ಆಟಿ ಹದಿನೆಂಟರ ಓಡಾಟ

2011-05-17_8067ಮೊನ್ನೆ ಬುಧವಾರ ಕೊಡಗಿನಲ್ಲಿ ಕಕ್ಕಡ ಪದಿನೆಟ್ಟ್ ಅಂದರೆ ಆಟಿ ಹದಿನೆಂಟು.

ಅರ್ಥಾತ್ ಆಷಾಢ ತಿಂಗಳ ಹದಿನೆಂಟನೆಯ ದಿನ.

ಮೂಡಲ ಸೀಮೆಯವರಿಗೆಲ್ಲ ಆಷಾಢ ಕಳೆದು ದಿನಗಳೇ ಮುಗಿದಿದ್ದರೂ ನಾವಿನ್ನೂ ಆಟಿ ಸೊಪ್ಪು, ಕಕ್ಕಡಮದ್ದು, ಆಟಿ ಪತ್ರೊಡೆ, ಕಕ್ಕಡ ಕೋಳಿಗಳನ್ನು ಕಬಳಿಸುತ್ತಾ ಬದುಕುತ್ತಿದ್ದೇವೆ. ಕಾಲಿಟ್ಟಲ್ಲೆಲ್ಲ ಜಿಗಣೆಗಳು ನಮ್ಮನ್ನು ಕಬಳಿಸಲು ನೋಡುತ್ತಿರುತ್ತವೆ.ಕವಿ ಕೋವಿದರು ಭೂಮಂಡಲದ ಈ ಪುಟ್ಟ ಜಾಗವನ್ನು ಸ್ವರ್ಗದ ತುಣುಕೆಂದು ವರ್ಣಿಸುತ್ತಿರುತ್ತಾರೆ.ಒಂದು ಕಾಲದಲ್ಲಿ ಋಷಿಗಳು ತಪೋವನ ಎನ್ನುತ್ತಿದ್ದರಂತೆ.

ತಿನ್ನಲ್ಲಿಕ್ಕಾಗಿಯೇ ಬದುಕುತ್ತಿರುವ ನಮ್ಮಂತಹ ಹುಲುಮಾನವರಿಗೆ ಈ ಕರ್ಮಭೂಮಿ ಒಂದು ಮನೋಹರವಾದ ಆಹಾರ ಸರಪಳಿಯಂತೆ ಕಂಗೊಳಿಸುತ್ತಿರುತ್ತದೆ.

ಕಾಡಲ್ಲಿ ಸುಮ್ಮನೆ ಬಿದ್ದುಕೊಂಡಿರುವ ಈ ಆಟಿಸೊಪ್ಪಿನೊಳಗಡೆ ಆಟಿ ತಿಂಗಳ ಹದಿನೆಂಟರಂದು ಹದಿನೆಂಟು ಬಗೆಯ ಔಷದಿಗಳು ತುಂಬಿಕೊಂಡಿರುತ್ತವಂತೆ. ಹಾಗಾಗಿ ಅವುಗಳನ್ನು ಕಿತ್ತುತಂದು ಪಾಯಸವೋ, ಗಂಜಿಯೋ ಮಾಡಿ ಕುಡಿಯುತ್ತೇವೆ.

ಮರದ ಮೇಲೆ ಸಂಕೋಚದಲ್ಲಿ ಬೆಳೆದು ನಿಂತಿರುವ ಕೆಸದ ಎಲೆಯಲ್ಲೂ ಆಟಿ ಹದಿನೆಂಟರಂದು ಹೀಗೇ ಎಂತಹದೋ ಮಾಂತ್ರಿಕ ಶಕ್ತಿಯೊಂದು ತುಂಬಿರುತ್ತದೆಯಂತೆ. ಅದನ್ನೂ ಮುಲಾಜಿಲ್ಲದೆ ಕಿತ್ತು ತಂದು ಪತ್ರೊಡೆಯನ್ನಾಗಿ ಬೇಯಿಸಿ ಕಬಳಿಸುತ್ತೇವೆ.

ಸುಮ್ಮನೇ ಮಣ್ಣಲ್ಲಿ ಹುಳಹುಪ್ಪಟೆ ಹುಡುಕಿಕೊಂಡು ಓಡಾಡುತ್ತಿರುವ ಹುಂಜ ಹೇಂಟೆಗಳಲ್ಲಿಕಕ್ಕಡ ಮಾಸದ ಈ ದಿನ ದಿವಿನಾದ ತುಪ್ಪ ತುಂಬಿಕೊಂಡಿರುತ್ತದಂತೆ. ಅವುಗಳನ್ನೂ ಕೊಯಿದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ.

2011-08-03_9679ಕಾಡಿನೊಳಗಡೆ ಮುನಿಗಳಂತೆ ಊರ್ಧ್ವಮುಖಿಗಳಾಗಿ ನಿಂತಿರುವ ಹುತ್ತಗಳೊಳಗೆ ಈ ದಿನ ಕಿವಿಯಿಟ್ಟು ಆಲಿಸಿದರೆ ಹುತ್ತದ ಜೇನುಹುಳುಗಳು ಗುಂಯ್ ಗುಡುವ ಸದ್ದು ಕೇಳಿಸುತ್ತದಂತೆ. ಈ ದಿನ ಹುತ್ತವನ್ನು ಸೀಳಿದರೆ ಸಿಗುವ ಜೇನುತುಪ್ಪದ ಪರಿಮಳ ಮತ್ತು ಸಿಹಿಯ ಮುಂದೆ ಈ ಲೋಕದ ಬೇರಾವ ಅನುಭೂತಿಯೂ ಸರಿಸಮವಲ್ಲವಂತೆ. ಹಾಗಾಗಿ ಅವುಗಳನ್ನೂ ಮುಲಾಜಿಲ್ಲದೆ ಯಾಮಾರಿಸಿಕೊಂಡು ಬರುತ್ತೇವೆ.

ನಾನಾದರೋ ಆಹಾರವನ್ನೂ, ಕಥೆಗಳನ್ನೂ, ತಮಾಷೆಗಳನ್ನೂ, ವಿಷಾಧಗಳನ್ನೂ ಹುಡುಕಿಕೊಂಡು ಈ ದಿನ ಈ ಮಳೆಯಲ್ಲಿ ಓಡಾಡದಿದ್ದರೆ ಬದುಕಿ ಬೇರೇನು ಪುರುಷಾರ್ಥ ಎಂದುಕೊಂಡು ಓಡಾಡಿಕೊಂಡು ಬಂದಿದ್ದೇನೆ.

ಮೊನ್ನೆ ಕಕ್ಕಡ ಮಾಸದ ಹದಿನೆಂಟರಂದು ಹೋದ ಈ ಊರಿನ ಹೆಸರು ಗೋಳಿ ಎಂದು ಶುರುವಾಗುತ್ತದೆ. ಸುಮಾರು ಇನ್ನೂರು ವರ್ಷಗಳಿಗೂ ಹಳೆಯದಾದ ಒಂದು ಗೋಳಿಮರ ಇಲ್ಲಿ ಇತ್ತಂತೆ. ಈಗ ಅದು ಇಲ್ಲ. ಹದಿನೈದು ವರ್ಷಗಳ ಹಿಂದೆ ಅದು ತೀರಿಹೋಗಿದೆ. ಅದು ಇದ್ದ ಜಾಗದಲ್ಲಿ ಹತ್ತು ವರ್ಷಗಳ ಮರಿ ಗೋಳಿ ಮರವೊಂದು ತಾನೇನೂ ಕಡಿಮೆಯಿಲ್ಲ ಎಂದು ನಳನಳಿಸುತ್ತಾ ಬೆಳೆಯುತ್ತಿದೆ.

2011-06-14_8881ಇನ್ನೂರು ವರ್ಷಗಳ ಆ ಮರದ ಅಡಿಯಲ್ಲಿ ಸುಮಾರು ಅರವತ್ತೈದು ವರ್ಷಗಳ ಹಿಂದೆ ಹುಡುಗ ಹುಡುಗಿಯರು ಮರಳಲ್ಲಿ ಬರೆಯುತ್ತಾ ಶಾಲೆ ಕಲಿತರಂತೆ. ಆ ಕಾಲದಲ್ಲಿ ಟೀಚರೊಬ್ಬಳು ಕ್ಯಾಟರಬಿಲ್ಲಲ್ಲಿ ಹಕ್ಕಿಗಳನ್ನು ಹೊಡೆಯುತ್ತಾ ದನಮೇಯಿಸಿಕೊಂಡು ಓಡಾಡುತ್ತಿದ್ದ ಹುಡುಗರನ್ನು ಹಿಡಿದುಕೊಂಡು ಬಂದು ಕನ್ನಡವನ್ನೂ ಲೆಕ್ಕವನ್ನೂ ಕಲಿಸಿದಳಂತೆ. ತುಂಬಾ ಜೋರಿನ ಟೀಚರಂತೆ.ಕಲಿಯದವರಿಗೆ ಸಕತ್ತಾಗಿ ಹೊಡೆಯುತ್ತಿದ್ದಳಂತೆ.

ಹಾಗೆ ಕಲಿತವರೊಬ್ಬರು ಮೊನ್ನೆ ಸಿಕ್ಕಿದ್ದರು.ಅವರಿಗೀಗ ಎಪ್ಪತ್ತನಾಲ್ಕು ವರ್ಷ.ಈಗಲೂ ತುಂಬಾ ತುಂಟರಂತೆ ಕಾಣಿಸುತ್ತಾರೆ. “ಆ ಜೋರಿನ ಟೀಚರಿಗೆ ಒಂದು ಸಲ ನಾನೂ ಜೋರಾಗಿ ತಿರುಗಿ ಹೊಡೆದಿದ್ದೆ ” ಎಂದು ನಕ್ಕರು. ಹಾಗೆ ಹೊಡೆದು ಓಡಿಹೋದವರು ಕಾಡೊಳಗೆ ಎರಡು ದಿನ ಅಡಗಿಕೊಂಡಿದ್ದರಂತೆ. ಆಮೇಲೆ ಟೀಚರು ಕ್ಷಮಿಸಿರುವರು ಎಂದು ಗೊತ್ತಾದ ಮೇಲೆಯೇ ಕಾಡಿನೊಳಗಡೆಯಿಂದ ಬಂದರಂತೆ.

ಹಾಗೆ ಬಂದವರು ಶಾಲೆ ಕಲಿತು ದೊಡ್ಡವರಾಗಿ, ಸೈನ್ಯಕ್ಕೆ ಸೇರಿ ೧೯೬೫ ರ ಯುದ್ದದಲ್ಲಿ ಪಾಕಿಸ್ತಾನದೊಳಕ್ಕೆ ನುಗ್ಗಿ ವೈರಿಗಳನ್ನು ಹೊಡೆದು ಹಾಕಿ ಗಾಯಾಳುಗಳಾಗಿ ಬದುಕಿ ಬಂದರಂತೆ.

“ಆಗಲೂ ಸಿಟ್ಟು.ಆಮೇಲೆಯೂ ಸಿಟ್ಟು.ಈಗಲೂ ನಾನು ಸಿಟ್ಟಿನ ಮನುಷ್ಯನೇ ” ಎಂದು ಮಗುವಿನಂತೆ ನಕ್ಕರು.

“ಅಯ್ಯೋ ನಿಮ್ಮ ಮೀಸೆಯನ್ನು ನೋಡಿದರೆ ನನಗೂ ಹೆದರಿಕೆಯಾಗುತ್ತದೆ.ಟೀಚರಿಗೂ ಹೊಡೆದಿರಿ, ವೈರಿಗಳಿಗೂ ಹೊಡೆದಿರಿ.ನಾನು ಬರುತ್ತೇನೆ”ಎಂದು ನಕ್ಕು ಬಂದೆ.

2011-08-03_9677ದಾರಿಯಲ್ಲಿ ಗಂಡಸರಿಬ್ಬರು ಕೆಸರು ಗದ್ದೆಯಲ್ಲಿ ಬಡಕಲಾದ ಎತ್ತು ಜೋಡಿಗಳನ್ನು ಕಟ್ಟಿಕೊಂಡು ಆ ಮಳೆಯಲ್ಲಿ ಉಳುವ ಹಾಡುಗಳನ್ನು ನೆನಪಿನೊಳಗಿಂದ ಕಷ್ಟದಲ್ಲಿ ಎತ್ತಿಕೊಂಡು ಉಳುತ್ತಿದ್ದರು. ಆ ಎತ್ತುಗಳೂ ಅನ್ಯಮನಸ್ಕರಾಗಿ ಕೆಸರಿನಲ್ಲಿ ಹೆಜ್ಜೆ ಎತ್ತಿ ಹಾಕುತ್ತಿದ್ದವು. ಬೇಸಗೆಯಲ್ಲಿ ಈ ಎತ್ತುಗಳನ್ನು ಕಾಡಿಗೆ ಮೇಯಲು ಬಿಡುತ್ತಾರೆ.ಅವುಗಳು ಕಾಡುಕೋಣಗಳಂತೆ ಸಂತೋಷದಲ್ಲಿ ಅಲ್ಲಿ ಬದುಕುತ್ತಿರುತ್ತವೆ.ಮಳೆ ಬಿದ್ದಾಗ ಕಾಡಿಂದ ಅವುಗಳನ್ನು ಹಿಡಿದುಕೊಂಡು ಬರುತ್ತಾರೆ. ಅವುಗಳು ನೊಗ ಕಟ್ಟಿಸಿಕೊಂಡು ಉತ್ತು ಮುಗಿಸಿ ಮತ್ತೆ ಬೇಸಗೆಯಲ್ಲಿ ಕಾಡಿಗೆ ಹೋಗಬೇಕು.

ಪಾಪ, ವಯಸ್ಕರ ಶಿಕ್ಷಣದಲ್ಲಿ ಕುಳಿತ ಮದ್ಯವಯಸ್ಕರಂತೆ ಅವುಗಳು ಕನಿಷ್ಟ ಉತ್ಸಾಹದಿಂದಲೂ, ಬಹುತೇಕ ಬೇಸರದಿಂದಲೂ ತಮ್ಮ ಕಾಯಕದಲ್ಲಿ ತೊಡಗಿದಂತೆ ಕಾಣಿಸುತ್ತಿದ್ದವು.

ಉಳುವ ಗದ್ದೆಯ ಕೆಳಗಿನ ಯಾಕಲು ಗದ್ದೆಯಲ್ಲಿ ಒಂದಿಷ್ಟು ಹೆಂಗಸರು ನೇಜಿಪೈರು ಕೀಳುತ್ತಾ ಹಕ್ಕಿಗಳಂತೆ ಅಲುಗಾಡುತ್ತಿದ್ದರು. ಅವರು ಯಾರು, ಏನು, ಹೇಗೆ ಒಂದೂ ಗೊತ್ತಾಗದಂತೆ ಸುರಿಯುತ್ತಿರುವ ಆ ಮಳೆ, ಮಳೆಯಲ್ಲಿ ತೋಯದಂತೆ ಅವರು ಮೈಗೆ ಕಟ್ಟಿಕೊಂಡಿರುವ ಆ ಪ್ಲಾಸ್ಟಿಕ್ಕಿನ ಹೊದಿಕೆ, ಮರಗಟ್ಟುವಂತಹ ಚಳಿಯಲ್ಲಿ ಚಲಿಸುತ್ತಿರುವ ಅವರ ಆ ಕೈಗಳು. ಕಿತ್ತ ಪೈರುಗಳನ್ನು ಗಂಟುಕಟ್ಟಿ ಯಾವುದೇ ಮುಲಾಜಿಲ್ಲದೆ ಈ ಕಡೆಗೆ ಎಸೆಯುತ್ತಿರುವ ಅವರ ಆ ಹುಮ್ಮಸ್ಸು ಎಲ್ಲವೂ ಅಲ್ಲಿ ಒಂದು ಅನೂಹ್ಯ ಶಕ್ತಿಯನ್ನೂ, ಗಾಂಭೀರ್ಯವನ್ನೂ ಸೃಷ್ಟಿಸಿತ್ತು.

ಅವರಲ್ಲೇ ಕೊಂಚ ಡುಮ್ಮಿಯಾಗಿದ್ದವಳು, “ಓ ನೀವಲ್ಲವಾ” ಎಂದು ನನ್ನ ಹೆಸರು
ಹೇಳಿದಳು.

2011-08-03_9779“ಹೌದಲ್ಲವಾ”ಎಂದು ಅವಳ ಹೆಸರು ಕೇಳಿದೆ.ಹೇಳಿದಳು.

ಊರ ಹೆಸರು ಕೇಳಿದೆ.

ಹೇಳಿದಳು.

ಮನೆತನದ ಹೆಸರು ಕೇಳಿದೆ.ಅದನ್ನೂ ಹೇಳಿದಳು.

“ಓ ಅವಳು… ನಿನ್ನ ನೆಂಟರ ಹುಡುಗಿಯೇ ಅಲ್ಲವಾ..” ಎಂದು ನನ್ನ ಬಾಲ್ಯಕಾಲದ
ಸಖಿಯ ಕುರಿತು ವಿಚಾರಿಸಿದೆ.

“ಓ ಅವರಾ..ದೂರದಲ್ಲಿ ಅವರು ನನ್ನ ಚಿಕ್ಕಮ್ಮ ಆಗಬೇಕು” ಎಂದಳು.

“ಈಗ ಹೇಗಿದ್ದಾರೆ.ಎಲ್ಲಿದ್ದಾರೆ” ಎಂದು ಕೇಳಿದೆ.

“ಓ ಅವರಾ..ಆಗಲೂ ಅವರು ಲಾಚಾರೇ..ಈಗಲೂ ಹಾಗೆಯೇ ಲಾಚಾರೇ. ಟೀಚರಾಗಿದ್ದಾರೆ. ದೊಡ್ಡ ಮನೆ ಕಟ್ಟಿಕೊಂಡು ಖುಶಿಯಲ್ಲಿದ್ದಾರೆ” ಎಂದು ಹೇಳಿದಳು.

2011-08-03_9700ನನ್ನ ಬಾಲ್ಯಕಾಲದ ಸಖಿಯ ಹೆಸರು ಈ ಕೆಸರುಗದ್ದೆ, ಉಳುವವನ ಮರೆತ ಹಾಡು, ಎತ್ತುಗಳ ಏಕತಾನತೆಗಳ ನಡುವೆ ಕೇಳಿಸುತ್ತಿರುವ ಪರಿಗೆ ಖುಷಿಯಾಯಿತು.

ಸ್ವಲ್ಪ ಬಡವಾಗಿದ್ದ ಆದರೆ ಬಹಳ ಜೋರಾಗಿದ್ದ ಆಕೆ ಹಳೆಯ ಹಳೆಯ ಹಿಂದಿ ಹಾಡುಗಳನ್ನು ಮೂಗಿನಲ್ಲೇ ರಾಗವಾಗಿ ಗುಣಗುಣಿಸುತ್ತಿದ್ದಳು. ಕಾಡಿನೊಳಗಡೆಯ ಮನೆಯಿಂದ ಕಾಲೇಜಿಗೆ ಬರುವಾಗ ಬುತ್ತಿಯೊಳಗಡೆ ಕಿತ್ತಳೆಯ ತೋಳೆಗಳನ್ನು ತುಂಬಿಸಿಕೊಂಡು ತರುತ್ತಿದ್ದಳು. ಬಿಳಿಯ ಹಾಳೆಯ ಮೇಲೆ ನಿಂಬೆ ರಸದಲ್ಲಿ ಪ್ರೇಮಪತ್ರಗಳನ್ನು ಬರೆದು ಅಡಗಿಸಿ ಕೊಡುತ್ತಿದ್ದಳು. ಬಿಸಿಲಲ್ಲಿ ಹಿಡಿದಾಗ ನಿಂಬೆರಸದ ಅವಳ ಪ್ರೇಮವಾಕ್ಯಗಳು ಗೋಚರವಾಗಿ ಎದೆಯೊಳಕ್ಕೆ ಹೊಕ್ಕು ಹೆದರಿಕೆಯಾಗುತ್ತಿದ್ದವು.

ಆ ಸಣ್ಣ ವಯಸ್ಸಲ್ಲೇ “ಮದುವೆಯಾಗಿ ಎಲ್ಲಾದರೂ ಓಡಿ ಹೋಗುವಾ” ಎಂದು ಅವಳು ಕೇಳಿದ್ದಳು.

ನಾನು ಹೆದರಿಕೆಯಲ್ಲಿ ಅವಳನ್ನೇ ಬಿಟ್ಟು ದೂರ ಎಲ್ಲೋ ಓಡಿ ಹೋಗಿ ಅವಿಸಿ ಕೂತಿದ್ದೆ.

ಆಗ ಲಾಚಾರಾಗಿದ್ದ ಅವಳು ಈಗ ಟೀಚರಾಗಿರುವುದು, ಆಗ ಹೆದರಿಕೊಂಡಂತೆ ನಟಿಸಿದ ನಾನು ಈಗಲೂ ಹಾಗೆಯೇ ಓಡಾಡುತ್ತಿರುವುದು. 2011-08-03_9735ಈ ಪ್ರಪಂಚಕ್ಕೂ ತನಗೂ ಏನೂ ಸಂಬಂಧವೇ ಇಲ್ಲವೆಂಬಂತೆ ಸುರಿಯುತ್ತಿರುವ ಈ ಹುಚ್ಚುಮಳೆ.

ಉಳುವ ಎತ್ತುಗಳ ನಾಸಿಕದಿಂದ ಹೊರಡುತ್ತಿರುವ ಮನೋಹರವಾದ ಹಬೆ…

ಎಲ್ಲವೂ ಎಷ್ಟ್ಟು ಹಿತವಾಗಿದೆ ಎಂದು ಫೋಟೋಗಳನ್ನು ಕ್ಲಿಕ್ಕಿಸಲು ತೊಡಗಿದೆ.

(ಆಗಸ್ಟ್ ೭, ೨೦೧೧)

(ಫೋಟೋಗಳೂ ಲೇಖಕರವು)

Advertisements