ನಕ್ಸಲ್ ಬಾರಿ ಮತ್ತು ದೂಲಾಬಾರಿ

 nepal2.jpg

ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವೆ. ಹಗಲೆಲ್ಲ ನಿದ್ದೆ ಹೊಡೆದೆ. ಈ ಬರೆಯವುದು ಮತ್ತು ಎಲ್ಲವನ್ನು ವಿವರಿಸುತ್ತಾ ಇರುವುದು ಎಂತಹ ಬೇಜಾರಿನ ಸಂಗತಿ ಅಂತ ಅನ್ನಿಸಿ ಸುಮ್ಮನೇ ಮತ್ತೆ ನಿದ್ದೆ ಹೋಗುತ್ತಿದ್ದೆ. ಹೋಗಲಿ ಬಿಡಿ. ಸುಮ್ಮನೆ ಬರೆ ನನ್ನ ಕುರಿತೇ ಕೊರೆಯದೆ ಬೇರೆ ಏನಾದರೂ ಹೇಳುವೆ.

 ಈ Rainer Maria Rilke ಎಂಬ ಜರ್ಮನಿಯ ಮಹಾಕವಿ Rodin ಎಂಬ ಫ್ರೆಂಚ್ ಮಹಾಶಿಲ್ಪಿಯ ಕಾರ್ಯದರ್ಶಿಯಾಗಿದ್ದ. ಒಂದು ದಿನ ಏನೋ ಸಂಕಟದಲ್ಲಿ ಏನೋ ಯೋಚಿಸುತ್ತಾ ನದಿಯೊಂದರ ದಂಡೆಯ ಮೇಲೆ ಶತಪಥ ಹಾಕುತ್ತಿದ್ದ. ಇದ್ದಕ್ಕಿದ್ದಂತೆ ಅದೇನು ಆಯಿತೊ ಹದುಳದಲ್ಲಿ ಹುಣ್ಣಿಮೆ ಮುಡಿದಂತೆ ಆತನ ತಳೆಯೊಳಗೆ ಕಾವ್ಯ ಗರಿಗೆದರಿತು. ಒಂದೇ ಏಟಿಗೆ ನುರಾರು ಸಾಲುಗಳ ಹಲವಾರು Elegy ಗಳನ್ನು ಬರೆದ. ಜರ್ಮನ್ ಕಾವ್ಯದ ಇತಿಹಾಸದಲ್ಲಿ ಇಲ್ಲಿಯವರೆಗೆ ಅಂತಹ ಕಾವ್ಯಸ್ಫೋಟ ಇನ್ನೊಮ್ಮೆ ಆಗಿಲ್ಲವಂತೆ. ಕ್ಷಮಿಸಿ, ನಾನು ಯಾಕೋ ಮಹಾಕವಿಗಳನ್ನು ತಮಾಷೆ ಮಾಡುತ್ತಿರುವೆ ಅನ್ನಿಸುತ್ತಿದೆ.

ಕಳೆದ ವಾರ ನಾನು ಬಸ್ಸಿನಲ್ಲಿ ಕುಳಿತು ನೇಪಾಳಕ್ಕೆ ಹೋಗಿ ಬಂದ ದಾರಿಯ ಕುರಿತು ಬರೆಯುವೆ. ಬೇರೆ ಎಲ್ಲೂ ಜಾಗವಿಲ್ಲದೆ ಆ ಹಳೆಯ ಬಸ್ಸಿನ ಕೊನೆಯ ಸಾಲಿನಲ್ಲಿ ಮುದುಡಿಕೊಂಡು ಕುಕ್ಕುರುಗಾಲಿನಲ್ಲಿ ಕುಳಿತಿದ್ದೆ. ಕಾಲು ಚಾಚಲೂ ಜಾಗವಿರಲಿಲ್ಲ. ಬಸ್ಸಿನೊಳಗಡೆ ಕೆಲಸಕ್ಕಾಗಿ ಅಥವಾ ಕೆಲಸ ಕಳೆದುಕೊಂಡು ವಲಸೆ ಹೋಗುತ್ತಿರುವವರು ತುಂಬಿಕೊಂಡಿದ್ದರು. ನಾನು ಕೊನೆಯ ಸೀಟಿನಿಂದ ಎಲ್ಲವನ್ನೂ ನೋಡುತ್ತಿದ್ದೆ. ನನಗೂ ನನ್ನ ಕೆಲಸ, ಭಾಷೆ ಎಲ್ಲಾ ಮರೆತಂತೆ ಅನಿಸಿಕ ನಾನೂ ನಿರ್ಗತಿಕ ಅನಿಸುತ್ತಿತ್ತು. ಅಸ್ಸಾಮಿನ ರಸ್ತೆಗಳಲ್ಲಿ ಕತ್ತಲಾದ ಮೇಲೆ ಜನರು ಕಾಣಿಸುವುದಿಲ್ಲ ಮತ್ತು ಅಂಗಡಿಗಳು ತೆರೆದಿರುವುದಿಲ್ಲ. ಸಣ್ಣ ಸಣ್ಣ ಸೇತುವೆಗಳನ್ನೂ ಕೂಡಾ ಸೈನಿಕರು ಕಾಯುತ್ತಿದ್ದರು. ಅರ್ಧ ಗಂಟೆಗೊಂದು ಸಲ ಸೈನಿಕರು ಬಸ್ಸುಗಳನ್ನು ತಡೆದು ನಿಲ್ಲಿಸಿ ಎಲ್ಲಾ ಗಂಡಸರನ್ನೂ ಇಳಿಯಲು ಹೇಳುತ್ತಿದ್ದರು.  ಅರ್ಧ ನಿದ್ದೆಯಲ್ಲಿ ಅರ್ಧ ಎಚ್ಚರದಲ್ಲಿ ನಾನೂ ಇಳಿಯುತ್ತಿದ್ದೆ. ಇಳಿದ ಗಂಡಸರನ್ನು ಸಾಲಾಗಿ ನಿಲ್ಲಲ್ಲು ಹೇಳುತ್ತಿದ್ದರು. ಆಮೇಲೆ ಪ್ರತಿಯೊಬ್ಬನ ಮುಖಕ್ಕೂ ಪ್ರಖರ ಟಾರ್ಚ್ ಬೆಳಕನ್ನು ಹರಿಸಿ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಂತರ ಬಸ್ಸಿನ ಹೆಡ್ಲೈಟಿನ ಬೆಳಕಲ್ಲಿ ನಮ್ಮನ್ನು ಕೊಂಚ ದೂರ ನಡೆಯಲು ಹೇಳುತ್ತಿದ್ದರು. ಮತ್ತು ನಡೆಯುವ ನಮ್ಮ ಮುಖಕ್ಕೆ ಮತ್ತೆ ಟಾರ್ಚ್ ಲೈಟ್ ಹಾಯಿಸಿ ನಾವು ಉಗ್ರಗಾಮಿಗಳಲ್ಲ ಅಂತ ಮನವರಿಕೆಯಾದ ಮೇಲೆ ಬಸ್ಸು ಹತ್ತಲು ಹೇಳುತ್ತಿದ್ದರು. ಹೀಗೆ ಒಂದೆರಡು ಸಲವಾದ ಮೇಲೆ ನನಗೆ ನಿದ್ದೆಯೆಲ್ಲಾ ಹೋಗಿ ಆಮೇಲೆ ಇದನ್ನೊಂದು ಆಟವನ್ನಾಗಿ ಮಾಡಿಕೊಂಡೆ. ಬಸ್ಸನ್ನು ಸೈನಿಕರು ನಿಲ್ಲಿಸಿದ ತಕ್ಷಣ ನಾನೇ ಮೊದಲು ಎದ್ದು ಸಾಲಿನಲ್ಲಿ ನಿಲ್ಲುವುದು. ಅವರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಹೇಳುವುದು ಮತ್ತು ಅವರ ಜೊತೆ ನಗುವುದು ಮಾಡುತ್ತಿದ್ದೆ. ಈ ಅಪರರಾತ್ರಿಯಲ್ಲಿ ಹೀಗೆ ನಿದ್ದೆಯಿಲ್ಲದೆ ರಸ್ತೆಗಳನ್ನು ಕಾಯುತ್ತಿರುವ ಈ ಸೈನಿಕರು ಯಾಕೋ ಪಾಪ ಅನ್ನಿಸುತ್ತಿತ್ತು ಒಂದು ಸಲ ಒಬ್ಬ ಸೈನಿಕನ ಜೊತೆ ನಾನು ‘ `I am from Karnataka’ಅಂದಾಗ ಆತ ತಟ್ಟನೆ ಹೌದಾ? ಅಂದು ಬಿಟ್ಟ. ನಾನು ‘ಹೌದು’ ಅಂದುಬಿಟ್ಟು ಬಸ್ಸು ಹತ್ತಿದೆ.

ನನಗೆ ಅರ್ಧ ಮಂಪರಿನಲ್ಲಿ ಆತನೂ ಕನ್ನಡನಾಡಿವನು ಅನ್ನುವುದು ಗೊತ್ತಾಗಲೇ ಇಲ್ಲ. ಅಮೇಲೆ ಬಸ್ಸು ಹೋಗುತ್ತಿರುವಾಗ ಯಾಕೋ ಆತ ಕೊಡಗಿನವನು, ಆತನೊಡನೆ ಕೊಡವ ಭಾಷೆಯಲ್ಲಿ ಮಾತನಾಡಬೇಕಿತ್ತು ಅಂತ ಅನ್ನಿಸುತ್ತಿತ್ತು.

ಆಮೇಲೆ ಮಾರನೇದಿನ ನಕ್ಸಲ್ ಬಾರಿ ಎಂಬ ಹಳ್ಳಿಯನ್ನು ದಾಟಿ ಸಂಜೆಕತ್ತಲಲ್ಲಿ ದೂಲಾಬಾರಿ ಎಂಬ ನೇಪಾಳದ ಊರೊಂದನ್ನು ಹೊಕ್ಕರೆ Arabian Nights ನ ಊರೊಂದನ್ನು ಹೊಕ್ಕಂತೆ ಅನ್ನಿಸುತ್ತಿತ್ತು. ಅಲ್ಲಿ ಬಣ್ಣಬಣ್ಣದ ಅಂಗಡಿಗಳಲ್ಲಿ ಬರಿಯ ವಿದೇಶಿ ವಸ್ತುಗಳು.  ನೂರುರುಪಾಯಿಯ ಭಾರತದ ಕರೆನ್ಸಿಗೆ ನೂರಾ ಅರವತ್ತು ನೇಪಾಳದ ರೂಪಾಯಿ . ಲೆಕ್ಕ ಹಾಕುವುದು ಭಾರೀ ತಮಾಷೆ ಅನ್ನಿಸುತ್ತಿತ್ತು. ಲೆಕ್ಕ ಗೊತ್ತಿಲ್ಲದವರು ಮೋಸ ಹೋಗುತ್ತಿದ್ದರು. ನಾನು ಹುಷಾರಾಗಿ ಮೋಸ ಹೋಗದ ಹಾಗೆ ನಟಿಸಿಕೊಂಡು ಬೀದಿಬೀದಿ ಸುತ್ತುತ್ತಾ ತಿನ್ನುವುದು, ತೇಗುವುದು ಮಾಡುತ್ತಿದ್ದೆ. ರಾಜಸ್ತಾನದ ವ್ಯಾಪಾರಿಗಳು ನೇಪಾಳದ ಈ ಊರನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡು ಹಣವನ್ನು ಅನುಭವಿಸುತ್ತಿದ್ದರು. ಒಂದು ಇರುಳಿನ ಪಂಜಾಬಿ ಹೋಟೇಲ್ಲೊಂದರಲ್ಲಿ ಉಳಕೊಂಡು ಬೆಳಗೆ ಎದ್ದು ಹೊರಗೆ ನೋಡುತ್ತಿದ್ದೆ. ಸುರಿಯುವ ಮಳೆಯಲ್ಲಿ ಹಾಲಿನ ಕೊಡ ಹೊತ್ತುಕೊಂಡು ನೇಪಾಳದ ಹಳ್ಳಿಯ ಹುಡುಗಿಯರು ನಡೆದು ಹೋಗುತ್ತಿದ್ದರು. ಅಂಗಡಿಗಳು ಇನ್ನೂ ತೆರೆದಿರಲಿಲ್ಲ. ಅವುಗಳು ತೆಗೆಯುವ ಮೊದಲೇ ಹೊರಟು ಬಂದುಬಿಟ್ಟೆ. ತುಂಬಾ ಬರೆದೆ. ನಿಲ್ಲಿಸುವೆ. ಬಸವರಾಜ ರಾಜಗುರು ‘ಜಾರೇ ಕಗವಾ, ಮೋರೇ ಪಿಯಾಕೆ ಸಂಗ್’ ಅಂತ ಹಾಡುತ್ತಿದ್ದಾರೆ. ಈ ಹಾಡು ಮುಗಿದ ಮೇಲೆ ನಿದ್ದೆ ಹೋಗುವೆ.
 

Advertisements