ಮನುಷ್ಯರು ಮತ್ತು ದೇವತೆಗಳು ಮತ್ತು ಕಾಡುಮಾವೂ…..

2011-05-04_7546ಸನ್ ಸಾವಿರದ ಎಂಟುನೂರ ಅರವತ್ನಾಲ್ಕನೆಯ ಇಸವಿ.

ರಕ್ತಾಕ್ಷಿ ಸಂವತ್ಸರದ ಒಂದು ಇರುಳು.

ಜಗದ್ವಿಖ್ಯಾತರಾಗಿದ್ದ ನೂಜಿಬೈಲು ಈಶ್ವರ ಭಟ್ಟ ಅಲಿಯಾಸ್ ಅಣ್ಣಯಜ್ಜ ತಮ್ಮ ೩೨ನೇ ವಯಸ್ಸಿನಲ್ಲಿ ರಾತ್ರೋ ರಾತ್ರಿ ಮನೆಗೆ ಬಂದು ಬಡಗು ಬದಿಯ ಜಗುಲಿಯಲ್ಲಿ ವಜ್ರದ ವಂಟಿಯನ್ನು ಹಾಲಲ್ಲಿ ಹಾಕಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಇವರ ತಂದೆಯ ತಂದೆಯ ತಂದೆ ತಿಮ್ಮಣ್ಣ ಭಟ್ಟ ಸಾಗರದ ಬಳಿಯ ಇಕ್ಕೇರಿಯ ಹುಲಿಮನೆಯಿಂದ ನೂಜಿಬೈಲಿಗೆ ಬಂದವರು.ಈಶ್ವರ ಭಟ್ಟರ ತಂದೆ ನಾರಾಯಣ ಭಟ್ಟರು ಆ ಕಾಲದಲ್ಲೇ ಅಜಮೇಧ ಯಜ್ಞ ಮಾಡಿಸಿದವರು. ಅಜಮೇಧ ಯಜ್ಞ ಎಂದರೆ ಮಣ್ಣಿನಲ್ಲಿ ಗುಂಡಿ ಮಾಡಿ ಆಡೊಂದನ್ನು ಅದರೊಳಗೆ ಮುಚ್ಚಿಡುವುದು.ಯಜ್ಞದ ನಂತರ ಜೀವಂತವಾಗಿರುವ ಅದನ್ನು ಹೊರಬಿಡುವುದು.

ನಾರಾಯಣ ಭಟ್ಟರು ಸಾವಿರದ ಎಂಟುನೂರ ಮೂವತ್ತನೇ ಇಸವಿಯಲ್ಲಿ ಅಜಮೇಧ ಯಜ್ಞ ಮಾಡಿದ ಜಾಗ ಬರ್ಕಳದಲ್ಲಿ ಇನ್ನೂ ಹಾಗೇ ಇದೆಯಂತೆ.

ಇಂತಹ ನಾರಾಯಣ ಭಟ್ಟರ ಮಗ ಈಶ್ವರ ಭಟ್ಟರು ಆ ಸಣ್ಣ ವಯಸ್ಸಿನಲ್ಲೇ ದೊಡ್ಡಮನುಷ್ಯರಾಗಿದ್ದರು.ಬೊಂಬಾಯಿಯಲ್ಲಿದ್ದುಕೊಂಡು ವಾಲ್ಕಾರ್ಟ್ ಬ್ರದರ್ಸ್ ಕಂಪೆನಿಯ ಮೂಲಕ ಯುರೋಪಿಗೆ ಕಾಫಿ ರಪ್ತು ಮಾಡುತ್ತಿದ್ದರು.ಚಿನ್ನದ ಜನಿವಾರ,ವಜ್ರದ ವಂಟಿ,ರಾಶಿ ರಾಶಿ ಅಕ್ಕಿ ಮುಡಿ,ಅಡಿಕೆ ತೋಟ, ಕಂಬಳ ಕೂಟ, ಎತ್ತಿನ ಗಾಡಿ ಹೀಗೆ ಸಖತ್ ಶ್ರೀಮಂತಿಕೆಯಲ್ಲಿದ್ದವರು.

ಆದರೆ ಏನಾಯಿತೋ ಏನೋ, ನಿಸ್ಸಂತತಿಯಾಗಿದ್ದ ನೂಜಿಬೈಲು ಈಶ್ವರ ಭಟ್ಟರು ೧೮೬೪ ನೇ ಇಸವಿಯಲ್ಲಿ ಊರಿಗೆ ಬಂದು ವಜ್ರದ ವಂಟಿಯನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡರು.

ಏಕೆ ಮಾಡಿಕೊಂಡರು ಎಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ.ಆದರೆ ಕಾಫಿ ವ್ಯಾಪಾರದಲ್ಲಿ ಯುರೋಪಿಯನ್ನರು ಮೋಸ ಮಾಡಿ ಸಖತ್ತಾಗಿ ಲಾಸು ಮಾಡಿಕೊಂಡು, ಮೈಮೇಲೆ ಸಿಕ್ಕಾಪಟ್ಟೆ ಸಾಲ ಎಳಕೊಂಡು ಖಿನ್ನರಾಗಿದ್ದರು ಎಂದು ತಲೆತಲಾಂತರದಿಂದ ಬಂದಿರುವ ಕಥೆಗಳು ಹೇಳುತ್ತವೆ. ಅವರೊಡನೆ ಅಡುಗೆಗಾಗಿ ಬೊಂಬಾಯಿಗೆ ಹೋಗಿದ್ದವರ ಹೆಸರೂ ಈಶ್ವರ ಎಂದಾಗಿತ್ತಂತೆ. ಅವರು ಇನ್ನೂ ಬಹಳ ಕಾಲ ಬದುಕಿದ್ದರು.ಅವರನ್ನು ಎಲ್ಲರೂ ಬೊಂಬಾಯಿ ಈಶ್ವರ ಭಟ್ಟರು ಎಂದೇ ಕರೆಯುತ್ತಿದ್ದರಂತೆ.

ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ಓಡಾಡಿಕೊಂಡಿದ್ದ ಅವರು ಅಕಸ್ಮಾತ್ ಇನ್ನೂ ಬದುಕಿದ್ದಿದ್ದರೆ ನಿಜವಾದ ಕಾರಣ ಏನು ಎಂದು ಕೇಳಬಹುದಿತ್ತು ಎಂದು ಮೊನ್ನೆ ರಾತ್ರಿ ಸೊಳ್ಳೆಗಳಿಂದ ಕಡಿಸಿಕೊಂಡು ನಿದ್ದೆಯಿಲ್ಲದೆ ಯೋಚಿಸುತ್ತಿದ್ದೆ.

ನಾನು ಮಲಗಿದ್ದುದು ಒಂದು ಹಳೆಯ ಕಾಡು ಮಾವಿನ ಮರದ ಕೆಳಗಿದ್ದ ಮನೆಯೊಂದರಲ್ಲಿ.ರಾತ್ರಿಯೆಲ್ಲ ಎಡಬಿಡದೆ ಗಾಳಿ ಬೀಸುತ್ತಿತ್ತು.ಸಣ್ಣದಾಗಿ ಮಿಂಚೂ ಗುಡುಗೂ ಕೇಳಿಸುತ್ತಿತ್ತು.ಚಿರಿಚಿರಿ ಮಳೆಯೂ ಸುರಿಯುತ್ತಿತ್ತು.ನಡುವಲ್ಲಿ ಮಾವಿನ ಹಣ್ಣಿಗಳು ಮರದಿಂದ ಉದುರುವ ಸದ್ದು.

2011-05-04_7477`ನಿಮಗೆ ಮಾವಿನ ಹಣ್ಣು ಬೇಕಾದರೆ ಬೆಳಗೆ ಬೀಡಾಡಿ ದನಗಳು ಬಂದು ತಿಂದು ಮುಗಿಸುವ ಮೊದಲೇ ಎದ್ದು ಹೆಕ್ಕಿಕೊಳ್ಳಬೇಕು’ ಎಂದು ಆ ಮನೆಯವರು ತಾಕೀತು ಮಾಡಿ ಮಲಗಿಬಿಟ್ಟಿದ್ದರು.

ಅಡರುವ ಗಾಳಿಯಲ್ಲೆಲ್ಲ ಕಾಡುಮಾವಿನ ಮಾದಕ ಪರಿಮಳ.

ಕಾಡು ಮಾವಿನ ಹಣ್ಣಿಗಾಗಿ ಜೀವವನ್ನಾದರೂ ಕೊಡಬಲ್ಲ ಆಶೆಬುರುಕ ಮನಸ್ಸು ನನ್ನದು.

ಆದರೆ ಆ ರಾತ್ರಿ ಮನಸ್ಸು ಯಾಕೋ ನೂರಾ ಐವತ್ತು ವರ್ಷಗಳ ಹಿಂದೆ ವಜ್ರದ ವಂಟಿ ನುಂಗಿ ಆತ್ಮಹತ್ಯೆ ಮಾಡಿಕೊಂಡ ನೂಜಿಬೈಲು ಈಶ್ವರ ಭಟ್ಟರನ್ನೇ ಯೋಚಿಸುತ್ತಿತ್ತು.

ಯಾಕೆಂದರೆ ಮಲಗುವ ಮೊದಲು ಅಲ್ಲೇ ಹತ್ತಿರವಿದ್ದ ನೂಜಿಬೈಲು ವೆಂಕಟರಾಮಯ್ಯನವರನ್ನು ಮಾತನಾಡಿಸಿ ಬಂದಿದ್ದೆ.

ಅವರಿಗೆ ಈಗ ಸರಿಯಾಗಿ ೭೪ ವರ್ಷ.ಅವರ ತಾಯಿ ೯೪ ವರ್ಷದ ದೇವಕಿಯಮ್ಮನವರನ್ನೂ ಕಂಡು ಬಂದಿದ್ದೆ.

ದೇವಕಿಯಮ್ಮನವರು ಅದು ಯಾವುದೋ ಹಠಕ್ಕೆ ಬಿದ್ದವರಂತೆ ಆಹಾರವನ್ನು ಸರಿಯಾಗಿ ಸೇವಿಸದೆ ಬರೀ ರಸ್ಕು ತಿಂದುಕೊಂಡು ಒಂದು ಉದ್ದನೆಯ ಎಲೆಯಂತೆ ಕೃಶವಾಗಿ ಹೋಗಿದ್ದರು.

ಮಗ ವೆಂಕಟರಾಮಯ್ಯನವರು ಸಣ್ಣ ವಯಸ್ಸಿನಲ್ಲಿ ಒಳ್ಳೆ ಓಟಗಾರರಾಗಿದ್ದವರು.ಕಾಲೇಜೊಂದರಲ್ಲಿ ಕ್ರೀಡಾ ನಿರ್ದೇಶಕರಾಗಿ ನಿವೃತ್ತಿಯಾಗಿದ್ದಾರೆ.

ಅವರೂ ಯಾವುದೋ ಹಠಕ್ಕೆ ಬಿದ್ದು ಮದುವೆಯಾಗದೆ ಒಂಟಿಯಾಗಿದ್ದುಕೊಂಡು ಈಗ ಮಗುವಂತಾಗಿರುವ ತಾಯಿಯ ಬಾಯಿಗೆ ರಸ್ಕು ತಿನ್ನಿಸುತ್ತಾ ಈ ಹಳ್ಳಿಯಲ್ಲಿ ಹಳೆಯ ಕಾಲದ ಅಡಿಕೆ ತೋಟದ ಮನೆಯಲ್ಲಿ ಬೀಷ್ಮನ ಹಾಗೆ ಬದುಕುತ್ತಿದ್ದಾರೆ.

ಈ ವೆಂಕಟರಾಮಯ್ಯನವರು ನೂರಾ ಐವತ್ತು ವರ್ಷಗಳ ಹಿಂದೆ ವಜ್ರದ ವಂಟಿ ನುಂಗಿ ಆತ್ಮಹತ್ಯೆ ಮಾಡಿಕೊಂಡ ನೂಜಿಬೈಲು ಈಶ್ವರ ಭಟ್ಟರ ಚಿಕ್ಕಪ್ಪನ ಸಂತತಿಗೆ ಸೇರಿದವರು. ಅವರಿಗೆ ಈಗಲೂ ಈಶ್ವರಭಟ್ಟರ ಹೆಸರು ಕೇಳಿದರೆ ರೋಮಾಂಚನವಾಗುತ್ತದೆ.

‘ಅಲ್ಲ ಮಾರಾಯರೇ ಫೋನೂ, ಇಂಟರ್ನೆಟ್ಟೂ,ರೈಲೂ,ಬಸ್ಸೂ ಏನೂ ಇಲ್ಲದ ಆ ಕಾಲದಲ್ಲಿ ನನ್ನ ಪಿತಾಮಹ ಈಶ್ವರ ಭಟ್ಟರು ಯುರೋಪಿಗೆ ಕಾಫಿ ಟ್ರೇಡಿಂಗು ನಡೆಸಿದ್ದು ಸಣ್ಣ ವಿಷಯವಾ’ ಎಂದು ಸಣ್ಣದಾಗಿ ನಡುಗುತ್ತಾರೆ.

2011-05-04_7473‘ಅವರು ಆವತ್ತು ನಡೆಸಿದ ಆ ಟ್ರೇಡಿಂಗಿನ ಐಶ್ವರ್ಯದಿಂದಲೇ ಅಲ್ಲವಾ ನಾವು ಈ ಕೊಡಗಿಗೆ ಬಂದು ಏಲಕ್ಕಿ ಮಲೆಗಳನ್ನು ಖರೀದಿಸಿ, ಬೆಟ್ಟ ಕಡಿದು ಅಡಿಕೆ ತೋಟ ಮಾಡಿ ಮಾನವಂತರಾಗಿ ಬದುಕುತ್ತಿರುವುದು’ ಎಂದು ಭಾವುಕರಾಗುತ್ತಾರೆ.

‘ವೆಂಕಟರಾಮಯ್ಯನವರೇ ನಿಮ್ಮ ಬಳಿ ಒಂದು ಖಾಸಗೀ ಪ್ರಶ್ನೆ ಕೇಳುತ್ತೇನೆ.ಬೇಸರಿಸಬೇಡಿ.ನೀವು ಯಾಕೆ ಕೊನೆಯವರೆಗೂ ಮದುವೆಯಾಗದೆ ಒಂಟಿಯಾಗಿ ಉಳಿದಿರಿ.ಮದುವೆಯಾಗಿದ್ದರೆ ಕೊನೆಗಾಲದಲ್ಲಿ ನಿಮ್ಮ ತಾಯಿಯನ್ನು ನೋಡಿಕೊಳ್ಳಲು ಸೊಸೆಯಾದರೂ ಇರುತ್ತಿದ್ದರಲ್ಲವಾ?’ ಎಂದು ನಾನು ಕೇಳಿಯೇ ಬಿಡುತ್ತೇನೆ.

‘ಅಯ್ಯೋ,ಅದಕ್ಕೆಲ್ಲ ಪುರುಸೊತ್ತು ಎಲ್ಲಿತ್ತು ಮಾರಾಯರೇ’ಎಂದು ವೆಂಕಟರಾಮಯ್ಯನವರು ನಿರ್ಭಾವುಕರಾಗಿ ಉತ್ತರಿಸುತ್ತಾರೆ.ಆಮೇಲೆ ತಮ್ಮ ಜೀವನದ ಕಥೆಯನ್ನು ಸಣ್ಣದಾಗಿ ವಿವರಿಸುತ್ತಾರೆ.

ಅವರ ಕಥೆಯಲ್ಲಿ ಬರುವುದು ಬರೇ ಕೋರ್ಟಿನ ಸೀನುಗಳು, ಆಸ್ತಿಗಾಗಿ ಮಾಡಿಕೊಂಡ ವ್ಯಾಜ್ಯಗಳು,ಲಾಯರ ಫೀಸುಗಳು,ಲಕ್ಷಾಂತರ ಕಳೆದುಕೊಂಡು ಗೆದ್ದ ಸಾವಿರಾರು ರೂಪಾಯಿಗಳ ವಿಜಯಗಳು.

ಅದರೂ ವೆಂಕಟರಾಮಯ್ಯನವರ ಮುಖದಲ್ಲಿ ತೃಪ್ತಿಯಿದೆ.ತಮ್ಮ ಮೂಲಪುರುಷ ಈಶ್ವರಭಟ್ಟರು ಜೀವಪಣವಿಟ್ಟ ಕಾಫಿ ವ್ಯಾಪಾರದಿಂದ ಉಂಟಾಗಿರುವ ಏಲಕ್ಕಿ ಮಲೆಗಳನ್ನೂ,ಅಡಿಕೆ ತೋಟಗಳನ್ನೂ,ಭತ್ತದ ಗದ್ದೆಗಳನ್ನೂ ವ್ಯಾಜ್ಯಗಳ ರಾಕ್ಷಸರಿಂದ ಗೆದ್ದ ತೃಪ್ತಿ.

ಕಳಕೊಂಡದ್ದು ಏನೂ ಇಲ್ಲವೆಂಬ ಸಮಾಧಾನ.

2011-05-04_7484ಈ ಊರಲ್ಲದ ಊರಲ್ಲಿ ಅಪರಿಚಿತ ಕಾಡು ಮಾವಿನ ಮರಗಳಿಂದ ಬೀಳುತ್ತಿರುವ ಹಣ್ಣುಗಳ ಸದ್ದುಗಳನ್ನು ಅತ್ಯಾಸೆಯಿಂದ ಆಲಿಸುತ್ತಿರುವ ನನಗಿಂತ ವೆಂಕಟರಾಮಯ್ಯನವರ ಮಣ್ಣಿನ ಮೇಲಿನ ಜಿಗುಟು ಪ್ರೀತಿಯೇ ಮೇಲು ಎಂದು ಅರೆ ಬರೆ ನಿದ್ದೆಯಲ್ಲಿ ನಗಲು ನೋಡುತ್ತೇನೆ.

ಕಂಡಲ್ಲೆಲ್ಲ ಕಟು ಸಿಹಿಯ ಕಾಡು ಮಾವಿನ ಮರಗಳೇ ತುಂಬಿರುವ ಈ ಊರಿನ ದೇವತೆಗಳ ಇತಿಹಾಸ ಇನ್ನೂ ಮಜವಾಗಿದೆ.

ನೂರಾರು ವರ್ಷಗಳ ಹಿಂದೆ ನನ್ನ ಇಷ್ಟ ದೇವರಾದ ಬೇಟೆಗಾರ ಅಯ್ಯಪ್ಪ ತನ್ನ ಬೇಟೆ ನಾಯಿ ಪಡೆಯೊಡನೆ ಇತ್ತ ಕಡೆ ಬರುತ್ತಿದ್ದನಂತೆ.ಬರುವ ದಾರಿಯಲ್ಲಿ ಇಲ್ಲಿ ಇಂತಹದೇ ಕಾಡು ಮಾವಿನ ಮರವೊಂದರ ಕೆಳಗೆ ಭದ್ರಕಾಳಿ ಎಂಬ ಹೆಣ್ಣು ದೇವತೆ ಕಾಡುಕೋಣವೊಂದರ ತೊಡೆಯನ್ನು ಚೀಪುತ್ತಾ ಕುಳಿತಿದ್ದಳಂತೆ.

ಬೇಟೆನಾಯಿಗಳ ಹಿಂಡಲ್ಲಿದ್ದ ನಾಯಿಯೊಂದು ಮಾಂಸದ ಮೇಲಿನ ಆಸೆಯಿಂದ ಆಕೆಯ ಕಡೆಗೆ ನುಗ್ಗಿತಂತೆ.ಸಿಟ್ಟಾದ ಆಕೆ ಕೈಯಲ್ಲಿದ್ದ ತೊಡೆಯ ಮೂಳೆಯಿಂದ ಆ ನಾಯಿಗೆ ಬೀಸಿ ಹೊಡೆದಳಂತೆ.

ಆ ನಾಯಿ ಕುಂಯ್ ಗುಡುತ್ತಾ ಓಡಿತಂತೆ.

ಇದರಿಂದ ಸಿಟ್ಟಿಗೆದ್ದ ಅಯ್ಯಪ್ಪ ದೇವರು ಭದ್ರಕಾಳಿಯನ್ನು ಬೆನ್ನಟ್ಟಿ ಬೆರಸಿ, ಬಾಣಬಿಟ್ಟು ಅಟ್ಟಾಡಿಸಿ ಓಡಿಸಿ, ಕಾಡಿನಾಚೆಗೆ ಅಟ್ಟಿ, ಅಲ್ಲೇ ನೆಲೆಗೊಳ್ಳುವಂತೆ ಕಟ್ಟುಹಾಕಿದನಂತೆ.

ಅಂದಿನಿಂದ ಆ ಭದ್ರಕಾಳಿ ಅಲ್ಲೇ ದೂರದ ಬೆಟ್ಟದಲ್ಲಿ ಕಲ್ಲಾಗಿ ಕುಳಿತಿದ್ದಾಳೆ.

2011-05-04_7499ಯ್ಯಪ್ಪ ದೇವರು ಇಲ್ಲೇ ನೆಲಸಿ ಈ ಊರವರನ್ನೆಲ್ಲ ಕಾಯುತ್ತಿದ್ದಾನೆ.

ಜೊತೆಗೆ ಕೇರಳದಿಂದ ಬಂದ ಪಂದಳ ರಾಜಕುಮಾರನೂ,ಪಾಂಡ್ಯರಾಜನೂ ದೇವತೆಗಳಾಗಿ ಇಲ್ಲೇ ಓಡಾಡಿಕೊಂಡಿದ್ದಾರೆ.

ಆ ಕಾಲದ ಈ ಕಾಡು ಮಾವಿನ ಮರಗಳೂ ಆಗಿಂದಾಗ್ಗೆ ಹಣ್ಣುಗಳನ್ನು ಉದುರಿಸುತ್ತಾ ನಂಬಿರುವ ನನ್ನಂತಹ ಹುಲುಮಾನವರಿಗೆ ಈಗಲೂ ಇಂಬು ನೀಡುತ್ತಾ ನಿಂತಿವೆ.

ಬೆಳಗ್ಗೆ ಎದ್ದವನು ಕಣ್ಣನ್ನೂ ಉಜ್ಜಿಕೊಳ್ಳದೆ ಆ ಜಿನುಗುವ ಮಳೆಯಲ್ಲಿ ಹಳೆಯ ಕಾಲದ ಆ ಮಾವಿನ ಮರದಡಿಯಲ್ಲಿ ನಿಂತುಕೊಳ್ಳುತ್ತೇನೆ.

ಇರುಳು ಕೋರೈಸಿದ ಸಣ್ಣಗಿನ ಸಿಡಿಲಿಗೆ ನೆಲದಲ್ಲಿ ಎದ್ದು ನಿಂತಿರುವ ಅಪ್ಸರೆಯರಂತಹ ಅಣಬೆಗಳು.ಯಾವ ಕಾಲಕ್ಕೂ ಕೇರೇ ಮಾಡದಂತಿರುವ ಅವುಗಳ ಮೈಯ ವೈಯ್ಯಾರ.

2011-05-04_7546ವೆಂಕಟರಾಮಯ್ಯನವರೂ ಆ ಮಳೆಯಲ್ಲಿ ಹಳೆಯ ಕೊಡೆಯೊಂದನ್ನು ಬಿಡಿಸಿಕೊಂಡು ಹೆಗಲಲ್ಲಿ ಬಟ್ಟೆಯ ಚೀಲವೊಂದನ್ನು ತೂಗಿಸಿಕೊಂಡು ನಡೆದು ಬರುತ್ತಿದ್ದಾರೆ.

ಬಹುಶ: ಆ ಚೀಲದ ತುಂಬ ಹಳೆಯ ಕೋರ್ಟು ವ್ಯಾಜ್ಯಗಳ ಕಾಗದ ಪತ್ರಗಳು ಇರಬಹುದು ಅಂದುಕೊಳ್ಳುತ್ತೇನೆ.ಆದರೆ ಅದರಲ್ಲಿರುವುದು ಒಂದು ಪುಸ್ತಕ.ಆ ಪುಸ್ತಕದ ಹೆಸರು ‘ನೂಜಿಬೈಲು ಒಂದು ಸಿಂಹಾವಲೋಕನ’ ಬರೆದವರು ನಿಸರ್ಗ ಶಂಕರ ಭಟ್ಟರು.

ಸಾವಿರದ ಏಳುನೂರನೇ ಇಸವಿಯಿಂದ ಹಿಡಿದು ಎರಡುಸಾವಿರದ ಏಳನೇ ಇಸವಿಯವರೆಗಿನ ನೂಜಿಬೈಲು ಮನೆತನದ ಮನುಷ್ಯರ ಕಥೆಗಳನ್ನು ಅವರು ಇಲ್ಲಿ ಬರೆದಿದ್ದಾರೆ.

ಆ ಕಥೆಗಳನ್ನು ಬರೆದ ಶಂಕರ ಭಟ್ಟರ ಕಥೆ ಇನ್ನೂ ರೋಚಕವಾಗಿದೆ.

ದ್ರೌಪದಿಯ ವಸ್ತ್ರಾಪಹರಣ ಒಂದೇ ಒಂದು ಬಾರಿ ಆಗಿದ್ದು.ಆದರೆ ಇವರ ಮನೆಗೆ ಎರಡು ಬಾರಿ ಬೆಂಕಿ ಹಿಡಿದಿತ್ತು.

ಇವರೇ ಕೈಯ್ಯಾರೆ ಸಾಕಿದ ಡಾಬರ್ ಮನ್ ನಾಯಿ ಇವರ ಕೈಯ್ಯನ್ನೇ ಕಚ್ಚಿ ಇವರು ಹದಿನೆಂಟು ಹೊಲಿಗೆ ಹಾಕಬೇಕಾಯ್ತು.
ಆದರೆ ಇವರು ಅದರ ಸ್ವ-ಇಚ್ಛೆಯಂತೆ ಹನ್ನೆರಡು ವರ್ಷ ಬದುಕಲು ಬಿಟ್ಟಿದ್ದರು.

2011-05-04_7473ವೆಂಕಟರಾಮಯ್ಯನವರು ಈ ಪುಸ್ತಕವನ್ನು ಕಣ್ಣಿಗೊತ್ತಿಕೊಂಡು ನನಗೆ ಓದಲು ಕಡಕೊಟ್ಟಿದ್ದಾರೆ.

ನಾನು ಮತ್ತೆ ಮತ್ತೆ ಓದಿ ಪುಳಕಿತನಾಗುತ್ತಿದ್ದೇನೆ.

ತಲೆಯೊಳಗೆ ದೇವತೆಗಳೂ ಮನುಷ್ಯರೂ ಬಿಟ್ಟು ಬಿಟ್ಟು ನೃತ್ಯವಾಡುತ್ತಿದ್ದಾರೆ.

(ಫೋಟೋಗಳೂ ಲೇಖಕರವು)

Advertisements