ಟರ್ಕಿ ಕೋಳಿಗಳ ನೆನಪು

male-turkey.jpgಯಾಕೋ ಸಣ್ಣಗೆ ನಗುಬರುತ್ತಿದೆ. ನಾನು ಪ್ರತಿವಾರವೂ ಕುಡುಮಿಯ ಹಾಗೆ ಹಠ ಹಿಡಿದು ನಿಮಗೆ ಪತ್ರಬರೆಯುವುದು.  ಕೆಲವರು  ಗೆಳೆಯರು ಇನ್ನು ಈತ ಕತೆಯೂ ಬರೆಯಲಾರ ಕವಿತೆಯೂ ಬರೆಯಲಾರ ಬರೀ ಪತ್ರ ಬರೆದು ಹಾಳಾಗಿ ಹೋಗುತ್ತಿರುವ, ಎಂದು ವಿನಾಕಾರಣ ಹಲುಬುವುದು,- ಎಲ್ಲವನ್ನೂ ಯೋಚಿಸಿ ಯೋಚಿಸಿ ಈವತ್ತು ಚಪಾತಿ ಲಟ್ಟಿಸಿತ್ತಾ ಕೂತಿದ್ದೆ. ಆಗಲೂ ನಗುಬರುತ್ತಿತ್ತು. ಚಪಾತಿ ನಾನು ಮಾಡಿದರೂ ಗುಂಡಗೆ ಆಗುತ್ತದೆ. ನಾನು ಮಾಡಿದ ದೋಸೆಯಲ್ಲೂ ತೂತುಗಳಿರುತ್ತದೆ ಎಂದೆಲ್ಲಾ ಗುನುಗುತ್ತಿದ್ದೆ.ಊರಿಗೆ ಹೋಗಿದ್ದಾಗ ನನ್ನ ಉಮ್ಮನಿಗೆ ಇಲ್ಲಿ ಷಿಲ್ಲಾಂಗಿನಲ್ಲಿ  ಒಳ್ಳೆ ಒಳ್ಳೆಯ ಬಾತುಕೋಳಿಗಳಿವೆ ಅಂತ ಹೇಳಿಬಿಟ್ಟಿದ್ದೆ. ಆಕೆ ಬೇರೆ ಏನೂ ಕೇಳದವಳು `ಅಯ್ಯೋ ನೀನು ಬರುವಾಗ ಬಾತುಕೋಳಿಯ ಮೊಟ್ಟೆಗಳನ್ನು ತರಬೇಕಾಗಿತ್ತು. ಇಲ್ಲಿ ಕಾವು ಕೊಟ್ಟು ಮರಿ ಮಾಡುತ್ತಿದ್ದೆ’ ಅಂತ ಹಂಬಲಿಸಿದ್ದಳು.ತುಂಬಾ ವರ್ಷಗಳ ಹಿಂದೆ ನನ್ನ ಬಾಪಾ ಎಲ್ಲಿಂದಲೋ ಟರ್ಕಿ ಕೋಳಿಯ ಮೊಟ್ಟೆಗಳನ್ನು ಹೀಗೇ ತಂದುಕೊಟ್ಟಿದ್ದರು. ಉಮ್ಮ ಅವುಗಳನ್ನು ಕಾವಿಗೆ ಬಂದ ಊರು ಕೋಳಿಯ ಹೊಟ್ಟೆಯ ಕೆಳಗೆ ಇಟ್ಟು ಕೊನೆಗೆ ಒಂದೇ ಒಂದು ಮರಿ ಹೊರಗೆ ಬಂದಿತ್ತು. ನೋಡಿದರೆ ಅದೊಂದು ಗಂಡು ಟರ್ಕಿ ಕೋಳಿಮರಿ. ಬಹುಶಃ ನೀವು ಟರ್ಕಿಕೋಳಿ ನೋಡಿರಲಿಕ್ಕಿಲ್ಲ.ತುಂಬಾ ಎತ್ತರಕ್ಕೆ ಬೆಳೆಯುತ್ತದೆ. ಆ ಗಂಡು ಟರ್ಕಿಕೋಳಿಯಂತೂ ತುಂಬಾ ಬೆಳೆದು ಅದರ ಕೊರಳೆಲ್ಲಾ ಕೆಂಪುಕೆಂಪಗೆ ಮಾಂಸದ ಗಂಟುಗಳಿಂದ ತುಂಬಿಕೊಂಡು ಅದಕ್ಕೆ ಸಿಟ್ಟು ಬಂದಾಗ ಇನ್ನಷ್ಟು ಕೆಂಪಾಗಿ, ಹೋಗುವವರನ್ನು ಬರುವವರನ್ನು ಅಟ್ಟಿಸಿಕೊಂಡು ಓಡಾಡುತ್ತಿತ್ತು. ಹೆಣ್ಣು ಮಕ್ಕಳನ್ನಂತೂ ಅದಕ್ಕೆ ಕಂಡರಾಗುತ್ತಿರಲಿಲ್ಲ. ನನ್ನ ಸಣ್ಣ ಸಣ್ಣ ತಂಗಿಯಂದಿರನ್ನು ಅಟ್ಟಿಸಿ ಅವರು ಬಿದ್ದು ಗಾಯ ಮಾಡಿಕೊಂಡು, ನನ್ನ ಉಮ್ಮನಿಗೆ ತಲೆಕೆಟ್ಟು ಹೋಗಿ ಆಮೇಲೆ ಬಾಪಾ ಎಲ್ಲಿಂದಲೋ ಒಂದು ಹೆಣ್ಣು ಟರ್ಕಿಕೋಳಿಯನ್ನು ತಂದು ಬಿಟ್ಟಿದ್ದರು. ಆಮೇಲೆ ಅವುಗಳು ತುಂಬಾ ಕಾಲ ಅನ್ಯೋನ್ಯವಾಗಿದ್ದವು.ಆಮೇಲೆ ಏನಾಯಿತು ಎಂಬುದು ನೆನಪಾಗುತ್ತಿಲ್ಲ. ಬಹುಶಃ ಗಂಡು ಕೋಳಿ ವಯಸ್ಸಾಗಿ ಸತ್ತು ಹೋಯಿತು. ಆಮೇಲೆ ಹೆಣ್ಣು ಕೋಳಿಯನ್ನು ಮಾರಿದೆವು. ನನಗೆ ಯಾಕೋ ಈಗಲೂ ಆ ಗಂಡು ಕೋಳಿ ಅಡಿಕೆ ತೋಟದ ನಡುವೆ ಕೇಕೆ ಹಾಕಿಕೊಂಡು ಹೋಗುತ್ತಿರುವಂತೆ ಕೇಳಿಸುತ್ತದೆ. ಏನು ಮಾಡಲಿ?ಅಯ್ಯೊ, ನಿಮಗೆ ಈ ಪತ್ರ ಬರೆಯದಿದ್ದರೆ ನಾನು ಆ ಟರ್ಕಿ ಕೋಳಿಗಳನ್ನು ಮರತೇ ಹೋಗುತ್ತಿದ್ದೆ. ಈಗ ಇದನ್ನು ಓದಿ ನನ್ನ ಉಮ್ಮನಿಗೂ ಬೆಳೆದು ದೊಡ್ಡವರಾಗಿರುವ ನನ್ನ ತಂಗೀಯರಿಗೂ ಎಲ್ಲರಿಗೂ ಅವುಗಳ ನೆನಪಾಗುತ್ತದೆ. ಲಂಕೇಶ್ ಇದಕ್ಕಾಗಿ ನಿಮಗೆ ತುಂಬಾ ಋಣಿ.ಇಲ್ಲಿ ಈಗ ವಿನಾಕಾರಣ ಬಿಸಿಲು. ಈಗಂತೂ ಇಲ್ಲಿ ವಿಪರೀತ ಮಳೆ ಸುರಿಯುತ್ತಿರಬೇಕಿತ್ತು. ಜಗತ್ತಿನಲ್ಲೇ ಅತ್ಯಂತ ಮಳೆ ಬೀಳುವ Mawsynram ಇಲ್ಲೇ ಚಿರಾಪುಂಜಿಯ ಹತ್ತಿರ ಇರುವ ಊರು. ಅಲ್ಲಿಗೂ ಹೋಗಿದ್ದೆ. ಒಣಗಿಕೊಂಡು ಮಲಗಿತ್ತು. ಅದರ ಆ ಕಡೆ ನೋಡಿದರೆ ಬಾಂಗ್ಲಾದೇಶದ ಬಯಲು. ಅದು ಇನ್ನಷ್ಟು ಒಣಗಿತ್ತು. ಇನ್ನೇನು ಮಳೆ ಸುರಿಯುತ್ತದೆ, ಇನ್ನೇನು ಸುರಿಯುತ್ತದೆ ಅಂತ ಎಲ್ಲರೂ ಅನ್ನುತ್ತಿದ್ದಾರೆ. ಮಳೆ ಜೋರಾಗಿ ಸುರಿಯುವಾಗ ಚಿರಾಪುಂಜಿಯಲ್ಲಿ ತೊಯ್ದುಕೊಂಡು ಓಡಾಡಬೇಕು. ಮತ್ತೆ ಮಳೆಯಲ್ಲಿ ನೆನೆದುಕೊಂಡು ಬಂದು ಅಗ್ಗಿಷ್ಟಿಕೆಯ ಎದುರು ಸುಟ್ಟ ಮಾಂಸದ ತುಂಡುಗಳನ್ನು ಹುರಿದು, ಕೊಂಚ ಕೊಂಚ Whiskyಯ ಜೊತೆ ಬಾಯಿಗಿಟ್ಟು ಕವಿತೆಗಳನ್ನೂ ಸಂಗೀತವನ್ನೂ ಕೇಳಬೇಕು, ಅಂತ ಇಲ್ಲೊಬ್ಬರು ರಸಿಕರು ಹೇಳುತ್ತಿದ್ದಾರೆ. ನಾನೂ ಮಳೆ ಬರಲಿ ಏನಾಗುತ್ತದೆ ನೋಡುವಾ ಅಂತ ಕಾಯುತ್ತಿದ್ದೇನೆ.ಮೊನ್ನೆ ಒಂದು ಬಾರ್ಬರ್ ಷಾಪಿನಲ್ಲಿ ಕೂತಿದ್ದೆ. ಇಬ್ಬರು ಹುಡುಗರು ನಡುಮಧ್ಯಾಹ್ನ ವಿಪರೀತ ಕುಡಿದು ಒಂದು ಕೂದಲು ತೆಗೆಯುವವನ ತಲೆ ತಿನ್ನುತ್ತಿದ್ದರು. Shave ಮಾಡಿದ್ದು ನೀಟಾಗಲಿಲ್ಲ, ತಲೆಯ ಮಾಲಿಷ್ ಸರಿ ಮಾಡಲಿಲ್ಲ, ಮುಖಕ್ಕೆ ಸರಿಯಾಗಿ ಮಸಾಜ್ ಮಾಡಲಿಲ್ಲ-ಅಂತೆಲ್ಲಾ ಆತನ ಗೋಳು ಹುಯ್ಯುತ್ತಿದ್ದರು. ಆತ ಅವರ ತಲೆಯನ್ನು ತಟ್ಟಿ ತಟ್ಟಿ ಸುಸ್ತಾಗಿ ಹೋಗಿದ್ದ. ಆಮೇಲೆ ಅವರೇ ಎದ್ದು ಅವರೇ ಅವರ ತಲೆಯನ್ನು ಬಾಚಿ, ಮುಖಕ್ಕೆ ಕ್ರೀ0 ಮೆತ್ತಿಕೊಂಡು ಬೈಯುತ್ತಾ ಹೋದರು. ಹಳ್ಳಿಯ ಹುಡುಗರಂತೆ. ಕೈಯಲ್ಲಿ ತುಂಬಾ ಕಾಸು ಇದೆ. ಇಲ್ಲಿ ಕೆಲವು ಹಳ್ಳಿಯ ಕಡೆ ಎಲ್ಲರಿಗೂ ಕಲ್ಲಿದ್ದಲಿನ ಗಣಿಗಳಿವೆ. ದಿನಕ್ಕೆ ಸಾವಿರ ಎರಡು ಸಾವಿರ ರೂಪಾಯಿ ಬರುತ್ತದೆ. ಈ ಹುಡುಗರು ವಾರಕ್ಕೆ ಒಮ್ಮೆ ಷೋಕಿ ಮಾಡಲು ಪೇಟೆಗೆ ಬರುತ್ತಾರೆ, ನಮ್ಮ ತಲೆ ತಿನ್ನುತ್ತಾರೆ ಅಂತೆಲ್ಲಾ ಬಾರ್ಬರ್ ನನ್ನ ತಲೆ ತಿನ್ನುತ್ತಿದ್ದ. ಲಂಕೇಶ್ ನಾನು ಯಾಕೋ ನಿಮ್ಮ ತಲೆ ತಿನ್ನುತ್ತಿದ್ದೇನೆ.ಎಲ್ಲರನ್ನೂ ಎಲ್ಲರೂ ಕ್ಷಮಿಸಲಿ.

Advertisements