ನೀರುದೋಸೆ, ಮೀನುಸಾರು ಮತ್ತು ನಾಲ್ವರು ಹೆಂಡತಿಯರು

2011-09-19_1115ಇರುಳಿನ ಮೂರನೇ ಜಾವದ ಹೊತ್ತು ಇಲ್ಲೊಂದು ಕಡೆ ನೀರು ದೋಸೆ ಮತ್ತು ಮೀನು ಸಾರು ಸಿಗುವಲ್ಲಿಗೆ ಹೋಗಿದ್ದೆ. ಇರುಳಿನ ಯಾವ ಹೊತ್ತಲ್ಲಾದರೂ ಇಲ್ಲಿ ಇದು ಸಿಗುತ್ತದೆ.

ನಿದ್ದೆಯ ಮುಖದ ವ್ಯಗ್ರ ಕಣ್ಣುಗಳ ರಾತ್ರಿ ಪಾಳಿಯ ಲಾರಿ ಡ್ರೈವರುಗಳು ಇಲ್ಲಿ ಇಳಿದು, ಮೂತ್ರ ಶಂಕೆ ನಿವಾರಿಸಿ, ತೊರೆಯಿಂದ ಬಿದಿರಿನ ದಬ್ಬೆಗಳಲ್ಲಿ ಹರಿದು ಬರುವ ನೀರಿನಲ್ಲಿ ಮುಖ ತೊಳೆದು, ದೋಸೆ ತಿಂದು ಬೀಡಿ ಎಳೆದು, ಅದೇ ವ್ಯಗ್ರತನದಲ್ಲಿ ಆ ಬೀಡಿಯನ್ನು ತಮ್ಮ ಪಾದಗಳಿಂದ ಹೊಸಕಿ ಕೆಡಿಸಿ, ಬಹಿರಂಗವಾಗಿ ಎಲ್ಲಿ ಕೆರೆಯಬಾರದೋ ಅಲ್ಲಿ ಕೆರೆದುಕೊಂಡು ಲಾರಿ ಹತ್ತಿ ಹೋಗುತ್ತಾರೆ.

ಅವರು ಆ ಹೊತ್ತಲ್ಲಿ ತಿಂದ ಆ ಮೀನಿನ ಸಾರಿನ ಕಟುವಾದ ಖಾರ ಅವರಿಗೆ ಇನ್ನು ಮುಂಜಾವದವರೆಗೆ ನಿದ್ದೆಹೋಗಲು ಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿ ಈ ಹಾದಿ ಬದಿಯ ಹೋಟಲಿನ ಒಡತಿ ನನ್ನನ್ನು ನೋಡಿ ನಗುತ್ತಾಳೆ.

‘ಇವರುಗಳಿಗೆ ಖಾರ ಇಲ್ಲದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲ’ಎಂದು ಅವರು ಬಿಟ್ಟುಹೋದ ಪ್ಲೇಟುಗಳನ್ನು ಎತ್ತಿಕೊಂಡು ಅದೇ ತೊರೆಯ ನೀರಿನಲ್ಲಿ ತೊಳೆಯುತ್ತಾಳೆ.

ನನಗೂ ಈಕೆಗೂ ಏನು ನಂಟು ಎಂದು ನಗು ಬರುತ್ತದೆ.

ಬಹುಶಃ ಈಕೆಗೂ ಹೀಗೆ ನಗು ಬರುತ್ತಿರಬಹುದು ಎಂದು ನಾನೂ ಆ ಮಹಾಖಾರವನ್ನು ಕಣ್ಣು ತುಂಬಿಕೊಂಡು ಬಾಯಿಗಿಳಿಸುತ್ತೇನೆ.

ಆಕೆ ಕುಳಿತಿರುವ ಮೇಜಿನ ಕೆಳಗಿರುವ ಅಂಗೈಯಗಲದ ಜಾಗದಲ್ಲಿ ಮುದುಡಿ ಮಲಗಿಕೊಂಡು ಆಕೆಯ ಯಜಮಾನ ಗೊರಕೆ ಹೊಡೆಯುತ್ತಿರುವ ಸದ್ದು ಕೇಳಿಸುತ್ತದೆ. ಆತ ನಡುನಡುವಲ್ಲಿ ಆಕಳಿಸಿ ಎಚ್ಚರಾಗಿ, ಬಂದು ಹೋದವರ ಹಣದ ಲೆಕ್ಕಾಚಾರ ಕೇಳಿ, ನಿದ್ದೆಯಲ್ಲಿ ಇನ್ನು ಏನೋ ಮಾತನಾಡಿ ಪುನಹ ಮುದುಡಿಕೊಳ್ಳುತ್ತಾನೆ. ಆಕೆ ನನ್ನ ಇಷ್ಟದ ನಿಂಬೆ ಹಿಂಡಿದ ಕಪ್ಪು ಚಹಾವನ್ನು ಎದುರಿಗಿಟ್ಟು ನಕ್ಕು ಮರೆಯಾಗುತ್ತಾಳೆ.

2011-09-19_1121ನಾನು ಕುಡಿದು ಮುಗಿಸಿ ಕಾಸು ಎಣಿಸಿ ಆ ಮಂಜಲ್ಲಿ ಮರೆಯಾಗುತ್ತೇನೆ. ಮಂಜಿನಲ್ಲಿ ಮಿಸುಕಾಡುತ್ತಾ ಬರುವ ರಾತ್ರಿ ಪಾಳಿಯ ಪೊಲೀಸರು ಇವನದು ಇರುಳ ಸಂಚಾರ ಇದ್ದದ್ದೇ ಎಂದು ಮುಂದುವರಿಯುತ್ತಾರೆ.

ಹಗಲೂ ಇರುಳೂ ತೆರೆದೇ ಇರುವ ಹೆದ್ದಾರಿ ಬದಿಯ ಈ ನೀರುದೋಸೆಯ ಹೋಟಲಿನಲ್ಲಿ ನಾಲಕ್ಕು ಪಾಳಿಗಳಲ್ಲಿ ನಾಲಕ್ಕು ಮಂದಿ ಹೆಂಗಸರು ಇರುತ್ತಾರೆ.

ಮೊದ ಮೊದಲು ನಾನು ಈ ನಾಲ್ವರೂ ಒಬ್ಬರೇ ಎಂದು ಅಂದುಕೊಂಡಿದ್ದೆ. ಅದು ಹೇಗೆ ಒಬ್ಬಳೇ ಹೆಂಗಸು ದಿನವಿಡೀ ನಿದ್ದೆಯಿಲ್ಲದೆ ಹೀಗೆ ಇರುತ್ತಾಳೆ ಎಂದು ಚಕಿತಗೊಂಡಿದ್ದೆ. ಅತ್ತ ಹೋಗುವಾಗಲೂ, ಇತ್ತ ಬರುವಾಗಲೂ, ಹಗಲು, ಇರುಳು, ಮುಂಜಾವ, ಸಂಜೆಗಳಲ್ಲೂ ಅದು ಹೇಗೆ ಒಬ್ಬಳೇ ಈ ವ್ಯಗ್ರಮುಖದ ಡ್ರೈವರುಗಳಿಗೆ ಉಣಬಡಿಸುತ್ತಾಳೆ ಎಂದು ಚಕಿತಗೊಂಡಿದ್ದೆ.

ಆಮೇಲೆ ಹೆಚ್ಚುಕಡಿಮೆ ಒಂದೇ ತರಹ ಇರುವ ಈ ನಾಲ್ವರೂ ಬೇರೆ ಬೇರೆ ಹೆಂಗಸರು ಎಂದು ಅರಿವಿಗೆ ಬಂತು. ಅವರ ಮುಖದ ಚಹರೆಗಳು, ಅವರ ಪ್ರಾಯದ ಲಕ್ಷಣಗಳು ಮತ್ತು ಅವರು ಇದ್ದಾಗ ಅವರ ಜೊತೆಯಲ್ಲಿ ಇರುತ್ತಿದ್ದ ಮಕ್ಕಳು ಬೇರೆ ಬೇರೆಯವರು ಎಂದೂ ಗೊತ್ತಾಯಿತು.

ನಿಧಾನಕ್ಕೆ ಅವರು ನಾಲ್ವರೂ ಒಬ್ಬನೇ ಪುರುಷಸಿಂಹ ತನ್ನ ಜೀವನದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಕಟ್ಟಿಕೊಂಡ ಹೆಂಗಸರು ಎಂದು ಗೊತ್ತಾಗಿ ತಲೆಕೆಟ್ಟು ಹೋಯಿತು. ಈ ನಾಲ್ವರೂ ಯಾಕೆ ನನಗೆ ಒಬ್ಬಳೇ ಹೆಂಗಸಿನಂತೆ ಗೋಚರಿಸಿದರು ಎಂದೂ ಗೊತ್ತಾಗತೊಡಗಿತು. ಅವರೆಲ್ಲರೂ ಆ ಗಂಡಸಿನ ಜೊತೆಗಿನ ಸಂಸಾರದಲ್ಲಿ ಸಮಾನ ಸುಖಿಗಳೂ ಸಮಾನ ದುಃಖಿಗಳೂ ಆಗಿದ್ದರು.

  1. 2011-09-19_1115ಅವರೆಲ್ಲರ ಈ ಸ್ವರ್ಗವೋ ನರಕವೋ ಎಂದು ಗೊತ್ತಿಲ್ಲದ ಸಮಬಾಳು ಅವರೆಲ್ಲರ ಚಹರೆಗಳಿಗೆ ಒಂದೇ ತರಹದ ಲೇಪವನ್ನು ಕೊಟ್ಟಿತ್ತು.

ಆಮೇಲೆ ಈ ನೀರುದೋಸೆ ಮೀನು ಸಾರಿನ ಹೋಟಲ್ಲಿಗೆ ಹೋದಾಗಲೆಲ್ಲಾ ನನಗೆ ಅವರಲ್ಲಿ ಹಿರಿಯ ಜೀವ ಯಾವುದು ಕೊನೆಯ ಜೀವ ಯಾವುದು ಎಂದು ಅರಿವಾಗುತ್ತಿತ್ತು.

ಅವರಲ್ಲಿ ನನ್ನೊಡನೆ ನಕ್ಕು ಮಾತನಾಡಿಸುತ್ತಿದ್ದುದು ಆ ಹಿರಿಯ ಜೀವವಾಗಿತ್ತು.

ನಾನೂ ಉಳಿದವರ ಜೊತೆ ವ್ಯಗ್ರಮುಖದ ಅಪರಿಚಿತ ಹಾದಿಹೋಕನಂತೆಯೇ ಇರುತ್ತಿದ್ದೆ. ಮೊದಲನೆಯವಳ ಜೊತೆ ಮಾತ್ರ ಕಷ್ಟ ಸುಖ ಮಾತನಾಡುತ್ತಿದ್ದೆ.

ಆದರೆ ಅವರೆಲ್ಲರ ಪುರುಷಸಿಂಹ ಹೀಗೆ ಏನೂ ಅಸಮಾನತೆ ತೋರದೆ ಎಲ್ಲರೊಡನೆಯೂ ಕಠೋರನಾಗಿರುವನಂತೆ. ಯಾರೊಡನೆಯೂ ಅನವಶ್ಯಕ ಮೋಹ ತೋರಿಸುವುದಿಲ್ಲವಂತೆ. ಕೊನೆಯವಳ ಕೊನೆಯ ಮಗನನ್ನು ಮಾತ್ರ ಕೊಂಚ ಹೆಚ್ಚು ಪ್ರೀತಿಸುತ್ತಾನಂತೆ..

ಅಷ್ಟು ಹೇಳಿದ ಆ ಹಿರಿಯ ಹೆಂಡತಿ ನಾಚಿಕೊಂಡು ಕೈಯಲ್ಲಿ ಗ್ಲಾಸು ಹಿಡಿದುಕೊಂಡು ತೊರೆಯ ನೀರಿನ ಬಳಿ ಹೋದರು.

ಈ ಅಸಾಧಾರಣ ಪುರುಷ ಸಿಂಹವನ್ನು ಒಮ್ಮೆಯಾದರೂ ಎಚ್ಚರದಲ್ಲಿರುವಾಗ ನೋಡಬೇಕೆಂಬ ನನ್ನ ಬಯಕೆ ಇನ್ನೂ ಬಯಕೆಯಾಗಿಯೇ ಉಳಿದಿದೆ.

ಹಾಗೆ ನೋಡಿದರೆ ಯಾವಾಗ ಬೇಕಾದರೂ ನೋಡಬಹುದಾದಷ್ಟು ಹತ್ತಿರದಲ್ಲೇ ಈ ನೀರುದೋಸೆಯ ಹೋಟೆಲಿದೆ. ಆದರೂ ನಮ್ಮಿಬ್ಬರ ಭೇಟಿ ಅಚಾನಕ್ಕಾಗಿ ಆಗಲಿ ಎಂಬ ಆಸೆಯಿಂದ ನಾನು ಹಾಗೇ ಉಳಿದಿರುವೆ.

2011-09-19_1114ಈ ನಡುವೆ ಕಳೆದ ಬಾರಿ ಹೋದಾಗ ಆ ಹಿರಿಯ ಹೆಂಡತಿ ‘ನೀವೇನಾದರೂ ಕಥೆಗಾರರೋ? ಪೇಪರಿನಲ್ಲೇನಾದರೂ ಬರೆಯುತ್ತೀರೋ’ ಎಂದು ನಿಸೂರಾಗಿ ಕೇಳಿದ್ದಾರೆ.

ಅಷ್ಟೇ ನಿಸೂರಾಗಿ ಉತ್ತರಿಸಲಾಗದೆ ನಾನು ವಾಪಾಸ್ಸು ಬಂದಿದ್ದೇನೆ.

(ಜುಲೈ ೩೧, ೨೦೧೧)

(ಫೋಟೋಗಳೂ ಲೇಖಕರವು)

Advertisements