ಕತೆ ಮತ್ತು ಮಹಾತ್ವಾಕಾಂಕ್ಷೆ

ಅಲ್ಲಿ ನಿಮ್ಮನ್ನೆಲ್ಲ ನೋಡಿ ತಿರುಗಿ ಬಂದು ಇಲ್ಲಿ ಷಿಲ್ಲಾಂಗ್ ಎಂಬ ನನ್ನ ಕನಸಿನ ಲೋಕದಲ್ಲಿ ಒಬ್ಬನೇ ಕುಳಿತು ಕೊಂಡಿದ್ದೇನೆ. ಹೂಬಿಟ್ಟಿದ್ದ ಮರಗಳಲ್ಲೆಲ್ಲಾ ಈಗ ಹಣ್ಣುಗಳು ತುಂಬಿಕೊಂಡಿವೆ. ಕಿತ್ತಳೆ ಮಾರುತ್ತಿದ್ದ ಹುಡುಗಿಯರೆಲ್ಲಾ ಈಗ ಎಂತ ಎಂತಹದೋ ಹಣ್ಣುಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಕುಳಿತಿದ್ದಾರೆ. ಮಳೆಬಿಟ್ಟು ಮತ್ತೆ ಮಳೆ ಸುರಿಯುತ್ತಿದೆ. ಇಂದು ಸಂಜೆ ಮಳೆಯ ನಡುವೆ ದಾರಿ ಮಾಡಿಕೊಂಡು ಎಲ್ಲ ಕಡೆ ಸುತ್ತಾಡಿ ಹಲವು ಬಗೆಯ ಹಣ್ಣುಗಳನ್ನು ಕೊಂಡು ಒಂದೊಂದನ್ನೇ ತಿನ್ನುತ್ತಾ ಕುಳಿತೆ. ಒಂದು ಹಣ್ಣಿನ ಹೆಸರು ಮಾತ್ರ ಗೊತ್ತಾಯಿತು. ಅದು ‘ಪ್ಲಂ’ ಹಣ್ಣು.plum.jpg ಬಾಕಿಯೆಲ್ಲಾ ಹೆಸರೇ ಗೊತ್ತಿಲ್ಲದ ಹಣ್ಣುಗಳು ನನ್ನ ಬಾಯಿಯಲ್ಲಿ. ನಗುಬಂತು. ಮತ್ತು ನೀವು ಬರೆದ ಪತ್ರಗಳ ಸಾಲುಗಳು ನೆನಪಾಯಿತು. “ನೀನು ಬರೆಯುವಾಗ ಹುಷಾರಿಗಿರಬೇಕು, ತುಂಬಾ ಜನ ನಿನ್ನ ಪತ್ರಗಳನ್ನು ಓದುತ್ತಾರೆ” ಅಂತ ಬರೆದಿದ್ದೀರಿ.

. ಇಲ್ಲಿ ನನಗೆ ಯಾರೂ ಇಲ್ಲ. ಇರುವುದು ನಿಮಗೆ ಪತ್ರ ಬರೆಯುವ ಖುಷಿ. ಇನ್ನೊಂದು ಎಲ್ಲಿ ಬೇಕೆಂದರಲ್ಲಿ ಎಗ್ಗಿಲ್ಲದೆ ಓಡಾಡುವ ಆನಂದ. ಇರುವ ಒಬ್ಬಳು ಹೆಂಡತಿಯನ್ನೂ ಯಾಕೋ ಕನ್ನಡ ನಾಡಿನಲ್ಲೇ ಬಿಟ್ಟು ಬಂದಿರುವೆ. ಬಂದು ಇಲ್ಲಿ ನೋಡಿದರೆ ಮೊದಲು ಚೆನ್ನಾಗಿ ಮಾತನಾಡುತ್ತಿದ್ದ ನಗುತ್ತಿದ್ದ ಹುಡುಗಿಯರೂ ಬಿಗುಮಾನದಿಂದ ಓಡಾಡುತ್ತಿದ್ದಾರೆ. ಯಾಕೋ ಒಂಟಿ ಗಂಡಸಿನ ಕುರಿತು ಈ ಊರಿನವರಿಗೆ ಸಲ್ಲದ ಅನುಮಾನ ಇರುವಂತಿದೆ. ನಾನೂ ಯಾರ ತಂಟೆಗೂ ಹೋಗದೆ, ಎಲ್ಲರನ್ನೂ ದೂರದಿಂದಲೇ ನೋಡುತ್ತಾ ಮನಸ್ಸಿನಲ್ಲೇ ಯೋಚಿಸುತ್ತಿರುವೆ ಮತ್ತು ಚೆನ್ನಾಗಿ ಅಡಿಗೆ ಮಾಡಿಕೊಂಡು ಸಂಗೀತ ಕೇಳುತ್ತಿರುವೆ. ಇದೀಗ ಗಂಗೂಬಾಯಿ ಹಾನಗಲ್ ‘ಜೈ ಮಾತಾ ಭವಾನಿ’ ಅಂತ ಹಾಡುತ್ತಿದ್ದ ಆ ಹಾಡೂ ಎಷ್ಟು ಬೇಗ ಮುಗಿದು ಹೋಗುತ್ತಿದೆ!

ಬೆಂಗಳೂರಿಗೆ ಬಂದಿದ್ದಾಗ ನಾನು ನಿಮಗೆ ಒಂದು ಕತೆ ಹೇಳಿದ್ದೆ. ಈ ಕತೆ ನನಗೆ ಕೊಡಗಿನ ನನ್ನ ಪ್ರೀತಿಯ ಮುದುಕಿ ಹೇಳಿದ್ದು. ಆ ಮುದುಕಿ ಈಗ ಮಣ್ಣಲ್ಲಿ ಮಣ್ಣಾಗಿ ಹೋಗಿದೆ.

ಅದು ಒಂದು ಅಣ್ಣ ತಂಗಿಯ ಕತೆ. ಅಣ್ಣನಿಗೆ ತಂಗಿಯ ಮೇಲೆ ಪ್ರೀತಿ. ತಂಗಿಗೆ ಆಣ್ಣನ ಬಗ್ಗೆ ಹೆದರಿಕೆ ಮತ್ತು ಏನೋ ಒಂದು…. ಒಂದು ಸಲ ಕಾಡಿನ ನಡುವೆ ತಂಗಿ ಅಣ್ಣನಿಗೆ ಬುತ್ತಿ ಕಟ್ಟಿಕೊಂಡು ಹೋಗುತ್ತಿರುವಾಗ ಮರದ ಮೇಲಿರುವ ಮಂಗವೊಂದು ಇಳಿದು ಬಂದು ಅವಳ ಬಟ್ಟೆಯನ್ನು ಹರಿದುಹಾಕಿ ಹಾಳುಮಾಡಿ ಹೊರಟು ಹೋಗುತ್ತದೆ. ತಂಗಿ ಬುತ್ತಿಯನ್ನು ಬಿಸಾಕಿ ಮೈಯ ಮೇಲೆ ಮಣ್ಣು ಸುರುವಿಕೊಂಡು ಅಳುತ್ತಾ ಮನೆಗೆ ಬಂದು ಅಣ್ಣ ನನ್ನನ್ನು ಹಾಳು ಮಾಡಿದ ಅಂತ ಚಾಡಿ ಹೇಳುತ್ತಾಳೆ. ಅಪ್ಪ ಮಗನನ್ನು ಕೊಡಲಿಯಲ್ಲಿ ಕಡಿದುಹಾಕಿ, ಕಾಡಿನಲ್ಲಿ ಗುಂಡಿ ತೋಡಿ ಹುಗಿದು ಬರುತ್ತಾನೆ. ಎಷ್ಟೋ ತಿಂಗಳು ಕಳೆದು ನೋಡಿದರೆ ಕಾಡಿನಲ್ಲಿ ಹೂತು ಹಾಕಿದ ಜಾಗದಲ್ಲಿ ಹೂವಿನ ಗಿಡವೊಂದು ಬೆಳೆದಿರುತ್ತದೆ. ಮತ್ತು ಆ ಗಿಡದಲ್ಲಿ ಒಂದು ಕೆಂಪು ದಾಸವಾಳದ ಹೂವು. ಯಾರು ಮುಟ್ಟಿದರೂ ಹೂವು ಕೈಗೆ ಎಟುಕದೆ ಮೇಲಕ್ಕೆ ಮೇಲಕ್ಕೆ ಹೋಗುತ್ತಿರುತ್ತದೆ. ಕೊನೆಗೆ ಆ ತಂಗಿ ಕಾಡೊಳಗೆ ಬಂದು ಕೈಚಾಚಿದಾಗ ಆ ಗಿಡ ತನ್ನಷ್ಟಕ್ಕೆ ಬಾಗಿ ಆ ದಾಸವಾಳದ ಹೂವು ಅವಳ ಕೈಯೊಳಕ್ಕೆ ಬರುತ್ತದೆ.

ಇದು ಕತೆ. ಈ ಕತೆಯನ್ನು ಆ ಅಜ್ಜಿ ಅವತ್ತು ಯಾಕೆ ನನಗೆ ಹೇಳಿದಳು ಮತ್ತೆ ಯಾಕೆ ತಿರುಗಿ ನಿಮಗೆ ಹೇಳುತಿರುವೆ ಎಂಬುದು ನನಗೆ ಗೊತ್ತಿಲ್ಲ. ಈವತ್ತು ಇಲ್ಲಿ ಒಬ್ಬಳು ಪುಟ್ಟ ಹುಡುಗಿ ತನ್ನ ಮಗುವನ್ನು ಬೆನ್ನಲ್ಲಿ ಕಟ್ಟಿಕೊಂಡು ಮಳೆಯಲ್ಲಿ ಕಷ್ಟಪಟ್ಟು ನಡೆದು ಹೋಗುತ್ತಿದ್ದಳು. ಅವಳ ಹಿಂದಿನಿಂದ ನಡೆದು ಹೋಗುತ್ತಿದ್ದ ನನಗೆ ಯಾಕೋ ಮತ್ತೆ ಈ ಕತೆ ನೆನಪಾಯಿತು.
ನೀವು ಕತೆ ಕೇಳಿದ ಮೇಲೆ ‘ಕತೆ ಇನ್ನೂ ಚೆನ್ನಾಗಿ ಬರೀಬೇಕು, ಎಲ್ಲರಿಗಿಂತ ಚೆನ್ನಾಗಿ ಬರೀಬೇಕು, ಮಹಾತ್ವಾಕಾಂಕ್ಷಿ ಆಗಿರಬೇಕು’, ಅಂತ ಹೇಳಿದ್ದೀರಿ. ನಾನೂ ಇಲ್ಲಿ ಕೂತುಕೊಂಡು ಅದನ್ನೇ ಯೋಚಿಸುತ್ತಿರುವೆ. ಎಲ್ಲರೂ ಹೀಗೇ ಹೇಳುತ್ತಾರೆ. ಬರುತ್ತಾ ಬರುತ್ತಾ ಹಾಳಾಗಿ ಹೋಗುತ್ತಿರುವೆ ಅಂತ ಬೈಯುತ್ತಾರೆ. ಹೋಗಲಿ ಬಿಡಿ. ಪರವಾಗಿಲ್ಲ .

ಬೆಂಗಳೂರಿನಿಂದ ಬರುವಾಗ ದಾರಿಯಲ್ಲಿ ಎರಡು ದಿನ ಕಲ್ಕತ್ತಾದಲ್ಲಿ ಬೆವರುತ್ತಾ ಬೀದಿ ಸುತ್ತಿದೆ.sonanachi.jpg ಕಲ್ಕತ್ತಾದಲ್ಲಿ ಬೀದಿ ಸುತ್ತುವ ಮಜವೇಬೇರೆ. ಶೇಕ್ಸ್‌ಪಿಯರ್ ಬೀದಿ, ಲೆನಿನ್ ಬೀದಿ, ಚೈನಾಬಜಾರ್, ಪೂರ್ಚುಗೀಸ್ ರಸ್ತೆ, ಸಿನೆಗಾಗ್ ರೋಡ್ ಮತ್ತು ಮಿರ್ಜಾಗಾಲಿಬ್ ರಸ್ತೆ, ಎಲ್ಲ ಕಡೆ ಸುತ್ತಾಡಿದೆ. ಮತ್ತು ಕೊನೆಗೆ ಬೆಳ್ಳಂಬೆಳಗ್ಗೆ ಒಂದು ವೇಶ್ಯಾವಾಟಿಕೆಯ ರಸ್ತೆಯಲ್ಲಿ ಒಂದು ರೂಪಾಯಿಯ ಚಾ ಕುಡಿಯುತ್ತಾ ಸಿಗರೇಟು ಸೇದುತ್ತಾ ಕುಳಿತಿದ್ದೆ. ಬೆಳಗ್ಗೆಯೇ ಹಲ್ಲು ಉಜ್ಜುವ, ಮಕ್ಕಳ ಕುಂಡೆ ತೊಳೆಯುವ, ಹಾಲು ಕೊಂಡುಕೊಳ್ಳುವ, ಆಕಳಿಸುತ್ತಾ ಮೈ ಕೆರಕೊಳ್ಳುವ ವೇಶ್ಯಾಸ್ತ್ರೀಯರು, ಅವರ ನಡುವೆಯೇ ದಾರಿ ಮಾಡಿಕೊಂಡು ಶಾಲೆಗೆ ಹೊರಟ ಮಕ್ಕಳು, ಪೂಜೆಗೆ ಹೊರಟ ಪುರೋಹಿತರು. ನೋಡುತ್ತಾ ಇನ್ನೊಂದು ಟೀ ಕುಡಿದು ರೈಲು ಹತ್ತಿ ಇಲ್ಲಿಗೆ ಬಂದು ಸೇರಿಕೊಂಡೆ. ನಿಲ್ಲಿಸುತ್ತೇನೆ. ಇಲ್ಲಿ ಈಗ ಸಣ್ಣಗೆ ಚಳಿಯಾಗುತ್ತಿದೆ. ಅಲ್ಲಿ ಸೆಖೆಯಲ್ಲಿ ಬೆವರುತ್ತಿರುವ ಎಲ್ಲರಿಗೂ ಸಾಂತ್ವನ ತಿಳಿಸಿ.

—–

 

Advertisements