ಶೀನಪ್ಪ ಗೌಡರು ಹೇಳಿದ ಧರ್ಮರಾಯನ ಕಥೆ

2011-04-06_6733ಈ ಊರ ದಾರಿಯ ಪರಿಮಳವೇ ಹಾಗೆ!ಸುತ್ತಿ ಸುರುಳಿ ಏರುತ್ತ ಮೆಲ್ಲಗೆ ಬಾಲ್ಯಕಾಲದ ಸುಖದೊಳಕ್ಕೆ ಕರೆದೊಯ್ಯುತ್ತಿರುವ ಹಳೆಯ ಮಣ್ಣಿನ ರಸ್ತೆ.ರಸ್ತೆ ಶುರುವಾಗುತ್ತಿದ್ದಂತೆ ಎಡಕ್ಕೆ ಎತ್ತರಕ್ಕಿರುವ ಬರೆಯ ಮೇಲೆ ಈಗಲೂ ಹಾಗೇ ಇರುವ ಶೇಂದಿ ಮಾರುವ ಆ ಮಲಯಾಳೀ ಮುದುಕಿಯ ಗುಡಿಸಲು. ಆಕೆ ನಾವು ಮಕ್ಕಳಾಗಿರುವಾಗ ಎತ್ತರಕ್ಕೆ ಕಟ್ಟು ಮಸ್ತಾಗಿ ನಡುಗಾಲದ ಜಗದೇಕ ಸುಂದರಿಯಂತಿದ್ದಳು.ಇಪ್ಪತ್ತು ವರ್ಷಗಳ ಹಿಂದೊಮ್ಮೆ ದಾರಿ ತಪ್ಪಿದ ಅಪರಿಚಿತನಂತೆ ಅವಳ ಗುಡಿಸಲೊಳಗೆ ಹೊಕ್ಕಾಗ ಬೊಚ್ಚು ಬೊಚ್ಚು ಬಾಯಿಯ ಮುದುಕಿಯಾಗಿದ್ದಳು ಮೊನ್ನೆ ಬುಧವಾರ ಇನ್ನೊಮ್ಮೆ ಅಲ್ಲಿ ಹೊಕ್ಕಾಗ ಆಕೆ ತೀರಿ ಹೋಗಿ ವರ್ಷಗಳೇ ಆಗಿದ್ದವು.ಬೇರೆ ಯಾವುದೋ ಹೆಂಗಸೊಂದು ಚಂದವಾಗಿ ನೆಲದ ಮೇಲೆ ಕುಕ್ಕುರುಗಾಲಲ್ಲಿ ಕುಳಿತು, ಬೆಕ್ಕೊಂದರ ಮೈಸವರುತ್ತಾ, ತನ್ನ ಸೇಂದಿಯ ತಾಜಾತನದ ಗುಣಗಾನ ಮಾಡುತ್ತಿದ್ದಳು.
ಅದನ್ನೆಲ್ಲಾ ಕೇಳಿಸಿಕೊಂಡು, ಅಲ್ಲೆಲ್ಲಾ ಅಲೆದಾಡಿ, ಕತ್ತಲಾಗುವ ಹೊತ್ತಲ್ಲಿ ಶೀನಪ್ಪ ಗೌಡರ ಹಳೆಯ ಕಾಲದ ಮನೆಯ ಮುಂದಿನ ಅಡಿಕೆ ಚಪ್ಪರದಲ್ಲಿ ಹರಟುತ್ತಾ ಕುಳಿತಿದ್ದೆವು.ಶೀನಪ್ಪ ಗೌಡರು ಆ ಊರಿಗೆ ಹಿರಿಯರು.ಜೊತೆಗೆ ತಾಳಮದ್ದಲೆಯ ಕಲಾವಿದರೂ ಕೂಡ.ರಾಮ, ರಾವಣ, ಕರ್ಣ, ಮಹಿಷಾಸುರ ಎಲ್ಲವನ್ನೂ ಮಾಡಿದವರು.ಜೀವನದಲ್ಲೂ ತುಂಬಾ ಅನುಭವಿಸಿದವರು.ಸಣ್ಣ ವಯಸ್ಸಲ್ಲೇ ಟೈಲರಾಗಿ ಖುಷಿಯಲ್ಲಿದ್ದ ಅವರನ್ನು ಮದುವೆ ಮಾಡಿಸಿ ಬಿಟ್ಟಿದ್ದರು.ಆಮೇಲೇನು ಮಾಡುವುದು ಎಂದು ಗೊತ್ತಾಗದೆ ಅವರು ಅಲ್ಲೇ ಬೆಟ್ಟದ ಮೇಲೆ ಇದ್ದ ಬ್ರಿಟಿಷ್ ದೊರೆಗಳ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ದೊಡ್ಡ ದೊರೆ,ದೊರೆಯ ತಂಗಿ,ದೊರೆಯ ತಮ್ಮ. ಮೂವರೂ ಮದುವೆಯಾಗಿರಲಿಲ್ಲ.ಹ್ಯಾಟು,ಬೂಟು ಹಾಕಿಕೊಂಡು ಕುದುರೆಯ ಮೇಲೆ ಅಲ್ಲೆಲ್ಲಾ ಓಡಾಡಿಕೊಂಡಿದ್ದರು.ಒಂದು ಸಲ ದೊರೆಯ ತಮ್ಮ ಕುದುರೆಯ ಮೇಲೆ ಹೋಗುತ್ತಿರುವಾಗ ಮಲಯಾಳಿ ತರುಣಿಯೊಬ್ಬಳು ಆತನನ್ನು ನೋಡಿ ನಗಾಡಿದಳಂತೆ.‘ಏನು ನಗುತ್ತೀಯಾ’ಎಂದು ಆ ದೊರೆ ಆಕೆಯನ್ನು ಕಟ್ಟಿಕೊಂಡನಂತೆ. ಆಕೆ ಗರ್ಭವತಿಯೂ ಆದಳಂತೆ.ಗರ್ಭವತಿಯಾದವಳಿಗೆ ಹೆರಿಗೆಯಲ್ಲಿ ತೊಂದರೆಯಾಗಿ ಆಕೆಯ ಹೊಟ್ಟೆಯನ್ನು ಕೊಯ್ದು ಮಗುವನ್ನು ಹೊರಗೆ ತೆಗೆಯಬೇಕಾಯಿತಂತೆ. ಹಾಗೆ ಕೊಯ್ಯುವಾಗ ಆ ಮಗುವಿನ ತಲೆಗೆ ಗಾಯವಾಗಿ ಆ ಮಗುವು ಬೆಳೆದು ದೊಡ್ಡವನಾದಾರೂ ತಲೆ ಕೆಟ್ಟವನಂತೆ ಆಡುತ್ತಿದ್ದನಂತೆ.‘ಅಯ್ಯೋ ಈ ಇಂಡಿಯಾದ ಸಹವಾಸವೇ ಬೇಡ’ ಎಂದು ಆ ದೊರೆಗಳು ಆ ಮಗುವಿನ ಸಮೇತ ಲಂಡನ್ನಿಗೇ ಹೊರಟು ಹೋದರಂತೆ.
ಶೀನಪ್ಪ ಗೌಡರು ಈ ಕಥೆ ಹೇಳುವಾಗ ಆ ಕತ್ತಲಲ್ಲಿ ಚಿಮಿಣಿಯ ದೀಪವೊಂದು ಮಾತ್ರ ಉರಿಯುತ್ತಿತ್ತು.ಅವರ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪುಡಿಮಕ್ಕಳು, ನೆರೆಯವರು ಎಲ್ಲಾ ಆ ಬೆಳಕಲ್ಲಿ ಕುಳಿತು ಆ ಕಥೆ ಕೇಳುತ್ತಿದ್ದರು.ಶೀನಪ್ಪ ಗೌಡರು ಆ ದೊರೆಗಳ ಮುಖದ ಬಣ್ಣವನ್ನೂ,ಅವರ ಅಹಂಕಾರವನ್ನೂ,ಔದಾರ್ಯವನ್ನೂ,ಅವರ ಆಹಾರ,ವಿಹಾರ,ಹಾದರ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾ ತಮ್ಮ ಕಷ್ಟಗಳನ್ನು ಒಂದು ರೀತಿಯ ನಗುವಿನಿಂದ ಮರೆಸಲು ನೋಡುತ್ತಿದ್ದರು.
‘ಇವರ ಕಥೆಯೇನು ಕಮ್ಮಿಯಾ,ಹೇಳಿ ಗೌಡರೇ’ಎಂದು ನೆರೆ ಮನೆಯ ಇನ್ನೊಬ್ಬ ಮುದುಕ ಪುಸಲಾಯಿಸಲು ನೋಡುತ್ತಿದ್ದರು.
‘ಬೇರೆ ಏನಿಲ್ಲ ಸರ್ಪ ದೋಷವೊಂದು ಬಿಟ್ಟರೆ’ ಎಂದು ಶೀನಪ್ಪ ಗೌಡರು ಮಾತು ತಪ್ಪಿಸಲು ಹೆಣಗುತ್ತಿದ್ದರು..ಮದುವೆಯಾಗಿ, ತಂದೆ ತಾಯಿಯರನ್ನೂ, ತಮ್ಮ ತಂಗಿಯರನ್ನೂ, ಹೆಂಡತಿ ಮಕ್ಕಳನ್ನೂ ಸಲಹಿ ಹೈರಾಣಾಗಿದ್ದ ಶೀನಪ್ಪ ಗೌಡರ ಕೊಟ್ಟಿಗೆಯೊಳಕ್ಕೆ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಮರಿ ನಾಗರವೊಂದು ಬಂದು ಸೇರಿಕೊಂಡಿತ್ತು.ಯಾರದೋ ಮಾತು ಕೇಳಿದ ಗೌಡರ ಮಗ ಹಾವು ಸೇರಿಕೊಂಡಿದ್ದ ಜಾಗಕ್ಕೆ ಸೀಮೆಣ್ಣೆ ಎರಚಿ ಬೆಂಕಿ ಹಾಕಿದ್ದ .ಆ ಮರಿ ಹಾವು ಬೆಂದು ವಿಲವಿಲ ಒದ್ದಾಡುತ್ತಾ ಹೊರಬಂದು ಗೌಡರ ಕಾಲಕೆಳಗೆ ಒಂದು ದೊಡ್ಡ ನಿಟ್ಟುಸಿರು ಬಿಟ್ಟು ಪ್ರಾಣ ಬಿಟ್ಟಿತ್ತು.
ಅದಾದ ನಂತರ ಗೌಡರ ಮಗ ಅಡಿಕೆ ಮರದಿಂದ ಬಿದ್ದು ಅರೆ ಜೀವವಾಗಿದ್ದ.ಹೆಂಡತಿಗೆ ಸೀಕು ಹಿಡಿದಿತ್ತು.ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಕಷ್ಟವಾಗಿತ್ತು.ಅಷ್ಟು ಹೊತ್ತಿಗೆ ಇನ್ನಷ್ಟು ಹಾವುಗಳು ಅಲ್ಲೆಲ್ಲ ಕಾಣಿಸಿಕೊಳ್ಳಲು ತೊಡಗಿತ್ತು.ಕೊನೆಗೆ ಅವರಿರುವ ಮನೆ ಒಂದು ಕಾಲದಲ್ಲಿ ನಾಗಸ್ಥಾನವಾಗಿತ್ತು ಎಂಬುದೂ ಗೊತ್ತಾಗಿಬಿಟ್ಟಿತ್ತು.ಆಮೇಲೆ ಅವರು ಆ ಮನೆಯನ್ನು ನಾಗಸ್ಥಾನವನ್ನಾಗಿ ಮಾಡಿ, ಇನ್ನೊಂದು ಕಡೆ ಮನೆ ಮಾಡಿ ಹೇಗೋ ಬದುಕುತ್ತಿರುವಾಗ ಇನ್ನಷ್ಟು ತೊಂದರೆಗಳು ಕಾಣಿಸಿಕೊಂಡು,ಅಡಿಕೆ ತೋಟಕ್ಕೆ ಹಳದಿ ರೋಗವೂ ಬಂದು ಇದೆಲ್ಲಾ ವಾಸ್ತು ದೋಷ ಎಂದು ಗೊತ್ತಾಗಿ ಆ ಮನೆಯ ದೊಡ್ಡ ದೊಡ್ಡ ಕೋಣೆಗಳನ್ನು ಕತ್ತರಿಸಿ ತುಂಡು ತುಂಡು ಗೋಡೆಗಳನ್ನಾಗಿ ಮಾಡಿ ಆ ಮನೆಯೇ ಒಂದು ದೊಡ್ಡ ಚಕ್ರವ್ಯೂಹದಂತೆ ತಮಾಷೆಯಾಗಿ ಕಾಣುತ್ತಿತ್ತು.
2011-04-05_6942‘ಹೋಗಲಿ ಬಿಡಿ ಶೀನಪ್ಪ ಗೌಡರೇ, ಹೇಳಿಕೊಳ್ಳಲು ಇಷ್ಟವಿಲ್ಲದಿದ್ದರೂ ನಿಮ್ಮಿಂದ ಕಷ್ಟಗಳನ್ನು ಹೇಳಿಸಿಬಿಟ್ಟೆ.ನಿಮಗೆ ಯಕ್ಷಗಾನ ತಾಳ ಮದ್ದಲೆಯ ಯಾವ ಪಾತ್ರ ಇಷ್ಟ ಹೇಳಿ’ ಎಂದೆ.
‘ಇಷ್ಟ ಎಲ್ಲವೂ ಇಷ್ಟವೇ,ಯಾವುದು ಇಷ್ಟ ಎಂದು ಹೇಳುವುದು’ಎಂದು ಗೌಡರು ನಾಚಿಕೊಂಡರು.
‘ಇವರದು ಧರ್ಮರಾಯನ ಪಾತ್ರ ಚಂದ’ ಎಂದು ಅದಾಗಲೇ ಸಾಕಷ್ಟು ವಯಸ್ಸಾಗಿ ಹೋಗಿದ್ದ ಆಕೆಯ ಮಗಳು ಅಂದಳು.
‘ಅಯ್ಯೋ ಭಾರೀ ಕಷ್ಟ ಪಟ್ಟಿದ್ದಾರೆ ಜೀವನದಲ್ಲಿ ಇವರು ಬಿಡಿ’ ಎಂದು ನೆರೆಮನೆಯ ಮುದುಕನೂ ತಲೆ ಆಡಿಸಿದ.
ಹೇಳಿ ಹೇಳಿ ಎಂದು ಉಳಿದವರೆಲ್ಲರೂ ಅವರನ್ನು ಪೂಸಿ ಹೊಡೆಯಲು ತೊಡಗಿದರು.
‘ಹೇಳುತ್ತೇನೆ ಕೇಳಿ.ಆದರೆ ಮೊದಲಿಂದ ಅಲ್ಲ.ಕೊನೆಗೆ ರಾಜ್ಯಬಾರವೆಲ್ಲ ಮುಗಿಸಿ ಪಂಚ ಪಾಂಡವರು ದ್ರೌಪದಿಯನ್ನು ಸೇರಿಸಿಕೊಂಡು ಸ್ವರ್ಗಕ್ಕೆ ಹೋಗುತ್ತಾರಲ್ಲ ಅಲ್ಲಿಂದ’ ಎಂದು ಶೀನಪ್ಪ ಗೌಡರು ಶುರು ಮಾಡಿದರು.
ಸ್ವರ್ಗದ ಕಡೆ ನಡೆಯುತ್ತಿದ್ದ ಧರ್ಮರಾಯ ಹಿಂದೆ ತಿರುಗಿದಾಗ ದ್ರೌಪದಿ ದಾರಿಯಲ್ಲೇ ತೀರಿ ಹೋಗಿದ್ದಳಂತೆ.ಅಯ್ಯೋ ಹೋದಳಲ್ಲಾ ಎಂದು ಮರುಗಿ ಇನ್ನೂ ಮುಂದೆ ನಡೆದು ತಿರುಗಿ ನೋಡಲು ಇನ್ನೂ ಒಬ್ಬೊಬ್ಬರಾಗಿ ತೀರಿ ಹೋಗಿದ್ದರಂತೆ.
‘ಅಯ್ಯೋ ಭೀಮಾ.ಎಲ್ಲರೂ ಹೋದರಲ್ಲಾ’ ಎಂದು ತಿರುಗಿ ನೋಡಿದರೆ ಆತನೂ ಸತ್ತು ಬಿದ್ದಿದ್ದನಂತೆ.
‘ ಅಯ್ಯೋ ಸ್ವರ್ಗದಲ್ಲಿ ನೀನಾದರೂ ಇರು ಮಾರಾಯ ಹೆದರಿಕೆಯಾಗುತ್ತದೆ’ ಎಂದು ಧರ್ಮರಾಯ ಭೀಮನ ತೀರಿಹೋದ ದೇಹವನ್ನು ಬೆನ್ನ ಮೇಲೆ ಎತ್ತಿಕೊಂಡು ಸ್ವರ್ಗದ ಕಡೆ ನಡೆಯುತ್ತಿದ್ದನಂತೆ.
ಹಾಗೆ ನಡೆಯುತ್ತಿರಲು ಅವನ ಹಿಂದೆ ನಡೆಯುತ್ತಿದ್ದುದು ಒಂದು ಬಡಕಲು ನಾಯಿಯೊಂದು ಮಾತ್ರವಂತೆ.
ಆಗ ಮುಂದೆ ದಾರಿಯಲ್ಲಿ ಒಬ್ಬ ಬಡ ಬ್ರಾಹ್ಮಣ ಒಂದು ತುಳಸಿಗಿಡವನ್ನು ತಲೆಕೆಳಗಾಗಿ ಮಣ್ಣಲ್ಲಿ ನೆಟ್ಟು ತೆಂಗಿನ ಚಿಪ್ಪಿನ ತೂತದಿಂದ ಅದಕ್ಕೆ ನೀರು ಹೊಯ್ಯುತ್ತಿದ್ದನಂತೆ.ಅದನ್ನು ನೋಡಿದ ಧರ್ಮರಾಯನಿಗೆ ನಗು ಬಂತಂತೆ.
ಅದನ್ನು ನೋಡಿದ ಆ ಬ್ರಾಹ್ಮಣನಿಗೂ ಸಿಟ್ಟು ಬಂತಂತೆ.
‘ಅಲ್ಲಾ ಮಾರಾಯ ನೀನು ಸತ್ತು ಹೋದ ಹೆಣವನ್ನು ಹೊತ್ತುಕೊಂಡು ಸ್ವರ್ಗಕ್ಕೆ ಹೋಗುತ್ತಿದ್ದೀಯಲ್ಲಾ.ನಾನು ತಲೆಕೆಳಗಾದ ತುಳಸಿಯನ್ನು ಬದುಕಿಸಬಾರದಾ’ ಎಂದು ಕೇಳಿ ಆತನೂ ನಕ್ಕನಂತೆ.
ಆಗ ಧರ್ಮರಾಯನು ಭೀಮನ ದೇಹವನ್ನು ಬೆನ್ನಿಂದ ಬಿಸುಟು ಒಬ್ಬನೇ ಆ ನಾಯಿಯ ಜೊತೆ ಮುಂದೆ ನಡೆದನಂತೆ.
ಮುಂದೆ ಒಂದು ಸರೋವರ.ಅದು ಕಳೆದರೆ ಸ್ವರ್ಗ.ಆ ಸರೋವರದ ಮೇಲೆ ಒಂದು ಸೇತುವೆ.ಅಂತಿಂಥ ಸೇತುವೆಯಲ್ಲ.ಒಂದು ಬಾಳೆಯ ನಾರನ್ನು ಏಳು ಸೀಳುಗಳನ್ನಾಗಿ ಮಾಡಿ ಅದರ ಒಂದು ಸೀಳಿಂದ ಮಾಡಿದ ಸೇತುವೆ.
‘ಅಂತೂ ಹೇಗೋ ಧರ್ಮರಾಯ ಆ ಸೇತುವೆಯನ್ನು ದಾಟಿ ಸ್ವರ್ಗಕ್ಕೆ ಹೋದ ಮಾರಾಯರೇ.ನಮ್ಮಿಂದೆಲ್ಲ ಅದನ್ನು ದಾಟಲು ಆಗುತ್ತದೆಯಾ.ಸುಮ್ಮನೆ’ ಎಂದು ಶೀನಪ್ಪಗೌಡರು ತಮ್ಮ ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಆ ಕಥೆ ಹೇಳಿ ಮುಗಿಸಿದರು.
ಅವರಿಂದ ಖಂಡಿತ ಆಗುತ್ತದೆ ಎಂಬಂತೆ ಅಲ್ಲಿ ನೆರೆದಿದ್ದ ಬಹುತೇಕರು ಕಣ್ಣೀರು ತುಂಬಿಕೊಂಡು ಕುಳಿತಿದ್ದರು.
ಆಮೇಲೆ ವಿಷಯ ಬದಲಿಸಲು ನಾನು ಕೆಲವು ತಮಾಷೆಗಳನ್ನು ಹೇಳಿದೆ.ಅವರೂ ಹೇಳಿದರು.
ಅದರಲ್ಲಿ ಒಂದು ತಮಾಷೆ ಸುಮಾರು ಇನ್ನೂರು ವರುಷಗಳ ಹಿಂದೆ ನಡೆದ ಒಂದು ಜಗಳದ ಕಥೆ.
ಅದೂ ಒಂದು ಹಲಸಿನ ಹಣ್ಣಿನ ವಿಷಯಕ್ಕೆ ನಡೆದ ಜಗಳ.ಆ ಕಥೆಯನ್ನು ಹೇಳಿದವರು ಶೀನಪ್ಪ ಗೌಡರ ನೆರೆಮನೆಯ ಮುದುಕ.
ಆ ಮುದುಕನ ಅಜ್ಜನ ಅಜ್ಜ ಒಂದು ಹಲಸಿನ ಹಣ್ಣು ಕೊಯ್ಯುವಾಗ ಆದ ಜಗಳದಿಂದಾಗಿ ಘಟ್ಟದ ಕೆಳಗಿನ ತನ್ನ ಮೂಲ ಮನೆಯಿಂದ ಸಿಟ್ಟು ಮಾಡಿಕೊಂಡು ಬಂದು ಇಲ್ಲಿ ನೆಲಸಿದನಂತೆ.ಜಗಳಕ್ಕೆ ಕಾರಣವಾದ ಆ ಹಲಸಿನ ಮರ ಇನ್ನೂ ಅಲ್ಲಿ ಘಟ್ಟದ ಕೆಳಗೆ ಹಣ್ಣು ಬಿಟ್ಟುಕೊಂಡು ನಿಂತಿದೆಯಂತೆ
ಆ ಮುದುಕನ ಮನೆತನದ ಹೆಸರಿನಿಂದಲೇ ಈ ಊರಿಗೆ ಈ ಹೆಸರು ಬಂದಿದೆ.ಅವರದೇ ಆ ಕಾಡಿನೊಳಗಡೆಯ ಮೊದಲ ಮನೆ ಆಗಿತ್ತಂತೆ.

ಆನಂತರ ಬಂದವರು ಬ್ರಿಟಿಷ್ ದೊರೆಗಳು.ಅವರು ತಮ್ಮ ಬಂಗಲೆಯನ್ನು ಬ್ಯಾರಿಗಳಿಗೂ,ತೋಟವನ್ನು ಅಡಿಕೆ ಭಟ್ಟರೊಬ್ಬರಿಗೂ ಮಾರಿ ಲಂಡನ್ನಿಗೆ ಹೊರಟು ಹೋದರಂತೆ.ಹೋಗುವಾಗ ಮಲಯಾಳಿ ಹೆಂಗಸನ್ನು ಬಿಟ್ಟೇ ಹೋದರಂತೆ.
ಆಕೆ ಕೆಲವು ವರ್ಷ ಕೋರ್ಟು ಖಚೇರಿಗೆ ಓಡಾಡಿ ಸುಸ್ತಾಗಿ ಒಂದು ಸೇಂದಿ ಗುಡಿಸಲು ಇಟ್ಟುಕೊಂಡು ಬದುಕುತ್ತಿದ್ದಳಂತೆ. ಆಮೇಲೆ ತಾನೂ ತೀರಿ ಹೋದಳಂತೆ.
ಸಣ್ಣವನಿರುವಾಗ ಇದು ಯಾವುದೂ ಗೊತ್ತಿಲ್ಲದೆ ಸೇಂದಿ ಮಾರುವ ಮಲಯಾಳಿ ಹೆಂಗಸಿನ ಮುಖವನ್ನು ಕದ್ದು ಮುಚ್ಚಿ ನೋಡುತ್ತಾ ಓಡಾಡುತ್ತಿದ್ದ ನಾನು.ಈಗ ವDSC_0080ಯಸ್ಸುಗಾಲದಲ್ಲಿ ಗೊತ್ತಾಗುತ್ತಿರುವ ಕಥೆಗಳು!
ವಾಪಾಸು ಬರುವಾಗ ದಾರಿಯಲ್ಲಿ ಆ ಸೇಂದಿಯ ಅಂಗಡಿ ಹಾಗೇ ನಿಂತಿತ್ತು.
ಸೇಂದಿ ಅಂಗಡಿಯ ಹೆಂಗಸು ಗೇರು ಮರವೊಂದರ ಕೆಳಗೆ ನಿಂತುಕೊಂಡು ರಸ್ತೆಯನ್ನು ನೋಡುತ್ತಿದ್ದಳು.
ಒಂದೆರೆಡು ದನಗಳೂ ಆ ನೆರಳಲ್ಲಿ ನಿಂತುಕೊಂಡು ಬಾಯಿ ಅಲ್ಲಾಡಿಸುತ್ತಿದ್ದವು.

Advertisements