ಪಾತೆ ಮತ್ತೆ ಸಿಕ್ಕಿದಳು

2011-04-20_7320ಹೇಳಿದರೆ ಮುಗಿಯದಷ್ಟಿರುವ ಮಲೆಗಳ ಹೆಸರುಗಳು.ಆನೆಕಂತುಮಲೆ, ತೋರಿಮಲೆ, ಕರಿಂಜಕೋಟ್ ಮಲೆ, ಕಾನಗಂಡಿಮಲೆ, ತೇಮಲೆ, ಪೂಮಲೆ ಎಲ್ಲಕ್ಕಿಂತ ವಿಶೇಷವಾದ ಈರುಳ್ಳಿಮಲೆ!
ಹೇಳಲು ಹೆಸರೂ ಗೊತ್ತಿಲ್ಲದ ಪರ್ವತದಂತಹ ಮರಗಳು.ಒಂದೊಂದು ಮಲೆಗೂ ಒಂದೊಂದು ವೃತ್ತಾಂತಗಳು.ಒಂದೊಂದು ಮರದ ಕೆಳಗೂ ಒಂದೊಂದು ದೇವರ ಕಲ್ಲುಗಳು.ಕರಿ ಚಾಮುಂಡಿ, ಗುಳಿಗ, ವಿಷ್ಣುಮೂರ್ತಿ, ಪಾಷಾಣ ಮೂರ್ತಿ.ಪ್ರತಿಯೊಂದು ಕಲ್ಲು ಮೂರ್ತಿಗಳಿಗೂ ಇನ್ನೊಂದು ಮನಕರಗುವ ಕಥೆಗಳು.ನಡುವಲ್ಲಿ ಏನೋ ಒಂದು ದೊಡ್ಡದಾಗಿ ಚೀತ್ಕರಿಸಿ ಬಿದ್ದಂತಹ ಸದ್ದು ಕೇಳಿಸಿತು.ಕೇಳಿದರೆ, ‘ ಅದಾ, ಅದು ಒಂದು ಮರ ಬಿದ್ದ ಸದ್ದು’ ಎಂದು ಅಲ್ಲಿದ್ದವರು ಏನೂ ಆಗಿಲ್ಲವೆಂಬಂತೆ ತಮ್ಮ ಕಥೆಯನ್ನು ಮುಂದುವರಿಸುತ್ತಿದ್ದರು.

ತೇಜಸ್ವಿಯವರು ಊಟ ಮುಗಿಸಿ ತೀರಿ ಹೋಗುವ ಮೊದಲು ಎದೆ ನೋವಾಗಿ ನೆಲಕ್ಕುರುಳಿದಾಗ ಕಾಡು ಮರವೊಂದು ಬಿದ್ದ ಹಾಗೆ ಸದ್ದಾಗಿತ್ತಂತೆ.ರಾಜೇಶ್ವರಿಯವರು ತಮ್ಮ ಪುಸ್ತಕದಲ್ಲಿ ಬರೆದದ್ದನ್ನು ಅದಾಗ ತಾನೇ ಓದಿ ಮುಗಿಸಿ ಬಂದರೆ ಇಲ್ಲಿ ನಿಜಕ್ಕೂ ಕಾಡು ಮರವೊಂದು ಉರುಳಿ ಬಿದ್ದ ಸದ್ದು.ಸಾವಿರಾರು ವರ್ಷಗಳಿಂದ ಏನೂ ಸಂಭವಿಸದಂತಿರುವ ಈ ಹಸಿರು ಕಾನನದ ನಡುವೆ ಎಲೆಯೊಂದು ಅಲುಗಿದರೂ ಏನೋ ಸಂಭವಿಸಿತು ಎನ್ನಿಸುವ ಒದ್ದೆ ಒದ್ದೆ ಮನಸ್ಸು.
‘ಅಯ್ಯೋ ದೇವರೇ, ಮುಂದಿನ ಜನ್ಮದಲ್ಲಾದರೂ ಇಲ್ಲಿ ನೆರೆದಿರುವ ಈ ಜೇನು ಮಲೆ ಕುಡಿಯರ ತೊತ್ತಿನ ಆಳಾಗಿ ಹುಟ್ಟಿಸು ಭಗವಂತಾ ಎಂದು ಬೇಡಿಕೊಳ್ಳುತ್ತಿದ್ದೆ.
ಹಾಗೆ ನೋಡಿದರೆ ಇವರೆಲ್ಲ ಇಲ್ಲಿ ಇನ್ನೂ ಹೀಗೆ ಬದುಕಿರುವರು ಎಂದು ನನಗೆ ಮೊದಲು ಗೊತ್ತೇ ಇರಲಿಲ್ಲ.ಬಂದು ನೋಡಿದರೆ ಇವರನ್ನೆಲ್ಲ ಜನ್ಮ ಜನ್ಮಾಂತರಗಳಿಂದ ಬಲ್ಲೆನಲ್ಲ ಎಂದು ಅನಿಸುವ ಹಾಗೆ ಇವರ ಮುಖಗಳೂ, ಹೆಸರುಗಳೂ ತಾಳೆಯಾಗುತ್ತಿದ್ದವು.ತೋಳ, ತಿಂಗಳ, ಚಂದ, ಚಿರಿಕಂಠ, ಸುಂದರಿ, ಸಿಂಗಾರಿ, ಕಲ್ಯಾಣಿ, ಪಾತೆ, ಬೆಳ್ಳಚ್ಚಿ, ಚಿಳ್ಳಿ. ಆ ಎಲ್ಲ ಹೆಸರುಗಳೂ ಮಿದುಳೊಳಗೆ ಕುಣಿಯಲು ಶುರು ಮಾಡಿದವು.
2011-04-20_7309‘ಹಾಗಾದರೆ ಪಾತೆ ಎಂಬ ಅಜ್ಜಿಯೂ ಈಗ ಬದುಕಿರುವಳಾ’ ಎಂದು ಕೇಳಿದೆ.‘ಬದುಕದೇ ಇನ್ನೇನು ಸತ್ತೇ ಹೋಗಿದ್ದಾಳಾ? ಸ್ವಲ್ಪ ಮುದುಕಿಯಾಗಿದ್ದಾಳೆ ಅಷ್ಟೇ ’ಎಂದು ಆಕೆಯನ್ನೂ ಕರೆತರಲು ಹೋದರು.ಕೊಂಚ ಹೊತ್ತಲ್ಲೇ ಸೊಂಟ ಕೊಂಚ ಬಗ್ಗಿರುವ ಪಾತೆ ನೆಟ್ಟಗೆ ನಡೆಯುತ್ತಾ ಬಂದಳು.ಅವಳು ಬಂದು ತಲುಪುವ ಮೊದಲೇ ನಾನು ಹೋಗಿ ಆಕೆಯ ಮುಖವನ್ನು ನೋಡುತ್ತಾ ನಿಂತೆ.ಮುಖದ ಒಂದು ಬದಿಯಲ್ಲಿ ಅದೇ ತುಂಟ ನಗು.ಇನ್ನೊಂದು ಬದಿಯಲ್ಲಿ ಅದೇ ಮುಗಿಯದ ಚಿಂತೆ.
‘ನೀನು ನನ್ನ ಪಾತೆಯಲ್ಲವಾ’ ಎಂದು ಕೇಳಿದೆ.‘ನೀನು ಯಾರು’ಎಂದು ಆ ಮುದುಕಿ ನನ್ನನ್ನೇ ಕೇಳಿತು. ನನ್ನ ಹೆಸರು ಹೇಳಿದೆ.ಆಕೆಗೆ ಗೊತ್ತಾಗಲಿಲ್ಲ.ನನ್ನ ತಂದೆಯ ಹೆಸರು ಹೇಳಿದೆ.ಆಗ ಆಕೆಯ ಮುಖ ಬೆಳಗಿತು.‘ನಿನ್ನನ್ನೂ ಗೊತ್ತು ನಿನ್ನ ಅಪ್ಪನನ್ನೂ ಗೊತ್ತು.ಅವರು ಹುಡುಗನಾಗಿದ್ದಾಗ ನಾನು ನಾಲ್ಕು ಏಟು ಬಾರಿಸಿದ್ದೆ.ಅದು ನಿನಗೆ ಗೊತ್ತಾ?’ಎಂದು ನನ್ನನ್ನೇ ಕೇಳಿ ಆಕೆ ಅಲ್ಲೇ ಬಿದ್ದಿದ್ದ ಜಲ್ಲಿ ಕಲ್ಲಿನ ರಾಶಿಯ ಮೇಲೆ ಎಲೆಯಡಿಕೆ ಹಾಕಿಕೊಂದು ಕುಳಿತಳು.
‘ಏಟಿನ ವಿಷಯ ಗೊತ್ತಿಲ್ಲ .ಆದರೆ ಎರಡು ವರ್ಷವಾದರೂ ನಡೆಯಲು ಬಾರದೆ ತೆವಳುತ್ತಿದ್ದ ನನ್ನ ತಂಗಿಯ ಕಾಲುಗಳಿಗೆ ಎಣ್ಣೆ ಸವರಿ ಆಕೆಯನ್ನು ಕತ್ತಿಯ ಅಲುಗಿನ ಮೇಲೆ ನಿಲ್ಲಿಸಿ ನಡೆಸಿದ ಪಾತೆ ನೀನೇ ಅಲ್ಲವಾ’ಎಂದು ಆಕೆಯ ಕಾಲುಗಳ ಕೆಳಗೆ ಕುಳಿತುಕೊಂಡೆ.ಬದುಕು ಸಾರ್ಥಕವಾಯಿತು ಅನಿಸುತ್ತಿತ್ತು.
2011-04-20_7336ಆಮೇಲೆ ಪಾತೆ ಅಲ್ಲಿದ್ದವರಿಗೆ ಕೇಳುವಂತೆ ಹಲವು ಕಥೆಗಳನ್ನು ಹೇಳಿದಳು.ಅವರೆಲ್ಲರ ಕಥೆಗಳನ್ನು ಕೇಳಲು ಹೋದ ನನ್ನ ಕಥೆಯನ್ನೇ ಅವರಿಗೆ ತಿಳಿಸುತ್ತಿರುವ ಆಕೆಯ ಪರಿ ಕಂಡು ಖುಷಿಯಾಗುತ್ತಿತ್ತು. ವೃದ್ಧಾಪ್ಯದಿಂದಲೂ,ಬಡತನದಿಂದಲೂ ಕುಗ್ಗಿ ಹೋಗಿರುವ ಆಕೆ ಅದೆಲ್ಲಾ ದೊಡ್ಡ ವಿಷಯವೇ ಅಲ್ಲವೆಂಬಂತೆ ಕಥೆಗಳನ್ನು ಹೇಳುತ್ತಿದ್ದಳು.
ಭಟ್ಕಳದ ಸಾಹುಕಾರರೊಬ್ಬರ ಏಲಕ್ಕಿ ತೋಟದಲ್ಲಿ ಏಕಕಾಲಕ್ಕೆ ಅಡುಗೆಯವನಾಗಿಯೂ,ರೈಟರಾಗಿಯೂ ಕೆಲಸ ಮಾಡುತ್ತಿದ್ದ ನನ್ನ ಅಪ್ಪನಿಗೆ ಆಗ ಕೇವಲ ಹದಿನಾಲ್ಕು ವರ್ಷ ವಯಸ್ಸಂತೆ.ಏಲಕ್ಕಿ ಮಲೆಯ ಬಾವಿಯಿಂದ ನೀರು ಹೇಗೆ ಸೇದುವುದು ಎಂದು ಗೊತ್ತಿಲ್ಲದೆ ಒದ್ದಾಡುತ್ತಿದ್ದನಂತೆ.ಆಗ ಈ ಪಾತೆ ಆತನಿಗೆ ಎರಡು ಏಟು ಬಿಗಿದು ನೀರು ಹೇಗೆ ಸೇದುವುದು ಎಂದು ಕಲಿಸಿಕೊಟ್ಟಳಂತೆ.
‘ಆ ಏಟನ್ನು ನಿನ್ನ ಅಪ್ಪ ಮರೆತೇ ಇರಲಿಲ್ಲ .ಆಮೇಲೆ ದೊಡ್ಡ ರೈಟರಾದ ಮೇಲೆ ನನಗೆ ಸ್ವಲ್ಪ ಜಾಸ್ತಿಯೇ ಕೆಲಸ ಕೊಡುತ್ತಿದ್ದ ಆಸಾಮಿ’ ಎಂದು ನಕ್ಕಳು.
‘ಆದರೆ ಪಾಪ ಒಳ್ಳೆಯ ಮನುಷ್ಯ.ಈಗ ಎಲ್ಲಿದ್ದಾರೆ?’ ಎಂದು ಕೇಳಿದಳು.
‘ ಅಯ್ಯೋ ಪಾತೆ ತೀರಿ ಹೋಗದೆ ಉಳಿದಿರುವುದು ನೀನು ಮಾತ್ರ.ಅವರು ಹೋಗಿ ಹದಿನಾಲ್ಕು ವರ್ಷವಾಯ್ತು.ಆ ಲೆಕ್ಕದ ಪ್ರಕಾರ ಈಗ ನಿನಗೆ ನೂರು ಹತ್ತಿರವಾಯ್ತು’ ಅಂದೆ
‘ಹೌದು ಆಗ್ತದೆ ನಿನ್ನ ತಲೆ’ ಎಂದು ನಕ್ಕಳು.
ಈ ಪಾತೆಯ ತಾಯಿಯ ಹೆಸರು ಚಮ್ಮಾರ್ತಿ. ಕರಿಂಜಕೋಟ್ ಮಲೆಯಿಂದ ಬಂದವಳಂತೆ.ತುಂಬ ಚಂದ ಇದ್ದಳಂತೆ. ಪಾತೆಯ ಗಂಡನ ಹೆಸರು ಚಿರಿಯಾಂಡ. ಚಿರಿಯಾಂಡ ಎಂದರೆ ಶ್ರೀಕಂಠ ಎನ್ನುವ ಹೆಸರಿನ ಅಪಭ್ರಂಶ. ಆತ ಇಲ್ಲೇ ಮಲೆಯ ಮೇಲಿದ್ದ ದೊರೆಯೊಬ್ಬರ ತೋಟದಲ್ಲಿ ಡ್ರೈವರನಾಗಿದ್ದನಂತೆ.ಕಾರನ್ನು ನದಿಯಲ್ಲಿ ಚೆನ್ನಾಗಿ ತೊಳೆದು ಬಂಗಲೆಯವರೆಗೆ ಓಡಿಸಿಕೊಂಡು ತಂದು ನಿಲ್ಲಿಸುತ್ತಿದ್ದನಂತೆ.ಆದರೆ ಯಾವತ್ತೂ ಟಾರು ರಸ್ತೆಯಲ್ಲಿ ಕಾರು ಓಡಿಸಿಲ್ಲವಂತೆ.
‘ಅಲ್ಲಾ ಪಾತೇ ನಿನ್ನ ತಾಯಿಯ ಹೆಸರು ಹೇಳಿದೆ, ಗಂಡನ ಹೆಸರು ಹೇಳಿದೆ ಆದರೆ ತಂದೆಯ ಹೆಸರು ಹೇಳಲಿಲ್ಲ ಯಾಕೆ’ ಎಂದು ಕೇಳಿದೆ.
‘ಅದು ಹೇಳುವುದಿಲ್ಲ ಕೇಳುವುದೂ ಬೇಡ’ ಎಂದಳು.
2011-04-20_7318ಕುತೂಹಲ ಹೆಚ್ಚಾಗಿ ‘ಯಾಕೆ?’ ಎಂದು ಕೇಳಿದೆ.
‘ಅದು ಮಾತ್ರ ಕೇಳಬೇಡಿ .ಅದೊಂದು ಮಾತ್ರ ಜೀವ ಹೋದರೂ ಆಕೆ ಹೇಳುವುದಿಲ್ಲ’ ಎಂದು ಅಲ್ಲೇ ಇದ್ದ ಪಾತೆಯ ಮರಿ ಮೊಮ್ಮಗಳು ಹೇಳಿದಳು.
‘ಸರಿ ಅದರ ಹಿಂದೆ ಅಂತಹ ದೊಡ್ಡ ಕಥೆ ಇದ್ದರೆ ಹೇಳುವುದು ಬೇಡ ಉಳಿದ ವಿಷಯಗಳನ್ನು ಹೇಳು ಪಾತೆ’ ಎಂದು ಆಕೆಯ ಜೊತೆ ಬಹಳ ಹೊತ್ತು ಕುಳಿತಿದ್ದೆ.
ಆಕೆ ಕತ್ತಲಲ್ಲಿ ಗುಡಿಸಲಿಗೆ ಮರಳುವಾಗ ‘ಪಾತೆ,ನಾನೂ ಈ ರಾತ್ರಿ ನಿನ್ನ ಬಳಿ ಮಲಗಿಕೊಳ್ಳಲಾ’ ಎಂದು ಕೇಳಿದೆ.
‘ನಿನ್ನ ತಲೆ,ಕೋಣನ ಹಾಗೆ ಬೆಳೆದಿದ್ದೀಯಾ,ಇನ್ನೂ ನನ್ನ ಜೊತೆ ಯಾಕೆ ಮಲಗುವುದು’ಎಂದು ಓಡಿಸಿದಳು.
ನಾನು ಸಣ್ಣವನಿರುವಾಗಲೂ ಹೀಗೇ ಬೈಯ್ಯುತ್ತಿದ್ದಳು.ನನ್ನನ್ನು ಮಾತ್ರವಲ್ಲ ಎಲ್ಲ ಮಕ್ಕಳನ್ನೂ ಬೈದು ಓಡಿಸುತ್ತಿದ್ದಳು.ಆಗಲೂ ಹೀಗೇ ಬೈಯುತ್ತಿದ್ದಳು ‘ನಿನ್ನ ತಲೆ, ಕೋಣನ ಹಾಗೆ ಬೆಳೆದಿದ್ದೀಯಾ’ಅಂತ!
ಆದರೂ ನಾಚಿಕೆಯಿಲ್ಲದೆ ನಾವು ಆಕೆಯ ಸೆರಗನ್ನು ಸೇರಿಕೊಳ್ಳಲು ನೋಡುತ್ತಿದ್ದವು.
ಆಗ ಆಕೆ ಮಕ್ಕಳಿಗ್ಯಾಕೆ ಉಪ್ಪಿನಕಾಯಿ?, ಸಣ್ಣವರಿಗ್ಯಾಕೆ ದೊಡ್ಡವರ ವಿಷಯ’ ಎಂದು ಅಟ್ಟುತ್ತಿದ್ದಳು.
ಪಾತೆ ಈಗಲೂ ಹಾಗೆಯೇ ಇರುವಳು.ತನ್ನ ಗುಡಿಸಲಲ್ಲಿ ಒಂಟಿಯಾಗಿಯೇ ಇರುವಳು ಎಂದು ಆಕೆ ಹೋದ ಮೇಲೆ ಉಳಿದವರು ಅಂದರು.

2011-04-20_7375ಆ ರಾತ್ರಿಯೆಲ್ಲ ಬಹಳ ಮಳೆ ಬರುತ್ತಿತ್ತು.ಮಿಂಚು ಗುಡುಗು ಕೂಡಾ.ಆ ರಾತ್ರಿಯೆಲ್ಲಾ ಅಲ್ಲಿನ ಜೇನು ಕುಡಿಯರ ಹಾಡುಗಾರರು ಬಹಳ ಹಾಡುಗಳನ್ನು ಹಾಡಿ ಆ ಹಾಡಿನ ಒಳಗಿನ ಕಥೆಯನ್ನೂ ಹೇಳಿದರು.ಅದರಲ್ಲಿ ಒಂದು ಹಾಡಿನ ವಿಷಯ ಭೂಮಂಡಲದಲ್ಲಿ ಮನುಷ್ಯರು ಉಂಟಾದ ಕಥೆ.ಈ ಹಾಡನ್ನು ಯಾರಾದರೂ ತೀರಿ ಹೋದಾಗ ಹಾಡುತ್ತಾರೆ. ಇನ್ನೊಂದು ಹಾಡಿನ ಹೆಸರು ಕೋವಿಯ ಹಾಡು.ಈ ಹಾಡು ಹಾಡುವಾಗಲೂ ಬಹಳ ಮಳೆ ಬರುತ್ತಿತ್ತು. ಈರುಳ್ಳಿ ಮಲೆಯಲ್ಲಿ ಕೇವಲ ಎಲೆಗಳನ್ನು ಉಟ್ಟುಕೊಂಡು ಐಶ್ವರ್ಯವಂತರಾಗಿ ಬದುಕುತ್ತಿದ್ದ ಜೇನು ಕುಡಿಯ ಮತ್ತು ಜೇನು ಕುಡಿಯತಿಯನ್ನು ಕೊಡವ ಬ್ರಾಹ್ಮಣನೊಬ್ಬ ಕೊಕ್ಕೆ ಕೋವಿ ತೋರಿಸಿ ಹೆದರಿಸಿ ಕರೆತಂದು ತನ್ನ ಮುಂಡಾಸನ್ನು ಹರಿದು ತುಂಡು ಮಾಡಿ ಅವರ ಮಾನ ಮುಚ್ಚಲು ಕೊಟ್ಟು ಅವರ ಏಲಕ್ಕಿ ಮಾಲೆಯನ್ನು ಕಸಿದುಕೊಂಡು ಶ್ರೀಮಂತನಾದ ಕಥೆಯ ಹಾಡು.ಆ ಹಾಡು ಹಾಡುವಾಗ ಆ ಮಳೆಯಲ್ಲೂ ಅವರು ಕುಣಿಯುತ್ತಿದ್ದರು.
ಬೆಳಗೆ ಆ ಊರಿಂದ ಬರುವಾಗ ಪಾತೆ ದಾರಿಯಲ್ಲಿ ಕಾಯುತ್ತಿದ್ದಳು.ಹೋಗಿ ಅವಳ ಆಶೀರ್ವಾದ ಪಡೆದುಕೊಂಡೆ.
‘ಹೋಗಬೇಡ ನಿಲ್ಲು ನನ್ನ ತಂದೆ ಯಾರು ಎಂದು ಹೇಳುತ್ತೇನೆ’ ಅಂದಳು.
ಅವಳ ತಾಯಿ ಚಮ್ಮಾರ್ತಿಯನ್ನು ಕರಿಂಜಕೋಟ್ ಮಲೆಯಿಂದ ಹಾರಿಸಿಕೊಂಡು ಬಂದವರು ಒಬ್ಬರು ಸಾಹೇಬರಂತೆ.
‘ಅವರ ಹೆಸರು ಹೇಳುವುದಿಲ್ಲ.ನೀನೂ ಕೇಳಬೇಡ’ ಎಂದಳು.
ಅವರೂ ಚೆನ್ನಾಗಿದ್ದರಂತೆ.ಆದರೆ ಅವರ ಕಿವಿಯೊಳಗೆ ಇರುವೆಯೊಂದು ಹೊಕ್ಕು ಹುಣ್ಣಾಗಿ ತೀರಿಹೋದರಂತೆ.
ಆಮೇಲೆ ಚಮ್ಮಾರ್ತಿ ಮಕ್ಕಳೊಡನೆ ವಾಪಾಸು ಬಂದು ಜೇನು ಕುಡಿಯಳಾಗಿಯೇ ಬದುಕಿದಳಂತೆ.`ಈಗ ಕೊನೆಯ ಮಗಳು ನಾನು ಮಾತ್ರ ಬದುಕಿ ಉಳಿದಿರುವೆನು’ ಅಂದಳು.
‘ನನ್ನದೊಂದು ಕೆಲಸ ಇದೆ ಮಾಡಿಕೊಡುತ್ತೀಯಾ’ ಎಂದು ಕೇಳಿದಳು.
‘ಏನು’ ಅಂದೆ.
`ನನಗೆ ಇನ್ನೂ ಸರಕಾರದಿಂದ ವೃದ್ದಾಪ್ಯ ವೇತನ ಸಿಕ್ಕಿಲ್ಲ. ನನ್ನ ಅರ್ಜಿ ಮಡಿಕೇರಿ ಕೋಟೆ ಡೀಸಿ ಆಫೀಸಲ್ಲಿ ಹಾಗೇ ಉಳಿದಿದೆ ಮಾಡಿಸಿ ಕೊಡುತ್ತೀಯಾ ನಿನಗೆ ಪುಣ್ಯ ಸಿಗುತ್ತದೆ’ ಎಂದು ಕೇಳಿದಳು.
2011-04-20_7420ವೃದ್ಧಾಪ್ಯ ವೇತನಕ್ಕೆ ಬೇಕಾದ ಪಾತೆಯ ಫೋಟೋವನ್ನೇ ನೋಡುತ್ತಾ ಈಗ ಕಣ್ತುಂಬಿಕೊಂಡು ಕುಳಿತಿದ್ದೇನೆ.
ಆಕೆಯ ಕಣ್ಣುಗಳೂ,ಹುಬ್ಬೂ,ಕಿವಿಗಳೂ ತೀರಿಹೋದ ನನ್ನ ತಂದೆಯ ಹಾಗೇ ಇದೆ.
ಮಲೆ ಸರಕು ವ್ಯಾಪಾರಿಯಾಗಿದ್ದ ನನ್ನ ಅಜ್ಜ ಸಣ್ಣ ವಯಸ್ಸಲ್ಲಿ ತೀರಿ ಹೋಗಿದ್ದರು ಎಂಬುದು ನನಗೆ ಗೊತ್ತಿದೆ.ಆದರೆ ಅವರು ಕಿವಿಯೊಳಗೆ ಇರುವೆ ಹೋಗಿ ತೀರಿ ಹೋಗಿದ್ದರಾ ಎಂದು ಕೇಳೋಣವೆಂದರೆ ಅದು ಗೊತ್ತಿರುವ ಯಾರೂ ಈಗ ಉಳಿದಿಲ್ಲ.
ಹೊರಗೆ ಜೋರಾಗಿ ಮಳೆ ಸುರಿಯುತ್ತಿದೆ.
ಅಯ್ಯೋ ಈ ಮಳೆಯಲ್ಲಿ ನನ್ನ ಕಿವಿಕಣ್ಣುಮೂಗುಗಳೂ ಹಾಗೇ ಕಾಣಿಸುತ್ತಿರುವ ಹಾಗೆ ಅನಿಸುತ್ತಿದೆ.

(ಫೋಟೋಗಳೂ ಲೇಖಕರವು)

Advertisements