ಕಳೆದ ವರ್ಷ ಈ ಹೊತ್ತಿನಲ್ಲಿ ನಾವು ಲೇಹ್ ನಲ್ಲಿದ್ದೆವು

RAS_0257_3429ಕಳೆದ ವರ್ಷ ಈ ಹೊತ್ತಿನಲ್ಲಿ ನಾವು ಲೇಹ್ ನಲ್ಲಿದ್ದೆವು.ಅದಾಗಿ ಒಂದು ತಿಂಗಳಲ್ಲೇ ಅಲ್ಲಿ ಮೇಘಸ್ಪೋಟವುಂಟಾಗಿ ಸಾವಿರಾರು ಸಾವುಗಳು ಸಂಭವಿಸಿದವು.ನಾವು ನೋಡಿದ್ದ ಮನುಷ್ಯರು, ಪರಿಚಿತರಾಗಿದ್ದ ಮುಖಗಳು, ಮತ್ತೆ ಬನ್ನಿ ಎಂದು ಕರೆದಿದ್ದ ಅಪರಿಚಿತರು ಎಲ್ಲರೂ ಆ ಕೆಸರು ಮಳೆ ರಾಡಿಯಲ್ಲಿ ಏನಾಗಿಹೋಗಿರುವರೋ ಎಂದುಕೊಳ್ಳುತ್ತಲೇ ಕಳೆದು ಹೋಗುತ್ತಿರುವ ಒಂದು ವರ್ಷ!ಸುಮ್ಮನೇ ಕಳೆದ ವರ್ಷದ ಈ ದಿನಗಳ ಚಿತ್ರಗಳನ್ನು ಮಗುಚಿ ಮಗುಚಿ ನೋಡುತ್ತಿರುವೆ.

೨೦೧೦ ರ ಜೂನ್ ೨೪.ಮಳೆ ಹಿಡಿದು ಮುನಿಸಿಕೊಂಡಿದ್ದ ಲೇಹ್ ಪಟ್ಟಣದಿಂದ ಕಾರ್ಗಿಲ್ ಗೆ ಹಿಂತಿರುಗುತ್ತಿದ್ದೆವು.ಅರ್ದ ಸುರಿದು ಸೋತುಹೋಗಿ ಇನ್ನೂ ಸುರಿಯುವ ಸನ್ನಾಹದಲ್ಲಿ ಹಿಮತುಂಬಿದ ಪರ್ವತಶ್ರೇಣಿಗಳ ಮೇಲೆ ನೆರಳು ತೇಲಾಡಿಸಿಕೊಂಡು ಸಾಗುತ್ತಿರುವ ಮಳೆಮೋಡಗಳು.ಅವುಗಳ ನಡುವಲ್ಲೇ ಚೆಲ್ಲಾಟವಾಡುತ್ತಿರುವ ಎಳೆಬಿಸಿಲು.lEH-TO-dRASS_2684‘ಇದು ನಿಮ್ಮ ಚೆಲ್ಲಾಟಕ್ಕೆ ಕಾಲವಲ್ಲ ನಮ್ಮ ಮೇಲಿರುವ ಹಿಮರಾಶಿಯನ್ನು ಕರಗಿ ನೀರಾಗಿ ಹರಿಯಲು ಬಿಡಿ’ ಎಂದು ಮಳೆ ಬಿಸಿಲುಗಳ ಚೆಲ್ಲಾಟಕ್ಕೆ ರೋಸಿಹೋಗಿ ಮುಖ ಬಿಗಿದುಕೊಂಡು ನಿಂತಿರುವ ಹಿಮಶಿಖರಗಳು.

ಏನೂ ಇಲ್ಲದ, ಏನೂ ಬೆಳೆಯದ ಅನಂತಶೂನ್ಯದಂತಹ ಮರಳು ಗುಡ್ಡಗಳಲ್ಲಿ ಅಲ್ಲೊಂದು ಇಲ್ಲೊಂದು ಮುಳ್ಳುಕಂಟಿಗಳ ನಡುವೆ ಅರಳಿ ನಿಂತಿರುವ ಗುಲಾಬಿ ಬಣ್ಣದ ಹೂಗಳು,ಹಿಮ ಕರಗಿ ಹರಿವ ಝರಿಗಳ ಸುತ್ತ ವಿಲ್ಲೋ ಗಿಡಗಂಟಿಗಳ ನಡುವೆ ಅಲ್ಲೊಂದು ಇಲ್ಲೊಂದು ಹಕ್ಕಿಗಳು ಮತ್ತು ಮನುಷ್ಯರು. ಇದ್ದಕ್ಕಿದ್ದಂತೆ ಎದುರಾಗುವ ಸಣ್ಣಗಿನ ಹಿಮಪಾತ, ಅದರ ನಂತರದ ಹೂಮಳೆ, ಮತ್ತೆ ಬಿಸಿಲು, ಆಕಾಶ ಇದ್ದಕ್ಕಿದ್ದಂತೆ ಪೂರಾ ನೀಲವಾಗಿ ಅಪ್ಸರೆಯರಂತೆ ಎದ್ದುನಿಂತ ಬೆಳ್ಳಗಿನ ಮೋಡಗಳು, ಮೆಲ್ಲಗೆ ಹೊಳೆಯತೊಡಗುವ ಪರ್ವತ ಶಿಖರಗಳು

lEH-TO-dRASS_2585ಲಕ್ಷ ಕೋಟಿ ವರ್ಷಗಳ ಹಿಂದೆ ಈ ಭೂಮಂಡಲದಲ್ಲಿ ಜೀವಿಗಳೂ, ಸಸ್ಯಗಳೂ ಹುಟ್ಟುವ ಮೊದಲು ಇಂತಹದೇ ಒಂದು ಮದ್ಯಾಹ್ನದ ಹೊತ್ತು ಬರೇ ಬಣ್ಣಗಳ ಆಟವೊಂದೇ ಇತ್ತು ಮತ್ತು ಅದನ್ನು ನೋಡುವ ಕಣ್ಣುಗಳು ಯಾವುದೂ ಇಲ್ಲದೆ ಅದು ಇದಕ್ಕಿಂತ ಸುಂದರವಾಗಿ ಕಾಣಿಸುತ್ತಿತ್ತು ಎಂದು ನೆನೆದುಕೊಂಡು ಮನುಷ್ಯ ಎಷ್ಟೊಂದು ಒಂಟಿ ಒಂಟಿ ಅನಿಸುತ್ತಿತ್ತು.

ಹಾಗೆಯೇ ಹೋಗುತ್ತಿರುವಾಗ ಹತ್ತಾರು ಮೈಲುದ್ದದ ಉರಗವೊಂದು ಪರ್ವತವೊಂದಕ್ಕೆ ಸುರುಳಿ ಸುತ್ತಿಕೊಂಡು ಪವಡಿಸಿರುವಂತೆ ಎದುರಾದ ಹಾದಿ.ಆ ಹಾದಿಯನ್ನು ಏರಿ ಒಮ್ಮೆ ಉಸಿರೆಳೆದುಕೊಂದು ನೋಡಿದರೆ ಒಂದು ಪುರಾತನ ಪಟ್ಟಣದಂತೆ ದೂರದಲ್ಲಿ ನಿಂತಿರುವ ಒಂದು ಬೌದ್ಧ ದೇಗುಲ ಸಮುಚ್ಚಯ.ಒಂದು ಕಾಲದಲ್ಲಿ ಇದೊಂದು ದೊಡ್ಡ ಸರೋವರವಾಗಿತ್ತಂತೆ. ಸುಮಾರು ಸಾವಿರ ವರ್ಷಗಳ ಹಿಂದೆ ಮಹಾಸಿದ್ಧಾಚಾರ್ಯ ನರೋಪಾ ಎಂಬ ತಾಂತ್ರಿಕ ಬೌದ್ಧ ಯತಿಯೊಬ್ಬರಿಗೆ ಇಲ್ಲೊಂದು ದೇಗುಲವಾಗಬೇಕೆಂಬ ಹಂಬಲ ಉಂಟಾಯಿತಂತೆ.ಅದಕ್ಕಾಗಿ ಅವರು ಈ ಸರೋವರವನ್ನು ತಾಗಿಕೊಂಡು ನಿಂತಿರುವ ಪರ್ವತದ ಗುಹೆಯೊಂದರಲ್ಲಿ ತಪಸ್ಸಿಗೆ ಕುಳಿತರಂತೆ.ಅವರ ತಪಸ್ಸಿನ ತಾಪಕ್ಕೆ ಸಿಲುಕಿ ಆ ಪರ್ವತದ ನಡುವಲ್ಲಿ ಬಿರುಕೊಂದು ಉಂಟಾಯಿತಂತೆ.lEH-TO-dRASS_2639ಆ ಬಿರುಕಿನಿಂದ ಆ ಸರೋವರದ ನೀರೆಲ್ಲ ಸೋರಿಹೋಗಿ ಅಲ್ಲೊಂದು ಬಯಲು ಉಂಟಾಯಿತಂತೆ.ಆ ಬಯಲಲ್ಲಿ ಈಗ ಇರುವುದೇ ಲಾಮಯೂರ್ ಎಂಬ ಈ ದೇಗುಲ ಸಮುಚ್ಚಯ.

ಅಷ್ಟು ಹೊತ್ತಿಗೆ ಮತ್ತೆ ಮರುಕಳಿಸಿದ ಸಣ್ಣಗಿನ ಹಿಮಪಾತಕ್ಕೆ ಸಿಲುಕಿ ನಾವು ಆ ದೇಗುಲದೊಳಕ್ಕೆ ಹೊಕ್ಕರೆ ಅಲ್ಲೊಂದು ದೊಡ್ಡ ಹಬ್ಬವೇ ನಡೆಯುತ್ತಿತ್ತು.ಪುರುಷರೂ, ಮಹಿಳೆಯರೂ, ಮಕ್ಕಳೂ ಬೆಳ್ಳಿಯ ಲೋಲಾಕುಗಳನ್ನೂ, ಶಿಲಾಕಂಠೀಹಾರಗಳನ್ನೂ, ಶಿರಾಭರಣಗಳನ್ನೂ ಧರಿಸಿ ಯಾರಿಗೋ ಆ ಹಿಮಪಾತದಲ್ಲಿ ಕಾಯುತ್ತಿದ್ದರು.ಇನ್ನೂ ಸಣ್ಣ ಬಾಲಕನಂತಿರುವ ಆ ದೇಗುಲದ ಮುಖ್ಯ ಗುರು ಯಾರಿಗೆ ಕಾಯುತ್ತಿರುವನೆಂಬ ಅರಿವಿಲ್ಲದೆ ತಾನೂ ಕಾಯುತ್ತಿದ್ದ.ಅಷ್ಟು ಹೊತ್ತಿಗೆ ಆ ಹಿಮಪಾತದಲ್ಲಿ ನೆನೆದುಕೊಂಡೇ ಒಂದಿಷ್ಟು ಪೋಲೀಸರೂ ಅಧಿಕಾರಿಗಳೂ ನಡುಗುತ್ತಾ ಅಲ್ಲಿ ಸೇರಿಕೊಂಡರು.ಆ ದಾರಿಯಲ್ಲಿ ಸಾಗುತ್ತಿರುವ ಮಂತ್ರಿಯೊಬ್ಬರಿಗೆ ಅವರೆಲ್ಲ ಕಾಯುತ್ತಿದ್ದರು.

lEH-TO-dRASS_2645ಕಾಯುತ್ತಿರುವ ಅವರೆಲ್ಲರ ಉಸಿರ ಹಭೆ ಆ ದೇಗುಲದಲ್ಲಿ ಹರಡಿಕೊಂಡು, ಹೊರಗಿಂದ ಮುತ್ತುತ್ತಿರುವ ಹಿಮದ ಹೊಗೆ ಆ ದೇಗುಲದ ಕಿಟಕಿಯ ಗಾಜುಗಳಿಗೆ ಸವರಿಕೊಂಡು, ಧರ್ಮ, ದೇವರು, ದೇಗುಲ, ಪ್ರಜಾಪ್ರಭುತ್ವ, ಪೋಲೀಸರು, ಅಧಿಕಾರಶಾಹಿ ಎಲ್ಲವೂ ಆ ಸಾವಿರ ಚದರಡಿಯ ಸಭಾಂಗಣದಲ್ಲಿ ಸಮ್ಮಿಳಿತರಾಗಿ ಕಾಯುತ್ತಿರುವುದು ಒಂದು ಥರಾ ತಮಾಷೆ ಎನಿಸುತ್ತಿತ್ತು.ಜಗತ್ತಿನ ಅತ್ಯಂತ ಎತ್ತರದ ಜನವಸತಿಯ ಆ ಶೃಂಗದಲ್ಲಿ ಪ್ರಕೃತಿಯ ರೌಧ್ರ ನಾಟಕವೂ ಪ್ರಜಾಪ್ರಭುತ್ವದ ಆಧುನಿಕೋತ್ತರ ಪ್ರಹಸನವೂ ಏಕಕಾಲದಲ್ಲಿ ನಡೆಯುತ್ತಿರುವುದು ಖುಷಿಯನ್ನೂ ಕೊಡುತ್ತಿತ್ತು.

ತಪ್ಪಲೆಯಷ್ಟಗಲದ ನೀಲವರ್ಣದ ಶಿಲಾರತ್ನವೊಂದನ್ನು ಮುಡಿಗೆ ಏರಿಸಿಕೊಂಡು ಮೊರದ ಹಾಗಿರುವ ಕಿವಿಯಿರುವ ಮೃಗವೊಂದರ ಫೋಷಾಕನ್ನು ಮೈಗೆ ಏರಿಸಿಕೊಂಡು ನರ್ತಿಸಲು ರೆಡಿಯಾಗಿದ್ದ ಯುವತಿಯೊಬ್ಬಳು ತನ್ನ ಮೈಮೇಲಿರುವ ಆ ಭಾರದಿಂದಾಗಿ ಕಿರಿಕಿರಿ ಅನುಭವಿಸಿಕೊಂಡು ಅಲ್ಲಿ ಕಾಯುತ್ತಿದ್ದಳು.ಸುಮ್ಮನಿರಲಾಗದ ನಾನು ‘ನೀವೆಲ್ಲ ಯಾಕೆ ಹೀಗೆ ಕಾಯುತ್ತಿದ್ದೀರಿ’ ಎಂದು ಕೇಳಿದೆ.‘ಇವತ್ತು ನನ್ನ ಮದುವೆ.ಅದಕ್ಕೆ’ ಎಂದು ಆಕೆ ಸಿಟ್ಟಲ್ಲೇ ಉತ್ತರಿಸಿದಳು.‘ಮದುಮಗ ಎಲ್ಲಿ’ ಎಂದು ಕೇಳಿದರೆ ‘ಇವನೇ’ ಎಂದು ಎಂಟು ವರ್ಷದ ನನ್ನ ಮಗನ ಕೈಹಿಡಕೊಂಡಳು. ನಾಚಿಕೊಂಡ ಅವನನ್ನು ಕೊಂಚ ಹೊತ್ತು ತನ್ನ ಮಡಿಲಲ್ಲಿ ಕೂರಿಸಿಕೊಂಡು ಕಷ್ಟಸುಖ ಮಾತಾಡಿದಳು.ಹಾಗೆ ನೋಡಿದರೆ ಹಿಮಾಲಯದ ತುದಿಯ ಆಕೆಯ ಕಷ್ಟಸುಖಗಳು ಬಯಲು ಸೀಮೆಯ ನಮ್ಮ ಕಷ್ಟಸುಖಗಳ ಹಾಗೇ ಇದ್ದವು.ಕಷ್ಟಸುಖಗಳು ಎಲ್ಲಿದ್ದರೂ ಒಂದೇ ತರಹದ ಏಕತಾನತೆಯಿಂದ ಕೂಡಿರುತ್ತವೆ ಎಂದು ಅಲ್ಲಿಂದ ಹೊರಟು ಬಂದೆವು.

lEH-TO-dRASS_2703ಬರುವಾಗ ದಾರಿಯಲ್ಲಿ ಹೆಂಗಸೊಬ್ಬಳು ಬಯಲ ನಡುವೆ ರಾಕ್ಷಸ ಗಾತ್ರದ ಎರಡು ಯಾಕ್ ಮೃಗಗಳನ್ನು ನಡೆಸಿಕೊಂಡು ಹೋಗುತ್ತಿದ್ದಳು.ನಾವು ಎಂದೂ ಕಂಡೇ ಇರದ ಯಾಕ್ ಮೃಗಗಳು ಸಾಧು ಹಸುಗಳಂತೆ ಅವಳಿಂದ ಅಟ್ಟಿಸಿಕೊಂಡು ಮುಂದೆ ನಡೆಯುತ್ತಿದ್ದವು.ಅವುಗಳನ್ನು ಭೂಮಿ ಉಳಲೂ, ಹಾಲು ಕರೆಯಲೂ ಬಳಸುತ್ತಾರಂತೆ.ಆಕೆ ನಮ್ಮ ಕಣ್ಣಮುಂದೆಯೇ ಅವುಗಳನ್ನು ನಡೆಸಿಕೊಂಡು ಕೊಟ್ಟಿಗೆಯೊಳಕ್ಕೆ ಸೇರಿಸಿದಳು.ಯಾವುದೋ ಅತಿಪುರಾತನ ಕಾಲದ ಕ್ಷುಧ್ರ ಮೃಗಗಳಂತೆ ಬುಸುಗುಟ್ಟುತ್ತಿದ್ದ ಅವುಗಳು ಅವಳ ಕೈಯಲ್ಲಿ ಸಿಲುಕಿ ಸಾತ್ವಿಕ ಹಸುಗಳಂತೆ ಆ ಕೊಟ್ಟಿಗೆಯೊಳಗೆ ಮೆಲುಕು ಹಾಕುತ್ತಿದ್ದುದು ತಮಾಷೆಯಾಗಿತ್ತು.

ಅವಳೊಡನೆ ಅವುಗಳ ಕುರಿತು ಮಾತನಾಡುತ್ತಿದ್ದಂತೆ ಎಲ್ಲಿಂದಲೋ ಮೊಲದ ಗಾತ್ರದ ಒಂದಿಷ್ಟು ಕುರಿಗಳು ಬೆಳ್ಳಗಿನ ದೇವತೆಯರಂತೆ ಜಿಗಿಯುತ್ತಾ ಅಲ್ಲಿಗೆ ಓಡಿ ಬಂದವು.ಅವಳು ಅದರಲ್ಲಿ ಒಂದನ್ನು ಎತ್ತಿಕೊಂಡು ಫೋಟೋಗೆ ಪೋಸ್ ಕೊಡತೊಡಗಿದಳು.lEH-TO-dRASS_2734 ಒಂದೊಂದು ಫೋಟೋಗೂ ಇಷ್ಟಿಷ್ಟು ರೂಪಾಯಿ ಎಂದು ಆಕೆ ಆಗಲೇ ನಮ್ಮ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಳು.ಹಿಮಕ್ಕೆ ಸಿಲುಕಿ ಗುಲಾಬಿಯ ಬಣ್ಣಕ್ಕೆ ತಿರುಗಿದ್ದ ಆಕೆಯ ಮುಖದಿಂದ ಹೊರಡುತ್ತಿದ್ದ ಆ ತುಂಟ ನಗುವಿಗೂ ಆಕೆ ಹೇಳುತ್ತಿರುವ ಫೋಟೋ ಮತ್ತು ರೂಪಾಯಿಯ ಲೆಕ್ಕಾಚಾರಕ್ಕೂ ಯಾವುದೇ ತಾಳಮೇಳವಿಲ್ಲದೆ ಅಲ್ಲಿ ಒಂದು ತರಹದ ನಗುವಿನ ಅಲೆ ಸಹಜವಾಗಿ ಹರಡಿಕೊಳ್ಳುತ್ತಿತ್ತು.

ಮೊಲದ ಗಾತ್ರದ ಆ ಕುರಿ ತಳಿಯ ಹೆಸರು ಪಶ್ಮೀನಾ.ಪ್ರಪಂಚದ ಅತೀ ಚಳಿಯ ಮತ್ತು ಅತೀ ಕಡಿಮೆ ಮಳೆ ಬೀಳುವ ಪರ್ವತ ಶ್ರೇಣಿಗಳಲ್ಲಿ ಮಾತ್ರ ಈ ಕುರಿಗಳು ಇರುತ್ತವೆ.ಅತಿ ಕಡಿಮೆ ಹಸಿರು ತಿಂದು ಅತಿ ಕಠಿಣ ಚಳಿಯನ್ನು ತಡೆಯುವ ಉಣ್ಣೆ ಇವುಗಳ ಮೈಮೇಲೆ ಬೆಳೆಯುತ್ತವೆ.ಆ ಉಣ್ಣೆಗೆ ತೂಕ ಇರಬಾರದು ಯಾಕೆಂದರೆ ಮೊಲದ ಗಾತ್ರದ ಈ ಪಶ್ಮೀನಾ ಕುರಿಗಳಿಗೆ ಅಷ್ಟು ತೂಕ ತಡೆಯುವ ತಾಕತ್ತಿಲ್ಲ.ಆದರೆ ತೂಕವೇ ಇಲ್ಲದ ಅದರ ಉಣ್ಣೆಗೆ ಎಂತಹ ಭಯಂಕರ ಚಳಿಯನ್ನೂ ತಡೆಯುವ ತಾಕತ್ತಿದೆ.ಹಾಗಾಗಿ ಈ ಕುರಿಯ ಉಣ್ಣೆಯಿಂದ ಮಾಡಿದ ಶಾಲುಗಳನ್ನು ಜಗತ್ತಿನಾಧ್ಯಂತ ಜನ ಮುಗಿಬಿದ್ದು ಕೊಳ್ಳುತ್ತಾರೆ.ಬೆಲೆಯೂ ಭಯಂಕರವಾಗಿರುತ್ತದಂತೆ.ಹತ್ತು ಪಶ್ಮೀನಾ ಸಾಲುಗಳನ್ನು ಪ್ಯಾಂಟಿನ ಒಂದೇ ಜೇಬಿನಲ್ಲಿ ಇರುಕಿಸಿಕೊಂಡು ಹೋಗಬಹುದಂತೆ.

ಆಕೆ ತನ್ನ ಪಶ್ಮೀನಾ ಕುರಿಯನ್ನು ಎತ್ತಿಕೊಂಡು ಪೋಸು ಕೊಡುತ್ತಾ ಕಥೆ ಹೇಳುತ್ತಿದ್ದಳು.ನಾನು ಮಗುವಿನಂತಿರುವ ಆ ಕುರಿಯನ್ನು ನೋಡುತ್ತಿದ್ದೆ. ಜಾಣನಾದ ದೇವರು ಪಾಪ ಈ ಕುರಿಗಳಿಗೆ ಚಳಿಯೂ ಆಗಬಾರದು, ದೇಹಕ್ಕೆ ಭಾರವೂ ಇರಬಾರದು ಎಂದು ತನ್ನದೇ ಉಪಾಯದಲ್ಲಿ ಅತ್ಯುತ್ಕೃಷ್ಟ ತುಪ್ಪಳಗಳನ್ನು ಒದಗಿಸಿದ್ದರೆ ಆತನಿಗಿಂತಲೂ ಜಾಣನಾದ ಹುಲುಮಾನವ ಈ ಕುರಿಯ ತುಪ್ಪಳಗಳನ್ನು ಏಮಾರಿಸಿ ಜೇಬಿಗಿಳಿಬಿಟ್ಟುಕೊಂಡು ನಡೆಯುತ್ತಿದ್ದಾನೆ.lEH-TO-dRASS_2711ಅದಕ್ಕಿಂತಲೂ ಜಾಣೆಯಾದ ಈಕೆ ಫೋಟೋಗೊಂದು ರೂಪಾಯಿಯಂತೆ ಫೀಸು ಕೇಳುತ್ತಾ ನಾಚಿಕೊಳ್ಳುತ್ತಾ ಕಥೆ ಹೇಳುತ್ತಿದ್ದಾಳೆ.ನಡುವೆ ಹಿಮ ಸುರಿಯಲು ಸನ್ನಿಹಿತವಾಗಿ ಕುಳಿರ್ಗಾಳಿ ಬೀಸುತ್ತಿದೆ.ದೂರದ ಶಿಖರದಲ್ಲಿ ಕರಗಿ ಹರಿಯುತ್ತಿರುವ ಹಿಮನದಿ ಸುಮ್ಮನೆ ನಗುತ್ತಿದೆ.

ಈಗ ಸರಿಯಾಗಿ ಒಂದು ವರ್ಷದ ನಂತರ ಇವೆಲ್ಲ ನೆನಪಾಗಿ ಬರೆಯುತ್ತಿರುವೆ.ದೇವರೇ ನಾವು ಹೋಗಿದ್ದಾಗ ನೋಡಿದ ಈಕೆಯೂ, ಈಕೆಯ ಯಾಕ್ ಮೃಗಗಳೂ, ಪಶ್ಮಿನಾ ಕುರಿಗಳೂ ಆನಂತರ ಸಂಭವಿಸಿದ ಮೇಘಸ್ಪೋಟದಲ್ಲಿ ಏನೂ ಆಗದೆ ಈಗಲೂ ಹಾಗೆಯೇ ಬದುಕಿರಲಿ ಎಂದು ಬೇಡಿಕೊಳ್ಳುತ್ತಿರುವೆ.

(ಫೋಟೋಗಳೂ ಲೇಖಕರವು)

(೨೬ ಜೂನ್ ೨೦೧೧)

Advertisements