ಇಲ್ಲೊಮ್ಮೆ ಸಣ್ಣಗೆ ಅಲುಗಿದ್ದ ಭೂಮಿ

DSC_8019ಮೊನ್ನೆ ಬುಧವಾರ ಇಲ್ಲಿ ಮಡಿಕೇರಿಯಲ್ಲಿ ಭೂಮಿ ಒಮ್ಮೆ ಸಣ್ಣಗೆ ಅಲುಗಿತು.ಒಂದು ಸಣ್ಣಗಿನ ಅಲುಗಾಟ ಮತ್ತು ಭೂಮಿಯೊಳಗಿಂದ ಕೇಳಿಬಂದ ಒಂದು ನೀಳ ಹೂಂಕಾರದಂತಹ ಸದ್ದು ಅಷ್ಟೇ .ಆಮೇಲೆ ಎಲ್ಲವೂ ನೀರವ.ಆಕಾಶದಲ್ಲಿ ಹಾಗೇ ಕಟ್ಟಿಕೊಂಡಿದ್ದ ಬೆಳ್ಳನೆಯ ಮೋಡ.ಉಸಿರು ಕಟ್ಟಿಸುವಂತಿದ್ದ ಅದೇ ಹಸಿರು.ಒಂದು ಸಣ್ಣ ಅಲುಗಾಟದ ನಂತರ ಮುಂದುವರಿದ ಅದೇ ಜನ ಸಂಚಾರ, ಮಾತು ಮತ್ತು ನಗು. ಯಾಕೋ ಏನೂ ಬೇಡವೆನಿಸುವಂತಹ ಹೊತ್ತಲ್ಲಿ ಹೆಣ್ಣು ಮಗಳೊಬ್ಬಳು ಮಾತನಾಡಿದಳು.

ಆಕೆ ೨೬ ದಿನಗಳ ಬಾಣಂತಿ. ಮಗುವನ್ನು ಎಣ್ಣೆ ಮೆತ್ತಿ, ಸ್ನಾನ ಮಾಡಿಸಿ ಮಲಗಿಸಿ ತಾನು ಸ್ನಾನಕ್ಕೆ ಹೊರಡಬೇಕೆನ್ನುವಾಗ ಭೂಮಿ ಅಲುಗಿತಂತೆ.ಆಕೆಗೆ ಆ ಕ್ಷಣ ಬೇರೇನೂ ಅನಿಸಲಿಲ್ಲವಂತೆ.ಮಲಗಿದ್ದ ಮಗುವಿನ ಮುಖವೇ ಕಣ್ಮುಂದೆ ಬಂತಂತೆ.‘ಯೋಚಿಸದಿರು ತಾಯಿ, ನೀನು ದೊಡ್ಡ ಹೆಂಗಸಾಗಿ, ನಿನ್ನ ಮಗನೂ ದೊಡ್ಡ ಮನುಷ್ಯನಾಗಿ, ಆತನ ಮಗುವಿಗೆ ನೀ ಈ ಕಥೆ ಹೇಳಬಹುದು.ನೀನು ಸ್ನಾನಕ್ಕೆ ಹೊರಟಾಗ ಭೂಮಿ ಅಲುಗಿದ್ದ ಕಥೆ.ಕೇಳಲು ಚೆನ್ನಾಗಿರುತ್ತೆ’ ಅಂದೆ.

ಇನ್ನೊಬ್ಬಾತ ಇಲ್ಲೇ ಹಳ್ಳಿಯೊಂದರಲ್ಲಿ ಕಮ್ಮಾರನ ಕೆಲಸ ಮಾಡುತ್ತಾನೆ.ಆತ ಮೊಂಡು ಕತ್ತಿಯೊಂದನ್ನು ಬಿಸಿ ಕಾಯಿಸಿ ಹರಿತ ಮಾಡುತ್ತ ಕುಳಿತಿದ್ದಾಗ ಆತನ ಕುಂಡೆಯ ಕೆಳಗಿನ ಭೂಮಿಯ ಒಳಗಿಂದ ಒಂದು ದೊಡ್ಡ ಜೋರಾದ ಸದ್ದು.‘ಸಾರ್,ಹೆದರಿಕೆಯಾಯಿತು ತುಂಬಾ’ ಅಂದ.

ಇನ್ನೊಬ್ಬಳು ಬಾಲಕಿ ರಜೆಯಿರುವುದರಿಂದ ಮನೆಯಲ್ಲಿ ಸುಮ್ಮನೆ ಮೀನು ಪೆಟ್ಟಿಗೆಯೊಳಗಿನ ಮೀನನ್ನು ನೋಡುತ್ತ ಕುಳಿತಿದ್ದಳಂತೆ. ಆಗ ಭೂಮಿ ಅಲುಗಾಡಿ, ಪೆಟ್ಟಿಗೆಯೊಳಗಿನ ನೀರಲ್ಲಿ ಆಡುತ್ತಿದ್ದ ಮೀನೊಂದು ಹಾರಿ ಹೊರಬಿದ್ದು, ನೆಲದಲ್ಲಿ ಹೊರಳಾಡ ತೊಡಗಿತಂತೆ. ‘ಅಂಕಲ್ ಅಷ್ಟೇ, ಇನ್ನೇನಾಗಲಿಲ್ಲ’ ಅಂದಳು.ಆದರೂ ಅವಳ ಪುಟ್ಟ ತಲೆಯೊಳಗೆ ಅದು ಬಹಳ ದೊಡ್ಡದಾಗಿಯೇ ಉಳಿದುಕೊಂಡ ಹಾಗೆ ಅನಿಸುತ್ತಿತ್ತು.

ಬಹುಷಃ ಸೌಂದರ್ಯ ಕಣ್ಣು ಕುಕ್ಕುವ ಹಾಗೆ ಇರುವಲ್ಲಿ ಹೆದರಿಕೆಯೂ ಜೋರಾಗಿಯೇ ಇರುತ್ತದೆ. ಹಸಿರು ಮೆತ್ತಿಕೊಂಡಿರುವ ಬೆಟ್ಟ ಕಣಿವೆಗಳ ನಡುವೆ ಏಕಾಂಗಿತನವೂ ಜೋರಾಗಿರುತ್ತದೆ. ಮಳೆ ಬಂದು ಹೋದ ಮೇಲೆ ಉಳಿದಿರುವ ಮೋಡಗಳ ಕೆಳಗೆ ಮಲಗಿರುವ ಬೆಟ್ಟಗಳು ಇನ್ನೇನು ಮೈಮೇಲೆ ಎರಗಿಯೇ ಬಿಟ್ಟವು ಎನ್ನುವಷ್ಟು ಹತ್ತಿರ ಕಾಣಿಸುತ್ತವೆ.ಅವುಗಳ ಮೇಲೆ ಹೆಡೆಯೆತ್ತಿಕೊಂಡಂತೆ ಎದ್ದು ನಿಂತಿರುವ ಮೋಡಗಳೂ ಹಾಗೆಯೇ ವಿನಾಕಾರಣ ಹೆದರಿಕೆ ಹುಟ್ಟಿಸುತ್ತವೆ. ಆ ಹೊತ್ತಲ್ಲಿ ಸೂರ್ಯ ಕಿರಣಗಳೂ ಇದ್ದು, ಜೊತೆಯಲ್ಲಿ ಕಾಮನಬಿಲ್ಲೂ ಕಾಣಿಸಿಕೊಂಡರೆ ಇನ್ನೇನೂ ಬೇಕಾಗಿಲ್ಲ. ಆ ಸಪ್ತವರ್ಣ ಚಂದ್ರಿಕೆಯಲ್ಲಿ ತೀರಿಹೋಗಿಬಿಡಬೇಕೆನ್ನುವಷ್ಟು ಹುಚ್ಚು ಆಸೆ ಬಂದು ಬಿಡುತ್ತದೆ.

‘ಚೆಲುವೆಂಬುದು ಅಲ್ಲ ಬೇರೇನೂ ಅದು ಭಯದ ಮೊದಲುDSC_8020
ಕೇವಲ ತಾಳಿಕೊಳ್ಳಬಲ್ಲೆವು ಮಾತ್ರ ಅದನು
ಚಕಿತಾರಾಗುವೆವು ಅಷ್ಟು..ತಣ್ಣಗೆ ಸಂಚಲ್ಲಿ ತೊಡಗುವುದು ಅದು,
ಮುಗಿಸಿಬಿಡಲು..ಪ್ರತಿದೇವತೆಯೂ ಭಯವ ಹುಟ್ಟಿಸುವುದು….’

ಎಂದು ಜರ್ಮನ್ ನ ಮಹಾಕವಿ ರಿಲ್ಕ್ ಹೇಳುತ್ತಾನೆ. ಸುಮಾರು ೯೯ ವರ್ಷಗಳ ಹಿಂದೆ ಇಂತಹದೇ ಒಂದು ಸೌಂದರ್ಯ ಮತ್ತು ಏಕಾಂತದ ಹೊತ್ತು. ಯಾಕೋ ಖಿನ್ನನಾಗಿದ್ದ ರಿಲ್ಕ್ ಕಡಲ ಪ್ರಪಾತವೊಂದರ ಬದಿಯಲ್ಲಿ ನಡೆಯುತ್ತಿರುತ್ತಾನೆ.ಆ ಹೊತ್ತಲ್ಲಿ ಎಲ್ಲಿಂದಲೋ ತೇಲಿಬಂದಂತೆ ಅನಿಸುವ ಈ ಮೇಲಿನ ಸಾಲುಗಳು.ಆ ಸಾಲುಗಳನ್ನು ಮಿದುಳಲ್ಲಿ ಹೆಪ್ಪುಗಟ್ಟಿಸಿಕೊಂಡು ಆತ ಬರೆಯುತ್ತಾನೆ.ಚೆಲುವಿನ ಅಸಹಜ ಖುಷಿ ಮತ್ತು ಬದುಕಿನ ನಿಜವಾದ ಹೆದರಿಕೆ ಎರಡೂ ಸದಾ ಡಿಕ್ಕಿ ಹೊಡೆಯುತ್ತಿರುವ ಈ ಭೂಮಿಯ ಒಳಗೆ ಒಮ್ಮೊಮ್ಮೆ ಹೀಗೆ ಅಲುಗಾಟಗಳೂ, ಹೂಂಕಾರಗಳೂ ಸೇರಿಕೊಂಡರೆ ಮಹಾಕಾವ್ಯಗಳು ಹೊರಬರದೆ ಇನ್ನೇನಾಗುತ್ತದೆ!

ಯಾವ ಕಾವ್ಯದ ಸಹವಾಸವೂ ಬೇಡವೆಂದು ದೂರದ ಷಿಲ್ಲಾಂಗಿನಲ್ಲಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಒಬ್ಬನೇ ಬದುಕುತ್ತಿದ್ದೆ.ತಿನ್ನುವುದು ಕುಡಿಯುವುದು ಮತ್ತು ಇತರ ಸಣ್ಣಪುಟ್ಟ ಆಸೆಗಳನ್ನು ಬಿಟ್ಟರೆ ಬೇರೇನೂ ಬೇಕಾಗಿಲ್ಲವೆಂದು ಬದುಕುತ್ತಿರುವ ಜನರ ನಡುವೆ ಹಾಗೇ ಇರಲು ಕಲಿಯುತ್ತಿದ್ದೆ.

DSC_8016ಈಗ ಇರುವ ಏಕಾಂತಕ್ಕಿಂತ ಹತ್ತು ಪಟ್ಟು ಏಕಾಂತ ಮತ್ತು ಈಗ ಇರುವ ಸೌಂದರ್ಯಕ್ಕಿಂತ ಹತ್ತು ಪಟ್ಟು ಸೌಂದರ್ಯದ ಅಲ್ಲಿ ಎರಡು ತಿಂಗಳಿಗೆ ಒಮ್ಮೆಯಾದರೂ ಹೀಗೇ ಭೂಮಿ ಅಲುಗುತ್ತಿತ್ತು.ಭೂಮಿ ಅಲುಗಿದ ನಂತರದ ಎಳೆ ಬಿಸಿಲಲ್ಲಿ ಆಡುತ್ತಿದ್ದ ಮಕ್ಕಳ ಕೇಕೆ ಯಾಕೋ ಖಿನ್ನವಾಗಿಸುತ್ತಿತ್ತು.ಹಾಗೆ ಖಿನ್ನನಾದಾಗಲೆಲ್ಲ ವಾಪಾಸು ಕನ್ನಡನಾಡಿಗೆ ಬಂದು ಬಿಡುತ್ತಿದ್ದೆ.

ಹಾಗೆ ಬರುವ ಸುದೀರ್ಘ ಹಾದಿಯಲ್ಲಿ ಸಿಗುತ್ತಿದ್ದ ಕಲ್ಕತ್ತಾ ಸಣ್ಣಪುಟ್ಟದ್ದಕ್ಕೆಲ್ಲ ದೊಡ್ಡ ದನಿಯಲ್ಲಿ ಮಾತನಾಡುವ ಕಾಮ್ರೇಡುಗಳ ಊರು.ಹಾಗೇ ಸಿಕ್ಕಾಪಟ್ಟೆ ಬಡವರು.ಇಲ್ಲಿನ ಚಿತ್ತರಂಜನ್ ಅವೆನ್ಯೂ ಎನ್ನುವಲ್ಲಿ ಕನ್ನಡಿಗರೊಬ್ಬರ ಹೋಟೆಲ್ಲು ಇದೆ.ಇಲ್ಲಿ ಉಳಿದರೆ ಇನ್ನಷ್ಟು ಕನ್ನಡಿಗರು ಮಾತನಾಡಲು ಸಿಗುತ್ತಾರೆ.ಮನದಣಿಯೆ ಕನ್ನಡ ಮಾತಾಡಬೇಕೆಂದರೆ ಇಲ್ಲಿ ನೀವೂ ಉಳಕೊಳ್ಳಬಹುದು.

ಆವತ್ತು ದುರ್ಗಾ ಪೂಜೆಯ ಕೊನೆಯ ದಿನ.ಬೆಳಬೆಳಗೆಯೇ ಯಾಕೋ ಚಿರಿಚಿರಿ ಮಳೆ ಹೊಯ್ಯುತ್ತಿತ್ತು.ಅದಕ್ಕಿಂತ ಜೋರಾಗಿ ಅಲ್ಲಿ ಉಳಕೊಂಡಿದ್ದವರೊಬ್ಬರು ನನ್ನೊಡನೆ ಕನ್ನಡದಲ್ಲಿ ಹೊಯ್ಯುತ್ತಿದ್ದರು.ಅವರು ಕನ್ನಡ ನಾಡಿನ ದುಡಿಯುವ ವರ್ಗದ ಪತ್ರಿಕೆಯೊಂದರ ಸಂಪಾದಕರಾಗಿದ್ದರು.ಅವರೊಡನೆ ನಾನು ನನ್ನನ್ನು ಸಿಲಿಗುರಿಯಿಂದ ಬೆಲ್ಜಿಯಂ ಪಿಂಗಾಣಿಯ ಸಾಮಾನುಗಳನ್ನು ಕಳ್ಳಸಾಗಾಣಿಕೆಯಲ್ಲಿ ತರಲು ಹೊರಟಿರುವ ಸಾಬಿಯೆಂದು ಪರಿಚಯ ಮಾಡಿಕೊಂಡಿದ್ದೆ.ಅವರು ಅದನ್ನು ಕ್ಯಾರೇ ಮಾಡದೆ ಕನ್ನಡ ನಾಡಿನಲ್ಲಿ ವರ್ಗ ಸಮರ ಸಾಯಲು ಕಾರಣವಾಗಿರುವ ಪೆಟ್ಟಿಬೂರ್ಜ್ವಾತನವನ್ನು ತಾರಾಮಾರಾ ಬೈಯುತ್ತಿದ್ದರು.

‘ಇಲ್ಲಾ ಸಾಮೀ ನನಗೆ ಇದೆಲ್ಲಾ ಗೊತ್ತಾಗಕ್ಕಿಲ್ಲ’ ಅಂತ ಅಲ್ಲಿಂದ ಕಾಲುಕಿತ್ತು ಚಿರಿಚಿರಿ ಮಳೆಯಲ್ಲಿ ನೆನೆಯುತ್ತಾ ಅಂಗಡಿ ಮುಂಗಟ್ಟುಗಳ ಮುಂದೆ ಚಂಡಿಯಾಗಿ ನಿಂತಿರುವ ದುರ್ಗೆಯರನ್ನು ನೋಡುತ್ತಾ ನಡೆಯುತ್ತಿದ್ದೆ.ಅಷ್ಟು ಹೊತ್ತಿಗೆ ಸೈಕಲ್ಲು ರಿಕ್ಷಾ ಎಳೆಯುತ್ತಿದ್ದ ಬಡವನೊಬ್ಬ ನನ್ನನ್ನು ಯಾವುದೋ ಗಿರಾಕಿಯೆಂದು ತಿಳಿದುಕೊಂಡು ಒತ್ತಾಯದಲ್ಲಿ ಕೂರಿಸಿಕೊಂಡು ಬಹೂಬಜಾರಿಗೆ ತಂದು ಬಿಟ್ಟಿದ್ದ.

ಬಹೂಬಜಾರು ಬೆಳಗೆಯೇ ಆಲಸಿ ವಾರಾಂಗನೆಯಂತೆ ನಿಂತಿತ್ತು.ಹಲ್ಲುಜ್ಜುವವರು,ಕ್ಯಾಕರಿಸುವವರು,ಬೆಳಗೆಯೇ ತಮ್ಮ ಸರ್ವಾಂಗಗಳನ್ನು ಕೆರಕೊಳ್ಳುತ್ತಾ ಆಕಳಿಸುತ್ತಿದ್ದ ಸುಂದರಿಯರಿಗೆ ಟೀ ಸಪ್ಳೈ ಮಾಡುತ್ತಾ ಚುರುಕಾಗಿ ಓಡಾಡುತ್ತಿದ್ದ ಹುಡುಗರು, ಜೊತೆಯಲ್ಲಿ ಕೆಸರುಕೆಸರು ನೆಲ.
ಆ ಹೊತ್ತಲ್ಲಿ ಗೋಣಿಯ ತಡಿಕೆ ಹೊದ್ದುಕೊಂಡಿದ್ದ ಟಿನ್ನಿನ ಬಿಡಾರದೊಳಗಿಂದ ಸಣ್ಣ ಸಣ್ಣ ಕಣ್ಣುಗಳ ಹೆಂಗಸೊಬ್ಬಳು ಕೈತಟ್ಟಿ ಕರೆದಳು.
ಹೋದೆ.
ತಡಿಕೆ ಸರಿಸಿ ಒಳಕ್ಕೆ ಎಳಕೊಂಡಳು.
ಆ ಪುಟ್ಟ ಕತ್ತಲು ಕೋಣೆಯ ದೀಪ ಉರಿಸಿ ಬೆಳಕಾಗಿಸಿ, ಹಳೆಯ ಪಂಖಾ ಒಂದನ್ನು ಸ್ವಿಚ್ಚು ಹಾಕಿ ತಿರುಗಿಸಿ, ಅಲ್ಲೇ ಇದ್ದ ಚಿಂದಿ ಹಾಸುಗೆಯ ಮೇಲೆ ತನ್ನ ಹಳೆಯ ಸೀರೆಯೊಂದನ್ನು ಎಸೆದು ಕೂರಲು ಹೇಳಿ, ತಡಿಕೆಯನ್ನು ಮುಚ್ಚಿದಳು.
ನನಗೆ ‘ಬಿಚ್ಚು’ ಅಂದಳು.ಏನೂ ಅರಿಯದವನಂತೆ ‘ಯಾಕೆ’ ಎಂದು ಕೇಳಿದೆ.
‘ಮತ್ತೆ ಇಲ್ಲಿ ಯಾಕೆ ಬಂದೆ ಸಿನೆಮಾ ನೋಡಲಿಕ್ಕಾ’ ಎಂದು ತಾಂಬೂಲ ತುಂಬಿದ ತನ್ನ ತುಟಿಯಿಂದ ನಕ್ಕಳು.
‘ ಮಾರಾಯ್ತಿ, ಈ ಬೆಳಗಿನ ಹೊತ್ತು ಇದೆಲ್ಲಾ ಬೋರಿನ ಕೆಲಸ ಸುಮ್ಮನೆ ಏನಾದರೂ ಮಾತನಾಡು’ ಅಂದೆ.
‘ನಿನ್ನ ತರಹದ ಜನರೂ ಬರುತ್ತಾರೆ ಮಾತನಾಡಲಿಕ್ಕೆ ಅದಕ್ಕೂ ಪೈಸಾ ಕೊಡಬೇಕಾಗುತ್ತದೆ’ ಅಂದಳು.
‘ಆಯ್ತು ಮಾರಾಯ್ತಿ .ನೀನು ಮಾತಾಡದಿದ್ದರೂ ಪರವಾಗಿಲ್ಲ ಒಂದು ಟೀ ಮಾಡಿಕೊಡು.ನಾ ಸ್ವಲ್ಪ ಹೊತ್ತು ಕೂತಿದ್ದು ಮಳೆ ನಿಂತ ಮೇಲೆ ಹೊರಡುತ್ತೇನೆ.ನಿಮ್ಮ ಕಲ್ಕತ್ತಾದಲ್ಲಿ ಮಾತಾಡೋದೂ ಬೋರು’ ಅಂದೆ.
‘ಹೌದಲ್ಲವಾ’ ಅಂದಳು.
ಕಲ್ಕತ್ತಾವನ್ನು ಬೈದಿದ್ದು ಅವಳಿಗೂ ಖುಷಿಯಾಗಿತ್ತು.
ಅವಳೂ ಆ ಊರಿನವಳಾಗಿರಲಿಲ್ಲ.
ಬಾಂಗ್ಲಾ ದೇಶದ ಹಳ್ಳಿಯಿಂದ ದೋಣಿಹತ್ತಿ ಕದ್ದು ಮುಚ್ಚಿ ಇಲ್ಲಿಗೆ ಬಂದಿದ್ದಳು.ಅವಳ ಗಂಡನೇ ದೋಣಿ ಹತ್ತಿಸಿ ಕಳಿಸಿದ್ದನಂತೆ.ಅವಳ ಸಂಸಾರ ಅಲ್ಲೇ ಇರುವುದಂತೆ.ಅವಳು ಸೀಮೆಣ್ಣೆಯ ಸ್ಟೌ ಹತ್ತಿಸಿ ಟೀ ಕಾಸುತ್ತಾ ಕಥೆ ಹೇಳುತ್ತಿದ್ದಂತೆ ನಾನೂ ನನ್ನ ಹಳ್ಳಿಯ ಕಥೆಗಳನ್ನು ಅವಳಿಗೆ ಹೇಳುತ್ತಾ ನನಗೆ ಕಥೆಗಳನ್ನೂ ಬರೆಯುವ ಅಭ್ಯಾಸವಿದೆಯೆಂದೂ ಹೇಳಿ ಬಿಟ್ಟಿದ್ದೆ.
‘ನಮಕ್ ಹರಾಂ, ಕಥೆ ಬೇರೆ ಬರೆಯುತ್ತೀಯಾ.ಹಾಗಾದರೆ ನಿನಗೆ ಹಣವೂ ಜಾಸ್ತಿ ಸಿಗುತ್ತದೆ.ನನಗೆ ಹಾಗಾದರೆ ಹೆಚ್ಚೇ ಕೊಡಬೇಕಾಗುತ್ತದೆ’ ಎಂದು ಜೇಬಿಗೆ ಕೈ ಹಾಕಲು ಬಂದಳು.
‘ಎಷ್ಟು ಇದೆ ನೋಡು.ಬೇಕಾದದ್ದು ಇಟ್ಟುಕೊಂಡು ನನಗೆ ದಾರಿ ಖರ್ಚಿಗೆ ಉಳಿಸಿ ಬಿಡು’ ಎಂದು ಎಂದು ಪರ್ಸನ್ನು ಅವಳ ಕೈಗಿಡಲು ನೋಡಿದೆ.
`ಬೇಡ ದೇವರೇ’ ಎಂದು ಆಕೆ ಮುಖ ಮುಚ್ಚಿಕೊಂಡು ನಾಚಿಕೊಂಡಳು.
ಅಷ್ಟು ಹೊತ್ತಿಗೆ ಅವಳ ಚಿಂದಿ ಹಾಸುಗೆಯ ಮಂಚದ ಕೆಳಗಿಂದ ಮಗುವೊಂದು ನಿದ್ದೆಯಿಂದ ಎದ್ದು ಅಳಲು ತೊಡಗಿತು.ಅವಳು ಅದನ್ನು ಮರದ ಪೆಟ್ಟಿಗೆಯೊಂದರಲ್ಲಿ ಸೀರೆ ಹೊದೆಸಿ ಮಲಗಿಸಿದ್ದಳು.
ಒಂದು ತಿಂಗಳೂ ತುಂಬದ ಆ ಮಗು ಹಕ್ಕಿ ಮರಿಯ ಹಾಗೆ ಹಾಲು ಬೇಡಿ ಅಳುತ್ತಿತ್ತು.ಅವಳು ಅದಕ್ಕೆ ಹಾಲೂಡಿಸುತ್ತಲೇ ಟೀ ಸೋಸಿ ಲೋಟ ಕೈಗಿಟ್ಟಳು.
ಅದು ಈ ಕಲ್ಕತ್ತದಲ್ಲಿ ಉಂಟಾದ ಮಗುವಂತೆ. ಯಾರೋ ಒಬ್ಬ ತುಂಟ ಯುವಕನಿಗೆ ಉಂಟಾದ ಮಗು ಅಂದಳು.
`ನಿನ್ನ ಮಗು ಬೇಕು ಎಂದು ಅವನಿಂದ ಪಡಕೊಂಡ ಮಗು’ ಅಂದಳು.
`ಈ ಸಲ ಹೋಗುವಾಗ ಈ ಮಗುವನ್ನೂ ಬಾಂಗ್ಲಾದೇಶಕ್ಕೆ ಕರಕೊಂಡು ಹೋಗುತ್ತೇನೆ.ನನ್ನ ಗಂಡನಿಗೂ ಹೇಳಿದ್ದೇನೆ.ಅಲ್ಲೇ ಇರುತ್ತೇನೆ ಈ ಕಲ್ಕತ್ತಾದ ಸಹವಾಸ ಸಾಕು’ ಅಂದಳು.
`ಜನ ಸರಿ ಇಲ್ಲಾ’ ಅಂದಳು.
ತನ್ನ ಹಸಿ ಬಾಣಂತಿ ಮೈಮೇಲೆ ಆಗಿರುವ ಗುರುತುಗಳನ್ನು ತೋರಿಸಿದಳು.
`ಇದೆಲ್ಲಾ ಬರಿ.ದೊಡ್ಡ ಕಥೆಗಾರನಾಗುತ್ತೀಯಾ.ಆದರೆ ನೀನು ಇನ್ನೊಮ್ಮೆ ಬಂದರೆ ನಾ ಇಲ್ಲಿರುವುದಿಲ್ಲ. ಅಂದಳು.
ನಾ ಸುಮ್ಮನೇ ಅವಳನ್ನೂ ಮಗುವನ್ನೂ ನೋಡುತ್ತಾ ಟೀ ಹೀರುತ್ತಿದ್ದೆ.
ಅಷ್ಟು ಹೊತ್ತಿಗೆ ಹೊರಗೆ ಜೋರಾಗಿ ಹೆಂಗಸರ ನಡುವೆ ಜಗಳ ಏರ್ಪಟ್ಟಿತ್ತು.‘ಇದೆಲ್ಲಾ ಮಾಮೂಲು’ ಅಂದಳು.
ಹೊಸತಾಗಿ ಸೇರಿಕೊಂಡಿರುವ ನೇಪಾಳೀ ಬಾಲಕಿಗೆ ದಿನಕ್ಕೆ ನಾಲ್ಕು ಸಾರಿ ಸ್ನಾನ ಮಾಡುವ ರೋಗವಂತೆ.
ಗಿರಾಕಿಗಳು ಬಂದರೂ ಸ್ನಾನದ ಮನೆಯಿಂದ ಹೊರಗೆ ಬರದೆ ಹಠ ಹಿಡಿಯುತ್ತಾಳಂತೆ.ಅವರು ಅವಳನ್ನು ಸ್ನಾನದ ಮನೆಯಿಂದ ಎತ್ತಿಕೊಂಡೇ ಹೋಗುತ್ತಾರೆ ಅಂದಳು.
‘ಬೇಕಾದರೆ ನೀನೇ ನೋಡು ಕಥೆ ಬರೆಯಬಹುದು, ಅಂದಳು.
`ಹೌದಾ’ ಅಂತ ನಾನು ಜಗಳ ನಡೆಯುವ ಆ ಜಾಗವನ್ನು ನೋಡಲು ಅವಳ ಮಂಚವನ್ನು ಹತ್ತಿದೆ.
ಅಷ್ಟೇ ಗೊತ್ತು.ನಿದಾನಕ್ಕೆ ತಿರುಗುತ್ತಾ ಜೋರಾಗಿ ಸದ್ದು ಮಾಡುತ್ತಿದ್ದ ಆ ಹಳೆಯ ಕಾಲದ ಪಂಖಾ ನನ್ನ ತಲೆಗೆ ಮೆಲ್ಲಗೆ ಬಡಿದು ನನಗೆ ಕಣ್ಣು ಕತ್ತಲಿಟ್ಟಂತಾಗಿ ತುಂಬ ಹೊತ್ತು ಆ ಚಿಂದಿ ಹಾಸುಗೆಯ ಮೇಲೆ ಜ್ಞಾನೋದಯಕ್ಕೆ ಒಳಗಾದವನಂತೆ ಮಲಗಿದ್ದೆ.
ಅಲ್ಲಿಂದ ಹೊರಗೆ ಬರುವಾಗ ಮಗು ಮಲಗಿತ್ತು.ಆಕೆ ಆಕೆ ಸಿಕ್ಕಾಪಟ್ಟೆ ಸೌಂದರ್ಯದ ಖನಿಯಂತೆ ಕಾಣಿಸುತ್ತಿದ್ದಳು.ಹೊರಗೆ ಮಳೆ ಹಾಗೆಯೇ ಸುರಿಯುತ್ತಿತ್ತು.DSC_8063

ಯಾಕೋ ಮೊನ್ನೆ ಬುಧವಾರ ಮಡಿಕೇರಿಯಲ್ಲಿ ಭೂಮಿ ಸುಮ್ಮನೆ ಸಣ್ಣಗೆ ಅಲುಗಿದಾಗ ಇದೆಲ್ಲಾ ನೆನಪಾಯಿತು.

(ಫೋಟೋಗಳೂ ಲೇಖಕರವು)

Advertisements