ದೇವದೂತರ ಆಡುಭಾಷೆ!

ಮೇಘಾಲಯ ಎಂಬ ಈ ಪುಟ್ಟ ರಾಜ್ಯದ ರಾಜಕೀಯ ಇಡೀ-ವಾರ ನನ್ನ ತಲೆಯನ್ನು ತಿಂದು ಹಾಕಿಬಿಟ್ಟಿತು. ಮೂವರು ಮಂತ್ರಿಗಳು ಹೇಳದೆ ಕೇಳದೆ ಮುಖ್ಯಮಂತ್ರಿಯನ್ನು ಬಿಟ್ಟು ಎದುರುಪಾರ್ಟಿಯನ್ನು ಸೇರಿಕೊಂಡು ಬಿಟ್ಟಿದ್ದಾರೆ. ಎಪ್ಪತ್ತೇಳು ವರ್ಷದ ಮುಖ್ಯಮಂತ್ರಿ ಬಿದ್ದು ಹೋಗುವ ಸ್ಥಿತಿಯಲ್ಲಿದ್ದಾರೆ. ನಾನು ‘ಏನು ಕತೆ ನಿಮ್ಮ ಪರಿಸ್ಥಿತಿ ವೀಕ್ ಆಗಿ ಬಿಟ್ಟಿದೆಯಲ್ಲ’ ಅಂತ ಕೆಣಕಿದೆ. ಅವರು ತಟ್ಟನೆ ಶರಟಿನ ತೋಳು ಮಡಚಿ ತೋಳು ಬಲ ತೋರಿಸುತ್ತಾ ‘ಏನು ವೀಕ್ ಆಗಿದ್ದೇನಾ ನೋಡು’ ಅಂತ ನನ್ನ ಹೊಟ್ಟೆಗೆ ಪಂಚ್ ಮಾಡಲು ಬಂದರು. ನಾನು ನಗುತ್ತಾ ಬದಿಗೆ ಸೇರಿದೆ.meghalaya-map.gifಇಲ್ಲಿನ ಜನ ಹೀಗೆಯೇ. ಎಂತಹ ಅತಂತ್ರ ಸ್ಥಿತಿಯಲ್ಲೂ, ಎಂತಹ ಮುಖ್ಯ ಮಂತ್ರಿಯಾದರೂ ನಗು ಮತ್ತು ಚೇಷ್ಟೆ ಬಿಡುವುದಿಲ್ಲ.  ಇವರೆಲ್ಲರ ಹಿಂದೆ ತಿರುಗಾಡಿ ನನಗಂತೂ ತಲೆಕೆಟ್ಟು ಹೋಗಿತ್ತು. ಬಾಯಿತೆಗೆದರೆ ಮಂತ್ರಿಗಳ ಹೆಸರು. ತಲೆಯೊಳಗೆ ಎಂ.ಎಲ್.ಎಗಳು ಯಾವ ಸಹವಾಸವೂ ಬೇಡ ಅಂತ ಈವತ್ತು ಮಧ್ಯಾಹ್ನ ಬಾಗಿಲು ಹಾಕಿಕೊಂಡು ಕಿಟಕಿ ತೆಗೆದು ಬಿಸಿಲನ್ನು ಒಳಗೆ ಬಿಟ್ಟುಕೊಂಡು ಸುಮ್ಮನೆ ಕುಳಿತಿದ್ದೆ. ಎಂತಹ ಒಳ್ಳೆಯ ಬಿಸಿಲು! ಮಟಮಟಮಧ್ಯಾಹ್ನದಲ್ಲೂ ಮೈಮೇಲೆ ಹರಡಿಕೊಂಡು ಕೂರಬಹುದು. ಹಾಗೇ ತುಂಬಾ ಹೊತ್ತು ಕೂತಿದ್ದೆ. ಆಮೇಲೆ ಮಳೆ ಬರಲು ತೊಡಗಿತು.ಹೋಗಲಿ ಬಿಡಿ ಪ್ರತಿವಾರ ಮೋಡ  ಬಿಸಿಲು ಮಳೆ ಹೂವು ಅಂತ ಬರೆದು ನಾನೂ ನಿಮ್ಮ ತಲೆ ಹಾಳು ಮಾಡುತ್ತಿದ್ದೇನೆ. ಶಿವಮೊಗ್ಗದ ನಿಮ್ಮ ಊರಿನ ಹತ್ತಿರ ಹನುಮಂತಪ್ಪ ಅಂತ ನನ್ನ ಸಖನೊಬ್ಬನಿದ್ದಾನೆ. ಈ ಸಲ ಭತ್ತ ಮಾರಿ ಆ ಹಣದಲ್ಲಿ ವಿಮಾನ ಹತ್ತಿ ನಿನ್ನ ಹತ್ತಿರ ಬರುತ್ತೇನೆ ಅಂದವನು ಪತ್ತೆಯೇ ಇಲ್ಲ. ನನಗೆ ಯಾಕೋ ಅವನ ಭತ್ತ ಏನಾಯಿತು ಅಂತ ಚಿಂತೆ ಶುರುವಾಗಿದೆ.ಆಮೇಲೆ ಇನ್ನೊಂದು ವಿಷಯ. ನೀವು ನನ್ನನ್ನು ಕಳೆದವಾರ ‘ಸಾಬಿ’ ಅಂತ ಬರೆದಿದ್ದೀರಂತೆ. ಊರಿಂದ ನನ್ನ ಹೆಂಡತಿ ಫೋನ್  ಮಾಡಿ ಕೋಪಿಸಿಕೊಂಡು ನಿಮ್ಮ ಮೇಲೆ ನನ್ನನ್ನು ಎತ್ತಿಕಟ್ಟಲು ನೋಡಿದಳು. ನಾನು ನಗುತ್ತಿದ್ದೆ. ನಾನು ಸಾಬಿ ಅಲ್ಲ. ನಾನು ಮಲಯಾಳಿ ಬ್ಯಾರಿ. ‘ಬ್ಯಾರಿ’ ಅಂದರೆ ತುಳುವಿನಲ್ಲಿ ವ್ಯಾಪಾರ ಅಂತ ಅರ್ಥ. ನನ್ನ ಅಜ್ಜ ವ್ಯಾಪಾರ ಮಾಡುತ್ತಿದ್ದರಂತೆ. ಎತ್ತಿನ ಬಂಡಿಯಲ್ಲಿ ಸರಕು ಹಾಕಿಕೊಂಡು ಊರು ತಿರುಗಿ ಮಾರಿಬರುತ್ತಿದ್ದರಂತೆ. ಹಾಗಾಗಿ ನಾನೂ ಬ್ಯಾರಿ. ನನಗೂ ಒಂದು ಎತ್ತಿನ ಬಂಡಿ ಇದ್ದಿದ್ದರೆ ಅಂತ ಒಮ್ಮೊಮ್ಮೆ ಆಶೆ ಆಗುತ್ತದೆ.ಮೈಸೂರಿನಲಿ ಇಂಗ್ಲಿಷ್ ಎಂ.ಎ. ಓದುತ್ತಿದ್ದಾಗ ನಮ್ಮ ಜೊತೆ ಒಬ್ಬಳು ಸಾಬರ ಹುಡುಗಿ ಇದ್ದಳು. ಮೊದಮೊದಲು ಮಾತನಾಡುವಾಗ ತಲೆ ತಗ್ಗಿಸಿ ಕಾಲಲ್ಲಿ ನೆಲ ಕೆದಕುತ್ತಾ ನಿಲ್ಲುತ್ತಿದ್ದಳು. ಒಂದು ಸಲ ನಿನಗೆ ಉರ್ದು ಬರುವುದಿಲ್ಲವಾ ಅಂತ ಕೇಳಿದಳು. ನಾನು ಇಲ್ಲ ಅಂದೆ. ಹಾಗಾದರೆ ನೀನು ಹೇಗೆ ಮುಸಲ್ಮಾನ ಅಂತ ಕೇಳಿದಳು. ನಾನು ದುರುಗುಟ್ಟಿ ನೋಡಿದೆ. ನಮ್ಮಲ್ಲಿ ತೀರಿ ಹೋದ ಮೇಲೆ ದೇವದೂತರು ಗೋರಿಯೊಳಕ್ಕೆ ಬಂದು ನಿನ್ನ ತಂದೆ ತಾಯಿ ಯಾರು ಎಂದು ಕೇಳುತ್ತಾರಂತೆ ಆಗ ನಾವು ‘ಆದಂಪಾಪಾ’ ಅನ್ನಬೇಕು. ಅಮ್ಮ ಯಾರು ಎಂದು ಕೇಳಿದಾಗ ‘ಅವ್ವಾ ಬೀಬಿ’. ಎನ್ನಬೇಕು ಎಲ್ಲಿಯಾದರೂ ಅಪ್ಪಿತಪ್ಪಿ ನಿಜವಾದ ಅಪ್ಪ ಅಮ್ಮನ ಹೆಸರು ಹೇಳಿದರೆ ನೇರವಾಗಿ ನರಕಕ್ಕೆ ಹೋಗುತ್ತೇವೆ. ನಮ್ಮ ಕ್ಲಾಸಿನಲ್ಲಿದ್ದ ಸಾಬರ ಹುಡುಗಿ ‘ನಿನಗೆ ಉರ್ದು ಬರುವುದಿಲ್ಲವಾ ಹಾಗಾದರೆ ದೇವ ದೂತರು ಪ್ರಶ್ನೆ ಕೇಳಿದಾಗ ಯಾವ ಭಾಷೆಯಲ್ಲಿ ಉತ್ತರ ಹೇಳುತ್ತೀಯಾ’ ಅಂತ ಕೇಳಿಬಿಟ್ಟಳು. ನನಗೆ ಸಿಟ್ಟು ಬಂದು ಆಮೇಲೆ ಅವಳ ಜೊತೆ ಮಾತೇ ಆಡಲಿಲ್ಲ. ಹಾಗಾಗಿ ಲಂಕೇಶ್ ದಯವಿಟ್ಟು ನನ್ನನ್ನು ಸಾಬಿ ಅನ್ನಬೇಡಿ.ಸ್ವೀಡನ್  ನಲ್ಲೂ ಹೀಗೆ ಆಯಿತು. ಸ್ಟಾಕ್ ಹೋಂನಲ್ಲಿ ಸ್ಟಿಂಡ್ ಬರ್ಗ್ ಎಂಬ ಲೇಖಕರು ಕಲಾವಿದರು ಕೂರುವ ರೆಸ್ಟಾರೆಂಟ್ ನಲ್ಲಿ ನಾನು ಮತ್ತು ಒಬ್ಬರು ಮಲಯಾಳಿ ಲೇಖಕಿ ಕುಳಿತಿದ್ದೆವು. ನಮ್ಮ ನಡುವೆ ವೈನ್ ಬಟ್ಟಲುಗಳು, ಬಿಯರ್ ಗ್ಲಾಸುಗಳು, ಮೀನು ,ಮಾಂಸ ತರಕಾರಿ ಹೀಗೆ ಏನೆಲ್ಲಾ ಇಟ್ಟುಕೊಂಡು ಮಾತನಾಡುತ್ತಿದ್ದೆವು. ಮೂಲೆಯಲ್ಲ ಒಬ್ಬಳು ಮೂಗುಬೊಟ್ಟು ಹಾಕಿಕೊಂಡ ಧಡೂತಿ ಹುಡುಗಿಯೊಬ್ಬಳು ನಮ್ಮನ್ನೇ ಗಮನಿಸುತ್ತಿದ್ದವಳು, ‘are you from India  ಅಂತ ಕೇಳಿದಳು. ‘ಹೌದು, ಅಂತ ಹೇಳಿದೆ’,ಎಷ್ಟು ಮಕ್ಕಳು ಅಂತ ಕೇಳಿದಳು.ನಾವಿಬ್ಬರೂ ನಾಚಿಕೊಂಡುಬಿಟ್ಟೆವು. ‘ನಾವು ಗಂಡ ಹೆಂಡತಿ ಅಲ್ಲ’ ಅಂತ ಹೇಳಿದೆ. ಮತ್ತೆ ಯಾಕೆ ಜೊತೆಯಲ್ಲಿ ಕುಳಿತಿದ್ದೀರಿ ಅನ್ನುವಂತೆ ಕೊಂಕಾಗಿ ನೋಡಿದಳು. . ಹಾಗಾದರೆ ನೀನು ಮುಸ್ಲಿಂ ಹುಡುಗಿ ಇರಬೇಕು ಅಂದೆ. ಓ ನಿಮಗೆ ಹೇಗೆ ಗೊತ್ತಾಯಿತು ಅಂತ ಅಚ್ಚರಿ ಪಟ್ಟಳು. ‘ನಿನ್ನ ಮಾತಿನಿಂದ ಗೊತ್ತಾಯಿತು ಮತ್ತೆ ನಾನೂ ಕೂಡ ಮುಸಲ್ಮಾನ’ ಅಂದೆ. ಇಲ್ಲ ನೀನು ಮುಸಲ್ಮಾನ ಅಲ್ಲ. ಮುಸಲ್ಮಾನನಾಗಿದ್ದರೆ wine  ಕುಡಿಯುತ್ತೀಯಾ? ಹೀಗೆ ಸಿಕ್ಕಿದ ಕಡೆ ಮಾಂಸ ತಿನ್ನುತ್ತೀಯಾ? ನೀನು ಮುಸಲ್ಮಾನನಾದರೆ ನಿಜವಾಗಿ ನರಕಕ್ಕೆ ಹೋಗುತ್ತೀಯಾ, ಅಂತ ನನಗೆ ಧರ್ಮ ಉಪದೇಶ ಮಾಡಲು ಬಂದಳು.ನೋಡಿದರೆ ಅವಳು ಪುಟ್ಟ ಹುಡುಗಿ ಹೈಸ್ಕೂಲಿನಲ್ಲಿ ಓದುತ್ತಿರುವವಳು. ಸಿಕ್ಕಾಪಟ್ಟೆ ತಿಂದು ಆ ವಯಸ್ಸಿಗೇ ಅಷ್ಟೊಂದು ಊದಿಕೊಂಡು ಬಿಟ್ಟಿದ್ದಳು. ನನಗೆ ಯಾಕೋ ಅವಳು ಪಾಪದ ಹುಡುಗಿ ಅನಿಸಿಬಿಟ್ಟಿತ್ತು. ‘ನೀನು ಇನ್ನೂ ಪುಟ್ಟ ಹುಡುಗಿ. ದೊಡ್ಡವಳಾಗುತ್ತೀ. ಆಮೇಲೆ ಗೊತ್ತಿಲ್ಲದೇ ಹೀಗೇ ಸಣ್ಣಪುಟ್ಟ ಪಾಪಗಳನ್ನು ಮಾಡುತ್ತೀ. ಪರವಾಗಿಲ್ಲ. ನಾವಿಬ್ಬರೂ ನರಕದಲ್ಲಿ ಭೇಟಿಯಾಗೋಣ’  ಅಂತ ಹೇಳಿದೆ. ಮಲಯಾಳಿ ಲೇಖಕಿ ನಮ್ಮಿಬ್ಬರ ಜಗಳವನ್ನು ಕಕ್ಕಾಬಿಕ್ಕಿಯಾಗಿ ನೊಡುತ್ತಿದ್ದಳು.

Advertisements