ಶನ್ಯಾಶಿ ಸಿಕ್ಕಿದಳು

 

ಕೆಲವು ವರುಷಗಳ ಹಿಂದೆ world cup football ನಡೆಯುತ್ತಿದ್ದಾಗ ಒಬ್ಬನಿಗೇ ಬೇಸರವಾಗಿ ಎಂದಿನ ಹಾಗೆ ಮಂಗಳೂರಿನ ಬೀದಿಗಳಲ್ಲಿ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದೆ. ಹಾಗೇ ನೋಡಿದರೆ ನೆಹರೂ ಮೈದಾನದಲ್ಲಿ football ಆಡುತ್ತಿದ್ದರು. ಜನ ಸೇರಿದ್ದರುshanyasi2.jpg. ಮೈದಾನದ ಕೊನೆಯಲ್ಲಿ ರಾಜಸ್ತಾನದ ದೊಂಬರಾಟದ ಕುಟುಂಬವೊಂದು ಡೇರೆ ಬಿಚ್ಚಿ ನೆಲದಲ್ಲಿ ಹರವಿಕೊಂಡು  ಆಕಾಶವನ್ನು  ನೋಡುತ್ತಾ ಕೂತಿತ್ತು. ಹೆಂಗಸೊಬ್ಬಳು ಬಾಯಿ ಬಡಿಯುತ್ತಾ  ಅಳುತ್ತಿದ್ದಳು .ಏಕೆಂದರೆ ಆಕೆಯ ಆರು ವರ್ಷದ ಮಗಳು ಕಾಣೆಯಾಗಿದ್ದಳು. ಕಾಣೆಯಾದ ಆ ಬಾಲಕಿಯ ಹೆಸರು ಶನ್ಯಾಶಿ. ಇದ್ದಕ್ಕಿದ್ದಂತೆಯೇ ಆಕೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು. ಆಕೆಯಿಲ್ಲದೆಯೇ ತಿರುಗಿ ಹೋಗುವುದು ಹೇಗೆಂದು ಆ ದೊಂಬರಾಟದ ಕುಟುಂಬಗವೇ ಅಲವತ್ತುಕೊಂಡು ಕೂತಿತ್ತು.

ಮಂಗಳೂರಿನ ನನ್ನ ಗೆಳೆಯರು, ನಾನು ಮತ್ತು ನನ್ನ ಹೆಂಡತಿ ಸುಮಾರು ಇಪ್ಪತ್ತು ದಿನಗಳ ಕಾಲ ಕಾಣೆಯಾದ ಈ ಹುಡುಗಿಯ ಜಾಡನ್ನು ನೋಡುತ್ತಾ ಒಂದು ಪ್ರಪಂಚವನ್ನೇ ಕಂಡೆವು. ಮಗುವನ್ನು ಬೀದಿಸೂಳೆಯರು ಕದ್ದು ಮಾರಿದ್ದಾರೆಂದು ಅವರ ಹಿಂದೆ, ಭಿಕ್ಷುಕರು ಸಾಕುತ್ತಿದ್ದಾರೆಂದು ಅವರ ಹಿಂದೆ, ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರುವ ಮಲಯಾಳೀ ಕುಂಟನೊಬ್ಬನ ಹಿಂದೆ,ಪೊಲೀಸರ ಹಿಂದೆ, ಪತ್ರಕರ್ತರ ಹಿಂದೆ ಹೀಗೇ ತಿರುಗಾಡಿದೆವು.shanyasi.jpg

ಇಪ್ಪತ್ತು ದಿನಗಳು ಕಳೆದು ಬೀದಿ ಗುಡಿಸುವ ದಲಿತ ಹೆಂಗಸೊಬ್ಬಳ ಮನೆಯಲ್ಲಿ ಶನ್ಯಾಶಿ ದೊರಕಿದಳು. ಮಗು ದೊರಕಿದ ರಾತ್ರಿ ಬೆಳದಿಂಗಳಲ್ಲಿ ಆ ದೊಂಬರಾಟದ ತಂಡ ನಮ್ಮ ಸುತ್ತು ಸೇರಿಕೊಂಡು ಹಾಡಿಕೊಂಡು ಕುಣಿದುಕೊಂಡು ನಮಗೆಲ್ಲ ನಾವು ಇರುವುದು ಯಾವ ಕಾಲವೋ ಎಂದು ಅನಿಸಲಿಕ್ಕೆ ಹತ್ತಿತ್ತು.

ಈ ಹುಡುಕಾಟದ ಸಮಯದಲ್ಲಿ ನಮಗೆ ಅಬ್ದುಲ್ ರಜಾಕ್ ಎಂಬ ಭಿಕ್ಷುಕನೂ, ಮಾದೇವಿ ಎಂಬ ಆತನ ಹೆಂಡತಿ ಭಿಕ್ಷುಕಿಯೂ ಪರಿಚಯವಾಗಿದ್ದರು. ಅಬ್ದುಲ್ ರಜಾಕ್ ಎಂಬುವನು ಹರಪನಹಳ್ಳಿಯಲ್ಲಿ ಬಿರಿಯಾನಿ ಹೋಟೆಲಲ್ಲಿ ಕೆಲಸಕ್ಕಿದ್ದನಂತೆ. ಮಾದೇವಿ ಬೆಸ್ತರ ಹೆಂಗಸು. ಇಬ್ಬರೂ ನಡು ವಯಸ್ಸಲ್ಲಿ ಜೊತೆಗೆ ಜೀವಿಸಲು ತೊಡಗಿದರು. ಅಷ್ಟರಲ್ಲಿ ಈ ರಜಾಕ್‌ಗೆ ಒಲೆಯ ಬೆಂಕಿ ಅಲರ್ಜಿಯಾಗಿ ಬಿರಿಯಾನಿ ಕೆಲಸ ಮಾಡಲಾಗದೆ ಅವರಿಬ್ಬರು ಊರೂರು ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದರು. ಮಂಗಳೂರಿಗೆ ಬಂದವರು ಮಳೆಯಲ್ಲಿ ಸಿಕ್ಕಿಹಾಕಿಕೊಂಡು, ನಂತರ ದೊಂಬರಾಟದವರ ಹುಡುಗಿಯನ್ನು ಹುಡುಕುವ ಕೆಲಸದಲ್ಲಿ ನಮ್ಮ ಜೊತೆ ಸೇರಿಕೊಂಡು ನಮಗೂ ಗೆಳೆಯರಾಗಿಬಿಟ್ಟಿದ್ದರು.

ಆ ಮಗು ಸಿಕ್ಕಿದ ಮೇಲೆ ಅವರೂ ಕಾಣೆಯಾಗಿಬಿಟ್ಟರು. ನಾನೀಗ ಮಂಗಳೂರಲ್ಲಿ ಒಂದೊಂದು ಸಲ ಈ ಅಬ್ದುಲ್ ರಜಾಕ್ ಎಂಬ ಭಿಕ್ಷುಕನನ್ನೂ ಅವನ ಹೆಂಡತಿ ಮಾದೇವಿಯನ್ನೂ ಹುಡುಕುತ್ತಿರುತ್ತೇನೆ.

ಆ ದೊಂಬರಾಟದ ಕುಟುಂಬದ ಹಿರಿಯ ರಾಮೇಶ್ವರ್ ಎಂಬಾತ ಕಳೆದ ವಾರ ರಾಜಸ್ತಾನದ ಆಲ್ವಾರ್‌ನಿಂದ ಫೋನಲ್ಲಿ ಮಾತನಾಡಿದ. ಕಳೆದು ಹೋದ ಬಾಲಕಿ ಸಿಕ್ಕಿದ ಕತೆ ಅವನ ಊರಲ್ಲೆಲ್ಲಾ ದೊಡ್ಡ ಸಂಗತಿಯಾಗಿದೆಯೆಂದೂ ನಾವೆಲ್ಲ ಅವನ ಊರಿಗೆ ಹೋಗಬೇಕೆಂದೂ ಹೋದರೆ ಆತ ಕಿಶನ್‌ಗಡ್ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆಂದೂ ಹೇಳುತ್ತಿದ್ದ.

ನಾನು ಸುಮ್ಮನೇ ಕಾಲದಲ್ಲಿ ಕಳೆದುಹೋಗಿದ್ದೆ.

Advertisements