ಸಿಂಗರ್ ಮತ್ತು ಫಾಹಿಯಾನ್ ಯಾನೆ ಗಂಡಸರ ಕಷ್ಟಗಳು!

 

faxian.jpg

ಇವತ್ತು ಇಲ್ಲೇ ತುರಾದ ಹತ್ತಿರದ ಒಂದು ಹಳ್ಳಿಗೆ ಹೋಗಿದ್ದೆ. ಯಾರೋ ಒಬ್ಬರು ‘ಬನ್ನೀ, ವಿಶ್ವ ಸ್ತನ್ಯಪಾನ ವಾರಾಚರಣೆ ಆಚರಿಸುತ್ತಿದ್ದೀವಿ’ ಅಂತ ಕರೆದಿದ್ದರು. ದಾರಿಯೇನೋ ತುಂಬಾ ಚೆನ್ನಾಗಿತ್ತು. ಮಳೆ ನಿಂತು ಬಿಸಿಲು ಚಾಚಿಕೊಂಡು ನೆಲದಿಂದ ಮೇಲಕ್ಕೆ ಮೋಡಗಳು ಎದ್ದು ನಿಂತು ಹಸಿರು ಬೆಟ್ಟಗಳು ಮೇಲೆ ಹರಡಿಕೊಂಡು ಎಲ್ಲಾ ಕನಸಿನ ಹಾಗೆ ಕಾಣುತ್ತಿತ್ತು. ಹಳ್ಳಿಗೆ ಹೋಗಿ ನೋಡಿದರೆ ಒಂದು ಸಣ್ಣ ಕೋಣೆಯ ಒಳಗೆ ಹತ್ತಾರು ಗ್ರಾಮಗಳ ತಾಯಂದಿರನ್ನು ಕೂರಿಸಿಕೊಂಡು ಒಬ್ಬ ಅಧಿಕಾರಿ ಇಂಗ್ಲೀಷಿನಲ್ಲಿ ಭಾಷಣ ಹೊಡೆಯುತ್ತಿದ್ದ. ಮಗುವಿಗೆ ಎದೆ ಹಾಲು ಉಣ್ಣಿಸುವುದು ಎಷ್ಟು  ಆರೋಗ್ಯಕಾರಿಮತ್ತು ಎಷ್ಟು ಮಿತವ್ಯಯಕಾರಿಅಂತ ವಿವರಿಸುತ್ತಿದ್ದ. ಅರ್ಥವಾಗದಿದ್ದರೂ ತಾಯಂದಿರು ತಲೆಯಾಡಿಸುತ್ತಿದ್ದರು.

ನನಗೆ ಯಾಕೋ ತಲೆನೋವು ಶುರುವಾಗಿತ್ತು. ಆ ತಲೆನೋವು ಇನ್ನೂ ಹೋಗಿಲ್ಲ. ಇಲ್ಲಿ ತಾಯಂದಿರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅಂದರೆ ಗಂಡಂದಿರನ್ನು ಕೇರೇ ಮಾಡುವುದಿಲ್ಲ. ಹಗಲಿಡೀ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಇರುಳಿಡೀ ಎದೆಗೆ ಒತ್ತಿಕೊಂಡು ನಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ ಎಂದು ಗಂಡಸೊಬ್ಬ ಮೊನ್ನೆ ಗೋಳು ಹೇಳಿಕೊಳ್ಳುತ್ತಿದ್ದ. ಮದುವೆಯಾದ ಮೇಲೆ ಗಂಡಸರು ಹೆಂಡತಿಯ ಮನೆಗೆ ಹೋಗಬೇಕು. ತಂದೆ ತಾಯಿ ಬಳಿ ಇರುವಂತಿಲ್ಲ. ಹೆಂಡತಿಯ ಮನೆಯಲ್ಲಿ ಹೆಂಗಸರದೇ ಕಾರುಬಾರು. ತಲೆ ಎತ್ತಿ ನಡೆಯುವಂತಿಲ್ಲ. ಎಲ್ಲಿಗಾದರೂ ಓಡಿಬಿಡಬೇಕು ಫಾರಿನ್ನಿಗೆ  ಹೋಗುವುದು ಹೇಗೆ? ವೀಸಾ ಮಾಡಿಸುವುದು ಹೇಗೆ ಅಂತೆಲ್ಲಾ ನನ್ನ ಬಳಿ ಕೇಳುತ್ತಿದ್ದ. ನಾನು ಸುಮ್ಮನೇ ಕೇಳುತ್ತಾ ಕುಳಿತಿದ್ದೆ.

ಆತನಿಗಾದರೋ ಊರು ತುಂಬಾ ನೂರಾರು ಗೆಳತಿಯರು. ಹೆಂಡತಿಯಿಂದ ತಪ್ಪಿಸಿಕೊಳ್ಳಲು ಹಲವಾರು ಗೆಳತಿಯರನ್ನು ಮಾಡಿಕೊಂಡು ಈಗ ಅವರೆಲ್ಲಾ ಕನ ಫ್ಯೂಸ್ ಆಗಲು ಶುರುವಾಗಿ ತನ್ನ ಕಾರನ್ನೇ ಮನೆಯ ತರಹ ಮಾಡಿಕೊಂಡು ನಿಂತಲ್ಲಿ ನಿಲ್ಲದೆ ಓಡಾಡುತ್ತಿದ್ದ. ಕಳೆದ ತಿಂಗಳು ಆತನ ಹೆಂಡತಿ ಆತನ ಗೆಳತಿಯೊಬ್ಬಳ ತಲೆಗೆ ಮಚ್ಚಿನಿಂದ ಹೊಡೆದು ರಕ್ತ ಸುರಿಸಿದ್ದಳು. ಈತ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಕೆಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಆಮೇಲೆ ಕಾರು ತೆಗೆದುಕೊಂಡು ಹಳ್ಳಿಯ ಇನ್ನೊಂದು ಗೆಳತಿಯನ್ನು ನೋಡಲು ಹೋಗಿದ್ದ. ಹಳ್ಳಿಯಲ್ಲಿ ಆತನ ಕಾರು ನೋಡಿದವರು ಹೆಂಡತಿಗೆ ದೂರು ಹೇಳಿದ್ದರು. ಈಗ ಆತನ ಹೆಂಡತಿ ಆ ಹಳ್ಳಿಯ ಗೆಳತಿಯನ್ನು ಹುಡುಕಿಕೊಂಡು ಓಡಾಡುತ್ತಿದ್ದಾಳೆ. ಈತ ನನ್ನ ಬಳಿ ಫಾರಿನ್ನಿಗೆ ಓಡಿಹೋಗುವುದು ಹೇಗೆ ಅಂತ ಕೇಳುತ್ತಿದ್ದಾನೆ. ನೋಡಿ ಎಂತಹ ತಲೆನೋವು! ಈ ಭಾಷಣ ಬಿಗಿಯುವ ಅಧಿಕಾರಿಗಳಿಗೆ ಇದು ಯಾವುದೂ ಗೊತ್ತಾಗುವುದಿಲ್ಲ.

ನನಗೂ ತಲೆಕೆಟ್ಟು ಹೋಗಿ ಫಾಹಿಯಾನ್ ಎಂಬ ಚೀನಾದ ಯಾತ್ರಿಕನ ಭಾರತ ಪ್ರವಾಸದ ಕತೆಯನ್ನು ಓದುತ್ತಿದ್ದೆ. ಈತ ಚೀನಾದ ಬೌದ್ಧ ಭಿಕ್ಷು. ನಾಲ್ಕನೇ ಶತಮಾನದಲ್ಲಿ ಜೀವಿಸಿದ್ದವನು. ಆತನ ಕಾಲದಲ್ಲಿ ಬೌದ್ಧಧರ್ಮ ಎಂಬುದು ಚೀನಾದಲ್ಲಿ ಬರಿಯ ಅಂತೆ ಕಂತೆಗಳ ಆಧಾರದಲ್ಲಿ ನಡೆಯುತ್ತಿತ್ತು. ಯಾವುದೇ ಗ್ರಂಥ, ನೀತಿ, ನಿಯಮ ಇರಲಿಲ್ಲ. ಹಾಗಾಗಿ ಆತ ಭಾರತಕ್ಕೆ ಬರಿಗಾಲಲ್ಲಿ ನಡೆದು ಬುದ್ಧಗಯಾಕ್ಕೆ ಬಂದು ಅಲ್ಲಿಂದ ನಡೆದು ಬನಾರಸ್ಸಿಗೆ ಬಂದು ಅಲ್ಲಿಂದ ಪಾಟಲೀಪುತ್ರಕ್ಕೆ ನಡೆದು ಅಲ್ಲಿ ಗ್ರಂಥಗಳನ್ನು ಸಂಗ್ರಹಿಸಿ, ಸಮುದ್ರದಲ್ಲಿ ಹದಿನಾಲ್ಕು ಹಗಲು ಹದಿನಾಲ್ಕು ಇರುಳು ಕಳೆದು, ಸಿಂಹಳ ದ್ವೀಪಕ್ಕೆ ಬಂದು, ಅಲ್ಲಿಂದಲೂ ಗ್ರಂಥಗಳನ್ನು ಸಂಗ್ರಹಿಸಿ ಪುನಃ ಹಡಗು ಹತ್ತಿ ಸುಮಾರು ನೂರು ದಿನ ಮತ್ತೆ ಸಮುದ್ರದಲ್ಲಿ ಕಳೆದು ಚೀನಾಕ್ಕೆ ತಲುಪುತ್ತಾನೆ. ತನ್ನ ಊರಿಗೆ ತಲುಪಿ ಅಲ್ಲಿ ಗ್ರಂಥಗಳನ್ನು ಸಂಪಾದಿಸಿ, ವ್ಯಾಖ್ಯಾನ ಬರೆದು ಚೈನಾ ದೇಶದಲ್ಲಿ ಸರಿಯಾದ ಬುದ್ಧ ಧರ್ಮವನ್ನು ಸ್ಥಾಪಿಸುತ್ತಾನೆ. ಆಮೇಲೆ ತನ್ನ ಭಾರತ ಪ್ರವಾಸದ ಕಥೆಯನ್ನು ಬರೆದಿಡುತ್ತಾನೆ.ನೋಡಿ ಹೇಗಿದೆ ಕತೆ? ಮತ್ತೆ ನೀವು ದೀಪಾವಳಿ ವಿಶೇಷಾಂಕಕ್ಕೆ ಕತೆ ಕೇಳಿದ್ದೀರಿ. ಏನು ಕತೆ ಬರೆಯಲಿ ಆದರೂ ಬರೆಯಲು ನೋಡುತ್ತೇನೆ.

ಸಿಂಗರ್ ಎಂಬ ಮಹಾ ಕತೆಗಾರ `ಮ್ಯಾಜಿಷಿಯನ್ ಆಫ್ ಲುಬ್ಲಿನ್’ ಎಂಬ ಕಾದಂಬರಿ ಬರೆದಿದ್ದಾನೆ. ಅದು ಕೂಡಾ ಇಂತಹದ್ದೇ. ಗಂಡಸೊಬ್ಬನ ಅಲೆದಾಟದ ಕತೆ. ‘ಅವಳ ಬಿಟ್ಟು ಇವಳ ಬಿಟ್ಟು ಅವಳುಯಾರು’ ಎಂದು ಹತ್ತಾರು ಗೆಳತಿಯರ ನಡುವೆ ಸಿಲುಕಿ ಸಂಕಟವನ್ನು ಆನಂದಿಸುವ ಗಂಡಸಿನ ಕತೆ. ಆದರೆ  ಯಾಕೋ ಕೊನೆಗೆ ತುಂಬಾ ಟ್ರಾಜಿಕ್ ಆಗಿ ಕಾದಂಬರಿ ಮುಗಿಸುತ್ತಾನೆ. ನಾನು ನಿಲ್ಲಿಸುವೆ.

Advertisements