ರಮಣಿಯ ಗಿಣಿರಾಮ

ಇವರಿಬ್ಬರನ್ನು ಕಂಡು ಬಂದು ಸುಮ್ಮನೇ ಕುಳಿತಿದ್ದೆ. ಆಕಾಶದ ಒಂದು ಮೂಲೆಯಲ್ಲಿ ಯಾರೋ ದೊರೆಸಾನಿ ಬಿಂಕದಿಂದ ಹಿಡಿದಿರುವಂತೆ ಎದ್ದು ನಿಂತಿರುವ ಒಂದು ದೊಡ್ಡ ಕಪ್ಪು ಮೋಡ. ಅದರ ಹಿಂದೆ ಬಿಸಿಲಿಗೆ ಹೊಳೆಯುತ್ತಿರುವ ಒಂದು ಸಣ್ಣ ಬಿಳಿಯ ಮೋಡ.

Advertisements

2011-05-26_8195ವರು ಮಾತನಾಡುವಾಗ ಮೂರು ಸಲ ಅತ್ತರು.

ಇಪ್ಪತ್ತೆರಡು ವರ್ಷಗಳ ಹಿಂದೆ ಕ್ಷಯದಿಂದಾಗಿ ತೀರಿಕೊಂಡ ಗಂಡನ ಕುರಿತು ಹೇಳುವಾಗ ಒಂದು ಸಲ.

ಎರಡೂವರೆ ವರ್ಷಗಳ ಹಿಂದೆ ಕರುಳಲ್ಲಿ ನೀರು ತುಂಬಿಕೊಂಡು ತೀರಿಹೋದ ಮಗನ ನೆನಪಿಸಿಕೊಂಡು ಇನ್ನೊಂದು ಸಲ.

ಎರಡು ತಿಂಗಳ ಹಿಂದೆ ತೀರಿಹೋದ ತಮ್ಮ ಹದಿನೈದು ವರ್ಷ ವಯಸ್ಸಿನ ಪೊಮೇರಿಯನ್ ನಾಯಿಯ ನೆನಪಾಗಿ ಮೂರನೇ ಸಲ.

ಮೂರು ಸಲವೂ ಅವರು ಅಳುವನ್ನು ತಡೆದುಕೊಳ್ಳಲು ತುಂಬಾ ಕಷ್ಟವನ್ನೇನೂ ಪಡಲಿಲ್ಲ. ಅಳು ಅದಾಗಿಯೇ ಅವರ ಕಣ್ಣಿಂದ ತುಳುಕಿದಂತೆ ಮಾಡಿ ಅಮೇಲೆ ಅದಾಗಿಯೇ ಮೆಲ್ಲಗೆ ಅವರ ಗಂಟಲಿಂದ ಇಳಿದು ಮಾಯವಾಯಿತು.

ಅವರು ಆಮೇಲೆ ಮಾತು ಮುಂದುವರಿಸಿದರು.

ಅವರು ಮಾತನಾಡುತ್ತಿದ್ದ ಅಷ್ಟೂ ಹೊತ್ತು ಅವರ ಗಿಳಿರಾಮ ಅವರನ್ನು ಗಮನಿಸುತ್ತಿತ್ತು.ಹೆಚ್ಚು ಮಾತಾಡದಂತೆ, ಹೆಚ್ಚು ಅಳದಂತೆ, ಹೆಚ್ಚು ಭಾವುಕರಾಗದಂತೆ ಅದು ತನ್ನ ಕಣ್ಣಿಂದಲೇ ಅವರನ್ನು ನಿಯಂತ್ರಿಸುತ್ತಿತ್ತು.ಆಗಾಗ ಹಾರಿಬಂದು ಅವರ ಭುಜದ ಮೇಲೆ ಕುಳಿತು, ಅವರ ಕೊರಳ ಸರವನ್ನು ಕಚ್ಚಿ ಎಳೆದು, ಅವರ ಅಂಗೈ ಮೇಲೆ ಕುಳಿತು ಮಾತನಾಡಿಸುತ್ತಿದ್ದ ನನ್ನನ್ನೂ ಗಮನಿಸಿ ನೋಡುತ್ತಿತ್ತು.

2011-05-26_8182ಇನ್ನು ಇವರಿಬ್ಬರು ಮಾತನಾಡುವುದು ನಿಲ್ಲಿಸಲಿಕ್ಕಿಲ್ಲ ಎಂದು ಗೊತ್ತಾದಾಗ ತನ್ನ ಗಿಳಿ ಭಾಷೆಯಲ್ಲಿ ‘ರಮಣೀ’ ಎಂದು ಅವರ ಹೆಸರನ್ನು ಕರೆಯಿತು.

ಗಿಳಿಯ ಬಾಯಿಂದ ತನ್ನ ಹೆಸರು ಬಂದಾಕ್ಷಣ ಅವರು ಇದ್ದಕ್ಕಿದ್ದಂತೆ ಗೆಲುವಾದರು.

‘ನೋಡಿದಿರಾ, ಅದರ ಬಾಯಲ್ಲಿ ನನ್ನ ಹೆಸರು ಮಾತ್ರ ಬರುವುದು.ನೋಡಿದಿರಾ, ಅದು ನನ್ನ ಮೈಮೇಲೆ ಮಾತ್ರ ಕೂರುವುದು, ಬೇರೆ ಯಾರಾದರೂ ಮುಟ್ಟಲು ಹೋದರೆ ಖಂಡಿತಾ ಕಚ್ಚಿಯೇ ಬಿಡುವುದು’ ಎಂದು ನನ್ನನ್ನೂ ಮರೆತು ಹೋದರು.

ಆಮೇಲೆ ಗಿಳಿಯೂ ಮತ್ತು ಅವರೂ ಒಬ್ಬರನ್ನೊಬ್ಬರು ಮುದ್ದಿಸಲು ತೊಡಗಿದರು. ಇಬ್ಬರೂ ಬಹಳ ಹೊತ್ತು ಎಲ್ಲವನ್ನೂ ಮರೆತು ಮಾತನಾಡಲು ತೊಡಗಿದರು. ಅವರ ತುಳುಮಾತು.ಅದರ ಗಿಳಿಮಾತು.ತಮ್ಮ ಕಷ್ಟಸುಖಗಳು ತಮ್ಮಿಬ್ಬರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತೂ ಇಲ್ಲ.ಗೊತ್ತಾಗಬೇಕಾಗಿಯೂ ಇಲ್ಲ ಎನ್ನುವ ಹಾಗೆ ಅವರಿಬ್ಬರ ಮಾತು ಸಾಗಿತ್ತು.

2011-05-26_8169ನಾನು ಸುಮ್ಮನೇ ಫೋಟೋ ತೆಗೆಯುತ್ತಿದ್ದೆ.

ರಮಣಿಯವರಿಗೆ ಈ ಗಿಳಿ ಸಿಕ್ಕಿ ಇಪ್ಪತ್ತೆರಡು ವರ್ಷವಾಗಲು ಒಂದು ವಾರ ಬಾಕಿ ಇದೆ.

ಅವರ ಗಂಡ ತೀರಿಹೋಗಿ ಇವತ್ತಿಗೆ ಇಪ್ಪತ್ತೊಂದು ವರ್ಷ ಏಳು ತಿಂಗಳಾಗಿದೆ.

ರಮಣಿಯವರು ಒಂದು ಕ್ಯಾಲೆಂಡರಿನಂತೆ ಇದನ್ನೆಲ್ಲ ಲೆಕ್ಕ ಹಾಕುತ್ತಾರೆ.

ಏಕೆಂದರೆ ಅವರ ಗಂಡ ಕುಂದಾಪುರದ ಸರಕಾರೀ ಆಸ್ಪತ್ರೆಯಲ್ಲಿ ಕ್ಷಯ ರೋಗ ಬಂದು ಮಲಗಿದ್ದಾಗ ಸಿಕ್ಕಿದ ಗಿಳಿ ಇದು.ಇದು ಸಿಕ್ಕಿ ಮೂರು ತಿಂಗಳಾಗುವ ಮೊದಲೇ ಗಂಡ ತೀರಿ ಹೋಗಿದ್ದಾರೆ.ಗಂಡ ಆಸ್ಪತ್ರೆಯಲ್ಲಿ ಮಲಗಿದ್ದಾಗ ಅಲ್ಲಿದ್ದ ನರ್ಸಮ್ಮಳೊಬ್ಬಳು ರಮಣಿಯವರನ್ನು ತುಂಬ ಹಚ್ಚಿಕೊಂಡಿದ್ದರಂತೆ.

2011-05-26_8158‘ನಿನ್ನ ಗಂಡ ತೀರಿ ಹೋಗಬಹುದು ಆದರೆ ನೀನು ಅಳಬಾರದು’ ಎಂದು ಹೇಳುತ್ತಿದ್ದರಂತೆ.

ಆಗ ರಮಣಿಯವರ ಮಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದನಂತೆ.ಆಸ್ಪತ್ರೆಯಲ್ಲಿರಲು ಬೋರಾಗಿ ‘ಅಮ್ಮ ಏನಾದರೂ ಆಡಲಿಕ್ಕೆ ಕೊಡು’ ಎಂದು ಹಠ ಮಾಡುತ್ತಿದ್ದನಂತೆ.ಇವರಿಗೆ ಅವನ ಹಠ ನೋಡಿ ಬೇಸರವಾಗುತ್ತಿತ್ತಂತೆ.

ಒಂದು ಕಡೆ ಕ್ಷಯದಿಂದ ಮಲಗಿರುವ ಮಗ.ಇನ್ನೊಂದು ಕಡೆ ಹಠ ಮಾಡುತ್ತಿರುವ ಮಗ.ಏನು ಮಾಡುವುದೆಂದು ಗೊತ್ತಾಗದೇ ಇದ್ದಾಗ ಆ ನರ್ಸಮ್ಮಳೇ ಬಂದು ಇಬ್ಬರನ್ನೂ ಮನೆಗೆ ಕರೆದುಕೊಂಡು ಹೋದಳಂತೆ.

ಆಕೆಯ ಮನೆಯ ಮುಂದೆ ಒಂದು ದೊಡ್ಡ ಮರ.ಆ ಮರದಲ್ಲಿ ಪೊಟರೆಗಳು.ಅದರಲ್ಲೆಲ್ಲ ಗಿಳಿಗೂಡುಗಳು.ಹುಡುಗನೊಬ್ಬ ಸರಸರ ಮರಹತ್ತಿ ಗಿಳಿಮರಿಗಳನ್ನು ಹಿಡಿದು ತಂದು ರೂಪಾಯಿಗೆ ಮಾರುತ್ತಿದ್ದನಂತೆ.ಹಾಗೆ ಇವರಿಗೆ ಸಿಕ್ಕಿದ ಗಿಳಿ ಇದು.

ಸಿಕ್ಕಿದಾಗ ಪುಕ್ಕವೂ ಇರದೆ ಮಾಂಸದ ಮುದ್ದೆಯಂತೆ ಇತ್ತಂತೆ.ಅದು ಬಂದು ತಿಂಗಳೊಳಗೆ ಪುಕ್ಕವೂ ಬಂತಂತೆ.ಮೂರು ತಿಂಗಳಲ್ಲಿ ಗಂಡ ತೀರಿಕೊಂಡರಂತೆ.

2011-05-26_8140‘ಆಮೇಲೆ ಅವರ ನೆನಪಾದಾಗಲೆಲ್ಲ ಇದರ ಮುಖವನ್ನೇ ನೋಡುವುದು.ನೋಡಿ ದೇವರು ಎಂಥ ಕೆಲಸ ಮಾಡಿಬಿಟ್ಟ.ಒಬ್ಬರನ್ನು ತೆಗೆದುಕೊಂಡು ಹೋಗುವ ಮೊದಲು ಇನ್ನೊಂದನ್ನು ಕೊಟ್ಟು ಹೋದ’’ ಎಂದು ಅವರು ಸಣ್ಣದಾಗಿ ನಿಟ್ಟುಸಿರು ಬಿಟ್ಟರು.

ಆಮೇಲೆ ‘ಅಲ್ಲವಾ ರಾಮು’ ಎಂದು ಆ ಗಿಳಿಯನ್ನೇ ಕೇಳಿದರು.ಅದೂ ಅದರ ಭಾಷೆಯಲ್ಲಿ ಏನೋ ಹೇಳಿತು.

ನಾನು ಫೋಟೋ ತೆಗೆಯುತ್ತಾ ಕುಂದಾಪುರದ ಸರಕಾರೀ ಆಸ್ಪತ್ರೆಯ ಹತ್ತಿರದ ಗಿಳಿಪೊಟರೆಗಳ ಆ ಮರ ಈಗಲೂ ಹಾಗೆಯೇ ಇರಬಹುದಾ ಎಂದು ಯೋಚಿಸುತ್ತಿದ್ದೆ.

ರಮಣಿಯವರು ಹುಟ್ಟಿದ್ದು ಮಂಗಳೂರಲ್ಲಿ ಸುಮಾರು ಅರವತ್ತೈದು ವರ್ಷಗಳ ಹಿಂದೆ.

ಅವರ ತಂದೆ ಮರದ ಕೆಲಸ ಮಾಡುತ್ತಿದ್ದವರು.ಎಲ್ಲಿಗೋ ಮರದ ಕೆಲಸಕ್ಕೆ ಅಂತ ಹೋದ ಮನುಷ್ಯ ಬರಲೇ ಇಲ್ಲವಂತೆ.ಆಗ ಅವರ ತಂಗಿ ಇನ್ನೂ ತೊಟ್ಟಿಲಲ್ಲಿ ಮಲಗಿದ್ದ ಕೂಸು.ಬಾರದ ತಂದೆಗೆ ಕಾದೂ ಕಾದೂ ಕಾಣದೆ ಕೊನೆಗೆ ತಾಯಿ ಮಕ್ಕಳು ಮಡಿಕೇರಿಗೆ ಬಂದಿದ್ದಾರೆ.ಮಡಿಕೇರಿಯ ಸೋದರಮಾವ ಅವರನ್ನೆಲ್ಲ ಚೆನ್ನಾಗಿಯೇ ಸಾಕಿದ್ದಾರೆ.ಕಾನ್ವೆಂಟ್ ಶಾಲೆಯಲ್ಲಿ ಓದಿಸಿದ್ದಾರೆ.ಮದುವೆಯನ್ನೂ ಮಾಡಿಸಿದ್ದಾರೆ.ಮದುವೆಯಾದ ಮೇಲೆ ರಮಣಿಯವರು ಸರಕಾರೀ ಕೆಲಸದಲ್ಲಿದ್ದ ಗಂಡನ ಜೊತೆ ಊರೂರು ಸುತ್ತಿದ್ದಾರೆ.ಸುಖವಾಗಿಯೇ ಇದ್ದಾರೆ.

2011-05-26_8134‘ಆದರೆ ಅವರು ತೀರಿ ಹೋಗಿಬಿಟ್ಟರು ಮಗಾ, ಈ ಗಿಳಿ ಇಲ್ಲದಿದ್ದರೆ ನನಗೇನಾಗುತ್ತಿತ್ತು ಗೊತ್ತಿಲ್ಲ’ ಎಂದು ಅವರು ಅದನ್ನು ಕಣ್ಣಿಗೊತ್ತಿಕೊಂಡರು.

ಸುಮ್ಮನೇ ನೋಡುತ್ತಿದ್ದೆ. ಇಪ್ಪತ್ತೆರಡು ವರ್ಷಗಳ ಹಿಂದೆ ತೀರಿಕೊಂಡ ಗಂಡ.

ಗಂಡ ತೀರಿಕೊಂಡಾಗ ಹತ್ತನೇ ತರಗತಿಯಲ್ಲಿದ್ದ ಮಗನೂ ಎರಡೂವರೆ ವರ್ಷಗಳ ಹಿಂದೆ ತೀರಿಕೊಂಡ.

ಈ ನಡುವೆ ಹದಿನೈದು ವರ್ಷ ಜೊತೆಗಿದ್ದು ತೀರಿಕೊಂಡ ಪೊಮೇರಿಯನ್ ನಾಯಿ.

ಎಲ್ಲರೂ ಹೋದ ಮೇಲೆ ಉಳಿದಿರುವುದು ಈ ಗಿಳಿಯೂ ಇವರೂ ಮಾತ್ರ,

2011-05-26_8144ತಾನೂ ಹೋಗಿಬಿಟ್ಟರೆ ಈ ಹೆಂಗಸಿನ ಅಳುವಿನ ಕಟ್ಟೆ ಒಡೆದು ಹೋಗಬಹುದು ಎಂಬ ಒಂದೇ ಒಂದು ಹೆದರಿಕೆಯಿಂದ ಬದುಕಿ ಉಳಿದಿರುವ ಗಿಣಿರಾಮ.ಇಪ್ಪತ್ತೆರಡು ವರ್ಷಗಳಿಂದ ಒಂದು ಪಂಜರದೊಳಗೆ ಹಗಲು ರಾತ್ರಿ ಕಳೆಯುತ್ತ ಸಮಯ ಸಿಕ್ಕಾಗ ಬಂದು ಇವರ ಅಂಗೈ ಮೇಲೆ ಕೂರುತ್ತ, ಮಾತನಾಡುತ್ತ, ಮನೆಯ ಉಳಿದಿರುವ ಏಕೈಕ ಹಿರಿಯನಂತೆ ಬದುಕುತ್ತಿರುವ ಗಂಡು ಗಿಳಿ.

ಅದನ್ನು ಮಾತನಾಡಿಸುವುದೊಂದು ಬಿಟ್ಟರೆ ಬದುಕಿನಲ್ಲಿ ತನಗೇನೂ ಉಳಿದಿಲ್ಲ ಎನ್ನುವಂತೆ ಬದುಕುತ್ತಿರುವ ಈ ತಾಯಿ.

ಕಾಣುವವರ ಎದೆ ಒದ್ದೆ ಮಾಡಲಿಕ್ಕೆಂದೇ ಲೋಕದಲ್ಲಿ ನಡೆಯುವ ಇಂತಹ ಸಂಗತಿಗಳು.ಪಂಜರದೊಳಗಿರುವುದು ಆ ತಾಯಿಯೋ, ಈ ಗಿಣಿಯೋ ಎಂದು ಅರಿವಾಗದಂತೆ ಅರಳಿರುವ ಹೂಗಳು.

2011-05-26_8107ಬೀಳಲೆಂದು ಕಾಯುತ್ತಿರುವ ಮಳೆ.

ಇವರಿಬ್ಬರನ್ನು ಕಂಡು ಬಂದು ಸುಮ್ಮನೇ ಕುಳಿತಿದ್ದೆ. ಆಕಾಶದ ಒಂದು ಮೂಲೆಯಲ್ಲಿ ಯಾರೋ ದೊರೆಸಾನಿ ಬಿಂಕದಿಂದ ಹಿಡಿದಿರುವಂತೆ ಎದ್ದು ನಿಂತಿರುವ ಒಂದು ದೊಡ್ಡ ಕಪ್ಪು ಮೋಡ. ಅದರ ಹಿಂದೆ ಬಿಸಿಲಿಗೆ ಹೊಳೆಯುತ್ತಿರುವ ಒಂದು ಸಣ್ಣ ಬಿಳಿಯ ಮೋಡ.

ಏನಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ನಟ್ಟೆಲುಬು ಮುರಿದಂತೆ ಒಂದು ತೀಕ್ಷ್ಣ ಮಿಂಚು. ಅದರ ಹಿಂದೇ ಲಟಾರೆಂಬ ಒಂದು ದೊಡ್ಡ ಗುಡುಗು.ಆಮೇಲೆ ಬಹಳ ಹೊತ್ತು ಆಲಿಕಲ್ಲಿನ ಮಳೆ ಸುರಿಯುತ್ತಲೇ ಇತ್ತು.

ನಂತರ ಬಿಸಿಲು ಹೊಳೆಯ ತೊಡಗಿತು.

ಸಂಜೆಗತ್ತಲಾದ ಮೇಲೆ ರಮಣಿಯವರಿಗೆ ಫೋನ್ ಮಾಡಿದೆ .

DSC_1112‘ ನೀವೂ,ಗಿಳಿಯೂ ಹೇಗಿದ್ದೀರಿ? ಏನು ಮಾಡುತ್ತಿದ್ದೀರಿ?’ಎಂದು ಕೇಳಿದೆ.

‘ಗಿಳಿರಾಮನ ಗೂಡಿಗೆ ಕಂಬಳಿ ಸುತ್ತಿ ಕತ್ತಲು ಮಾಡಿ ನಿದ್ದೆ ಮಾಡಲು ಬಿಟ್ಟಿದ್ದೇನೆ.ನಾನು ಟೀವಿ ನೋಡುತ್ತಿದ್ದೇನೆ.ನೀವು ಹೇಗಿದ್ದೀರಿ?’ ಎಂದು ಕೇಳಿದರು.

‘ನಾನು ಏನೋ ಒಂದು ಕನ್ನಡ ಕಥೆ ಪುಸ್ತಕ ಓದುತ್ತಿದ್ದೇನೆ’ ಎಂದು ಸುಮ್ಮನೇ ಹೇಳಿದೆ.

(ಫೋಟೋಗಳೂ ಲೇಖಕರವು)

One thought on “ರಮಣಿಯ ಗಿಣಿರಾಮ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s