`ಕೈವಿಷ’ ಎಂಬ ಕಥೆಯು

ಸುಮ್ಮನೆ ಹರಿಯುವ ಕಾವೇರಿಯ ಈ ಕಡೆ ನಿಂತು ಅಸಹಾಯಕನಾಗಿ ನೀವು ಒಂದು ದೊಡ್ಡ ಕೂಗು ಹಾಕಿದರೆ, ಅಥವಾ ನಿಮಗೆ ಜೋರಾಗಿ ಸಿಳ್ಳೆ ಹಾಕಲು ಗೊತ್ತಿದ್ದರೆ ಆ ಕಡೆಯಿಂದ ಒಬ್ಬಳು ಪುಟ್ಟ ಹುಡುಗಿ ಕರುವಿನಂತೆ ಓಡುತ್ತಾ ಬಂದು ಕಟ್ಟಿ ಹಾಕಿರುವ ಬಿದಿರಿನ ತೆಪ್ಪವನ್ನು ಬಿಚ್ಚಿ ಈ ಕಡೆ ಹುಟ್ಟು ಹಾಕುತ್ತಾ ಬಂದು ನಿಮ್ಮನ್ನು ಕರೆದೊಯ್ಯುತ್ತಾಳೆ.ನಿಮಗೆ ಹೆದರಿಕೆಯಾದರೆ, ಆ ಬಾಲಕಿಯ ಹೆಸರನ್ನೂ,ವಯಸ್ಸನ್ನೂ,ಓದುತ್ತಿರುವ ಕ್ಲಾಸನ್ನೂ ಕೇಳುತ್ತಾ ನೀವೆಷ್ಟು ಆಳದ ಮೇಲೆ ತೇಲುತ್ತಿರುವಿರಿ ಎಂಬುದನ್ನು ಊಹಿಸುವುದ ಮರೆ2010-12-14_3680ತು ಈ ಕಡೆ ತಲುಪಬಹುದು.ನೀವು ಮಾತುಗಾರರಾಗಿದ್ದರೆ ಆ ಬಾಲಕಿ ನಿಮಗಿಂತ ಚುರುಕಿನ ಮಾತುಗಾರಳಾಗಿ ದಡ ತಲುಪಿಸುತ್ತಾಳೆ.ನೀವು ಗಂಭೀರ ಮನುಷ್ಯಳಾದರೆ ಆಕೆಯೂ ಗಂಭೀರವೇ.ದಡ ತಲುಪಿಸಿ ಮಾಯವಾಗುತ್ತಾಳೆ.

ಆವತ್ತು ಯಾಕೋ ನಾನೂ ಕೊಂಚ ಗಂಭೀರವಾಗಿ ಈ ಕಡೆ ತಲುಪಿದ್ದೆ.ಶಾಲೆಗೆ ಹೋಗುವ ಈ ಬಾಲಕಿ,ಹರಿಯುತ್ತಿರುವ ಈ ನೀರು,ಅವಳ ಊರಿಗೊಂದು ಕಾಲು ಸೇತುವೆಯನ್ನಾದರೂ ಕರುಣಿಸದ ಸರಕಾರ, ಅವಳ ಊರಿನ ಬಡತನ, ಕಷ್ಟಗಳು, ಇದನ್ನೆಲ್ಲ ಬರಿಯ ಬಾಯಿ ಮಾತಲ್ಲಿ ವರದಿ ಮಾಡಿ ಹೋಗಬೇಕಾಗಿರುವ ನನ್ನ ಎಡಬಿಡಂಗಿ ಜೀವಿತ- ಇದನ್ನೆಲ್ಲ ಯೋಚಿಸುತ್ತಾ ಆ ಬಾಲಕಿಯೂ ಮನದಿಂದ ಮಾಯವಾಗಿದ್ದಳು.ಆ ಊರಿನವರೂ ಅವರವರ ಕೆಲಸಗಳಲ್ಲಿ ಮುಳುಗಿದ್ದರು.ಕೊಯ್ಲು ಮುಗಿಸಿದ ಗದ್ದೆಯಿಂದ ಒಣ ಹುಲ್ಲನ್ನು ಪೇರಿಸಿಡುವುದು,ಕರೆದು ಮುಗಿಸಿದ ಎಮ್ಮೆ ಹಸುಗಳನ್ನು ಕಟ್ಟಿ ಹಾಕುವುದು,ಸುಮ್ಮನೇ ತಲೆ ಕೆರೆಯುತ್ತಾ ಆಕಳಿಸುವುದು ಇತ್ಯಾದಿ.

ಆ ಊರಲ್ಲಿ ನನ್ನನ್ನು ತಿರುಗಾಡಿಸಬೇಕಾದ ಆ ಹೆಂಗಸು ಇನ್ನೂ ಬಂದಿರಲಿಲ್ಲ. ಆಕೆ ಆ ಊರಿನ ಸೂಲಗಿತ್ತಿಯೆಂದೂ,ಎಲ್ಲೋ ಎಡವಟ್ಟಾಗಿರುವ ಹೆರಿಗೆ ಕೇಸೊಂದನ್ನು ಸರಕಾರೀ ಆಸ್ಪತ್ರೆಗೆ ಸೇರಿಸಲು ಹೋಗಿರುವಳೆಂದೂ,ಆಕೆ ಬರುವವರೆಗೆ ನಾನು ಕಾಯಲೇ ಬೇಕಾಗುತ್ತದೆಂದೂ ಅವರೆಲ್ಲರು ಅವರವರ ಕೆಲಸದಲ್ಲಿ ಮುಳುಗಿದ್ದರು.

ಕತ್ತಲು ಕವಿಯುತ್ತಿದ್ದಂತೆ ಆ ಕತ್ತಲನ್ನು ಇನ್ನಷ್ಟು ಕತ್ತಲು ಮಾಡುವಂತೆ ಕಪ್ಪು ಬುರುಖಾ ಹಾಕಿಕೊಂಡಿದ್ದ ಹೆಂಗಸೊಬ್ಬಳು ‘ಅಯ್ಯೋ ಅಣ್ಣಾ, ಬಂದು ತುಂಬಾ ಹೊತ್ತಾಯಿತಾ.sorry ಎಮರ್ಜೆನ್ಸಿ ಹೆರಿಗೆ, ಆಸ್ಪತ್ರೆಗೆ ಹೋಗಬೇಕಾಯಿತು.ನಿಮ್ಮನ್ನು ಕಾಯಿಸಿದೆ ಗಂಡು ಮಗು,sorry’ ಎಂದು ಆ ಕತ್ತಲಲ್ಲಿ ಪಟಪಟ ಮಾತನಾಡುತ್ತಾ ಅಲ್ಲೆಲ್ಲಾ ಜೀವ ತುಂಬ ತೊಡಗಿದಳು.ಅವಳಾರೆಂದು ಕೇಳುವ ಮೊದಲೇ ತಾನು ಯಾರೆಂದು ಮಾತಲ್ಲೇ ತೋರಿ ಮಾಯಾವಿಯಂತೆ ಬುರುಖಾದೊಳಗಿಂದಲೇ ಅಲ್ಲೆಲ್ಲ ಜೀವ ತುಂಬಿಸುತ್ತಿದ್ದಳು.
ಅದುವರೆಗೆ ಕೊಂಚ ಬಿಗಿದುಕೊಂಡೇ ಇದ್ದ ಅಲ್ಲಿನ ಗಂಡಸರು,ಮುದುಕರು,ಮಕ್ಕಳು ಆಕೆಯ ಆಗಮನವಾಗುತ್ತಿದ್ದಂತೆ ನನ್ನನ್ನೂ ಪರಿಚಿತರಂತೆ ನೋಡತೊಡಗಿದ್ದರು.‘ ಓ ಏನಯ್ಯಾ, ಏನಕ್ಕಾ ,ಏನಪ್ಪಾ ಮುದುಕಾ’ ಎಂದೆಲ್ಲ ಬುರುಕಾದೊಳಗಿಂದಲೇ ಚುರುಕಾಗಿ ನಗುತ್ತಾ ಮಾತನಾಡಿಸುತ್ತಾ ಆಕೆ ಅವರೆಲ್ಲರನ್ನೂ ಸಡಿಲಗೊಳಿಸಿ, ‘ಬನ್ನಿ ಹೋಗುವಾ’ ಎಂದು ನನ್ನನ್ನೂ ಆ ಊರೊಳಗೆ ಒಂದು ಸುತ್ತು ಹಾಕಿಸಿಬಿಟ್ಟಳು.

ಅಚ್ಚರಿಯಾಗುತ್ತಿತ್ತು.ಬಹುಪಾಲು ಸೋಲಿಗರೂ, ಜೇನು ಕುರುಬರೂ, ಒಕ್ಕಲಿಗರೂ, ಲಿಂಗಾಯಿತರೂ ಹಾಗೂ ಕಡು ಬಡವರೂ ಆಗಿರುವ ಆ ಊರಿನ ಮನೆಗಳೊಳಕ್ಕೆ ಬುರುಕಾ ಹಾಕಿರುವ ಈ ಹೆಂಗಸಿನ ಪ್ರವೇಶವಾಗುತ್ತಿದ್ದಂತೆ ಪುಟಿದೇಳುತ್ತಿದ್ದ ನಗು, ಹೊರಬರುತ್ತಿದ್ದ ಹಳೆಯ ತಮಾಷೆಗಳು, ಹೊಸ ಕಾಯಿಲೆಗಳ ವಿಷಯ, ಅದಕ್ಕೆ ಅವಳು ನೀಡುತ್ತಿದ್ದ ಗುಳಿಗೆಗಳಂತಹ ಉತ್ತರಗಳು, ಅವಳ ಕೀಟಲೆಯ ಕನ್ನಡ ಎಲ್ಲವೂ ಸಖತ್ ಮಜಾ ನೀಡುತ್ತಿದ್ದವು.

ಆ ಕತ್ತಲಲ್ಲಿ ಎಲ್ಲ ಮನೆಗಳನ್ನೂ, ಮನುಷ್ಯರನ್ನೂ ತೋರಿಸಿ ಮುಗಿಸಿದ ಆಕೆ, ‘ಸ್ವಲ್ಪ ಹೊತ್ತು ಕುಳಿತುಕೊಳ್ಳೋಣವಾ, ನನಗೆ ಕಾಲುನೋವು’ ಎಂದು ಸೋಲಿಗನೊಬ್ಬನ ಮನೆಯ ಮುಂದಿನ ತಡಿಕೆಯ ಬೆಂಚಲ್ಲಿ ಕುಳಿತು ಸುಧಾರಿಸಿಕೊಂಡು ಎದ್ದಳು.ಆ ಸೋಲಿಗ ಯಜಮಾನನು ಆ ಕತ್ತಲಲ್ಲಿ ತಂದು ಕೊಟ್ಟ ಕಪ್ಪು ಕಾಫಿಯನ್ನು ಕುಡಿದು ನಾವು ಮತ್ತೆ ಆ ಕತ್ತಲಲ್ಲಿ ನಡೆಯತೊಡಗಿದೆವು.

ಹೂ ಬಿಟ್ಟು ಸಾಯಲು ಸಿದ್ದವಾಗುತ್ತಿರುವ ಬಿದಿರು ಮೆಳೆಗಳು,ಕೊಂಬೆಗಳನ್ನು ಕತ್ತರಿಸಿಕೊಂಡ ತೇಗದ ಮರಗಳು,ಬೊಗಳುವ ಸಾಕು ನಾಯಿಗಳು,ದೂರದಲ್ಲೆಲ್ಲೋ ಕಾಡಾನೆಗಳು ಊರೊಳಗೆ ನುಗ್ಗಲು ಚಡಪಡಿಸುವ ಸದ್ದು,ಮೇಲೆ ಅರ್ದ ಚಂದ್ರ.ಮುಂದೆ ನೆರಳಿನಂತೆ ಬುರುಕಾ ಹಾಕಿಕೊಂಡು ನಡೆಯುತ್ತಿರುವ ಅವಳು.ಹಿಂದೆ ಎಡವುತ್ತಾ ನಡೆಯುತ್ತಿರುವ ನಾನು.

‘ನೀವು ಈ ಊರಲ್ಲಿ ತಂಗುವುದಾದರೆ ನಮ್ಮಲ್ಲೇ ತಂಗಲು ನನ್ನ ಗಂಡ ಹೇಳಿರುವರು.ಅವರು ಮನೆಯಲ್ಲಿ ಒಂದು ನಾಟಿ ಕೋಳಿಯನ್ನು ಇಟ್ಟುಕೊಂಡು ನಿಮಗೆ ಕಾಯುತ್ತಿರುವರು’ ಎಂದು ಅವಳು ಅಂದಳು.‘ನೀವು ತಂಗುವುದಾದರೆ ಬೇರೆಲ್ಲೂ ತಂಗಬಾರದು ಈ ಊರಲ್ಲಿ ಬಹಳ ಜನ ಕೈವಿಷ ಹಾಕುವವರು’ ಎಂದಳು.

‘ಆದರೆ ತಂಗುವುದಾದರೆ ಒಂದು ವಿಷಯ ಮೊದಲೇ ಹೇಳಿ ಬಿಡುತ್ತೇನೆ.ನಮ್ಮ ಯಜಮಾನರಿಗೆ ನಾವಿಬ್ಬರು ಹೆಂಡತಿಯರು.ಮೂವರೂ ಜೊತೆಗಿರುವೆವು.ಆಮೇಲೆ ಅಲ್ಲಿಗೆ ಬಂದು ನಿಮಗೆ ಗೊಂದಲವಾಗಬಾರದು ಮೊದಲೇ ಹೇಳಿ ಕರಕೊಂಡು ಬರಲು ಹೇಳಿದ್ದಾರೆ ನಮ್ಮ ಯಜಮಾನರು’ ಎಂದೂ ಹೇಳಿದಳು.

ನಾವಿಬ್ಬರೂ ನಡೆದು ಅಲ್ಲಿಗೆ ತಲುಪಿದಾಗ ಯಜಮಾನರು ನಸುನಗುತ್ತಾ ಎದುರುಗೊಂಡರು.ತೀರಾ ಸೌಜನ್ಯದ ಸಂಕೋಚದ ಆ ಮನುಷ್ಯ ನೋಡಲು ನನಗಿಂತ ಸಣ್ಣವನೂ ಒಳ್ಳೆಯವನೂ ಆಗಿ ಕಾಣಿಸುತ್ತಿದ್ದರು ಮತ್ತು ಈ ಹಿಂದೆ ಎಲ್ಲಿಯೋ ನೋಡಿದಂತಿದ್ದರು.ಆತನಿಗಿಂತಲೂ ಹೆಚ್ಚು ಸೌಜನ್ಯವೂ, ಸಂಕೋಚವೂ,ಕೊಂಚಪ್ರಾಯವೂ ಆದಂತಿದ್ದ ಅವರ ಮೊದಲ ಹೆಂಡತಿಯೂ ಗಂಡನ ಹಿಂದೆ ನಗುತ್ತಾ ಬಂದು ಸಲಾಂ ಹೇಳಿದರು.

ಬುರುಖಾ ಹಾಕಿದ್ದ ಇವಳು ಮನೆಯೊಳಕ್ಕೆ ಹೋಗಿ ಬುರುಕಾ ಬಿಚ್ಚಿ ಹೊರಬಂದು ‘ಇದೇ ನನ್ನ ಫ್ಯಾಮಿಲಿ’ ಎಂದು ತನ್ನ ಸವತಿಯನ್ನೂ, ಗಂಡನನ್ನೂ ಪರಿಚಯಿಸಿದಳು.

ನೋಡಿದರೆ ಅವರು ಮೂವರೂ ಸಹಪಾಠಿಗಳಂತಿದ್ದರು. ಅರಚುತ್ತಿದ್ದ ಆ ನಾಟಿಕೋಳಿಯನ್ನು ಆತ ಶಾಸ್ತ್ರೋಕ್ತವಾಗಿ ಕೊಯ್ಯುವಾಗ ಮೊದಲ ಹೆಂಡತಿಯು ಅದರ ಕಾಲುಗಳನ್ನು ಹಿಡಿದುಕೊಂಡಿದ್ದಳು.ಎರಡನೆಯ ಹೆಂಡತಿಯು ತಪ್ಪಲೆಯಲ್ಲಿ ಕುದಿಯುವ ನೀರನ್ನು ತಂದು ಅದರಲ್ಲಿ ಆ ತೀರಿಹೋದ ಕೋಳಿಯನ್ನು ಮುಳುಗಿಸಿ ಅದರ ತುಪ್ಪಳವನ್ನು ಕಿತ್ತು ತೆಗೆದಳು.ಮೊದಲನೆಯ ಹೆಂಡತಿಯು ತುಪ್ಪಳವನ್ನೆಲ್ಲ ಕಳೆದುಕೊಂಡು ಬೆತ್ತಲೆಯಾಗಿದ್ದ ಆ ಪಾಪದ ಕೋಳಿಯನ್ನು ಬೆಂಕಿಯ ಉರಿಯಲ್ಲಿ ಸಣ್ಣಗೆ ಸುಟ್ಟಳು.ಅವರಿಬ್ಬರ ಆ ಪಾಪದ ಗಂಡನು ಆ ಪಾಪದ ಕೋಳಿಯನ್ನು ಕತ್ತರಿಸಿ ತುಂಡುತುಂಡುಗಳಾಗಿ ಮಾಡಿದನು.

ಹೀಗೆ ಅವರು ಮೂವರು ನಗುತ್ತಾ,ಒಬ್ಬರನ್ನೊಬ್ಬರು ಛೇಡಿಸುತ್ತಾ,ವಿಮರ್ಶಿಸುತ್ತಾ ಯಾವುದೋ ಒಂದು ಪುರಾತನ ಯಂತ್ರದ ಕೀಲುಗಳಂತೆ ಮಸಾಲೆ ಅರೆಯದೇ ಕೇವಲ ಮನೆಯಲ್ಲೇ ಕುಟ್ಟಿಮಾಡಿದ ಮಸಾಲೆ ಪುಡಿಯಿಂದ ಅದ್ಭುತವಾದ ನಾಟಿಕೋಳಿಯ ಸಾರು ಮಾಡಿದರು
2010-12-14_3589ಹೊಗೆ ಬೆಂಕಿಯ ಒಲೆಯಲ್ಲಿ ಆ ಸಾರು ಬೆಂದು ರೆಡಿಯಾಗುವ ಮೊದಲು ಆ ಗಂಡಸು ರಾತ್ರಿಯ ಪ್ರಾರ್ಥನೆ ಮುಗಿಸಿ ಬಂದರು.ಬಂದವರು, ‘ಊಟ ಮಾಡುವ ಮೊದಲು ನನ್ನ ವಿಷಯವನ್ನು ಹೇಳಿ ಬಿಡುತ್ತೇನೆ.ಊಟ ಮಾಡಿದ ಮೇಲೆ ನಿಮಗೆ ಅಸಹ್ಯವಾಗಬಾರದು ಅದಕ್ಕೆ’ ಅಂದರು.ಅದು ಹೌದು ಅನ್ನುವಂತೆ ಎಲೆಯಡಿಕೆ ಜಗಿಯುತ್ತಾ ಅವರ ಇಬ್ಬರು ಹೆಂಡತಿಯರೂ ತಲೆ ಆಡಿಸಿದರು.

‘ಅದಕ್ಕೇನು ಹೇಳಿಯೇ ಬಿಡಿ’ ಅಂದೆ.
‘ನಾನು ಎರಡು ಕೊಲೆ ಮಾಡಿದ್ದೇನೆ.ಅದಕ್ಕಾಗಿ ಎಂಟು ವರ್ಷ ಜೈಲಿಗೂ ಹೋಗಿ ಬಂದು ಈಗ ೧೦ ವರ್ಷಗಳಾದವು’ ಎಂದು ತಣ್ಣನೆಯ ಧ್ವನಿಯಲ್ಲಿ ಅಂದರು.

‘ಅದು ಬೇರೆ ಯಾರನ್ನೂ ಅಲ್ಲ.ಒಬ್ಬಳು ಇವರದೇ ತಂಗಿ.ಇನ್ನೊಬ್ಬ ಬೇರೊಂದು ಧರ್ಮದವನು’ ಎಂದು ಎರಡನೆಯ ಹೆಂಡತಿ ಅಂದಳು.‘ಅವರು ಇವರನ್ನು ಮುಗಿಸುವ ಮೊದಲು ಇವರೇ ಅವರನ್ನು ಮುಗಿಸಿದರು’ ಎಂದು ಮೊದಲ ಹೆಂಡತಿ ಅಂದಳು.
ಊಟ ಮುಗಿಸಿದ ಮೇಲೆ ಅವರು ಮೂವರೂ ಸೇರಿ ಆ ಕಥೆಯನ್ನು ಪೂರ್ತಿಯಾಗಿ ಹೇಳಿ ಮುಗಿಸಿದರು.

ಅದು ತುಂಬ ದೊಡ್ಡ ಕಥೆ.

ಅದು ಒಬ್ಬ ಒಳ್ಳೆಯ ಅಣ್ಣ ಒಬ್ಬಳು ಒಳ್ಳೆಯ ತಂಗಿಯನ್ನು ಕೊಂದ ಕೆಟ್ಟ ಕಥೆ.ಒಂದಿಷ್ಟು ಕೆಟ್ಟ ಮನುಷ್ಯರಿಂದಾಗಿ ವಿನಾ ಕಾರಣ ನಡೆದ ಮರಣಗಳ ಕಥೆ.

ಆ ಕಥೆ ಹೇಳಿ ಮುಗಿಸಿದ ಆ ಗಂಡಸು ‘ಈಗ ಹೇಳಿ ನಿಮಗೇನನಿಸುತ್ತದೆ’ ಎಂದು ಕೇಳಿದರು.

ಬೇರೇನೂ ಹೇಳದೆ ‘ಊಟ ಬಡಿಸಿ’ ಎಂದೆ.

ಬೆಳಗೆ ಎದ್ದಾಗ ಆ ಮನುಷ್ಯ ಪ್ರಾರ್ಥಿಸುತ್ತಾ ಕುಳಿತಿರುವುದು ಕಾಣಿಸಿತು.ಮೊದಲನೆಯ ಹೆಂಡತಿ ಕೋಳಿಗಳನ್ನು ಗೂಡಿನಿಂದ ಹೊರ ಬಿಡುತ್ತಿದ್ದರು.

ಎರಡನೆಯ ಹೆಂಡತಿ ಮೂಗಿನ ತುದಿಗೆ ಕನ್ನಡಕ ಏರಿಸಿಕೊಂಡು ಮಡಿಲಲ್ಲಿ ಒಂದು ಹಳೆಯ ನೋಟು ಬುಕ್ಕು ಹಿಡಿದುಕೊಂಡು ಏನೋ ಬರೆಯುತ್ತಿದ್ದಳು.

ನನ್ನನ್ನು ನೋಡಿ ಆ ಪುಸ್ತಕವನ್ನು ಮುಚ್ಚಿಟ್ಟಳು. ‘ದಿನಾ ಬೆಳಗೆ ಹಿಂದಿನ ದಿನ ಏನೆಲ್ಲಾ ಆಯ್ತು ಎಂದು ಬರೆದಿಡುತ್ತೇನೆ, ಹೀಗೆ ಬರೆದು ತುಂಬಾ ಪುಸ್ತಕಗಳು ಮುಗಿದಿವೆ’ ಅಂದಳು.

ನಾನು ಆ ದಿನದ ವರದಿಗಾರಿಕೆಯ ಕೆಲಸ ಮುಗಿಸಿ ಅಲ್ಲಿಂದ ಹೊರಡುವಾಗ ಆಕೆ ಬುರುಕಾ ಹಾಕಿಕೊಂಡು ಹೊಳೆಯವರೆಗೆ ಬಂದಳು.ತೆಪ್ಪವನ್ನು ಹತ್ತುವ ಮೊದಲು ‘ನಿಮ್ಮಲ್ಲಿ ಒಂದು ವಿಷಯ ಹೇಳಲಾ’ ಅಂದಳು.

‘ನಾವಿಬ್ಬರು ಮದುವೆಯಾಗಿದ್ದೇವೆ.ಆದರೆ ಗಂಡ ಹೆಂಡತಿಯರ ಹಾಗೆ ಇಲ್ಲ,ನನಗೆ ಗಂಡಸರನ್ನು ಕಂಡರೆ ಆಗುವುದಿಲ್ಲ’ ಎಂದಳು.

‘ಬೇರೆ ಗಂಡಸರಿಗೆ ಇವರನ್ನು ಕಂಡರೆ ಹೆದರಿಕೆ.ಕೊಲೆ ಮಾಡಿ ಬಂದವನು ಎಂದು. ಹಾಗಾಗಿ ನಾವಿಬ್ಬರೂ 2010-12-14_3584ಮದುವೆಯಾಗಿದ್ದೇವೆ.ಇವರು ನನಗೆ ರಕ್ಷಣೆ ನೀಡುತ್ತಾರೆ.ಬೇರೇನೂ ಇಲ್ಲ’ ಎಂದಳು

‘ಅದನ್ನೂ ಬೇಗ ಒಂದು ಸಲ ಮುಗಿಸಿ ಬಿಡಿ.ಸಂಗತಿ ಅದಲ್ಲ.ಈ ಊರಿನ ಕೈ ವಿಷದ ವಿಷಯದ ಕುರಿತು ಏನೋ ಕೇಳಬೇಕಿತ್ತು.ಆಗಲೇ ಇಲ್ಲ.ಆದರೆ ನನಗೆ ಈಗ ಸಮಯವಿಲ್ಲ, ಹೋಗಬೇಕಲ್ಲ’ ಎಂದು ಆ ಬಾಲಕಿ ನಡೆಸುತ್ತಿದ್ದ ತೆಪ್ಪ ಹತ್ತಿದೆ.

Advertisements