ಬೆಟ್ಟಕುರುಬರ ಮುತ್ತಿಯ ಕಥೆ

2012-01-18_9520ಬೆಟ್ಟಕುರುಬರ ಮುತ್ತಿ ಎಲೆಯಡಿಕೆ ಸಂಚಿಯನ್ನು ತೂಗಿಸಿಕೊಂಡು ಅಂಗಳದ ನಡುವಲ್ಲಿ ಕುಳಿತಿದ್ದಳು. ಅದೇ ವ್ಯಗ್ರ ನೋಟ, ಯಾವುದೇ ಮುಲಾಜಿಲ್ಲದ ಅದೇ ಚೌಕಾಶಿಯ ಮುಖ,ಅವಳ ಅದೇ ಹಳೆಯ ಹಠಮಾರಿತನ.

‘ಮೊದಲು ಒಂದು ಕ್ವಾಟರು ಕುಡಿಯಲು ಕಾಸು ಮಡಗು ಸಾಹುಕಾರಾ, ಆಮೇಲೆ ನೀನು ಹಾಡು ಅಂದರೆ ಹಾಡುತ್ತೇನೆ,ಕುಣಿ ಅಂದರೆ ಕುಣಿಯುತ್ತೇನೆ’ ಎಂದು ಅಂಗಳದ ದೂಳಲ್ಲಿ ಅದಕ್ಕಿಂತಲೂ ದೂಳಾಗಿರುವ ತನ್ನ ಹಳೇ ಟವಲನ್ನು ಹಾಸಿಕೊಂಡು ಕುಳಿತಿದ್ದಳು.

ಮುದುಕಿ ಈ ಮುತ್ತಿಯನ್ನು ನಾನು ಸುಮಾರು ಮೂವತ್ತು ವರ್ಷಗಳ ನಂತರ ಮತ್ತೆ ನೋಡುತ್ತಿದ್ದೆ.ಈ ಮೂವತ್ತು ವರ್ಷಗಳು ಕಳೆದದ್ದಕ್ಕೆ ಸಾಕ್ಷಿಯೋ ಎಂಬಂತೆ ಅವಳ ಮುಖದ ಮೇಲಿನ ಸುಕ್ಕುಗಳು ಮೂರು ಪಟ್ಟು ಹೆಚ್ಚಿದ್ದವು. ಸದಾ ಸುಳ್ಳು ಹೇಳುತ್ತಾ, ಬೈಯುತ್ತಾ ಇದ್ದ ಅವಳ ದೊಡ್ಡ ಬಾಯಿ ಈಗ ಒಂದು ಉರುಟು ಚಕ್ರದಂತೆ ಚಂದವಾಗಿ ಕಾಣಿಸುತ್ತಿತ್ತು.ಅವಳ ತುಟಿಗಳಲ್ಲಿ ಸದಾ ಕೆಂಪಗೆ ಹರಡಿಕೊಂಡಿರುತ್ತಿದ್ದ ತಾಂಬೂಲ ಈಗ ದವಡೆಯಿಂದ ಕೆಳಗೆ ಹರಿದು ಅವಳ ಕೊಳೆಯ ಉಡುಪಿನಲ್ಲಿ ಸೇರಿಕೊಳ್ಳುತ್ತಿತ್ತು.

ಅವಳು ಈಗ ಏಕಾಂಗಿಯಾಗಿದ್ದಳು.ಅವಳ ಹಿಂದೆ ಸದಾ ನೆರಳಿನಂತೆ ನಡೆಯುತ್ತಿದ್ದ ಅವಳ ಯಜಮಾನ ಈಗ ಕೆಲವು ವರ್ಷಗಳ ಹಿಂದೆ ಹೋಗಿಬಿಟ್ಟ ಎಂದು ಅಲ್ಲಿದ್ದವರು ಅದಾಗಲೇ ಹೇಳಿಬಿಟ್ಟಿದ್ದರು.

‘ನನ್ನ ಜೊತೆ ಇದ್ದಿದ್ದರೆ ಅವ ಹೋಗುತ್ತಿರಲಿಲ್ಲ.ಹೇಗೋ ಬದುಕಿ ಇರುತ್ತಿದ್ದ.ನನ್ನ ಬಿಟ್ಟು ಹೋದ ನೋಡಿ, ಸತ್ತೇ ಬಿಟ್ಟ.ಹಾಳಾದವನ ಗುಣಿಗೆ ಹಾಕುವಾಗಲೂ ನಾನು ನೋಡಾಕೆ ಹೋಗಲಿಲ್ಲ’ ಎಂದು ಮುತ್ತಿ ಸತ್ತು ಹೋದ ಗಂಡನ ನೆನಪಿಗೆ ಕ್ಯಾಕರಿಸಿ ಉಗಿದು ನನ್ನ ಜೊತೆ ಚೌಕಾಶಿಗೆ ಇಳಿದಿದ್ದಳು.

ಈ ಮುತ್ತಿಯ ಗಂಡನ ಹೆಸರೇನು ಎಂಬುದು ಮೂವತ್ತು ವರ್ಷಗಳ ಹಿಂದೆಯೂ ನನಗೆ ಗೊತ್ತಿರಲಿಲ್ಲ. ಈಗಲೂ ಕೇಳಲು ಹೋಗಲಿಲ್ಲ. ಮೂವತ್ತು ವರ್ಷಗಳ ಹಿಂದೆಯೂ ನಾವು ಅವನನ್ನು ‘ಮುತ್ತಿಯ ಗಂಡ’ ಅಂತ ಮಾತ್ರ ಹೇಳುತ್ತಿದ್ದೆವು. ಅವನು ಮುತ್ತಿಯ ಹಿಂದೆ ಸುಮ್ಮನೆ ನಡೆದು ಬರುತ್ತಿದ್ದ. ಮುತ್ತಿಯ ಹೆಗಲಲ್ಲಿ ಜೋತಾಡುತ್ತಿದ್ದ ಜೋಳಿಗೆಯಲ್ಲಿ ಕಾಡಿನಿಂದ ತಂದ ಕಾಗೆ ಸೊಪ್ಪು, ಕಣಿಲೆ, ಬೆರಕೆ ಸೊಪ್ಪು, ಹರಿವೆ, ತೋಟದಿಂದ ಕದ್ದು ತಂದ ಕಿತ್ತಳೆ, ಚಕ್ಕೋತ ಇತ್ಯಾದಿಗಳು ಜೋತಾಡುತ್ತಿದ್ದವು.ಆಕೆ ತನ್ನ ಜೋಳಿಗೆಯನ್ನು ನೆಲದಲ್ಲಿ ಹರಡಿ ಕುಳಿತು ಚೌಕಾಶಿಗೆ ಇಳಿದಳೆಂದರೆ ಲೋಕವನ್ನೇ ಮರೆಯುತ್ತಿದ್ದಳು. ನಾವೂ ಬೇಕು ಬೇಕೆಂತಲೇ ಆಕೆಯನ್ನು ರೇಗಿಸಲು ಚೌಕಾಶಿಗೆ ಇಳಿದು ಅವಳು ಆಕಾಶಕ್ಕೆ ಏರಿಸಿದ ಪದಾರ್ಥವನ್ನು ಪಾತಾಳಕ್ಕೆ ಇಳಿಸಿ ಆಕೆ ಹಾಕುವ ಶಾಪಕ್ಕಾಗಿ ಕಾಯುತ್ತಿದ್ದೆವು.

ಆಕೆ ಶಾಪ ಹಾಕಿ ಮುಂದಕ್ಕೆ ಹೋಗುತ್ತಿದ್ದಳು. ಆಕೆಯ ಹಿಂದೆಯೇ ಗಂಡನೂ ವಿಷಣ್ಣನಾಗಿ ನಡೆದು ಹೋಗುತ್ತಿದ್ದನು.

ಸಂಜೆ ಕತ್ತಲಾಗುವಾಗ ಎಲ್ಲರಿಗೂ ಶಾಪ ಹಾಕಿ ಸಾಕಾದ ಮುತ್ತಿ ಮತ್ತೆ ತನ್ನ ಜೋಳಿಗೆಯ ಜೊತೆ ಹಾಜರಾಗುತ್ತಿದ್ದಳು.ಆತನೂ ಹಿಂದೆ ಇರುತ್ತಿದ್ದ. ಸೂರ್ಯ ಮುಳುಗಿದ ಮೇಲೆ ಚೌಕಾಶಿ ಮಾಡಬಾರದೆಂದು ನಮಗೂ ಮುತ್ತಿಗೂ ಒಂದು ತರಹದ ಒಪ್ಪಂದವಿತ್ತು.ಹಾಗಾಗಿ ಮುತ್ತಿ ಕೊಟ್ಟದನ್ನು ಇಸಕೊಂಡು, ಜೋಳಿಗೆಯಲ್ಲಿ ಉಳಿದದ್ದನ್ನು ನೆಲದಲ್ಲಿ ಹರಡಿ ಹೋಗುತ್ತಿದ್ದಳು.

ಹೋಗುವಾಗ ನೀರು ಕೇಳಿ ಕುಡಿಯುತ್ತಿದ್ದಳು.ತಿನ್ನಲಿಕ್ಕೆ ಏನಾದರೂ ಇದೆಯಾ ಎಂದು ಕೇಳುತ್ತಿದ್ದಳು.ಹಳೆಯ ಬಟ್ಟೆಯನ್ನೂ,ಹರಿದ ಕಂಬಳಿಗಳನ್ನೂ ಕೇಳುತ್ತಿದ್ದಳು.ಆಗಲೂ ಮುತ್ತಿಯ ಗಂಡ ಅದೇ ವಿಷಣ್ಣ ಮುಖದಲ್ಲೇ ನೋಡುತ್ತಿದ್ದ.ಆಮೇಲೆ ಅವರಿಬ್ಬರೂ ಕತ್ತಲಲ್ಲಿ ಇಳಿದು ಹೋಗುತ್ತಿದ್ದರು. ಅವರು ಕತ್ತಲಲ್ಲಿ ಇಳಿದು ಹೋದ ಮೇಲೆ ಕತ್ತಲು ಇನ್ನೂ ಹೆಚ್ಚಾಗುತ್ತಿತ್ತು. ಆಮೇಲೆ ಅವರಿಬ್ಬರೂ ಆ ಹೆಚ್ಚಾದ ಕತ್ತಲಲ್ಲಿ ಹೊಟ್ಟೆ ತುಂಬುವವರೆಗೆ ಸಾರಾಯಿ ಕುಡಿದು ತೂರಾಡುತ್ತಾ, ಹಾಡು ಹೇಳುತ್ತಾ ತಮ್ಮ ಹಾಡಿಯನ್ನು ಸೇರುತ್ತಿದ್ದರು ಎಂದು ಗೊತ್ತಿರುವವರು ಕಥೆ ಹೇಳುತ್ತಿದ್ದರು. ಆಗ ಇನ್ನೂ ಸಣ್ಣವರಾಗಿದ್ದ ನಮಗೆ ಕುಡಿದು ಹಾಡು ಹೇಳುವವರು, ಬೈಯುತ್ತಾ ಮಾತನಾಡುವವರು ಎಲ್ಲರೂ ಪ್ರಾಣಿಗಳಂತೆ ಕಾಣಿಸುತ್ತಿದ್ದರು.ಹಾಗಾಗಿ ನಾವು ಯಾರೂ ಮುತ್ತಿ ಮತ್ತು ಆಕೆಯ ಹೆಸರಿಲ್ಲದ ಗಂಡನ ಕುರಿತು ಯೋಚಿಸುತ್ತಿರಲಿಲ್ಲ.

2012-01-18_9534ಮೊನ್ನೆ ಮೂವತ್ತು ವರ್ಷಗಳ ನಂತರ ಬೆಟ್ಟಕುರುಬರ ಕಾಲನಿಯಲ್ಲಿ ಮತ್ತೆ ಮುತ್ತಿಯನ್ನು ಕಾಣುವವರೆಗೆ ಆಕೆ ನನಗೆ ಮರೆತೇ ಹೋಗಿದ್ದಳು.ಕೊಡಗಿನ ಕಾಡಿನೊಳಗಡೆ ಇರುವ ಹಾಡಿಗಳಲ್ಲಿ ಜೇನುಕುರುಬರನ್ನೂ, ಬೆಟ್ಟಕುರುಬರನ್ನೂ, ಯರವರನ್ನೂ ಮಾತನಾಡಿಸಿಕೊಂಡು, ಅವರ ಹಾಡುಗಳನ್ನೂ ಕಥೆಗಳನ್ನೂ ಕಷ್ಟಸುಖಗಳನ್ನೂ ವಿಚಾರಿಸಿಕೊಂಡು ಓಡಾಡುವುದರಲ್ಲಿ ಏನೋ ಒಂದು ಸುಖವನ್ನು ಕಾಣುತ್ತಿರುವ ನಾನು ಇದ್ದಕ್ಕಿದ್ದಂತೆ ದೂಳಿನಲ್ಲಿ ಬಂದು ಕುಳಿತಿದ್ದ ಅವಳನ್ನು ಕಂಡು ದಂಗಾಗಿ ಹೋಗಿದ್ದೆ. ಆಕೆ ಏನೂ ದಂಗಾಗದವಳ ಹಾಗೆ ಎಂದಿನಂತೆ ಚೌಕಾಶಿ ಮಾಡಿಕೊಂಡು ಕುಳಿತಿದ್ದಳು. ಮಣ್ಣಾಗದ ಶರಟು ಪ್ಯಾಂಟುಗಳನ್ನು ಹಾಕಿರುವ ಎಲ್ಲರೂ ಆಕೆಗೆ ಸಾಹುಕಾರರೇ.ಹಾಗಾಗಿ ನನ್ನನ್ನೂ ಸಾಹುಕಾರರೇ ಎಂದು ಕರೆಯುತ್ತಿದ್ದಳು. ‘ನಾನೆಲ್ಲಿ ಸಾಹುಕಾರ ಮಾರಾಯ್ತೀ, ನೀನೇ ಸಾಹುಕಾರ್ತಿ ಎಷ್ಟು ಚಂದ ಹಾಡು ಹೇಳ್ತೀ, ಹಾಡು ಮಾರಾಯ್ತೀ’ ಎಂದು ಆಕೆಯನ್ನು ಪುಸಲಾಯಿಸುತ್ತಿದ್ದೆ.

ಈಗ ಆ ಹಾಡಿಯಲ್ಲಿ ಬೆಟ್ಟಕುರುಬರ ಕಿರುಂಗಾಳಿ ದೇವತೆಯ ಹಾಡು ಗೊತ್ತಿರುವವಳು ಈ ಮುತ್ತಿ ಮಾತ್ರ ಎಂದು ಹಾಡಿಯ ಮಂದಿ ಹೇಳಿದ್ದರು. ಈ ಕಿರುಂಗಾಳಿ ದೇವತೆ ಕೊಡಗಿನ ಕುಟ್ಟ ಎಂಬ ಗ್ರಾಮದಲ್ಲಿ ನೆಲೆಸಿರುವವಳು.ಈ ದೇವತೆಯ ಪ್ರಸಾದ ಹಿಡಿಮಣ್ಣು. ಈ ಹಿಡಿಮಣ್ಣಿನ ಪ್ರಸಾದವನ್ನೇ ನಂಬಿ ಕೊಡಗಿನ ಕಾಡಿನೊಳಗಡೆ ಚದುರಿ ಚಲ್ಲಾಪಿಲ್ಲಿಯಾಗಿ ಹೋಗಿರುವ ಬೆಟ್ಟಕುರುಬರು ಬದುಕುತ್ತಿರುವರು ಎಂದು ತಮಗೆ ಗೊತ್ತಿರುವ ಕಥೆಯನ್ನು ಅಷ್ಟಿಷ್ಟು ಹೇಳಿದ್ದರು.

ಅವರಲ್ಲಿ ಬಹುತೇಕರಿಗೆ ಆ ಕಥೆಯೂ ಮರೆತು ಹೋಗಿತ್ತು.ಇದ್ದುದರಲ್ಲಿ ಒಂದಿಷ್ಟು ಕಥೆ ಗೊತ್ತಿದ್ದ ಕಾಲನಿಯ ಕಾಳಿ ಎಂಬ ಮುದುಕಿ ಮಾತು ಮಾತಿಗೂ ಅಳುತ್ತಿದ್ದಳು.ಅವಳು ಅಳುವಿನ ನಡುವಲ್ಲಿ ಹೇಳಿದ ಕಥೆಯಲ್ಲಿ ಶ್ರೀಕೃಷ್ಣ ಪರಮಾತ್ಮನೂ ಬಂದಿದ್ದ.ಜೊತೆಗೆ ಬಂಡೆಗಳೂ ಮುಳುಗಿ ಹೋಗುವಂತೆ ಬಾಲಕೃಷ್ಣನಿಗಾಗಿ ತಮ್ಮ ಕೆಚ್ಚಲಿಂದ ಹಾಲು ಸುರಿಸುತ್ತಿದ್ದ ಗೋವುಗಳ ಕಥೆಯೂ ಬಂದಿತ್ತು.

2012-01-18_9537ನಡುವಲ್ಲಿ ಇದ್ದಕ್ಕಿದ್ದಂತೆ ಕಥೆ ನಿಲ್ಲಿಸಿದ ಕಾಳಿ ಎಂಬ ಆ ಮುದುಕಿ ಗುಡಿಸಲಲ್ಲಿ ಕುಡಿದು ಮಲಗಿದ್ದ ಮುತ್ತಿಯನ್ನು ಎಬ್ಬಿಸಿ ಕರಕೊಂಡು ಬಂದು, ‘ನೋಡಿ ಇವಳಿಗೆ ಹಾಡೂ ಗೊತ್ತು, ಕಥೆಯೂ ಗೊತ್ತು’ ಎಂದು ಅವಳನ್ನು ದೂಳಿನಲ್ಲಿ ಕೂರಿಸಿದ್ದಳು.

ಇದು ಯಾವುದೂ ತನಗೆ ಬೇಕಾಗಿಲ್ಲ ಎಂಬಂತೆ ಮುತ್ತಿ ನನ್ನ ಜೊತೆ ಚೌಕಾಶಿಗೆ ಇಳಿದಿದ್ದಳು.‘ನಿಮಗೆ ಹಾಡು ಬೇಕಾ?, ಹಾಗಾದರೆ ನನಗೆ ಕ್ವಾಟರು ಬೇಕು’ ಎಂದು ಮಗುವಿನಂತೆ ರಚ್ಚೆ ಮಾಡುತ್ತಿದ್ದಳು.‘ ಸರಿ ಮುತ್ತಿ, ಬೇಕಾದರೆ ಕುಡಿ, ಇಲ್ಲಾದರೆ ತಿನ್ನು,ತಗೋ ಈಗ ಈ ನೋಟು ಹಿಡಕೋ ಹಾಡು ಹೇಳು’ ಎಂದು ಆಕೆಯ ಉಡಿ ತುಂಬಿದ್ದೆ. ‘ಹಾಗೆ ದಾರಿಗೆ ಬಾ ಸಾಹುಕಾರಾ’ ಎಂದು ಮುತ್ತಿ ದೂಳಿಂದ ಎದ್ದು ಗಂಟಲು ಸರಿ ಮಾಡಿಕೊಂಡು ಮುಳುಗುತ್ತಿರುವ ಸೂರ್ಯನಿಗೆ ಎದುರಾಗಿ ಕೂತಳು. ಕಿರುಂಗಾಳಿಯ ಹಾಡು ಹೇಳುವಾಗ ಸೂರ್ಯನಿಗೆ ಮುಖ ಮಾಡಿ ಹಾಡಬೇಕಂತೆ. ಹಾಡುವ ಅವಳಿಗೆ ಬೆನ್ನುಮಾಡಿಕೊಂಡು ಇನ್ನೊಬ್ಬಳು ಕೂತು ಸೊಲ್ಲು ಹೇಳಬೇಕಂತೆ.ಅದು ನಿಯಮವಂತೆ.

‘ಈಗ ನಾನು ಹೆಂಗಸಲ್ಲ ಗಂಡಸು.ನನಗೆ ಬೆನ್ನು ತಿರುಗಿಸಿ ಕೂತಿದ್ದಾಳಲ್ಲ ಅವಳು ಹೆಂಗಸು’ ಎಂದು ಮುತ್ತಿ ಮೊನ್ನೆ ಬಹಳ ಹೊತ್ತು ಗಂಡಸಿನ ದನಿಯಲ್ಲಿ ಹಾಡಿದಳು.ನಿಜವಾಗಿಯೂ ಅದು ಯಾವ ಭಾಷೆ ಎಂದು ಅರಿವಾಗದ ಹಾಗೆ ಅದು ಒಳಹೊಕ್ಕು ಕುಳಿತಿದೆ.ಹಾಗೆಯೇ ಮುತ್ತಿಯ ಹೆಸರಿಲ್ಲದ ಗಂಡನ ಮುಖ ಕೂಡಾ. ಎಷ್ಟು ಯೋಚಿಸಿದರೂ ಅದು ಹೇಗಿತ್ತು ಎಂದು ಕಣ್ಣೆದುರಿಗೆ ಬಾರದಂತಾಗಿ ಹೋಗಿದೆ.

2012-01-18_9520ಮೂವತ್ತು ವರ್ಷಗಳ ಹಿಂದೆ ಕಂಡ ಮುಖ. ಮೂವತ್ತು ವರ್ಷಗಳ ನಂತರ ಕೇಳಿದ ಹಾಡು.ನಿಜವಾಗಿಯೂ ಅದು ಯಾವ ಭಾಷೆ ಎಂದು ಅರಿವಾಗದ ಹಾಗೆ ಅದು ಒಳಹೊಕ್ಕು ಕುಳಿತಿದೆ.ಹಾಗೆಯೇ ಮುತ್ತಿಯ ಹೆಸರಿಲ್ಲದ ಗಂಡನ ಮುಖ ಕೂಡಾ. ಎಷ್ಟು ಯೋಚಿಸಿದರೂ ಅದು ಹೇಗಿತ್ತು ಎಂದು ಕಣ್ಣೆದುರಿಗೆ ಬಾರದಂತಾಗಿ ಹೋಗಿದೆ.ದಾರಿಯಲ್ಲಿ ಹಾದು ಹೋಗುತ್ತಿರುವ ಒಂದೊಂದೇ ಮುಖಗಳನ್ನು ಸುಮ್ಮಗೆ ನೋಡುತ್ತಿರುವೆ.

Advertisements