ಷಿಲ್ಲಾಂಗಿನ ನಡೆಯುವ ಸುಖ

 

shillong1.gifಈವಾರ ನಿಮಗೆ ಏನು ಕತೆ ಹೇಳಲಿ? ಯಾವತ್ತೂ ಇಲ್ಲದ ಹಾಗೆ ಈ ಸಂಜೆ ಮನೆಗೆ ಬಂದವನೇ ಸಂಕಟದಲ್ಲಿ ನಿದ್ದೆ ಹೋದೆ. ನಡುನಡುವೆ  ಕಣ್ಣು ಬಿಟ್ಟರೆ ಕಿಟಕಿಯ ಹೊರಗೆ ಸಂಜೆ ಕೆಂಪು ಬೆಳಕಲ್ಲಿ ಮಕ್ಕಳು ಆಟ ಆಡುತ್ತಿದ್ದರು. ಹೆಂಗಸರು ಎಲೆ ಅಡಿಕೆ ಜಗಿಯುತ್ತಾ ಬಯಲಲ್ಲಿ ಕಾಲು ನೀಡಿಕೊಂಡು ಮಾತನಾಡುತ್ತಿದ್ದರು. ನಾನು ಹಠ ಹಿಡಿದು ನಿದ್ದೆ ಹೋಗಲು ನೋಡುತ್ತಿದ್ದೆ. ಯಾಕೋ ಕೈಕಾಲುಗಳಲ್ಲೆಲ್ಲಾ ಸಂಕಟ. ಬೆಂಗಳೂರಿನ, ಗಾಂಧಿ ಬಜಾರಿನ ಸಂಜೆ, ಮಾವಿನ ಹಣ್ಣು, ಕೊತ್ತಂಬರಿ ಸೊಪ್ಪು, ಮಲ್ಲಿಗೆ ಹೂವಿನ ಪರಿಮಳ ಏನೇನೆಲ್ಲಾ ಕನಸು ಬೀಳುತ್ತಿತ್ತು. ಸುಮ್ಮನೇ ಎದ್ದು ಕೂತೆ. ಮನೆ ಎಷ್ಟು ದೂರ ಅನಿಸುತ್ತಿತ್ತು. ಎಷ್ಟು ದೂರ ಅಂದರೂ ಯಾರಿಗೂ ಗೊತ್ತಾಗುವುದಿಲ್ಲ. ಅಸ್ಸಾಮಿನಲ್ಲಿ ರೈಲು ಹಳಿಗಳನ್ನು ನದಿಯ ಮೇಲಿನ ಸೇತುವೆಗಳನ್ನು ಬಾಂಬ್ ಹಾಕಿ ಚುರುಚೂರು ಮಾಡಿದ್ದಾರೆ. ನನ್ನ ಪಕ್ಕದ ಮನೆಯ ಬಂಗಾಲಿ ಯುವಕನೊಬ್ಬನ ತಂದೆ ನಿನ್ನೆ ರಾತ್ರಿ ಕಲ್ಕತ್ತಾದ ಹತ್ತಿರ ಹಳ್ಳಿಯೊಂದರಲ್ಲಿ ತೀರಿಹೋದರು. ಆತನಿಗೆ ತಂದೆಯನ್ನು ನೋಡಬೇಕೆಂದರೂ ಹೋಗಲಾಗಲಿಲ್ಲ. ಸುಮ್ಮನೆ ಕಣ್ಣೀರು ತುಂಬಿಕೊಂಡು ಕೂತಿದ್ದ. ಆತನ ಹಂಡತಿ ಅಳುತ್ತಿದ್ದಳು.

ನಾನು ಯಾಕೋ ನಿಮಗೆ ಕರುಣಾಜನಕ ಕತೆಗಳನ್ನು ಹೇಳುತ್ತಿರುವೆ. ಏನು ಮಾಡಲಿ? ಸ್ವಲ್ಪ ಹೊತ್ತಿಗೆ ಮುಂಚೆ ದಾವಣಗೆರೆಯಿಂದ ಒಬ್ಬರು ಫೋನ್ ನಲ್ಲಿ, ನಿಮಗೆ ಅಲ್ಲಿಂದ ಹಿಮಾಲಯದ ಗಿರಿ ಪಂಕ್ತಿಗಳು ಕಾಣಿಸುತ್ತದಾ? ಹಿಮ ಬೀಳುವುದು ನೋಡಿದ್ದೀರಾ’ ಅಂತೆಲ್ಲಾ ಕೇಳುತ್ತಿದ್ದರು. ನಾನು ಯಾಕೋ ಸುಮ್ಮನೆ ನಕ್ಕು ಬೇರೆ ಏನೆಲ್ಲಾ ತಮಾಷೆ ಮಾತನಾಡಿ ಫೋನ್ ಇಟ್ಟೆ. ಇಲ್ಲಿ ನಿಮಗೆ ತಮಾಷೆಯಾಗಿರಲು ಬರದಿದ್ದರೆ ಏನೆಲ್ಲಾ ಸಂಕಟವಾಗಿ ಕಷ್ಟವಾಗಿ ತಲೆಯೇ ಕೆಟ್ಟು ಹೋಗಿ ಬಿಡುತ್ತದೆ. ಮೊನ್ನೆ ನಾನು ಊರಿಂದ ಬಂದು ಮನೆಯ ಬಾಗಿಲು ತೆಗೆದು ನೋಡಿದರೆ ಕಿಟಕಿಯ ಗಾಜುಗಳೆಲ್ಲಾ ಒಡೆದು ಹೋಗಿ ಮನೆಯ ತುಂಬಾ ಗಾಜಿನ ಚೂರುಗಳು ಚಲ್ಲಾಪಿಲ್ಲಿಯಾಗಿ ಬಿದ್ದು ಕೊಂಡಿದ್ದವು. ಹತ್ತು ದಿನಗಳ ಹಿಂದೆ ಆಲಿಕಲ್ಲಿನ ಮಳೆ ಸುರಿದಿತ್ತಂತೆ. ಮಕ್ಕಳ ತಲೆ ಎಲ್ಲಾ ಜಖಂಗೊಂಡಿತ್ತಂತೆ. ಅದಕ್ಕೇ ಇಲ್ಲಿ ಯಾವ ಮನೆಗೂ ಹಂಚು ಹೊದಿಸುವುದಿಲ್ಲ. ಟಿನ್ನಿನ ಹಾಳೆಗಳನ್ನು ಹೊದಿಸುತ್ತಾರೆ. ಮಳೆ ಸುರಿಯುತ್ತಿದ್ದರೆ ಟಿನ್‌ಮೇಕರ್‌ನ ಅಂಗಡಿಯಲ್ಲಿ ಕುಳಿತು ಕೊಂಡಿರುವ ಹಾಗೆ ಅನ್ನಿಸುತ್ತದೆ. ಸಣ್ಣ ಮಳೆಯೂ ತುಂಬಾ ಜೋರು ಸದ್ದು ಮಾಡುತ್ತದೆ.

ನಿಮಗೆ ಇನ್ನೊಂದು ಘಟನೆ ಹೇಳುತ್ತೇನೆ. ಶಿಲ್ಲಾಂಗ್ ಎಂಬ ಈ ಊರು walk ಮಾಡುವವರಿಗೆ ತುಂಬಾ ಚಂದದ ಊರು. ಕಾಲುದಾರಿಗಳು,  ಮೆಟ್ಟಿಲ ಹಾದಿಗಳು, ನೀವು ನಡೆಯುತ್ತಲೇ ಹಲವು ದಾರಿಗಳನ್ನು ಕಂಡು ಹಿಡಿಯಬಹುದು. ಒಂದು ಮಳೆ ನಿಂತ ತಕ್ಷಣ ನಡೆಯಲು ತೊಡಗಿದರ ಇನ್ನೊಂದು ಮಳೆ ತೊಡಗುವ ಮೊದಲು ನೀರು ಹಿಂಗುವುದು, ಹುಲ್ಲಿನಲ್ಲಿ ದಳಗಳು ಹೊಳೆಯುವುದು, ಹೂವಿನ ಗೊಂಚಲುಗಳು ತಲೆದೂಗುವುದು, ಮಳೆಯ ಮೋಡ ಸೂರ್ಯನ ಬೆಳಕಲ್ಲಿ ಹೊಳೆಯುತ್ತಾ ನಿಮ್ಮ ಕಡೆ ಓಡಿ ಬರುವುದು, ಇದನ್ನೆಲ್ಲಾ ನೋಡಬಹುದು. ನಾನೂ ಹಾಗೇ ನೋಡುತ್ತಾ ಬೆಟ್ಟದಂತಹ ರಸ್ತೆ ಹತ್ತುತ್ತಾ ಹೋಗುತ್ತಿದ್ದೆ. ಎದುರಿಂದ ಸರ್ದಾಜಿಯೊಬ್ಬ ಚೀಲ ಹಿಡಿದುಕೊಂಡು ಇಳಿದು ಬರುತ್ತಿದ್ದ. ಅಷ್ಟರಲ್ಲಿ ಎದುರುಗಡೆಯಿಂದ ನಾಲ್ಕೈದು ಹುಡುಗರ ಗುಂಪೊಂದು ಅವನನ್ನು ಮುತ್ತಿಕೊಂಡಿತು. ಒಬ್ಬಾತ ಆತನ ಗಂಟಲು ಅಮುಕಿ ಹಿಡಿದ. ಇನ್ನೊಬ್ಬ ಆತನ ಬಾಯೊಳಕ್ಕೆ ಬೆರಳು ಹಾಕಿ ವಿಚಿತ್ರವಾಗಿ ಎಳೆಯುತ್ತಿದ್ದ. ಮತ್ತಿಬ್ಬರು ಆತನ ಜೇಬನ್ನೆಲ್ಲಾ ತಡವಿ ಸುಮಾರು ಮೂರುಸಾವಿರ ರೂಪಾಯಿ ಕಿತ್ತುಕೊಂಡು ಆಮೇಲೆ ಎಲ್ಲರೂ ರಾಜಾರೋಷವಾಗಿ ಹೊರಟರು. ಅವರ ಕೈಯಲ್ಲಿ ಪಿಸ್ತೂಲ್ ಇತ್ತಂತೆ. ಸರ್ದಾರ್ಜಿ ಹೇಳುತ್ತಿದ್ದ. ಹಿಂದೆ ಒಂದು ಸಲ ಹೀಗೆ ಆಗಿತ್ತಂತೆ. ಆದರೆ ಆಗ ಸುತ್ತ ಇದ್ದ ನಾಲ್ಕಾರು ಹೆಣ್ಣುಮಕ್ಕಳು ಹುಡುಗರಿಗೆ ಬುದ್ಧಿ ಹೇಳಿ, ಬೈದು ಹಣ ವಾಪಸು ಕೊಡಿಸಿದ್ದರಂತೆ. ಈಸಲ ಒಬ್ಬಳು ಹೆಣ್ಣುಮಗಳೂ ಸಹಾಯಕ್ಕೆ ಬರಲಿಲ್ಲ, ಅಂತ ಸರ್ದಾರ್ಜಿ ಹಳಹಳಿಸುತ್ತಿದ್ದ. ನಾನು ಮುಂದಿನ ಸಲ ನನ್ನ ಸರದಿ ಅಂತ ಕತ್ತಲಾಗುವ ಮೊದಲು ಮನೆ ಸೇರಿಕೊಂಡೆ.

ಇದನ್ನೆಲ್ಲಾ ಇಲ್ಲಿ  ಯುವಕರಲ್ಲಿ ಅಶಾಂತಿ, ಹಿಂದೆ ಹೊರಗಿನಿಂದ ಬಂದು ಶೋಷಣೆ ಮಾಡಿದ್ದಕ್ಕೆ ಈಗ ಪ್ರತೀಕಾರ, ಅಂತೆಲ್ಲಾ ವಿವರಿಸುತ್ತಾರೆ. ನಾನು ಏನೆಂದು ವಿವರಿಸಲಿ ಅಂತ ಯೋಚಿಸುತ್ತಿದ್ದೇನೆ. ಎಂತಹ ಚಂದದ ಊರಿನ ಬಗ್ಗೆ ಹೀಗೆಲ್ಲಾ ವಿವರಿಸಬೇಕಾಯಿತಲ್ಲಾ ಅಂತ ಬೇಸರವಾಗುತ್ತದೆ. ಮಡಿಕೇರಿಯಯ ದಾರಿಯಲ್ಲಿ ನಡೆಯುತ್ತಿರುವಾಗ ಹೀಗೆ ಆಗಿದ್ದರೆ.. ಇಲ್ಲ. ಹೀಗೆ ಆಗಲಿಕ್ಕಿಲ್ಲ ಅನ್ನಿಸುತ್ತದೆ. ನೀವೇ ಹೇಳಿ ಹೀಗೆ ಆಗಲಿಕ್ಕಿಲ್ಲ ಅಲ್ಲವಾ? ನಾನಂತೂ ಮನುಷ್ಯರ ಬಗ್ಗೆ ತುಂಬಾ optimistic ಆಗಿರುವೆ.ಹೋಗಲಿ ಬಿಡಿ ನಿಮಗೆ ತುಂಬಾ ಗೋಳು ಹೊಯ್ದುಕೊಂಡೆ. ಇನ್ನಾದರೂ ಸರಿಯಾಗಿ ನಿದ್ದೆ ಹೋಗುತ್ತೇನೆ.

 

Advertisements