ಮೈಸೂರಿನ ಹುಲಿಸಂಪಾದಕರು

bಮೈಸೂರಿನಲ್ಲಿ ನಾವು ಕಾಲೇಜು ಕಲಿಯುತ್ತಿದ್ದಾಗ ಒಂದು ಹುಲಿ ಒಂದೇ ಹಾಳೆಯ ಪತ್ರಿಕೆಯೊಂದನ್ನು ನಡೆಸುತ್ತಿತ್ತು.ಪತ್ರಿಕೆಯ ಹೆಸರು ‘ಹುಲಿ ಪತ್ರಿಕೆ’. ಸಂಪಾದಕರು ತಮ್ಮ ನಿಜದ ಹೆಸರನ್ನು ಎಲ್ಲೂ ಹಾಕುತ್ತಿರಲಿಲ್ಲ.ಬದಲಾಗಿ ತಮ್ಮನ್ನು ‘ಹುಲಿ’ ಎಂದೇ ಎಲ್ಲ ಕಡೆಯೂ ಕರೆದುಕೊಳ್ಳುತ್ತಿತ್ತು.ಆಗ ಮೈಸೂರಿನಲ್ಲಿ ಸಣ್ಣ ಪತ್ರಿಕೆಗಳದೇ ಕಾಲ.ಸಿಟ್ಟು ಬಂದರೆ ಒಂದು ಪತ್ರಿಕೆ. ಪ್ರೀತಿ ಹುಟ್ಟಿದರೆ ಇನ್ನೊಂದು ಪತ್ರಿಕೆ, ವಿರಹ ಉಂಟಾದರೆ ಒಂದು ಸಣ್ಣ ಪ್ರಿಂಟಿಂಗ್ ಪ್ರೆಸ್ಸು. ಹೀಗೆ ತರಹಾವರಿ ಪತ್ರಿಕೋಧ್ಯಮ ಸಾಹಸಗಳಿಗೆ ಹೆಸರು ವಾಸಿಯಾಗಿದ್ದ ಆ ಕಾಲದಲ್ಲಿ ಹುಲಿಯೂ ಕೂಡಾ ಪತ್ರಿಕೆಯೊಂದನ್ನು ನಡೆಸುತ್ತಿದೆ ಎಂಬುದು ನಮಗೆ ಅಂತಹ ದೊಡ್ಡ ಅಚ್ಚರಿಯನ್ನೇನೂ ಉಂಟು ಮಾಡುತ್ತಿರಲಿಲ್ಲ.ಕೈಯಲ್ಲಿ ಸ್ವಲ್ಪ ಕಾಸಿದ್ದರೆ ನಾವೂ ಕೂಡಾ ಅಂತಹದೊಂದು ಸಾಹಸವನ್ನು ನಡೆಸುತ್ತಿದ್ದೇವೋ ಏನೋ ಆದರೆ ಅಪ್ಪ ಕಳಿಸುತ್ತಿದ್ದ ಹಣ ಹಾಸ್ಟೆಲಿನ ಮೆಸ್ಸು ಬಿಲ್ಲಿಗೆ ಮಾತ್ರ ಆಗುತ್ತಿದ್ದುದರಿಂದ ಅಳಿದುಳಿದ ಮೊತ್ತದಲ್ಲಿ ಬೈಟೂಟೀ ಕುಡಿಯುತ್ತಾ ಹುಲಿ ಪತ್ರಿಕೆಯನ್ನು ಓದುತ್ತಾ ಕಾಲ ಕಳೆಯುತ್ತಿದ್ದೆವು.

ಆ ಪತ್ರಿಕೆಯ ಹೆಡ್ಡಿಂಗುಗಳೂ ರೋಚಕವಾಗಿರುತ್ತಿದ್ದವು.‘ಹುಲಿ ಸಂಚಾರ’ ‘ಹುಲಿಯ ಸಿಟ್ಟು’ ‘ಹುಲಿ ಗರ್ಜನೆ’ ಇತ್ಯಾದಿಗಳ ನಡುವೆ ‘ಹುಲಿ ವಿಷಾದಿಸುತ್ತದೆ’ ‘ಹುಲಿಗೆ ಬೇಕಾಗಿದ್ದಾರೆ’ ಮೊದಲಾದ ಪ್ರಕಟಣೆಗಳೂ ಇರುತ್ತಿದ್ದವು.ಆ ಎರಡು ಪುಟಗಳ ಪತ್ರಿಕೆಯ ಎಲ್ಲ ವರದಿಗಳೂ, ಸಂಪಾದಕೀಯವೂ, ಪ್ರಕಟಣೆಯೂ ಜಾಹೀರಾತೂ ಹೀಗೆ ಎಲ್ಲವೂ ಸಾಕ್ಷಾತ್ ಹುಲಿಯೇ ಯಾರೋ ನರಮನುಷ್ಯನಾದ ಉಪ ಸಂಪಾದಕನೊಬ್ಬನ ಕೈಲಿ ಹೇಳಿ ಬರೆಸಿದಂತೆ ಓದಿಸಿಕೊಂಡು ಸಖತ್ ಮಜಾ ನೀಡುತ್ತಿತ್ತು.

‘ಈ ದಿನ ಹುಲಿಯು ಮೈಸೂರಿನ ಅಠಾರಾ ಕಚೇರಿಯನ್ನು ಒಂದು ಸುತ್ತು ಹಾಕಿ ಬಂದಿತು.ಅಲ್ಲಿ ಕಂಡ ದೃಶ್ಯಗಳಿಂದಾಗಿ ಹುಲಿಗೆ ತುಂಬಾ ಸಿಟ್ಟು ಬಂದಿತ್ತು.ಇದು ಹೀಗೇ ಮುಂದುವರಿದರೆ ಹುಲಿಯು ಇನ್ನು ಸುಮ್ಮನಿರಲು ಸಾಧ್ಯವಿಲ್ಲ .ಮುಂದಿನ ವಾರವೂ ಹುಲಿಯು ಆ ಕಚೇರಿಗೆ ಹೋಗಬೇಕೆಂಬ ನಿರ್ದಾರಕ್ಕೆ ಬಂದಿದೆ.ಈ ದಿನ ನೋಡಿದ ದೃಶ್ಯಗಳು ಹುಲಿಯ ಮುಂದಿನ ಭೇಟಿಯಲ್ಲೂ ಕಂಡು ಬಂದರೆ ಹುಲಿಯು ಕಠಿಣವಾದ ಕ್ರಮವನ್ನೇ ತೆಗೆದುಕೊಳ್ಳುತ್ತದೆ.ಅಠಾರಾ ಕಚೇರಿಯ ನೌಕರರಿಗೆ ಇದು ಹುಲಿಯ ಕೊನೆಯ ಎಚ್ಚರಿಕೆ’

‘ಈ ದಿನ ಹುಲಿಯು ಮೈಸೂರಿನ ಸಯ್ಯಾಜಿರಾವ್ ರಸ್ತೆಯ … ಭವನಕ್ಕೆ ಟೀ ಸೇವನೆಗೆ ಹೋಗಿತ್ತು.ಅಲ್ಲಿನ ಮಾಲೀಕರು ಗ್ರಾಹಕರಿಂದ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರುವುದು ಹುಲಿಯ ಗಮನಕ್ಕೆ ಬಂದಿದೆ.ಅದೂ ಅಲ್ಲದೆ ಅಲ್ಲಿ ರುಚಿ ಮತ್ತು ಶುಚಿಗೆ ಹೆಚ್ಚಿನ ಗಮನ ಕೊಡುತ್ತಿಲ್ಲ ಎಂಬುದನ್ನೂ ಹುಲಿಯು ಗಮನಿಸಿದೆ.ಮುಂದಿನ ವಾರವೂ ಈ ಹುಲಿಯು … ಭವನಕ್ಕೆ ಭೇಟಿ ನೀಡಲಿದೆ.ಆ ಸಮಯದಲ್ಲೂ ಈ ಹೋಟೆಲಿನ ವ್ಯವಸ್ಥೆಗಳು ಹೀಗೇ ಮುಂದುವರಿದರೆ ಹುಲಿಯು ತಕ್ಕದಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.ಇನ್ನು ಈ ಹುಲಿಗೆ ಸುಮ್ಮನಿರಲು ಸಾಧ್ಯವಿಲ್ಲ.ಅದು ಖಂಡಿತವಾಗಿಯೂ ಗರ್ಜಿಸುತ್ತದೆ.ಇದು … ಭವನದ ಮಾಲಿಕರಿಗೆ ಈ ಹುಲಿಯ ಎಚ್ಚರಿಕೆ’

ಇವು ಈಗ ನನಗೆ ನೆನಪಾಗುತ್ತಿರುವ ಮೈಸೂರಿನ ‘ಹುಲಿ ಪತ್ರಿಕೆ’ಯ ಆ ಕಾಲದ ಕೆಲವು ಸ್ಯಾಂಪಲ್ಲುಗಳು.ನಿಜಕ್ಕೂ ಹುಲಿಯೊಂದು ಸಂಪಾದಕನಾಗಿ ಮೈಸೂರಿನ ಅಂಗುಲ ಅಂಗುಲ ತಿರುಗುತ್ತ ಎಲ್ಲವನ್ನೂ ಗಮನಿಸುತ್ತ ಅದನ್ನು ಬರೆಯುತ್ತ ಎಲ್ಲರನ್ನೂ ಎರಡು ಪುಟದಲ್ಲಿ ಎಚ್ಚರಿಸುತ್ತ ಇರುತ್ತಿದೆ ಎಂಬುದು ನಮಗೆ ಆ ಕಾಲದಲ್ಲಿ ರೋಮಾಂಚನವನ್ನೂ, ನಗುವನ್ನೂ, ವಿಷಾದವನ್ನೂ ಏಕಕಾಲದಲ್ಲಿ ಉಂಟು ಮಾಡುತ್ತಿತ್ತು.ಮೈಸೂರಿನ ಲ್ಯಾಂಡ್ಸ್ ಡೌನ್ ಕಟ್ಟಡದ ಅತಿ ಪುರಾತನ ಪತ್ರಿಕಾ ಮಳಿಗೆಯೊಂದರಲ್ಲಿ ಮಾತ್ರ ಸಿಗುತ್ತಿದ್ದ ಇದರ ಪ್ರತಿಯೊಂದನ್ನು ಯಾರು ಅಷ್ಟು ದೂರ ಹೋಗಿ ತರುವುದು ಎಂದು ಗೆಳೆಯರಾದ ನಮ್ಮಲ್ಲಿ ಸಣ್ಣ ಮಟ್ಟಿಗಿನ ಜಗಳಾಟವೂ ನಡೆಯುತ್ತಿತ್ತು.ಆದರೆ ತಪ್ಪದೆ ನಮ್ಮಲ್ಲಿ ಯಾರಾದರೊಬ್ಬರು ವಾರಕ್ಕೊಂದು ಪ್ರತಿಯನ್ನು ತಂದಿಟ್ಟಿರುತ್ತಿದ್ದರು ಮತ್ತು ನಾವೆಲ್ಲರೂ ಅದನ್ನು ಜೋರಾಗಿ ಓದುತ್ತಾ ಬೈಟೂಟೀ ಕುಡಿಯುತ್ತಾ ಸಿಗರೇಟು ಸೇದುತ್ತಾ ಮಜಾ ತೆಗೆದುಕೊಳ್ಳುತ್ತಿದ್ದೆವು.ಆ ಪತ್ರಿಕೆಯಲ್ಲಿ ಬರದೇ ಇರುವ ವಿಷಯಗಳನ್ನೂ ನಾವು ಹುಲಿಯ ಶೈಲಿಯಲ್ಲೇ ಗಮನಿಸುತ್ತಾ ಹುಲಿಯ ರೀತಿಯಲ್ಲೇ ವಿಶ್ಲೇಷಿಸುತ್ತಾ ಹುಲಿಯ ಶೈಲಿಯಲ್ಲೇ ಬರೆದಂತೆ ಓದುತ್ತಿದ್ದೆವು.

ಉದಾಹರಣೆಗೆ ‘ಹುಲಿಯು ಇಂದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಇಂಗ್ಲಿಷ್ ವಿಭಾಗದ ಮೊದಲನೆಯ ಎಂಎ ತರಗತಿಗೆ ಹೋಗಿ ಸುಮ್ಮನೆ ಕುಳಿತಿತ್ತು.ಅಲ್ಲಿ ಪೋಲಂಕಿ ರಾಮಮೂರ್ತಿಯವರು ವಿಲಿಯಂ ಬ್ಲೇಕನ ಟೈಗರ್ ಕವಿತೆಯನ್ನು ಪಾಠ ಮಾಡುತ್ತಿದ್ದ ಶೈಲಿಯನ್ನು ಸುಮ್ಮನೆ ಗಮನಿಸುತ್ತಿತ್ತು. ಈ ಹುಲಿಗೆ ಅವರ ಬ್ಲೇಕನ ಆ ಹುಲಿಯ ಕುರಿತ ವ್ಯಾಖ್ಯಾನಗಳು ಇಷ್ಟವಾಗಿಲ್ಲ.ಈ ಹುಲಿಗೆ ಉಗ್ರವಾಗಿ ಸಿಟ್ಟು ಬಂದಿದೆ.ಅವರು ತಮ್ಮ ಶೈಲಿಯನ್ನು ತಿದ್ದಿಕೊಳ್ಳತಕ್ಕದ್ದು.ಇಲ್ಲವಾದಲ್ಲಿ ಈ ಹುಲಿಯು ಮುಂದಿನ ವಾರ ಅವರ ತರಗತಿಗೆ ಹೋಗಿ ಜೋರಾಗಿ ಗರ್ಜಿಸುತ್ತದೆ’

aಹೀಗೆ ಇನ್ನೂ ಹಲವು ಆ ಕಾಲದ ಪ್ರಚಲಿತ ಸಂಗತಿಗಳನ್ನು ಹುಲಿಸಂಪಾದಕರ ದೃಷ್ಟಿಕೋನದಿಂದ ನೋಡುತ್ತ, ಗಮನಿಸುತ್ತ ಮನಸಿನಲ್ಲೇ ಬರೆಯುತ್ತ ನಾವೂ ಸ್ವಲ್ಪಹೊತ್ತು ಹುಲಿಯೇ ಆಗಿ ಹೋಗುತ್ತಿದ್ದವು.ಆಗ ಮೈಸೂರಿನಲ್ಲಿ ಸಮಾಜವನ್ನು ಎಡಪಂಥದ ದೃಷ್ಟಿಕೋನದಿಂದ, ಸಮಾಜವಾದಿ ದೃಷ್ಟಿಕೋನದಿಂದ, ಗಾಂಧಿ ದೃಷ್ಟಿಕೋನದಿಂದ ಹಾಗೂ ಇನ್ನೂ ಹಲವು ದೃಷ್ಟಿಕೋನಗಳಿಂದ ನೋಡುತ್ತಿದ್ದವರೇ ಹೆಚ್ಚಾಗಿದ್ದ ಕಾಲದಲ್ಲಿ ಹುಲಿಯೊಂದರ ದೃಷ್ಟಿಕೋನ ನಮಗೆ ಬೇಕಾದ ವಿರಾಮವನ್ನೂ ಆರಾಮವನ್ನೂ ಹಾಗೂ ವಿಪುಲವಾದ ಸಾಧ್ಯತೆಗಳನ್ನೂ ನೀಡುತ್ತಿತ್ತು.

ನಾನಂತೂ ಈ ಹುಲಿ ಸಂಪಾದಕನ ಉಪ ಸಂಪಾದಕನಾಗಬೇಕೆಂಬ ಕನಸನ್ನೂ ಕಾಣುತ್ತಿದ್ದೆ.ಹೇಗಾದರೂ ಆ ಹುಲಿಯನ್ನು ಕಾಣಬೇಕೆಂದು ಹಂಬಲಿಸುತ್ತಿದ್ದೆ.ಆದರೂ ನೋಡಲು ಹೆದರುತ್ತಿದ್ದೆ.ಒಂದು ಸಲ ಲ್ಯಾನ್ಸ್ ಡೌನಿನ ಪೇಪರಂಗಡಿಯಲ್ಲಿ ವಿಚಾರಿಸಲಾಗಿ ವಯಸ್ಸಾಗಿರುವ ಸಣಕಲನಾಗಿರುವ ಮನುಷ್ಯರೊಬ್ಬರು ಆ ಪತ್ರಿಕೆಯ ಕೆಲವು ಪ್ರತಿಗಳನ್ನು ಕೊಟ್ಟುಹೋಗುವುದಾಗಿಯೂ ಅದಕ್ಕೆ ಪ್ರತಿಯಾಗಿ ಅವರು ಹಣವನ್ನೂ ತೆಗೆದುಕೊಳ್ಳುವುದಿಲ್ಲವೆಂದೂ ಹೇಳಿದ್ದರು.ನೋಡುತ್ತನೋಡುತ್ತ ಆ ಹುಲಿಪತ್ರಿಕೆಯೂ ನಿಂತು ಹೋಗಿತ್ತು.ಪಾಪ ಎಲ್ಲವನ್ನೂ ಗಮನಿಸುತ್ತಾ ಎಲ್ಲರನ್ನೂ ಗಮನಿಸುತ್ತಾ ಬರೆಯುತ್ತಿದ್ದ ಮೈಸೂರಿನ ಆ ಹುಲಿ ಪತ್ರಿಕೆಯನ್ನು ನಮ್ಮಂತಹ ತರಲೆಗಳನ್ನು ಬಿಟ್ಟು ಬೇರೆ ಯಾರೂ ಗಂಭೀರವಾಗಿ ಗಮನಿಸುತ್ತಿರಲಿಲ್ಲವೇನೋ.ಹಾಗಾಗಿ ಯಾರ ಗಮನಕ್ಕೂ ಬಾರದೇ ಸೊರಗಿ ಸೊರಗಿ ಆ ಪತ್ರಿಕೆ ನಿಂತೇ ಹೋಗಿತ್ತು.ಆ ಪತ್ರಿಕೆಯ ಸಂಪಾದಕ ಹುಲಿ ಯಾರು ಮತ್ತು ಅದು ಎತ್ತ ಹೋಯಿತು ಎಂಬುದು ಎಂಬುದು ನನಗೆ ಈ ಮೂರು ದಶಕಗಳ ನಂತರವೂ ಒಂದು ಆಧುನಿಕೋತ್ತರ ಅಚ್ಚರಿಯಾಗಿಯೇ ಉಳಿದಿದೆ

ಮೊನ್ನೆ ಸಂಜೆ ಕತ್ತಲಾಗುತ್ತಿದ್ದ ಹೊತ್ತಲ್ಲಿ ಮೈಸೂರು ಬೋಗಾದಿ ರಸ್ತೆಯಲ್ಲಿ ಹೋಗುತ್ತಿದ್ದೆ.ಹಳೆಯ ಕಾಲದ ಲ್ಯಾಂಬ್ರೆಟಾ ಸ್ಕೂಟರಿನ ಹಿಂಬಾಗಕ್ಕೆ ಹನ್ನೆರಡಡಿ ಉದ್ದದ ದೊಡ್ಡದೊಂದು ರಟ್ಟಿನ ಗೋಪುರವೊಂದನ್ನು ಏರಿಸಿಕೊಂಡು ಆ ಗೋಪುರದ ಮೇಲೆ ಎಲ್ಲ ದೇವರು ಎಲ್ಲ ಧರ್ಮಗಳ ಚಿಹ್ನೆಗಳನ್ನು ಅಂಟಿಸಿಕೊಂಡು ‘ದಯವಿಟ್ಟು ಮತದಾನ ಮಾಡಿ’ ಎಂದು ಬಣ್ಣದ ಬೇಗಡೆಯಲ್ಲಿ ಬರೆಸಿಕೊಂಡು ಸಣಕಲು ವ್ಯಕ್ತಿಯೊಬ್ಬರು ಹೋಗುತ್ತಿದ್ದರು.ಜೋರಾಗಿ ಬೀಸುತ್ತಿದ್ದ ಗಾಳಿಯಲ್ಲಿ ಗೋಪುರದ ಸಮೇತ ವಾಲಾಡುತ್ತಾ ಬಿದ್ದೇ ಹೋಗುವ ಹಾಗೆ ಸಾಗುತ್ತಿದ್ದರು.ನಡುನಡುವಲ್ಲಿ ರಸ್ತೆಗೆ ಕಾಲುಕೊಟ್ಟು ಸಾವರಿಸಿಕೊಂಡು ಬೆವರು ಒರೆಸಿಕೊಂಡು ಮುಂದೆ ಹೋಗುತ್ತಿದ್ದರು.ಅವರು ಹಾಗೆ ಒಂದು ಕಡೆ ನಿಲ್ಲಿಸಿದಾಗ ಮಾತನಾಡಿಸಿದೆ.ಅವರು ಮೈಸೂರಿನ ಹಳೆಯ ಕಾಲದ ಪ್ರತಿಷ್ಟಿತ ಮುಸಲ್ಮಾನ ಕುಟುಂಬಕ್ಕೆ ಸೇರಿದವರಾಗಿದ್ದರು.ದಾನ ಧರ್ಮ ಕೋರ್ಟು ಕಚೇರಿ ಸಂಸಾರ ಮೋಸ ಇತ್ಯಾದಿಗಳಿಂದ ಅವರು ಸಖತ್ತಾಗಿ ಲಾಸು ಮಾಡಿಕೊಂಡು ಈಗ ಎಲ್ಲರೂ ಮತದಾನ ಮಾಡಿದರೆ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂಬ ಸಂದೇಶದೊಂದಿಗೆ ಸ್ಕೂಟರಿಗೆ ಬಡ್ಡಿ ಸಾಲದ ಹಣದಲ್ಲಿ ಪೆಟ್ರೋಲು ಹಾಕಿಸಿಕೊಂಡು ಸಾಗುತ್ತಿದ್ದರು.

cನನಗೆ ಯಾಕೋ ಹಳೆಯ ಕಾಲದ ಆ ಹುಲಿ ಸಂಪಾದಕರನ್ನು ಮತ್ತೆ ಇನ್ನೊಂದು ರೂಪದಲ್ಲಿ ನೋಡಿದಂತಾಯಿತು.

Advertisements