ಇಂದೆನಗೆ ಆಹಾರ ಸಿಕ್ಕಿತು!

ಎಷ್ಟು ಬರೆಯಬೇಕೆಂದು ಕುಳಿತರೂ ಏನೂ ಬರೆಯಲಾಗುತ್ತಲೇ ಇಲ್ಲ. ಇಷ್ಟು ಹೊತ್ತಾದರೂ ಬೆಳಗು ಇನ್ನೂ ದಿಕ್ಕೆಟ್ಟು ಮಲಗಿರುವಂತೆ ಕಾಣಿಸುತ್ತಿದೆ. ಯಾವಾಗಲೂ ಎದ್ದೊಡನೆ ಕಾಣಿಸುತ್ತಿದ್ದ ಅರಬೀ ಕಡಲಿನ ಒಂದು ಚೂರು ನೀಲಿ ಇನ್ನೂ ಮಂಜಿನಲ್ಲೇ ಮಲಗಿಕೊಂಡಿದೆ. ನದಿ ದಾಟುತ್ತಿರುವ ಕಾಡಾನೆಯಂತೆ ಉದ್ದದ ಹಡಗೊಂದು ನದೀ ಮುಖವಾಗಿ ಬಂದರಿನ ಕಡೆಗೆ ನಿಧಾನಕ್ಕೆ ನಿಂತುಕೊಂಡೇ ಇರುವಂತೆ ಚಲಿಸುತ್ತಿದೆ.sea.jpg ನಿಂತೇ ಹೋಗಿದ್ದ ಮುಂಗಾರು ಮಳೆ  ಇದೀಗ ನೋಡಿದರೆ ಬೆಳಿಗ್ಗೆಯೇ ಬೆಳಕನ್ನು ನುಂಗಿಕೊಂಡು ಮೋಡವಾಗಿ, ಕಾವಳವಾಗಿ ಆಕಾಶದಲ್ಲಿ ಹಾಗೇ ನಿಂತುಕೊಂಡಿದೆ. ನಿಂತ ಗಾಳಿ, ನಿಂತ ಆಕಾಶ ಎಂತಹ ಅಸ್ವಸ್ಥ ಮನಸ್ಸಿಗೂ ಸಕಾರಣ ಹೇಳಬಲ್ಲ ಹಾಗಿರುವ ಮಂಗಳೂರಿನ  ಈವತ್ತಿನ ಬೆಳಗು, ನಗು ಬರುತ್ತದೆ. ಈ ಹವಾಮಾನ, ಈ ವಾತಾವರಣ, ಈ ನಿಂತ ನೀರಿನಂತಿರುವ ಬೆಳಗು ಇವೆಲ್ಲವೂ ನಮಗೆ ಏನನ್ನೋ ಹೇಳಲೆಂದೇ ಹೀಗೆ ನಿಂತುಕೊಂಡಿದೆ ಎಂದು ಭ್ರಮಿಸುವ ನಮ್ಮ ತಿಕ್ಕಲುತನಗಳು!

 ನೆಲಕ್ಕೆ ಸವರಿಕೊಂಡೇ ಹಾರಾಡುತ್ತಿರುವ ಹೆಲಿಕಾಪ್ಟರ್ ಚೆಟ್ಟೆಗಳು, ಮಾಡಿನ ಮೇಲೆ, ತೆಂಗಿನ ಗರಿಗಳ ಮೇಲೆ ಸಾಲಾಗಿ ಕುಳಿತುಕೊಂಡು ಈ ಹಾರುತ್ತಿರುವ ದೇವ ದೂತರಂತಹ ಚಿಟ್ಟೆಗಳನ್ನು ಅಟ್ಟಿಸಿಕೊಂಡು ತಿಂದುಹಾಕಲು ಹೊಂಚುಹಾಕುತ್ತಿರುವ ಕಾಗೆಗಳು, ಈ ದಿನದ ಬೆಳಗಿನ ಆಲಸ್ಯ ಅವುಗಳನ್ನೂ ಬಿಟ್ಟಿರುವಂತೆ ಅನಿಸುತ್ತಿಲ್ಲ. ಬೇಟೆಯನ್ನೂ  ಮರೆತು ಸುಮ್ಮನೆ ಕತ್ತು ಗರಿಗಳನ್ನು ಕೆರೆದುಕೊಂಡು, ಕೊಕ್ಕಿನಿಂದ ತಮ್ಮ ಮೈಯನ್ನೇ ವೈಯಾರದಿಂದ ಸವರುತ್ತಿರುವ ಈ ಕಾಗೆಗಳು, ಹಾರುತ್ತಲೇ ಇರುವ ಈ ಚಿಟ್ಟೆಗಳು ಮತ್ತು ಎಂದಿನ ಹಾಗೇ ರಸ್ತೆಗಳಲ್ಲಿ ಚಲಿಸಲು ತೊಡಗಿರುವ ಮನುಷ್ಯ ಮಾತ್ರರಾದ ನಾವು.

 ಹಾಗೆ ನೋಡಿದರೆ ಪ್ಲೇಗಿಗೆ ಹೆದರಿಕೊಂಡು ಇಡೀ ಮಂಗಳೂರಿಗೆ ಮಂಗಳೂರೇ ಮುಖಕ್ಕೆ ಟವಲ್ಲು ಕಟ್ಟಿಕೊಂಡು ಓಡಾಡಬೇಕಿತ್ತು. ಹಾಗೆ ಇಲ್ಲ ಈ ದಿನವಾರೂ ಹಂಪನಕಟ್ಟೆಯಲ್ಲಿ ಒಂದಿಷ್ಟು ಜನ ಮುಖ ಮುಚ್ಚಿಕೊಂಡು ಓಡಾಡುತ್ತಿರಬಹುದು ಅಂದುಕೊಂಡು ಹೋಗಿ ನೋಡಿದರೂ ಎಲ್ಲರೂ ನಿರಾಂತಕವಾಗಿ ಓಡಾಡುತ್ತಿದ್ದಾರೆ. ಬೀದಿ ಬೀದಿಗಳ ಚೆಲವೆಯರ, ಸುಂದರಿಯರ ಮುಖಗಳು ಹಾಗೇ ಇವೆ. ಹಾಗೆ ನೋಡಿದರೆ ಗ್ರಹಣ ಹಿಡಿದಿರುವುದು ಸ್ವಂತ ಮನಸ್ಸಿಗೇ. ಆಕಾಶದಲ್ಲೂ, ಗಾಳಿಯಲ್ಲೂ ಕಡಲಿನಲ್ಲೂ ನೀರಿನಲ್ಲೂ ಎಂತಹದೋ ದಿಙ್ಮೂಢತೆಯನ್ನು ಊಹಿಸಿಕೊಂಡು ಬೆಳಗೆಯೇ ಸೋಮಾರಿಯಂತೆ ಕಾಲಹರಣ ಮಾಡುತ್ತಿರುವ ಕಳ್ಳ ಮನಸ್ಸು, ಆಹಾರ ಸಿಕ್ಕಲಿಲ್ಲವೆಂದು ಭ್ರಮಿಸಿ ಸುಮ್ಮನೇ ತೆಂಗಿನ ಮುಕುಟದಲ್ಲಿ ಕುಳಿತಿರುವ ಕಾಗೆಯಂತಹ ಮನಸ್ಸು. ಬೇಜಾರಾಗುತ್ತದೆ. ಹೀಗೆ ಎಷ್ಟು ಕಾಲ ಅಂತ ಈ ಬೆಳಗನ್ನೂ, ಆಕಾಶವನ್ನೂ, ಕಡಲನ್ನೂ ನಂಬಿ ಕೊಂಡು ಬರೆಯುತ್ತಾ ಇರುವುದು? ಪೆಚ್ಚೆನಿಸುತ್ತದೆ.

ಈಗ ಈ ಹುಡುಗಿ ಇಲ್ಲ, ಹೊರಟುಹೋಗಿದ್ದಾಳೆ. ಅವಳು ಇದ್ದದ್ದನ್ನೂ, ಹೋದದ್ದನ್ನೂ ಗಮನಿಸಿರುವ ನಾನು ಈ ಲೋಕದಲ್ಲಿ ಇರುವುದು ಅವಳಿಗೆ ಗೊತ್ತಿರಲಿಲ್ಲ. ಗೊತ್ತಾಗುವ ಹೊತ್ತಿಗೆ ಅವಳು ಊರು ಬಿಟ್ಟು ಓಡಿ ಹೋಗಲು ಸಿದ್ದವಾಗಿ ಕೈಯಲ್ಲೊಂದು ಪುಟ್ಟ ಪ್ಲಾಸ್ಟಿಕ್ಕಿನ ಚೀಲದಲ್ಲಿ ಇದ್ದ ಒಂದೆರಡು ಜೊತೆ ಬಟ್ಟೆ ತುಂಬಿಕೊಂಡು ಹಾರಿಸಿಕೊಂಡು ಹೋಗಲು ಬರುವ ಯಾವನೋ ಒಬ್ಬ ಮನುಷ್ಯನಿಗೆ ಕಾಯುತ್ತಾ ಕತ್ತಲೆಯಲ್ಲಿ ಬೇಲಿಯ ಮರೆಯಲ್ಲಿ ನಿಂತಿದ್ದಳು. ಅವಳು ಕತ್ತಲೆಯಲ್ಲಿ ನಿಂತಿರುವ ರೀತಿಗೇ ಅವಳು ಓಡಿ ಹೋಗಲು ನಿಂತಿದ್ದಾಳೆ ಅನಿಸುತ್ತಿತ್ತು. ‘ಎಲ್ಲಿಗೆ’ ಎಂದು ಗದರಿದೆ. ಅದು ಈ ಜೀವಮಾನದಲ್ಲಿ ನಾನು ಅವಳೊಂದಿಗೆ ಮಾತನಾಡಿದ ಮೊದಲ ಶಬ್ದವಾಗಿತ್ತು. ಅವಳು ಕತ್ತಲೆಯಲ್ಲಿ ಇನ್ನಷ್ಟು ಕೂಸರಿಕೊಂಡು  ಮೈ ಹಿಡಿ ಮಾಡಿಕೊಂಡು ಸುಮ್ಮಗೆ ನಿಂತಿದ್ದಳು. ‘ಎಲ್ಲಿಗೆ ಹೋಗ್ತಿದ್ದೀಯಾ?’ ನನ್ನ ಶಬ್ದ ನನಗೇ ಮುಜುಗರವಾಗುವಂತೆ ಆಕೆಯನ್ನು ಹೆದರಿಸುತ್ತಿತ್ತು. ‘ಕರಕೊಂಡು ಹೋಗಲು ಬರುತ್ತಾರೆ’ ಎಂದು ತೊದಲಿದಳು. ಅದು ನನ್ನ ಜೀವಮಾನದಲ್ಲಿ ಆಕೆಯ ಬಾಯಿಯಿಂದ ಕೇಳಿದ ಮೊದಲ ಮತ್ತು ಕೊನೆಯ ಮಾತು. ಈ ಪುಟ್ಟ ಹುಡುಗಿಯನ್ನು ಕರೆದುಕೊಂಡು ಹೋಗಲು ಈ ಕತ್ತಲೆಯಲ್ಲಿ ಯಾರು ಬರುತ್ತಾರೆ? ಇವಳು ಆ ದೊಡ್ಡ ಮನೆಯ ಸಿಮೆಂಟ್ ಕಂಪೌಂಡ್ ಹಾರಿ ನಮ್ಮ ಬೇಲಿಯ ಮರೆಯಲ್ಲಿ ಯಾಕೆ ನಿಂತಿದ್ದಾಳೆ. ಅಷ್ಟು ಹೊತ್ತಿಗೇ ಯಾಕೆ ಈ ಲೋಕದ ಎಲ್ಲ ದೀಪಗಳೂ ಆರಿ ಎಲ್ಲ ಕಡೆ ಕತ್ತಲಾಗಿ ಅಳಿದುಳಿದ ನಕ್ಷತ್ರಗಳ ಚಂದ್ರನ ಬೆಳಿನಲ್ಲಿ ಆಕೆ ಹೆದರಿರುವುದು ಮಾತ್ರ ಕಾಣಿಸುತ್ತಿದ್ದೆ? ಈ ಹುಡುಗಿ ಈ ಕತ್ತಲೆಯಲ್ಲಿ ಯಾಕೆ ಓಡಿ ಹೋಗುತ್ತಿದ್ದಾಳೆ?

ನೋಡು ನೋಡುತ್ತಿದ್ದಂತೆ ಈ ಹುಡುಗಿ ಓಡಿಯೇ ಹೋದಳು. ಕತ್ತಲಲ್ಲಿ ಅಷ್ಟೊಂದು ಮುಖಗಳಲ್ಲಿ ಅಷ್ಟೊಂದು ವಾಹನಗಳಲ್ಲಿ ಅವಳು ಯಾರ ಜೊತೆ ಹೇಗೆ ಓಡಿಹೋದಳು ಗೊತ್ತಾಗಲಿಲ್ಲ. ನಾನು ತಲೆಕೆಟ್ಟವನಂತೆ ಮನೆಗೆ ಬಂದು ಕಂಡ ಕಂಡವರಲ್ಲಿ ಆಕೆ ಓಡಿ ಹೋದದ್ದನ್ನು ಹೇಳುತ್ತಿದ್ದೆ. ಯಾರೂ ಏನೂ ಕೇಳುತ್ತಿರುವಂತೆ ಅನ್ನಿಸಲಿಲ್ಲ. ಮತ್ತೆ ಮತ್ತೆ ಅದನ್ನೇ ಹೇಳಿದೆ, ಸುಮ್ಮನಿರು ಎಂದು ಎಲ್ಲರೂ ಕಣ್ಣಲ್ಲೇ ಗದರಿಸುತ್ತಿರುವಂತೆ ಕಂಡಿತು. ಈ ಹುಡುಗಿ ಓಡಿ ಹೋಗಿರುವುದು ಮುಖ್ಯವೋ, ಅಮುಖ್ಯವೋ ಆಗಿರವುದು ಓಡಿ ಹೋಗಿರುವ ಆಕೆಗೆ ಮಾತ್ರ ಎಂಬುದು ಎಲ್ಲರೂ ಒತ್ತಿ ಹೇಳುತ್ತಿರುವಂತೆ ಅನ್ನಿಸುತ್ತಿತ್ತು. ಅವಳು ಓಡಿ ಹೋಗಿರುವುದನ್ನು ಅವಳು ಕೆಲಸಕ್ಕಿದ್ದ ಮನೆಯವರಿಗಾದರೂ ಹೇಳುವಾ ಅಂದರೆ ಅದು ಅವಳ ಬದುಕು, ಅವಳು ಓಡಿ ಹೋಗಿ ಸ್ವತಂತ್ರವಾಗಿರಲಿ ಎಂತಲೂ ಹೇಳಿದರು. ಕೊನೆಗೆ ನನ್ನ ಗೋಳಾಟ ನೋಡಲಾರದೆ ನೀನು ಸುಮ್ಮನೆ ಇದನ್ನ ಮನಸ್ಸಿನಲ್ಲಿಟ್ಟುಕೊಳ್ಳಬೇಕಿತ್ತು. ಈ ಸುದ್ದಿಯನ್ನ ಹೊರಗೆ ಬಿಡದೆ ಅನುಭವಿಸಬೇಕಿತ್ತು ಅಂತ ಹೇಳಿದರು.

`ಎಂತದ್ದು ಮಾರಾಯರೇ ಆ ಹುಡುಗಿ ನನ್ನ ಕಣ್ಣ ಮುಂದೆಯೇ ಓಡಿ ಹೋಗಿರುವುದು, ಅಥವಾ ಅವಳು ಓಡಿ ಹೋಗಿರುವ ಮೊದಲು ಅವಳ ಕಣ್ಣ ಮುಂದೆ ನಾನು ಹಾದು ಹೋದದ್ದು, ಅವಳು ಕತ್ತಲೆಯಲ್ಲಿ ಹಾರಿಸಿಕೊಂಡು ಹೋಗುವುದರ ಮೊದಲ ಕೆಲವು ಕ್ಷಣಗಳಲ್ಲಿರುವಾಗ ನಾನು ದುಷ್ಟನಂತೆ ಆಕೆಗೆ ಗದರಿದ್ದು ಇದೆಲ್ಲವೂ ನಿಮಗೆ ಯಾವುದೋ ಕತೆಯಲ್ಲೋ, ಕನಸಲ್ಲೋ ನಡೆದಂತೆ ಅನಿಸುತ್ತಿಲ್ಲವಾ’ ಎಂದು ಅವರ ಮುಂದೆ ಗೋಳಾಡಬೇಕು ಅನ್ನಿಸುತ್ತಿತ್ತು. ಆದರೆ ಇದೆಲ್ಲವನ್ನೂ ಸುಮ್ಮನೇ ಅನುಭವಿಸಬೇಕು ಎಂದು ಅವರೆಲ್ಲಕ ಮತ್ತಷ್ಟು ನಿಷ್ಠುರವಾಗಿ ಕಣ್ಣಲ್ಲೇ ಹೇಳುತ್ತಿರುವಂತೆ ಕಂಡಿತು.
ಆ ಕೆಲಸದ ಹುಡುಗಿ ಮದುವೆ ಆಗಿರುವ ಮುದುಕನ ಕೂಡೆ ಓಡಿ ಹೋಗಿದ್ದಾಳೆ  ಅಂತ ಆ ಮನೆಯ ಯಜಮಾನಿ ಎತ್ತರದ ಧ್ವನಿಯಲ್ಲಿ ದೂರು ಹೇಳುತ್ತಿದ್ದಳು. ಅಯ್ಯೋ ದೇವರೇ ಎಂದು ಎದೆ ಮುಟ್ಟಿ ಹೆದರುತ್ತಿದ್ದರು. ಅವಳು ಇಂತಹ ಹುಡುಗಿ ಎಂದು ಗೊತ್ತಿರಲಿಲ್ಲ. ಈಗ ಎಲ್ಲ ಗೊತ್ತಾಗುತ್ತಿದೆ ಎಂದು ಎಲ್ಲ ನೆನಪು ಮಾಡಿಕೊಳ್ಳುತ್ತಿದ್ದರು. ತನ್ನ ಹೂ ಕುಂಡಗಳಿಂದ ಗಿಡಗಳನ್ನು ಬೇರು ಕಿತ್ತು ಇಡುತ್ತಿದ್ದವಳು ಅವಳೇಎಂದು ಗೊತ್ತಾಗುತ್ತಿದೆ… ತನ್ನ ಮನೆಯಲ್ಲಿ ಎಲ್ಲರೂ ಎಲ್ಲರೊಡನೆ  ಜಗಳಕಾಡುವಂತೆ ಮಾಡಿದವಳು ಇದೇ ಹುಡುಗಿಯೇ ಅಂತ ಹೇಳುತ್ತಿದ್ದಳು. ಈ ಹುಡುಗಿ ಮನೆಯ ಟೆಲಿಫೋನಿನಲ್ಲಿ ಯಾವುದೋ ಅಪರಿಚಿತ ಸಂಖ್ಯೆಗಳಿಗೆ, ಅಪರಿಚಿತ ದೇಶಗಳಿಗೆ ಕರೆ ಮಾಡಿ ಅಪರಿಚಿತರೊಡನೆ ಮಾತನಾಡಿ ಟೆಲಿಫೋನ್ ಬಿಲ್ ವಿಪರೀತ ಬರುತ್ತಿತ್ತು ಎಂದು ಹೇಳುತ್ತಿದ್ದರು. ಈ ಹುಡುಗಿ ಫೋನಿನಲ್ಲಿ ಮಾತನಾಡಿ ತನ್ನ ಹೆಸರು ಗುಲಾಬಿ ಎಂದು ಅಪರಿಚಿತರಿಗೆ ಸುಳ್ಳು ಹೆಸರು ಹೇಳುತ್ತಿದ್ದಳಂತೆ. ಅಪರಿಚಿತರು ಯಾವು ಯಾವುದೋ ಹೊತ್ತಿನಲ್ಲಿ ಗುಲಾಬಿಯನ್ನು ಫೋನಿನಲ್ಲಿ ಕೇಳುತ್ತಿದ್ದರಂತೆ. ಈಗ ನೋಡಿದರೆ ಮದುವೆಯಾದ ಮುದುಕನ ಜೊತೆ ಓಡಿಹೋಗಿದ್ದಾಳೆ ಎಂದು ಈ ಯಜಮಾನತಿ ಹೆಂಗಸು ಕಥೆ ಹೇಳುತ್ತಿದ್ದಳು.

ಅವಳು ಓಡಿ ಹೋಗುವುದು ನೋಡಿ ನಿಮಗೆ ಆ ಕೂಡಲೇ ಹೇಳದಿದ್ದುದು ಒಳ್ಳೆಯದಾಯಿತು ಅಂತ ಹೇಳಬೇಕೆನಿಸುತ್ತಿತ್ತು, ನಾವು ಪೋಲಿಸರಿಗೆ ದೂರು ಕೊಟ್ಟಿದ್ದೇವೆ, ನೀವು ಸಾಕ್ಷಿ ಹೇಳಬೇಕು ಎಂದು ಅವರು ಹೇಳಿದರು. ನನಗೆ ತೇಜಸ್ವಿಯವರ ಹೆಸರಿಲ್ಲದ ಒಂದು ಕಾದಂಬರಿಯ ಒಬ್ಬಳು ಹುಡುಗಿಯ ಹೆಸರು ನೆನಪಾಗುತ್ತಿತ್ತು. ಅಲ್ಲಿ ಕಾಡಿನ ನಡುವೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿಂತುಕೊಂಡು ಹೂ ಮಾರುವ ಹುಡುಗಿ… ಬರುವ ಹೋಗುವ ವಾಹನಗಳಿಗೆ ಹೂವು ತೋರಿಸುವ ಹುಡುಗಿ… ಈ ಗುಲಾಬಿಯೂ ಇಂತಹದೇ ಹುಡುಗೀ ಅನ್ನಿಸುತ್ತಿತ್ತು.

ಈ ಮನೆಕೆಲಸದ ಹುಡುಗಿ ಗುಲಾಬಿ ಎಂಬ ಸುಳ್ಳು ಹೆಸರಿನ ಹುಡುಗಿ ಈ ದೊಡ್ಡ ಮನೆಯಲ್ಲಿ ಗಡಿಯಾರದಂತೆ ಕೆಲಸ ಮಾಡುತ್ತಿದ್ದಳು. ಅವಳು ಮೀನು ಕೊಯ್ಯುವುದು, ಬಟ್ಟೆ ಒಗೆದು ಹರವಿ ಹಾಕವುದು, ಬಚ್ಚಲ ಒಲೆಗೆ ಬೆಂಕಿ ಹೊತ್ತಿಸುವುದು ಎಲ್ಲ ದಿನವು ಅದೇ ಹೊತ್ತಿಗೆ ನಡೆಯುತ್ತಿತ್ತು. ನಡು ಮಧ್ಯಾಹ್ನ ನಾಯಿಗೆ ಅನ್ನ ಹಾಕುತ್ತಿದ್ದಳು, ಮತ್ತೆ ಬೀದಿಯ ಕಡೆ ನೋಡಿ ನಗುತ್ತಿದ್ದಳು. ಬೀದಿಯಲ್ಲಿ ಯಾರೂ ಇರುತ್ತಿರಲಿಲ್ಲ. ಅನಂತರ ಕೆಲವೊಮ್ಮೆ ಬಿಸಿಲಲ್ಲಿ ಹಾಗೇ ನಿಂತು ಒಂದೆರಡು ಕುಣಿತದ ಹೆಜ್ಜೆ ಹಾಕುತ್ತಿದ್ದಳು. ಮತ್ತೆ ನಿಧಾನಕ್ಕೆ ಮನೆಯೊಳಗೆ ಸೇರಿ ಹೋಗುತ್ತಿದ್ದಳು.

ಕಿಟಕಿಯ ಹೊರಗೆ ಕಾಣಿಸುತ್ತಿದ್ದ ಈ ಹುಡುಗಿಯ ಓಡಾಟ ಮತ್ತು ನಡು ಮಧ್ಯಾಹ್ನದ ಆಕೆಯ ಅರೆ ನಿಮಿಷದ ಒಂಟಿ ಕಾಲಿನ ನರ್ತನ ಮತ್ತು ಯಾರೂ ಇಲ್ಲದ ಬದಿಯ ಕಡೆಗೆ ಆಕೆ ಚೆಲ್ಲುವ ಮಂದಹಾಸ ಈ ಹುಡುಗಿಯ ಮನಸ್ಸಿನಲ್ಲೇ ಯಾವುದೋ ದೇವತೆಗಳೊಡನೆ ಮಾತನಾಡುತ್ತಿದ್ದಳೆ ಅನ್ನಿಸುತ್ತಿತ್ತು.ಲ ಅಷ್ಟರಲ್ಲಾಗಲೇ ಈ ಹುಡುಗಿ ಅಪ್ಪ ಅಮ್ಮ ಇಲ್ಲದ ತಮಿಳು ಹುಡುಗಿ, ಈ ಮನೆಯವರೇ ಅವಳನ್ನು ಎತ್ತಿ ಸಾಕಿದ್ದು ಎಂದೂ ಕತೆ ಹೇಳಿದ್ದರು.

ಅವರ ಕತೆ ಮಗಿಯುವ ಮೊದಲೇ ಈ ಹುಡುಗಿ ಓಡಿ ಹೋಗಿದ್ದಳು. ಓಡಿ ಹೋಗುವ ಮೊದಲು ಕತ್ತಲಲ್ಲಿ ಅವಳ ಕಣ್ಣ ಮುಂದೆ ನಾನೂ ಹಾದು ಹೋಗಿದ್ದೆ. ಈಗ ನೋಡಿದರೆ ಆ ಮನೆಯ ಯಜಮಾನತಿಯೂ ಒಂದಿಷ್ಟು ಕತೆ ಹೇಳಿ, ಪೊಲೀಸರ ಮುಂದೆ ಸಾಕ್ಷ್ಯ ಹೇಳಲು ಹೇಳಿ, ತೊಂದರೆ ಕೊಟ್ಟದ್ದಕ್ಕೆ ಕ್ಷಮೆಯನ್ನೂ ಕೇಳಿ ಹೋಗುತ್ತಿದ್ದರು.

ಒಂದು ವಾರದಲ್ಲಿ ಒಬ್ಬ ಮುದುಕ ಈ ಹುಡುಗಿಯನ್ನು ತಂದು ಬಿಟ್ಟ, ಹುಡುಗಿ ಕತ್ತಲೆಯಲ್ಲಿ  ಅಳುತ್ತಾ ಹೋಗುತ್ತಿದ್ದಳೆಂದೂ ಕರುಣೆಯಿಂದ ಮನೆಗೆ ಕರೆದುಕೊಂಡು ಹೋದೆನೆಂದೂ ಆತ ಸುಳ್ಳು ಹೇಳುತ್ತಿದ್ದ. ಈ ಒಂದು ವಾರದಲ್ಲಿ ತಾನೇನೂ ಹಾಳಾಗಲಿಲ್ಲವೆಂದೂ ಮುದುಕ ತನಗೇನೂ ಹಾನಿ ಮಾಡಲಿಲ್ಲವೆಂದೂ ಆ ಹುಡುಗಿಯೂ ಗಟ್ಟಿಯಾಗಿಯೇ ಹೇಳುತ್ತಿದ್ದಳು.
ಈ ಹುಡುಗಿ, ಆ ಮುದುಕ ಮತ್ತು ಎಲ್ಲವನ್ನೂ ಕೊರೆಯುತ್ತಿರುವ ನಾನು ಈ ಬೆಳಗು ಮತ್ತು ನಿಧಾನಕ್ಕೆ ಬರುತ್ತಿರುವ ಬಿಸಿಲು, ಇಂದೆನಗೆ ಆಹಾರ ಸಿಕ್ಕಿತು ಎಂದು ಇದನ್ನೇ ಬರೆದುಬಿಟ್ಟಿರುವ ಚಾಣಾಕ್ಷ ಮನಸ್ಸು, ಆ ಹುಡುಗಿಯನ್ನು ಆ ಮನೆಯವರು ಕಳುಹಿಸಿದ್ದಾರೆ. ಮುದುಕ ಹಾಗೇ ಬೀದಿಯಲ್ಲಿ ನಡೆಯುತ್ತಿದ್ದಾನೆ ಮತ್ತು ಸೋಮಾರಿ ಮನಸ್ಸು ಮರದ ಕೊಂಬೆಗೆ ಕೂತ ಕಾಗೆಯಂತೆ ತನ್ನನ್ನೇ ತಾನು ನೆಕ್ಕಿಕೊಳ್ಳುತ್ತಿದೆ.

 

Advertisements