ಬೋದಿಯೂ,ಆನೆಯೂ,ಟೀಪುವೂ,ಕಾಲವೂ

2011-04-14_7137ಮೊನ್ನೆ ಮೊಣಕಾಲವರೆಗಿನ ನೀರಲ್ಲಿ ಕಾವೇರಿಯನ್ನು ದಾಟಿ ದುಬಾರೆ ಕಾಡಿಗೆ ಹೋದರೆ ಕಾಲಿಗೆ ದೊಡ್ಡ ದೊಡ್ಡ ಚೈನುಗಳನ್ನು ಕಟ್ಟಿಕೊಂಡ ಸಾಕಾನೆಗಳು ಸಾಧು ದನಗಳಂತೆ ಮೇಯಲು ಹಸಿರು ಹುಡುಕುತ್ತಿದ್ದವು. ಬಿಸಿಲಿಗೆ ಬೆಂದ ನೆಲ, ಸುಟ್ಟುಹೋದಂತಿರುವ ಲಂಟಾನಾ ಪೊದೆಗಳು, ಮೇಲೆ ತರಹಾವರಿ ಮರಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಮನೋಹರವಾಗಿ ಹೂಗಳನ್ನು ಬಿಟ್ಟುಕೊಂಡು ವಾರಾಂಗನೆಯರಂತೆ ನಿಂತುಕೊಂಡಿರುವ ಕಕ್ಕೆ, ನೇರಳೆ, ತಾರೆ, ಮತ್ತಿ, ಹೊನ್ನೆಯ ಮರಗಳು. ಮುರಳೆ ಬಳ್ಳಿಯಲ್ಲೂ ಸಿಕ್ಕಾಪಟ್ಟೆ ಬಿಳಿಯ ಹೂಗಳು. ಆವತ್ತು ಬಿಸು ಸಂಕ್ರಾಂತಿಯ ಹಬ್ಬವಾಗಿತ್ತು. ಈ ಹೂಗಳಿಗೆ ಕ್ಯಾರೇ ಮಾಡದೆ ಆ ಪಾಪದ ಸಾಕಾನೆಗಳು ಇರುವ ಚೂರು ಚೂರು ಹಸಿರನ್ನು ಮೇಯತ್ತಾ ಸುಸ್ತಾಗಿ ಉಸಿರು ಬಿಡುತ್ತಿದ್ದವು. ಅವುಗಳನ್ನು ನೋಡಿಕೊಳ್ಳಬೇಕಾದ ಜೇನು ಕುರುಬ ಮಾವುತರು ಅವುಗಳ ಸರಪಳಿಗಳನ್ನು ಮೋಟು ಮರಗಳ ಬುಡಕ್ಕೆ ಕಟ್ಟಿಹಾಕಿ, ಸಂತೆಗೋ, ಶರಾಬಿಗೋ, ಡಾಕ್ಟರ ಬಳಿಗೋ ಅಂತ ಹೋಗಿದ್ದರು. ಜೇನು ಕುರುಬರ ಗುಡಿಸಲುಗಳ ಮುಂದಿನ ಬೋಳು ಮರಗಳ ಕೆಳಗೆ ಮುದುಕಿಯರು, ಮಕ್ಕಳು ಹಸಿವಿನಿಂದಲೋ ಅಲ್ಲಾ ಬೋರಾಗಿಯೋ ಆ ನಡು ಮಧ್ಯಾಹ್ನ ನಿದ್ದೆ ತೂಗಲು ನೋಡುತ್ತಿದ್ದರು. ಘಮ್ಮೆನ್ನುವ ಕಾಡು ಹೂಗಳ ಪರಿಮಳ, ಗುಂಯ್‌ಗುಡುತ್ತಿರುವ ಜೇನ್ನೊಣ, ನುಸಿ, ದುಂಬಿಗಳ ಹಾರಾಟ ಜೋರಾಗಿತ್ತು.

ಮಲಗಿದ್ದ ಆಕೆಯನ್ನು ತಟ್ಟಿ ಎಬ್ಬಿಸಿ, ‘ಬೋದಿ ಎಲ್ಲಿ ಹೋದ?’ ಎಂದು ಕೇಳಿದೆ. ‘ಅವನಾ?, ಆನೆ ಹಿಡಿಯಕ್ಕೆ ದೂರ ದೇಶಕ್ಕೆ ಹೋದಾ’ ಅಂತ ಆಕೆ ನಿದ್ದೆಯಿಂದ ಎದ್ದು ಅಂದಳು. ಅವಳು ಬೋದಿಯ ಅತ್ತೆ. ಸಾರಾಯಿ ಕುಡಿದಾಗ ರಾಗವಾಗಿ ಪೋಲಿ ಪದ್ಯಗಳನ್ನು ಹಾಡುತ್ತಾಳೆ. ಬಹುಶಃ ಈವತ್ತೂ ಕುಡಿದು ಮಲಗಿರಬೇಕು. ನನ್ನನ್ನು ಮರೆತೇ ಹೋಗಿದ್ದಳು.
ಈ ಬೋದಿ ನನಗೆ ಚೆನ್ನಾಗಿಯೇ ಕೈಕೊಟ್ಟಿದ್ದ. ‘ಸಂಕ್ರಾಂತಿಗೆ ಬನ್ನಿ ಸಾ, ಕಾಡಿಗೆ ಆನೆ ಮೇಯಿಸಲಿಕ್ಕೆ ಹೋಗುವಾ’ ಅಂತ ಕರೆದಿದ್ದವನು ಈಗ ಮಧ್ಯಪ್ರದೇಶದ ಯಾವುದೋ ಕಾಡಲ್ಲಿ ಆನೆಗಳನ್ನು ಹಿಡಿದು ಪಳಗಿಸಲು ಹೋಗಿದ್ದ. ‘ಅಯ್ಯೋ ಹೋಗುವಾಗ ಹೇಳಿಯಾದರೂ ಹೋಗಬಾರದಿತ್ತಾ’ ಎಂದು ಆತನಿಗೆ ಸುಮ್ಮನೇ ಬೈಯುತ್ತಾ ಕುಳಿತಿದ್ದೆ.

2011-04-14_7170ಜೇನುಕುರುಬರ ಈ ಬೋದಿ ಸಖತ್ ಮನುಷ್ಯ. ಯಾವ ಬಂಡಾಯ ಕವಿಗೂ ಕಮ್ಮಿಯಿಲ್ಲದ ಹಾಗೆ ಸ್ಥಳದಲ್ಲೇ ಹೋರಾಟದ ಹಾಡುಗಳನ್ನು ರಚಿಸಿ ಎತ್ತರದ ದನಿಯಲ್ಲಿ ಹಾಡಬಲ್ಲ. ಜೇನು ಹಿಡಿಯುವಾಗ ಅಷ್ಟೇ ನವಿರಾಗಿ ರಮ್ಯ ಕವಿಯಂತೆ ಮುಣುಮುಣು ಅಂತ ಹಾಡುತ್ತಾ ಹಾರುವ ಜೇನುನೊಣಗಳನ್ನು ರಮಿಸಿ ಮರಳು ಮಾಡಿ ಅವುಗಳ ಜೇನು ಹುಟ್ಟನ್ನು ಎಗರಿಸಬಲ್ಲ ಜಾಣ ಈತ. ಜೇನು ತೆಗೆಯಲು ಮರ ಹತ್ತುವ ಮೊದಲು ಅಮ್ಮಾಲೆ ದೇವಿಯನ್ನು ಹಾಡಿ ಹೊಗಳುತ್ತಾ ಅಟ್ಟಕ್ಕೆ ಹತ್ತಿಸ ಬಲ್ಲ ಭಕ್ತಿ ಕವಿಯೂ ಕೂಡ. ಈತ ಮಾತಾಡಲು ತೊಡಗಿದರೆ ಎದುರಿಗಿದ್ದವರು ಸುಮ್ಮನೆ ಮುಚ್ಚಿಕೊಂಡಿರುತ್ತಾರೆ. ಹಾಗಿರುತ್ತದೆ ಅವನ ಮಾತು. ಒಂದು ಸಲ ಈತ ದಸರಾ ಮೆರವಣಿಗೆಯ ಆನೆಗಳ ಕೈಯಿಂದ ಸಾಂಕೇತಿಕ ಧರಣಿ ಏರ್ಪಡಿಸಿದ್ದ. ಎಲ್ಲ ಸಾಕಾನೆಗಳ ಸರಪಣಿ ಬಿಚ್ಚಿ ಕಾಡಿಗೆ ಬಿಟ್ಟಿದ್ದ. ಅವುಗಳು ಸರಪಣಿಯಿಲ್ಲದೆ ಕಾಡಲ್ಲಿ ಏನು ಮಾಡುವುದು ಎಂದು ಗೊತ್ತಾಗದೆ ಕಕ್ಕಾವಿಕ್ಕಿಯಾಗಿ ಅಹೋರಾತ್ರಿ ಸುಮ್ಮನೆ ನಿಂತಿದ್ದವು. ಯಾರು ಕರೆದರೂ ಬರಲೊಲ್ಲವು. ಆಮೇಲೆ ಸರಕಾರವೇ ಈ ಮಾವುತರ ಬೇಡಿಕೆಗಳಿಗೆ ಮಣಿದು ಅವರ ಕೆಲಸವನ್ನು ಖಾಯಂ ಮಾಡಿತ್ತು.

2011-04-14_7063‘ಸಾ.., ನಿಮಗೆಲ್ಲಾ ಕಾಡಾನೆಗಳಿಂದ ಕಿರಿಕಿರಿ, ನಮಗೆ ಸರಕಾರದಿಂದ ಕಿರಿಕಿರಿ. ನೋಡಿ ನಾವು ಹೇಗೆ ಕಾಡಾನೆಯನ್ನೂ ಸರಕಾರವನ್ನೂ ಪಳಗಿಸಿಬಿಟ್ಟೆವು’ ಎಂದು ಆತ ಕಾಮ್ರೇಡನಂತೆ ಕೊಚ್ಚಿಕೊಂಡಿದ್ದ. ಮರುಕ್ಷಣವೇ ತತ್ವಜ್ಞಾನಿಯಂತೆ, ‘ನೋಡಿ ಸಾ.. ನಾವೂ ಕಾಡಲ್ಲಿರೋರು. ಆನೆಗಳೂ ಕಾಡಲ್ಲಿರೋದು. ನಮ್ಮನ್ನ ಸರಕಾರ ಪಳಗಿಸುತ್ತದೆ. ನಾವು ಕಾಡಾನೆಗಳನ್ನು ಪಳಗಿಸುತ್ತೇವೆ.ಒಟ್ಟಲ್ಲಿ ನಮಗೂ ಸುಖವಿಲ್ಲ, ಆನೆಗಳಿಗೂ ಸುಖವಿಲ್ಲ, ಬೇಡಾ ಸಾ ಈ ನಾಳೆಯಿಂದ ಈ ಹಿಂಸೆ ಕೆಲ್ಸಾನೇ ಬೇಡ’ ಅಂತ ಒಂದೆರೆಡು ದಿನ ರಜೆ ಹಾಕಿ ಎಲ್ಲಿಗೋ ಹೋಗಿದ್ದ. ಆಮೇಲೆ ‘ಇದೆಲ್ಲಾ ಆದದಾ ಸಾರ್ ಆನೆಯಿಲ್ಲದೆ ನನಗೂ ಸುಖವಿಲ್ಲ ನಾನಿಲ್ಲದೆ ಅದಕ್ಕೂ ಇಲ್ಲ ಎಲ್ಲ ಈ ನರಜನ್ಮದ ಕಷ್ಟಾ ಸಾ’ ಎಂದು ಹಲ್ಲು ಬಿಟ್ಟಿದ್ದ.

ಒಮ್ಮೆ ಒಂದು ಹಬ್ಬಕ್ಕೆ ಹೋಗಿದ್ದೆ. ಈ ಹಬ್ಬವನ್ನು ಕುಂಡೆ ಹಬ್ಬ ಅನ್ನುತ್ತಾರೆ. ಕೊಡಗಿನ ಗಂಡಸರಾದ ಎಲ್ಲ ಜೇನುಕುರುಬರೂ, ಬೆಟ್ಟ ಕುರುಬರೂ, ಎರವರೂ ಎಲ್ಲ ಸೇರಿ ಒಂದು ದಿನ ಹೆಣ್ಣು ವೇಷ ಹಾಕಿ ದೇವರನ್ನೂ, ಸರಕಾರವನ್ನೂ, ಮಾಲೀಕರನ್ನೂ ಅಶ್ಲೀಲವಾಗಿ ಬೈಯುತ್ತಾ ಕುಣಿಯುವ ಹಬ್ಬ. ನಾನು ಅಲ್ಲಿ ಹೋಗಿ ಆ ಅಶ್ಲೀಲ ಪ್ರಪಂಚದಲ್ಲಿ ಪೂರ್ತಿ ಮುಳುಗಿ ನಿಂತಿದ್ದೆ. ಆಗ ಒಬ್ಬಳು ವೇಶ್ಯಾ ಸ್ತ್ರೀಯ ವೇಷ ಹಾಕಿ ಕುಣಿಯುತ್ತಿದ್ದ ಈ ಬೋದಿ, ‘ಸಾ ಒಂದು ರಾತ್ರಿಗೆ ಬರ್ತೀರಾ’ ಅಂತ ವೈಯ್ಯಾರದಲ್ಲಿ ಚಿವುಟಿ ಹೋಗಿದ್ದ. ಹಬ್ಬ ಕಳೆದು ಸಿಕ್ಕಿದವನು ‘ಸಾ ನಿಮ್ಮನ್ನು ಚಿವುಟಿದ್ದು ನಾನೇ’ ಅಂದಿದ್ದ.

ಈ ಬೋದಿ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಕುಡಿಯುತ್ತಿದ್ದನಂತೆ. ಎಷ್ಟು ಅಂದರೆ ಈತನ ಮಕ್ಕಳು ತಿನ್ನಲು ಅನ್ನವಿಲ್ಲದೆ, ಬಟ್ಟೆಯಿಲ್ಲದೆ ಕಾಡಲ್ಲಿ ಮೃಗಗಳ ಹಾಗೆ ಓಡಾಡುತ್ತಿದ್ದವಂತೆ. ಆಮೇಲೆ ಆತ ಕುಡಿಯುವುದನ್ನು ಬಿಟ್ಟು ಆನೆ ಪಳಗಿಸುವ ತನ್ನ ರಕ್ತಗುಣವನ್ನು ಮರಳಿ ಪಡೆದು ವಿರಾಗಿಯೋ, ತತ್ವಜ್ಞಾನಿಯೋ, ಮಗುವೋ, ದೇವತೆಯೋ ಎಂದು ಗೊತ್ತಾಗದ ಹಾಗೆ ನನ್ನೊಳಗೆ ಇಳಿದು ಬಿಟ್ಟಿದ್ದ. ಆನೆಗಳ ಕಣ್ಣಲ್ಲಿ ಸುರಿವ ಕಣ್ಣೀರು, ಇವನ ಕಣ್ಣುಗಳಲ್ಲಿ ನಿಂತುಕೊಂಡಿರುವ ಸಂಕಟ ಮತ್ತು ನನ್ನ ಏಕಾಂಗಿತನದ ಹೊತ್ತಲ್ಲಿ ಈತನ ಬಳಿ ಹೋಗಬೇಕೆನ್ನುವ ಹುಚ್ಚು ಆಸೆ! ಎಲ್ಲರೂ ಬಿಸು ಸಂಕ್ರಾಂತಿಯ ಹಬ್ಬದಲ್ಲಿರುವಾಗ ಈತನ ಜೊತೆ ಆನೆಗಳ ಮೇಯಿಸುತ್ತಾ ಹೂಗಳ ಪರಿಮಳದಲ್ಲಿ ಮುಳುಗಿ ಹೋಗಬೇಕೆಂದು ಬಂದರೆ ಈತ ಹೇಳದೇ ಕೇಳದೇ ಕೈಕೊಟ್ಟಿದ್ದ. ಅವನಿಲ್ಲದೆ ಸಂಕ್ರಾಂತಿಯ ಆ ಹೂಗಳೂ ಯಾಕೋ ಪೇಲವವಾಗಿ ಕಾಣುತ್ತಿದ್ದವು.

Dubare23ಆಮೇಲೆ ಸುಮ್ಮನೇ ಬೋದಿಯ ಅತ್ತೆಯ ಬಳಿ ಹರಟುತ್ತಾ ಕುಳಿತಿದ್ದೆ. ಈಕೆಯದೋ ಇನ್ನೊಂದು ಕಥೆ. ಕುಡಿಯದಿದ್ದಾಗ ಈಕೆ ನನಗೆ ತಲೆಕೆಟ್ಟಿದೆ ಯಾರೂ ಮಾತಾಡಿಸಬೇಡಿ’ ಎಂದು ತಲೆ ಅಲುಗಿಸುತ್ತಾ ಓಡಾಡುತ್ತಿರುತ್ತಾಳೆ. ಆಕೆಯ ತಲೆಯೊಳಗೆ ಯಾವಾಗಲೂ ಏನೋ ಕೂಗಾಡುವ ಸದ್ದು ಕೇಳುತ್ತಿರುತ್ತದಂತೆ. ಕುಡಿದಾಗ ಉಲ್ಲಾಸದಲ್ಲಿ ಕೆಟ್ಟಕೆಟ್ಟ ಹಾಡುಗಳನ್ನು ಹಾಡುತ್ತಿರುತ್ತಾಳೆ. ಈಕೆಯ ಗಂಡಸೂ ಮಾವುತನಾಗಿದ್ದವನು. ತುಂಬ ಒಳ್ಳೆ ಮಾವುತನಂತೆ. ಆದರೆ ಆತನೇ ಸಾಕಿದ ಆನೆ ಕೊಂಬಿನಿಂದ ಎತ್ತಿ ಬಿಸಾಕಿದ ಮೇಲೆ ಆ ಬೇಜಾರಲ್ಲೇ ಎದೆ ನೋವು ಬಂದು ಸತ್ತು ಹೋಗಿದ್ದಾನೆ. ಆತ ಸತ್ತು ಹೋದ ಮೇಲೆ ಈಕೆ ಹೀಗಾಗಿದ್ದಾಳೆ.

ಆ ಆನೆಯನ್ನೂ ಇದೇ ಕಾಡಲ್ಲಿ ಹಿಡಿದಿದ್ದರು. ಸಿಕ್ಕಾಪಟ್ಟೆ ಪುಂಡು ಆನೆ. ಕಾಡಲ್ಲಿರುವಾಗ ಇಬ್ಬರು ಮೂವರನ್ನು ತಿವಿದು ಹಾಕಿತ್ತು. ಅದನ್ನು ಹಿಡಿದು ಪಳಗಿಸಿ ಒಂದು ದೇವಸ್ಥಾನಕ್ಕೆ ಕೊಟ್ಟಿದ್ದರು. ಅಲ್ಲಿಯೂ ಆ ಆನೆ ಪುಂಡಾಟ ನಡೆಸಿ ಇಬ್ಬರು ಭಕ್ತರನ್ನು ತಿವಿದು ಬಿಸಾಕಿತ್ತು. ದೇವಸ್ಥಾನದವರು ಆ ರೌಡಿ ಆನೆಯಿಂದ ರೋಸಿ ಹೋಗಿ ಪುನಃ ಅದನ್ನು ಕಾಡಿಗೆ ತಂದು ಕೊಟ್ಟಿದ್ದರು. ಅದು ಈ ಮುದುಕಿಯ ಗಂಡನ ಪ್ರಾಣವನ್ನೂ ಕೆಲವು ವರ್ಷಗಳ ಹಿಂದೆ ತಿಂದು ಹಾಕಿತ್ತು. ಈಗ ಮೂರು ತಿಂಗಳ ಹಿಂದೆ ಆ ಆನೆಯೂ ವಯಸ್ಸಾಗಿ ತೀರಿಹೋಗಿತ್ತು.

ಮುದುಕಿ ಸಾರಾಯಿ ವಾಸನೆ ಸೂಸುತ್ತಾ ಈ ಎಲ್ಲ ಕಥೆಗಳ ಹೇಳುತ್ತಾ ತನ್ನ ನಡುಗುತ್ತಿರುವ ತಲೆಯನ್ನು ತಹಬಂದಿಗೆ ತರಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಳು.
************

ಅಲ್ಲಿಂದ ಬಂದ ನಾನು ಈ ಬೋದಿಯ ಕಥೆಯನ್ನು ನನ್ನ ಗೆಳೆಯನಲ್ಲಿ ಹೇಳುತ್ತಿದ್ದೆ. ಆತ ನನಗೆ ಇತಿಹಾಸದಲ್ಲಿ ಹಿಂದೆ ನಡೆದ ಇಂತಹದೇ ಇನ್ನೊಂದು ಕಥೆಯನ್ನು ಹೇಳಿದ. ಅದು ಸರಿಯಾಗಿ ೨೨೫ ವರ್ಷಗಳ ಹಿಂದೆ ನಡೆದ ಕಥೆ.ಮೈಸೂರು ಹುಲಿ ಟಿಪ್ಪುಸುಲ್ತಾನನು ೧೭೮೬ ಮಾರ್ಚ್ ೯ರ ಗುರುವಾರದಂದು ಕರ್ನಾಟಕದ ತದಡಿ ಬಂದರಿನಿಂದ ನಾಲ್ಕು ಸಾಕಾನೆಗಳನ್ನು ಹಡಗು ಹತ್ತಿಸಿ ತುರ್ಕಿಸ್ಥಾನದ ಮುಖಾಂತರ ಪ್ರಾನ್ಸ್ ನ ಚಕ್ರವರ್ತಿ ಲೂಯಿಗೆ ಕಳುಹಿಸಿದ್ದನಂತೆ. ಒಂದು ಲೂಯಿಗೆ, ಇನ್ನೊಂದು ತುರ್ಕಿಯ ಸುಲ್ತಾನನಿಗೆ, ಮೂರನೆಯದು ಇಂಗ್ಲೆಂಡಿನ ದೊರೆಗೆ. ನಾಲ್ಕನೆಯದು ಮಾರಿ ವಾಪಾಸು ಬರುವ ದಾರಿಯ ಖರ್ಚಿಗೆ. ಆದರೆ ಟೀಪುವಿನ ರಾಜತಾಂತ್ರಿಕ ತಲೆ ಕೆಟ್ಟು ಹೋಗುವ ಹಾಗೆ ಆ ನಾಲ್ಕು ಆನೆಗಳಿದ್ದ ಹಡಗುಗಳು ತಲುಪಲೇ ಇಲ್ಲವಂತೆ. ಮುಳುಗಿಯೋ ಸುಟ್ಟೋ ನಾಶವಾದವಂತೆ. ಅಷ್ಟು ಹೊತ್ತಲ್ಲಿ ಪ್ರಾನ್ಸ್ ನಲ್ಲಿ ಕ್ರಾಂತಿಯೇ ನಡೆದು, ಲೂಯಿ ದೊರೆಯ ತಲೆಯನ್ನೂ ಜನ ಕತ್ತರಿಸಿ ಇನ್ನು ಏನು ಮಾಡುವುದು ಎಂದು ಟೀಪುವು ತಲೆಕೆಡಿಸಿಕೊಂಡು ಕುಳಿತಿದ್ದನಂತೆ!
Dubare10********
ಇದು ಬರೆದು ಮುಗಿಸಿ ಇದೀಗ ಬೋದಿಗೆ ಫೋನ್ ಮಾಡಿದೆ. ಆತ ಮಧ್ಯಪ್ರದೇಶದ ಯಾವುದೋ ಒಂದು ಕಾಡಿಂದ ‘ಸಾರ್ ಕರೆನ್ಸಿ ಇಲ್ಲ. ಯಾಕೆ ಮಾಡ್ತೀರಾ. ಈಗ ಕಟ್ಟಾಗುತ್ತದೆ. ಆಮೇಲೆ ದೇವ್ರೇ ಗತಿ’ ಎಂದು ಬೈದ.ಟೀಪುವಿನ ಕಾಲದಲ್ಲಿ ಆನೆಗಳ ಜೊತೆ ಫ್ರಾನ್ಸಿಗೆ ಹೋದ ಈತನ ಪೂರ್ವಜ ಜೇನು ಕುರುಬರ ಕುಲದವರು ಈಗ ಅಲ್ಲಿ ಏನೆಲ್ಲಾ ಸಿಟ್ಟು ಮಾಡಿಕೊಂಡು ಕುಳಿತಿರಬಹುದು ಎಂದು ಯೋಚಿಸುತ್ತಿರುವೆ.

(ಫೋಟೋಗಳೂ ಲೇಖಕರವು)

Advertisements