ರೂಮಿಯ ಸಹವಾಸ

  ಒಬ್ಬ ಸಾಧಾರಣ ಮತ ಪಂಡಿತ. ಇನ್ನೊಬ್ಬ ಅಲೆಮಾರೀ ದರ್ವೇಶಿ. ಒಬ್ಬ ದರ್ಮಗ್ರಂಥಗಳನ್ನು ಅರೆದು ಕುಡಿದವನು.ಇನ್ನೊಬ್ಬ ಕಾಡು ಮೇಡು ಗುಹೆ ಹೆಂಡದ ಪಡಶಾಲೆ ಇಲ್ಲೆಲ್ಲ ಅಲೆದಾಡಿ ಪಡೆದವನನ್ನು ಹುಡುಕುವ ದಾರಿಯಲ್ಲಿ ನನಗೆ ಸಾಂಗತ್ಯ ನೀಡುವವನೊಬ್ಬ ಬೇಕೆಂದು ಕಂಡಕಂಡಲ್ಲಿ ಅರಲುವವನು.sufi.jpg

 `ಸಂಗಾತಿ ದೊರಕಿದರೆ ಏನು ನೀಡುತ್ತೀ?’
 `ನನ್ನ ಶಿರವನ್ನು’
 `ಹಾಗಾದರೆ ನಿನಗೆ ಸಾಂಗತ್ಯ ಬೇಕಾಗಿರುವುದು ಜಲಾಲುದ್ದೀನ್ ರೂಮಿಯದ್ದು’ 

ಹೀಗೆ ಅಫಘಾನಿಸ್ತಾನದ ತಬ್ರೀಜ ಎಂಬಲ್ಲಿನ ಶಂಷ್ ಎಂಬ ಸಂತ ಜಲಾಲುದ್ದೀನ್ ರೂಮಿ ಎಂಬವನನ್ನು ಆತ್ಮಸಾಂಗತ್ಯಕ್ಕಾಗಿ ಸುಮಾರು ಏಳುನೂರ ಐವತ್ತು ವರ್ಷಗಳ ಹಿಂದೆ ಒಂದು ಸಂಜೆ ಭೇಟಿಯಾದ ಅಂತ ಕತೆ ಹೇಳುತ್ತದೆ.

ಆಮೇಲೆ ಅವರಿಬ್ಬರು ಇಹಲೋಕದ ಪರಿವೆಯಿಲ್ಲದೆ ಪರಮಾತ್ಮನ ಕುರಿತು ಮಾತಿನಲ್ಲಿ ಮುಳುಗಿದ್ದು,ಲೋಕ ಏನನ್ನುತ್ತದೆ ಎಂಬ ಗೋಚರವಿಲ್ಲದೆಯೆ ಆತ್ಮಸಾಂಗತ್ಯದಲ್ಲಿಲೀನವಾಗಿದ್ದು,ಇವರಿಬ್ಬರ ಗೆಳೆತನ ಸಹಿಸಲಾಗದೆ ಊರವರು ಆಡಿಕೊಳ್ಳತೊಡಗಿದ್ದು, ಕೊನೆಗೆ ಶಂಷ್ ಗೆಳೆಯನ ಒಳಿತಿಗೆ ಬೇಕಾಗಿ ಅವನನ್ನು ತ್ಯಜಿಸಿ ದೂರವಾಗಿದ್ದು, ಗೆಳೆಯನ ಅಗಲಿಕೆ ಸಹಿಸಲಾಗದೆ ರೂಮಿ ಕವಿತೆಗಳನ್ನು ಬರೆಯಲು ಶುರು ಮಾಡಿದ್ದು,ಗೆಳೆಯನ ಅಗಲಿಕೆಯ ಕುರಿತ ಈ ಕವಿತೆಗಳೇ ಪರಮಾತ್ಮನ ಹುಡುಕುವ ಪರಮಶ್ರೇಷ್ಟ ಸೂಫಿ ಕಾವ್ಯವಾಗಿದ್ದು -ಇದೆಲ್ಲ ರೂಮಿಯ ಕುರಿತ ಕತೆಗಳನ್ನು ಕೇಳಿದರೆ ತಿಳಿಯುತ್ತದೆ.

 ಎಷ್ಟೋ ಕಾಲದ ನಂತರ ಅಗಲಿದ್ದ ಈ ಜೀವದ ಗೆಳೆಯರು ಮತ್ತೆ ಕಾಣುತ್ತಾರೆ.ಕಂಡವರೇ ಇಬ್ಬರೂ ಪರಸ್ಪರರ ಕಾಲಿಗೆರಗುತ್ತಾರೆ.ನೋಡುವವರಿಗೆ ಯಾರು ಯಾರ ಪ್ರಿಯಕರ..ಸಖ ಯಾರು? ಯಾರು ಪ್ರೀತಿಸಲ್ಪಡುತ್ತಿರುವುದು? ಏನೂ ಅರಿವಾಗುವುದಿಲ್ಲ.ಶಂಷ್ ರೂಮಿಯ ಮನೆಯಲ್ಲೇ ತಂಗಿ ಆ ಮನೆಯದೇ ತರುಣಿಯೊಬ್ಬಳನ್ನು ಮದುವೆಯಾಗುತ್ತಾನೆ.ಮತ್ತೆ ಗೆಳೆಯರ ನಡುವೆ ಪಡೆದವನ ಕುರಿತ ಧ್ಯಾನ, ಆತ್ಮಸಾಂಗತ್ಯ,ತೊಡಗುತ್ತದೆ…ಹಾಗೆಯೇ ತೀರಾ ಪ್ರೀತಿಯ ಬಿಕ್ಕಟ್ಟುಗಳು
ಅಸೂಯೆಗಳು….

 ಒಂದು ಚಳಿಗಾಲದ ರಾತ್ರಿ ರೂಮಿಯ ಮನೆಯಲ್ಲೇ ಶಂಷ್ ನ ಕೊಲೆಯಾಗುತ್ತದೆ. ಕೊಂದವನು ಯಾರು?ಪ್ರೀತಿಸುತ್ತಿದ್ದವನು ಯಾರು?ಪಡೆದವನು ಯಾರು? ಮುಗಿಸಿದವನು ಯಾರು?ಕೊಂದದ್ದು ಯಾರನ್ನು..ತೀರಿಕೊಂಡವರು ಯಾರು?

  ರೂಮಿ ತೀರಿಹೋದ ಸಖನ ಹುಡುಕುತ್ತಾ ಮತ್ತೆ ಕವಿತೆಗಳ ಕೈ ಹಿಡಕೊಂಡು ಅಲೆಯುತ್ತಾನೆ
                           —-
          `ಯಾತಕ್ಕೆ ಹುಡುಕುವುದು? ನಾನೇ ಅಲ್ಲವೇ
          ಅವನು.ಅವನೇ ಅಲ್ಲವೇ ನನ್ನಿಂದ ಮಾತ ಆಡಿಸುತ್ತಿರುವುದು.
         ನನ್ನನ್ನೇ ಅಲ್ಲವೇ ನಾನು ಹುಡುಕುತ್ತಿರುವುದು…..’
 
 ಸೂಪಿಗಳು ಇದನ್ನು `ಫನ್ಹಾ’ ಅನ್ನುತ್ತಾರೆ. ಸಖ್ಯವೆಂಬುದ ಇಲ್ಲವಾಗಿಸಿ ಸಖನಲ್ಲಿ ಒಂದಾಗಿಬಿಡುವುದಂತೆ. ಆತ ಬೇರಲ್ಲ ನಾನು ಬೇರಲ್ಲ ಎಂದು ಪರಮಾತ್ಮನಲ್ಲಿ ಒಂದಾಗಿ ಬಿಡುವುದಂತೆ….`ಅಧ್ವೈತ’ ಎಂಬುದೂ ಹೀಗೇ ಅಂತೆ.. 

    ಓದುತ್ತಾ ಓದುತ್ತಾ ಈ ಹುಚ್ಚು ತಿರುಗಾಟ, ಸಾಂಗತ್ಯ,ಅಸೂಯೆ,ಕೊಲೆಗಳ ಕತೆಯನ್ನು ಕೇವಲ ಪಾರಮಾರ್ಥಿಕ ಶಬ್ಧಗಳಿಂದ ತುಂಬಿಸಿದವರ ಕುರಿತು ಬೇಜಾರೂ ಆಯಿತು.ಅಥವಾ ಓದುವ ನೋಡುವ ಎಲ್ಲವನ್ನೂ ಕೇವಲ ಕತೆಯಂತೆ ಕಾಣುವ ನನ್ನಂತಹವನ ಹಣೆಬರಹದ ಕುರಿತು ಚಿಂತೆಯೂ ಆಯಿತು.ಜೊತೆಗೆ ವಿಧ್ವಾಂಸರ ಕುರಿತು ಗೌರವವೂ ಉಂಟಾಗಬೇಕಿತ್ತು.ಆದರೆ ಹಾಗೇನೂ ಆಗಲಿಲ್ಲ…ಪುಣ್ಯಕ್ಕೆ! 

                       ————–
      ನಾವು ಹುಡುಗರಾಗಿರುವಾಗ ಕೊಡಗಿನ ಕಾಫಿ ತೋಟದೊಳಕ್ಕೆ ನಮ್ಮ ಲೈನು ಮನೆಗಳಿಗೆ ಇಬ್ಬರು ಆಗುಂತಕರು ಬರುತ್ತಿದ್ದರು.ಅವರನ್ನು ನಾವೇನೂ ಬೇಡುವವರೆಂದು ತಿಳಿಯುತ್ತಿರಲಿಲ್ಲ ಅಥವಾ ಅವರು ಸಂತರೆಂಬುದೂ ನಮಗೆ ಗೊತ್ತಿರಲಿಲ್ಲ.ಮಣ್ಣಲ್ಲಿ ಬಿಸಿಲಲ್ಲಿ ಹೊರಳಾಡಿಕೊಂಡಿರುತ್ತಿದ್ದ ನಮಗೆ ಇದೆಲ್ಲಾ ಗೊತ್ತಾಗುತ್ತಿರಲಿಲ್ಲ.
 ಈಗ ಏನೋ ಅನಿಸುತ್ತಿದೆ…ಅವರಲ್ಲಿ ಒಬ್ಬಾತನನ್ನು ನಾವು `ಮಿಠಾಯಿಪಾಪಾ’ ಎಂದು ಕರೆಯುತ್ತಿದ್ದೆವು.ಆ ಮುದುಕ ಮೈತುಂಬಾ ಹಸಿರು ಉಡುಪು ಹೊದ್ದಿರುತಿದ್ದ.ಬೆರಳ ತುಂಬಾ ದಪ್ಪ ಹರಳಿನ ಉಂಗುರಗಳು.ಅಜ್ಮೀರಿನಿಂದ ವಾರಕ್ಕೊಮ್ಮೆ ಬಂದು ಹೋಗುತ್ತಿರುವೆ ಎಂದು ನಮಗೆ ಬಂದಾಗಲೆಲ್ಲ ಮಿಠಾಯಿ ಹಂಚಿ ಹೋಗುತ್ತಿದ್ದ ಈ ಮುದುಕನನ್ನು ನಮ್ಮ ತೋಟದ ಸಾಹುಕಾರರು ಒಂದು ಸಲ ಕಿತ್ತಳೆಯ ಮರಕ್ಕೆ ಕಟ್ಟಿ ಹಾಕಿ ಹೊಡೆಸಿದ್ದರು.ಮುದುಕ ಕಿತ್ತಳೆ ಹಣ್ಣು ಕದಿಯುತ್ತಿದ್ದ ಅಂತ. 

 ಈಗ ಯಾಕೋ ತುಂಬ ಬೇಸರವಾಗುತ್ತಿದೆ.

ಆ ಮುದುಕ ಯಾಕೆ ಯಾವುದೋ ಸೂಪಿ ಸಂತನಾಗಿದ್ದಿರಬಾರದು…ಹುಡುಗರಾಗಿದ್ದ ನಮಗೆ ಅಲ್ಲದ್ದಿದ್ದರೂ ಆ ಸಾಹುಕಾರನಿಗೆ ತಿಳಿಯಬಾರದಿತ್ತೇ…..ಆ ಮೇಲೆ ಆ ಮಿಠಾಯಿಪಾಪ ನಮ್ಮ ತೋಟಕ್ಕೆ ಬರಲೇ ಇಲ್ಲ….ಅಂದ ಹಾಗೆ ಆಮೇಲೆ ಇನ್ನೊಬ್ಬಾತ ಬರತೊಡಗಿದ ಆತ ಪ್ರತೀ ಶನಿವಾರ ಮಧ್ಯಾಹ್ನ ಕಳೆದು ಬರುತ್ತಿದ್ದ.ಮನೆ ಹತ್ತಿರವಾಗುತ್ತಿದ್ದಂತೆಯೆ`ಬಭಾನಂದ ಮಮಾಮಾಮಾ ಲತೀಫ’ಎಂದು ಹಾಡುತ್ತಿದ್ದ.ಬಹುಶಃ ಶಂಖ ಊದುತ್ತಿದ್ದ ಅಂತ ಕಾಣುತ್ತದೆ.ಈಗ ನೆನಪು ಮಾಡಿಕೊಂಡರೂ ಯಾವುದೋ ಉದ್ಧೇಶ ಇಟ್ಟುಕೊಂಡು ನೆನಪು ಮಾಡಿಕೊಂಡಂತೆ ಆಗುತ್ತದೆ.
ಯಾವುದಕ್ಕೂ ಉದ್ಧೇಶವೆಂಬುದು ಇರುವುದಿಲ್ಲ ಎಂದು ನಂಬಿಕೊಂಡು ಹಾಗೂ ಯಾರಿಗೂ ನೋವಾಗಬಾರದೆಂಬ ಉದ್ದೇಶದಿಂದ ನಾವಿದ್ದ ಕಾಪಿ ತೋಟದಲ್ಲಿ ಕಿತ್ತಳೆ ಕದ್ದು ಸಿಕ್ಕಿ ಹಾಕಿಕೊಂಡ ಮುದುಕ ಮಿಠಾಯಿ ಪಾಪಾ ನ ನೆನಪಿಗೆ ರೂಮಿಯ ಈ ಕವಿತೆ ಯನ್ನು ಅರ್ಪಿಸುತ್ತಿದ್ದೇನೆ:

ನಿನ್ನ ಕೆನ್ನೆಗಳನ್ನು

ನಿನ್ನ ಮೃದು ಕೆನ್ನೆಯನ್ನ ಒಂದರೆಗಳಿಗೆ
ಈ ಕುಡುಕನ ಕೆನ್ನೆಗೆ ಒತ್ತು
ನನ್ನೊಳಗಿನದೇ ನನ್ನ ಕಾದಾಟ ಕಾಠಿಣ್ಯ ಮರೆತು ಬಿಡಲು.
ಈ ಬೆಳ್ಳಿನಾಣ್ಯಗಳನ್ನ ಚಾಚಿ ಹಿಡಿದಿರುವೆ
ಹೊನ್ನ ಬೆಳಕಿನ ಮಧುವ ಸುರಿದು ಬಿಡು ಅದಕೆ.
ಸ್ವರ್ಗದ ಏಳೂ ಬಾಗಿಲುಗಳ ತೆರೆದಿರುವೆ ನೀನು
ಕೈಯನ್ನ ನನ್ನ ಬಿಗಿದ ಎದೆಯ ಮೇಲೆ ತಾ.
ಕೊಡುವುದೇನಿದ್ದರೂ ನಿನಗೆ ನಾನು ಈ ಭ್ರಮೆ.ಅದೇ ನಾನು
ಒಂದು ಹೆಸರನ್ನಾದರೂ ಇಡು, ಅದಾದರೂ ಆಗಲಿ ನಿಜ.
ನೀ ಮಾತ್ರ ಸರಿ ಜೋಡಿಸಬಲ್ಲೆ ನೀನೇ ಮುರಿದದ್ದ
ನನ್ನ ಕುಸಿದಿರುವ ಮಿದುಳ.
ನಾನು ಬೇಡುತ್ತಿರುವುದು ಮಿಠಾಯಿಯನ್ನಲ್ಲ
ನಿನ್ನ ಕೊನೆಯಿರದ ಒಲವನ್ನ
ಎಷ್ಟೊಂದು ಸಲ ಅರುಹುತ್ತಿರುವೆ
ನಿಲ್ಲಿಸು ಭೇಟೆಯಾಡುವುದ, ಕಾಲಿಡು ಈ ಬಲೆಯೊಳಗೆ.

 

 

 

 

Advertisements