ಮಂಗಗಳಾದ ಮೂವರು ಹುಡುಗರು [ಒಂದು ಹಳೆಯ ಕಥೆ]

iblis1.jpg 

‘ಆತನನ್ನು ಇವರೆಲ್ಲಾದರೂ ಕೊಂದುಬಿಟ್ಟರೆ ಮಾರನೇ ದಿನವೇ ನಾನು ನಮ್ಮ ಧರ್ಮ ಬಿಟ್ಟುಬಿಡುವೆ’.

ನಾನು ನನ್ನ ಉಮ್ಮನ ಮುಂದೆ ಜಗಳಕ್ಕೆ ಹೋಗುವವನಂತೆ ಹಠ ಹಿಡಿಯುತ್ತಾ ಕೂತುಬಿಟ್ಟೆ. ಆಕೆ ಒಲೆಯ ಮುಂದೆ ಅನ್ನಕ್ಕೆ ನೀರಿಟ್ಟು ಸುಮ್ಮನೇ ನಿಂತಿದ್ದಳು. ಬೆಳಗ್ಗೆಯೇ ಪೇಪರ್ ಓದಿದ್ದ ನನ್ನ ಬಾಪಾ ಸಲ್ಮನ್ ರಷ್ದಿ ಎಂಬುವನು ಸೈತಾನನ ಅಡಿಯಾಳಿನಂತೆ ದೇವರನ್ನು ಮಹಮದ್ ನೆಬಿ ಪ್ರವಾದಿಯನ್ನೂ ಹಾಗೂ ಇಷ್ಟೂ ಸಾಲದೆಂಬಂತೆ ಇಡೀ ಇಸ್ಲಾಂ ಧರ್ಮವನ್ನೂ ತಮಾಷೆ ಮಾಡಿ ಕಥೆಯೋ ಮಣ್ಣಾಂಗಟ್ಟಿ ಏನನ್ನೋ ಬರೆದಿರುವುದು ಹಾಗೂ ಇರಾನ್ ಎಂಬ ದೇಶದ ಆಯತುಲ್ಲಾ ಖೋಮೇನಿ ಎಂಬುವವನು ಈ ತರಲೆ ಬರಹಗಾರನ ತಲೆ ತಂದೊಪ್ಪಿಸಿದವರಿಗೆ ಲಕ್ಷಾಂತರ ರೂ. ಬಹುಮಾನ ಕೊಡುವೆನೆಂದು ಹೇಳಿರುವುದನ್ನೂ ಒಳ್ಳೆ ಕಥೆ ಹೇಳಿದಂತೆ ಈಕೆಯ ಬಳಿ ಹೇಳಿ ಹೊರಟುಹೋಗಿದ್ದರು.

ಇರಾನೋ, ಇರಾಕೋ, ರಷ್ದಿಯೋ, ಕಥೆಯೋ, ಮಸಾಲೆಯೋ ಏನೂ ಅರ್ಥಮಾಡಿಕೊಳ್ಳಲಿಕ್ಕೆ ಹೋಗದಿದ್ದ ನನ್ನ ಉಮ್ಮ ಈಗ ನಾನೂ ತಲೆಕೆಟ್ಟವನಂತೆ ಮಟಮಟ ಮಧ್ಯಾಹ್ನ ಜಗಳಕ್ಕೆ ನಿಂತಿರುವುದನ್ನು ನೋಡಿಯೂ ಸುಮ್ಮನೇ ಇರುವುದು ನನಗೆ ಆಗಲಿಲ್ಲ.

‘ಅವನ್ನು ಅವರು ಎಲ್ಲಾದರೂ ಕೊಂದರೆ ನಾನು ನಿಜಕ್ಕೂ ಜಾತಿ ಬಿಟ್ಟು ಹೋಗುವೆ’ ನಾನು ಈ ‘ನಿಜಕ್ಕೂ’ ಅನ್ನುವುದನ್ನು ಎರಡು ಮೂರು ಬಾರಿ ಒತ್ತಿ ಒತ್ತಿ ಹೇಳಿ ಆಕೆಯ ಮುಖ ನೋಡಿದೆ.

ನಾನು ‘ನಿಜಕ್ಕೂ’ ಎನ್ನುವುದನ್ನು ಗಟ್ಟಿಯಾಗಿ ಹೇಳಿದ್ದು ಆಕೆಗೆ ಸರಿ ಕಾಣಲಿಲ್ಲವೆಂದು ಕಂಡಿತು.

‘ನಿಜಕ್ಕೂ, ಸುಳ್ಳಿಗೂ ಅಂತ ಬೇರೆ ಬೇರೆ ಇದೆಯಾ? ನಿಜಕ್ಕೂ ಅಂತಲೇ ತಿಳಕೋ. ಅಲ್ಲಿ ಇವರು ಯಾರೋ ಯಾವನೋ ಒಬ್ಬನನ್ನು ಕೊಂದರೆ ನೀನು ಇಲ್ಲಿ ಯಾಕೆ ಉರಿಬರುತ್ತಾ ಇದೀಯಾ? ಅಷ್ಟಕ್ಕೂ ನೀನು ಯಾರು ಜಾತಿ ಬಿಡಲಿಕ್ಕೆ’.
ನನ್ನ ಉಮ್ಮನಿಗೂ ಕೆಲಸದ ನಡುವೆ ಜಗಳ ಮಾಡಲಿಕ್ಕೆ ಖುಷಿಯಾಗುತ್ತಿರುವಂತೆ ಕಂಡಿತು.

‘ಅಲ್ಲ ಉಮ್ಮಾ ಅವನು ಏನು ಮಾಡಿದ ಅಂತ ಇವರು ಹೀಗೆ ಕೋವಿ ಎತ್ತಿಕೊಂಡು ಕೊಲ್ಲಲಿಕ್ಕೆ ಬರುವುದು? ಅವನು ಏನು ಮಾಡಿದ ಅಂತ? ಕೊಲೆ ಮಾಡಿದನಾ? ಕಳ್ಳು ಕುಡಿದು ತೂರಾಡಿದನಾ? ಹಂದಿ ಮಾಂಸ ತಿಂದನಾ? ಇಲ್ಲಾ ಕಟ್ಟಿದವಳನ್ನು ಹಾಗೇ ಬಿಟ್ಟು ಇನ್ನೊಬ್ಬಳ ಜೊತೆ ಓಡಿ ಹೋದನಾ? ಇವನೇನೋ ಒಂದು ಕಥೆ ಬರೆದ. ಅದು ಓದುವವರು ಎಷ್ಟು ಜನ? ಎಂತ ಜನ! ಎಲ್ಲಾರೂ ಓದಿದರು ಏನು ಅವರೆಲ್ಲಾ ಸೈತಾನರಾಗಿ ನಮ್ಮ ಧರ್ಮವನ್ನು ತಿಂದು ನೀರು ಕುಡಿಯುತ್ತಾರಾ?…’

ನಾನು ಕೂಗಾಡುತ್ತಾ ಉಮ್ಮಾನ ಮುಖ ನೋಡುತ್ತಾ ಸದ್ದು ಏರಿಸುತ್ತಾ ಬೆವರುತ್ತಾ ಮತ್ತೆ ನೋಡತೊಡಗಿದೆ.

‘ಇಲ್ಲಾ ಅಲ್ಲಾನ ಹೆದರಿಕೆ ಇಲ್ಲದೇ ಮತ್ತೆ ಹೀಗೆ ಎಲ್ಲಾ ಹಾಳಾಗಿ ಹೋಗುತ್ತಾ ಇರುವುದು. ಇವತ್ತು ಕಥೆ ಬರೆದ. ನಾಳೆ ಇನ್ನೊಂದು ಮಾಡಿದ, ನಾಡಿದ್ದು ನಾನೇ ಖುರಾನೂ ಬರೆಯುತ್ತೇನೆ, ಎಂದು ಹೊರಟರೂ ಹೊರಟನೇ. ಈಗ ನೀನು ಕಾಣುವುದಿಲ್ಲವಾ ಹಾಳಾಗಿರುವುದು, ದೇವರು ಇಲ್ಲ. ಮಸೀದಿ ಇಲ್ಲ. ಹೋಗಲಿ ವಾರಕ್ಕೆ ಒಮ್ಮೆ ಶುಕ್ರವಾರದ ನಮಾಜೂ ಇಲ್ಲ. ಹೆದರಿಕೆ ಇಲ್ಲದೆ ಅಲ್ಲವಾ ನೀನು ಹೀಗೆ ಪೋಲಿ ಪೋಲಿಯಾಗಿ ಪೋಲಿ ಹುಡುಗರ ಕೂಡಿ ಅಲೆಯುತ್ತಿರುವುದು’

ಆಕೆ ನೇರಕ್ಕೆ ಎಲ್ಲವನ್ನೂ ನನ್ನ ತಲೆಯ ಮೇಲೆ ತಂದು ಕೂರಿಸಿ, ನಾನು ಜಾತಿ ಬಿಡುವ ಮಾತೂ ಮರೆತು, ಸುಮ್ಮನೇ ಬಾಯಿ ಬಾರದವನ ಹಾಗೆ ಆಗುತ್ತಾ ಮತ್ತೆ ಜಗಳಕ್ಕೆ ನಿಂತೆ.

‘ಅಲ್ಲ ಕೊಲ್ಲಿ ಅಂತ ಹಂದಿಗಳನ್ನು ಕೊಲ್ಲಲು ಆರ್ಡರ್ ಕೊಡುತ್ತಿರುವವನಂತೆ ಆರ್ಡರ್ ಮಾಡುತ್ತಿರುವ ಈ ಖೋಮೈನಿ ಯಾರು? ಇವರೇ ಕೊಲ್ಲುವುದಾದರೆ ಆ ಅಲ್ಲಾಹು ಎಂಬ ಎಲ್ಲವನ್ನು ಕಾಣುವವನೂ ಅರಿಯುವವನೂ ಆದ ಆತ ಸೈತಾನನ ಅನಯಾಯಿಗಳಿಗೆಂದೇ ಉಂಟುಮಾಡಿರುವ ‘ಜಹನ್ನಮ್’ ಎಂಬ ಕ್ರೂರ ನರಕ ಖಾಲಿ ಬೀಳಬೇಕಾ? ಇವರು ಇಲ್ಲೇ ಬಹುಮಾನವನ್ನೂ ಕೊಡುವುದಾದರೆ, ಆ ‘ಜನ್ನತ್’ ಎಂಬ ಸ್ವರ್ಗ ಹಾಗೇ ಖಾಲಿ ಬಿದ್ದಿರಬೇಕಾ? ಅಲ್ಲ ಉಮ್ಮ. ಇವರು ಕೊಲ್ಲುವುದಾದರೆ ಧರ್ಮಕ್ಕಗಿ ಯುದ್ಧ ಮಡುವಾಗ ಏನೋ ಕೊಲ್ಲಬಹುದು. ಅದು ಬಿಟ್ಟು ಯಾವನೋ ಒಬ್ಬ ಏನೋ ಬರೆದ ಎಂದು ಇವರು ಇಲಿಯನ್ನು ಮೂಲೆ ಮೂಲೆಯಲ್ಲಿ ಹುಡುಕಿ ಓಡಿಸಿಯಾಡಿ ಹಿಡಿದು ಗೋಣಿಗೆ ಹಾಕಿ ಬಡಿದು ಕೊಲ್ಲುವಂತೆ ಆತನನ್ನು ಓಡಿಸಿಯಾಡುತ್ತಿರುವರಲ್ಲಾ? ಹೀಗೆ ಆದರೆ ಹೇಗೆ? ನಾಳೆ ಇವರು ಹೇಳಿದರು ಅಂತ ಜನ ಯಾರನ್ನಾದರೂ ಕೊಲ್ಲಲು ಹುಡುಕಿಕೊಂಡು ಹೊರಡಬಹುದು. ನಾಳೆ ಮನೆ ಬಾಗಿಲಿಗೇ ಬರಬಹುದು. ನನಗಂತೂ ಹೀಗೆ ಇರುವ ಇದರ ಜೊತೆ ಇರುವುದು ಆಗುವುದಿಲ್ಲಪ್ಪಾ? ನನಗಂತೂ ಇಷ್ಟವಿಲ್ಲವಪ್ಪಾ… ಅವರೇನಾದರೂ ಅವನನ್ನು ಕೊಂದರೆ…’

‘ನೀನು ಜಾತಿಯೇ ಬಿಡುತ್ತೀ ಅಲ್ಲವಾ?’ ಆಕೆಯೇ ಮುಂದುವರಿಸಿ ‘ಆಯಿತು ನೀನು ಜಾತಿ ಬಿಟ್ಟೆ ಅಂತ ಇಟ್ಟುಕೋ.. ನೀನು ಜಾತಿ ಬಿಟ್ಟರೆ ಏನು ನಾಳೆ ಬೆಳಿಗ್ಗೆ ಕೋಳಿ ಕೂಗದೆ ಇರುತ್ತದೆಯಾ? ಅಲ್ಲಾ, ನಾಳೆಯಿಂದ ಮಸೀದಿಯಿಂದ ಬರುವ ಬಾಂಗಿನ ಕೂಗು ನಿಂತು ಹೋಗುತ್ತದಾ? ಇಲ್ಲಾ ನಿನ್ನ ತಲೆಗೇನಾದರೂ ಕೊಂಬುಗಳು ಬಂದು ಕೂರುತ್ತದಾ? ನೀನೇನಾದರೂ ಬಿಟ್ಟರೆ ಲೋಕಕ್ಕೆ ಏನೂ ಆಗುವುದಿಲ್ಲ. ಏನಾದರೂ ಆದರೆ ದು ನನಗೆ ಅಂದರೆ ನಿನ್ನ ಉಮ್ಮನಿಗೆ, ಮತ್ತೆ ನಿನ್ನ ಬಾಪನಿಗೆ, ಮತ್ತೆ ನಿನ್ನ ಬೆನ್ನ ಹಿಂದೆ ಬರುತ್ತಿರುವ ನಿನ್ನ ತಮ್ಮ ತಂಗಿಯಂದಿರಿಗೆ, ಅದೂ ಏನೂ ದೊಡ್ಡದೇನೂ ಆಗುವುದಿಲ್ಲ. ನೀನು ಜಾತಿ ಬಿಟ್ಟೆ ಎಂದು ಬಿಟ್ಟುಬಿಡುವುದಕ್ಕಿಂತ ಮೊದಲೇ ನಿನ್ನ ಕಾಲಡಿಯಲ್ಲಿ ಪ್ರಾಣ ಬಿಡುತ್ತೇನೆ. ನಾನು ಬದುಕಿರುವಾಗಲೇ ನೀನು ಹಾಳಾಗಿ ಹೋದೆ ಎಂದು ಜನ ಆಡಿಕೊಳ್ಳುವುದು ಬೇಡ. ನಾನೇ ತೀರಿ ಹೋಗುವೆ. ಆಮೇಲೆ ನಿನ್ನ ಬಾಪಾ. ಅದು ಹೇಗೆ ಎಂದು ನಾನು ಹೇಳುವುದಿಲ್ಲ. ಆಮೇಲೆ ನಿನ್ನ ತಂಗಿಯಂದಿರು…

ಆಕೆ ನಿಧಾನಕ್ಕೆ ಅಳತೊಡಗಿದ್ದಳು. ‘ನೀವು ಗಂಡು ಮಕ್ಕಳೇನೋ ಸೈತಾನೋ ಇಬಿಲೀಸೋ ಎಂದು ಹಾಳಾಗಿ ಹೋಗಿ. ಈ ಹೆಣ್ಣು ಮಕ್ಕಳೇನು ಮಾಡುವರು? ನೀನು ಹೀಗೆ ಆದರೆ ನಾಳೆ ಅವರನ್ನು ಮದುವೆ ಅಂತ ಮಾಡಿಕೊಳ್ಳುವವರು ಯಾರು? ನೀನು ಹೀಗೆ ಎಮ್ಮೆಗಿಮ್ಮೆ ಎಂದು ಓದಲಿಕ್ಕೆ ಹೋಗಿ ಕಥೆ ಪತೆ ಅಂತೆಲ್ಲಾ ಹಾಳಾಗಿ ಹೋಗುತ್ತೀಯಾ ಎಂದು ಗೊತ್ತಿದ್ದಿದ್ದರೆ ನಿನ್ನನ್ನು ನಾನು ಶಾಲೆಗೇ ಸೇರಿಸುತ್ತಿರಲಿಲ್ಲ. ಅರಬಿ ಕಲಿಸಲು ಮದ್ರಸಕ್ಕೆ ಹಾಕಿ ಒಂದೋ ಎರಡೋ ರೂಪಾಯಿ ಸಾಲಮಾಡಿ ಅಂಗಡಿ ಇಟ್ಟುಕೊಡುತ್ತಿದ್ದೆ ಅಯ್ಯೋ ಪಡೆದವನೇ… ಇವನು ಸೈತಾನನ ಮಾತು ಕೇಳಿ ಹಾಳಾಗುತ್ತಿರುವನಲ್ಲಾ ಅರಿತವನೇ…’

ಉಮ್ಮ ನಿಜಕ್ಕೂ ಅಳುತ್ತಾ ಕೈ ಕೈ ಬಾಯಿಬಾಯಿ ಎಲ್ಲಾ ನಡುಗುತ್ತಿರುವುದು, ನಾನೂ ನಿಜಕ್ಕೂ ಜಾತಿಯನ್ನೇ ಬಿಟ್ಟು ಬಿಡುವವನಂತೆ ಅಂಡನ್ನ ನೆಲಕ್ಕೆ ಒತ್ತಿ ಬೆನ್ನನ್ನು ಗೋಡೆಗೆ ಒತ್ತಿ ಹಿಡಿದು ಹೀಗೆ ಮಾಡುತ್ತಿರುವುದು ನೋಡಿ ನನಗೆ ನಿಜಕ್ಕೂ ಸಂಕಟವೋ ನಗೆಯೋ, ಏನೂ ಗೊತ್ತಾಗದೆ ಸುಮ್ಮನೇ ಅವಳನ್ನೇ ನೋಡುತ್ತಾ ನಗಾಡಿದೆ.

‘ಮಾಡುವುದ ಮಾಡಿ, ಹೇಳುವುದ ಹೇಳಿ ನಗು ಸೈತಾನೇ ನಿನ್ನನ್ನು ಏನು ಎಂದು ಹೇಳಿ ನಾನು ನಂಬುವುದು? ನೀನೇನು ಹಾಳಾಗುತ್ತೀಯಾ, ಒಳ್ಳೆಯದೇ ಆಗುತ್ತೀಯಾ? ಸುಮ್ಮನೇ ಸಿಕ್ಕಿದಾಗೆಲ್ಲ ನನ್ನ ಅಳಿಸಿ ಕಣ್ಣೀರು ಹಾಕಿಸುವುದೇ ನಿನ್ನ ಕೆಲಸವಾಯಿತಲ್ಲವಾ ಸೈತಾನೇ. ನಾನು ಯಾವಾಗ ಅಡಿಗೆ ಮುಗಿಸಿ ಈ ಸುಬ್ರಮಣ್ಯದ ಜಾತ್ರೆಯ ದನಗಳಂತಹ ನಿಮ್ಮ ಒಡಲು ತುಂಬಿಸುವುದು? ಇನ್ನೇನು ನಿನ್ನ ತಮ್ಮಂದಿರೂ ತಂಗಿಯರೂ ಶಾಲೆ ಮುಗಿಸಿ ನನ್ನನ್ನೂ ತಿಂದು ಮುಗಿಸಲು ಬಂದುಬಿಡುತ್ತಾರೆ ಜಾತ್ರೆಗಳು ಜಾತ್ರೆಗಳು.. ಈ ಶಾಲೆ ಕಲಿತು ಕನ್ನಡ ಕಲಿತು ನನ್ನನ್ನೇ ಅಳಿಸಲು ಕಲಿತರಲ್ಲವಾ ನನ್ನ ಮಕ್ಕಳೇ…’

ಆಕೆ ಅಳುವುದ ಬಿಟ್ಟು ನಿಧಾನಕ್ಕೆ ತುಂಟ ಹುಡುಗಿಯಂತೆ ತಮಾಷೆಗೆ ಹತ್ತಿರ ಹತ್ತಿರ ಬರುತ್ತಿದ್ದಳು. ನಾನೂ ಸಡಿಲವಾಗಿ ಕೂತು ಕೂತಲ್ಲೇ ಹೆಬ್ಬೆರಳಿನಿಂದ ನೆಲಕೆರೆಯುತ್ತಾ ಆಕೆಯನ್ನ ಗಮನಿಸಿದೆ. ಆಕೆ ಆದದ್ದೆಲ್ಲ ಮರೆತು ಒಲೆಗೆ ಸೌದೆ ತುರುಕುತ್ತಾ ನಡುನಡುವೆ ಕಣ್ಣ ಕೊನೆಯಿಂದ ನನ್ನ ಗಮನಿಸುತ್ತಾ ಬಾಯಿಂದ ಒಲೆಗೆ ಉರುಬುತ್ತಿದ್ದಳು.ನಿಧಾನಕ್ಕೆ ಕೋಣೆಯಲ್ಲೆಲ್ಲಾ ಹೊಗೆ ತುಂಬತೊಡಗಿತ್ತು.

ಇದೇನು, ಇರಾನೋ, ಇರಾಕೋ, ಖೋಮೇನಿಯ ಇರಾನೋ, ಸಲ್ಮನ್ ರಷ್ದಿ ಎಂಬುವನ ಸೈತಾನನ ವಚನಗಳೋ, ಮುಂಜಾನೆಯೇ ಕವಿದ ಮಂಜಿನ ನಡುವೆ ನಿಂತಿರುವ ಹೆಂಗಸಿನಂತೆ ಒಲೆಯ ಬಳಿ ನಿಂತ ಉಮ್ಮ ಬೆಂಕಿಗೆ ಊದತೊಡಗಿ ಏದುಸಿರುಬಿಡುತ್ತಾ ಕೆಮ್ಮುತ್ತಾ ಆಗದೆ ಬಗ್ಗಿ ಕುಳಿತುಕೊಂಡು ಕೆಮ್ಮತೊಡಗಿದಳು.

‘ಉಮ್ಮಾ ಮೂಲೆಯಲ್ಲಿ ಚಿಮಿಣಿ ದೀಪ ಇದೆ, ಸ್ವಲ್ಪ ಸೀಮೆಎಣ್ಣೆ ಸುರಿ ಒಲೆ ಹತ್ತಿಕೊಂಡು ಬಿಡುತ್ತದೆ’ ನಾನು ಮೆಲ್ಲಗೇ ಗೊಣಗಿಕೊಂಡೆ.

‘ಬೇಡ ಮೋನೇ .ಹೊಗೆ.ಬೇಡ. ನಿನ್ನ ಬೆನ್ನ ಹಿಂದೆ ಊದುವ ಓಟೆ ಇದೆ. ತಕ್ಕೊಡು’ ಆಕೆ ಅಲ್ಲಿಂದಲೇ ಅಂದಳು. ನಾನು ಕೂತಲ್ಲಿಂದಲೇ ಬೆನ್ನ ಹಿಂದಕ್ಕೆ ಕೈಯ್ಯಾಡಿಸಿದೆ. ಕೈಗೆ ಬಿದಿರಿನ ಓಟೆ ಸಿಕ್ಕಿತು. ಹಾಗೆ ಅದನ್ನು ಮುಂದಕ್ಕೆ ತಂದು ನೋಡಿದೆ. ಬಿದಿರಿನ ಓಟೆ ನಾನು ಮುಟ್ಟದೇ, ನೋಡದೇ ನೂರಾರು ವರ್ಷಗಳಾದಂತೆ ಅದು ಹಳದಿ ಬಣ್ಣಕ್ಕೆ ತಿರುಗಿ ಹಾಗೇ ಹೊಗೆಗೆ ಕಪ್ಪಾಗಿ ಮುಟ್ಟಿಮುಟ್ಟಿ ಗಾಜಿನ ಕೊಳವೆಯಂತೆ ನುಣ್ಣನೆ ಅಮುಕಿ ಹಿಡಿದರೆ ಜಾರಿ ಹೋಗುವಂತೆ ಎಲೆಯಂತೆ ಹಗುರವಾಗಿ ಬಿಟ್ಟಿತ್ತು.

‘ಇದೇನು ಉಮ್ಮಾ ಈ ಓಟೆ ಹೀಗೆ ಆಗಿಬಿಟ್ಟಿದೆ ಬಾರವೆಲ್ಲಾ ತೀರಿ ಒಳ್ಳೆ ಗಾಳಿಯಂತೆ ತೂಕವಾಗಿದೆಯಲ್ಲಾ’ ನಾನು ಎದ್ದು ಅವಳ ಬಳಿಗೆ ಹೋದೆ.

‘ಹೌದು ನೀವೆಲ್ಲ ಬೆಳೆಯುತ್ತಾ ಒಳ್ಳೇ ನೀರು ತುಂಬಿದ ಮಡಿಕೆಗಳ ಹಾಗೆ ಗೌರವ ಮರೆತು ಚೆಲ್ಲುತ್ತಿರುತ್ತೀರಲ್ಲಾ? ಅದಕ್ಕೇ ಈ ಓಟೆ ಹೀಗೆ ಕೈಯಲ್ಲಿ ಮುಟ್ಟಿ ಮುಟ್ಟಿ ಒಳ್ಳೆ ಮಗುವಿನ ಮೂಗಿನಂತೆ ಮಿನುಗುತ್ತಾ ಹೋಗುತ್ತದೆ ಅಲ್ಲವಾ ಮೋನೇ’ ಆಕೆ ಕಣ್ಣಿನ ಕೊನೆಯಿಂದ ಒಮ್ಮೆ ನನ್ನ ನೋಡಿ ಓಟೆ ಬೆಂಕಿಯ ಮುಂದೆ ಹಿಡಿದು ಬಾಯ ಚೂಪು ಮಾಡಿ ಊದತೊಡಗಿದಳು.
ಮೆಲ್ಲಗೇ ಕೆಂಪ ಮಿನುಗುತ್ತಾ ಉರಿಹತ್ತುತ್ತಾ ಆಕೆ ಇನ್ನೂ ಕೆಂಡದ ಹತ್ತಿರ ಹತ್ತಿರಕ್ಕೆ ಓಟೆಯನ್ನು ತೂರಿ ಊದತೊಡಗಿದಳು. ಓಟೆ ಬೆಂಕಿಯ ನಾಲಗೆಯ ಮುಂದೆ ಮಿನುಗತೊಡಗಿ ನಾನು ಉಮ್ಮನ ಹತ್ತಿರ ಹತ್ತಿರ ನಿಂತುಕೊಂಡು ‘ಉಮ್ಮಾ’ ಎಂದು ಕರೆದೆ.

ಆಕೆ ಮೆಲ್ಲಗೆ ತಲೆ ಎತ್ತಿ ತಿರುಗಿದಳು. ಅದೇ ಮುಖ. ಈಗ ಇನ್ನೂ ಕೊಂಚ ಅಗಲವಾಗಿ ನೆತ್ತಿಯಲ್ಲಿ ಅಲ್ಲಲ್ಲಿ ನೆರಿಗೆಗಟ್ಟುತ್ತಿವುದರ ಗೆರೆಗಳು. ಕಿವಿಯ ತುಂಬ ಉದ್ದಕ್ಕೂ ಇದ್ದ ಆರಿಕತ್ತಿನ ತೂತಗಳು ಹಾಗೇ ಖಾಲಿಯಾಗಿ ಮುಚ್ಚಿಕೊಂಡು ಕಿವಿಯ ಕೊನೆಯಲ್ಲಿ ಮಿನುಗುತ್ತಿರುವ ಬೆಂಡೋಲೆಯ ಕೀಲು. ಆಕೆ ಬಾಪಾನನ್ನು ಮದುವೆ ಯಾದಾಗ ಕಿವಿಯೆಲ್ಲಾ ತುಂಬಿಕೊಂಡು ಒಂದು ವರ್ಷಕ್ಕೆ ನಾನು ಮಗುವಾಗಿ ಹುಟ್ಟಿ ನಾನು ಬೆಳೆದು ವರ್ಷ ಆರಾದಾಗ ನನ್ನ ಮುಂಜಿ ಮದುವೆಯಾಗಿ ಆಮೇಲೆ ನಾನು ವಾರ ವಾರವೂ ಶುಕ್ರವಾರ ಮಧ್ಯಾಹ್ನದ ನಮಾಜಿಗೆ ಬಾಪಾನ ಕೈ ಹಿಡಕೊಂಡು ಮಳೆಯಲ್ಲಿ ಬಾಪಾನ ಕೊಡೆಯ ಅಡಿಯಲ್ಲಿ ನಡೆಯತ್ತಾ ಮಸೀದಿಗೆ ಹೋಗುತ್ತಿದ್ದೆನಂತೆ.

ನನಗೆ ನೆನಪಿದೆ… ಆಗ ಮನೆಯಲ್ಲಿ ಬೆಂಕಿ ಊದಲು ಇದ್ದ ಕಬ್ಬಿಣದ ಕೊಳವೆ ನನ್ನ ಉಮ್ಮ ಮದುವೆಯಾಗಿ ಬಂದಾಗಲೇ ಊದಿಊದಿ ತೆಳ್ಳಗಾಗಿ ಆಮೇಲೆ ನಡುನಡುವೆ ತೂತವಾಗಿ ಹಳೇ ಕಬ್ಬಿಣ ಕೊಳ್ಳುವವನು ಒಂದು ದಿನ ಬಂದು ತೂಕಕ್ಕೆ ತಗೊಂಡು ಬದಲಿಗೆ ಎರಡು ಸೇರು ಹುರಿಯಕ್ಕಿ, ಪುರಿಕೊಟ್ಟು ಹೋಗಿದ್ದ.

‘ಉಮ್ಮಾ, ಆ ಕಬ್ಬಿಣದ ಓಟೆಯನ್ನು ಅಷ್ಟು ಸವೆಯುವ ಹಾಗೆ ಅಷ್ಟು ಊದುತ್ತಿದ್ದವರು, ಯಾರು?’

‘ನಿನ್ನ ಉಮ್ಮಾದು.. ಅಂದರೆ ನಿನ್ನ ಬಾಪಾನ ಉಮ್ಮ’

‘ಅವರು ಏನಾದರೂ ಉಮ್ಮಾ…’

ಅವರು ಊದೀ ಊದೀ ಊದೀ ಬಗ್ಗಿ ಮುದ್ದೆಯಾಗಿ ಅವರಿಗೆ ವಯಸ್ಸಾಗಿ ಬೆಕ್ಕಿನ ಹುಲ್ಲು ಬಂದು ಆದರೂ ಬಿಡದೆ ಅವರು ಊದಿ ಒಳ್ಳೆ ಕಾಡು ಜೀರುಂಡೆಯ ಹಾಗೆ ಉರುಟಾಗಿ ಹೋಗಿ…’

‘ಏನಾದರು?’

‘ಅವರು ನಡೆಯುವವರ ಕಾಲಿಗೆ ಎಡರಿಕೊಳ್ಳುವರು.. ಅವರು ಕೂರುವವರ ಕುಂಡೆಯ ಕೆಳಗೆ ಮುರುಟಿ ಬಿಡುವರು.. ಎಂದು ಹೇಳಿ ನಿನ್ನ ಬಾಪಾ ಅವರನ್ನು ಮಾಡಿನ ಸಂದಿಗೆ ಸಿಲುಕಿಸಿ ಆಫೀಸಿಗೆ ಹೋಗುತ್ತಿದ್ದರಂತೆ’.

‘ಆಗೇನಾಯ್ತು..’

‘ಆಗ ಒಂದು ಸಲ ಶುಕ್ರವಾರ ಮಧ್ಯಾಹ್ನ ಯಾರೂ ಇಲ್ಲದ ಹೊತ್ತಲ್ಲಿ ಒಳ್ಳೇ ಗಾಳಿ ಬಂದು ಮಳೆ ಬಂದು ಮತ್ತೆ ಜೋರಾಗಿ ಗಾಳಿಬಂದು ಲೋಕವೆಲ್ಲಾ ಅಲ್ಲಾಡುತ್ತಾ ಅಲ್ಲಾಹುವಿನ ಆ ಗಾಳಿ ನಿನ್ನ ಉಮ್ಮಾಮನ ಹಾಗೇ ಮಾಡಿನ ಸೆರೆಯಿಂದ ಹಾರಿಸಿಕೊಂಡು ಆಕಾಶಕ್ಕೆ ಕೊಂಡು ಹೋಯಿತಂತೆ.

‘ಉಮ್ಮಾ ಆ ಶುಕ್ರವಾರ ಮಧ್ಯಾಹ್ನ ನೀನು ಎಲ್ಲಿದ್ದೆ?’

‘ನಾನು ಹೊಳೆಯ ಬದಿಯಲ್ಲಿ ನಿನ್ನ ಬಾಪಾನ ಬಟ್ಟೆ ಒಗೆಯುತ್ತಿದ್ದೆ’
‘ಆಗ ನಿನಗೆ ಅಲ್ಲಿ ಗಾಳಿ ಮಳೆ ಇರಲಿಲ್ಲವಾ?’

‘ಇಲ್ಲಿ ಹೊಳೆಯ ಬದಿಯಲ್ಲಿ ಶುಕ್ರವಾರ ಮಧ್ಯಾಹ್ನ ಮಳೆ ಬರುವುದಿಲ್ಲ’

‘ಹೇ ಏನು ಸುಳ್ಳು ಹೇಳುತ್ತೀಯಾ ಉಮ್ಮ’

‘ಹೌದು ಮೋನೇ’ ಶುಕ್ರವಾರ ಮಧ್ಯಾಹ್ನ ಹೊಳೆಯ ಕಡೆಯಲ್ಲಿ ಸೈತಾನ ಬಂದು ಕೂತಿರುತ್ತಾನೆ. ಯಾಕೆ ಕೂತಿರುತ್ತಾನೆ ಗೊತ್ತಾ?’. ಯಾಕೆ ಕೂತಿರುತ್ತಾನೆ. ಅದೇ ನಮಾಜಿಗೆ ಹೋಗುವ ಹುಡುಗರ ತಲೆ ಕಡಿಸಿ ನೀರಿನಲ್ಲಿ ಈಜಿ ನೀರಿನಲ್ಲಿ ಮೀನು ಹಿಡಿದು ಹೊಳೆಯ ಬದಿಯಲ್ಲಿ ಕಲ್ಲು ಹಾಕಿಸಿ ಮೀನುಗಳನ್ನು ಬೇಯಿಸಲು ಹೇಳಲು ಅಲ್ಲವಾ?’

‘ಅದೇ ಮೋನೇ ಆವತ್ತು ಶುಕ್ರವಾರ ಏನಾಯಿತು ಗೊತ್ತಾ? ಅದೇ ನಾನು ಆ ದಿನ ಬಟ್ಟೆ ಒಗೆಯುತ್ತಿದ್ದೇನಾ? ಮೂವರು ಹುಡುಗರು, ದೊಡ್ಡ ಹುಡುಗರು.. ಮೀನು ಹಿಡಿಯುತ್ತಾ ಗಾಳ ಬೀಸುತ್ತಾ ಬಂದರು.. ನನಗೆ ಹೆದರಿಕೆಯಾಗಿ ದೂರಕ್ಕೆ ಹೋಗಿ ನಿಂತೆ. ಆ ಮೂವರು ಹುಡುಗರ ಬೆನ್ನ ಹಿಂದಿನಿಂದ ಸೈತಾನ ನಡಕೊಂಡು ಬರುತ್ತಿದ್ದ. ಅವನ ದಾಡಿಯ ಮೂರು ತುದಿಗೆ ಆ ಮೂವರ ಮುಡಿಯ ಮೂರು ತುದಿಗಳು ಕಟ್ಟಿಕೊಂಡು ಅವರು ಅವನು ಹೇಳಿದಂತೆ ನಡೆಯುತ್ತಾ ಅವನು ಅವರು ನಡೆದಂತೆ ನಡೆಯುತ್ತಾ ಹೊಳೆಯಲ್ಲಿ ನಾನು ಒಬ್ಬಳೇ… ಹೆದರಿಕೆಯಾಗಿ ಬಟ್ಟೆಯಿಂದ ಮುಖ ಮುಚ್ಚಿಕೊಂಡು ಮರದ ಹಿಂದೆ ನಿಂತೆ.

ಹಿಂದಿನಿಂದ ಮನೆಯ ಕಡೆಯಿಂದ ಜೋರಾಗಿ ಗಾಳಿಬೀಸಿ ಮಳೆ ಸುರಿದು ಸಿಡಿಲು ಹೊಡೆದು ಗಾಳಿಬೀಸಿ ಇನ್ನೊಮ್ಮೆ ದಡಾರೆಂದು ಸಿಡಿಲು ಹೊಡೆಯುವುದೂ ಆ ಸೈತಾನ ಹಂದಿಯಂತೆ ಕಿರುಚಿಕೊಂಡು ಮಾಯವಾಗಿ ನಾನು ಕಣ್ಣು ತೆರೆದರೆ ಆ ಮೂವರು ಹುಡುಗರು ಮೂರು ಮಂಗಗಳಾಗಿ ನನ್ನ ಮುಂದೆ ಬಂದು ಬಟ್ಟೆ ಎಳೆಯತೊಡಗಿದರು.

ನಾನು ಅಲ್ಲಾಹುವಿನ ಹೆಸರು ಹೇಳಿ ಮೂರು ಬಾರಿ ಅವರ ಮುಖಕ್ಕೆ ಕ್ಯಾಕರಿಸಿ ಉಗಿದನೋ ಇಲ್ಲವೋ ಅವರು ನಿಜಕ್ಕೂ ಮಂಗಗಳಂತೆ ಮರ ಹತ್ತಿ ಕಾಣದಾದರು. ನಾನು ಹೆದರಿ ಬರಹತ್ತಿ ಮನೆಗೆ ಬಂದನಾ? ಮನೆಯ ಹೆಂಚೆಲ್ಲಾ ಹಾರಿ ಸಂದಿನಿಂದ ನಿನ್ನ ಉಮ್ಮಾಮ ಹಾರಿ ಹೋಗಿದ್ದಳು’.

…. ಉಮ್ಮ ಬಿದಿರಿನ ಓಟೆ ಬಂದ ಹೊಸತರಲ್ಲಿ ಕಥೆ ಹೇಳುತ್ತಾ ತನ್ನ ಮಡಿಲಿಗೆ ಎಳೆದುಕೊಂಡು ಬೆನ್ನು ತಟ್ಟುತ್ತಾ ಓಟೆಯಿಂದ ಬೆಂಕಿಗೆ ಊದುತ್ತಿದ್ದಳು.

*******************************

‘ಉಮ್ಮಾ ನೆನಪಿದೆಯಾ?’

ಆಕೆ ಬೆಂಕಿಯಿಂದ ಪುನಃ ಮುಖವೆತ್ತಿ ನೋಡಿದಳು.

‘ಉಮ್ಮಾ ನೆನಪಿದೆಯಾ… ಉಮ್ಮಾಮ ಜೀರುಂಡೆಯಾಗಿ, ಶುಕ್ರವಾರ ಮಧ್ಯಾಹ್ನ ಹೊಳೆಗೆ ಮೀನು ಹಿಡಿಯಲು ಹೋದ ಹುಡುಗರು ಮಂಗಗಳಾಗಿ ಮರಹತ್ತಿ…’

‘ಉಮ್ಮಾ ನೆನಪಿದೆಯಾ…’

 ಆಕೆ ಕಣ್ಣಲ್ಲಿ ನೀರು ತುಂಬಿಕೊಂಡು ನನ್ನ ಭುಜಗಳೆತ್ತರಕ್ಕೆ ತಲೆ ಎತ್ತಿ ನೋಡುತ್ತಾ ಇನ್ನೂ ತಲೆ ಎತ್ತಿ ಮುಖದ ತುಂಬಾ ನೋಡುತ್ತಾ,

‘ಹೌದು ಮೋನೇ ಆಗಲೂ ಅದೇ ಸೈತಾನೇ.. ಈಗಲೂ ಅದೇ ಸೈತಾನೇ… ಹಾಗೆ ನೋಡಿದರೆ ಸೈತಾನೂ ಅಲ್ಲಾಹನೇ ಉಂಟುಮಾಡಿದ ಸೃಷ್ಟಿಯಲ್ಲವಾ? ನಮ್ಮ ನರ ಜಂತುಗಳ ವಿಶ್ವಾಸ ಎಷ್ಟು ನಿಜಕ್ಕೂ ಎಂದು ಗೊತ್ತು ಹಿಡಿಯಲಿಕ್ಕಲ್ಲವಾ ಆ ಪಡೆದವನು ಈ ಸೈತಾಶನನೆಂಬವನನ್ನು ಉಂಟು ಮಾಡಿರುವುದು.. ಅಲ್ಲವಾ ಮೋನೇ ಈ ನಿಮಗೆಲ್ಲಾ ಆ ಸೈತಾನನು ಇದನ್ನೆಲ್ಲಾ ಹೇಳಿಸಿ ಮಾಡಿಸುತ್ತಿರುವನಲ್ಲವಾ?’

ನಾನು ಅವಳ ಕೈಯಲ್ಲಿ ಆಡುತ್ತಾ ಹೊಳೆಯುತ್ತಿರುವ ಬಿದಿರಿನ ಓಟೆಯನ್ನೇ ನೋಡುತ್ತಾ ‘ಇದೇ ಓಟೆ ಅಲ್ಲವಾ ಉಮ್ಮಾ.. ಉಮ್ಮಾ… ಇದೇ ಓಟೆ ಅಲ್ಲವಾ’ ಎನ್ನುತ್ತಾ ಏನೋ ಹೇಳಲಾಗದೇ ಸುಮ್ಮಗಾದೆ.

ನಾನು ಏನೂ ಗೊತ್ತಾಗದೆ ಕೂತೇ ಇದ್ದೆ. ಹೊರಗಿನಿಂದ ತಂಗಿ ಬಾಗಿಲು ತೆರೆದು ಒಳಬಂದ ಗಲಗಲ ಸದ್ದು ಕೇಳಿಸಿತು. ಅವಳು ಓಡುತ್ತಾ ಒಳ ಬಂದು  ಅದೇ ಕಥೆ ಹೇಳಲು ತೊಡಗಿದಳು. . ಆಕೆ ಕೇಳುತ್ತಿರುವುದು ಇದೇ ವಿಷಯ.. ಇದೇ ಸಲ್ಮನ್ ರಷ್ದಿ  ಬರೆದ ಕಥೆ.. ಇದೇ ಖೋಮೇನಿ.. ಇದೇ ಇರಾನ್ ಕಥೆ ಎನಿಸಿ ಸುಮ್ಮಗಾಗಿ ‘ಹೋಗಿ ಉಮ್ಮನ ಬಳಿ ಹೇಳು’ ಎಂದು ತಲೆ ತಗ್ಗಿಸಿದೆ.

ತಲೆಯ ತುಂಬ ಖಾಲಿಖಾಲಿಯಾಗಿ ಓಡಾಡುತ್ತಿರುವ ಬಿಳಿಯ ನೀಳ ಉಡುಪಿನಂತಹ ಬಣ್ಣಗಳು ತುಂಬಿ ಕನಸುಗಳು  ತಲೆಯ ತುಂಬ ಬಂದು ಹಾಗೇ ತಿರುಗಿ ಹಿಂತಿರುಗಿ ಬಾಗಿಲು ತೆರೆದು ಹೋಗುತ್ತಾ ತಲೆಯ ತುಂಬ ನುಗ್ಗಿ ಬರುವ ನದಿಯ ನೀರು, ಮನೆಯೊಳಗಿನಿಂದ ಅಡಿಗೆ ಕೋಣೆಯೊಳಗಿಂದ ತಂಗಿ ಗಲಗಲ ನಗುತ್ತಾ ತಾಯಿ ಗದರಿಸುತ್ತಾ ಉಣ್ಣುತ್ತಿರುವ ಸದ್ದು, ನಾನು ಕಣ್ಣು ಮುಚ್ಚಿದೆ.

ತಂಗಿ ಬಂದು ಮೈ ಅಲ್ಲಾಡಿಸಿದಳು. ಕಣ್ಣು ತೆರೆದೆ.

 `ನಾನಾದರೆ ಏನು ಮಾಡುತ್ತಿದ್ದೆ ಗೊತ್ತಾ? ಅವರೆಲ್ಲ ಕೊಲ್ಲಲು ಕೋವಿ ಹಿಡಕೊಂಡು ಹುಡುಕುತ್ತಿರುವಾಗ ನಾನು ಯಾರಾದರೂ ಮುಲ್ಲಾನ ದಾಡಿಯ ನಡುವಲ್ಲಿ ಅಡಗಿಕೊಂಡು ಬಿಡುತ್ತಿದ್ದೆ. ಆಗ ಅವರು ಎಲ್ಲಿ ಹುಡುಕುತ್ತಿದ್ದರು?’

ನಾನು ನಕ್ಕು ಅವಳ ಕಿವಿ ಹಿಂಡಿ ಮತ್ತೆ ನಿದ್ದೆ ಹೋದೆ.

ಮತ್ತೆ ಬಾಪಾ ಬಂದ ಸದ್ದು ಎಚ್ಚರವಾದೆ.

‘ಅವರು ನಿಜಕ್ಕೂ ಕೊಲ್ಲುವುದಿಲ್ಲವಂತೆ ಇವಳೇ. ಅವನು ಮಾಫ್ ಕೇಳಿದರೆ ಏನೂ ಮಾಡುವುದಿಲ್ಲವಂತೆ’

‘ಕೊಂದರು ಏನು? ಬಿಟ್ಟರೂ ಏನು? ಬೇರೆ ಬೇರೆಯಾ? ಕೊಲ್ಲಲು ಮನಸ್ಸು ಮಾಡಿ ಕೊಲ್ಲದೇ ಹೋದರೂ ಕೊಂದ ಹಾಗೆಯೇ. ಮಾಫ್ಯಾರ ಹತ್ತಿರ ಕೇಳುವುದು? ಇವರ ಹತ್ತಿರವಾ? ಇವರು ಯಾರು? ಮಾಫ್ ಅಲ್ಲಾಹನ ಬಳಿ ಕೇಳಬೇಕು. ಕೊಂದರೂ ಬಿಟ್ಟರೂ ಕೊಂದ ಪಾಪ ತಿಂದೇ ತೀರುವುದಲ್ಲವಾ? ತಿನ್ನಬೇಕಾದವರು ತಿಂದೇ ತೀರುತ್ತಾರೆ ಅಲ್ಲವಾ?

ಉಮ್ಮಾ ಬಾಪಾನ ಹತ್ತಿರ ಕಥೆ ಶುರುಮಾಡಿದ್ದಳು.

********
 

3 thoughts on “ಮಂಗಗಳಾದ ಮೂವರು ಹುಡುಗರು [ಒಂದು ಹಳೆಯ ಕಥೆ]

  1. ಕಥೆಗೆ ಬೇಕಾಗಿ ಒಂದು ಕಥೆ.. ಕಥೆಯೊಳಗೆ ಇನ್ನೊಂದು ಕಥೆ..ಅದನ್ನು ಹೇಳಲು ಹೊರಟು ಇನ್ನೊಂದು ಕಥೆ..ಓದುತ್ತ ಓದುತ್ತ ಯಾವುದೊ mazeನೊಳಗೆ ಹೊಕ್ಕು ಅಲೆಯುತ್ತಿದೀನಿ ಅನ್ನಿಸತೊಡಗಿತು. ಉಮ್ಮನನ್ನು ನಮ್ಮೆದುರು ಇಟ್ಟಿರುವ ರೀತಿ ಆಪ್ತವೆನಿಸಿತು. A rare but classy story. ಕಥೆಯೆಂದರೆ ಇದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s