‘ಪಾತು’ – ಒಂದು ಸಣ್ಣ ಕತೆ

paatu-10.jpg

[ಚಿತ್ರ:ಚರಿತಾ]

ಯಾರು ಯಾರೆಂದು ಗೊತ್ತಾಗದಂತೆ ಸುರಿಯುತ್ತಿರುವ ಬೆಳ್ಳನೆಯ ಮಳೆಯಲ್ಲಿ ಪಾತು ತಲೆಯ ಮೇಲೊಂದು ಗೊರಬೆ ಹಾಕಿಕೊಂಡು ನಡೆದು ಹೋಗುತ್ತಿದ್ದಳು. ಗೊರಬೆಯ ಒಳಗೆ ಅವಳ ಮುಖ ಬೆವರಿಕೊಂಡು, ಅವಳ ಕೆನ್ನೆ, ಮೂಗು, ತುಟಿಯ ಮೇಲೆಲ್ಲಾ ಮಳೆಯ ಹನಿಗಳು ಸಿಡಿದು ಅವಳು ಮಳೆಗೆ ಮುಖ ಓರೆ ಮಾಡಿಕೊಂಡು ಕೆಸರಲ್ಲಿ ಹೆಜ್ಜೆ ಹಾಕುತ್ತಿದ್ದಳು. ಅವಳ ನಡುವಲ್ಲಿ ಸೀರೆಯ ಮೇಲೆ ಬಿಗಿದು ಕಟ್ಟಿರುವ ಗೋಣಿಯ ಚೀಲ, ಅವಳ ಕೈಯ್ಯಲ್ಲಿನ ಕಚ್ಚರೆ ತೆಗೆಯುವ ದಬ್ಬೆ ಕತ್ತಿ, ಅವಳ ಕುಳ್ಳನೆ ಕಾಲಿನ ದಪ್ಪಮೀನಖಂಡಗಳು, ಅತ್ತು ಮುಗಿಸಿದಂತೆ ಕೆಂಪಗೆ ಇರುವ ಅವಳ ಮೂಗು, ಕಾದಾಡಿ ಬಂದಂತೆ ಇರುವ ಅವಳ ಕಣ್ಣುಗಳು – ಪಾತು ಇಷ್ಟು ವರ್ಷವಾದರೂ ಅದೇ ಹಳೆಯ ಮದುಮಗಳಂತೆ ಸೊಂಟ     ಬಳುಕಿಸಿಕೊಂಡು, ಗೋಣಿ ಸುತ್ತಿದ್ದ ಅವಳ ಕುಂಡೆ ಅಲ್ಲಾಡುತ್ತಾ ಅವಳು ಕೊಂಚ ಬೆನ್ನು ಬಾಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಬರೆಇಳಿದು ತಿರುವಲ್ಲಿ ಮರೆಯಾಗಿ ಹೋಗುತ್ತಿದ್ದಳು.ಹಾಗೆಯೇ ಹನಿಯುತ್ತಿರುವ ಮಳೆ, ಹಾಗೇ ಇರುವ ಈ ಮಣ್ಣಿನ ಬರೆ. ಹಾಗೇ ತುಂಬಿಕೊಂಡಿರುವ ಭತ್ತದ ಗದ್ದೆ. ಅದೇ ಇಳಿದುಹೋಗುವ ರಸ್ತೆಯ ತಿರುವು. ರಸ್ತೆಯ ಆಚೆ ಕತ್ತಲು ತುಂಬಿಕೊಂಡಿರುವ ಕಾಫಿಯ ತೋಟ. ತೋಟದ ಆಚೆ ತೀರಿಹೊದವರು ಮಲಗಿರುವ ಮೈದಾನಿಯ ಕಾಡು. ಕಾಡೊಳಗೆ ಕಾಣಿಸುವ ಗೋರಿಯ ಕಲ್ಲುಗಳು. ಕಾಡಿನ ನಡುವೆ ಬಿದ್ದುಹೋಗಿರುವಂತೆ ಕಾಣಿಸುವ ಅರಬಿ ಕಲಿಸುವ ಮದರಸದ ಹಂಚಿನ ಮಾಡು. ಮದರಸದ ಮೇಲೆ ನಿಂತುಕೊಂಡಿರುವ ದೂಪದ ಮರ…

ನಗು ಬಂತು. ಸಣ್ಣದಿರುವಾಗ ಪಾತುವಿನ ಕೊಡೆಯೊಳಗೆ ಸೇರಿಕೊಂಡು ಅರಬಿ ಮದರಸಕ್ಕೆ ಕಾಡು ದಾರಿಯಲ್ಲಿ ನಡೆದು ಹೋಗುವಾಗ ತೋರುಬೆರಳಿಂದ ಗೋರಿಯ ಕಲ್ಲುಗಳನ್ನು ತೋರಿಸಿದಾಗ ಪಾತು ನನ್ನ ತೋರು ಬೆರಳನ್ನು ಕಚ್ಚಿ ರಕ್ತ ಚೀಪಿದ್ದಳು. ತೀರಿಹೋದ ತನ್ನ ತಂದೆ ತಾಯಿ ಮಣ್ಣಲ್ಲಿ ಮಣ್ಣಾಗಿ ಮಲಗಿರುವ ಮೈದಾನಿ ಕಾಡನ್ನು ತೋರುಬೆರಳಿನಿಂದ ತೋರಿಸಬಾರದು ಎಂದು ಬೆನ್ನಿಗೆ ಗುದ್ದಿದ್ದಳುಈಗ ನೋಡಿದರೆ ಏನೂ ಅಲ್ಲದವಳ ಹಾಗೆ ಕೈಯಲ್ಲಿ ಕಾಡು ಕಡಿಯುವ ದಬ್ಬೆ ಕತ್ತಿ ಹಿಡಿದುಕೊಂಡು ಮೈದಾನಿ ಕಾಡಿನ ಕಡೆ ನಡೆದುಹೋಗುತ್ತಿದ್ದಳು.

 

ಪಾತು ಕಾಫಿ ತೋಟದ ಕಾವಲುಗಾರ ಕೊಂಬಿನ ಮೀಸೆ ಪೋಕರ್‌ಕಾಕನ ಮೊದಲನೇ ಹೆಂಡತಿಯ ಮಗಳು. ಪೋಕರ್‌ಕಾಕ ಬಂದರು ಎಂದರೆ ನಾವು ಹುಡುಗರು ಕಾಫಿಯ ತೋಟದ ಗಿಡಗಳ ಕೆಳಗೆ ಚೆಲ್ಲಾಪಿಲ್ಲಿಯಾಗುತ್ತಿದ್ದೆವು. ಪೋಕರ್‌ಕಾಕ ಮುಖದ ತುಂಬ ಆನೆಯ ಕೊಂಬಿನಂತೆ ಮೀಸೆ ಬೆಳೆಸಿಕೊಂಡು, ಕಣ್ಣುಗಳನ್ನು ಹಾರಿಸಿಕೊಂಡು, ತೋಟದ ಗಿಳಿಗಳನ್ನೂಇಣಚಿಗಳನ್ನೂ ಜೋರು ಮಾಡುತ್ತಾ, ಕಾಫಿ ತೋಟದ ಕಾಲುದಾರಿಗಳಲ್ಲಿ ಗಂಬೂಟಿನ ಹೆಜ್ಜೆ ಸದ್ದು ಮಾಡಿಕೊಂಡು ಕಿತ್ತಳೆ ಕದಿಯಲು ಬರುವ ಹುಡುಗರನ್ನು ಓಡಿಸುತ್ತಾ ನಡೆದಾಡುತ್ತಿದ್ದರು. ತೋಟದೊಳಗೆ ಮಂಗಗಳ ವಾಸನೆ ಬಂದರೆ ಸಾಕು ಮಂಗಗಳನ್ನು ಬೈಯುತ್ತಾ, ಮನುಷ್ಯರ ವಾಸನೆ ಬಂದರೆ ಹುಡುಗರನ್ನು ಬೈಯುತ್ತಾ ಪೋಕರ್‌ಕಾಕ ನಡೆದಾಡುತ್ತಿದ್ದರೆ, ಪಾತು ಹುಡುಗರ ಜೊತೆ ಸೇರಿಕೊಂಡು ತಂದೆ ಪೋಕರ್‌ಕಾಕನ ಗಂಬೂಟಿನ ಗುರುತುಗಳನ್ನು ನೆಲದಲ್ಲಿ ಪತ್ತೆ ಹಿಡಿಯುತ್ತಾ ಗಾಳಿಯಲ್ಲಿ ತಂದೆಯ ಮೈಯ ವಾಸನೆಯನ್ನು ಕಂಡು ಹಿಡಿಯುತ್ತಾ ತಂದೆ ಆ ಕಡೆ ನಡೆಯಲು ಈ ಕಡೆ ನುಸುಳುತ್ತಾ, ತಂದೆ ಈ ಕಡೆ ಬರಲು ಆ ಕಡೆ ಅಡಗುತ್ತಾ ಕಾಡುಕೋಳಿಯಂತೆ ಕಾಫಿ ತೋಟದೊಳಗೆ ನಡೆದಾಡುತ್ತಿದ್ದಳು.

ಪೋಕರ್‌ಕಾಕ ಮಗಳಿಗೆ ಕಾಡುಕೋಳಿ ಎಂದು ಹೆಸರಿಟ್ಟಿದ್ದರು. ಅವರು ಕತ್ತಲೆಯಾಗುತ್ತಿದ್ದಂತೆ ಬಿಡಾರಕ್ಕೆ ಬಂದು ಕೈಯಲ್ಲಿದ್ದ ಮರದ ಕೋವಿ, ಕವಣೆಗಳನ್ನು ಗೋಡೆಗೆ ಒರಗಿಸಿಟ್ಟು, ತಲೆಯ ಹ್ಯಾಟು ಬಿಚ್ಚಿ ನೆಲದಲ್ಲಿಟ್ಟು ಗಂಬೂಟು ಬಿಚ್ಚಿ, ‘ಎಡೀ, ಕಾಡುಕೋಳಿ’ ಎಂದು ಕರೆದರೆ ಪಾತು ಹೆದರಿ ಮನೆಯ ಹಿಂದಿನ ಬರೆ ಹತ್ತಿ ಕಾಫಿ ಗಿಡಗಳ ಅಡಿಯಲ್ಲಿ ಅಡಗುತ್ತಿದ್ದಳು. ತಂದೆ ಮಗಳನ್ನು ಹುಡುಕುತ್ತಾ ಬರೆ ಹತ್ತಿದರೆ ಅವಳು ಕಾಡು ಹತ್ತಿ ಮರದ ಬೇರುಗಳ ನಡುವೆ ಅಡಗಿಕೊಂಡು, ತಂದೆ ಕಾಡು ಹತ್ತಿದರೆ ಮಗಳು ತರಗೆಲೆಯಂತೆ ಮರದಿಂದ ಉದುರಿ ನೆಲದಲ್ಲಿ ತೆವಳುತ್ತಾ, ಅವರು ಮನೆಗೆ ಬಂದರೆ ಮಗಳು ಸೌದೆಯ ಅಟ್ಟದಲ್ಲಿ ನಡುಗುತ್ತಾ ಉಸಿರಾಡುತ್ತಿರುವ ಸದ್ದು ಅವರಿಗೆ ಕೇಳಿಸಿ ಪೋಕರ್‌ಕಾಕ ಒಲೆಗೆ ಮೆಣಸಿನಪುಡಿ ಉದುರಿಸುವೆನೆಂದು ಅಬ್ಬರಿಸುತ್ತಿದ್ದರು. ಪಾತು ಹೆದರಿ ಸೌದೆಯ ಅಟ್ಟದಿಂದ ನೆಲಕ್ಕೆ ಉದುರಿ ಓಡಿಹೋಗಿ ತಾಯಿ ಕುಂಞತುಮ್ಮನ ಕಾಯಿಲೆ ಹಾಸಿಗೆಯಡಿಯಲ್ಲಿ ಬಿದ್ದುಕೊಂಡು ಹೊರಳಾಡುತ್ತಿದ್ದಳು. ಕಾಯಿಲೆ ಬಿದ್ದು ಬಾಯಿಬಾರದೆ ಹೋಗಿರುವ ತಾಯಿ ಕುಂಞತುಮ್ಮ ಮಗಳನ್ನು ಹೊದ್ದ ಕಾಯಿಲೆ ಕಂಬಳಿಯೊಳಕ್ಕೆ ಸೇರಿಸಿಕೊಂಡು ಮಾತನಾಡದೇ ಕಣ್ಣಲ್ಲಿ ನೀರು ತುಂಬಿಕೊಂಡು ಪೋಕರ್‌ಕಾಕನನ್ನು ಬೇಡಿಕೊಳ್ಳುವಂತೆ ನೋಡುತ್ತಿದ್ದರು.

ಪೋಕರ್‌ಕಾಕ ಮಾತನಾಡದೆ ಹೆಂಡತಿಯನ್ನೊಮ್ಮೆ ನೋಡಿ ಬಿಡಾರದ ಹೊರಗೆ ಬಂದು ಜಗಲಿಯಲ್ಲಿ ಕುಳಿತುಕೊಂಡು ಕತ್ತಲೆಯನ್ನು ನೋಡುತ್ತಾ ಬಾಯಿಯಿಂದ ಮಂಗಗಳನ್ನೂ, ಗಿಳಿಗಳನ್ನೂ, ಹುಡುಗರನ್ನೂ ಓಡಿಸುವ ಸದ್ದು ಮಾಡಿಕೊಂಡು ತಲೆ ಕೆರೆಯುತ್ತಾ ಹಾಗೇ ಕುಳಿತಿರುತ್ತಿದ್ದರು.paatu-11.jpgಹಾಗೇ ಕತ್ತಲು ಹೆಚ್ಚಾಗುತ್ತಾ ಕಾಫಿ ಕಾಡಿನೊಳಗಡೆಯಿಂದ ಜೀರುಂಡೆಗಳು, ರಾತ್ರಿಯ ಹಕ್ಕಿಗಳು, ಕಾಡಾಡುಗಳು ಕೂಗತೊಡಗುವಾಗ ಪಾತು ಒಲೆಯ ಕೆಂಡದ ಮೇಲೆ ಒಣ ಮೀನು ಸುಟ್ಟು, ಮಣ್ಣಿನ ಚಟ್ಟಿಯಲ್ಲಿ ಗಂಜಿ ಬಿಸಿ ಮಾಡಿ ತಟ್ಟೆಯಲ್ಲಿ ಹಾಕಿಕೊಂಡು ಬಂದು ‘ಬಾಪಾ’ ಎಂದು ಹೆದರಿಕೆಯಿಂದ ಉಸುರುತ್ತಿದ್ದಳು. ತಲೆ ಕೆರೆಯುತ್ತಾ ಕತ್ತಲಲ್ಲಿ ನಿದ್ದೆ ಹೋಗುತ್ತಿದ್ದ ಪೋಕರ್‌ಕಾಕ ತಡಬಡಿಸಿ ಹೂಂಕರಿಸಿ ಎದ್ದು ತಟ್ಟೆಗೆ ಕೈ ಹಾಕುತ್ತಿದ್ದರು.ಒಳಗಡೆ ಕಾಯಿಲೆ ಹಾಸಿಗೆಯಲ್ಲಿ ಅವಳ ತಾಯಿ ಕುಂಞತುಮ್ಮ ಕತ್ತಲೆಯಲ್ಲಿ ಕಣ್ಣು ಬಿಟ್ಟುಕೊಂಡು ಬಿಡಾರದೊಳಗಿನ ನಾನು ಸದ್ದುಗಳಿಗೆ ನಾನಾ ಕಾರಣಗಳನ್ನು ಊಹಿಸಿಕೊಂಡು ಕಾಯಿಲೆಯಲ್ಲೂ ನಗುತ್ತಾ ನಿದ್ದೆ ಹೋಗಲು ನೋಡುತ್ತಿದ್ದರು. ಪಾತು ಬಾಪಾ ತಿನ್ನುವುದನ್ನೇ ಹೆದರಿಕೊಂಡು ನೋಡಿ ಗಂಜಿ ಕುಡಿದು ದೀಪ ಕೆಡಿಸಿ ತಾಯಿ ಕುಂಞತುಮ್ಮನ ಕಾಯಿಲೆ ಕಂಬಳಿಯೊಳಕ್ಕ ಸೇರಿಕೊಳ್ಳುತ್ತಿದ್ದಳು.ಅವಳಿಗೆ ಕತ್ತಲೆಯಲ್ಲಿ ಕಂಬಳಿಯೊಳಗೆ ಆಕಾಶದಿಂದ ನಾನಾ ಸದ್ದುಗಳು, ಕೇಳಿಸಿ ಪಡೆದವನು ತಾಯಿಯನ್ನು ಕೊಂಡು ಹೋಗುತ್ತಿರುವ ಹಾಗೆ ಅನ್ನಿಸಿ ಕಣ್ಣು ತೆರೆಯಲು ಹೆದರಿಕೆ ಆಗುತ್ತಿತ್ತು.

ನಾವು ಹುಡುಗರು ಮನುಷ್ಯರು ತೀರಿಹೋಗುವುದನ್ನು ಮೊದಲು ನೋಡಿದ್ದು ಪಾತುವಿನ ತಾಯಿ ಕುಂಞತುಮ್ಮ ತೀರಿ ಹೋದಾಗ. ನಾವು ತೀರಿಹೋದ ಆ ಬಿಡಾರಕ್ಕೆ ಹೋದಾಗ ತೀರಿಹೋದ ಅವಳ ತಾಯಿಯ ಕಾಯಿಲೆಯ ಕಂಬಳಿಗಳನ್ನು ಬಿಡಾರದ ಹೊರಗೆ ಬಿಸಿಲಿಗೆ ಹಾಕಿದ್ದರು. ಬಿಸಿಲಲ್ಲಿ ಕಾಯಿಲೆಯ ಹಾಸಿಗೆ, ಕಾಯಿಲೆಯ ಕಂಬಳಿಗಳು ಕಪ್ಪಗೆ ಮಲಗಿಕೊಂಡಿದ್ದವು. ತೀರಿಹೋದ ಅವಳ ತಾಯಿಯ ಮೇಲೆ ಬಿಳಿಯ ಬಟ್ಟೆ ಸುತ್ತಿ ಮೂರು ಕಟ್ಟು ಹಾಕಿ ಮಲಗಿಸಿದ್ದರು. ಪೋಕರ್‌ಕಾಕನ ಮರದ ಕೋವಿ, ಕಲ್ಲಿನ ಕವಣೆ ಮೂಲೆಯಲ್ಲಿ ಮಲಗಿತ್ತು. ಪೋಕರ್‌ಕಾಕ ಬಿಳಿಯ ಶರಟು ಬಿಳಿಯ ಮುಂಡು ಸುತ್ತಿಕೊಂಡು ತೀರಿಹೋದ ದೇಹದ ಮುಂದೆ ತಲೆ ತಗ್ಗಿಸಿ ಕುಳಿತಿದ್ದರು. ತೋಟದ ಗಂಡಸರು ಸುತ್ತ ಕುಳಿತು ಸಲಾತ್ ಹಾಡುತ್ತಿದ್ದರು. ಸಾಂಬ್ರಾಣಿ ಊದುಬತ್ತಿಯ ಪರಿಮಳದಲ್ಲಿ ಗಂಡಸರು ಸಲಾತ್ ಹಾಡುತ್ತಾ ಒಳಗಡೆ ಹೆಂಗಸರು ಅವಲಕ್ಕಿ ತುಂಬಿಕೊಂಡು ಬಿಳಿಯ ಬಟ್ಟೆ ಹೊದ್ದುಕೊಂಡು ದೇಹದ ಸುತ್ತಾ ಓಡುತ್ತಿರುವಾಗ ಪಾತು ಮೆಲ್ಲಗೆ ಹೆಂಗಸರ ನಡುವಿಂದ ತೂರಿ ಬಂದು ನಮ್ಮ ಜೊತೆ ಸೇರಿಕೊಂಡಿದ್ದಳು. ಬಿಡಾರದ ಒಳಗೆ ಕತ್ತಲು ತುಂಬಿಕೊಂಡು ಹೊರಗೆ ಅಂಗಳದಲ್ಲಿ ಬಿಸಿಲು ಹೊಳೆದು, ಅವಳು ಹೊರಗೆ ಬಂದು ಬಿಸಿಲನ್ನು ನೋಡುತ್ತಾ ಒಳ ನಡೆದು  ತೀರಿಹೋದ ತಾಯಿಯ ಸುತ್ತ ತಿರುಗುತ್ತ, ಅಡಿಗೆಯ ಕೋಣೆಯೊಳಗೆ ಸೇರಿ ಹೆಂಗಸರ ನಡುವೆ ನಡೆಯುತ್ತಾ ಇರುವಾಗ ಗಂಡಸರು ಎದ್ದು ತೀರಿಹೋದ ಕುಂಞತುಮ್ಮನ ದೇಹವನ್ನು ಚಾಪೆಯಿಂದ ಕೈಕೊಟ್ಟು ಎತ್ತಿ ಮಯ್ಯತ್ತ್ ಪೆಟ್ಟಿಗೆಯಲ್ಲಿ ಮಲಗಿ ಪೆಟ್ಟಿಗೆಯ ನಾಲ್ಕು ಕಡೆ ನಾಲ್ಕು ಜನ ಎತ್ತಿಕೊಂಡು ಅಂಗಳಕ್ಕೆ ಇಳಿದು ಬಿಸಿಲಲ್ಲಿ ಸಲಾತ್ ಹೇಳುತ್ತಾ ಕಾಫಿ ತೋಟದ ಕಾಲುದಾರಿಯಲ್ಲಿ ಧೂಳು ಎಬ್ಬಿಸುತ್ತಾ ನಡೆದಿದ್ದರು.

ನಾವು ಹುಡುಗರು ತುಟಿಯಲ್ಲೇ ಸಲಾತನ್ನು ಗುಣಗುಣಿಸುತ್ತಾ ಗಂಡಸರ ಜೊತೆ ಸೇರಿಕೊಂಡು ನಮ್ಮ ಮೂಗಲ್ಲಿ ಕಾಲುದಾರಿಯ ಧೂಳು ತುಂಬಿಕೊಂಡು, ತೀರಿಹೋದ ದೇಹದ ಪರಿಮಳ ಸೇರಿಕೊಂಡು ನಮಗೆ ಸಲಾತ್ ಹೇಳುವುದು ಸರಿಯಾಗಿ ಬಾರದೆ ತುಟಿಯನ್ನು ಅಲ್ಲಾಡಿಸುತ್ತಾ ಏನು ಹೇಳುವುದು ಎಂದು ಗೊತ್ತಾಗದೆ ಮುಖ ಮುಖ ನೋಡಿಕೊಂಡು ಮಯ್ಯತ್ತ್ ಪೆಟ್ಟಿಗೆಯ ಹಿಂದೆ ನಡೆಯುತ್ತಿದ್ದೆವು.ನಾವು ನಡೆದು ತೋಟದ ಗೇಟಿನವರೆಗೆ ಬಂದು, ಗಂಡಸರು ನಮ್ಮನ್ನು ಬಿಟ್ಟು ಟಾರು ರಸ್ತೆಯಲ್ಲಿ ದೇಹವನ್ನು ಎತ್ತಿಕೊಂಡ ಮಣ್ಣುಮಾಡುವ ಮೈದಾನಿಯ ಕಡೆ ನಡೆದು ಹೋಗಿದ್ದರು.

ನಾವು ನಿಂತಲ್ಲೇ ನಿಂತುಕೊಂಡು ಟಾರು ರಸ್ತೆಯಲ್ಲಿ ಲಾರಿಗಳೂ, ಬಸ್ಸುಗಳೂ ಹೋಗಿಬರುತ್ತ ಆಕಾಶದಲ್ಲಿ ಮೆಲ್ಲಗೆ ಮೋಡಗಳು ತುಂಬಿಕೊಂಡು ಆಕಾಶದ ಒಂದು ಕೊನೆ ಕಪ್ಪಗೆ ಕಾಣುತ್ತಾ ನಾವು ಹೆದರಿ ಬಂದ ದಾರಿಯಲ್ಲೇ ಹಿಂದೆ ನಡೆದಿದ್ದೆವು. ಕಾಫಿ ತೋಟದ ತುಂಬಾ ತೀರಿಹೋದ ಪರಿಮಳ ತುಂಬಿಕೊಂಡು ನಮಗೆ ಏನೆಂದು ಹೇಳಲು ಬಾರದೆ ನಾವು ಆಕಾಶ ನೋಡುತ್ತಾ ನಡೆಯುವಾಗ ನೋಡಿದರೆ ಪಾತು ಎದುರಿನಿಂದ ನಡೆದು ಬರುತ್ತಿದ್ದಳು.ಅವಳು ಕಾಲುದಾರಿಯ ಧೂಳಿನಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುತ್ತಾ ಬರುತ್ತಿದ್ದಳು. ಅವಳ ಕಾಲಗೆಜ್ಜೆಗಳು ಸದ್ದು ಮಾಡುತ್ತಾ ಅವಳು ಬಂದ ದಾರಿಯ ಹಿಂದೆ ಬಿಸಿಲು ಹೊಳೆಯುತ್ತಿತ್ತು. ಸಂಜೆಯ ಬೆಳಕು ಕಾಫಿ ತೋಟದ ಗಿಡಮರಗೆಲ್ಲುಗಳ ಎಡೆಯಿಂದ ಅವಳ ಮೇಲೆ ಬಿದ್ದು ಅವಳು ಏನೂ ಮಾತನಾಡದೆ ನಮ್ಮ ಜೊತೆ ಸೇರಿಕೊಂಡಿದ್ದಳು. ಅವಳ ಮೈಯಿಂದ ತೀರಿಹೋದ ಮನೆಯ ಪರಿಮಳ ಬಂದು ಅವಳು ನಮ್ಮ ನಡುವೆ ಬಂದು ನಿಂತುಕೊಂಡಿದ್ದಳು. ನಮಗೆ ಏನು ಹೇಳುವುದು ಗೊತ್ತಾಗದೆ ಮೊದಲು ಬಿಸಿಲಿದ್ದ ಜಾಗದಲ್ಲೂ ಈಗ ಮೋಡದ ನೆರಳು ಬಂದು ಕಾಫಿಯ ತೋಟವೆಲ್ಲಾ ನೇರಳೆಯಾಗಿ ನಾವು ಏನೂ ಹೇಳದೆ ಕಾಫಿತೋಟದ ಕಾಲುದಾರಿಯ ನಡುವೆ ಧೂಳಿನಲ್ಲಿ ಗುಳಿ ತೋಡಿ ಮನೆಯ ಆಟವನ್ನು ಆಡಲು ಶುರು ಮಾಡಿದ್ದೆವು.

ಪಾತು ಮಾತಾಡದೆ ಬೆರಳಿಂದ ನೆಲ ಬಗೆಯುತ್ತಾ ಅವಳ ಕೈಯ್ಯ ಬಳೆಗಳ ಸದ್ದು ಮಾಡಿ, ಅವಳು ಬಗೆದ ಮಣ್ಣನ್ನು ಹೊರಗೆ ಚೆಲ್ಲುತ್ತಾ ಕಾಫಿಯ ಗಿಡಿಗಳ ನಡುವಿನಿಂದ ಪಾಲವಾನದ ಬಿದ್ದಿದ್ದ ಗೆಲ್ಲುಗಳನ್ನು ಮುರಿದು ತಂದು ಕಂಬ ನೆಡುತ್ತಾ ಕಾಡುಗಿಡಗಳನ್ನು ತಂದು ಮಾಡು ಹೊದೆಸಿ ಮನೆಯನ್ನು ಕಟ್ಟಿ, ಮನೆಯೊಳಗೆ ಮಂಚ, ಬೆಂಚು, ಉಯ್ಯಾಲೆಗಳನ್ನು ಕಟ್ಟಿ, ಒಲೆಯನ್ನು ಹೂಡಿದ್ದಳು. ನಮ್ಮ ಜೇಬಿನಿಂದ ಅವಲಕ್ಕಿ ತೆಗೆದು ಎಲೆಯ ಪಾತ್ರೆಗಳಲ್ಲಿ ಬೇಯಿಸಿ, ಎಲೆಯ ಬಟ್ಟಲುಗಳಲ್ಲಿ ಬಡಿಸಿಕೊಟ್ಟಿದ್ದಳು.ನಾವು ತಿಂದ ಬಾಯಿ ಒರೆಸಿ ತೋಟದಲ್ಲೆಲ್ಲಾ ಕತ್ತಲಾಗುತ್ತಾ ಕಾಫಿ ತೋಟದ ನೇರಳೆ ಬಣ್ಣ ಕಪ್ಪಾಗುತ್ತಾ ಬಂದು ನಮ್ಮ ನೆರಳುಗಳು ಮಾಯವಾಗಿ, ಜೀರುಂಡೆಗಳು ಕೂಗಲು ತೊಡಗಿ ನೋಡಿದರೆ ನಮ್ಮ ಮನೆಯ ಮಾಡಿನ ಮೇಲೆ ಟಪ್ಪನೆ ಮಳೆಯ ಹನಿಗಳು ಬೀಳಲು ತೊಡಗಿ ನಾವು ಮನೆಯನ್ನು ಒದ್ದು ಬೀಳಿಸಲು ತೊಡಗಿದ್ದೆವು. ಮನೆಯನ್ನು ಬೀಳಿಸಲು ಪಾತುವೂ ಸೇರಿಕೊಂಡು ನಾವು ಕೈ ಕೈ ಹಿಡಿದುಕೊಂಡು ಆ ಒಂದೊಂದೇ ಬೀಳುವ ಮಳೆಯ ಹನಿಗಳ ನಡುವೆ ನುಸುಳಿಕೊಂಡು ನಡೆಯುತ್ತಾ ನಮ್ಮ ಮೂಗಿನಲ್ಲಿ ಮಣ್ಣು-ಮರಣದ ಪರಿಮಳ ತುಂಬಿಕೊಂಡು ಮನೆಗೆ ನಡೆದು ಬಂದಿದ್ದೆವು.

ಮಳೆ ಜೋರಾಗಿ ಬಂದು ನಿಂತುಹೋಗಿತ್ತು. ಪಾತು ಹೆದರಿಕೊಂಡು ನಮ್ಮ ನಡುವಲ್ಲಿ ಮಲಗಿ ನಿದ್ದೆ ಹೋಗಿದ್ದಳು. ಮೆಲ್ಲನೆ ಬೀಳಲು ತೊಡಗಿದ ಮಳೆ ಗಾಳಿ ಜೋರಾಗಿ ಬೀಸಿ ಆಕಾಶದಲ್ಲಿ ಮಿಂಚುತ್ತಾ ಗುಡುಗು ಕೇಳಿಸಿಕೊಂಡು ಆಕಾಶದಿಂದ ಆಲಿಕಲ್ಲು ಬೀಳಲುತೊಡಗಿತ್ತು. ಮಳೆ ನಿಲ್ಲದೆ ಕುಂಞತುಮ್ಮನನ್ನು ಮಣ್ಣುಮಾಡಲು ಮೈದಾನಿಗೆ ಹೋದ ಗಂಡಸರು ತಿರುಗಿ ಬಾರದೆ ನಾವು ಮಳೆಯ ಅಡಿಯಲ್ಲಿ ಮನೆಯೊಳಗೆ ಕತ್ತಲೆಯಲ್ಲಿ ನಾನಾ ಕತೆಗಳನ್ನು ಕೇಳುತ್ತಾ ಮಲಗಲು ನೋಡಿದ್ದೆವು. ಪಾತು ಬಿಟ್ಟ ಕಣ್ಣುಗಳನ್ನು ಬಿಟ್ಟುಕೊಂಡು ಕತೆ ಕೇಳಲು ಆಗದೆ ಮಾಡನ್ನು ನೋಡುತ್ತಾ ಮಳೆಗೆ ಹೆದರಿಕೊಂಡು ಮುಖವನ್ನು ಚಾಪೆಗೆ ಒತ್ತಿಕೊಂಡು ಮಲಗಿದ್ದಳು. ಕತೆ ಹೇಳುವ ಅದ್ರಾಮ ಕಿಟಕಿಯಿಂದ ಮಳೆಯನ್ನು ನೋಡುತ್ತಾ ಮರಣದ ಕತೆಗಳನ್ನು ಹೇಳುತ್ತಿದ್ದ.ತೀರಿ ಹೋದವರನ್ನು ಆರಡಿ ಮೂರಡಿಯ ಗುಂಡಿಯಲ್ಲಿ ಮಣ್ಣುಮಾಡಿ ಗಂಡಸರು ಮೈದಾನಿಯಿಂದ ಕಾಲು ತೆಗೆಯುವ ಮೊದಲೇ ಕೈಯ್ಯಲ್ಲಿ ಬಾಳುಕತ್ತಿ ಹಿಡಿದ ಮರಣದ ದೇವದೂತರು ತೀರಿಹೋದವರನ್ನು ಬಾಳು ಕತ್ತಿಯಿಂದ ಎರಡೂ ಬದಿಯಿಂದ ಚುಚ್ಚುತ್ತಾ ಯಾರು ನಿನ್ನ ತಂದೆ, ಯಾರು ನಿನ್ನ ತಾಯಿ, ಯಾರು ನಿನ್ನ ಪಡೆದವನು, ಯಾರು ನಿನ್ನ ಪ್ರವಾದಿ ಎಂದು ಕೇಳುವರೆಂದೂ, ಆಗ ತೀರಿ ಹೋದವರು ಅರಬಿಯಲ್ಲಿ ಏನು ಹೇಳುವುದು ಎಂದು ಗೊತ್ತಾಗದೆ ಬಾಯಿ ಬಾರದ ನಾಕಾಲಿಗಳ ಹಾಗೆ ಆಗಿ ಹೋಗುವರೆಂದೂ, ಆಗ ದೇವದೂತರು ತೀರಿಹೋದವರನ್ನು ಚುಚ್ಚುತ್ತಾ ಮಳೆ ಬಂದು, ಮಳೆ ನಿಂತು, ಬಿಸಿಲಾಗಿ ರಾತ್ರಿ ಬೆಳಗಾಗಿ, ಕಾಲಗಳು ಕಳೆದು, ಕಾಲಗಳು ಮುಗಿದು ಖಯಾಮತ್ ಎಂಬ ಪ್ರಳಯದ ಅಂತ್ಯ ದಿನದವರೆಗೂ ಚುಚ್ಚುತ್ತಲೇ ಇರುವರೆಂದೂ ಆದುದರಿಂದ ನಾವು ಹುಡುಗರು ಮದರಸಕ್ಕೆ ಹೋಗಿ ಅರಬಿ ಕಲಿತು ತಂದೆ ಯಾರೆಂದು ಕೇಳಿದರೆ ‘ಆದಂ ಬಾಪಾ’ ಎಂದು ಹೇಳಬೇಕೆಂದೂ, ತಾಯಿ ಯಾರೆಂದು ಕೇಳಿದರೆ ‘ಅವ್ವಾ ಉಮ್ಮ’ ಎಂದು ಹೇಳಬೇಕೆಂದೂ, ಪ್ರವಾದಿಯನ್ನು ಕೇಳಿದರೆ ಪಡೆದವನ ಪುಣ್ಯದ ಹೆಸರನ್ನು ಹೇಳಬೇಕೆಂದೂ ಅದ್ರಾಮ ಕಿಟಕಿಯಿಂದ ಮಳೆಯನ್ನು ನೋಡುತ್ತಾ ಮರಣದ ಕಥೆಗಳನ್ನು ಹೇಳುತ್ತಾ ಅವನ ಮುಖದಲ್ಲಿ ಸಿಡಿಲು ಮಿಂಚುಗಳು ಮಿಂಚಿ ನಾವು ಅವನ ಕತೆಗೆ ನಡುಗಿಕೊಂಡು ತಾಯಿ ಯಾರೆಂದು ತಂದೆ ಯಾರೆಂದು ಹೇಳುವುದು ಗೊತ್ತಾಗದೆ ಮೈಗೆ ಮೈ ಕೋಸಿಕೊಂಡು ಮಲಗಿದ್ದೆವು.

ಪಾತು ಮುಖವನ್ನು ಒತ್ತಿ ಹಿಡಿದು ಒಂದು ಕೈಯಿಂದ ಕತೆ ಹೇಳುವ ಅದ್ರಾಮನನ್ನು ಬಳಸಿ ಹಿಡಿದು ಜೋರಾಗಿ ಉಸಿರುಬಿಡುತ್ತಿದ್ದಳು

.ಮಳೆ ನಿಂತು ಕುಂಞತುಮ್ಮನನ್ನು ಮಣ್ಣುಮಾಡಲು ಹೋದ ಗಂಡಸರು ಕಾಲಿನ ಕೆಸರನ್ನು ತೊಳೆದುಕೊಂಡು ಒಳಗೆ ಬಂದು ಕತ್ತಲೆಯಲ್ಲಿ ಮಾತನಾಡುತ್ತಾ ಸದ್ದು ಮಾಡುತ್ತಿರುವಾಗ ಪಾತು ನಮ್ಮ ನಡುವೆ ನಿದ್ದೆ ಹೋಗಿದ್ದಳು. ಹೊರಗೆ ಮಳೆ ನಿಂತು ಕಾಫಿ ಗಿಡಗಳ ಮೇಲೆ ಬೆಳದಿಂಗಳು ಆಡವಾಡುತ್ತಿತ್ತು. ತೋಟದ ನಡುವೆ ಕುತ್ತಿರಿ ಹಕ್ಕಿಗಲು ಕೂಗುತ್ತಿದ್ದವು. ಚಿಮಿಣಿಯ ಮುಂದೆ ಗಂಡಸರು ಕುಳಿತು ಮಾತನಾಡುತ್ತಾ ಅವರ ನಡುವೆ ಪೋಕರ್‌ಕಾಕ ಬೆಚ್ಚಗೆ ಕುಳಿತುಕೊಂಡು, ಮನೆಯೊಳಗೆಲ್ಲ ಮೈದಾನಿಯಲ್ಲಿ ಮಣ್ಣು ಮಾಡಿ ಬಂದ ಗಂಡಸರ ಪರಿಮಳ ತುಂಬಿಕೊಮಡು ಪಾತು ಕಣ್ಣು ತೆರೆಯದೆ ಒತ್ತಾಯದಿಂದ ರೆಪ್ಪೆಗಳನ್ನು ಮುಚ್ಚಿಕೊಂಡು ಉಸಿರುಬಿಡುತ್ತಿದ್ದಳು. ಪೋಕರ್‌ಕಾಕ ಚಿಮಿಣಿಯ ದೀಪ ಕೈಯಲ್ಲಿ ಹಿಡಿದುಕೊಂಡು ಬಂದು ಮಲಗಿದ್ದ ಮಗಳ ಮುಖದ ಬಳಿ ತಂದು ಅವಳನ್ನು ಅಲ್ಲಾಡಿಸಿ ಎಬ್ಬಿಸಿ ಎತ್ತಿಕೊಂಡು ಹೆಗಲಿಗೆ ಹಾಕಿಕೊಳ್ಳಲು ನೋಡಿದ್ದರು. ಪಾತು ಕಣ್ಣು ತೆರೆಯದೆ ಚಾಪೆಯನ್ನು ಕೈಯಲ್ಲಿ ಕಚ್ಚಿ ಹಿಡಿದುಕೊಂಡು ಅವಳನ್ನು ಎತ್ತಿದರೆ ಚಾಪೆಯೂ ನೆಲದಿಂದ ಎದ್ದು ಬಂದು ಪಾತು ಪೋಕರ್‌ಕಾಕನ ಮೂಗು ಮುಖವನ್ನೆಲ್ಲಾ ಪರಚುತ್ತಾ ಕಿರುಚಾಡತೊಡಗಿದ್ದಳು.ಪೋಕರ್‌ಕಾಕ ಮುಖವನ್ನು ಒರೆಸಿಕೊಂಡು ಅವರ ಕಣ್ಣುಗಳು ಅಳುವಂತೆ ಕಂಡು ಅವರು ಮಗಳನ್ನು ನಮ್ಮ ನಡುವೆಯೇ ಮಲಗಲು ಬಿಟ್ಟು ಬೆಳದಿಂಗಳಲ್ಲಿ ಲೈನು ಮನೆಯ ಕಡೆಗೆ ನಡೆದುಹೋಗಿದ್ದರು. ಪಾತು ಮುಖವನ್ನು ಚಾಪೆಗೆ ಒತ್ತಿಹಿಡಿದು ಕುಂಡೆ ಮೇಲೆ ಮಾಡಿಕೊಂಡು ಬಿಕ್ಕಳಿಸುತ್ತಾ ನಮ್ಮ ನಡುವೆ ನಿದ್ದೆ ಹೋಗಿದ್ದಳು.

ನಿಧಾನಕ್ಕೆ ಕಿವಿಯಿಂದ ಕುತ್ತಿರಿ ಹಕ್ಕಿಗಳ ಕೂಗು ಮರೆಯಾಗುತ್ತಾ ಕಣ್ಣುಗಳಿಂದ ಬೆಳದಿಂಗಳು ಮಾಯವಾಗುತ್ತ ಕತ್ತಲು ತುಂಬಿಕೊಂಡು ನಾವು ನಿದ್ದೆ ಹೋಗಿದ್ದೆವು.ನಾವು ಬೆಳಿಗ್ಗೆ ಎದ್ದು ನೋಡಿದರೆ ಮೂಗಿಗೆ ಮೂತ್ರದ ವಾಸನೆ ಹೊಡೆದು ಕತೆ ಹೇಳುವ ಅದ್ರಾಮ ಮೂಗು ಮುಚ್ಚಿಕೊಂಡು ಮೂತ್ರದ ವಾಸನೆ ಎಂದು ಮುಗಿನಲ್ಲೇ ಕಿರುಚಾಡುತ್ತಾ ಯಾರು ಚಾಪೆಯಲ್ಲಿ ಮೂತ್ರ ಮಾಡಿದವರು? ಚಾಪೆಯಲ್ಲಿ ಮೂತ್ರ ಮಾಡಿದವರು ಯಾರು? ಎಂದು ಮೂಗಿನಿಂದ ಹಾಡಲು ತೊಡಗಿ, ನೋಡಿದರೆ ಪಾತು ಅಳುತ್ತಾ ಎದ್ದು ಓಡಿ ಹೋಗಿದ್ದಳು.

ಹೆಂಡತಿ ಕುಂಞತುಮ್ಮ ತೀರಿದ ಮೇಲೆ ಕೊಂಬಿನ ಮೀಸೆ ಪೋಕರ್‌ಕಾಕ ಹಗಲು ರಾತ್ರಿಯೂ ಕೈಯಲ್ಲಿ ಮರದ ಕೋವಿ ಹಿಡಿಕೊಂಡು ಕಾಫಿ ಕಾಡಿನೊಳಗೆ ಸುತ್ತಲು ಶುರುಮಾಡಿದ್ದರು. ಹಗಲು ಮಂಗಗಳನ್ನೂ, ಗಿಳಿಗಳನ್ನೂ, ಹುಡುಗರನ್ನೂ ಹೆದರಿಸುತ್ತಾ ರಾತ್ರಿಯಲ್ಲಿ ಬಲೆ ಹಾಕಿ ಕಾಡುಕೋಳಿಗಳನ್ನು, ಕಾಡು ಮೊಲಗಳನ್ನು ಹಿಡಿಯುತ್ತಾ ಕಾಡಿನಲ್ಲಿ ನಡೆದಾಡುತ್ತಿದ್ದರು. ಪಾತು ಕೈಯಲ್ಲಿ ಗಂಜಿಯ ಡಬ್ಬ ಹಿಡಿದುಕೊಂಡು ಬಾಪಾನ ಗಂಬೂಟಿನ ಹೆಜ್ಜೆ ಗುರುತುಗಳನ್ನು ನಲೆದಲ್ಲಿ ಕಂಡು ಹುಡುಕುತ್ತಾ ‘ಬಾಪಾ’ ಎಂದು ಕೂಕುಳು ಹಾಕುತ್ತಾ ಕೂದಲು ಕೆದರಿಕೊಂಡು ಕಾಲು ದಾರಿಗಳಲ್ಲಿ ನಡೆಯುತ್ತಿದ್ದಳು. ಬಾಪಾನ ಮುಖ ಕಂಡೊಡನೆ ನೆಲದಲ್ಲಿ ಗಂಜಿಯ ಡಬ್ಬವನ್ನು ಇಟ್ಟು ಅಲ್ಲಿಂದ ಓಡಿ ಹುಡುಗರನ್ನು ಸೇರಿಕೊಳ್ಳುತ್ತಿದ್ದಳು.

ನಾವು ಕಾಡು ಹತ್ತಿ ತೋಟದ ಬೇಲಿಯ ಬದಿಯ ಚಕ್ಕೋತದ ಮರದಡಿಯಲ್ಲಿ ಸೇರಿ ಕತೆ ಹೇಳುವ ಅದ್ರಾಮ ಚಕ್ಕೋತದ ಮರವನ್ನು ಮಂಗನಂತೆ ಹತ್ತಿ ಗೆಲ್ಲನಿಂದ ಗೆಲ್ಲಿಗೆ ಜಿಗಿದು ಗೆಲ್ಲುಗಳ ಮೇಲೆ ನಡೆಯುತ್ತಾ ಮುಳ್ಳುಗಳಿಂದ ಬಿಡಿಸಿಕೊಂಡು ಚಕ್ಕೋತದ ಹಣ್ಣುಗಳನ್ನು ಪಾತುವಿನ ಮಡಿಲಿಗೆ ಎಸೆಯುತ್ತಿದ್ದನು. ನಾವು ನಂತರ ಕಿತ್ತಲೆ ಮರಗಳನ್ನು ಅಲುಗಿಸಿ ಕರಟು ಕಿತ್ತಲೆಯ ಕಾಯಿಗಳು ನೆಲಕ್ಕೆ ಬಿದ್ದು ಪಾತು ಅವುಗಳನ್ನು ಮಡಿಲಲ್ಲಿ ಕಟ್ಟಿಕೊಂಡು ನಂತರ ನಾವು ಏಲಕ್ಕಿ ಕಾಡುಗಳ ನಡುವೆ ನಡೆದು ಗಾಂದಾರಿ ಮೆನಸಿನಕಾಯಿಗಳನ್ನು ಕಿತ್ತು ಚಕ್ಕೋತ ಕಿತ್ತಲೆಗಳನ್ನು ಸುಲಿದು ತೋಳೆ ಮಾಡಿ, ಪಾಲವಾನದ ಎಲೆಯ ಪಾತ್ರೆಗಳಿಗೆ ಸುರಿಯುತ್ತಿದ್ದೆವು. ಗಾಂದಾರಿ ಮೆಣಸನ್ನು ನುಲಿದು ಪಾತು ತನ್ನ ತಲೆಯ ಬಟ್ಟೆಯ ಕೊನೆಯಿಂದ ಉಪ್ಪಿನ ಗಂಟನ್ನು ಬಿಚ್ಚಿ ಪಾಲನಾನದ ಎಲೆಗೆ ಸುರಿದು ಎರಡೂ ಕೈಗಳಿಂದ ಅವುಗಳನ್ನು ಕಲಸುತ್ತಾ ಅವಳ ಮುಖವೆಲ್ಲಾ ಹುಳಿಹುಳಿಯಾಗಿ ಅವಳನ್ನು ನೋಡುತ್ತಾ ನಮ್ಮ ಕಣ್ಣುಗಳು ಹುಳಿಹುಳಿಯಾಗಿ, ಕಿವಿನಾಲಗೆ ಹುಳಿಯಾಗಿ ತಲೆಯೊಳಗೆಲ್ಲಾ ಹುಳಿಹುಳಿಯಾಗಿ ಪಾತು ಏನೂ ಆಗಿಯೇ ಇಲ್ಲವೆಂಬಂತೆ ಎರಡೂ ಕೈಗಳನ್ನು ನೆಕ್ಕುತ್ತಾ ತಿನ್ನುತ್ತಿದ್ದಳು.ಕಥೆ ಹೇಳುವ ಅದ್ರಾಮ ‘ಎಡೀ ಮೂತ್ರದ ಪಾತೂ ಅಷ್ಟೊಂದು ಹುಳಿ ತಿಂದರೆ ಮೂತ್ರ ಮಾಡುವಲ್ಲಿ ಉರಿಯುತ್ತದೆ ಹೆಣ್ಣೇ’ ಎಂದು ಹಾಡಲು ಅವಳು ಮುಖವನ್ನೆಲ್ಲಾ ಹುಳಿ ಮಾಡಿಕೊಂಡು ಅವನನ್ನು ಚಿವುಟಲು ಓಡಿಸುತ್ತಿದ್ದಳು. ಅವನೂ ಎದ್ದು ಅವರಿಬ್ಬರೂ ಕಾಡಿನೊಳಗೆ ಓಡಿ ಇಬ್ಬರೂ ಕಾಣದಾಗಿ ನಾವು ಹುಡುಕಿಕೊಂಡು ಹೋಗಿ ನೋಡಿದರೆ ಅವರಿಬ್ಬರೂ ಕಾಫಿ ಗಿಡದಡಿಯಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಅವಳು ಅವನನ್ನೂ ಪರಚುತ್ತಾ ಚಿವುಟುತ್ತಾ ಅವನು ಕಚಗುಳಿಯಿಂದ ಹೊರಳುತ್ತಾ ನಗುತ್ತಿದ್ದ.

ನಾವು ಮೈದಾನಿಯ ಕಾಡಿನ ದೂಪದ ಮರದಡಿಯಲ್ಲಿ ಗೋರಿಕಲ್ಲುಗಳ ನಡುವೆ ಅರಬಿ ಕಲಿಸುವ ಮದರಸದ ಮರದ ಬೆಂಚಿನಲ್ಲಿ ತೋಳಿಗೆ ತೋಳು ಕೋಸಿ ಸಾಲಾಗಿ ಕುಳಿತು ತಲೆದೂಗುತ್ತಾ ಪಾತು ಒಂದೊಂದು ಬೆರಳಿಂದ ಒಮ್ಮೆಮ್ಮೆ ತಲೆಯ ತಟ್ಟವನ್ನೂ, ತಲೆಯ ಮುಡಿಯನ್ನೂ ಸರಿಪಡಿಸುತ್ತಾ ಸುರುಮ ಹಚ್ಚಿದ ಕಾಡಿಗೆಯ ಕಣ್ಣುಗಳನ್ನು ಕಿರಿದುಗೊಳಿಸಿ ನೋಡಿ ತಟ್ಟನೆ ಕಣ್ಣು ತಪ್ಪಿಸುತ್ತಾ ನಾಲಗೆಯನ್ನು ಕೆಂಪಗೆ ಬಾಯೊಳಗೆ ಅಲುಗಾಡಿಸುತ್ತಾ ಕುರಾನು ಓದುತ್ತಿದ್ದಳು. ನಮಗೆ ಕಲಿಸುವ ಉಸ್ತಾದ್ ಮೇಜಿನ ಮೇಲೆ ಚೂರಲು ಬೆತ್ತವನ್ನು ಇಟ್ಟುಕೊಂಡು ಬಾಯಲ್ಲಿ ಬೀಡಿ ಕಚ್ಚಿಕೊಂಡು ಕುರ್ಚಿಯ ಮೇಲೆ ಕೂತು ಎರಡು ಕಾಲುಗಳನ್ನು ಮೇಜಿನ ಮೇಲೆ ಅಗಲಿಸಿ ಇಟ್ಟು ತಲೆದೂಗುತ್ತಾ ಮಾಡಿನಕನ್ನಡಿಯಿಂದ ಮೇಲೆ ಆಡುವ ದೂಪದ ಮರದ ಕೊಂಬೆಗಳನ್ನು ನೋಡುತ್ತಾ ಕಣ್ಮುಚ್ಚಿಕೊಂಡು ನಿದ್ದೆ ಮಾಡುತ್ತಿದ್ದರು. ಉಸ್ತಾದರು ನಿದ್ದೆ ಮಾಡುತ್ತಾ ಬೀಡಿಯ ತುಂಡು ಅವರ ಬಾಯಿಂದ ಬಿದ್ದ ಅವರ ತಲೆ ಹೆಗಲ ಮೇಲೆ ತೂಗಾಡಲು ನಾವು ಕುರಾನು ಓದುವುದು ನಿಲ್ಲಿಸಿ ಅದೇ ರಾಗದಲ್ಲಿ ‘ಉಮ್ಮನಿಗೆ ಬಾಪಾ, ಅಕ್ಕನಿಗೆ ಬಾವ, ಪಾತುಗೆ ಅದ್ರಾಮ, ನಮಗೆ ಯಾರು ಅಲ್ಲಾ? ಯಾರಿಲ್ಲ!’ ಎಂದು ಹಾಡುತ್ತಿದ್ದೆವು. ನಾವು ಹಾಡುತ್ತಾ ಮೈದಾನಿಯ ಕಾಡಿನ ನೇರಳೆಯ ಹಣ್ಣುಗಳನ್ನು ಕಲ್ಲು ಒಗೆದು ಬೀಳಿಸಿ ಬಾಯೆಲ್ಲಾ ನೇರಳೆ ಮಾಡಿಕೊಂಡು ತಿಂದು ಗೋರಿಕಲ್ಲುಗಳ ನಡುವೆ ಅಡಗುವ ಆಟ ಆಡುತ್ತಿದ್ದವು. ಗೋರಿಕಲ್ಲುಗಳ ನಡುವೆ ಒಬ್ಬೊಬ್ಬರೇ ಅಡಗಿಕೊಂಡು ನಮಗೆ ಈ ನಡು ಮಧ್ಯಾಹ್ನ ಯಾರ ಶಬ್ದವೂ ಕೇಳದೆ ಹೆದರಿಕೆಯಾಗುತ್ತಿತ್ತು. ಎಲ್ಲರಿಗೂ ಹೆದರಿಕೆಯಾಗಿ ಎಲ್ಲರೂ ಒಮ್ಮೆಲೇ ನಡುಗಿಕೊಂಡು ಅಡಗಿದ್ದಲ್ಲಿಂದ ಬಂದು ಜೊತೆಗೆ ಸೇರಿ ನೋಡಿದರೆ ಪಾತು ಕಾಣಿಸದೆ ನಾವೆಲ್ಲರೂ ಹೆದರಿ ನೋಡಿದರೆ ತನ್ನ ಉಮ್ಮ ಕುಂಞತುಮ್ಮನ ಗೋರಿಯ ಬಳಿಯಿಂದ ಲಂಗದಲ್ಲೆಲ್ಲಾ ಮಾತ್ರ ಮಾಡಿಕೊಂಡು ಅಳುತ್ತ ನಡೆದು ಬರುತ್ತಿದ್ದಳು.

ನಾವು ಹುಡುಗರು ಮನುಷ್ಯರು ಮದುವೆ ಆಗುವುದನ್ನು ಮೊದಲು ನೋಡಿದ್ದು ಪಾತುವಿನ ಬಾಪ ಕೊಂಬಿನ ಮೀಸೆ ಪೋಕರ್‌ಕಾಕ ಎರಡನೇ ಮದುವೆ ಮಾಡಿಕೊಂಡಾಗ. ನಾವು ಮದುವೆಗೆ ಪಾತುವಿನ ಮನೆಗೆ ಹೋದಾಗ ಕಪ್ಪಗೆ ಕರಿ ಹಿಡಿದಿದ್ದ ಬಿಡಾರವನ್ನೆಲ್ಲಾ ಸುಣ್ಣ ಬಳಿದು ಬೆಳ್ಳಗೆ ಮಾಡಿದ್ದರು. ಕೊಂಬಿನ ಮೀಸೆ ಪೋಕರ್‌ಕಾಕ ಬೆಳ್ಳಗೆ ಬಟ್ಟೆ ತೊಟ್ಟು ಬಿಡಾರದ ಜಗುಲಿಯಲ್ಲಿ ಕಟ್ಟಿದ್ದ ಚಪ್ಪರದ ನಡುವೆ ಹಾಸಿದ್ದ ಬೆಳ್ಳನೆಯ ವಸ್ತ್ರದಲ್ಲಿ ಬೆಳಗಿಕೊಂಡು ಕುಳಿತುಕೊಂಡಿದ್ದರು. ಮದರಸದಲ್ಲಿ ನಮಗೆ ಅರಬಿ ಕಲಿಸುವ ಉಸ್ತಾದರು ಬೆಳ್ಳನೆಯ ಮುಂಡಾಸು ಕಟ್ಟಿಕೊಂಡು ಬಾಯಲ್ಲಿ ತಾಂಬೂಲ ಜಗಿಯುತ್ತಾ ಉಗುಳುದಾನಿಗೆ ಉಗಿಯುತ್ತಾ ಅವರ ಮುಂದೆ ಕುಳಿತಿದ್ದರು. ಅವರಿಬ್ಬರು ಎದರುಬದುರಾಗಿ ಕಾಲುಮಡಚಿ ಕುಳಿತು ಒಬ್ಬರ ಕೈಯನೊಬ್ಬರು ಹಿಡಿದುಕೊಂಡು ಉಸ್ತಾದರು ಪೋಕರ್‌ಕಾಕನಿಗೆ ನಿಯತ್ತು ಹೇಳಿಕೊಂಡುತ್ತಿದ್ದರು. ಪೋಕರ್‌ಕಾಕ ಮುಖವನ್ನೆಲ್ಲಾ ಕಪ್ಪಗೆ ಮಾಡಿಕೊಂಡು ನಾಚಿಕೊಳ್ಳುತ್ತಾ, ಗಂಡಸರೆಲ್ಲಾ ಸುತ್ತ ಕುಳಿತುಕೊಂಡು ಎರಡೂ ಕೈಗಳನ್ನು ಜೋಡಿಸಿ ಬೊಗಸೆ ಮಾಡಿಕೊಂಡು ಆಕಾಶದತ್ತ ಮುಖ ಮಾಡಿ ಅಲ್ಲಾಹುವನ್ನು ಪ್ರಾರ್ಥಿಸಿ ಮುಗಿಸಿ ತಮ್ಮ ಕೈಗಳನ್ನು ಚುಂಬಿಸಿಕೊಂಡು ಬಿಡಾರದ ಒಳಗ್ಗೆ ಹೋಗಿ ನೋಡಿದರೆ ಹೆಂಗಸರೆಲ್ಲಾ ಒಂದಾಗಿ ಕುಳಿತು ತಮ್ಮ ನಡುವೆ ತಾಂಬೂಲದ ತಟ್ಟೆಯನ್ನು ಇಟ್ಟು ಜಗಿಯುತ್ತಾ, ತಾಂಬೂಲದ ತಟ್ಟೆಯ ಮುಂದೆ ಹೆಂಗಸರ ನಡುವೆ ಪೋಕರ್‌ಕಾಕನ ಹೊಸಬಿ ಹೆಂಡತಿ ಕುಳಿತಿದ್ದರು.ನಮಗೆ ಹುಡುಗರಿಗೆ ಹೊಸಬಿ ಹೆಂಡತಿಯನ್ನು ನೋಡಲು ನಾಚಿಕೆಯಾಗಿ ಆದರೂ ಬಿಡದೆ ಹತ್ತಿರ ಹೋಗಿ ನೋಡಿದರೆ ಹೊಸಬಿ ಹೆಂಡತಿಯು ಕುಳಿತಲ್ಲೇ ಕುಳಿತುಕೊಂಡು ಮೆಲ್ಲಗೆ ಕೈಯನ್ನು ತಾಂಬೂಲದ ತಟ್ಟೆಗೆ ಚಾಚಿ ಎರಡು ಎಲೆ ಎರಡು ಅಡಿಕೆ ತೆಗೆದುಕೊಂಡು ಸುಣ್ಣದ ಗೂಡಿಂದ ಎಲೆಗೆ ಸುಣ್ಣ ಹಚ್ಚಿ ಅಡಿಕೆಯನ್ನು ಬಾಯಿಗೆ ಹಾಕಿ ಜಗಿದು ಎಲೆಯನ್ನು ಮಡಿಚಿ ಬಾಯಿಗೆ ಎಸೆದು ಬಾಯಿ ತುಂಬಿಸಿಕೊಂಡು ಆ ಬಾಯಿಯಲ್ಲೇ ದೊಡ್ಡ ಹೆಂಗಸಿನಂತೆ ನಮ್ಮನ್ನು ನೋಡಿ ನಗಲು ನೋಡಿದ್ದರು.

ನಮಗೆ ನಗಲಾರದೆ ಹೆದರಿಕೆಯಾಗಿ ನಾವು ಮೆಲ್ಲಗೆ ಅಡಿಗೆಯ ಕೋಣೆಗೆ ಹೋದರೆ ಅಡಿಗೆ ಕೋಣೆಯ ಅನ್ನದ ದೊಡ್ಡ ಪಾತ್ರೆಗೆ ನಡುವೆ ಪಾತು ಮಂಡಿ ಊರಿ ಊದುಕೊಳವೆಯಿಂದ ಒಲೆಯ ಕೆಂಡವನ್ನು ಕೆದಕುತ್ತಾ ಒಲೆಗೆ ಉಗಿಯುತ್ತಾ, ಎಲ್ಲರನ್ನೂ ಶಪಿಸುತ್ತಾ ಕುಳಿತಿದ್ದಳು. ಅವಳು ಮಾತನಾಡದೆ ನಾವು ಯಾರೂ ಮಾತನಾಡದೆ ಒಲೆಯ ಸುತ್ತ ಕುಳಿತು ಕೆಂಡವನ್ನು ಕೆದುಕುತ್ತಾ ಒಲೆಗೆ ಉಗಿಯುತ್ತ ನಮಗೆಲ್ಲಾ ಅಳು ಬಂದು ನಾವು ಮೆಲ್ಲಗೆ ಒಲೆಯ ಮುಂದಿಂದ ಎದ್ದು ಹೆಂಗಸರ ನಡುವೆ ತೂರಿಕೊಂಡು ಒಂದೊಂದು ಹೆಂಗಸರು ಒಂದೊಂದು ಪರಿಮಳ ಬಂದು ನಾವು ಪೋಕರ್‌ಕಾಕನ ಹೊಸಬಿ ಹೆಂಡತಿಯನ್ನು ಕೆಕ್ಕರಿಸಿ ನೋಡುತ್ತಾ ಅವರು ಬಾಯಿಯ ತುಂಬ ತಾಂಬೂಲ ತುಂಬಿಕೊಂಡು ಉಗಿಯದೆ ಬಾಯಲ್ಲೇ ನಾಲಗೆ ಆಡಿಸಿಕೊಂಡು ನಮ್ಮನ್ನು ನೋಡಿದ್ದರು.ನಾವು ಹೆಂಗಸರ ನಡುವಿನಿಂದ ಹೊರಗೆ ಚಪ್ಪರದಲ್ಲಿ ಗಂಡಸರ ನಡುವೆ ಸುಳಿಯುತ್ತ ಗಂಡಸರೆಲ್ಲಾ ಬಾಯೊಳಗೆ ನಾಲಗೆ ಆಡಿಸಿಕೊಂಡು ನಗುತ್ತಾ ಮಾತನಾಡುತ್ತಾ ಮೆಲ್ಲಗೆ ಕೋಲಾಟದ ಕೋಲುಗಳನ್ನು ಎತ್ತಿಕೊಂಡು ನಡುವಲ್ಲಿ ಪೋಕರ್‌ಕಾಕನನ್ನು ಕೂರಿಸಿಕೊಂಡು ಕೋಲಾಟ ಆಡುತ್ತಾ ಮದುವೆಯ ಹಾಡುಗಳನ್ನು ಹಾಡತೊಡಗಿದ್ದರು. ಪೋಕರ್‌ಕಾಕ ಹಾಡಿಗೆ ತಲೆ ಆಡಿಸುತ್ತಾ ಕಣ್ಣಲ್ಲೇ ನಗುತ್ತಿದ್ದರು.ನಾವು ಹುಡುಗರು ಮೆಲ್ಲಗೆ ಹೊರಗೆ ಬಂದು ತೋಟದ ನಡುವೆ ಕಾಲುದಾರಿಯಲ್ಲಿ ನಡೆದಿದ್ದೆವು.

ಕಾಲುದಾರಿಯ ಧೂಳಿನ ಮೆಲೆ ಬೆಳದಿಂಗಳು ಹೊಳೆಯುತ್ತಿತ್ತು. ನಾವು ನಡೆದಂತೆ ಕಾಲುದಾರಿಯ ಹುಲ್ಲುಗರಿಕೆಯ ಮಂಜು ನಮ್ಮ ಕಾಲಿಗೆ ತಾಗಿ ಹುಲ್ಲುಗರಿಕೆಗಳ ನಡುವಿಂದ ಮಿಡತೆಗಳು ಜಿಗಿದು ಕಾಫಿ ಗಿಡಗಳ ನಡುವಿನಿಂದ ಕಾಡು ಮೊಲಗಳು ಕಾಲುದಾರಿಯ ದಾಟಿ ಮರೆಯಾಗುತ್ತಿದ್ದವು. ನಮಗೆ ಯಾರಿಗೂ ಮಾತನಾಡಲು ಬಾಯಿ ಬಾರದೆ ಹಿಂದುಗಡೆಯಿಂದ ಮದುವೆಯ ಮನೆಯ ಹಾಡು ಕೇಳುತ್ತಾ ಮರೆಯಾಗುತ್ತಾ ಮೆಲ್ಲನೆ ಕಾಲು ಗೆಜ್ಜೆಗಳ ದನಿ ಕೇಳಿಸಿ ತಿರುಗಿ ನೋಡಿದರೆ ಪಾತು ಬೆಳದಿಂಗಳಲ್ಲಿ ನಮ್ಮ ಹಿಂದೆ ನಡೆದುಬರುತ್ತಿದ್ದಳು.ಅವಳು ತೀರಿಹೋದ ಅವಳ ತಾಯಿ ಕುಂಞತುಮ್ಮನ ಹಸಿರು ಅರೆ ಸೀರೆ ಉಟ್ಟುಕೊಂಡು, ತಾಯಿಯ ಬಿಳಿಯ ಕಸವಿನ ಕುಪ್ಪಾಯ ಹಾಕಿಕೊಂಡು ಕಿವಿಯ ತೂತುಗಳಿಗೆಲ್ಲಾ ತಾಯಿಯ ಅಲಿಕತ್ತುಗಳು ಕೋಸಿಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡು ನಡೆದು ಬರುತಿದ್ದಳು.ಪಾತು ಏನೂ ಹೇಳದೆ ನಮ್ಮ ನಡುವೆ ಸೇರಿಕೊಂಡು ಮನೆಗೆ ಬಂದಿದ್ದಳು.

ನಾವು ಮನೆಗೆ ಬಂದು ನೋಡಿದರೆ ಮನೆಯಲ್ಲಿ ಯಾರೂ ಇಲ್ಲದೆ ಖಾಲಿಯಾಗಿ ಮದುವೆಗೆ ಹೋದವರು ಯಾರೂ ತಿರುಗಿ ಬಂದಿರಲಿಲ್ಲ.ಮನೆಯಲ್ಲಿ ನಾವು ಬರಿಯ ಹುಡುಗರೇ ಆಗಿ ಪಾತು ನಮ್ಮ ನಡುವೆ ದೊಡ್ಡ ಹೆಂಗಸಿನಂತೆ ಮಾತನಾಡದೆ ಕುಳಿತುಕೊಂಡು ಬಿಡಾರದಿಂದ ಅವಳ ತಂದೆಕೊಂಬಿನ ಮೀಸೆ ಪೋಕರ್‌ಕಾಕನ ಮದುವೆಯ ಹಾಡು ಕೇಳಿಸುತ್ತಿತ್ತು. ಆ ಬೆಳದಿಂಗಳಲ್ಲಿ ಆ ಹಾಡು ತೇಲಿ ಬಂದು ಗಾಳಿ ಬೀಸಲು ಆ ಹಾಡು ಕೇಳದೆ ಮರೆಯಾಗಿ ಕಥೆ ಹೇಳುವ ಅದ್ರಾಮ ಮರೆಯಾಗುವ ಆ ಹಾಡಿನ ಸಾಲುಗಳನ್ನು ನೆನಪು ಮಾಡಿಕೊಂಡು ಹಾಡುತ್ತಿದ್ದ.ಪಾತು ಹಸಿರಿನ ಅರೆಸೀರೆಯನ್ನು ಮೊಣಕಾಲಿನವರೆಗೂ ಎತ್ತಿಕೊಂಡು ಕೂತಿದ್ದಳು. ಬೆಳದಿಂಗಳಲ್ಲಿ ಅವಳ ಕಾಲ ಬೆಳ್ಳಗೆ ಹೊಳೆಯುತ್ತಿತ್ತು. ಅವಳು ತೊಟ್ಟಿದ್ದ ಅವಳ ತೀರಿಹೋದ ತಾಯಿಯ ಕುಪ್ಪಾಯ ದೊಡ್ಡದಾಗಿ ಅವಳ ಬೆನ್ನು ಎದೆಯೆಲ್ಲ ಬೆಳದಿಂಗಳ ಬೆಳಕಿನಲ್ಲಿ ಬೆಳ್ಳಗೆ ಕಾಣಿಸುತ್ತಿತ್ತು. ಅವಳ ಕೂದಲು ಕೆದರಿಕೊಂಡು ಅವಳ ಕಣ್ಣಲ್ಲಿ ನೀರು ತುಂಬಿಕೊಂಡು ಮನೆಯಲ್ಲಿ ದೊಡ್ಡವರು, ಹೆಂಗಸರು, ಗಂಡಸರು ಯಾರೂ ಇಲ್ಲದೆ ಮನೆಯೊಳಗೆ ಕತ್ತಲೆಯಲ್ಲಿ ಮಾಡಿನ ಕನ್ನಡಿಯಿಂದ ಬೆಳದಿಂಗಳ ಬೆಳಕು ಮಾತ್ರ ನಮ್ಮ ಮೇಲೆ ಬಿದ್ದು ಪಾತು ಮೊಣಕಾಲ ಮೇಲೆ ಮುಖ ಊರಿಕೊಂಡು ಕುಳಿತು ಯೋಚಿಸುತ್ತಾ ಬೆರಳಿಂದ ನೆಲದಲ್ಲಿ ಚಿತ್ರ ಬಿಡಿಸುತ್ತಿದ್ದಳು.ನಾವು ನಿದ್ದೆಯಲ್ಲಿ ಪಾತುವನ್ನು ನಡುವೆ ಕೂರಿಸಿಕೊಂಡು ಪಾತು ಕುಳಿತಲ್ಲೇ ನಿದ್ದೆ ಮಾಡುತ್ತಾ ನಮ್ಮ ನಡುವೆ ಮಲಗಿದ್ದಳು.

ನನಗೆ ನಡುವಲ್ಲಿ ಎಚ್ಚರಾಗಿ ನೋಡಿದರೆ ಪೋಕರ್‌ಕಾಕನ ಮದುವೆಗೆ ಹೋದವರು ಇನ್ನೂ ಬಾರದೆ, ಆ ಕಡೆಯಿಂದ ಹಾಡು ಕೇಳಿಸದೆ ನೋಡಿದರೆ ಪಾತು ಅದ್ರಾಮ ಮೈಗೆಮೈ ಕೋಸಿಕೊಂಡು ಇಬ್ಬರೂ ನಿದ್ದೆ ಹೋಗದೆ ಮಾಡಿನ ಕನ್ನಡಿಯಿಂದ ಬೆಳದಿಂಗಳನ್ನು ಕಣ್ಣುಬಿಟ್ಟು ನೋಡುತ್ತಿದ್ದರು……

*********************

ನನಗೆ ನಗು ಬಂತು. ಪಾತು ದೊಡ್ಡ ಹೆಂಗಸಿನಂತೆ ಕಣ್ಣ ಮುಂದಿಂದ ಮಳೆಯಲ್ಲಿ ಮರೆಯಾಗಿ ಹೋಗುತ್ತಿದ್ದಳು. ಕಥೆ ಹೇಳುತ್ತಿದ್ದ ಅದ್ರಾಮ ಎಲ್ಲಿಗೋ ಲಾರಿ ಹತ್ತಿ ಯಾವಾಗಲೋ ಕಣ್ಣು ಮರೆಯಾಗಿ ಹೋಗಿದ್ದ. ಪಾತುವಿನ ಬಾಪಾ ಕೊಂಬಿನ ಮೀಸೆ ಪೋಕರ್‌ಕಾಕ ನಡುರಾತ್ರಿ ಹೊತ್ತಲ್ಲಿ ಕಾಡು ಮೊಲ ಹಿಡಿಯಲು ಹೋದವರು ಚಳಿಗೆ ಸಿಲುಕಿ ತೀರಿಹೋಗಿ ಮೈದಾನಿಯ ಕಾಡಿನ ದೂಪದ ಮರದಡಿಯಲ್ಲಿ ಮೊದಲನೆ ಹೆಂಡತಿ ಕುಂಞತುಮ್ಮನ ಗೋರಿಯ ಬದಿಯಲ್ಲಿ ಆರಡಿ ಮೂರಡಿಯ ಗುಂಡಿಯಲ್ಲಿ ಮಣ್ಣಲ್ಲಿ ಮಣ್ಣಾಗಿ ಮಲಗಿದ್ದರು.paatu-12.jpg

ಈಗ ನೋಡಿದರೆ ಪಾತು ಕೈಯಲ್ಲಿ ಕಚ್ಚರೆ ತೆಗೆಯುವ ಕತ್ತಿ ಹಿಡಿದುಕೊಂಡು ಮೈದಾನಿಯ ಕಚ್ಚರೆ ತೆಗೆಯುವ ಕೆಲಸಕ್ಕೆ ಹೊರಟಿದ್ದಳು.ಮಳೆಯ ಹೊಯ್ಯುತ್ತ ರಸ್ತೆಯ ಬದಿಯ ಗದ್ದೆಗಳು ತುಂಬಿಕೊಳ್ಳುತ್ತ ಸುರಿಯುವ ಬೆಳ್ಳನೆಯ ಮಳೆಗೆ ಉಸಿರು ಹೊಗೆಯಂತೆ ಸೇರಿಕೊಳ್ಳುತ್ತಿತ್ತು. ಒಬ್ಬರನ್ನೊಬ್ಬರು ಕಾಣದ ಹಾಗೆ ಕಣ್ಣನ್ನು ತಬ್ಬಿಕೊಂಡಿರುವ ಮಂಜು… ಪಾತು ತಿರುವು ಕಳೆದು ರಸ್ತೆ ಇಳಿದು ಗದ್ದೆಯ ಬದುವಿನಲ್ಲಿ ಬಳುಕುತ್ತಾ ಮೈದಾನಿಯ ಕಾಡಿಗೆ ನಡೆದು ಹೋಗುತ್ತಿದ್ದಳು.

‘ಪಾತೂ’ ಎಂದು ಕೂಗಿ ಕರೆಯಬೇಕೆನಿಸಿ ನಗು ಬಂತು. ‘ಮೂತ್ರದ ಪಾತೂ’ ಎಂದು ಕರೆಯಬೇಕೆನಿಸಿತು. ನಮ್ಮ ನಡುವೆ ತುಂಬಿಕೊಳ್ಳುತ್ತಿರುವ ಈ ಗದ್ದೆಗಳು, ಕೆಸರಿನಲ್ಲಿ ಉಳುತ್ತಾ ಸಾಗುತ್ತಿರುವ ಕೋಣಗಳು, ಕಾಫಿ ತೋಟದೊಳಕ್ಕೆ ಹೊಕ್ಕಿರುವ ಕತ್ತಲು, ಉಸಿರು ಕಟ್ಟುವಂತೆ ಹನಿಯುತ್ತಿರುವ ಮಳೆ…..ಕಾಡಿನ ಕೆಲಸಕ್ಕೆ ಹೋಗುತ್ತಿರುವ ಮದುವೆ ಆಗದ ಹೆಂಗಸನ್ನು ಪ್ಯಾಂಟು ಶರಟು ಹಾಕಿಕೊಂಡಿರುವ ಗಂಡಸು ಮಾತನಾಡಿಸಲು ಆಗುವುದಿಲ್ಲ…

ಪಾತುವೂ ಇದನ್ನು ಒಪ್ಪಿಕೊಂಡವಳಂತೆ ಮುಖ ಓರೆ ಮಾಡಿಕೊಂಡು ಹೋಗುತ್ತಿದ್ದಳು. ಇದು ಯಾವುದನ್ನೂ ಒಪ್ಪಿಕೊಳ್ಳಲು ಆಗದಂತೆ ಹಠ ಮಾಡಿಕೊಂಡು ಮಳೆ ಸುರಿಯುತ್ತಿತ್ತು.

“‘ಪಾತು’ – ಒಂದು ಸಣ್ಣ ಕತೆ” ಗೆ 3 ಪ್ರತಿಕ್ರಿಯೆಗಳು

Leave a reply to deepa ಪ್ರತ್ಯುತ್ತರವನ್ನು ರದ್ದುಮಾಡಿ