ರೂಮಿ ಕವಿಯ ಹನ್ನೆರಡು ಪುಟ್ಟ ಕವಿತೆಗಳು

 

 

rumi6.jpg

-೧-

ನೀರೊಳಗೆ ತಿರುಗುತ್ತಿದೆ ನೀರ ಗಾಲಿ,

ತಾರೆ ತಿರುಗುತ್ತಿದೆ ಚಂದ್ರನೊಡನೆ.

ಚಕಿತ ನಾವು ಈ ಇರುಳಲ್ಲಿ,ಅದು ಹೇಗೆ

 ಇಷ್ಟೊಂದು ಬೆಳಕು ಇಲ್ಲಿ !

-೨-

ನೀನೇನೆಂದು ನೀನು ನುಡಿದೆ,

ನಾನೇನೆಂದು ನಾನೂ.

ನಿನ್ನ ಚಲನೆ ನನ್ನ ಮಿದುಳೊಳಗೆ,

ಏನೋ ತಿರುಗುತ್ತಿದೆ ಒಳಗೆ.

ಇಡಲಾಗುತ್ತಿಲ್ಲ ಹೆಸರ,

ತಿರುಗುತ್ತಿದೆ ಅದು ಅಷ್ಟು

ಚಂದದಲ್ಲಿ.

-೩-rumi1.jpg

ಚಲಿಸು ನಡುವಿನೊಳಕ್ಕೆ,

ಸುತ್ತು ಭುವಿಯಂತೆ,ಚಂದ್ರನೂ ಸುತ್ತು.

ಸುತ್ತುವವು ಅವು ಅವುಗಳ ಒಲವಿನಂತೆ.

ಸುತ್ತು ತೊಡಗುವುದು ನಡುವಿನಿಂದಲೇ.

-೪-

ಈ ಇರುಳು ನಿನ್ನ ಗೂಡ ಸುತ್ತ  ಸುತ್ತುತ್ತಿರುವೆ,

ತಿರುತಿರುಗಿ ಬೆಳಕು ಹರಿವವರೆಗೆ.

ಗಾಳಿ ತಣ್ಣಗೆ ಆಗ ಅರಹುತ್ತದೆ,

ಅವನು ಮಧುಬಟ್ಟಲ ಎತ್ತುತ್ತಾನೆ,

ಅದು ಯಾರದೋ ತಲೆಯ ಬುರುಡೆ.

-೫-rumi7jpg.jpg

ನಡೆ ನಿಲ್ಲದೆ, ಇರದಿದ್ದರೂ ತಲುಪಲು ಎಡೆ.

ಕಲಿ ಗಮನಿಸದಿರಲು ದೂರವನ್ನು..

ಅದು ನಮಗಿರುವುದಲ್ಲ, ಚಲಿಸು ಒಳಗಡೆಗೇ,

ಚಲಿಸದಿರು ಭಯ ದೂಡುವ ಕಡೆಗೆ.

-೬-

ಈ ಹೊತ್ತು ಈ ಒಲವು ಬಂತು ನನ್ನೊಳಗೆ ಇರಲು,

ಹಲವು ಇರವುಗಳು ಈ ಒಂದರೊಳಗೆ.

ಅಕ್ಕಿಯ ಕಾಳಲ್ಲಿ  ಭತ್ತದ ಸಾವಿರ ಕಂತೆ,

ಸೂಜಿಯ ಕಣ್ಣಲ್ಲಿ ತಾರೆಗಳು ಕತ್ತಲೆ ತೆರೆ.

-೭-rumi5.jpg

ಅರಿಯದೊಂದು ಚಲಿಸುತ್ತಿದೆ ನಮ್ಮೊಳಗೆ,

ಅದು ಚಲಿಸುತ್ತಿದೆ ಈ ವ್ಯೋಮವನ್ನೇ,

ತಲೆಗೆ ಅರಿವಾಗದೆ ಪಾದ,

ಪಾದವರಿಯದೆ ಶಿರ-

ಬೇಕೂ ಇಲ್ಲ ಅವುಗಳಿಗೆ ಇದೆಲ್ಲ

ಸುಮ್ಮನೆ ಚಲಿಸುತ್ತಿದೆ.

-೮-

ಕೆಲವೊಮ್ಮೆ ಇರುಳು ಬೆಳಕವರೆಗೆ ಎದ್ದಿರುತ್ತದೆ;

ಚಂದ್ರ, ಸೂರ್ಯ ಬರುವವರೆಗೆ.

ನೀ ಬಾವಿಯ ಕತ್ತಲ ತಳದ ಕೊಡಪಾನ-

ಕಾಣುವೆ ಬೆಳಕು- ಜಗ್ಗಿದರೆ.

-೯-

rumi61.jpg

 ಇಷ್ಟು ಸಣ್ಣವ ನಾನು ತೀರಾ ಕಾಣಿಸದವನು

ಹೇಗೆ ಬಂತು ಇಷ್ಟೊಂದು ಪ್ರೀತಿ ನನ್ನ ಒಳಕ್ಕೆ?

ನೋಡು ನಿನ್ನ ಕಣ್ಣುಗಳು ಎಷ್ಟೊಂದು ಕಿರಿದು

ಕಾಣುವುದಲ್ಲ ಆದರೂ ಅಗಾಧವನು.

-೧೦-

ಏನೋ ನಮ್ಮ ರೆಕ್ಕೆಗಳ ಬಿಚ್ಚುವುದು, ಏನೋ ಈ

ನೀರಸವ,ಬೇಸರವ ಪರಿಹರಿಸುವುದು.

ಯಾರೋ ಎದುರಿನ ಈ ಮಧು ಬಟ್ಟಲ ತುಂಬಿಸುವರು

ನಾಲಗೆ ಕೇವಲ ದೈವದ ರುಚಿಯ ಅರಿಯುವುದು.

-೧೧-rumi2.jpg

ಬದುಕುವುದು ಭ್ರಾಂತಿಯ ತುಟಿಯ ತುದಿಯಲ್ಲಿ

ಕಾರಣಗಳ ಕಾಣಬೇಕೆಂದೆಣಿಸಿ.

ಕದವ ತಟ್ಟುತ್ತೇನೆ. ಅದು ತೆರೆಯುತ್ತದೆ.

ತಟ್ಟುತ್ತಿದ್ದೆ ಇಷ್ಟೂ ಹೊತ್ತು ಒಳಗಿನಿಂದಲೇ!

-೧೨-

ಕುಣಿ-ಮುರಿದಾಗ,

ಕುಣಿ-ಗಾಯ ತೆರಕೊಂಡಾಗ,

ಕುಣಿ-ಬಡಿದಾಟದ ನಡುವೆ,

ಕುಣಿ-ನಿನ್ನದೇ ನೆತ್ತರಲ್ಲಿ,

ಕುಣಿ-ಇಲ್ಲದಾದಾಗ.

——————–

Advertisements