ಮಾಜಿ ಮುಖ್ಯಮಂತ್ರಿಯ ಕಾದಂಬರಿಯೂ, ಬುರುಖಾ ಹಾಕಿದ ಹೆಂಗಸೂ

ಮಂಗಳೂರಲ್ಲಿ ಹಳೆಯ ಮುಖ್ಯಮಂತ್ರಿಯೊಬ್ಬರ ಇನ್ನೊಂದು ಕಾದಂಬರಿಯ ಬಿಡುಗಡೆಯಿತ್ತು. ಕಾದಂಬರಿ ಬರೆದು ಮುಗಿಸಿದ ಮಾಜಿ ಮುಖ್ಯಮಂತ್ರಿ ಖುಷಿಯಿಂದ ಕಂಗೊಳಿಸುತ್ತಿದ್ದರು. ಕನ್ನಡ ಸಾಹಿತ್ಯಕ್ಕೆ ನಿಮ್ಮ ಮುಂದಿನ ಕೊಡುಗೆ ಏನು ಎಂದು ಕೇಳಿದರೆ ಒಂದು ಮಹಾಕಾವ್ಯಕ್ಕೆ ಸ್ಕೆಚ್ ಹಾಕಿಕೊಂಡಿರುವೆ ಎಂದು ಹೇಳಿದರು. ‘ಮಹಾಕಾವ್ಯ ಅಂದರೆ ಹದಿನೆಂಟು ಬಗೆಯ ವರ್ಣನೆಗಳು ಇರುತ್ತದಂತಲ್ಲಾ ಅದೆಲ್ಲವೂ ಇರುತ್ತದಾ?’ ಎಂದು ಕೇಳಿದೆ. ‘ಎಲ್ಲವೂ ಸಿದ್ಧವಾಗಿದೆ’ ಎಂದು ಹೇಳಿದರು. ‘ಇದಕ್ಕೆಲ್ಲ ಸಂಸ್ಕೃತ, ಪಾಲಿ ಇತ್ಯಾದಿ ಓದಿಕೊಂಡಿರಬೇಕಲ್ಲ’ ಎಂದು ಕೇಳಿದೆ. ‘ಎಲ್ಲವೂ ಆಗಿದೆ’ ಎಂದು ಹೇಳಿದರು. ‘ಹಾಗಾದರೆ ನಾವೆಲ್ಲ ಕನ್ನಡಕ್ಕೆ ಬರಲಿರುವ ಇನ್ನೊಂದು ಮಹಾಕಾವ್ಯಕ್ಕಾಗಿ ಕಾದುಕೊಂಡಿರುತ್ತೇವೆ’ ಎಂದೆ. ಅವರು ನಗುಮುಖದಿಂದ ಕೈಕುಲುಕಿ ಎದ್ದು ತಮ್ಮ ಹತ್ತಾರು ಹಿಂಬಾಲಕರೊಡನೆ ಹೊರಟುಹೋದರು.ayesha1.jpg

ಆಮೇಲೆ ನಾನು ತಲೆಗೆ ಏಟುಬಿದ್ದವನಂತೆ ಮಂಗಳೂರಿನ ಬೀದಿಗಳಲ್ಲಿ ಬೈಕು ಓಡಿಸುತ್ತಿದ್ದೆ. ಕೊಂಚ ಹೊತ್ತಲ್ಲಿ ಏನೇನೋ ನೋಡಿದೆ.

ಆದಿನ ರಂಜಾನ್ ಹಬ್ಬವಾಗಿತ್ತು. ಊರಿಗೆ  ಹೋಗಿ ತಾಯಿಯನ್ನು ನೋಡಿರಲಿಲ್ಲ. ಗುರುಪುರ ನದಿಯ ತೀರಕ್ಕೆ ಹೋಗಿ ದೋಣಿಯಲ್ಲಿ ನದಿ ದಾಟುತ್ತಿರುವ ಗಂಡಸರನ್ನು ಹೆಂಗಸರನ್ನು ನೋಡುತ್ತ ಕುಳಿತೆ. ಹೆಂಗಸರು ಬುರುಕ ಹಾಕಿಕೊಂಡು, ಗಂಡಸರು ಮಕ್ಕಳು ಅತ್ತರು ಪೂಸಿಕೊಂಡು ಹೊಸಬಟ್ಟೆ ಹಾಕಿಕೊಂಡು ದೋಣಿಯಲ್ಲಿ ಕುಳಿತು ಹೋಗಿ ಬರುತ್ತಿದ್ದರು.

 ಸಂಕಟಪಡಬಾರದು ಎಂದು ಎಲ್ಲರನ್ನೂ ನಗುಮುಖ ಮಾಡಿಕೊಂಡು ನೋಡಿಕೊಂಡು ಕುಳಿತೆ. ಇವನು ಯಾರೋ ಹೆಂಗಸರನ್ನು ನೋಡುವವನು ಎಂದು ಗಂಡಸರು ದುರುಗುಟ್ಟಿಕೊಂಡು ನೋಡುತ್ತಿದ್ದರು. ಅಲ್ಲಿ ನಿಲ್ಲಲಾಗದ ಮತ್ತೆ ತಿರುಗಾಡಲು ತೊಡಗಿದೆ.

ನನ್ನ ತಾಯಿ ನಾನು ಹುಟ್ಟಿದ ಐದು ವರ್ಷದಲ್ಲೇ `ತಿರುಗು’ ಎಂದು ಹೆಸರಿಟ್ಟಿದ್ದಾಳೆ. ಮಗುವಾಗಿದ್ದಾಗಲೇ ಅಷ್ಟೊಂದು ತಿರುಗುತ್ತಿದ್ದೆನಂತೆ. ಹಬ್ಬಕ್ಕೆ ಬಾರದ ಮಗನನ್ನು ನೆನೆದು ನೋಯುತ್ತಿರುವ ಅವಳ ಮನಸ್ಸಿಗೆ ಶಾಂತಿಯಾಗಲಿ ಎಂದು ಆ ಕಾದಂಬರಿ ಬಿಡುಗಡೆಯಾದ ಆ ಇಡೀ ದಿನ ಇಡೀ ರಾತ್ರಿ ತಿರುಗುತ್ತಲೇ ಇದ್ದೆ.

ಆ ಹಬ್ಬದ ದಿನವೂ ಬುರುಕಾ ಹಾಕಿಕೊಂಡು ಬೀದಿ ಅಲೆಯುತ್ತಿರುವ ಅವಳ ಮುಂದೆ ಬೇಕಂತಲೇ ಬೈಕು ನಿಲ್ಲಿಸಿ, ‘ಏನು ಹೆಂಗಸೇ ಹಬ್ಬದ ದಿನವೂ ನಿನಗೆ ರಜೆಯಿಲ್ಲವಾ’ ಎಂದು ಕೇಳಿದೆ. ಅವಳು ಬುರುಕಾದೊಳಗಿಂದಲೇ ಕುಲುಕುಲು ನಕ್ಕಳು.

ಇವಳು ಮಂಗಳೂರು  ನಗರದ ಪ್ರತಿಷ್ಠಿತ ಬೀದಿ ವೇಶ್ಯೆ. ಕರ್ಮ ಯೋಗದ ಹಾಗೆ ಒಂದು ವಾರವೂ ಬಿಡದೆ ಪ್ರತಿ ಶನಿವಾರ ಬುರುಕಾ ಹಾಕಿಕೊಂಡು ಈ ನಗರಕ್ಕೆ ಒಂದು ಸುತ್ತು ಹಾಕಿ ನೂರಾರು ರೂಪಾಯಿ ಸಂಪಾದಿಸಿ ಹೋಗುತ್ತಾಳೆ.

ಏನು ನೀನೂ ನನ್ನ ಹಾಗೆ ಹಬ್ಬ ಮಾಡುವುದಿಲ್ಲವಾ?’ ಎಂದು ಬದಿಯಲ್ಲಿ ನಡೆಯುತ್ತಾ ಕೇಳಿದಳು.

 `ಇಲ್ಲ ಮಾಜಿ ಮುಖ್ಯಮಂತ್ರಿಗಳ ಕಾದಂಬರಿ ಬಿಡುಗಡೆ ಇತ್ತು.ಹಾಗಾಗಿ ಹಬ್ಬಕ್ಕೆ ಹೋಗಲಿಲ್ಲ. ಊರಲ್ಲಿ ಉಮ್ಮ ಬೇಜಾರು ಮಾಡಿಕೊಂಡಿರುತ್ತಾಳೆ’ ಅಂದೆ

 ಅವಳು ಮತ್ತೆ ಕುಲುಕುಲುನಕ್ಕಳು.

`ಸಂಜೆಯವರೆಗೆ ಎಷ್ಟು ಸಂಪಾದಿಸಿದೆ ಎಂದು ಕೇಳಿದೆ. `ಎರಡು ಸಾವಿರ’ ಎಂದು ಕಣ್ಣು ಮಿಟುಕಿಸಿದಳು.

‘ಬೇಕಾದಷ್ಟಾಯಿತು ಸುಮ್ಮನೆ ವ್ಯಾಪಾರ ಬಂದ್ ಮಾಡಿ ಮನೆಗೆ ಹೋಗು ಕತ್ತಲಾಯಿತು’ ಎಂದು ಟೀ ಕುಡಿಸಿ ಕಳಿಸಿದೆ.

ಅಂದಹಾಗೆ ಈ ಹೆಂಗಸಿನ ಹೆಸರು ಆಸಿಯಾ. ನನ್ನನ್ನು ಕಂಡರೆ ಆಕೆಗೆ ಕ್ರೋಧ ಹಾಗೂ ವಾತ್ಸಲ್ಯ. ಏನೂ ಮಾಡುವುದಿಲ್ಲ ನೀಡುವುದಿಲ್ಲ ಬರೆ ಮಾತನಾಡುತ್ತಾನೆ ಅಂತ ಒಮ್ಮೊಮ್ಮೆ ಅಸಹ್ಯಪಡುತ್ತಾಳೆ. ಕೆಲವೊಮ್ಮೆ ನೀನೇ ನನ್ನ ಬೆಸ್ಟು ಫ್ರೆಂಡು  ಎಂದು ಕೈ ಅದುಮಿ ನೂರಾರು ಕತೆಗಳನ್ನು ಹೇಳುತ್ತಾಳೆ.

ಕನ್ನಡಿಗ ಗಂಡಸರು, ಮಲಯಾಳಿ ಗಂಡಸರು, ಇಂಗ್ಲಿಷ್ ಮಾತನಾಡುವ ಬಾಲಕರು ಇವರೆಲ್ಲರ ಕತೆಗಳನ್ನು ಅವಳ ಬಾಯಿಯಿಂದಲೇ ಕೇಳಬೇಕು.

 ಅಂದಹಾಗೆ ಈ ಆಸಿಯಾ ಮಹಾ ಚಿನಾಲಿ ಹೆಂಗಸು ಕೂಡಾ. ‘

ಈ ಪ್ರಪಂಚ ಅಷ್ಟೊಂದು ಸರಿಯಿಲ್ಲ ಏನಾದರೂ ಕಷ್ಟವಾದರೆ, ಸಾಯುವಂತಹ ಪರಿಸ್ಥಿತಿ ಬಂದರೆ ನನ್ನನ್ನು ಸಂಪರ್ಕಿಸು ಅಂತ ನನ್ನ ಫೋನ್ ನಂಬರ್ ಆಕೆಗೆ ಕೊಟ್ಟಿರುವೆ.

 ಈಕೆ ಒಮ್ಮೊಮ್ಮೆ ನಡುರಾತ್ರಿಯಲ್ಲಿ, ಬೆಳಗಿನ ಒಂದನೇ ಜಾವದಲ್ಲಿಫೋನ್ ಮಾಡಿಬರೇ ಅಟ್ಟಹಾಸದಿಂದ ಗಹಗಹಿಸುತ್ತಿರುತ್ತಾಳೆ. ಪಕ್ಕದಿಂದ ಗಂಡಸರ ದನಿಗಳು ಕೇಳುತ್ತಿರುತ್ತದೆ. ನಾನು ಶಾಪ ಹಾಕಿ ಮುಗುಳ್ನಕ್ಕು ಫೋನ್ ಕೆಳಗಿಟ್ಟು ಮತ್ತೆ ನಿದ್ದೆ ಹೋಗುತ್ತೇನೆ. ಒಮ್ಮೊಮ್ಮೆ ಈಕೆ ಮಾಯಾವಿಯಂತೆ ಎಲ್ಲಿಂದಲೋ ಪ್ರತ್ಯಕ್ಷವಾಗಿ ಹಲೋ ಫ್ರೆಂಡ್ ಎಂದು ಮಾಯವಾಗುತ್ತಾಳೆ.

ಅಂದಹಾಗೆ ಇದನ್ನು ಬೆಂಗಳೂರಿನಲ್ಲಿ ನನ್ನ ಗೆಳೆಯನ ಮನೆಯಲ್ಲಿ ಕುಳಿತು ಬರೆಯುತ್ತಿರುವೆ. ನನ್ನ ಗೆಳೆಯ ಕೊಂಚ ಮೊದಲು ಬಂದು,’ ಕಂದಾ ನಿನಗೆ ಏನು ಬೇಕು ಎಂದು ಕೇಳಿದ್ದ.

`ಕೂರಲು ಜಾಗ ಮತ್ತು ಬರೆಯಲು ಕಥಾವಸ್ತು’ ಎಂದು ಹೇಳಿದ್ದೆ.

ನಿನ್ನೆ ರಾತ್ರಿಯೆಲ್ಲಾ ನಾವು ಗಂಡಸು ಹೆಂಗಸು ಹೇಗೆ ಜಗಳವಾಡುತ್ತಾರೆ ಎಂದು ಮಾತನಾಡುತ್ತಾ ನೆನಪು ಮಾಡುತ್ತಾ ಹೊಟ್ಟೆ ಹಿಡಿದುಕೊಂಡು ನಗುತ್ತಾ ಕಳೆದವು. ನಾವು ಸಣ್ಣದಿರುವಾಗ ನಮ್ಮ ನೆರೆಮನೆಯ ಗಂಡ ಹೆಂಡತಿ ಜಗಳ ಶುರು ಮಾಡಿ ಹೆಂಡತಿಯ ಮೇಲೆ ಬೂದು ಗುಂಬಳ, ಸಿಹಿ ಕುಂಬಳ, ಹಲಸಿನ ಕಾಯಿ ಎಸೆಯುತ್ತಿದ್ದ. ಆಕೆ ಕಪಾಟು ತೆಗೆದು ಆತನ ಮೇಲೆ ಅಂಗಿ, ಶರಾಯಿ, ಸೀರೆ ಎಸೆದು ಕೊನೆಗೆ ಆ ಕಪಾಟವನ್ನೇ ಆತನ ಮೇಲೆ ಬೀಳಿಸುತ್ತಿದ್ದಳು. 

 ನಿನ್ನೆ ಇರುಳು ಮತ್ತೆ ಅದನ್ನು ನೆನಪಿಸಿಕೊಂಡು ನಾನು ನನ್ನ ಗೆಳೆಯ ಅವನ ಹೆಂಡತಿ ನಕ್ಕು ನಕ್ಕು ನಮ್ಮ ಜೀವಮಾನದಲ್ಲೇ ಇಷ್ಟೊಂದು ನಕ್ಕಿರಲಿಲ್ಲ ಎಂದು ಈಗಲೂ ನಗುತ್ತಿದ್ದೇವೆ.

3 thoughts on “ಮಾಜಿ ಮುಖ್ಯಮಂತ್ರಿಯ ಕಾದಂಬರಿಯೂ, ಬುರುಖಾ ಹಾಕಿದ ಹೆಂಗಸೂ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s