ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು

ಹಲವು ವರುಷಗಳ ಮೊದಲು ಒಂದು ಸಂಕ್ರಾಂತಿಯ ಮಾರನೇ ದಿನ ವಿಮರ್ಶಕ ಪ್ರೊಫೆಸರ್ ಕಿ.ರಂ.ನಾಗರಾಜರನ್ನ ಬೈಕಿನಲ್ಲಿ ಕೂರಿಸಿಕೋಂಡು ಮಂಗಳೂರಿನ ಬೆನ್ನ ಹಿಂದೆ ಇರುವ ಒಂದು ಅಪರೂಪದ ಜಾಗಕ್ಕೆ ಕರೆದುಕೊಂಡು ಹೋಗಿದ್ದೆ. ಈ ಜಾಗ ತುಂಬಾ ಅಪರೂಪ.ಯಾಕೆಂದರೆ ಈ ಜಾಗ ಕೆಲವೇ ಕೆಲವರಿಗೆ ಗೊತ್ತಿದೆ ಮತ್ತು ಇಲ್ಲಿ ಎರಡು ದೊಡ್ಡ ನದಿಗಳು ಕಡಲನ್ನು ಸೇರುತ್ತದೆ.ಇಲ್ಲಿ ನಿಂತರೆ ಯಾವುದು ಯಾವ ನದಿ ಮತ್ತು ಯಾವುದು ಕಡಲು ಎಂದು ಗೊತ್ತಾಗುವುದಿಲ್ಲ. ಮುಳುಗುತ್ತಿರುವ ಸೂರ್ಯ ಇದೇ ಹೊತ್ತಲ್ಲಿ ಎಲ್ಲಿ ಉದಯಿಸುತ್ತಿರುವ ಎಂದು ಗೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾವುದೋ ಒಂದು ದೇಶ, ಯಾವುದೋ ಒಂದು ಕಾಲ ಕಣ್ಣ ಮುಂದೆ ಕಾಣುತ್ತದೆ. ಕಣ್ಣು ಮುಚ್ಚಿದರೆ ಮುಚ್ಚಿದ ಕಣ್ಣೊಳಗೆ ಹಸಿರು ತೇಪೆಗಳು ಸರಿದಾಡುತ್ತವೆ. ಮೀನುಗಾರರ ದೋಣಿಗಳು ಮತ್ತು ಕಡಲ ಹಕ್ಕಿಗಳು ಅಲೆದಾಡುತ್ತಿರುವ ಆತ್ಮಗಳಂತೆ ಓಡಾಡುತ್ತಿರುತ್ತವೆ.kiram.jpg

ಇಲ್ಲಿ ಕೂತುಕೊಂಡು ಕನ್ನಡದ ಖ್ಯಾತ ವಿಮರ್ಶಕರಾದ ಪ್ರೊಫೆಸರ್ ಕಿ.ರಂ.ನಾಗರಾಜ್  ಪುಟ್ಟ ಬಾಲಕನಂತೆ ಮಳೆಗಾಲದಲ್ಲಿ ಈ ಕಡಲು ಹೇಗಿರುತ್ತದೆ ಎಂದು ಕೇಳುತ್ತಿದ್ದರು. ನಾನು ಮಹಾ ಮಳೆಗಾಲದಲ್ಲಿ ಕಡಲನ್ನು ನೋಡಿದವನಂತೆ ಭೂಮಿ ಆಕಾಶ ಕಡಲು ಎಲ್ಲಾ ಒಂದೇ ಆಗಿಬಿಟ್ಟಿರುತ್ತದೆ. ಎಲ್ಲವೂ ಮಂಜು ಮುಸುಕಿದಂತೆ… ಎಂದು ಹೇಳುತ್ತಿದ್ದೆ.

ಆ ಮೇಲೆ ಈ ಜಾಗಕ್ಕೆ ಬೆಳದಿಂಗಳ ರಾತ್ರಿಯಲ್ಲಿ ಬರಬೇಕು  ಎಂದು ವಿಷಯ ಬದಲಿಸಿದೆ.

ತಿರುಗಿ ಬರುವಾಗ ಅವರಿಗೆ ಒಂದು ಮುಳುಗಿದ ಹಡಗನ್ನು ತೋರಿಸಿದೆ ಮತ್ತು ಮಹಮ್ಮದ್ ಆಲಿ ಎಂಬ ಸಾಹಸಿ ಈಜುಗಾರನ ಕತೆ ಹೇಳಿದೆ. ಈ ಮುಳುಗಿದ ಹಡಗು ಅಲ್ಲಿ ಮುಳುಗಿ ಆಗಲೇ ಆರೇಳು ವರ್ಷಗಳಾಗಿತ್ತು. ಇಲ್ಲಿ ಮುಳುಗುವ ಮೊದಲು ಇದು ಹಾಂಕಾಗಿನ ಒಬ್ಬ ಚೀನೀ ವರ್ತಕನಿಗೆ ಸೇರಿತ್ತು. ಅದು ಎಲ್ಲೋ ಸಾಗರದ ನಡುವಲ್ಲಿ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಹಾಳಾಗಿ ಅದನ್ನು ಒಡೆದು ತೂಕಕ್ಕೆ ಕಬ್ಬಿಣವನ್ನಾಗಿ ಮಾರಲು ಈ ಕಡಲ ತಡಿಗೆ ತಂದಿದ್ದರು. ದಡದ ಹತ್ತಿರ ಬಂದಂತೆ ಅದು ಕಡಲ ಕೊರೆತಕ್ಕೆ ಸಿಲುಕಿ ಮರಳಿನೊಳಗೆ ಹೂತು ಹೋಗಲು ತೊಡಗಿ ನಾನು ಅದನ್ನು ಕಿ.ರಂ ಗೆ ತೋರಿಸುವಾಗ ಅದರ ಚಾವಣಿ ಮಾತ್ರ ಕಾಣುತ್ತಿತ್ತು.

ನಾನು ಇನ್ನೂ ತುಂಬಾ ದಿನಗಳ ಹಿಂದೆ ಹೀಗೆ ಸಂಜೆ ಒಬ್ಬನೇ ಕಡಲ ತುದಿಯಲ್ಲಿ ಕುಳಿತು ಈ ಮುಳುಗಿದ ಹಡಗನ್ನು ನಿರುಕಿಸುತ್ತಿರುವಾಗ ಆ ಹಡಗಿನ ಚಾವಣಿಯ ಮೇಲೆ ಒಂದೆರಡು ಜೀವಗಳು ಮಿಸುಕುವುದನ್ನು ಕಂಡಿದ್ದೆ. ಹಾಗೇ ನೋಡುತ್ತಾ ಕುಳಿತರೆ ಆ ಜೀವಗಳು ಹಡಗಿಂದ ಇಳಿದು ತೀರಕ್ಕೆ ಈಜಿ ಬರುತ್ತಿರುವುದು ನೋಡಿದೆ. ಅವರು ಹತ್ತಿರ ಬಂದಾಗ ನೋಡಿದರೆ ಅವರು ಪಚ್ಚಿಲೆ ಎಂಬ ಚಿಪ್ಪು ಮೀನು ಸಂಗ್ರಹಿಸುವ ಈಜುಗಾರರಾಗಿದ್ದರು. ಈ ಪಚ್ಚಿಲೆ ಎಂಬ ಮೀನು ನನಗೆ ಎಷ್ಟು ಇಷ್ಟ ಎಂದರೆ ಹಿಂದೆ ನಾನು ಇದಕ್ಕಾಗಿ ಹೆಂಡತಿಯನ್ನೂ ಬಿಟ್ಟು ಬಡಗರ ಎಂಬ ಕೇರಳದ ಊರಿಗೆ ಹೋಗಿ ಅಲ್ಲಿ ಗೆಳೆಯರಾದ ಸಂಗೀತಗಾರರೊಬ್ಬರ ಹೆಂಡತಿಯ ಬಳಿಯಿಂದ ಪಚ್ಚಿಲೆಯ ತಿಂಡಿ ಮಾಡುವುದನ್ನು ಕಲಿತುಬಂದು ಮನೆಯವರಿಗೆಲ್ಲಾ ತುಂಬಾ ಕಷ್ಟ ಕೊಟ್ಟಿದ್ದೆ.ಈಗ ಮುಳುಗಿದದ ಈ ಹಡಗಿನಿಂದ ಇವರಿಬ್ಬರು ಈ ಪಚ್ಚಿಲೆ ಹೆಕ್ಕಿಕೊಂಡು ಬರುತ್ತಿರುವುದು ಕಂಡು ರೋಮಾಂಚಿತನಾಗಿ ಅವರನ್ನು ಮಾತನಾಡಿಸಿ ಗೆಳೆಯರನ್ನಾಗಿಸಿಬಿಟ್ಟೆ.ಅವರಲ್ಲಿ ಒಬ್ಬಾತನ ಹೆಸರು ಮಹಮ್ಮದ್ ಆಲಿ. ಇನ್ನೊಬ್ಬ ಮಲಯಾಳಿ ಶ್ರೀಕಂಠನ್. ಅವರಿಬ್ಬರೂ ಗೆಳೆತನ ಮಾಡಿಕೊಂಡು ಹಗಲು ಕಡಲು ಈಜಿ ಹಡಗೊಳಗೆ ಮುಳುಗಿ ಈ ಪಚ್ಚಿಲೆಗಳನ್ನು ಸಂಜೆಯವರೆಗೆ ಸಂಗ್ರಹಿಸಿ ಸೂರ್ಯ ಕಂತಿದೆ ಮೇಲೆ ತಿರುಗಿ ಬರುತ್ತಿದ್ದರು.sunken_ship-1.jpg

ಈ ಮುಳುಗಿದ ಹಡಗಿನೊಳಗೆ ಇವರು ಕಂಡಿರುವುದನ್ನು ಇವರ ಬಾಯಿಂದಲೇ ಕೇಳಬೇಕು. ಅದರೊಳಗಡೆ ಚಿಪ್ಪು ಮೀನುಗಳ ಸಾಮ್ರಾಜ್ಯ, ಟಯರುಗಳು, ಟ್ಯೂಬುಗಳು, ಮುತ್ತುರತ್ನಗಳು, ಕೆಲವೊಮ್ಮೆ ತಿಮಿಂಗಲಗಳು, ಆತ್ಮಹತ್ಯೆ ಮಾಡಿಕೊಂಡ ದೇಹಗಳು ಇವೆಲ್ಲಾ ಇವೆಯಂತೆ! ಈ ಬೃಹತ್ ಗಾತ್ರದ ಚಿಪ್ಪು ಮೀನುಗಳು ಆಹಾರಕ್ಕಾಗಿ ಚಿಪ್ಪು ತೆರೆದುಕೊಂಡು ಕಾಯುತ್ತಿರುತ್ತವಂತೆ. ಮುಳುಗುವ ಇವರ ತಲೆಯ ಮುಡಿಯನ್ನು ಆಹಾರವೆಂದು ತಿಳಿದು ಹಿಡಿದುಕೊಂಡು ಬಿಡುತ್ತದೆಯಂತೆ. ಅದರಿಂದ ತಪ್ಪಿಸಿಕೊಂಡು ಇವರು ಈಜಿ ಮೇಲೆ ಬರುವರಂತೆ.

ನಾನು ಪ್ರೊಫೆಸರ್ ಕಿ.ರಂಗೆ ಈ ಹಡಗನ್ನು ತೋರಿಸಿ, ಕಥೆ ಹೇಳಿ ಮಹಮ್ಮದ್ ಆಲಿಯ ಮನೆಗೆ ಕರೆದುಕೊಂಡು ಹೋದೆ. ಮಹಮ್ಮದ್ ಆಲಿಯ ಮಕ್ಕಳು ಮನೆಯ ಮುಂದಿನ ಮರಳಲ್ಲಿ ಆಟವಾಡುತ್ತಿದ್ದರು. ಹೆಂಡತಿ ಮನೆಯೊಳಗೆ ಇನ್ನೊಂದು ಹೆತ್ತು ಮಲಗಿದ್ದಳು. ನನ್ನ ಬಾಲ್ಯದ ಗೆಳೆಯನಂತಾಗಿ ಹೋಗಿರುವ ಆಲಿ ವಿಶ್ವಾಸದಿಂದ ನಗುತ್ತಾ ಬಂದು ಹತ್ತಿರ ನಿಂತುಕೊಂಡ. ಕಿ.ರಂ ಅಷ್ಟೊಂದು ಪ್ರೀತಿಯಿಂದ ಆತನನ್ನು ನೋಡುತ್ತಿದ್ದರು. ಯಾವುದೋ ಕಾಲದ ಕಥೆಯೊಂದರ ಕಥಾನಾಯಕನನ್ನು ನೋಡುವಂತೆ.

 ಆವತ್ತು ಸಂಜೆ ನಾನು ಒತ್ತಾಯದಿಂದ ಪ್ರೊಫೆಸರ್ ಕಿ.ರಂ ರನ್ನ ಅಲ್ಲಿಂದ ಕರೆತರಬೇಕಾಯಿತು. ಅವರು ಇಪ್ಪತ್ತನೆ ಶತಮಾನದ ಕನ್ನಡ ಸಾಹಿತ್ಯ ಕುರಿತು ಉಪನ್ಯಾಸ ಮಾಡಿ ಬಂದಿದ್ದರು. ಕನ್ನಡದ ಇನ್ನೊಬ್ಬ   ಭಾಷಾ   ವಿಧ್ವಾಂಸರಾದ ಕೆ.ವಿ.ನಾರಾಯಣ ಅವರು  ಮಾತನಾಡುತ್ತಾ ಭಾಷಾಶಾಸ್ತ್ರದ ಶಾಖೆಯೊಂದನ್ನು ಉಲ್ಲೇಖಿಸಿ ಕನ್ನಡ ಮುಳುಗುತ್ತಾ ಇದೆ ಜಾಗತೀಕರಣ, ವಸಾಹತೀಕರಣದಿಂದಾಗಿ ಕನ್ನಡ ಅಳಿಯುತ್ತಾ ಇದೆ ಎಂದು ನನ್ನನ್ನು ಹೆದರಿಸಿಬಿಟ್ಟಿದ್ದರು.

ಕಿ.ರಂ.ನಾಗರಾಜರು ಈ ಮುಳುಗಿದ ಹಡಗನ್ನೂ, ಸೂರ್ಯಮುಳುಗುವುದನ್ನೂ, ಮಹಮ್ಮದ್ ಆಲಿಯನ್ನೂ ನೋಡಿ ಕನ್ನಡ ಸಾಹಿತ್ಯದ ಎಲ್ಲವನ್ನೂ ಒಂದು ಕ್ಷಣ ಮರೆತವರಂತೆ ಆಡುತ್ತಿದ್ದರು.
ಬೈಕ್ ಹಿಂದೆ ಕೂತ್ತಿದ್ದ ಅವರನ್ನು  ತಿರುಗಿ ಬರುವಾಗ ಕೇಳಿದೆ, `ನಿಮಗೆ ನಿಜಕ್ಕೂ ಮಹಮ್ಮದ್ ಆಲಿ ಯಾರು ಎಂದು ಗೊತ್ತಾ? ಅವನ ಹಣೆಯಲ್ಲಿರುವ ಕಪ್ಪು ಮಚ್ಚೆ ನೋಡಿದಿರಾ?’

 ಕೀರಂ ಕೇಳಿಸಿಕೊಳ್ಳುತ್ತಿದ್ದರು.

ಮಹಮ್ಮದಾಲಿಯದು ದೊಡ್ಡ ಕತೆ. ಇನ್ನೂ ಯಾವತ್ತಾದರೂ ಹೇಳುವೆ.

6 thoughts on “ಕಡಲು, ಕನ್ನಡ ಮತ್ತು ಮುಳುಗುತ್ತಿರುವ ಹಡಗು

 1. ಪುಟ್ಟ ಬಾಲಕನಂತೆ ಕಡಲನ್ನು ನೋಡುವ ಕಿ.ರಂ., ಅವರನ್ನು ಸ್ಕೂಟರಿನಲ್ಲಿ ಕರೆದೊಯ್ದು ತೋರಿಸುವ ನಿಮ್ಮ ಉತ್ಸಾಹ, ಕಡಲಾಳದಿಂದ ನಿಮಗಾಗಿ ಮೀನು ಹೆಕ್ಕಿಕೊಂಡು ಬರುವ ಮಹಮ್ಮದ್ ಅಲಿಯ ಪ್ರೀತಿ… ಇವೆಲ್ಲಾ ಇರುವವರೆಗೆ, ನೀವು ಇಷ್ಟು ಚಂದ ಬರೆಯುತ್ತಿರುವವರೆಗೆ, ನಾವು ಓದುತ್ತಿರವವರೆಗೆ ಕನ್ನಡದ ಹಡಗು ಮುಳುಗೀತಾದರೂ ಹೇಗೆ?

  ಮಹಮ್ಮದ್ ಅಲಿಯ ಪಾತ್ರ ಕುತೂಹಲ ಹುಟ್ಟಿಸುವಂತಿದೆ. .

 2. ಪ್ರಿಯ ರಶೀದ್,

  ನಿಮ್ಮ ನೇಯ್ಗೆಯೇ ಅದ್ಭುತ. ಎಂದೋ ಸಂಜೆ ನಿಮ್ಮ ಪ್ರೀತಿಯ ಕಿ.ರಂ. ಜೊತೆ ಕಳೆದ ಒಂದು ಸಂಜೆ, ಕಡಲ ನೋಟ, ಇನ್ಯಾವತ್ತೋ ಗೆಳೆಯನಾದ ಮಹಮ್ಮದಾಲಿ, ಕೇರಳಕ್ಕೆ ಹುಡುಕಿಕೊಂಡು ಹೋಗಿ ತಿಂದ ಚಿಪ್ಪುಮೀನಿನ ವಿವರಣೆ, ಸುಮ್ಮನೆ ಪರಿಚಯವಾಗುವ ವ್ಯಕ್ತಿಗಳಲ್ಲಿ ಹುಡುಕಿ ಅರಳಿಸುವ ಕತೆ..ಮುಳುಗಿದ ಹಡಗು, ಮತ್ತು ಕನ್ನಡ.. ಎಲ್ಲವನ್ನು ಪೂರಕವಾಗಿ ನೇಯುವ ಕಲೆ.ವ್ಯಾಖ್ಯಾನಗಳಿಗೆ ಮೀರಿದ್ದು.. ಓದುತ್ತ ಓದುತ್ತ ಮನಸಿನ ಪುಟಗಳಲ್ಲಿ ವಿರಾಜಮಾನವಾಗಿ ಕೂತುಬಿಡುತ್ತವೆ…ತುಂಬುಕೆಲಸದ ನಡುವಿನ ಕ್ಷಣಬಿಡುವಿನಲ್ಲಿ ಮಿಂಚುತ್ತಾ!

  ಪ್ರೀತಿಯಿಂದ
  ಸಿಂಧು

 3. ಬರಹದಲ್ಲಿನ ಸರಳ ಭಾಷೆ,ನವಿರು ನಿರೂಪಣೆ,ಹೇಳಬೇಕಾದುದನ್ನು ಮೌನ ಝರಿಯಂತೆ ಅಬ್ಬರವಿಲ್ಲದೆ ದಾಖಲಿಸುವ ನಿಮ್ಮ ಶೈಲಿ ಇಷ್ಟವಾಗುತ್ತೆ. ಬರೀತಾ ಇರೀ ಸಾರ್..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s