ಸುಂದರಿಯೂ ಕುರೂಪಿಯೂ

 shillong.jpgಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ಮೈಸವರುತ್ತಾ, ಜೋಡಿಸುತ್ತಾ, ಚಂದ ನೋಡುತ್ತಾ ಬಹಳ ದಿನಗಳ ಬಳಿಕ ನಿಮಗೆ ಬರೆಯುತ್ತಿರುವೆ. ಯಾಕೋ ಅಹ್ಲಾದವೆನಿಸುತ್ತದೆ. ಹದುಳದಲ್ಲಿ ಹುಣ್ಣಿಮೆ ಮೂಡಿದಂತೆ. ಬೇಂದ್ರೆಯವರಿಗೆ ಮಲ್ಲಿಕಾರ್ಜುನ ಮನ್ಸೂರರ ಹಾಡು ಕೇಳಿ `ಬಿಸಿಲ ಹಣ್ಣನುಂಡು ಚಂದ್ರನ ಜೇನು ಮದ್ದಂತೆ ‘ಅನಿಸಿತ್ತಂತೆ. ನಾನು ಈ ದಿನ ಸಂಜೆ ನಾಲ್ಕು ಗಂಟೆಗೇ ಚಂದ್ರನ ಬೆಳಿನಲ್ಲಿ ನನ್ನ ನೆರಳನ್ನು ಕಂಡು ಚಕಿತಗೊಂಡೆ.ಇಲ್ಲಿ ಈಗಲೇ ಚಳಿಗಾಲ ಮೊದಲಾಗಿ ಮಧ್ಯಾಹ್ನದ ಚಂದ್ರನಂತಹ ಬಿಸಿಲಲ್ಲಿ ಬೆಚ್ಚಗೆ sweater ಹಾಕಿಕೊಂಡು ಓಡಾಡುತ್ತಿರುವೆ. ಈಗಂತೂ ಈ ಚಳಿ ಬಿಸಿಲಲ್ಲಿ ಈ ಊರು ಎಷ್ಟು ಚಂದ ಎಷ್ಟು ಚಂದ ಎಂದು ಕಣ್ಣಲ್ಲೇ ಎಲ್ಲವನ್ನೂ ತಿಂದುಕೊಂಡು ನಡೆದಾಡುತ್ತಿರುವೆ.

ನಾನು ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದಾಗ ನೀವು ಯಾಕೋ ನನ್ನನ್ನು ವಾರೆನೋಟದಲ್ಲಿ ನೋಡಿ ಪೆಚ್ಚಾಗಿ ಎಲ್ಲಾ evil ಗಳೂ ಈತನಲ್ಲಿ ಸಾಕಾರಗೊಂಡಿವೆ ಅಂತ ಹೇಳಿದಿರಿ. ನಾನು ಪೆಚ್ಚಾಗಿ ಬಿಟ್ಟಿದ್ದೆ. ಆಮೇಲೆ ಹೌದಲ್ಲಾ ನನ್ನಲ್ಲಿ ಏನೆಲ್ಲಾ evil ಗಳು ತುಂಬಿಕೊಂಡಿವೆಯಲ್ಲಾ ಅಂತ ಅನ್ನಿಸಿ ಎಲ್ಲವನ್ನೂ ಮತ್ತೆ ನೆನಪು ಮಾಡಿಕೊಂಡು ಯಾರಿಗೂ ಹೇಳಲಾಗದೆ  ಸುಮ್ಮನೇ ಇದ್ದೆ. ಇಲ್ಲಂತೂ ಈಗ ನಾನೊಬ್ಬನೇ ಇರುವೆ. ಯಾರಿಗೆ ಏನು ಹೇಳಿದರೂ ನಂಬುವುದಿಲ್ಲ. ಹಾಗಾಗಿ ‘ಎಲ್ಲಿರುವೆ ರಾಜಗಂಭೀರಾ-ನೀರಾ’ ಅಂತ ಓಡಾಡುತ್ತಿರುವೆ.

ಮೊನ್ನೆ ಒಂದು ದಿನ ರಾತ್ರಿಯಲ್ಲಿ ಒಂದು ಫೋನ್ ಬಂತು. ಒಬ್ಬಳು  ಹೆಂಗಸಿನ ಧ್ವನಿ. ಯಾರನ್ನೋ ಕೇಳುತ್ತಿತ್ತು. ಇಲ್ಲ ರಾಂಗ್ ನಂಬರ್ ಅಂತ ಇಟ್ಟೆ. ಕೊಂಚ ಕಳೆದು ಪುನಃ ಅದೇ ಹೆಸರನ್ನು ವಿಚಾರಿಸಿತು.  ಇಲ್ಲ ಎಂದು ಪನಃ ಇಟ್ಟೆ. ಮೂರನೇ ಸಲ ಬಂದಾಗ ಯಾಕೋ ಚೇಷ್ಟೆ ಮಾಡುವಾ ಅನಿಸಿತು. ಇಲ್ಲಿ ನೀವು ಕೇಳುತ್ತಿರುವವರು ಯಾರೂ ಇಲ್ಲ. ಆದರೆ ನನ್ನನ್ನು ಯಾರೂ ಕೇಳುತ್ತಿಲ್ಲ. ನಾನೊಬ್ಬ ಒಂಟಿ ಗಂಡಸು. ಬಹಳ ದೂರದ ನಾಡಿನಿಂದ ಬಂದಿರುವೆ. ಇಲ್ಲಿ ಯಾರೂ ಇಲ್ಲ. ನೀವು ನನ್ನ ಜೊತೆ ಮಾತನಾಡಬಹುದು ಅಂದೆ. ಆಕೆ ಬಹುಶಃ ನಾಚಿಕೊಂಡಿರಬೇಕು. ಕೊಂಚ ಹೊತ್ತು ಕಳೆದು ಕುಲುಕುಲು ನಕ್ಕಳು. ನನಗೆ ಬೆಂಗಳೂರು ತುಂಬಾ ಇಷ್ಟ. ಒಂದು ದಿನ ರಾತ್ರಿಯೆಲ್ಲಾ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಎಗ್ಗಿಲ್ಲದೆ ಓಡಾಡಿದ್ದೆ ಅಂದಳು. ಅಲ್ಲೊಂದು ಅಂಡರ್ ಗ್ರೌಂಡ್ ಎಂಬ ಪಬ್  ಇದೆಯಲ್ಲಾ ಅಂದಳು. ಆಮೇಲೆ ಹೆಸರಘಟ್ಟದಲ್ಲೊಂದು ಕೆರೆ ಇದೆಯಲ್ಲಾ ಅಂದಳು. ನಾನು ಕೇಳುತ್ತಾ ಹೋದೆ. ಆಮೇಲೆ ಆಕೆಯ ಕತೆಯನ್ನೆಲ್ಲಾ ಕಂತುಕಂತಾಗಿ ಹೇಳುತ್ತಾ ಹೋದಳು.

ಆಕೆ ಈ ರಾಜ್ಯದ ಬಹಳ ದೊಡ್ಡ athlete ಅಂತೆ. ಈ ಊರಿನ ಎಲ್ಲರೂ ಕೊಂಚ ಕುಳ್ಳ ಕುಳ್ಳಗೆ ಇರುವುದರಿಂದ ಕೊಂಚ ಉದ್ದದವಳಾದ ಈಕೆ ಆಟದಲ್ಲಿ ಓಟದಲ್ಲಿ ಬಹಳ ಮುಂದೆ ಅಂತೆ. ಹಾಗಾಗಿ ಕೆಂಗೇರಿಯ ಬಳಿ ಇರುವ ಕ್ರೀಡಾ ತರಬೇತಿಕೇಂದ್ರದಲ್ಲಿ ತರಬೇತಿಗೆ ಕಳಿಸಿದ್ದರಂತೆ. ಈಕೆ ಅಲ್ಲಿ ತುಂಬಾ ಸಲ ಬೇಲಿ ಹಾರಿ, ತೆಂಗಿನ ಮರಹತ್ತಿ ಕಾಯಿಕದ್ದು ಎಲ್ಲರಿಂದ ಬೈಯಿಸಿಕೊಳ್ಳುತ್ತಿದ್ದಳಂತೆ. ಆಮೇಲೆ ತುಂಬಾ ಸಣ್ನ ವಯಸ್ಸಿನಲ್ಲೇ ಮದುವೆಯಾದಳಂತೆ. ಈಗ ಈಕೆಯ ಮಗಳೂ ಈಕೆಯೂ ರಸ್ತೆಯಲ್ಲಿ ನಡೆದಾಡುತ್ತಿದ್ದರೆ ಯಾರು ತಾಯಿ ಯಾರು ಮಗಳು ಎಂದು ಯಾರಿಗೂ ಗೊತ್ತಾಗುವುದಿಲ್ಲವಂತೆ. ಆಕೆ   ಹೇಳುತ್ತಾ ನಗುತ್ತಾ ನಾಚುತ್ತಾ ಇದ್ದರೆ ನಾನು ಆಗಾಗ ಗಹಗಹಿಸಿ ನಗುತ್ತಾ ಪ್ರಶ್ನೆ ಕೇಳುತ್ತಾ ಆಕೆಯನ್ನು ಮಾತನಾಡಿಸುತ್ತಿದ್ದೆ. ಕೊನೆಗೆ ಹೋಗಲಿ ಬಿಡಿ ಈಗ ನೀವು ನೋಡಲು ಹೇಗೆ ಇದ್ದೀರಿ ಅಂದೆ? ಆಕೆ ಕೊಂಚ ಹೊತ್ತು ಬಿಟ್ಟು ನೀವು TVಯಲ್ಲಿ ಬಕಾರ್ಡಿ rum ನ ಜಾಹೀರಾತು ನೋಡಿದ್ದೀರಾ ಅಂದಳು. ನಾನು ನೋಡಿದ್ದೇನೆ, ಗಮನಿಸಲಿಲ್ಲ ಅಂದೆ. ಗಮನಿಸಿ ಅಲ್ಲಿ ಒಬ್ಬಳು ಗುಂಗುರು ಕೂದಲಿನ ಹುಡುಗಿ ಚೆನ್ನಾಗಿ ಕುಣಿಯುತ್ತಾಳೆ. ಅವಳ ಹಾಗೇ ಇರುವೆ ಅಂದಳು. ನಾನು ಹೌದಾ ಅಂತ ಸುಮ್ಮನಾದೆ. ಆಮೇಲೆ ಒಂದು ಶರತ್ತು ಹಾಕಿದಳು. ನೋಡಿ ನಾವು ಗೆಳೆಯರು ಆದರೆ ಒಬ್ಬರನೊಬ್ಬರು ನೋಡಬಾರದು. ನೋಡಿದ ದಿನ ನಮ್ಮ ಗೆಳೆತನ ಮುರಿಯಿತು ಅಂದಳು. ನಾನು ಹೌದಾ ತುಂಬಾ interesting ಆಗಿದೆ. ನನಗೂ ಈ ನೋಡುವುದು ಹಿಂದೆ ಹಿಂದೆ ಓಡಾಡುವುದು ಎಲ್ಲವೂ ಬೇಸರವಾಗಿದೆ. ನನಗೂ ವಯಸ್ಸಾಗಿದೆ ನಾಲ್ಕಾರು ಮಕ್ಕಳಾಗಿವೆ. ಹೀಗೆ ಮಾತನಾಡುವಾ. ನೋಡುವುದು ಬೇಡಾ ಅಂದೆ.

ಅವಳಿಗೆ ಗಂಡಸರೆಲ್ಲಾ ಬೇಸರವಾಗಿ ಬಿಟ್ಟಿದ್ದಾರೆ. ತುಂಬಾ ಮೋಸ ಮಾಡಿದ್ದಾರಂತೆ. ಸಣ್ಣದರಲ್ಲೇ ಅವಳ ಅಪ್ಪ ಅವಳ ಅಮ್ಮನಿಗೆ ಮೋಸಮಾಡಿದರಂತೆ, ಆಮೇಲೆ ಅಮ್ಮ ಇನ್ನೊಬ್ಬ ಗಂಡಸಿಗೆ ಮೋಸ ಮಾಡಿದರಂತೆ. ಆಮೇಲೆ ಇವಳು ಕ್ರೈಸ್ತ ಅನಾಥಾಲಯದಲ್ಲಿ ಬೆಳೆದಳಂತೆ. ಅಲ್ಲಿ ಒಬ್ಬ ಬಿಹಾರಿ ಮಾಲಿ ಹೂ ತೋಟದಲ್ಲಿ ಕೆಲಸ ಮಾಡುತ್ತಿದ್ದವನು ಇವಳನ್ನು ತುಂಬಾ ಹಚ್ಚಿಕೊಂಡಿದ್ದನಂತೆ. ಇವಳನ್ನು ಕಂಡೊಡನೆ ಅಂಗಿ ಬಟ್ಟೆಯಲ್ಲಾ ಕಳಚಿ ಹಾಕಿ ನಿಲ್ಲುತ್ತಿದ್ದನಂತೆ. ಇವಳಿಗೆ ಯಾಕೋ ಆದು ಆತನ ಪ್ರೀತಯ ಅನಂತ ರೂಪ ಅನ್ನಿಸಿತ್ತಂತೆ. ಆಮೆಲೆ ನೋಡಿದರೆ ಆತ ಅನಾಥಾಲಯದ ಎಲ್ಲ ಹುಡುಗಿಯರಿಗೂ ಹಾಗೆ ತೋರಿಸುತ್ತಿದ್ದನಂತೆ. ಆತನೂ ನನಗೆ ಮೋಸ ಮಾಡಿದ ಅಂದಳು. ಆಮೇಲೆ ಗಂಡನೂ ಮೋಸ ಮಾಡಿದ, ಈಗ ಒಬ್ಬಳೇ ಇರುವೆ ಅಂದಳು. ಹೀಗೆ ಆಕೆ ತುಂಬಾ ಕತೆಗಳನ್ನು ಆಗಿಂದಾಗ್ಗೆ ಹೇಳುತ್ತಾ ಇರುತ್ತಾಳೆ. ನಾನೂ ಆಕೆಯ ಶರತ್ತುಗಳನ್ನೆಲ್ಲಾ ಪಾಲಿಸಿ ಸುಮ್ಮನೆ ಕೇಳುತ್ತಿರುತ್ತೇನೆ. ಒಮ್ಮೊಮ್ಮೆ ಆಕೆಯೂ ನನಗೆ ನೀನು ತುಂಬಾ ಚಂದವಾಗಿ ಕತೆ ಹೇಳುವೆ ನಿನ್ನನ್ನು ನೋಡಬೇಕು ಅಂತ ಅನ್ನಿಸುತ್ತದೆ ಅನ್ನುತ್ತಾಳೆ. ನಾನು ಇಲ್ಲ ಬೇಡಾ. ನಾನು ತುಂಬಾ ಕುರೂಪಿಯಾಗಿರುವೆ. ನಾವಿಬ್ಬರೂ ನೋಡಿದ ದಿನ ಇಬ್ಬರೂ ಸಹಸ್ರ ಹೋಳುಗಳಾಗಿ ಬಿಡತ್ತೇವೆ ಅಂದಿರುವೆ. ಹೇಗಿದೆ ಕತೆ?

 

Advertisements