ಇರ್ದೆ ಬೈಲಾಡಿ ಮಠದ ವಿಷ್ಣು ಮಡುಕುಳ್ಳಾಯರ ಕಥೆ

2011-06-30_9079ರ್ದೆ ಬೈಲಾಡಿ ಮಠದ ವಿಷ್ಣು ಮಡುಕುಳ್ಳಾಯರು ‘ಇವರೇ, ಒಂದು ನಿಮಿಷ ಇರಿ,ಈ ಎಲೆ ಅಡಿಕೆ ಬಾಯಿಗೆ ಹಾಕಿಕೊಳ್ಳುತ್ತೇನೆ, ಆಮೇಲೆ ನನ್ನ ಕಥೆ ಕೇಳುವಿರಂತೆ’ ಎಂದು ಜಗಿಯುತ್ತಾ ವಿರಾಮದಲ್ಲಿ ಕುಳಿತಿದ್ದರು.

ಎಂಬತ್ತಮೂರು ವರ್ಷದ ಮಡುಕುಳ್ಳಾಯರು ಬೆಳಗೆಯೇ ತಮ್ಮ ಬಲು ಹಳೆಯದಾದ ಎಂಇಟಿ ಸ್ಕೂಟರಿನಲ್ಲಿ ಕಲ್ಲುಗುಂಡಿಗೆ ಹೋಗಿದ್ದವರು ಅಲ್ಲಿನ ಪಂಡಿತರಿಂದ ಉಬ್ಬಸಕ್ಕೆ ಔಷದವನ್ನೂ, ದೇವಸ್ಥಾನದ ಅಂಗಳ ಗುಡಿಸಲು ಹಿಡಿಸುಡಿಯನ್ನೂ,ಕಾಫಿಗೆ ಬೆಲ್ಲವನ್ನೂ ಖರೀದಿಸಿ, ಅಲ್ಲಿಯೇ ಊಟವನ್ನೂ ಮುಗಿಸಿಕೊಂಡು ಆ ಕಾಡುದಾರಿಯಲ್ಲಿ ಆ ಲಠಾರಿ ಗಾಡಿಯನ್ನ ಓಡಿಸುತ್ತಾ ಬಂದು ತಲುಪಿದ್ದರು.

ಅವರಷ್ಟೇ ವಯಸ್ಸಾದಂತೆ ಕಾಣಿಸುವ ಆ ಹಳೆಯ ಗಾಡಿ ತಾನೂ ಸುಸ್ತು ನಿವಾರಿಸಿಕೊಳ್ಳುತ್ತಿರುವಂತೆ ಸಣ್ಣಗಿನ ಲಟಲಟ ಸದ್ದು ಮಾಡುತ್ತಾ ಗೋಡೆಗೊರಗಿ ನಿಂತಿತ್ತು.

ಮದೆನಾಡು ಸಂಪಾಜೆಯ ನಡುವಿನ ಹಳ್ಳಕೊರಕಲು ದಾರಿಯಲ್ಲಿ ಮಡುಕುಳ್ಳಾಯರು ವಯಸ್ಸಾದ ಜೀರುಂಡೆಯಂತಹ ತಮ್ಮ ಈ ಗಾಡಿಯಲ್ಲಿ ಉಬ್ಬಸಪಡುತ್ತಾ ಹತ್ತಿಕೊಂಡು ಹೋಗುವುದನ್ನು ಹಲವು ಬಾರಿ ನೋಡಿದ್ದೆನಾದರೂ ಅವರ ಹೆಸರು ಮಡುಕುಳ್ಳಾಯರೆಂದಾಗಲೀ, ಅವರು ಇಲ್ಲಿನ ಪುರಾತನವಾದ ಶಿವದೇಗುಲವೊಂದರ ಅರ್ಚಕರಾಗಿರುವರೆಂದಾಗಲೀ ತಿಳಿದಿರಲಿಲ್ಲ. ಬೆಟ್ಟ ಕಡಿದು ಸಮ ಮಾಡಿ ಅಡಿಕೆ ತೋಟವನ್ನೋ, ರಬ್ಬರು ತೋಟವನ್ನೋ ಎಬ್ಬಿಸಿ ಕಾಡಾನೆಗಳೊಂದಿಗೂ, ಜಿಗಣೆಗಳೊಂದಿಗೂ ಹೆಣಗಾಡಿಕೊಂಡೇ ವಯಸ್ಸಾಗಿ ಹೋಗಿರುವ ಸಾಕಷ್ಟು ಸಾಹಸಿಗಳಿರುವ ಈ ಪ್ರದೇಶದಲ್ಲಿ ಮುದುಕರು ಗಾಡಿ ಓಡಿಸಿಕೊಂಡು ಹೋಗುವುದು ಅಂತಹ ದೊಡ್ಡ ವಿಶೇಷವೇನೂ ಆಗಿರಲಿಲ್ಲ.

ಆದರೆ ಒಂದು ಸಲ ಜೋರಾಗಿ ಮಳೆ ಬಂದು ರಸ್ತೆಯೆಲ್ಲಾ ಬಂದಾಗಿ ವಾಹನಗಳು ಸಾಲುಗಟ್ಟಿ ಒಂದರ ಹಿಂದೆ ಒಂದು ಮೌನವಾಗಿ ನಿಂತುಕೊಂಡಿದ್ದಾಗ ಈ ಸಾಲಿನ ನಡುವೆ ಮಡುಕುಳ್ಳಾಯರು ಮಾತ್ರ ತಮ್ಮ ಎಂಇಟಿ ಗಾಡಿಯನ್ನು ಬಂದು ಮಾಡದೆ ಕರ್ಕಶವಾಗಿ ಸದ್ದು ಮಾಡಿಕೊಂಡು ನಿಂತಿದ್ದರು.ಆ ಸದ್ದಿನಲ್ಲಿ ಕೈಬಾಯಿ ಸನ್ನೆಯಲ್ಲಿ ಎಷ್ಟು ತಿಳಿಹೇಳಿದರೂ ತಮ್ಮ ಗಾಡಿಯ ಸದ್ದನ್ನು ಏರಿಸುತ್ತಲೇ ಇದ್ದರು.ಆ ಗಾಡಿಯ ಸದ್ದಿಂದಾಗಿ ಅವರು ಹೇಳುತ್ತಿರುವುದೂ ನಮಗೆ ಗೊತ್ತಾಗಲಿಲ್ಲ.ಕೊನೆಗೆ ಪೆಟ್ರೋಲು ಮುಗಿದು ಅವರ ಗಾಡಿ ತನ್ನಿಂತಾನಾಗಿ ನಿಂತು ಹೋಗಿತ್ತು.ಆಗ ತಿಳಿದು ಬಂದ ವಿಷಯವೆಂದರೆ ಮಡುಕುಳ್ಳಾಯರ ಆ ಗಾಡಿ ಒಮ್ಮೆ ನಿಂತುಹೋಯಿತೆಂದರೆ ಮತ್ತೆ ಸ್ಟಾರ್ಟ್ ಆಗಲು ಬಹಳ ಸಮಯವಾಗುತ್ತಿತ್ತು ಮತ್ತು ಅದನ್ನು ಒದ್ದು ಸ್ಟಾರ್ಟ್ ಮಾಡುವಷ್ಟು ತ್ರಾಣ ಮಡುಕುಳ್ಳಾಯರಿಗೂ ಇರುತ್ತಿರಲಿಲ್ಲ.ಹಾಗಾಗಿ ಏನಾದರೂ ಅವರು ತಮ್ಮ ಗಾಡಿಯನ್ನು ದಾರಿಯ ನಡುವೆ ನಿಲ್ಲಿಸುತ್ತಿರಲಿಲ್ಲ.

2011-06-30_9100ಆಗ ನಾನು ಗಮನಿಸಿದ ಇನ್ನೊಂದು ಮಹತ್ವದ ವಿಷಯವೆಂದರೆ ಮಡುಕುಳ್ಳಾಯರ ಬಾಗಿ ಹೋಗಿದ್ದ ದೇಹ.ಎಂಬತ್ತರ ಮೇಲಿದ್ದ ಅವರಿಗೆ ವಯಸ್ಸಿನಿಂದಾಗಿ ನಡೆಯಲೂ ಆಗುತ್ತಿರಲಿಲ್ಲ.ಹಾಗಾಗಿ ಅವರು ಈ ಹಳೆಯ ಗಾಡಿಯನ್ನು ಅದು ಹೇಗೋ ಯಾರಿಂದಲೋ ಒದೆಸಿ ಸ್ಟಾರ್ಟ್ ಮಾಡಿಸಿಕೊಂಡು ಓಡಾಡುತ್ತಿದ್ದರು.

ವಿಷ್ಣು ಮಡುಕುಳ್ಳಾಯರ ಕುರಿತ ಪ್ರೀತಿ ನನಗೆ ಇಮ್ಮಡಿಸಿದ್ದು ಆನಂತರ ಸಂಭವಿಸಿದ ಇನ್ನೊಂದು ಅವಘಡದಿಂದ.

ಮೂರು ತಿಂಗಳುಗಳ ಹಿಂದೆ ಹೀಗೇ ಗಾಡಿಯಲ್ಲಿ ಹೋಗುತ್ತಿದ್ದ ಅವರನ್ನು ವಾಹನವೊಂದು ಗುದ್ದಿ ಬೀಳಿಸಿತ್ತು.ಯಾರೂ ಇಲ್ಲದ ದಾರಿಯಲ್ಲಿ ತಲೆಯಿಂದ ರಕ್ತ ಸೋರಿಕೊಂಡು ಪ್ರಜ್ಞೆ ಇಲ್ಲದೆ ಮಡುಕುಳ್ಳಾಯರು ಬಿದ್ದಿದ್ದರು.ನನಗೆ ಗೊತ್ತಿರುವ ಜೀಪಿನವರೊಬ್ಬರು ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿದ್ದರು.ತಲೆಯೆಲ್ಲಾ ಹೊಲಿಗೆ ಹಾಕಿಸಿಕೊಂಡ ಮಡುಕುಳ್ಳಾಯರಿಗೆ ಸಂಜೆಯ ಹೊತ್ತು ಪ್ರಜ್ಞೆ ಬಂದು ಸಿಟ್ಟೂ ಬಂದುಬಿಟ್ಟಿತ್ತು.ಯಾಕೆಂದರೆ ಅವರು ಅರ್ಚಕರಾಗಿರುವ ಶಿವನ ದೇಗುಲದ ಸಂಜೆಯ ಪೂಜೆಗೆ ಹೊತ್ತಾಗಿತ್ತು.ಕಾಡಿ ಬೇಡಿ ಆಸ್ಪತ್ರೆಯಿಂದ ಪಾರಾಗಿ ಬಂದ ಅವರು ಆ ಸಂಜೆಯೂ ತಪ್ಪದೆ ಶಿವನಿಗೆ ಪೂಜೆ ಸಲ್ಲಿಸಿದ್ದರು.

ಈಗ ನೋಡಿದರೆ ತಲೆಗೆ ಪೆಟ್ಟಾಗಿದ್ದ ವಿಷ್ಣು ಮಡುಕುಳ್ಳಾಯರು ಎಲೆಯಡಿಕೆ ಜಗಿಯುತ್ತಾ, ನುಗ್ಗಿ ಬರುತ್ತಿದ್ದ ಉಬ್ಬಸವನ್ನು ಅದುಮಿಟ್ಟುಕೊಂಡು ತಮ್ಮ ಜೀವಿತ ಕಥೆಯನ್ನು ಆ ಚಳಿಗಾಳಿ ಮಳೆಯಲ್ಲಿ ವಿವರಿಸಿ ಹೇಳುತ್ತಿದ್ದರು.ಅವರ ಹಣೆಯ ಗಾಯದ ಗುರುತುಗಳು ಒಣಗಿ ಹೋಗಿದ್ದರೂ ಅವರು ಹೇಳಿದ ಕಥೆಯಲ್ಲಿ ಇದಕ್ಕಿಂತಲೂ ಗುರುತರವಾದ ಗಾಯಗಳೂ, ವೃಣಗಳೂ, ವಿಷಾಧಗಳೂ ಎಗ್ಗಿಲ್ಲದೆ ಹಾದು ಹೋಗುತ್ತಿದ್ದವು.

2011-06-30_9064ವಿಷ್ಣು ಮಡುಕುಳ್ಳಾಯರ ತಂದೆ ಸುಬ್ರಾಯ ಮಡುಕುಳ್ಳಾಯರು ಇರ್ದೆಯ ವಿಷ್ಣುಮೂರ್ತಿ ದೇಗುಲದಲ್ಲಿ ಅರ್ಚಕರಾಗಿದ್ದವರು.ವಿಷ್ಣು ಮಡುಕುಳ್ಳಾಯರ ತಾಯಿ ಇವರಿಗೆ ಮೂರು ವರ್ಷವಿದ್ದಾಗಲೇ ತೀರಿಹೋಗಿದ್ದರು.ಬೇರೊಂದು ಮದುವೆಯಾದ ತಂದೆ ಮಗನನ್ನು ಮನೆಯಿಂದ ಹೊರಗೆ ಹಾಕಿದ್ದರು.ಆಗ ಇವರಿಗೆ ಇಪ್ಪತ್ತ ಮೂರು ವರ್ಷ.ಆಮೇಲೆ ಬಹಳ ವರ್ಷ ಇವರು ಹೋಟೇಲೊಂದರಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡಿದ್ದರು.ಈ ನಡುವೆ ಇವರಿಗೆ ಮದುವೆಯೂ ಆಗಿತ್ತು.ಮದುವೆಯಾದ ಹೆಂಡತಿಯೂ ಕೆಲವೇ ವರ್ಷಗಳಲ್ಲಿ ಕ್ಯಾನ್ಸರಿಗೆ ತುತ್ತಾಗಿ ತೀರಿಹೋಗಿದ್ದಳು.ಅದರಲ್ಲಿ ಹುಟ್ಟಿದ ಮಗನಿಗೆ ಕಾಯಿಲೆ.ಕೈಕಾಲುಗಳು ಬಿಲ್ಲಿನಂತೆ ಡೊಂಕಾಗಿ ಬುದ್ದಿಯೂ ಬೆಳೆಯದಿದ್ದ ಆ ಮಗನನ್ನು ಕಟ್ಟಿಕೊಂಡು ವಿಷ್ಣು ಮಡುಕುಳ್ಳಾಯರು ಬೇರೆ ಬೇರೆ ಅವತಾರಗಳನ್ನು ಎತ್ತಿ ಬದುಕಿದ್ದರು.

ನಾನಾ ಊರುಗಳಲ್ಲಿ ಹೋಟೆಲಿಟ್ಟುಕೊಂಡು ಎಲ್ಲರೂ ಇವರನ್ನು ಹೋಟೆಲು ಭಟ್ಟರೆಂದು ಕರೆಯುತ್ತಿದ್ದರು.

ಈ ನಡುವಿನಲ್ಲಿ ಪುತ್ತೂರಿನಲ್ಲಿ ಒಂದು ಹಾಸ್ಟೆಲನ್ನೂ ನಡೆಸುತ್ತಿದ್ದರು.ಆಗ ಇವರನ್ನು ಹಾಸ್ಟೆಲು ಭಟ್ಟರೆಂದು ಕರೆಯುತ್ತಿದ್ದರು.

ಆ ಹಾಸ್ಟೆಲೂ ನಿಂತುಹೋದ ಮೇಲೆ ತಮ್ಮ ಅರವತ್ತನೆಯ ವಯಸಿನಲ್ಲಿ ಗತ್ಯಂತರವಿಲ್ಲದೆ ಇನ್ನೊಂದು ಮದುವೆಯಾಗಿದ್ದರು.ಆಕೆ ತೀರಾ ಸಣ್ಣ ಹುಡುಗಿ.ಆಕೆಯೊಡನೆ ಸೇರಿಕೊಂಡು ಮನೆಯಲ್ಲೇ ಹೋಳಿಗೆ ಮಾಡಿಕೊಂಡು ಮಾರುತ್ತಿದ್ದರು.ಆಗ ಇವರನ್ನು ಎಲ್ಲರೂ ಹೋಳಿಗೆ ಭಟ್ಟರೆಂದು ಕರೆಯುತ್ತಿದ್ದರು.

ಆ ಹೋಳಿಗೆ ಮಾಡುತ್ತಿದ್ದ ಹೊತ್ತಲ್ಲೇ ಇವರಿಗೆ ಇಬ್ಬರು ಹೆಣ್ಣುಮಕ್ಕಳೂ ಜನಿಸಿದ್ದರು.ಆ ಹೋಳಿಗೆಯ ವ್ಯಾಪಾರವೂ ಲಾಸಾಗಿ ಹೋದ ಮೇಲೆ ಇನ್ನೇನು ಮಾಡುವುದು ಎಂದು ಚಿಂತೆಯಲ್ಲಿ ಕುಳಿತಿದ್ದಾಗ ಇವರನ್ನು ಯಾರೋ ಶಿವ ದೇಗುಲದ ಪೂಜೆ ಭಟ್ಟರಾಗುತ್ತೀರಾ ಎಂದು ಕೊಡಗಿನ ಕಾಡಿಗೆ ಕರೆದಿದ್ದರು.

ಮುಳುಗುತ್ತಿದ್ದವನಿಗೆ ಶಿವನೇ ಆಸರೆ ಎಂಬಂತೆ ಎಪ್ಪತ್ತು ವರ್ಷದ ವಿಷ್ಣು ಮಡುಕುಳ್ಳಾಯರು ಪೂಜೆಭಟ್ಟರಾಗಿ ಅವತಾರ ಎತ್ತಿದ್ದರು.

2011-08-24_9893‘ತಮಾಷೆಯಾಗಿದೆಯಲ್ಲಾ.. ಅಡಿಗೆಭಟ್ಟ, ಹೋಟೆಲುಭಟ್ಟ, ಹಾಸ್ಟೆಲುಭಟ್ಟ, ಹೋಳಿಗೆಭಟ್ಟ, ಈಗ ಉಬ್ಬಸದಿಂದಾಗಿ ಮಂತ್ರ ಹೇಳಲೂ ಬರುತ್ತಿಲ್ಲ. ಸರಿಯಾಗಿ ಮಂತ್ರ ಹೇಳದಿದ್ದರೆ ಶಿವನಿಗೆ ಸಿಟ್ಟು ಬಂದೀತು.ಹಾಗಾಗಿ ಇಲ್ಲಿಂದಲೂ ಹೋಗುತ್ತಿದ್ದೇನೆ.ಇನ್ನು ಮುಂದಿನ ಅವತಾರ ಏನು ಭಟ್ಟನಾಗಿಯೋ’ ಎಂದು ಅವರು ಒಂದು ನಿಮಿಷ ಮಳೆ ಸುರಿಯುತ್ತಿದ್ದ ಆಕಾಶವನ್ನು ನೋಡುತ್ತಾ ಕೂತರು.

ಆ ಮಳೆಯಲ್ಲಿ ಅವರಿಗಿಂತ ವಯಸ್ಸಾದಂತೆ ಕಾಣಿಸುತ್ತಿದ್ದ ಅವರ ಕಾಯಿಲೆಯ ಮಗ ಸೌದೆ ಒಡೆಯುತ್ತಿದ್ದ.ಮಾರನೆಯ ದಿನ ತಿಂಗಳ ಸಂಕ್ರಮಣ.ಆ ಶಿವದೇಗುಲದಲ್ಲಿ ವಿಶೇಷ ಪೂಜೆ.ಬರುವ ಭಕ್ತರಿಗೆ ಪ್ರಸಾದದ ಅಡುಗೆಯನ್ನೂ ಮಾಡಬೇಕು, ಪೂಜೆಯನ್ನೂ ಮಾಡಬೇಕು.ಉಬ್ಬಸದಲ್ಲಿ ಮಂತ್ರವೂ ಬರುವುದಿಲ್ಲ.ಹಸಿ ಸೌದೆಗೆ ಬೆಂಕಿಯೂ ಹತ್ತುವುದಿಲ್ಲ.ನನಗಂತೂ ಸಾಕಾಗಿ ಹೋಗಿದೆ.ಇಲ್ಲಿಂದಲೂ ಹೋಗುತ್ತಿದ್ದೇನೆ.ಇನ್ನೇನಾಗುತ್ತದೋ ಗೊತ್ತಿಲ್ಲ ಎಂದು ಅವರು ತಮ್ಮ ಕಥೆಯನ್ನು ಮುಂದುವರಿಸಿದರು.

ಅದು ಅವರ ಮಗನ ಕಥೆ.ಆ ಕಥೆಯೂ ಇವರ ಕಥೆಗಿಂತ ಬೇರೆ ಇರಲಿಲ್ಲ. ಸರಿಯಾಗಿ ನಡೆಯಲೂ ಆಗದ,ಸರಿಯಾಗಿ ಮಾತಾಡಲೂ ಆಗದ ಆತನಿಗೂ ಎರಡು ಮದುವೆಯಾಗಿತ್ತು.ಮೊದಲ ಹೆಂಡತಿ ತಲೆಕೆಟ್ಟು ಬೀದಿ ಸುತ್ತುತ್ತಾ ಸತ್ತೇ ಹೋಗಿದ್ದಳು.ಬಹಳ ಸೂಕ್ಷ್ಮಮತಿಯಂತೆ ಕಾಣಿಸುತ್ತಿದ್ದ ಎರಡನೇ ಹೆಂಡತಿ ನಸುನಗುತ್ತಾ ನಮ್ಮ ಮಾತುಕತೆಗಳನ್ನು ಕೇಳಿಸಿಕೊಳ್ಳುತ್ತಿದ್ದಳು.

ಎಲ್ಲ ಕಥೆ ಕೇಳಿ ಮುಗಿಸಿದ ಮೇಲೆ ನಾನು ವಿಷ್ಣು ಮಡುಕುಳ್ಳಾಯರನ್ನು ಒಂದು ಮಾತು ಕೇಳಿದೆ.

‘ ಭಟ್ಟರೇ ನಿಜ ಹೇಳಿ ಇಷ್ಟೆಲ್ಲ ಕಷ್ಟದ ಅವತಾರಗಳನ್ನು ಒಂದೇ ಬದುಕಿನಲ್ಲಿ ಎತ್ತಿದ್ದೀರಿ.ಈ ಎಂಬತ್ತಮೂರನೆಯ ವಯಸ್ಸಿನಲ್ಲೂ ನಿಮ್ಮ ಹಳೆಯ ಎಂಇಟಿ ಸ್ಕೂಟರು ಹತ್ತಿ ಹೋಗಿ ಬರುತ್ತೀರಿ.ಜೀವನಕ್ಕೆ ಏನು ಅರ್ಥ?’

‘ಅರ್ಥ ಏನು? ಸಾಯುವವರೆಗೆ ಬದುಕಿ ಇರುವುದು’ ಎಂದು ಅವರು ಅಂದರು.

‘ಮತ್ತೆ ಈ ಪೂಜೆ ಮಂತ್ರ ಎಲ್ಲ ಯಾಕೆ?’

‘ಅದು ಬದುಕಲಿಕ್ಕೆ’ ಎಂದ ಅವರು ಇನ್ನೊಂದು ಮಾತೂ ಸೇರಿಸಿದರು

2011-08-24_9903‘ನೋಡಿ, ನಾನು ಮಡುಕುಳ್ಳಾಯ.ಅಂದರೆ ಶಿವಳ್ಳಿ ವೈಷ್ಣವ ಬ್ರಾಹ್ಮಣ.ಆದರೂ ನಾನು ಶಿವನ ಪೂಜೆ ಮಾಡುತ್ತಿಲ್ಲವಾ?ಯಾಕೆಂದರೆ ಇಲ್ಲಿ ಶಿವನ ಜೊತೆ ಪಾರ್ವತಿಯೂ ಇರುವುದು,ಹಾಗಾಗಿ ನಾನು ಬದುಕಿದೆ’ ಎಂದು ನನಗೆ ಅರ್ಥವಾಗದ ಕೆಲವು ವೇದಾಂತದ ಮಾತುಗಳನ್ನೂ ಅವರು ಹೇಳಿದರು.

ನಡೆಯಲು ಆಗದ ತನ್ನ ಅರ್ಚಕನಿಗೆ ಓಡಾಡಲೆಂದು ಶಿವನೇ ಕರುಣಿಸಿದ ವಾಹನದ ಹಾಗೆ ಕಾಣಿಸುತ್ತಿದ್ದ ಆ ಹಳೆಯ ಎಂಇಟಿ ಗಾಡಿಯನ್ನು ನಾನು ನೋಡುತ್ತಿದ್ದೆ.

ಜೀವಿತಾವದಿ ಮುಗಿದಿದ್ದರೂ ಇನ್ನೂ ಓಡಬಲ್ಲೆ ಎಂಬ ಉತ್ಸಾಹದಲ್ಲಿ ಅದು ನನ್ನನ್ನು ನೋಡುತ್ತಿತ್ತು.ದಲಿತರಿಗೂ,ಹಿಂದುಳಿದವರಿಗೂ,ಅಲ್ಪಸಂಖ್ಯಾತರಿಗೂ ಸಾಮಾಜಿಕ ನ್ಯಾಯದ ಮಾತಾಡಿ ಸುಸ್ತಾಗಿ ಹೋಗಿರುವ ಇವನು ಈ ವಿಷ್ಣು ಮಡುಕುಳ್ಳಾಯರ ಕಾರ್ಪಣ್ಯಗಳಿಗೆ ಯಾವ ನ್ಯಾಯ ಸೂಚಿಸಬಹುದು ಎಂದು ಅದು ಯೋಚಿಸುತ್ತಿದ್ದಂತೆ ಕಾಣಿಸುತ್ತಿತ್ತು.

(ಜುಲೈ ೨, ೨೦೧೧)

(ಫೋಟೋಗಳೂ ಲೇಖಕರವು)

Advertisements