ಕಾಲಪ್ರವಾಹ ಮತ್ತು ಕಡಲಹಂದಿ

 

kadalahandhi.jpg

ಏನು ಬರೆಯಲಿ? ಈ ವಾರವೆಲ್ಲಾ ಬೇರೆ ಏನೂ ಮಾಡಲು ಹೋಗದೆ ಬರೆಯ ಆಫೀಸಿನ ಕೆಲಸಗಳನ್ನು ಮಾಡಿಕೊಂಡು ಸುಮ್ಮನೆ ಕುಳಿತಿದ್ದೆ. ಈಶಾನ್ಯ-ಭಾರತ ಪ್ರವಾಹದಲ್ಲಿ ಮುಳುಗಿ ಹೋಗಿ ರೈಲುಗಳೂ ಓಡಾಡದೆ ಊರಿಂದ ಪತ್ರಗಳೂ ಬರಲಿಲ್ಲ. ನಾಲ್ಕೈದಾರು ವಾರಗಳಿಂದ ‘ಪತ್ರಿಕೆ’ಯೂ ಬಂದಿಲ್ಲ. ಊರಿನಿಂದ ಉಮ್ಮ ಫೋನ್ ಮಾಡಿ ಅವಳ ತಲೆನೋವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ ಅಂತ ಹೇಳಿದಳು. ತಂಗಿಫೋನ್ ಮಾಡಿ ಅಷ್ಟುದೂರ ಊರಿನಲ್ಲಿ ಹಾಗೆಲ್ಲಾ ನಿರ್ಗತಿಕನಂತೆ ಅಲೆದಾಡಬೇಡ. ನಮಗೆ ಇಲ್ಲಿ ಹೆದರಿಕೆ ಆಗುತ್ತಿದೆ ಅನ್ನುತ್ತಿದ್ದಳು.

 ನನಗೆ ಯಾಕೋ ನಾನು ಮಂಗಳೂರಿನ ಬೀದಿಗಳಲ್ಲಿ ಉರಿಬಿಸಿಲಿನಲ್ಲಿ ಹುಚ್ಚನಂತೆ ಅಲೆದಾಡುತ್ತಿದ್ದುದು ನೆನಪಾಗುತ್ತಿತ್ತು. ನಾನು ಮಂಗಳೂರಿನಲ್ಲೂ ತುಂಬಾ ಅಲೆದಾಡುತ್ತಿದ್ದೆ. ಮಿಲಾಗ್ರೆಸ್ನಲ್ಲಿ ಬಸ್ಸು ಇಳಿದು ಹಂಪನಕಟ್ಟೆಗೆ ಒಂದು ಸುತ್ತು ಹೊಡೆದು ಅಲ್ಲಿಂದ ಮೀನು ಮಾರುಕಟ್ಟೆಯಿಂದಾಗಿ ಹಳೆಯ ಬಂದರಿಗೆ ಹೋಗಿ ಅಲ್ಲಿಂದ ದೋಣಿ ಹತ್ತಿ ಬೆಂಗರೆ ದ್ವೀಪಕ್ಕೆ ಹೋಗಿ ಕಡಲ ತಡಿಯಲ್ಲೇ ನಡೆಯುತ್ತಾ ತಣ್ಣೀರು ಬಾವಿಯವರೆಗೆ ಬಂದು ಅಲ್ಲಿಂದ ಬಸ್ಸು ಹತ್ತಿ ಮನೆ ಸೇರುತ್ತಿದ್ದೆ. ಒಂದು ಇಡೀ ಹಗಲು ನಾನು ಎಲ್ಲಿ ಇದ್ದೆ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಒಂದು ಮಧ್ಯಾಹ್ನ ಹೀಗೇ ಬೆಂಗರೆಯ ಕಡಲ ತಡಿಯಲ್ಲಿ ನಡೆಯುತ್ತಿದ್ದೆ. ಬೇರೆ ಯಾರೂ ಇರಲಿಲ್ಲ. ಒಂದು ಕರಿಯ ನಾಯಿ ಕಡಲನ್ನೇ ನಿರುಕಿಸುತ್ತಾ ಕೂತಿತ್ತು. ನಾನೂ ಕೊಂಚ ದುರದಲ್ಲಿ ಕುಳಿತೆ. ದೂರದಲ್ಲಿ ತೆರೆಗಳನ್ನು ದಾಟಿಕೊಂಡು ಕಪ್ಪಗಿನ ಏನೋ ಒಂದು ದಡದ ಕಡೆಗೆ ತೇಲಿ ಬರುತ್ತಿತ್ತು. ಅದು ಹತ್ತಿರ ಬರುತ್ತಿದ್ದಂತೆ ನಾಯಿ ಖುಷಿಯಲ್ಲಿ ಕುಣಿಯುತ್ತಾ ನೀರಿನ ಕಡೆ ಓಡುವುದು, ಮತ್ತೆ ಹಿಂದಕ್ಕೆ ಬರುವುದು ಮಾಡುತ್ತಿತ್ತು. ನಾನು ಬೇರೆ ಎಲ್ಲಾ ಯೋಚನೆಗಳನ್ನು ಬಿಟ್ಟು ಆ ತೇಲಿ ಬರುತ್ತಿರುವ ವಸ್ತುವನ್ನು ಕಾಯುತ್ತಾ ಕುಳಿತೆ. ಅಷ್ಟರಲ್ಲಿ ಹಿಂದುಗಡೆಯಿಂದ ಮೀನುಗಾರ ಮುದುಕನೊಬ್ಬ ಬಂದು ತಾನೂ ನೋಡುತ್ತಾ, ಕುಳಿತ. ಅದು ಹತ್ತಿರ ಬರುತ್ತಿದ್ದಂತೆ ‘ಓ ಅದಾ… ಅದು ಕಡಲ ಹಂದಿ’ ಅಂತ ತುಳುವಿನಲ್ಲಿ ಉದ್ಗಾರ ತೆಗೆದ.

ಅದು ಕಡಲ ಹಂದಿಯಂತೆ. ಹೀಗೇ ಆಗಿಂದಾಗ್ಗೆ ಸತ್ತ ಕಡಲ ಹಂದಿಗಳು ದಡಕ್ಕೆ ತೇಲಿಬರುತ್ತದಂತೆ. ಆಗ ಈ ನಾಯಿಗಳಿಗೆ ಹಬ್ಬವಂತೆ. ಮುದುಕ ಕತೆ ಹೇಳಲು ತೊಡಗಿದ್ದ. ನಾನು ಪೂರ್ತಿ ಕತೆ ಕೇಳಲು ಹೋಗದೆ ತೇಲಿಬಂದ ಆ ಕಡಲ ಜೀವಿಯನ್ನು ಹತ್ತಿರ ಹೋಗಿ ನೋಡಿದೆ. ಅದು ಕಡಲಲ್ಲಿ ಬದುಕಿದ್ದ ಜೀವಿ ಮತ್ತು ಅದಕ್ಕೆ ಬಾಲ ಮತ್ತು ಕಾಲುಗಳಿರಲಿಲ್ಲ ಎಂಬುದನ್ನು ಬಿಟ್ಟರೆ ಅದು ಊರು ಹಂದಿಯ ಹಾಗೇ ಇತ್ತು. ಮತ್ತು ನೀರಿನಲ್ಲಿ ತುಂಬಾ ದಿನಗಳಿಂದ ತೇಲುತ್ತಾ ಇದ್ದಿದ್ದರಿಂದ ಅದರ ಮೈಯಲ್ಲಿ ಪಾಚಿಕಟ್ಟಿದಂತೆ ಇತ್ತು. ನಾನು ನೋಡಿ ನಡುಮಧ್ಯಾಹ್ನ ಕನಸುಕಂಡವನಂತೆ ತಿರುಗಿ ಬಂದೆ.

ನಾವು ನಮ್ಮ ಉಮ್ಮಾಳಿಗೆ ಎಂಟು ಜನ ಮಕ್ಕಳು. ಒಂದು ಕಾಲದಲ್ಲಿ ನಾವು ತುಂಬಾ ಸಣ್ಣ ಸಣ್ಣವರು. ನಮ್ಮ ಬಾಪಾ ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಉಳಿದ ಎಲ್ಲಾ ರಾತ್ರಿ ನಮಗೆ ಹೆದರಿಕೆ ಅಂತ ಒಬ್ಬಳು ಹುಡುಗಿ ರಾತ್ರಿ ಮಲಗಲು ಬರುತ್ತಿದ್ದಳು. ನಾವು ಅಷ್ಟೂ ಜನ ಉದ್ದಕ್ಕೆ ಒಂದೇ ಕೋಣೆಯಲ್ಲಿ ಮಲಗುತ್ತಿದ್ದೆವು. ನಾನು ಎಲ್ಲರಿಗೆ ನಿದ್ದೆ ಬರುವವರೆಗೆ ಕತೆಗಳನ್ನು ಹೇಳುತ್ತಿದ್ದೆ. ಅದು ಏನು ಆ ಕತೆಗಳನ್ನು ಎಲ್ಲಿಂದ ತರುತ್ತಿದ್ದೆ ಎಂಬುದು ನನಗೆ ಈಗಲೂ ಗೊತ್ತಾಗಲಿಲ್ಲ. ಆಕೆ ತುಂಬಾ ಬಡವರ ಹುಡುಗಿ. ಆಕೆಯನ್ನು ಮೆಚ್ಚಿಸಲು ನಾನು ಕತೆಗಳನ್ನು ಹೇಳುತ್ತಿದ್ದೆ. ನಾನು ಕತೆಗಳನ್ನು ಹೇಳುತ್ತಿರುವಾಗ ಆಕೆ ನನ್ನ ಬೆರಳುಗಳಿಗೆ ತನ್ನ ಬೆರಳಿನ ತಂಗೀಸಿನ ಉಂಗುರವನ್ನು ತೊಡಿಸುತ್ತಿದ್ದಳು. ಮತ್ತೆ ತೆಗೆದು ತನ್ನ ಬೆರಳುಗಳಿಗೆ ಹಾಕಿಕೊಳ್ಳುತ್ತಿದ್ದಳು. ಬೆಳಗಾಗವು ಮೊದಲು ಎದ್ದು ಹೊರಟು ಹೋಗುತ್ತಿದ್ದಳು. ಆಕೆ ರಬ್ಬರ್ ತೋಟದಲ್ಲಿ ರಬ್ಬರಿನ ಹಾಲು ತೆಗೆಯುವ ಕೆಲಸ ಮಾಡುತ್ತಿದ್ದಳು.

ಒಂದು ಬೆಳಗ್ಗೆ ನಾನು ಆಕೆಯ ಜೊತೆ ಹೊರಟುಹೋಗಿದ್ದೆ. ಆಕೆಯ ಜೊತೆ ನದಿಯನ್ನು ದಾಟಿ ಮಂಜಿನಲ್ಲಿ ಮಲಗಿರುವ ರಬ್ಬರ್ ಕಾಡಿನೊಳಕ್ಕೆ ಹೊಕ್ಕು ಮರದಿಂದ ಮರಕ್ಕೆ ಆಕೆಯ ಜೊತೆಗೇ ನಡೆದಾಡಿದ್ದೆ. ಇನ್ನೊಂದು ಸಲ ಮುಂಜಾನೆ ಅಕೆ ನನ್ನ ಕೈ ಹಿಡಕೊಂಡು ನಡೆಸಿ ಬೆಳಗ್ಗೆಯೇ ಒಂದು ಹೆಲಿಕಾಪ್ಟರನ್ನು ತೋರಿಸಿದ್ದಳು. ಅದು ರಬ್ಬರ್ ತೋಟಕ್ಕೆ ಮೈಲುತುತ್ತು ಸ್ಪ್ರೇ ಮಾಡಲು ಬಂದ ಹೆಲಿಕಾಪ್ಟರು. ಬೆಳಗೆ ಸುಮ್ಮನೆ ಮರಗಳ ನಡುವೆ ನಿಂತುಕೊಂಡಿತ್ತು.

ನನಗೆ ಯಾಕೋ ಬರೆಯುತ್ತಾ ಸುಸ್ತಾಗುತ್ತಿದೆ. ಮತ್ತು ಅವಳ ನೆನಪಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಮಡಿಕೇರಿಯ ಟೋಲ್ ಗೇಟ್ ಬಳಿ ಸರಕಾರೀ ಆಸ್ಪತ್ರೆಯ ಮುಂದೆ ಆಕೆ ಮುಖವನ್ನು ಕೊಡೆಯಲ್ಲಿ ಮರೆಮಾಡಿಕೊಂಡು ನಿಂತಿದ್ದಳು. ನನಗೆ ಮೊದಲು ಗುರುತೇ ಸಿಗಲಿಲ್ಲ. ಆಕೆಯ ಮುಖ ಯಾಕೋ ಊದಿಕೊಂಡಿತ್ತು. ಆಕೆಗೆ ಅದು ಏನೋ ಕಾಯಿಲೆಯಂತೆ. ಕಳೆದ ಸಲ ಊರಿಗೆ ಹೋದಾಗ ಉಮ್ಮ ಹೇಳಿದಳು. ತುಂಬಾ ಕಾಲದಿಂದ ಆಸ್ಪತ್ರೆಯಲ್ಲಿ ಮಲಗಿಕೊಂಡಿರುವಳಂತೆ. ಈಗ ಆಕೆ ಎಲ್ಲಿದ್ದಾಳೆ. ಏನಾಗಿದೆ ಒಂದೂ ಗೊತ್ತಿಲ್ಲ. ಯಾಕೋ ಆಕೆಯನ್ನು ಜರೂರಾಗಿ ನೋಡಬೇಕು ಅಂತ ಅನ್ನಿಸುತ್ತದೆ. ಎಲ್ಲಾ ಯಾಕೆ ಹೀಗಾಗುತ್ತದೆ? ನಾನು ಯಾಕೆ ತಿರುಗುತ್ತಾ ಎಲ್ಲರಿಂದ ದೂರ ಹೋಗುತ್ತಿರುವೇ? ಇದೆಲ್ಲಾ ಓದಿ ನಿಮಗೆ ಏನನ್ನಿಸುತ್ತಿದೆ? ?  ಹೇಗೆ ಈ ಪ್ರವಾಹದಲ್ಲಿ ಅಷ್ಟುದಿನ ರೈಲಿನಲ್ಲಿ ಕುಳೀತು ತಲುಪುವುದು? ಒಂದೂ ಗೊತ್ತಾಗುತ್ತಿಲ್ಲ.

 

Advertisements