ಮೆಲ್ಲನೇ ಇರುಳಲ್ಲಿ ಸುಯ್ಲುಗಾಳಿ

DSC_2560ನು ಮಾಡುವುದೆಂದು ಅರಿವಾಗದೆ ಸುಮ್ಮನೆ ಕುಳಿತಿರುವೆ. ಕಡಲೊಂದು ಬೋರ್ಗರೆಯುವಂತೆ ಗಾಳಿ ಬೀಸುತ್ತಿದೆ. ಎಲ್ಲೋ ಪ್ರಪಾತದ ಕತ್ತಲಲ್ಲಿ ಬಿಟ್ಟು ಬಿಟ್ಟು ಹಾದು ಹೋಗುತ್ತಿರುವ ವಾಹನಗಳ ಬೆಳಕು ಮಂಜಿನ ನಡುವೆ ನಕ್ಷತ್ರಗಳಂತೆ ಅಲ್ಲಾಡುತ್ತಿವೆ.

‘ಎಲ್ಲವನ್ನೂ ಕಿತ್ತು ಬಿಸಾಕಿ, ಅರೆ ತುಂಬಿರುವ ಈ ಪಾನಪಾತ್ರೆಯನ್ನೂ ಎಸೆದು ನಿನ್ನ ಬಾಗಿಲ ಮುಂದೆ ತಲೆಕೆರೆಯುತ್ತಾ ಕಳ್ಳನಂತೆ ನಿಂತುಕೊಂಡರೆ ಏನು ಮಾಡುವೆ‘ ಎಂದೆ.

‘ಏನು ಮಾಡಲಿ? ಪೊಲೀಸರನ್ನು ಕರೆಯುವೆ’ ಅಂದಳು.

‘ಈ ನಡುರಾತ್ರಿ ಕಳ್ಳರೂ, ಪೊಲೀಸರೂ, ಒಳ್ಳೆಯವರೂ, ಕೆಟ್ಟವರೂ ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಮರೆತು ಸಂಜೆಯ ಗುಲಾಬಿ ಸೂರ್ಯನ ಹಾಗಿರುವ ನಿನ್ನ ಮುಖ ದರ್ಶನಕ್ಕಾಗಿ ತಲೆ ಕೆರೆದುಕೊಳ್ಳುತ್ತಾ ನಿನ್ನ ಬಾಗಿಲ ಮುಂದೆ ಸರತಿಯ ಸಾಲಿನಲ್ಲಿ ನಿಲ್ಲಲಿ. ಏನು ಮಾಡುವುದೆಂದು ನೀನು ತೀರ್ಮಾನಿಸುವಷ್ಟರಲ್ಲಿ ಬೆಳಕೂ ಹರಿಯಲಿ. ಇದೇ ನಿನಗೆ ನಾನು ಈ ಇರುಳು ಕೊಡುತ್ತಿರುವ ಶಾಪ. ನಾಳೆ ಇರುಳು ಇನ್ನೊಂದು ಶಾಪದ ಜೊತೆ ಹಾಜರಾಗುತ್ತೇನೆ‘ ಎಂದು ವಿದಾಯ ಹೇಳಿದೆ.

ಆಮೇಲೆ ಎದ್ದು ಹೋಗಿ ನಡುದಾರಿಯಲ್ಲಿ ನಿಂತುಕೊಂಡೆ.

DSC_2564ಇದುವರೆಗೆ ಬರಿಯ ಶಬ್ಧವಾಗಿ ಕೇಳಿಸುತ್ತಿದ್ದ ಗಾಳಿ ಈಗ ಪ್ರತ್ಯಕ್ಷ ದೇವತೆಯಂತೆ ಮೈಯ ಮೇಲೆ ಹರಿಹಾಯಲು ತೊಡಗಿತು. ಆ ಗಾಳಿಯ ವೈಯ್ಯಾರ, ಅದರ ಸದ್ದು, ಬಿಟ್ಟು ಬಿಟ್ಟು ನಿಂತು ಹೋಗುತ್ತಿದ್ದ ಅದರ ಮೌನ.

‘ಓ ದೇವರೇ ಈ ಪ್ರಪಂಚ ಎಷ್ಟು ಸುಂದರವಾಗಿದೆ’’ ಎಂದು ಎದುರಲ್ಲಿ ತೂಗಾಡುತ್ತಿದ್ದ ಗಾಳಿಮರವೊಂದಕ್ಕೆ ಕೈ ಮುಗಿದೆ. ಅಷ್ಟು ಹೊತ್ತಲ್ಲಿ ಮತ್ತೆ ಬೀಸಲು ತೊಡಗಿದ ಗಾಳಿಯ ಇನ್ನೊಂದು ತೆರೆ ಕಿವಿ ಹಿಂಡಿ, ತಲೆಯ ಮೇಲೆ ಮೊಟಕಿ, ತೋಳು ಹಿಡಿದು, ದರದರ ಎಳೆದು ಮತ್ತೆ ಮನೆಯೊಳಕ್ಕೆ ತಂದು ಬಿಟ್ಟಿತು. ಆಮೇಲೆ ಮಾತನಾಡಿದವರ ಜೊತೆಯೆಲ್ಲ ಕೊಂಚ ಲಘುವಾಗಿ, ಕೊಂಚ ಗಹನವಾಗಿ, ಕೊಂಚ ಅಸೂಯೆಯಿಂದ, ಕೊಂಚ ಕೋಪದಲ್ಲಿ ಬಹಳ ಕಥೆಗಳನ್ನು ಹೇಳಿದೆ. ಎಲ್ಲವೂ ಹೇಳಿ ಮುಗಿದ ಮೇಲೆ, ‘ನಾನು ಹೇಳಬೇಕೆಂದುಕೊಂಡದ್ದು ಇದಲ್ಲ ಇದಲ್ಲ‘ ಎಂದು ಬಹಳ ಹೊತ್ತು ಮನಸ್ಸಲ್ಲೇ ಗೊಣಗುತ್ತಿದ್ದೆ. ಆಮೇಲೆ ನಿದ್ದೆ ಹೋದೆ.

DSC_2561ಕಳೆದ ವಾರ ಎಲ್ಲಿಂದಲೋ ತಪ್ಪಿಸಿಕೊಂಡು ಮಡಿಕೇರಿಗೆ ಇರುಳಲ್ಲಿ ಬಂದಿಳಿದಿದ್ದ ಬಾಲಕ ನಮಗೆ ಬಹಳಷ್ಟು ಸುಳ್ಳು ಹೇಳಿದ್ದ. ತನ್ನ ತಂದೆ ಬಹಳ ದೊಡ್ಡ ಸಾಹುಕಾರನೆಂದೂ, ತಾಯಿ ಬಹಳ ದೊಡ್ಡ ದೈವಭಕ್ತೆಯೆಂದೂ, ತನ್ನ ಮನೆಯ ಮುಂದೆ ಹೆದ್ದಾರಿಯೊಂದು ಹಾದು ಹೋಗುತ್ತದೆಯೆಂದೂ, ಮೂರು ದಾರಿಗಳು ಸೇರುವಲ್ಲಿ ರಾಣಿಯೊಬ್ಬಳ ವಿಗ್ರಹ ಇರುವುದೆಂದೂ ರೈಲು ಬಿಟ್ಟಿದ್ದ. ನಾನು ಹೋಗಿ ನೋಡಿದರೆ ಆತನ ತಂದೆ ಮೈಸೂರಿನಿಂದ ಆತನನ್ನು ಹುಡುಕಿಕೊಂಡು ಬಂದಿದ್ದರು. ಜೋಲು ಮುಖ ಹಾಕಿಕೊಂಡು ಬಡಪಾಯಿಯಾಗಿ ಹೋಗಿದ್ದ ಆ ತಂದೆ, ‘ಇದೇ ಕೊನೆಯ ಬಾರಿ ನಾನು ಈತನನ್ನು ಹುಡುಕುವುದು’ ಎಂದು ಕುಕ್ಕುರುಗಾಲಲ್ಲಿ ಕುಳಿತಿದ್ದರು. ಈ ಬಾಲಕನಿಗೆ ಮನೆಯಿಂದ ಕಾಣೆಯಾಗುವುದು ಒಂದು ಚಾಳಿಯಂತೆ. ಹಾಗೇ ಬಣ್ಣಬಣ್ಣದ ರಮ್ಯಕಥೆಗಳನ್ನು ಹೇಳುವುದು ಕೂಡಾ. ಓಡಿಹೋಗಿ ಸೇರಿದ ಒಂದೊಂದು ಊರಲ್ಲೂ ಒಂದೊಂದು ತರಹದ ಕಥೆಗಳನ್ನು ಹೇಳುತ್ತಾನಂತೆ. ಎಲ್ಲರೂ ನಂಬುತ್ತಾರಂತೆ. ನಾವೂ ಕೂಡಾ ಈತನ ಕಥೆಗಳನ್ನು ನಂಬಿ ಆಕಾಶದಿಂದ ಇಳಿದು ಬಂದ ರಾಜಕುಮಾರನಂತೆ ಈತನನ್ನು ನೋಡುತ್ತಿದ್ದೆವು. ಯಾರೋ ಒಬ್ಬರು. ‘ಈ ಬಾಲಕ ದೇಶ ತೊರೆದು ಓಡಿ ಹೋದ ಉಗ್ರಗಾಮಿಗಳ ಮಗ ಇರಬಹುದು’ ಅಂದಿದ್ದರು. ಇನ್ನೂ ಒಬ್ಬರು ‘ಪ್ರಿಯಕರನೊಡನೆ ಓಡಿ ಹೋಗುವ ದಾರಿಯಲ್ಲಿ ತಾಯಿಯು ಈ ಬಾಲಕವನ್ನು ಕಾಡಿನಲ್ಲಿ ಇಳಿಸಿರಬಹುದು’ ಅಂದಿದ್ದರು.

DSC_2565ಈಗ ನೋಡಿದರೆ ಆತನನ್ನು ಹುಡುಕಿಕೊಂಡು ಬಂದ ತಂದೆ ‘ಹಾಗೇನಿಲ್ಲ ಸ್ವಾಮೀ, ಓಡಿ ಹೋಗುವುದು ನನ್ನ ಮಗನ ಚಾಳಿ. ನನಗೆ ಈತ ಬೇಡ, ನೀವೇ ಯಾರಾದರೂ ಸಾಕಿಕೊಳ್ಳಿ’ ಎಂದು ಬೇಡುತ್ತಿದ್ದರು. ಈ ತಂದೆಯ ಕೆಲಸ ನೆಲದಲ್ಲಿ ಜಲವನ್ನು ಹುಡುಕುವುದಂತೆ. ಯಾರಾದರೂ ರೈತರು ಬೋರ್‌ವೆಲ್ ಕೊರೆಯುವಾಗ ಇವರನ್ನು ಜಲದ ಸೆಲೆ ಹುಡುಕಲು ಕರೆಯುತ್ತಾರಂತೆ. ಈಗ ಸದಾ ಕಾಣೆಯಾಗುವ ಮಗನ ಹಿಂದೆ ತಿರುಗುತ್ತಾ ಆ ಕೆಲಸವೂ ತಪ್ಪಿ ಹೋಗಿದೆಯಂತೆ. ‘ಈ ಮಗಾ ಬೇಡಾ ಸ್ವಾಮೀ, ನೀವೇ ನೋಡಿಕೊಳ್ಳಿ’ ಎಂದು ಮತ್ತೆ ಮತ್ತೆ ಬೇಡಿಕೊಳ್ಳುತ್ತಿದ್ದರು. ನನಗೆ ಯಾಕೋ ಆ ಬಾಲಕನ ಮುಖದಲ್ಲಿ ಮುಂದೆ ಬೆಳೆದು ದೊಡ್ಡ ಕಥೆಗಾರನಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿತ್ತು. ಆದರೆ ಇದನ್ನು ಆ ಬಡಪಾಯಿ ತಂದೆಗೆ ಹೇಗೆ ಹೇಳುವುದು ಎಂದು ಗೊತ್ತಾಗದೆ ಸುಮ್ಮನಾದೆ.
ಕಳೆದ ವರ್ಷ ಇದೇ ಹೊತ್ತಲ್ಲಿ ಇಲ್ಲಿಗೆ ಇಂಗ್ಲೆಂಡಿನ ಪ್ರೇಮಿಗಳಿಬ್ಬರು ಪ್ರವಾಸ ಬಂದಿದ್ದರು. ಎಲ್ಲ ಕಡೆಗೂ ನಡೆದುಕೊಂಡು ಓಡಾಡುತ್ತಿದ್ದರು. ಇಲ್ಲೇ ಹತ್ತಿರದಲ್ಲಿ ಒಂದು ಕಡಿದಾದ ಜಲಪಾತವಿದೆ. ಆ ಜಲಪಾತದ ಹತ್ತಿರದಲ್ಲೇ ಬೈನೆಯ ಮರಗಳೂ ಇವೆ. ಒಂದು ದಿನ ಬೆಳಗೆ ಇವರಿಬ್ಬರೂ ನಡೆಯುತ್ತ ನಡೆಯುತ್ತ ಇಲ್ಲಿಗೆ ತಲುಪಿದ್ದಾರೆ. ಅಲ್ಲೇ ಬೈನೆ ಮರವೊಂದಕ್ಕೆ ಕಳ್ಳು ತೆಗೆಯಲು ಹತ್ತುತ್ತಿದ್ದವನೊಬ್ಬನನ್ನು ನೋಡುತ್ತಾ ಅಲ್ಲೇ ಕೆಳಗೆ ಇಬ್ಬರೂ ಕುಳಿತಿದ್ದಾರೆ. ಅಲ್ಲೇ ಕುಳಿತಿದ್ದಂತೆ ಪ್ರಿಯಕರನಿಗೆ ಮೂರ್ಚೆರೋಗ 2011-09-29_1830ಬಂದು ಪ್ರಿಯತಮೆಯ ಮಡಿಲಿಗೆ ಒರಗಿದ್ದಾನೆ. ವೈದ್ಯರೂ ಇಲ್ಲದೆ, ಅಂಬ್ಯುಲೆನ್ಸ್ ಕೂಡಾ ಬಾರದೆ ಆಕೆಯ ತೋಳಲ್ಲೇ ಪ್ರಾಣ ಬಿಟ್ಟಿದ್ದಾನೆ. ಏನೂ ಮಾಡಲಾಗದ ಅಸಹಾಯಕತೆಯಿಂದ ನಲುಗಿ ಹೋದ ಆ ಪ್ರಿಯತಮೆ ಲಂಡನಿಗೆ ಹಿಂತಿರುಗಿ ಅಲ್ಲಿ ಚಂದಾ ಎತ್ತಿ ತನ್ನ ಪ್ರಿಯಕರನ ಹೆಸರಿನಲ್ಲಿ ಒಂದು ಅಂಬ್ಯುಲೆನ್ಸ್ ಕೊಂಡು ಇಲ್ಲಿನ ಬಡರೋಗಿಗಳಿಗೆ ಕಾಣಿಕೆಯಾಗಿ ಕೊಟ್ಟಿದ್ದಾಳೆ. ಈಗ ಆತನ ಹೆಸರು ಹೊತ್ತ ಆ ತುರ್ತು ವಾಹನ ಆಗಾಗ ವೇಗವಾಗಿ ಇಲ್ಲಿ ಓಡಾಡುತ್ತಿರುತ್ತದೆ. ಅದು ಓಡಾಡುವ ಹೊತ್ತಲ್ಲಿ ನನಗೆ ಬೈನೆ ಮರದ ಕೆಳಗೆ ಕುಳಿತ ಅವರಿಬ್ಬರ ಕಾಣದ ಮುಖ ಕಣ್ಣ ಮುಂದೆ ಬರುತ್ತದೆ.

ನಿನ್ನೆಯ ದಿನ ಆ ತೀರಿ ಹೋದವನ ಇನ್ನೊಬ್ಬಳು ಬಾಲ್ಯದ ಗೆಳತಿ ಲಂಡನ್‌ನಿಂದ ಇಲ್ಲಿಗೆ ಬಂದಿದ್ದಳು. ಈ ಕಾಣೆಯಾದ ಬಾಲಕನಿಗೆ ಆಶ್ರಯ ಕೊಟ್ಟಿದ್ದ ಮಕ್ಕಳ ಮನೆಯಲ್ಲಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಳು. ಮಕ್ಕಳಿಗೆ ಪೆನ್ನು ಪೆನ್ಸಿಲುಗಳನ್ನೂ, ಕಥೆ ಪುಸ್ತಕಗಳನ್ನೂ ಹಂಚಿ ಹೋದಳು. ಪುಟ್ಟ ಮಗುವಿನಂತಿದ್ದ ಆಕೆ ಎಲ್ಲದಕ್ಕೂ ಖುಷಿ ಪಡುತ್ತಿದ್ದಳು. ಪ್ರತಿಯೊಂದು ಮಗುವಿಗೂ ಬಲೂನುಗಳನ್ನು ಊದಿಕೊಡುತ್ತಿದ್ದಳು.

DSC_0899‘ಎಷ್ಟೆಲ್ಲ ನೋವುಗಳನ್ನೂ, ನೆನಪುಗಳನ್ನು, ಒಳಗಿಟ್ಟುಕೊಂಡು ಈ ಯುವತಿ ಹೀಗೆ ಆನಂದದಲ್ಲಿದ್ದಾಳೆ. ದೇವರೇ, ಮನುಷ್ಯನಿಗೆ ಇಷ್ಟೆಲ್ಲ ಅನಂತ ಸಾಧ್ಯತೆಗಳನ್ನು ಕೊಟ್ಟಿರುವ ನೀನು ಸಖತ್ ಜಾಣನಾಗಿದ್ದೀಯಾ‘ ಎಂದು ಅಲ್ಲಿಂದ ಬಂದಿದ್ದೇನೆ.

(೧೯ ಜೂನ್ ೨೦೧೧)

(ಫೋಟೋಗಳೂ ಲೇಖಕರವು)

Advertisements