ಹೂವಿನಂತ ಹುಡುಗನ ವಂಶಾವಳಿ

‘ಅಲ್ಲ ರಾಮಚಂದ್ರರೇ ಪೋಲಿ ಪದ್ಯಗಳ ನೀವು, ಸೈಕಲ್ಲಿನಲ್ಲಿ ಹೊರಟಿರುವ ಹೂವಿನಂತಹ ನಿಮ್ಮ ಮಗ ರಜನೀಶ, ಜೀಪನ್ನೇ
ತೂಗಿಸಿದ ನಿಮ್ಮ ತಂದೆ ಸಿದ್ಧಿಭಟ್ಟರು, ಆನೆಗಳನ್ನು ಗೋಲಿಗಳಂತೆ ಬೀಳಿಸುತ್ತಿದ್ದ ನಿಮ್ಮ ಅಜ್ಜ ನರಸಿಂಹ ಭಟ್ಟರು,ನೀವು ಪೂಸಿ 2011-05-04_7484ಹೊಡೆದು ಮಾರುತ್ತಿರುವ ಕನ್ನಡ ಪುಸ್ತಕಗಳು, ನಿಲ್ಲದೆ ಸತಾಯಿಸುತ್ತಿರುವ ಈ ಮಳೆ ಇದನ್ನೆಲ್ಲ ಕಂಡು ನಿಮಗೇನನಿಸುತ್ತಿದೆ?’ ಎಂದು ಕೇಳಿದೆ.

‘ಎಲ್ಲವೂ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತೆ,ಎಲ್ಲರದೂ ಪ್ರಯೋಜನಕ್ಕೆ ಇಲ್ಲದ ಒಳ್ಳೆಯತನ’’ ಎಂದು ಅವರು ಒಂದೇ ಮಾತಿನಲ್ಲಿ ಎಲ್ಲ ಹೇಳಿ ಮುಗಿಸಿದರು.

Advertisements

2011-05-03_7614ಇಪ್ಪತ್ತೆರಡು ವರ್ಷದ ರಜನೀಶ ಸುರಿಯುತ್ತಿದ್ದ ಮಳೆಯಲ್ಲಿ ಗೇರು ಸೈಕಲನ್ನೇರಿ ಮಂಗಳೂರಿಂದ ಬೆಂಗಳೂರಿಗೆ ಏಕಾಂಗಿಯಾಗಿ ಜಾಥಾ ಹೊರಟಿದ್ದ.

‘ಸಾರ್, ನಾನು ಇದೀಗ ತಾನೇ ಅರಳುತ್ತಿರುವ ಕುಸುಮದಂತಹ ಯುವಕ’ ಎಂದು ಪರಿಚಯಿಸಿಕೊಂಡ.

‘ಸಾರ್, ಒಳಗೆ ಬೆವರುತ್ತಿರುವ ದೇಹ, ಹೊರಗೆ ಸುರಿಯುತ್ತಿರುವ ಮಳೆ, ಇಂತಹ ಹೊತ್ತಲ್ಲಿ ಸೈಕಲ್ಲು ಹೊಡೆಯುತ್ತಿದ್ದರೆ ಜನ್ಮ ಸಾರ್ಥಕವಾದಂತೆ ಅನಿಸುತ್ತದೆ’ ಎಂದೂ ಹೇಳಿದ.

‘ಇಪ್ಪತ್ತೆರಡು ವಸಂತಗಳ ಅರಳುತ್ತಿರುವ ಹೂವೇ, ನಿನ್ನ ತಂದೆ ತಾಯಿ, ಮನೆತನಗಳ ಕುರಿತು ಹೇಳುತ್ತೀಯಾ’ ಎಂದು ಕೇಳಿದೆ.

ತನ್ನ ತಂದೆಯ ಹೆಸರು ಲೈನ್ಕಜೆ ರಾಮಚಂದ್ರ ಎಂದು ಆತ ಹೇಳಿದ್ದೇ ನನಗೆ ಮಿಂಚು ಸಂಚರಿಸಿದಂತಾಯಿತು.

ಈ ಲೈನ್ಕಜೆ ರಾಮಚಂದ್ರರನ್ನು ಲಂಕೇಶರು ಪ್ರೀತಿಯಿಂದ ‘ಉಪ್ಪಿನಕಾಯಿ ರಾಮಚಂದ್ರ’ ಎಂದು ಕರೆಯುತ್ತಿದ್ದರು.ಲಂಕೇಶರ ನೀಲು ಕವಿತೆಗಳನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದ ಈ ರಾಮಚಂದ್ರ, ದೊಡ್ಡ ಬಾಟಲಿನಲ್ಲಿ ಉಪ್ಪಿನಕಾಯಿಯನ್ನು ಬೆಂಗಳೂರಿಗೆ ಹೊತ್ತು ಲಂಕೇಶರಿಗೆ ಅರ್ಪಿಸಿ ಬರುತ್ತಿದ್ದರು.ಜೊತೆಗೆ ಮಗನಾದ ಈ ರಜನೀಶನೂ ಇರುತ್ತಿದ್ದ.ಲಂಕೇಶರು ಈ ಬಾಲಕನಿಗೆ ಚಾಕಲೇಟು ಕೊಡುತ್ತಿದ್ದರು.ಹಾಗಾಗಿ ರಜನೀಶನೆಂಬ ಈ ಬಾಲಕ ಲಂಕೇಶರನ್ನು ‘ಚಾಕಲೇಟು ಲಂಕೇಶು’ ಎಂದು ಕರೆಯುತ್ತಿದ್ದ.

2011-05-04_7503ನಾನು ಕಲಿತ ಶಾಲೆಯಲ್ಲೇ ಕಲಿತ ಈ ರಾಮಚಂದ್ರ ನನಗಿಂತ ನಾಲ್ಕೈದು ವರ್ಷ ದೊಡ್ಡವರು.ಶಾಲೆಯಲ್ಲಿರುವಾಗಲೇ ಪೋಲಿ ಮಾತುಗಳನ್ನು ಜೋರಾಗಿ ಹೇಳುತ್ತಿದ್ದ ಲೈನ್ಕಜೆ ರಾಮಚಂದ್ರನನ್ನು ಎಲ್ಲರೂ ಪ್ರೀತಿಯಿಂದ ‘ಲೈಂಗಿಕ ರಾಮಚಂದ್ರ’ ಎಂದೇ ಸಂಬೋಧಿಸುತ್ತಿದ್ದರು.ಆ ಮಾತುಗಳಿಂದ ಹೊರಬರಲೋ ಎಂಬಂತೆ ಈ ರಾಮಚಂದ್ರ ಆ ಕಾಲದಲ್ಲೇ ಲಂಕೇಶರ ಪತ್ರಿಕೆಯ ಏಜನ್ಸಿಯನ್ನು ವಹಿಸಿಕೊಂಡು ನಮಗೆಲ್ಲರಿಗೂ ನೀಲು ಕವಿತೆಗಳನ್ನೂ,ರಜನೀಶರ ಸುಖಗಳನ್ನೂ ಓದಿ ಹೇಳುತ್ತಾ ಸಂಪಾಜೆಯಲ್ಲಿ ಓಡಾಡಿಕೊಂಡಿದ್ದರು.

ಈ ಲೈನ್ಕಜೆ ರಾಮಚಂದ್ರರ ತಂದೆಯ ಹೆಸರು ಸಿದ್ಧಿ ಗಣಪತಿ ಭಟ್ಟ ಎಂಬುದಾಗಿತ್ತು.ಅವರನ್ನು ನಾವೆಲ್ಲ ‘ಸುದ್ದಿ ಭಟ್ಟರು’ ಎಂದೇ ಕರೆಯುತ್ತಿದ್ದೆವು. ಅಪರಿಮಿತ ಜ್ಞಾನಿಯೂ, ಅಮಿತವಾದ ಕೋಪಿಷ್ಠನೂ ಆದ ಸಿದ್ಧಿ ಭಟ್ಟರು ಪಟ್ಟೆಗಳಿಲ್ಲದ ಬಿಳಿಯ ವೇಸ್ಟಿ, ಅದರ ಮೇಲೆ ತೂಗುತ್ತಿರುವ ದುಡ್ಡು ತುಂಬಿಕೊಂಡಿರುವ ಬಟ್ಟೆಯ ಎರಡು ಪುಟ್ಟ ಚೀಲಗಳು, ಅವುಗಳು ಕಾಣಿಸದಂತೆ ಮೇಲೆ ಒಂದು ಬಿಳಿಯ ಅಂಗಿ ಹಾಕಿಕೊಂಡು ಸಂಪಾಜೆ ಗೇಟಲ್ಲಿ ಕೈತೋರಿಸಿ ಬಸ್ಸು ಹತ್ತಿದರೆಂದರೆ ಆ ಬಸ್ಸಿನೊಳಗೆ ತಮಾಷೆ, ವಿಜ್ಞಾನ, ಖಗೋಳ ಶಾಸ್ತ್ರ, ಜ್ಯೋತಿಷ್ಯ, ತತ್ವಜ್ಞಾನಗಳ ಒಂದು ದೊಡ್ಡ ಪ್ರಹಸನವೇ ನಡೆದು ಹೋಗುತ್ತಿತ್ತು.ತಮಾಷೆಯ ಮಾತುಗಳಿಂದ 2011-05-03_7630ಮಕ್ಕಳನ್ನು ನಗಿಸಲು ತೊಡಗುತ್ತಿದ್ದ ಅವರು ಇದ್ದಕ್ಕಿದ್ದಂತೆ ತಾರಕ ಧ್ವನಿಯಲ್ಲಿ ಇಂಗ್ಲಿಷಿನಲ್ಲಿ ಮಾತನಾಡಲು ತೊಡಗುತ್ತಿದ್ದರು.ಇಂಗ್ಲಿಷಿನಲ್ಲೇ ಅರಿಸ್ಟಾಟಲನ ತತ್ವವನ್ನೂ, ಆರ್ಕಿಮಿಡಿಸನ ನಿಯಮವನ್ನೂ ಪಟಪಟನೆ ಉದುರಿಸುತ್ತಿದ್ದ ಅವರನ್ನು ಬೆಕ್ಕಸಬೆರಗಾಗಿ ಕೇಳಿ ಅವಮಾನಿತರಾಗುತ್ತಿದ್ದೆವು.ಆಮೇಲೆ ಅವರಿಗೆ ತಲೆ ಸರಿಯಿಲ್ಲವೆಂದು ತೀರ್ಮಾನಿಸಿ ಮುಠ್ಠಾಳರಂತೆ ಶಾಲೆಗೆ ಹೋಗುತ್ತಿದ್ದೆವು.

ಈ ಸಿದ್ಧಿ ಗಣಪತಿ ಭಟ್ಟರ ಬಳಿ ಆ ಕಾಲದಲ್ಲೇ ಒಂದು ಜೀಪು ಇತ್ತು.ಅವರು ಅದರ ಚಕ್ರಗಳನ್ನು ಕಳಚಿಟ್ಟು, ಸರಪಳಿಯಿಂದ ಆ ಜೀಪನ್ನು ಮಾಡಿನ ತೊಲೆಗೆ ತೂಗು ಹಾಕಿದ್ದರು.ಇದು ಆ ಕಾಲದಲ್ಲಿ ಸರಕಾರದವರು ಪೆಟ್ರೋಲಿನ ಬೆಲೆಯನ್ನು ಏರಿಸಿದ್ದಕ್ಕೆ ಸಿದ್ಧಿ ಭಟ್ಟರು ತೋರಿಸಿದ ಸಾತ್ವಿಕ ಪ್ರತಿಭಟನೆಯಾಗಿತ್ತು. ಪೆಟ್ರೋಲ್ ಹಾಕಿಸಿ ಓಡಿಸಿದರಲ್ಲವೇ ಸರಕಾರದವರ ಬೇಳೆ ಬೇಯುವುದು ಎಂದು ಭಟ್ಟರು ಜೀಪನ್ನು ಓಡಿಸದೇ ನಿಲ್ಲಿಸಿದ್ದರು.ಓಡಿಸಿದರೂ, ಓಡಿಸದಿದ್ದರೂ ನಾಲ್ಕು ಚಕ್ರದ ವಾಹನ ತೆರಿಗೆಯನ್ನು ಸಲ್ಲಿಸಲೇ ಬೇಕು ಎಂದು ಸರಕಾರದವರು ನೋಟೀಸು ಕೊಟ್ಟಿದ್ದರು.ವಾಹನ ನೆಲದ ಮೇಲೆ ಇದ್ದರಲ್ಲವೇ ವಾಹನ ತೆರಿಗೆ 2011-05-03_7656ಕಟ್ಟಬೇಕಾಗಿರುವುದು ಎಂದು ಸಿದ್ಧಿ ಭಟ್ಟರು ಆ ಜೀಪಿನ ಚಕ್ರಗಳನ್ನು ಕಳಚಿಟ್ಟು ನೆಲ ತಾಕದ ಹಾಗೆ ತೂಗು ಬಿಟ್ಟಿದ್ದರು.ತೆರಿಗೆ ವಸೂಲಿಯವರು ಬಂದಾಗ ‘ಆಹಾ ಈಗೇನು ಮಾಡುವಿರಿ?’ ಎಂದು ಗಹಗಹಿಸಿ ನಕ್ಕಿದ್ದರು.

ನಮ್ಮ ಲೈನ್ಕಜೆ ರಾಮಚಂದ್ರ ಈ ಸಿದ್ಧಿ ಭಟ್ಟರ ಮಗ. ಸಿದ್ಧಿ ಭಟ್ಟರ ತಂದೆಯ ಹೆಸರು ಅಂಗ್ರಿ ನರಸಿಂಹ ಭಟ್ಟ.ಈ ಅಂಗ್ರಿ ನರಸಿಂಹ ಭಟ್ಟರು ಬ್ರಿಟಿಷರ ಕಾಲದಲ್ಲೇ ಒಂಬತ್ತು ಆನೆಗಳನ್ನೂ ಇಪ್ಪತ್ತಮೂರು ಹುಲಿಗಳನ್ನೂ ಕೊಂದಿದ್ದರು. ಬಹಳ ಉಪದ್ರ ಕೊಡುತ್ತಿದ್ದ ಒಂಟಿಸಲಗವೊಂದನ್ನು ಕೊಂದದ್ದಕ್ಕೆ ಅವರಿಗೆ ಆ ಕಾಲದಲ್ಲಿ ಸರಕಾರ ಐನೂರು ರೂಪಾಯಿಗಳ ಇನಾಮನ್ನೂ ಕೊಟ್ಟಿತ್ತು

2011-05-03_7626ಇದೇ ಅಂಗ್ರಿ ನರಸಿಂಹ ಭಟ್ಟರು ಆ ಕಾಲದಲ್ಲಿ ಕಣ್ಣಾನೂರು ಜೈಲಿನಲ್ಲಿ ಎರಡು ವರ್ಷ ಸೆರೆವಾಸವನ್ನೂ ಅನುಭವಿಸಿದ್ದರು.ಭಟ್ಟರು ಕೆಳಗಿನ ಜಾತಿಗೆ ಸೇರಿದ್ದ ಕೇಡಿಯೊಬ್ಬನ ತಲೆ ಬೋಳಿಸಿ, ಆತನಿಗೆ ಜನಿವಾರ ತೊಡಿಸಿ ಆತನನ್ನು ದೇವರ ಕೋಣೆಯೊಳಗೆ ಪುರೋಹಿತನಂತೆ ಕೂರಿಸಿ ಅಡಗಿಸಿಟ್ಟಿದ್ದರಂತೆ. ಅದು ಬ್ರಿಟಿಷರಿಗೆ ಗೊತ್ತಾಗಿ ಭಟ್ಟರನ್ನು ಜೈಲಿಗೆ ಕಳಿಸಿದ್ದರಂತೆ.ಕಾಡು ಹಂದಿಗಳ ಬೇಟೆಯನ್ನು ಬಹಳ ಖುಷಿಯಿಂದ ಮಾಡುತ್ತಿದ್ದ ನರಸಿಂಹ ಭಟ್ಟರು ಬೇಟೆಯ ಮಾಂಸವನ್ನು ಕೊಯ್ಯಿಸಿ ಆಳುಗಳಿಗೆ ಸಮನಾಗಿ ಹಂಚಿ ಕೈತೊಳೆದು ನಿಸೂರಾಗಿ ಮನೆಗೆ ಮರಳುತ್ತಿದ್ದರಂತೆ.

ಈ ಎಲ್ಲ ಕತೆಗಳೂ ನನ್ನ ಅರಿವಿಗೆ ಬಂದದ್ದು ಈ ಮಳೆಗಾಲದ ಶುರುವಿನಲ್ಲಿ ಹೀಗೇ ಸಂಪಾಜೆಯ ಅರೆಕಲ್ಲು ಕಾಡಿನೊಳಗಡೆ ಕಥೆಗಳನ್ನು ಹುಡುಕುತ್ತಾ ತಿರುಗುತ್ತಿದ್ದಾಗ.

ಕಾಡಿನೊಳಗಡೆ ಯಾರ ಅರಿವಿಗೂ ಸಿಗದೆ ಮಲಗಿರುವ ಮರದ ಅರಮನೆಯಂತಹ ಹಳೆಯ ಕಾಲದ ಮನೆಯ ಬಾಗಿಲಿಗೆ ಚಿಲಕವೇ ಇರಲಿಲ್ಲ.ಹೊರಗಿನ ಅಡಿಕೆ ತೋಟ ಹಳದಿ ಕಾಯಿಲೆಗೆ ಸಿಲುಕಿ ಧೈತ್ಯ ಹುಳದಂತಹ ಹಳದಿ ಬಣ್ಣದ ಜೆಸಿಬಿ 2011-05-03_7653ಯಂತ್ರವೊಂದು ಅಡಿಕೆ ಗುಡ್ಡವನ್ನು ಉರುಳಿಸಿ ರಬ್ಬರು ನೆಡಲು ನೆಲವನ್ನು ಅಣಿ ಮಾಡುತ್ತಿತ್ತು.ಅದು ಸಿದ್ಧಿ ಗಣಪತಿ ಭಟ್ಟರ ಮನೆಯೆಂದು ಯಾರೋ ಹೇಳಿದರು.

ಮನೆಯೊಳಗೆ ಇಣುಕಿದರೆ ಅಂಗ್ರಿ ನರಸಿಂಹ ಭಟ್ಟರು ಹೊಡೆದು ಉರುಳಿಸಿದ ಒಂಟಿಸಲಗದ ಸಿಮೆಂಟಿನ ವಿಗ್ರಹ ಅಣಕಿಸುತ್ತಾ ನನ್ನನ್ನು ನೋಡುತ್ತಿತ್ತು.ಅದರ ಪಕ್ಕದಲ್ಲೇ ಸಿದ್ಧಿ ಗಣಪತಿಯವರ ಜೀಪಿನ ಫೋಟೋವೂ, ಅವರ ಸಂಸಾರದ ಚಿತ್ರಗಳೂ ಗೋಡೆಯಲ್ಲಿ ನೇತಾಡುತ್ತಿದ್ದವು.

ಲೈನ್ಕಜೆ ರಾಮಚಂದ್ರರು ಮನೆಯಲ್ಲಿರಲಿಲ್ಲ. ಸಾವಯವ ಕೃಷಿಯಿಂದಲೂ, ಸಾಲಗಳ ಬಾಧೆಯಿಂದಲೂ ಜರ್ಜರಿತವಾಗಿರುವ ಅವರು ಊರು ಬಿಟ್ಟು ವರ್ಷಗಳಾಗಿವೆಯೆಂತಲೂ ಈಗ ಕನ್ನಡದ ಪುಸ್ತಕಗಳನ್ನು ಜಾತ್ರೆಗಳಲ್ಲೂ, ಮೇಳಗಳಲ್ಲೂ, ಮದುವೆ ಹಾಲುಗಳಲ್ಲೂ ಮಾರುತ್ತಾ ಬದುಕುತ್ತಿರುವರೆಂದೂ ಯಾರೋ ಹೇಳಿದರು.

2011-05-03_7646ನನ್ನ ಬಾಲ್ಯಕಾಲದ ನೀಲು ಪ್ರೇಮಿಯ ಜೀವನ ಹೀಗೆ ಭಗ್ನವಾಗಿರುವುದು ಕೇಳಿ ನೊಂದ ನಾನು ಹೇಗಾದರೂ ಮಾಡಿ ನನ್ನ ಹಳೆಯ ಲೈಂಗಿಕ ರಾಮಚಂದ್ರರನ್ನು ಹುಡುಕಿಯೇ ತೀರಬೇಕೆಂದು ಹೆಣಗುತ್ತಿದ್ದೆ.

ಇಂತಹ ಹೊತ್ತಲ್ಲೇ ಬಾಲ ಭಗವಂತನಂತೆ ರಜನೀಶನೆಂಬ ಯುವಕನು ಗೇರು ಸೈಕಲು ಹೊಡೆಯುತ್ತಾ ಬಿರು ಮಳೆಯಲ್ಲಿ ಏಕಾಂಗಿಯಾಗಿ ಜಾಥಾ ಹೊರಟವನು ಕಂಡು ಬಂದದ್ದು.

‘ನೀನು ದೇವರೇ ಕಳಿಸಿದ ಬಾಲಕ ಮಾರಾಯ’ ಎಂದು ಆತನ ಬೆನ್ನು ತಟ್ಟಿ ಕಳಿಸಿ ಆತನಿಂದ ಲೈನ್ಕಜೆ ರಾಮಚಂದ್ರರ ಮೇಲ್ವಿಳಾಸವನ್ನು ಪಡೆದು ಒಂದು ದಿನ ಅವರನ್ನು ಮಡಿಕೇರಿಗೆ ಕರೆಸಿಕೊಂಡೆ.

ಮಡಿಕೇರಿಯ ಮಳೆಯಲ್ಲಿ ನಾನೂ ರಾಮಚಂದ್ರರೂ ಬಹಳ ಹೊತ್ತು ಹಳೆಯದನ್ನೆಲ್ಲಾ ನೆನಪಿಸಿಕೊಂಡು ಮಾತನಾಡಿದೆವು.ನಡುನಡುವಲ್ಲಿ ಉಪ್ಪಿನಕಾಯಿಯಂತೆ ಲಂಕೇಶರ ನೀಲು, ರಜನೀಶರ ಸ್ಟೈಲು, ಸಿದ್ಧಿಭಟ್ಟರ ಜೀಪು, ಅಂಗ್ರಿ ನರಸಿಂಹ ಭಟ್ಟರ ಆನೆ ಎಲ್ಲವೂ ಬರುತ್ತಿದ್ದವು.ಜೊತೆಯಲ್ಲಿ ರಾಮಚಂದ್ರರು ಕೆಲವು ಹೊಸ ಪೋಲಿ ಜೋಕುಗಳನ್ನೂ ಹೇಳಿದರು.

‘ಅಲ್ಲ ರಾಮಚಂದ್ರರೇ ಪೋಲಿ ಪದ್ಯಗಳ ನೀವು, ಸೈಕಲ್ಲಿನಲ್ಲಿ ಹೊರಟಿರುವ ಹೂವಿನಂತಹ ನಿಮ್ಮ ಮಗ ರಜನೀಶ, ಜೀಪನ್ನೇ
ತೂಗಿಸಿದ ನಿಮ್ಮ ತಂದೆ ಸಿದ್ಧಿಭಟ್ಟರು, ಆನೆಗಳನ್ನು ಗೋಲಿಗಳಂತೆ ಬೀಳಿಸುತ್ತಿದ್ದ ನಿಮ್ಮ ಅಜ್ಜ ನರಸಿಂಹ ಭಟ್ಟರು,ನೀವು ಪೂಸಿ 2011-05-04_7484ಹೊಡೆದು ಮಾರುತ್ತಿರುವ ಕನ್ನಡ ಪುಸ್ತಕಗಳು, ನಿಲ್ಲದೆ ಸತಾಯಿಸುತ್ತಿರುವ ಈ ಮಳೆ ಇದನ್ನೆಲ್ಲ ಕಂಡು ನಿಮಗೇನನಿಸುತ್ತಿದೆ?’ ಎಂದು ಕೇಳಿದೆ.

‘ಎಲ್ಲವೂ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತೆ,ಎಲ್ಲರದೂ ಪ್ರಯೋಜನಕ್ಕೆ ಇಲ್ಲದ ಒಳ್ಳೆಯತನ’’ ಎಂದು ಅವರು ಒಂದೇ ಮಾತಿನಲ್ಲಿ ಎಲ್ಲ ಹೇಳಿ ಮುಗಿಸಿದರು.

( ಜುಲೈ ೧೭, ೨೦೧೧ )

(ಫೋಟೋಗಳೂ ಲೇಖಕರವು)

One thought on “ಹೂವಿನಂತ ಹುಡುಗನ ವಂಶಾವಳಿ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s