ಹತ್ತು ವರುಷದ ಹಿಂದೆ ಮನೆಯೊಳಗೆ ಬಂದ ಪ್ರೀತಿಯ ಬಸ್ಸು

suntikoppa-morning.jpgಮಂಗಳೂರಿನ ಮಳೆಗೆ ಬೇಜಾರು ಬಂದು ಹೋಗಿ, ರಜೆ ಹಾಕಿ ಬಸ್ಸಿನಲ್ಲಿ ಕುಳಿತು, ಮಳೆಯ ಮಂಗಳೂರನ್ನು ದಾಟಿ, ಮಳೆ ಬೀಳುತ್ತಲೇ ಇರುವ ಕೊಡಗನ್ನು ದಾಟಿ, ಮಳೆಯ ಮೋಡ ಗುಮ್ಮನ ಹಾಗೆ ಸುಮ್ಮನೇ ನಿಂತಿರುವ ಮೈಸೂರಿನಲ್ಲಿ ಬೆಚ್ಚಗೆ ಹೊದ್ದುಕೊಂಡು ಕೈಗೆ ಸಿಕ್ಕಿದ ಪೇಪರುಗಳನ್ನೆಲ್ಲ ನಿರುಕಿಸುತ್ತ ಕೂತಿದ್ದೆ.

ಹುಬ್ಬು ಗಂಟು ಮಾಡಿಕೊಂಡು ಕಣ್ಣುಗಳನ್ನು ಕಿರಿದುಗೊಳಿಸಿ ನೆತ್ತಿಯನ್ನೆಲ್ಲ ನೆರಿಗೆ ಮಾಡಿಕೊಂಡು ಪೇಪರುಗಳನ್ನು ತಿನ್ನುವ ಹಾಗೆ ಓದುವುದು ನನಗೆ ಸಣ್ಣದಿರುವಾಗಿನಿಂದಲೇ ಬೆಳೆದು ಬಂದಿರುವ ಕೆಟ್ಟಚಾಳಿ. ಈ ಕೆಟ್ಟಚಾಳಿಯಿಂದಲೇ ನಾನು ಹಾಳಾಗಿರುವುನೆಂದೂ, ತಲೆ ಬೇನೆ ಬಂದು ನರಳುವುದೆಂದೂ, ತಲೆಯೊಳಗೆ ನಾನಾ ಸಂಗತಿಗಳನ್ನು ತುಂಬಿಕೊಂಡು ಅವುಗಳನ್ನೆಲ್ಲಾ ಬರೆದು ನಾನು ಬರೆದವುಗಳೆಲ್ಲ ಒಮ್ಮೊಮ್ಮೆ ಅಚ್ಚಾಗಿ ಬಂದು ಅವುಗಳನ್ನು ಓದಿದವರ ತಲೆಯೂ ಹಾಳಾಗುತ್ತಿರುವುದೆಂದೂ ತುಂಬ ವರ್ಷಗಳಿಂದ ನನ್ನ ತಾಯಿ ಅನ್ನುತ್ತಿದ್ದರು.

ಆದರೂ ಅವುಗಳನ್ನು ಅಕ್ಷರ ಗೊತ್ತಿರುವವರಿಂದ ಓದಿಸಿ ಕೇಳಿಸಿಕೊಂಡು  ಅದು ಹಾಗೆ ನಡೆದದ್ದಲ್ಲ ಆದರೆ ಹೀಗೆ ನಡೆದದ್ದೆಂದೂ,, ಆ ಕಥೆಯಲ್ಲಿ ಬರುವ ಆ ಹುಡುಗಿ ಇಂತಹದೇ ಮನೆಯ ಇಂತಹವರ ಮಗಳೆಂದೂ, ಅವುಗಳನ್ನೆಲ್ಲ ನಾನು ನಾಚಿಕೆ ಇಲ್ಲದೆ ಬರೆದಿರುವೆನೆಂದೂ ಹೇಳಿ ನನ್ನ ತಾಯಿಯೂ ಕೊಂಚ ನಾಚಿಕೊಂಡು ಕೂತಿರುತ್ತಿದ್ದರು. ನಾನೂ ಬರೆದದ್ದನ್ನೆಲ್ಲಾ ನನ್ನ ತಾಯಿ ಓದಿಸಿ ಕೇಳಿಸಿಕೊಂಡು ಅವಳಿಗೂ ಎಲ್ಲ ಗೊತ್ತಾಗುತ್ತಿರುವುದಲ್ಲಾ ಎಂದು ಗಾಬರಿ ಪಟ್ಟುಕೊಂಡು ಆದರೂ ಪರವಾಗಿಲ್ಲವೆಂದು ಸಮಾಧಾನ ಮಾಡಿಕೊಂಡು ಸುಳ್ಳನ್ನು ನಿಜದಂತೆ ಕಥೆ ಬರೆದು, ನಿಜವನ್ನು ಕಥೆ ಬರೆದು ಸುಳ್ಳು ಮಾಡಿ ಇದೆಲ್ಲಾ ನಿಜವೋ ಸುಳ್ಳೋ ಎಂದು ನನಗೂ ನಂಬಲಾಗದೆ ಆದರೂ ನಾನು ಆ ವಿಷಯಗಳಿಗೆ ಬಲಿಯಾಗಿ ಖುಷಿಯಿಂದಲೇ ಬರೆಯುತ್ತಿದ್ದೆ. ನನ್ನ ತಾಯಿಯೂ ಕೊಂಚ ಖುಷಿಯಿಂದಲೂ ಕೊಂಚ ಹೆದರಿಕೆಯಿಂದಲೂ ಕೊಂಚ ನಾಚುಗೆಯಿಂದಲೂ ಅವುಗಳನ್ನು ಓದಿಸಿಕೇಳಿಸಿ ಸುಮ್ಮನಾಗುತ್ತಿದ್ದಳು.

ಮೈಸೂರು ಎಂದೂ ಮಳೆ ಬಂದಿಲ್ಲ ಎನ್ನುವ ಹಾಗೇ ಆದರೆ ಇನ್ನು ಯಾವಾಗಲೂ ಮಳೆ ಬರುತ್ತಲೇ ಇರಬಹುದು ಎನ್ನುವ ಹಾಗೆ ಮಳೆಯನ್ನು ಕಾಯುತ್ತ, ನಂಬುತ್ತ, ಮೋಸ ಹೋಗುತ್ತ ನಿಂತಿತ್ತು. ಆಕಾಶದಲ್ಲೆಲ್ಲ ಬೆಳ್ಳಗೆ ಮೋಡಗಳನ್ನು ತುಂಬಿಕೊಂಡು ಒಂದು ತರಹದ ಚಂದವಾದ ಅಲಸ್ಯದಿಂದ ನಡುನಡುವೆ ಬಂದು ಬಿಡುವ ಎಳೆಯ ಬಿಸಿಲಿನ ಕಿರಣಗಳಿಂದ ಮಂಗಳೂರಿನವನಾದ ನನಗೆ ಸುಂದರವಾಗಿಯೇ ಕಾಣಿಸುತ್ತಿತ್ತು. ಹೊದ್ದ ಬೆಚ್ಚಗಿನ ಶಾಲಿನ ಒಳಗಿಂದ ತಲೆಯನ್ನು ಮಾತ್ರ ಹೊರಗೆ ತಂದು ಮುಖದ ಮುಂದೆ ಪೇಪರು ಹಿಡಿದು ಎಂದಿನಂತೆ ಸುದ್ದಿಗಳನ್ನು ತಿನ್ನುತ್ತ ಕೂತಿದ್ದೆ.
ಮಂಗಳೂರಿನ ಮಳೆ ದೊಡ್ಡದಾಗಿಯೇ ಪೇಪರಿನ ಮುಂದಿನ ಪುಟದಲ್ಲಿ ಅಚ್ಚಾಗಿತ್ತು. ಮಳೆಯಲ್ಲಿ ಮುಳಗಿರುವ ಮನೆಗಳ, ಅಂಗಡಿಗಳ ಚಿತ್ರ, ನೆರೆಯಲ್ಲಿ ತೇಲುತ್ತಿರುವ ದೋಣಿಗಳ ಚಿತ್ರ ಹಾಗೇ ಸತ್ತರವ ವಿವರ, ಬದುಕಿದವರ ವಿವರ, ಜೊತೆಗೆ ತಸ್ಲೀಮಾ ನಸ್ರೀನಳ ಸುದ್ದಿ ಹಾಗೇ ಉತ್ತರ ಕೊರಿಯಾದ ಅಧ್ಯಕ್ಷ ತೀರಿ ಹೋದ ಸುದ್ದಿ, ಮೈಸೂರಿನ ಸಾಕ್ಷರತಾ ಆಂದೋಲನದಲ್ಲಿ ದೇವನುರ ಮಹಾದೇವ ಮಾಡಿದ ನಾಲ್ಕು ಸಾಲಿನ ಭಾಷಣ, ಚಾಮುಂಡಿ ಬೆಟ್ಟದ ಹಸುರೀಕರಣ ಹೀಗೇ ಓದುತ್ತ ಓದುತ್ತ ಪುಟ ತಿರುಗಿಸಿ ನೋಡುತ್ತ ಮೂಲೆ ಮೂಲೆಗೆ ಕಣ್ಣುಗಳಿಂದ ತಿವಿದು ಸುದ್ದಿಗಳನ್ನು ಹೆಕ್ಕಿ ತಿನ್ನುತ್ತ ಹಾಗೇ ಹಸಿವಿನಿಂದ ಪುಟ ತಿರುಗಿಸುತ್ತ ನೋಡುತ್ತಿದ್ದಂತೆ ಮೂಲೆಯಲ್ಲಿ ಎಂಟು ಸಾಲಿನ ಸುದ್ದಿಯೊಂದು ಕಂಡಿತು.

ಅದರಲ್ಲಿ ಕೊಡಗಿನ ನನ್ನ ಊರಿನ ಹೆಸರಿತ್ತು. ಜೊತೆಗೆ ಮಳೆಯಲ್ಲಿ ಬಂದ ಬಸ್ಸೊಂದು ಮನೆಯೊಂದರೊಳಕ್ಕೆ ನುಗ್ಗಿ ಮನೆ ಬಿದ್ದು ಬಸ್ಸಿನಲ್ಲಿದ್ದವರಿಗೆ ಪೆಟ್ಟಾಗಿರುವ ವರ್ತಮಾನವಿತ್ತು. ಓದುತ್ತಿದ್ದ ಕಣ್ಣರೆಪ್ಪೆಗಳು ಹೊಡೆದುಕೊಳ್ಳಲು ತೊಡಗಿ ,ನೆತ್ತಿಯ ಸುಕ್ಕುಗಳು ಇನ್ನೂ ಸುಕ್ಕಾಗಿ, ನನ್ನ ಊರಿನ ನನ್ನ ಮನೆ, ಆ ಮನೆಯೊಳಗಿರುವ ನನ್ನ ತಾಯಿ, ನನ್ನ ತಂದೆ, ನನ್ನ ತಂಗಿ, ಮನೆಯೊಳಗಿನ ಬೆಕ್ಕು, ಕೋಳಿಯ ಗೂಡು, ಗೋಡಯಲ್ಲಿರುವ ಗುಬ್ಬಚ್ಚಿ ಗೂಡುಗಳು ಹೀಗೆಲ್ಲ ನೆನಪಾಗಿ ಪೇಪರು ಮುಚ್ಚಿಟ್ಟು ಕಣ್ಣು ಮುಚ್ಚಿಕೊಂಡು ಕೂತೆ.

ನೂರಾರು ಮನೆಗಳಿರುವ ಆ ಊರಿನಲ್ಲಿ ಬಸ್ಸು ಬಂದಿರುವುದು ನನ್ನ ಮನೆಯೊಳಕ್ಕೆ ಎಂದು ನಾನು ಅಂದಾಜಿನಿಂದಲೇ ಹೆದರಿ ಎಲ್ಲರಿಗೂ ಹೇಳಿದರೆ ಮೈಸೂರಿನ ಯಾರು ನಂಬಲಿಲ್ಲ. ನಕ್ಕರು. ಹೀಗೇ ಓದಿ ಕನಸುಕಾಣುತ್ತ ಬರೆದು ಜಂಬ ಮಾಡಿ ಕೊಳ್ಳುತ್ತ ಇರುವ ನಾನು ನಾಲ್ಕಾಣೆ ಮಂತ್ರವಾದಿಯಂತೆ ನನ್ನ ಮನೆಗೇ ಬಸ್ಸು ನುಗ್ಗಿರುವುದೆಂದೂ, ನನ್ನ ಮನೆಯೇ ಬಿದ್ದುಹೋಗಿರುವುದೆಂದೂ ಭವಿಷ್ಯ ಹೇಳುವದ ಕೇಳಿ ಅವರು ನಕ್ಕು, ಅವರು ನಗುವುದು ಕಂಡು ನನಗೆ ನಗುವೂ ಹೆದರಿಕೆಯೂ ಬಂದು ಸುಮ್ಮನೆ ಕಣ್ಣು ಮುಚ್ಚಿಕೊಂಡೆ.

ಮನಸಿನೊಳಗೆ ಬಸ್ಸುಗಳು ಬಂದುಹೋಗಲು ಶುರು ಮಾಡಿದವು. ಕೊಡಗಿನ ಕಾಫಿ ತೋಟಗಳ ನಡುವೆ ಬೆಳೆದ ಹುಡುಗರಾದ ನಮಗೆ ಆಡುವ ಅಂಗಳ ಬಸ್ಸುಗಳೂ ಕಾರುಗಳೂ ಓಡಾಡುವ ರಸ್ತೆಯಾಗಿತ್ತು. ಒಂದು ಟಾರುರೋಡಿನ ಹೆದ್ದಾರಿ  ಕಾಫಿ ತೋಟದ ಬೇಲಿಯ ಈ ಕಡೆಗೆ ಮಡಿಚಿದರೂ, ಮಡಿಚಿದರೂ ಮುಗಿಯದ ಚಾಪೆಯ ಹಾಗೆ ಸುರಳಿ ಸುತ್ತಿಹೋಗಿದ್ದು ,ನಾವು ಹುಡುಗರು ಆ ರಸ್ತೆಯನ್ನೇ ಆಟದ ಅಂಗಳ ಮಾಡಿಕೊಂಡು ಗೋಲಿಯಾಡುವುದೂ, ಚಿನ್ನಿದಾಂಡು ಆಡುವುದೂ, ಸುಸ್ತಾದಾಗ ಮಲಗುವುದೂ ಮಾಡುತ್ತಿದ್ದೆವು. ನೇರಳೇ ಹಣ್ಣುಗಳೂ, ಶಾಂತಿ ಕಾಯಿಗಳೂ, ಮಾವಿನ ಮಿಡಿಗಳೂ ಮರಗಳಿಂದ ರಸ್ತೆಗೆ ಬಿದ್ದು ನಾವು ರಸ್ತೆಯಲ್ಲೆಲ್ಲ ತಿರುಗಾಡಿಕೊಂಡು ಅವುಗಳನ್ನು ಆಯ್ದುಕೊಂಡು ತಿಂದು ರಸ್ತೆಯಲ್ಲೇ ಮಲಗುತ್ತಿದ್ದೆವು. ರಸ್ತೆಯಲ್ಲಿ ಮಲಗಿದ ನಮಗೆ ದೂರದಿಂದ ಬಸ್ಸುಗಳು ಕಾರುಗಳು ಬರುವುದು ರಸ್ತೆಯ ಕಂಪನದಿಂದ ಕಿವಿಗೆ ಗೊತ್ತಾಗುತ್ತಿತ್ತು. ಚಳಿಯಲ್ಲಿ ರಸ್ತೆ ಮಾತ್ರ ತುಂಬಾ ಬೆಚ್ಚಗಿರುತ್ತಿತ್ತು ತಾಯಿಯ ಹಾಗೆ.
ಆಗ ಬಸ್ಸುಗಳ ಮೆಟ್ಟಿಲು ಹತ್ತುವಷ್ಟು ನಮ್ಮ ಕಾಲುಗಳು ಬೆಳೆದಿರಲಿಲ್ಲ ನಾವೂ ಎಂದು ಬಸ್ಸು ಹತ್ತುವೆವೋ ಎಂದು ಆಶೆಪಡುತ್ತ, ಸಂಕಟ ಪಡುತ್ತ ಮತ್ತೆ ರಸ್ತೆಯಲ್ಲೇ ಮಲಗುತ್ತಿದ್ದೆವು. ಬಸ್ಸು ಹತ್ತುವಷ್ಟು ನಮ್ಮ ಕಾಲುಗಳು ಬೆಳೆದು ನಾವು ಹುಡುಗರಾದಾಗ ಓಡಿಹೋಗಿ ಮುಂದೆ ಡ್ರೈವರನ ಪಕ್ಕದಲ್ಲಿ ಅವನ ಇಂಜನ್ನು, ಗೇರು, ಸ್ಟಿಯರಿಂಗುಗಳ ಪಕ್ಕದಲ್ಲಿ ನಿಂತುಕೊಂಡೇ ಶಾಲೆಗೆ ಹೋಗುತ್ತಿದ್ದೆವು. ಸುರಿಯುವ ಮಳೆಯಲ್ಲಿ ಡ್ರೈವರನ ಹತ್ತಿರ ಮಾತ್ರ ಬಸ್ಸು ಬೆಚ್ಚಗಿರುತ್ತಿತ್ತು. ಡ್ರೈವರನು ಒಳ್ಳೆಯವನಾಗಿದ್ದರೆ ಅವನು ನಮ್ಮನ್ನು ಇಂಜಿನ್ನಿನ ಬ್ಯಾನೆಟ್ಟಿನ ಮೇಲೆ ಕೂರಿಸಿಕೊಳ್ಳುತ್ತಿದ್ದನು. ಇಂಜಿನ್ನಿನ ಬಿಸಿಗೆ ಕೂತ ನಮ್ಮ ಕುಂಡ ಬಿಸಿಯಾಗಿ ಚಳಿಗೆ ತುಂಬಾ ಚಂದ ಅನಿಸುತ್ತಿತ್ತು. ಈ ಅರಮನೆಯಂತ ಬಸ್ಸಿನಲ್ಲಿ ಎಂದೆಂದೂ ಹೀಗೇ ಇಂಜಿನ್ನಿನ ಮೇಲೆ ಕುಳಿತುಕೊಂಡು ದೇಶಗಳನ್ನೆಲ್ಲ ಸುತ್ತಬೇಕು ಅನಿಸುತ್ತಿತ್ತು. ನಾವು ಬೆಚ್ಚಗಿನ ಜಾಗ ಬಿಟ್ಟು ಬೇಜಾರಿನಿಂದ ಶಾಲೆಗೆ ಹೋಗುತ್ತಿದ್ದೆವು.

ಈಗ ದೊಡ್ಡವನಾಗೆ ಮೈಸೂರಿನಲ್ಲಿ ಕುಳಿತು ಈ ಬಸ್ಸು ಬಂದಿರುವುದು ನಮ್ಮ ಮನೆಗೇ ಎಂದು ಊಹಿಸಿ ಹೆದರಿ ಯಾರಲ್ಲೂ ಹೇಳಿದರೂ ಅವರೂ ನಂಬದೆ ಸಂಕಟವಾಗಿ ತಲೆ ಎತ್ತಿ ಅಕಾಶ ನೋಡಿದರೆ ಇದ್ದಕ್ಕಿದ್ದಂತೆ ಮೈಸೂರಿನಲ್ಲು ಮಳೆ ಸುರಿಯತೊಡಗಿತು. ಆಗ ಅವರೂ ನಾನು ಹೇಳುವುದು ನಂಬುತ್ತಿರುವಂತೆ ಅನಿಸಿತು. ನನಗೂ ನಾನು ಹೇಳುತ್ತಿರುವುದು ನಂಬಬಹುದು ಅನಿಸಿತು ನಾನೂ ಹೆಂಡತಿಯೂ ಊರಿನ ಬಸ್ಸು ಹತ್ತಿದೆವು ಬಸ್ಸು ಖಾಲಿ ಖಾಲಿಯಾಗಿ ಸುರಿಯುವ ಮಳೆಗೆ ಸೋರುತ್ತ ಅನಾಥೆಯಾಗಿ ದೈನೇಸಿಯಾಗಿ ಓಡುತ್ತಿತ್ತು. ನಾವೆಲ್ಲಾ ಬೆಳೆದು ದೊಡ್ಡವರಾಗಿ ಹಿಂದೆ ಅರಮನೆಯಂತೆ ಕಾಣಿಸುತ್ತಿದ್ದ ಬಸ್ಸುಗಳು ಈಗ ಹೀಗೆ ಪರದೇಶಿಯಂತೆ ಚಲಿಸುತ್ತಿರುವುದು ನೋಡಿ ಏನೂ ಅನ್ನಿಸಲೂ ಇಲ್ಲ.

ಮನಸ್ಸಿನೊಳಗೆ ಕೊಡಗಿನ ಕಾಡುಗಳ ಸೆರಗಿನಲ್ಲಿರುವ ನನ್ನ ಊರೂ, ರಸ್ತೆಯ ಪಕ್ಕದಲ್ಲೇ ಇರುವ ನನ್ನ ಮನೆಯೂ, ಮನೆಯೊಳಗಿರುವ ನನ್ನ ತಂದೆಯೂ, ತಾಯಿಯೂ, ತಂಗಿಯೂ, ಗುಬ್ಬಚ್ಚಿ ಗೂಡುಗಳು, ಬೆಕ್ಕು, ಕೋಳಿ ಗೂಡಿನೋಳಗಿರುವ ಕೋಳಿಗಳೂ ನಿಲ್ಲದೆ ಸುರಿಯುತ್ತಿರುವ ಮಳೆಯೂ ರಸ್ತೆ ಬದಿಯ ಸರಿದು ಹೋಗುತ್ತಿರುವ ಮರ ಗಿಡಗಳಂತೆ ಸರಿಯುತ್ತಿದ್ದವು.
*        *        *
ಹೋಗಿ ನೋಡಿದರೆ ಮಂತ್ರಕ್ಕೆ ಮಾವಿನಕಾಯಿ ಬಿದ್ದ ಹಾಗೆ ಕೆಂಪು ಬಸ್ಸೊಂದು  ಪಶ್ಚಿಮಾಭಿಮುಖವಾಗಿ ನನ್ನ ಮನೆಯೊಳಕ್ಕೇ ನುಗ್ಗಿತ್ತು. ಹೋಗಿ ಬಾಗಿಲು ಬಡಿಯಲು ಬಾಗಿಲು ಇರಲಿಲ್ಲ. ಇಣುಕಿ ನೋಡಲು ಕಿಟಕಿಗಳಿರಲಿಲ್ಲ. ಕಿಟಕಿ ಬಾಗಿಲು ಮಣ್ಣುಗಳ ರಾಶಿಯಲ್ಲಿ ದಾರಿ ಮಾಡಿಕೊಂಡು ಒಳಗೆ ನುಗ್ಗಿ ನೋಡಿದರೆ ಒಳಗೆ ನನ್ನ ತಾಯಿಯೂ ತಂಗಿಯೂ ತಂದೆಯೂ, ನೆಂಟರೂ, ನೆರೆ ಕರೆಯ ಮನೆಯವರೂ, ಬೆಕ್ಕು ಬಿದ್ದ ಮನೆಯ ಉಳಿದ ಕೋಣೆಗಳೊಳಗೆ ಓಡಾಡತ್ತಿದ್ದರು. ಅಚ್ಚರಿ ಆಗುವಂತೆ ಅವರು ಅಳದೆಲ್ಲಿ  ಗೆಲುವಾಗಿ ಸಂಕಟದಲ್ಲಿ ಚುರುಕಾಗಿದ್ದರು.

ಮನೆಯಲ್ಲಿರುವಾಗ ನಾನು ಓದುತ್ತಿದ್ದ ಬರೆಯುತ್ತಿದ್ದ ಕೋಣೆಗೆ ನುಗ್ಗಿದ ಬಸ್ಸು ಕಿಟಕಿಯನ್ನು ಬೀಳಿಸಿ ಮನೆಯ ಜೊತೆ ಮಾತನಾಡುತ್ತಿರುವಂತೆ ನಿಂತಿತ್ತು. ಅದು ನನ್ನ ಪ್ರೀತಿಯ ಕಿಟಕಿಯಾಗಿತ್ತು. ಆ ಕಿಟಕಿಯಿಂದ ಬೆಳಗಾಗುವುದೂ, ಕತ್ತಲಾಗುವುದೂ, ಮಳೆ ಬರುವುದೂ ,ಮೋಡಗಳ ಎಡೆಯಿಂದ ಬಿಸಿಲು ಓಡಾಡುವುದೂ ಕಾಣಿಸಿಕೊಂಡು ಶಾಲೆಗೆ ಹೋಗುವ ನನ್ನ ಗೆಳೆಯರು ಆ ಕಿಟಕಿಯಿಂದಲೇ ನನ್ನನ್ನು ಕರೆಯುತ್ತಿದ್ದರು. ಗೆಳತಿಯರು ನಕ್ಕು ಮುಂದೆ ಹೋಗುತ್ತಿದ್ದರು. ಈಗ ನನ್ನ ಪ್ರೀತಿಯ ಅರಮನೆಯಂತಹ ಬಸ್ಸೊಂದು ಕೆಂಪಗೆ ಕಿಟಕಿಯೊಳಗಿಂದ ಮೂಲೆ ತೂರಿಸಿಕೊಂಡು ಅದರ ಗಾಜೆಲ್ಲಾ ಬಿದ್ದು ,ಕಿಟಕಿಯೊಳಗಿಂದಲೇ ಆ ಬಸ್ಸಿನೊಳಕ್ಕೆ ಹೋಗಿ   ಆ ಬಸ್ಸಿನ ಡ್ರೈವರನ ಪಕ್ಕದ ಇಂಜಿನ್ನಿನ ಮೇಲೆ ಬೆಚ್ಚಗೆ ಕೂರಬಹುದಿತ್ತು. ನಾನಿಲ್ಲದಿರುವಾಗ ಬಂದು ಶಾಲೆಗೆ ಹೋಗಲು ನನ್ನನ್ನು ಕಾಯುತ್ತಿರುವ ಗೆಳೆಯನಂತೆ ಆ ಬಸ್ಸು ಮನೆಯೊಳಕ್ಕೆ ಬಂದು ನಿಂತುಕೊಂಡಿತ್ತು. ಮನೆಯ ಗೋಡೆಯೆಲ್ಲ ಬಿದ್ದು ಗೋಡೆಯ ಮೇಲೆ ಸಾಲಾಗಿ ಗೂಡು ಮಾಡಿಕೊಂಡಿದ್ದ ಗುಬ್ಬಚ್ಚಿ ಗೂಡುಗಳೆಲ್ಲ ಚಲ್ಲಾಪಿಲ್ಲಿಯಾಗಿ ಗುಬ್ಬಚ್ಚಿಗಳು ಮೊಟ್ಟೆ ಕಳೆದು ಹೋದ ತಾಯಿ ಹಕ್ಕಿಗಳ ಹಾಗೆ ಚಿಲಿಪಿಗುಟ್ಟುತ್ತ ಸಂಕಟ ಪಡುತ್ತ ಮನೆಯ ಉರಿದ ಗೋಡೆಗಳ ಮೇಲೆ ಕೂತುಕೊಂಡಿದ್ದವು.

ಸದಾ ಒಂದು ಬದಿಯ ತಲೆಶೂಲೆಯಿಂದ ನರಳುವ ನನ್ನ ತಾಯಿಯ ತಲೆ ಬೇನೆ ಬೆಳಿಗ್ಗೆ ಬಸ್ಸು ಬಂದು ಬಡಿಯುತ್ತಿದ್ದಂತೆ ಮಾಯವಾಗಿ ಅವಳು ಏನೂ ತೋಚದೆ ಅತ್ತ ಇತ್ತ ಓಡಾಡಿ ಕೊನೆಗೆ ಕೋಳಿಯ ಗೂಡಿನ ಬಾಗಿಲು ತೆಗೆದು ಅವುಗಳೆಲ್ಲ ಮನೆಯ ಹಿತ್ತಲಿನಲ್ಲಿ ಓಡಾಡುತ್ತಿದ್ದವು. ವಯಸ್ಸಾಗಿ ನಿವೃತ್ತರಾಗಿ ಒಂದು ರೀತಿಯ ಸನ್ಯಾಸ ತೆಗೆದುಕೊಂಡಿದ್ದ ನನ್ನ ತಂದೆ ಈಗ ಚುರುಕಾಗಿ ಮನೆಯನ್ನು ಮತ್ತೆ ಹೇಗೆ ಕಟ್ಟುವುದು ಎಂದು ಓಡಾಡುತ್ತಿದ್ದರು ಸದಾ ಕನಸು ಕಾಣುತ್ತ. ಕೆಲವೊಮ್ಮೆ ಮಂಕು ಹಿಡಿದು ಕೂರುತ್ತಿದ್ದ ನನ್ನ ತಂಗಿ ಅದು ಹೇಗೆ ಆ ಬಸ್ಸು ಅವಳು ನಿದ್ದೆಯಲ್ಲಿ ಕನಸು ಕಾಣುತ್ತಿದ್ದಾಗ ಬಂದು ಡಿಕ್ಕಿ ಹೊಡೆದು ನಿಂತಿತು ಎಂದು ವಿವರಿಸುತ್ತಿದ್ದಳು. ಬಿದ್ದ ಗೋಡೆಯ ಚೂರುಗಳು ಅವಳ ಮೇಲೆ ಸಿಡಿದು ಅವಳು ಗಾಯ ಮಾಡಿಕೊಂಡು ಆದರೂ ನಗುತ್ತ ,ಮನೆ ಬಿದ್ದು ಹೋದವರಿಗೆ ಸಮಾದಾನ ಹೇಳಲು ಬಂದ ನೆಂಟರಿಗೆ ನೆರೆ ಕರೆಯವರಿಗೆ ಟೀ ಮಾಡುತ್ತಿದ್ದಳು. ಮನೆಯ ಹೊರಗೆ ರಸ್ತೆ ಬದಿಯಲ್ಲಿ ಶಾಲೆಗೆ ಹೋಗುವ ಮಕ್ಕಳು ಶಾಲೆಗೆ ಹೋಗದೆ ಮಹಾ ಕೌತುಕದಂತೆ ಮನೆಗೆ ಬಂದಿರುವ ಬಸ್ಸನ್ನು ನೋಡಿಕೊಂಡು ಚಿಲಿಪಿಲಿಗುಟ್ಟುತ್ತ ನಿಂತಿದ್ದರು.

ನಾನು ಕೆಂಪಗಿನ ಬಸ್ಸನ್ನು ಪ್ರೀತಿಯಿಂದ ನೋಡುತ್ತಿದ್ದೆ. ಅದು ಮಳೆಯಲ್ಲಿ ಚಳಿ ಹಿಡಿದು ಚಲಿಸದೆ ನಿಂತುಕೊಂಡಿತ್ತು. ಇನ್ನು ಇದನ್ನೂ ಕಥೆ ಬರೆಯಲು ಹೋಗಬೇಡ ಎಂದು ಆ ಕಿಟಕಿಯೂ, ಆ ಬಸ್ಸೂ ಈ ತಾಯಿಯೂ ಮೌನವಾಗಿಯೇ ನನಗೆ ಸೂಚಿಸುತ್ತಿದ್ದರು. ಬೆಕ್ಕು ಮೌನವಾಗಿ ಬಿದ್ದ ಮನೆಯಲ್ಲೆಲ್ಲ ತಿರುಗಾಡುತ್ತಿತ್ತು.
 

Advertisements