಿ ವ್ಯಾಪಾರಸ್ತರು ನಮ್ಮನ್ನು ಕೆಕ್ಕರಿಸಿ ನೋಡುತ್ತಿದ್ದರು.

ಆಮೇಲೆ ಶುದ್ಧ ಹಸುವಿನ ತುಪ್ಪಕ್ಕಾಗಿ ನಮ್ಮ ಹುಡುಕಾಟ ಶುರುವಾಗುತ್ತಿತ್ತು.ಸೆಂಟ್ರಲ್ ಮಾರುಕಟ್ಟೆಯಲ್ಲಿ ಕೆಸದ ಎಲೆಯಲ್ಲಿ ಹಸುವಿನ ತುಪ್ಪವನ್ನು ಇಟ್ಟುಕೊಂಡು ಮಾರುತ್ತಿದ್ದ ಹೆಂಗಸರ ಜೊತೆ ಸೂಫಿ ಬ್ಯಾರಿಗಳ ಅಗ್ನಿ ಪರೀಕ್ಷೆ ಶುರುವಾಗುತ್ತಿತ್ತು.ಇವರ ಪ್ರಶ್ನೆಗಳಿಂದ ಬೇಸತ್ತ ಆ ಬಾಯಮ್ಮಂದಿರು ನಮ್ಮಿಬ್ಬರನ್ನೂ ಬೈದು ಓಡಿಸುತ್ತಿದ್ದರು.

ಸಂಜೆಯ ಹೊತ್ತಿಗೆ ಸೋತು ಹೈರಾಣಾಗಿ ಅಗ್ನಿಪರೀಕ್ಷೆಯಲ್ಲಿ ಗೆದ್ದ ಕುಂಬಳಕಾಯಿ ಮತ್ತು ಶುದ್ಧ ತುಪ್ಪದ ಜೊತೆ ನಾವು ಮನೆಗೆ ಮರಳುತ್ತಿದ್ದೆವು.ಆನಂತರ ಅಡುಗೆ ಮನೆಯಲ್ಲಿ ಸೂಫಿ ಬ್ಯಾರಿಗಳ ಅಗ್ನಿಧಿವ್ಯ ಶುರುವಾಗುತ್ತಿತ್ತು.ಶುದ್ಧವಾಗಿ ಒರೆಸಿದ ತುರಿಮಣೆ, ಪರಿಶುದ್ಧವಾಗಿ ಒರೆಸಿದ ಬಾಣಲೆ, ಒಂದಿಷ್ಟೂ ಕಸವಿಲ್ಲದ ಸಕ್ಕರೆ ಎಲ್ಲವೂ ದೊರಕಿದ ಬಳಿಕ ಸೂಫಿ ಬ್ಯಾರಿಗಳ ಹಲ್ವಯಜ್ಞ ನಡುರಾತ್ರಿಯವರೆಗೆ ನಡೆಯುತ್ತಿತ್ತು.

ಪಾಪ! ನನ್ನ ಮಡದಿಯೂ, ತಂಗಿಯರೂ ಆ ಯಜ್ಞದಲ್ಲಿ ಅಸಹಾಯಕರಾಗಿ ಬೇಯುತ್ತಿದ್ದರು.

ಬೆಳಗೆ ಎದ್ದರೆ ಮನೆಯ ತುಂಬ ಶುದ್ಧ ಹಸುವಿನ ತುಪ್ಪದ ಸುಟ್ಟ ಪರಿಮಳ.ಸೂಫಿ ಬ್ಯಾರಿಗಳು ಕೊಂಚ ಮಂಕಾಗಿ ಬೀಡಿ ಸೇದುತ್ತಾ ಕುಳಿತಿರುತ್ತಿದ್ದರು.

‘ನಾ ಮೊದಲೇ ಹೇಳಿರಲಿಲ್ಲವಾ ಈ ಕಾಲದಲ್ಲಿ ಒಳ್ಳೆಯ ಕುಂಬಳಕಾಯಿಯೂ ಸಿಗುವುದಿಲ್ಲ, ಶುದ್ಧ ತುಪ್ಪವೂ ಸಿಗುವುದಿಲ್ಲ, ಎಲ್ಲ ಕಂಪೆನಿ ಗೊಬ್ಬರಗಳಿಂದಾಗಿ ನಮ್ಮ ದೇಶಕ್ಕೆ ಈ ಗತಿ ಬಂದಿದ್ದು .ನಮ್ಮ ಕಾಲದಲ್ಲಿ ಚಿನ್ನಕ್ಕೂ ಪರಿಮಳ ಇರುತ್ತಿತ್ತು.ಈಗ ಎಲ್ಲ ಎಲ್ಲ ಬೇಗಡೆ ಚಿನ್ನದ ಕಾಲ’ ಎಂದು ಸರಕಾರವನ್ನೂ, ಅಮೇರಿಕಾವನ್ನೂ ಬೈಯುತ್ತ ಕೂತಿರುತ್ತಿದ್ದರು.

ನಮಗೆ ಅವರನ್ನು ಆ ಸ್ಥಿತಿಯಲ್ಲಿ ನೋಡಿ ಮಗ್ಗಿ ಕಲಿಯಲು ಮರೆತ ಮಗುವನ್ನು ನೋಡಿದ ಹಾಗಾಗುತ್ತಿತ್ತು.ಅವರ ಮುದ್ದು ಹಠ ಮತ್ತು ಒಳ್ಳೆಯ ಆದರ್ಶಗಳ ನಡುವೆ ಸುಟ್ಟುಹೋದ ಕುಂಬಳಕಾಯಿಯ ಹಲ್ವಾ!

ಜೀವನವೆಂಬುದು ಒಂದು ಒಳ್ಳೆಯ ನಗೆ ಪಾಟಲಿನಂತಿದೆ ಅನಿಸಿ ಖುಷಿಯಾಗುತ್ತಿತ್ತು.

ಸೂಫಿ ಬ್ಯಾರಿಯವರು ಹೀಗೆ ಒಬ್ಬ ಮಹಾತ್ಮನಂತೆ, ಕೆಲವೊಮ್ಮೆ ತಪ್ಪು ಮಾಡಿದ ತುಂಟ ಬಾಲಕನಂತೆ ನಮ್ಮ ಜೊತೆ ಬದುಕಿದ್ದರು.

ಅವರು ಯಾಕೆ ಮದುವೆಯೇ ಆಗದೆ ಬ್ರಹ್ಮಚಾರಿಯಂತೆ ಇದ್ದರು ಎನ್ನುವ ಬಗ್ಗೆ ನನಗೆ ಬಹಳ ಕುತೂಹಲವಿತ್ತು.

‘ಮದುವೆಯ ವಯಸ್ಸಲ್ಲಿ ಸೌಕರ್ಯಗಳಿರಲಿಲ್ಲ. ಆಮೇಲೆ ಆ ಕುರಿತು ಯೋಚಿಸಲು ಪುರುಸೊತ್ತೂ ಸಿಗಲಿಲ್ಲ’ ಎಂದು ಅವರು ಆ ಪ್ರಶ್ನೆಯನ್ನು ಹಗುರವಾಗಿ ತೇಲಿಸಿ ಬಿಡುತ್ತಿದ್ದರು.

ಅವರು ಮರಣಶಯ್ಯೆಯಲ್ಲಿ ಮಲಗಿರುವಾಗ ಹೆಂಗಸೊಬ್ಬರು ಅಚಾನಕ್ಕಾಗಿ ಸಿಕ್ಕಿ ನಾನೇ ಇವರು ಕಟ್ಟಿಕೊಂಡ ಹೆಂಡತಿ ಎಂದು ಪರಿಚಯ ಮಾಡಿಕೊಂಡಿದ್ದರು.

ಜೊತೆಯಲ್ಲಿ ಸೂಫಿ ಬ್ಯಾರಿಗಳ ಹಾಗೇ ಕಾಣಿಸುವ ಮಗಳೂ ಇದ್ದಳು.
‘ಇದೇನು ಸೂಫಿ ಬ್ಯಾರಿಗಳೇ ಹೀಗೆ?’ ಎಂದು ಕೇಳಬೇಕೆನಿಸಿ ಅವರು ಮಲಗಿರುವ ಹಾಸಿಗೆಯ ಬಳಿ ಹೋದರೆ ಅವರು ಆಗಲೇ ಮರಣದ ಬಳಿ ತಲುಪಿ ಬಿಟ್ಟಿದ್ದರು.

sufi1.jpgಎಲ್ಲವನ್ನೂ ಆಮೇಲೆ ಹೇಳುವೆ ಎನ್ನುವಂತೆ ಕಣ್ಣುಗಳನ್ನು ಆಡಿಸಿದ್ದರು.ಆಮೇಲೆ ಅವರು ತೀರಿಯೇ ಹೋದರು.

ಈಗ ಯಾಕೋ ಅವರು ಮಾಡಿದ್ದ ಕುಂಬಳಕಾಯಿ ಹಲ್ವಾ ನೆನಪಾಗುತ್ತಿದೆ.ಜೊತೆಗೆ ಅವರ ಇನ್ನೂ ಅಂತಹದೇ ಹಲವು ಪ್ರಯೋಗಗಳೂ.

‘ನಿನಗೆ ಇಷ್ಟು ವಯಸ್ಸಾಗಿದ್ದರೂ ಹುಡುಗಾಟ ಇನ್ನೂ ಬಿಟ್ಟಿಲ್ಲ’ ಎಂದು ಅವರು ಬೈಯುತ್ತಿದ್ದರು.‘ಹುಡುಗಾಟ ಬಿಟ್ಟಿದ್ದರೆ ನಿಮ್ಮ ಜೊತೆ ಬಾಲದಂತೆ ಅಲೆದಾಡುತ್ತಲೂ ಇರಲಿಲ್ಲವಲ್ಲ ಬ್ಯಾರಿಗಳೇ’ ಎಂದು ನಾನೂ ಉತ್ತರಿಸುತ್ತಿದ್ದೆ.

(ಆಗಸ್ಟ್ ೨೧, ೨೦೧೧)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s