ಆನೆಮರಿ ನುಗ್ಗಿದ್ದ ಮೈಸೂರಿನ ಕುರಿತು

ಆನೆ ಮರಿಯೊಂದು ಮೈಸೂರಿಗೆ ನುಗ್ಗಿ ರಂಪ ಎಬ್ಬಿಸುವುದಕ್ಕೆ ಒಂದು ವಾರ ಮೊದಲು ಮೈಸೂರಿನವರೇ ಗಜತಜ್ಞರೊಬ್ಬರ ಜೊತೆ ಮಾತನಾಡುತ್ತಿದ್ದೆ.ಅವರು ಮೊದಲು ಬರೀ ಪಕ್ಷಿ ತಜ್ಞರಾಗಿದ್ದವರು.ಅಲ್ಲಿ ಇಲ್ಲಿ ಹಾರಾಡುವ ಪಕ್ಷಿಗಳ ಬಣ್ಣ, ಚಹರೆ ಮತ್ತು ಅವುಗಳ ಸಾಮಾಜಿಕ ವರ್ತನೆಗಳನ್ನು ಅವಲೋಕಿಸಿ, ಆ ಪಕ್ಷಿಗಳ ಚಿತ್ರಗಳನ್ನು ಮಕ್ಕಳಿಗೆ ತೋರಿಸಿ, ಅವರ ಬಾಯಿಂದ
ಅವುಗಳ ಹೆಸರನ್ನು ಜೋರಾಗಿ ಹೇಳಿಸಿ ಖುಷಿಯಿಂದ ಓಡಾಡುತ್ತಿದ್ದ ಅವರನ್ನು ಮಕ್ಕಳು ‘ಹಕ್ಕಿಮಾಮ’ ಎಂದು ಕರೆಯುತ್ತಿದ್ದರು.

‘ಹಕ್ಕಿಮಾಮನಾಗಿದ್ದ ನೀವು ಈಗ ಇದ್ದಕ್ಕಿದ್ದಂತೆ ಆನೆಮಾಮ ಆಗಿದ್ದು ಯಾಕೆ’ ಎಂದು ಕೇಳಿದೆ.

‘ಇಲ್ಲ ಸಾರ್, ಈಗ ಪಕ್ಷಿಗಳದ್ದೇನೂ ತೊಂದರೆಯಿಲ್ಲ.ಸುಮ್ಮನೆ ಅವುಗಳ ಪಾಡಿಗೆ ಅವು ಹಾರಾಡಿಕೊಂಡು ಆರಾಮವಾಗಿದೆ.ಈಗ ಆನೆಗಳದ್ದೇ ತೊಂದರೆ. ಕಾಡು ಬಿಟ್ಟು ಊರು ನುಗ್ಗುತ್ತಾ ಇವೆ.ಅದಕ್ಕೇ ಗಜತಜ್ಞನಾಗಿದ್ದೇನೆ’ ಎಂದು ರೀಲು ಬಿಡುತ್ತಿದ್ದರು.ನಿಜ ಸಂಗತಿ ಏನೆಂದರೆ ಅವರೇನೂ ಅವರಾಗಿಯೇ ಗಜತಜ್ಞರಾಗಿರಲಿಲ್ಲ.ಸರಕಾರದೊಂದು ಯೋಜನೆಯಿತ್ತು. ‘ಆನೆ ಮತ್ತು ಮಾನವ ಸಂಘರ್ಷ’. ಆ ಯೋಜನೆಯ ಉಸ್ತುವಾರಿಯನ್ನು ಸ್ವಯಂಸೇವಾ ಸಂಸ್ಥೆಯೊಂದು ವಹಿಸಿಕೊಂಡಿತ್ತು. ಆ ಸಂಸ್ಥೆಯು ಮಕ್ಕಳಲ್ಲಿ ಆನೆಯ ಬಗ್ಗೆ ಅರಿವು ಮೂಡಿಸುವ ಉಪ ಉಸ್ತುವಾರಿಯನ್ನು ಇವರಿಗೆ ನೀಡಿತ್ತು.

‘ಸಾರ್, kukkanakere5.jpgಇಂದಿನ ಮಕ್ಕಳೇ ಮುಂದಿನ ಜನಾಂಗ.ಹಾಗಾಗಿ ಇಂದಿನ ಮಕ್ಕಳು ಆನೆಯನ್ನು ಅರ್ಥ ಮಾಡಿಕೊಂಡರೆ ಮುಂದಿನ ಜನಾಂಗವೂ ಅರ್ಥ ಮಾಡಿಕೊಳ್ಳುತ್ತದೆ.ಮನುಷ್ಯನೂ ಸಂಘಜೀವಿ.ಆನೆಗಳೂ ಸಂಘಜೀವಿ.ನಾವೂ ಆನೆಗಳೂ ಒಂದೇ ತರಹದ ಸಂಘಜೀವಿಗಳಾಗಿರುವಾಗ ನಾವು ಯಾಕೆ ಸಂಘರ್ಷಕ್ಕೆ ಇಳಿಯಬೇಕು.ನಾವು ಕಾಡಿಗೆ ಹೋಗುತ್ತೇವೆ.ಆನೆಗಳು ಊರಿಗೆ ಬರುತ್ತೇವೆ.ಒಟ್ಟಿನಲ್ಲಿ ಹೊಂದಿಕೊಂಡು ಬದುಕಬೇಕು.ನಮ್ಮ ಮೈಯಲ್ಲಿ ಹರಿಯುವ ರಕ್ತವೂ ಕೆಂಪೇ.ಅವುಗಳ ರಕ್ತವೂ ಕೆಂಪೇ.ಹಾಗಿರುವಾಗ ನಾವು ಯಾಕೆ ಒಬ್ಬರ ಜೊತೆ ಒಬ್ಬರು ಹೋರಾಡಬೇಕು’ ಎಂದು ಅವರು ಲೀಲಾಜಾಲವಾಗಿ ಬೂಸಿ ಬಿಡುತ್ತಿದ್ದರು.

‘ಸರಿ ಗಜತಜ್ಞರೇ.ಈಗ ಒಂದು ಹಳ್ಳಿಗೆ ಕಾಡಾನೆ ಬಂತು ಅಂತ ಇಟ್ಟುಕೊಳ್ಳಿ.ಆಗ ಹಳ್ಳಿಯ ಮಕ್ಕಳು ಏನು ಮಾಡಬೇಕು ಎಂಬುದನ್ನು ಹೇಳಿ?’ಎಂದು ಕೇಳಿದೆ.
‘ಸಾರ್, ಮೊದಲು ಹಳ್ಳಿ ಮಕ್ಕಳು ಕಾಡಾನೆಗಳನ್ನು ಅರ್ಥ ಮಾಡಿಕೊಳ್ಳಬೇಕು.ಆನೆ ಮತ್ತು ಮಾನವ ಸಂಘರ್ಷಗಳನ್ನು ನೀಗಿಸುವ ಮೊದಲ ಹಂತ ಆನೆಗಳ ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವುದು.ಅದಕ್ಕೆ ನಾವು ಮಕ್ಕಳಿಗೆ ಕರಪತ್ರಗಳನ್ನು ಹಂಚಿ ಅವರ ಕೈಯಿಂದ ಬೀದಿನಾಟಕಗಳನ್ನು ಮಾಡಿಸುತ್ತೇವೆ. ಬೀದಿ ನಾಟಕಗಳು ಜನರಲ್ಲಿ ಅರಿವು ಮೂಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ’ ಎಂದು ಗಜತಜ್ಞರು ಉತ್ತರಿಸಿದರು.

‘ಅಲ್ಲ ಸಾರ್.ಹಳ್ಳಿಗೆ ಕಾಡಾನೆಗಳು ನುಗ್ಗಿಯೇ ಬಿಟ್ಟಿವೆ.ಮಕ್ಕಳಿಗೆ ಅವುಗಳನ್ನು ಅರ್ಥಮಾಡಿಕೊಳ್ಳಲು ಸಮಯ ಎಲ್ಲಿದೆ. ಇನ್ನು ನೀವು ಕರಪತ್ರಗಳನ್ನು ಹಂಚಿ, ಮಕ್ಕಳ ಕೈಯಿಂದ ಬೀದಿನಾಟಕ ಮುಗಿಸುವ ಹೊತ್ತಿಗೆ ನಾಲ್ಕೈದು ಮಕ್ಕಳಾದರೂ ಅವುಗಳ ಸೊಂಡಿಲಿಗೆ ಸಿಕ್ಕಿ ನೇತಾಡುತ್ತಿರುತ್ತವೆ.ತಕ್ಷಣ ಏನು ಮಾಡಬೇಕು ಹೇಳು ಗುರುವೇ’ ಎಂದು ಕೇಳಿದೆ.

kukkanakere31.jpg‘ಇಲ್ಲಾ ಸಾರ್, ನಿಮಗೆ ಗೊತ್ತಾಗುವುದಿಲ್ಲ.ಬೀದಿ ನಾಟಕದ ಜೊತೆ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸುತ್ತೇವೆ.ಪರಿಸರ ನಾಶ, ಓಝೋನ್ ಪರದೆಯ ವಿನಾಶ .ಜಾಗತೀಕರಣದಿಂದ ಕಾಡಾನೆಗಳ ಮೇಲಾಗಿರುವ ಪರಿಣಾಮ ಇವೆಲ್ಲದರ ಮೇಲೆ ಮಕ್ಕಳು ಚಿತ್ರ ಬಿಡಿಸುತ್ತಾರೆ.ಇದರಿಂದಾಗಿ ಆನೆ ಮತ್ತು ಮಾನವ ಸಂಘರ್ಷದ ವಿಚಾರಗಳು ಮಕ್ಕಳಿಗೆ ಮನದಟ್ಟಾಗುತ್ತವೆ.ಅವರಿಗೆ ಮನದಟ್ಟಾದರೆ ಅವರ ಮನೆಗೂ ಮನದಟ್ಟಾಗುತ್ತದೆ.ಮನೆಯಿಂದ ಊರಿಗೆ,ಊರಿನಿಂದ ದೇಶಕ್ಕೆ.ಒಟ್ಟಾರೆ ಆನೆ ಮತ್ತು ಮಾನವ ಸಹಬಾಳ್ವೆ ಸಾಧ್ಯವಾಗುತ್ತದೆ.ನಮ್ಮ ಉದ್ದೇಶವೂ ಸಾರ್ಥಕವಾಗುತ್ತದೆ’ ಎಂದು ಹೇಳುತ್ತಲೇ ಇದ್ದರು.

‘ಅಯ್ಯೋ ಆನೆ ಬಂದೇ ಬಿಟ್ಟಿದೆ.ಹಳ್ಳಿ ಮಕ್ಕಳು ಹೆದರಿಬಿಟ್ಟಿದ್ದಾರೆ.ತಕ್ಷಣ ಏನು ಮಾಡಬೇಕು ಹೇಳಿ ತಜ್ಞರೇ’ ಎಂದು ನಾನು ಎಷ್ಟು ಕಿರುಚಿಕೊಂಡರೂ ಅವರಿಗೆ ಗೊತ್ತಾಗಲೇ ಇಲ್ಲ.ನಮ್ಮಿಬ್ಬರ ಮಾತುಕತೆ ರೇಡಿಯೋದಲ್ಲಿ ಬೇರೆ ನೇರಪ್ರಸಾರವಾಗುತ್ತಿತ್ತು. ಸದಾ ಕಾಡಾನೆಗಳ ಜೊತೆ ಹೊಡೆದಾಡುತ್ತಿರುವ ಕೊಡಗಿನ ಕೇಳುಗರು ಗಜತಜ್ಞರ ಮಾತುಗಳನ್ನು ಕೇಳಿ ಬಿದ್ದು ಬಿದ್ದು ನಗುತ್ತಿದ್ದರು.

ಸುಸ್ತಾದ ನಾನು ‘ಹೋಗಲಿ ಬಿಡಿ ಸಾರ್ ಯಾವತ್ತಾದರೂ ನೀವು ಆನೆಯನ್ನು ಹತ್ತಿರದಿಂದ ನೋಡಿದ್ದೀರಾ’ ಎಂದು ಕೇಳಿದೆ.ಅವರು ಉತ್ತರಿಸಲಿಲ್ಲ.ನಾನು ನಮಸ್ಕಾರ ಹೇಳಿದ್ದೆ.

ಮೊನ್ನೆ ಮೈಸೂರಿಗೆ ಆನೆ ನುಗ್ಗಿದ ಮೇಲೆ ಅವರನ್ನು ಫೋನಲ್ಲಿ ಮಾತಾಡಿಸುವಾ ಅಂದರೆ ಅವರು ಸಿಗಲೇ ಇಲ್ಲ.ಬಹುಶ: ಅವರು ಇನ್ನಷ್ಟು ಬ್ಯುಸಿಯಾಗಬೇಕಾದ ಎಲ್ಲ ಅವಕಾಶಗಳೂ ಈಗ ಅವರ ಮನೆಬಾಗಿಲಿಗೇ ಬಂದಿರಬೇಕು ಅಂದುಕೊಂಡು ಸುಮ್ಮಗಾದೆ.

kukkanakere21.jpgಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನನಗಿರುವ ಸ್ನೇಹಿತರಲ್ಲಿ ಬಹಳಷ್ಟು ಮಂದಿ ಸಾಂಕೇತಿಕವಾಗಿ ಬದುಕುತ್ತಿರುತ್ತಾರೆ ಮತ್ತು ಅಲ್ಲಿ ಬಹಳ ಸಂಗತಿಗಳು ಸಾಂಕೇತಿಕವಾಗಿ ನಡೆಯುತ್ತಿರುತ್ತದೆ.ಹೀಗೇ ಸಾಂಕೇತಿಕವಾಗಿ ಬದುಕುತ್ತಿರುವ ಸ್ನೇಹಿತರೊಬ್ಬರು ಮೊನ್ನೆ ಆನೆ ನುಗ್ಗಿದ ಈ ಸಂಗತಿಯನ್ನು ಬಹಳ ಸಾಂಕೇತಿಕವಾಗಿ ವಿಶ್ಲೇಷಿಸುತ್ತಿದ್ದರು. ಅವರ ಪ್ರಕಾರ ಮೈಸೂರೆಂಬುದು ಒಂದು ತರಹದ ರಾಜಶಾಹೀ ವಿಸ್ಮೃತಿಯಲ್ಲಿ ಮುಳುಗಿರುವ ನಗರ.ಆ ಆನೆಮರಿ ಎಂಬುದು ಅವರನ್ನು ಎಚ್ಚರಿಸಲು ಕಾಡಿನಿಂದ ಬಂದ ಗೆರಿಲ್ಲಾ ಬಂಡುಕೋರ ಮನಸ್ಸು. ಇದನ್ನೆಲ್ಲಾ ಅರ್ಥ ಮಾಡಿಕೊಳ್ಳದೆ ಕೇವಲ ಅರಣ್ಯನಾಶದ ಮಗ್ಗುಲಿಂದ ಇದನ್ನು ವಿಶ್ಲೇಷಿಸುವುದು ಒಂದು ರೀತಿಯ ಮದ್ಯಮ ವರ್ಗದ ಚಿಂತನೆ ಎಂದು ಅವರು ವಿವರಿಸುತ್ತಿದ್ದರು.

‘ಇಲ್ಲ ಗುರುಗಳೇ, ಆ ಆನೆಗಳನ್ನು ಕೊಡಗಿನ ಕಾಡಿಂದ ಕಳಿಸಿದ್ದು ನಾನೇ’ ಅಂದೆ.

‘ಹೌದಾ ಯಾಕೆ?’ ಅವರು ಒಂಚೂರೂ ಅಪನಂಬಿಕೆಯಿಲ್ಲದೆ ಕೇಳಿದರು.

‘ನಿಮ್ಮನ್ನೇ ಸೊಂಡಿಲಿಗೆ ಹೆಡೆಮುರಿ ಕಟ್ಟಿ ಕಾಡಿಗೆ ಹೊತ್ತು ಹಾಕಲು ಕಳಿಸಿದ್ದೆವು.ಪಾಪ ಆ ಆನೆ ಕನ್ ಫ್ಯೂಸ್ ಮಾಡಿಕೊಂಡು ಆ ಏ ಟಿ ಎಂ ಕಾವಲುಗಾರನನ್ನು ಹಿಡಿಯಲು ಹೋಯಿತು. ಮುಂದಿನ ಸಲ ನಿಮ್ಮನ್ನೇ ಹಿಡಿಯಲಿದೆ’ ಎಂದು ಹೆದರಿಸಿದೆ. ಅವರು ಪೆಚ್ಚುಪೆಚ್ಚಾಗಿ ನಕ್ಕರು. ‘ನನ್ನ ಮೇಲೆ ಯಾಕೆ ಹಗೆ ಗುರುವೇ?’ ಎಂದು ಕೇಳಿದರು. ‘ಇಲ್ಲ ಮೈಸೂರಲ್ಲಿ ನಿಮ್ಮಂತಹ ಅವತಾರ ಪುರುಷರೂ, ವಿಶ್ಲೇಷಣೆಗಾರರೂ ಜಾಸ್ತಿಯಾಗಿದ್ದಾರೆ.ಅವರೆಲ್ಲ ಕೊಂಚ ಕಾಡಲ್ಲಿ ಕಾಲ ಕಳೆಯಲಿ ಎಂಬ ಆಸೆ ಅಷ್ಟೇ’ ಅಂದೆ
‘ಹಾಹಾ ಹೌದಲ್ಲ.. ಹೌದಲ್ಲ.. ’ ಎಂದು ಅವರು ಬಹಳ ಕಾಲ ನಕ್ಕರು.ಆಮೇಲೆ ನಾವು ಬಹಳ ಹೊತ್ತು ಮೈಸೂರಿನಲ್ಲಿರುವ ಈ ತರಹದ ವಿಶ್ಲೇಷಣೆಗಾರ ಯಾನೆ ಅವತಾರ ಪುರುಷರ ದೊಡ್ಡ ಪಟ್ಟಿಯನ್ನೇ ಮಾಡಿದೆವು. ಆ ಪಟ್ಟಿ ಬಹಳ ಮಜಾಕೊಟ್ಟಿತು.

kukkanakere1.jpgತಾವು ಮಲೆಮಾದೇಶ್ವರನ ಅವತಾರ ಎಂದು ತಿಳಿದುಕೊಂಡು  ನಿದಾನಕ್ಕೆ ಹೆಜ್ಜೆಯಿಕ್ಕುತ್ತಾ ನಡೆಯುವವರು, ತಾವು ರಮಣ ಮಹರ್ಷಿಯ ಅವತಾರ ಎಂದು ತಿಳಿದುಕೊಂಡು ನಿದ್ದೆಯಲ್ಲೂ ಚಿಂತಿಸುತ್ತಾ ಮಲಗಿರುವವರು, ತಾವು ಚೆಗೆವಾರನ ಅವತಾರವೆಂದು ತಿಳಿದುಕೊಂಡು ಮೋಟಾರು ಬೈಕಿನ ಬದಲು ಲೇಡೀಸ್ ಸೈಕಲಲ್ಲಿ ಓಡಾಡುತ್ತಿದ್ದವರು, ತಾವು ನೀಷೆ ಎಂದುಕೊಂಡು ಆ ಮಾದರಿಯಲ್ಲೇ ಮೀಸೆ ಬಿಟ್ಟುಕೊಂಡಿದ್ದವರು,ತಾವು ಪುಕೋವೋಕಾ ಎಂದುಕೊಂಡು ಒಂದಿಷ್ಟು ಮಣ್ಣನ್ನು ಪ್ಲಾಸ್ಟಿಕ್ಕಿನ ಚೀಲದಲ್ಲಿ ಇಟ್ಟುಕೊಂಡು ಓಡಾಡಿಕೊಂಡಿದ್ದವರು.ಮಂಟೇಸ್ವಾಮಿ, ಅತ್ತಿಮಬ್ಬೆ, ಅಕ್ಕಮಹಾದೇವಿ, ರಾಚಪ್ಪಾಜಿ, ಸಿದ್ದಪ್ಪಾಜಿ, ಅಂಬೇಡ್ಕರ್, ಮಾವೋ, ಮಾರ್ಕ್ಸ್, ಹೆಗೆಲ್, ಡಿ.ಎಚ್.ಲಾರೆನ್ಸ್, ಟೀಪು ಸುಲ್ತಾನ್ ನೀವು ಯಾವ ಮಹಾಪುರುಷನನ್ನು ನೆನಪಿಸಿಕೊಂಡರೂ ಅವರ ಪ್ರತಿರೂಪದಂತೆ ಈಗಲೂ ಬದುಕುತ್ತಿರುವ ನಿಜಪುರುಷರು-ಈ ಎಲ್ಲರ ನಡುವೆ ಮೊನ್ನೆ ನುಗ್ಗಿದ ನಿಜದ ಕಾಡಾನೆ ಮರಿ ಎಲ್ಲರನ್ನು ನಾವಿಬ್ಬರು ತುಂಬ ಹೊತ್ತು ನೆನೆಸಿಕೊಂಡೆವು.

aramaneya-ooligada-aalu.jpgಇನ್ನು ಕೆಲವು ದಿನಗಳಲ್ಲಿ ಮೈಸೂರಿನಲ್ಲಿ ತಾವೇ ಆ ಕಾಡಾನೆ ಮರಿಯ ಅವತಾರ ಎಂದು ಓಡಾಡುವವರ ಸಂಖ್ಯೆ ಎಷ್ಟಿರಬಹುದು ಎಂದೂ ಲೆಕ್ಕ ಹಾಕಿದೆವು.

ನಮಗಿಬ್ಬರಿಗೆ ಗೊತ್ತಿರುವ ವಲಯದಲ್ಲೇ ಆರಕ್ಕಿಂತ ಹೆಚ್ಚು ಸ್ತ್ರೀ ಪುರುಷರು ಆ ಸಂಭಾವ್ಯ ಪಟ್ಟಿಯಲ್ಲಿದ್ದರು.

(ಜೂನ್ ೧೨ ೨೦೧೧)

(ಫೋಟೋಗಳೂ ಲೇಖಕರವು)

Advertisements